Sunday, September 20, 2015ಸೋಲುತ್ತಿದ್ದರೂ ಗೆಲ್ಲುವ ಹುಮ್ಮಸ್ಸು ಆಕೆಯದು...

ಸಾಮಾನ್ಯವಾಗಿ ಕೌನ್ಸೆಲಿಂಗ್​ಗೆ ಬರುವವರಿಗೆ ಮತ್ತು ಬದುಕಿನ ಹೊರಳು ದಾರಿಯಲ್ಲಿ ನಿಂತಿರುವವರಿಗೆ ನಾನು ಯಾವತ್ತೂ ಎರಡನೆಯ ಮದುವೆಯ ಪ್ರಸ್ತಾಪಕ್ಕೆ ಬೆಂಬಲ ಸೂಚಿಸಿದ್ದೇ ಇಲ್ಲ. ಗಂಡಸರಿಗೆ ಎಲ್ಲಿಂದಾದರೂ ಚೆಂದದ ಹುಡುಗಿಗೆ ಕಾಳು ಹಾಕಿ ತಂದುಕೊಳ್ಳುವುದು ಮತ್ತು ಸಿಗುವುದು ಎರಡೂ ಸುಲಭ. ಕಾರಣ ವಯಸ್ಸು, ಊರು, ಆರ್ಥಿಕತೆ ಹೀಗೆ ಹಲವು ಆಯಾಮದಲ್ಲಿ ಸಾಧ್ಯತೆಗಳಿರುತ್ತವೆ. ಆದರೆ ಹೆಣ್ಣುಮಕ್ಕಳು ಭಾವನಾತ್ಮಕ ವಿಷಯಕ್ಕೆ ಬಿದ್ದು ಮಾಡಿಕೊಳ್ಳುವ, ತನಗೊಬ್ಬ ಗಂಡ ಇರಲೆನ್ನುವ ಅನಿವಾರ್ಯತೆಗಳ ಮರುಮದುವೆ ಬರಕತ್ತಾಗೋದು ತೀರಾ ಕಡಿಮೆ. ಅದರಲ್ಲೂ ಉದ್ಯೋಗಸ್ಥ ಮಹಿಳೆಯಾಗಿದ್ದರೆ ಬಾಂಡ್ಲಿಯಿಂದ ಬೆಂಕಿಗೆ ಬೀಳಬೇಡಿ ಎನ್ನುವುದೇ ನನ್ನ ಸಲಹೆ. ಇವೆಲ್ಲಕ್ಕಿಂತಲೂ ಹಳೆಯ ಪ್ರೇಮಕಥೆಗಳಿಗೆ ಜೀವ ಕೊಡುವ ಹುಂಬ ಉಮೇದುತನ, ತನ್ನಿಂದಾಗಿ ಒಬ್ಬನಿಗೆ ಜೀವನ ಸಿಗುತ್ತದಲ್ಲ.. ಎನ್ನುವ ಹುಚ್ಚಿನಲ್ಲಿ ಹುತಾತ್ಮರಾಗಲು ಹೊರಟು ಬಿಡುವ ಎಮೋಷನಲ್ ಫೀಲಿಂಗ್​ಗಳು, ಅವನನ್ನು ತಾನೇ ಸರಿ ಮಾಡಿ ಬದುಕಿನ ದಾರಿಗೆ ಹಚ್ಚುತ್ತೇನೆ, ಎಷ್ಟೆಂದರೂ ಹಳೆಯ ಪ್ರೀತಿ ಈಗಲೂ ಇರುತ್ತಲ್ಲವಾ ಎನ್ನುವವನ ಗೋಗರೆಯುವಿಕೆಗೆ ಸಟ್ಟಸರಹೊತ್ತಿನಲ್ಲಿ ಹೂಂಗುಡುವ ಹೆಣ್ಣುಮಕ್ಕಳ ಮುಗ್ಧ ಮುಠ್ಠಾಳತನಕ್ಕೆ ನಾನ್ಯಾವತ್ತೂ ಸದರ ಕೊಟ್ಟಿದ್ದಿಲ್ಲ. ಅಂಥವರಿಗೆಲ್ಲ ಸಹಾಯ-ಸಲಹೆ ಎರಡನ್ನೂ ಕೊಡದೆ ಹೊರದಬ್ಬಿದ್ದೂ ಇದೆ. ಅದಾಗಿಯೂ ಗುಂಡಿಗೆ ಬಿದ್ದವರು ಮತ್ತೆ ಬಾಗಿಲ ಬಳಿ ಬಂದು ‘ನೀ ಹೇಳಿದಂಗೆ ಆಯ್ತಲ್ಲ..ಈಗೇನ್ ಮಾಡ್ಲಿ ಹೇಳು..ಆವಾಗಿಂದ ಮನಸಿನ್ಯಾಗ ಇಟ್ಕೊಬೇಡ..’ ಎಂದು ಗೊಣಗುವವರಿಗೆ ಕಾಫಿ ಕೊಟ್ಟು ನಮಸ್ಕಾರ ಎಂದು ನಿರ್ದಾಕ್ಷಿಣ್ಯವಾಗಿದ್ದೂ ಇದೆ. ಕಾರಣ ಬದುಕು ಪದೇಪದೆ ಚಾನ್ಸು ಕೊಡುವುದಿಲ್ಲ.
ಎರಡು ಮಕ್ಕಳ ತಾಯಿ, ಮಧ್ಯವಯಸ್ಸಿನ ವತ್ಸಲಾ ಹಳೆಯ ಪ್ರೇಮಿಯನ್ನು ಕರೆದುಕೊಂಡು ಮನೆಯವರೆಗೆ ಬಂದಾಗಲೇ, ಮೊದಲ ನೋಟಕ್ಕೆ ಅವನು ಬುಡಗಟ್ಟಿಯಿಲ್ಲದ ಗಿರಾಕಿ ಎನ್ನಿಸಿದ್ದ. ಅಷ್ಟಾಗಿ ನನಗೇನೂ ಗೊತ್ತಿಲ್ಲದವನೇನಲ್ಲವಲ್ಲ. ಒಂದೆರಡು ದೂರವಾಣಿ ಕರೆಯಲ್ಲಿ ಊರಕಡೆಯ ಹುಡುಗರು ವಸ್ತುನಿಷ್ಠ ವರದಿ, ಇತಿಹಾಸ ಎರಡೂ ಕೊಟ್ಟಿದ್ದರು. ಅದರಲ್ಲೂ ಬದುಕಿನ ಗಮ್ಯಕ್ಕೊಂದು ನ್ಯಾಯಯುತ ಕೆಲಸ, ಮೈಮುರಿದು ದುಡಿವ ಗಡಸುತನ ಎರಡೂ ಇಲ್ಲದವನನ್ನು, ಸ್ನೇಹಿತೆಯ ಒಂದು ಕಾಲದ ಪ್ರೇಮಿ ಎಂಬ ವಾದದ ಭಿಡೆಗೆ ಬಿದ್ದು ಕೌನ್ಸೆಲಿಂಗ್​ನ ಕುರ್ಚಿಯಲ್ಲಿ ಕೂತ ನಾನು ಸಮ್ಮತಿ ಕೊಡುವುದು ಸಾಧ್ಯವೇ ಇರಲಿಲ್ಲ.
ಆದರೆ ತಾನೀಗ ಗಂಡ ಸತ್ತವಳು, ಹಬ್ಬ ಹರಿದಿನಗಳಿಗೆ ಸಮಾಜದಲ್ಲಿ ಸೇರಿಸುತ್ತಿಲ್ಲ, ಮುಂದೆ ಮಕ್ಕಳ ಮದುವೆ ಇತ್ಯಾದಿಯನ್ನೂ ಮಾಡಲಾಗುವುದಿಲ್ಲ, ಯಾವ ಶುಭಕಾರ್ಯಗಳಿಗೂ ತಾನು ಪಾಲುದಾರಳಲ್ಲ ಎನ್ನುವಂತಹ ಹಲವು ಭವಿಷ್ಯತ್ತಿನ ಯೋಜನೆಗಳಿಗೆ ಯುಕ್ತರೂಪ ಕೊಡುವ ಸೆಂಟಿಮೆಂಟಿಗೆ ಬಿದ್ದಿದ್ದ ವತ್ಸಲಳಿಗೆ ನೌಕರಿ ಮತ್ತದರಿಂದ ಕೈಗೇ ಬರುತ್ತಿದ್ದ ದುಡ್ಡು ಏನು ಬೇಕಾದರೂ ಎದುರಿಸುವ ವಿಶ್ವಾಸ ಕೊಟ್ಟುಬಿಟ್ಟಿತ್ತು. ಆದರೆ ಅದು ಕಾನ್ಪಿಡೆನ್ಸ್ ಅಲ್ಲ, ಹುಂಬತನ ಎಂದರಿವಾಗಿಸಲು ಮಾಡಿದ ಪ್ರಯತ್ನ ಫಲಕಾರಿಯಾಗಲಿಲ್ಲ. ಆದರೂ ‘ತೀರಾ ಪರಿಚಯದ ಸ್ನೇಹಿತೆ ಅದಕ್ಕಾಗಿ ಹೇಳುತ್ತಿದ್ದೇನೆ, ಯಾಕೋ ಸರಿ ಹೋಗಲ್ಲ ಅನ್ಸುತ್ತೆ. ಆದರೂ ನಿನ್ನದೇ ಅಂತಿಮ ನಿರ್ಧಾರ. ಮತ್ತೊಮ್ಮೆ ಗುಂಡಿಗೆ ಬೀಳುತ್ತಿ ನೋಡು’ ಅಂದುಬಿಟ್ಟೆ. ಅದ್ಯಾವ ಕೋನದಲ್ಲಿ ಕಾಯ್ದು ನಿಂತು ತಥಾಸ್ತು ದೇವತೆಗಳು ಕೈಯೆತ್ತಿದರೋ ಗೊತ್ತಿಲ್ಲ. ಹಳೇ ಪ್ರೇಮಿನೋ, ಎರಡನೇ ವರನೋ ಮಗಳಿಗೊಂದು ಗಂಡು ದಿಕ್ಕಾದರೆ ಸಾಕೆನ್ನುವ ತಾಯಿ ಜೀವ ಸುಮ್ಮನೆ ಕೂತು ವತ್ಸಲಳ ದುಸ್ಸಾಹಸಕ್ಕೆ ಹರಸಿದ್ದೂ ಆಯಿತು.
ಮದುವೆಯಾದ ಮೊದಮೊದಲು ಚುಕ್ಕಿ ಚಂದ್ರಮರನ್ನು ಆರಿಸಿದ್ದು ಬಿಟ್ಟರೆ, ನೋಡು ನೋಡುತ್ತಿದ್ದಂತೆ ಐದೇ ವರ್ಷದ ಅಂತರದಲ್ಲಿ ವತ್ಸಲಳ ಬದುಕು ಮೊದಲಿನದಕ್ಕಿಂತಲೂ ತೋಪೆದ್ದು ಹೋಗಿತ್ತು. ಸಾಲುಸಾಲು ಜನರನ್ನು ಸಾಕುವ ಅನಿವಾರ್ಯಕ್ಕೀಡಾಗಿ ಬಿಟ್ಟಿದ್ದಳು ವಟ್ಟಿ. ಮೊದಲು ಸೊನ್ನೆಯ ಬಳಿಯಾದರೂ ನಿಂತಿದ್ದಳು, ಈಗ ಅದಕ್ಕೂ ಹಿಂದಕ್ಕೆ ಜಾರಿ ಬಿಟ್ಟಿದ್ದಳು. ಆದರೂ ಅವಳ ಮನಸ್ಥಿತಿಯೇ ಆಶ್ಚರ್ಯ ನನಗೆ. ಹೂಂ ಅಂದುಬಿಟ್ಟವಳು ಈಗ ಯಾವುದಕ್ಕೂ ಜಗ್ಗದೇ ನಿಂತಿದ್ದಳು.
ಅಷ್ಟೆ.. ಅಪೂಟು ಸೋಮಾರಿ, ಜೀವಮಾನದ ನಲವತೆôದಕ್ಕೂ ಹೆಚ್ಚು ವರ್ಷ ಅಪ್ಪನ ದುಡಿಮೆಯಲ್ಲಿ ತಿಂದುಂಡು ಚಟ ಮಾಡುತ್ತ ಕಳೆದವನೊಬ್ಬ ಏನು ಮಾಡಬಹುದಿತ್ತೋ ಅದೇ ಆಗಿದೆ. ಮನೆಯ ಮೂರು ಮತ್ತೊಂದು ಜನಕ್ಕೆ ಅನ್ನ ನೀಡುವ ಜವಾಬ್ದಾರಿಗೆ ಹೆಗಲು ಕೊಟ್ಟಿದ್ದಾಳೆ. ಒಬ್ಬಳೇ ಇದ್ದರೂ ಸರಿಕರಲ್ಲಿ, ಸಮಾಜದಲ್ಲಿ ವ್ಯವಸ್ಥಿತವಾಗಿ ತನಗೊಂದು ಸ್ಥಾನ ಕಲ್ಪಿಸಿಕೊಂಡಿದ್ದವಳು ಈಗ ಅದನ್ನೂ ಉಳಿಸಿಕೊಳ್ಳುವ ಬಡಿದಾಟಕ್ಕಿಳಿದಿದ್ದಾಳೆ. ತನ್ನ ನಿರ್ಧಾರ ಸರಿ ಎಂದು ನಂಬಿಸುವ(?)ಭರದಲ್ಲಿ ತಾನೇ ಸಾಕುತ್ತ, ಅವನನ್ನೂ ದಾರಿಗೆ ತರುತ್ತೇನೆಂದು ಹೊರಟು ನಿಂತು ತನ್ನ ದಾರಿ ಕಳೆದುಕೊಂಡಿದ್ದಾಳೆ.
ಕುಡಿತ, ಸೋಮಾರಿತನ, ಬಾರದ ಕೆಲಸ ಇವೆಲ್ಲದರ ಫಲ ನಿತ್ಯ ಕದನ..ಕಂಡಲ್ಲಿ ಕುಡಿತಕ್ಕೀಡಾಗುವ ವ್ಯಕ್ತಿ, ದಿನದ ಅಂತ್ಯಕ್ಕೆ ಮತ್ತೂ ಮಾಡಬಹುದಾದದ್ದು ಕುಡಿತ ಮತ್ತದರ ಜತೆಗಿನ್ನಿಷ್ಟು ಸಾಲ ಮಾತ್ರ. ಕೈಲಿದ್ದ ಹಣ ಮುಗಿದು ಹೊಸ ಹುಡುಗಿಯ ನಶೆ ಇಳಿಯುತ್ತಿದ್ದಂತೆ ಸೋಮಾರಿ ಸುಬ್ಬ ಮತ್ತೆ ಬಾರು ದಾರಿ ತುಳಿಯತೊಡಗಿದ್ದಾನೆ. ಊರ ತುಂಬೆಲ್ಲ ಸಾಲಕ್ಕೀಡಾಗಿ ಊರ ಗಾಡಿ ಹತ್ತಿದ್ದಾನೆ. ಸಂಕಟಗಳಿಗೆ ಕಿವಿಯಾಗುವ ನನಗೆ ಕರೆ ಮಾಡಿ ‘ಈ ಸರ್ತಿ ಬೆಂಗಳೂರಿಗೆ ಬಂದಾಗ ಬಾ. ನೀನು ಬೈಯ್ತಿಯಾ ಅಂತಾ ಗೊತ್ತು. ಏನು ಮಾಡಲಿ ಬಂದಂಗೆ ಆಗ್ತದೆ. ನನ್ನ ಹಣೆಬರಹದಲ್ಲಿ ಇಷ್ಟೇ ಇತ್ತು..’ ಎಂದೇನೋ ಹೇಳಹೊರಟಳು. ಆಯ್ತೆನ್ನುತ್ತ ಕರೆ ತುಂಡರಿಸಿದ್ದೆ.
ಮತ್ಯಾವಾಗಲೋ ಬೆಂಗಳೂರಿನಲ್ಲಿ ಸುತ್ತುತ್ತಿದ್ದಾಗ ಕಾಲಿಗೆ ತೊಡರಿದ ವಸಂತನಗರದ ಮುಖ್ಯರಸ್ತೆಗೆ ನಿಂತು ಕರೆ ಮಾಡಿದ್ದೆ. ಹಾವಿನಂತೆ ಸುತ್ತು ಬಳಸಿ 3ನೆ ಕ್ರಾಸಿನಲ್ಲಿ ಆಕಾಶಕ್ಕೆ ಹೆಗಲು ತೆರೆದುಕೊಂಡಂಥ ಪುಟ್ಟ ಗೂಡು. ಕವರ್ ಕಿತ್ತುಹೋದ ಸೋಫಾ ಆಕೆಯ ಬದುಕಿನಂತೆ ಅನಾಥವಾಗಿ ಜೋಲಾಡುತ್ತಿತ್ತು. ಅರೆಬಾಯಿ ತೆರೆದ ಕಪಾಟಿನಿಂದ ಬಟ್ಟೆಗಳು ನೇತಾಡುತ್ತಿದ್ದವು. ಅಡುಗೆ ಮನೆಗೆ ಹಾಯುವಾಗಲೆಲ್ಲ ತಾಗಿದ ಕೈಗಳ ಕಲೆಗಳು ಗೋಡೆ, ಬಾಗಿಲಿಗೆ ವಿಚಿತ್ರ ಬಣ್ಣ ನೀಡಿದ್ದರೆ ಯಾವುದೂ ಸರಳವಾಗಿಲ್ಲ ಎನ್ನುವುದು ಸ್ಪಷ್ಟ.
ಪರಿಸ್ಥಿತಿ ಎದುರಿಗೆ ಕಾಣಿಸುತ್ತಿತ್ತು. ಇದ್ದುದರಲ್ಲಿ ಮಗಳು ವಾಸಿ ಎನ್ನಿಸುವಂತಿದ್ದರೆ ಹುಡುಗನ ಬದುಕು ಯಾಕೋ ಸರಿಗಿಲ್ಲ, ಬರೀ ದೇಹ ಬೆಳೆಯುತ್ತಿದೆ. ಬುದ್ಧಿ ಇನ್ನೂ ಮಗುವಿನಂತೆ. ವಯಸ್ಸು ಹದಿನೆಂಟಾದರೂ ಬಾರದ ಗಡಸುತನಕ್ಕೆ ಹಾಮೋನು ಕೈಕೊಟ್ಟಿದೆಯಂತೆ. ಅದೆಲ್ಲಕ್ಕಿಂತಲೂ ಮಿಗಿಲು ತನ್ನ ಸಂಸಾರದೊಂದಿಗೆ ಎರಡನೇ ಗಂಡನ ಅಮ್ಮನನ್ನೂ ತಂದು ಸಾಕುತ್ತಿದ್ದಾಳೆ. ತೀರಾ ಉಸಿರುಗಟ್ಟಿ ಹಾಸಿಗೆ ಬಿಟ್ಟೇಳುವ ಪರಿಸ್ಥಿತಿಯಿರುವ ಇಬ್ಬರು ವಯಸ್ಕರು, ಒಬ್ಬ ಅಪಕ್ವ ಮಗ... ‘ಆ ಬೈಲ್ ಮಾರ್ ಮುಝೆ..’ ಎಂದು ಗುಮ್ಮಿಸಿಕೊಂಡ ಅಪ್ರಬುದ್ಧ ಗಂಡ. ಏನಿದೆಲ್ಲ..?
‘ಏನು ಮಾಡಲಿ ಹೇಳು. ಇವ್ನ ತಪ್ಪಿಗೆ ಅವರಮ್ಮ ಏನು ಮಾಡಿಯಾರು? ಅಲ್ಲಿದ್ದರೆ ಒಬ್ಬರೇ ಇರೋದು ಅಂತಾ ಆ ನೆಪದಲ್ಲಿ ಅಲ್ಲೂ ಹೋಗಿ ಬದುಕು ಗಬ್ಬೆಬ್ಬಿಸುತ್ತಿದ್ದಾನೆ. ಅಮ್ಮನ ಮನೆಗೆ ಹೋಗ್ತೀನಿ ಅಂತಾ ಅಲ್ಲೇ ಕುಡಿದು ಕೂತ್ಕೊತಾನೆ. ಇಲ್ಲಿದ್ದರೆ ನನ್ನ ಕಣ್ಗಾವಲಲ್ಲಿ ಕೊಂಚವಾದರೂ ಹಿಡಿತದಲ್ಲಿರುತ್ತಾನೆ..’
‘ಎಷ್ಟು ದಿನಾ ಇವ್ರನ್ನೆಲ್ಲ ಹಿಂದೆ ಬಿದ್ದು ಕಾಯೋಕಾಗುತ್ತೆ ವಟ್ಟಿ..? ನಿನ್ನ ನೌಕರಿ, ಜವಾಬ್ದಾರಿಗಳ ಮಧ್ಯೆ’ ಎಂದು ನಾನು ನುಡಿಯುತ್ತಿದ್ದರೆ ಮಧ್ಯದಲ್ಲೇ ಮಾತು ಮುಂದುವರಿಸಿದ್ದಳು,
‘ಇದೆಲ್ಲ ಬೇಕಿತ್ತಾ ಅಂತಾ ಅನ್ನುತ್ತೀಯ ಎಂದು ಗೊತ್ತು. ಅದರೆ, ಕೆಲವೊಮ್ಮೆ ನಮಗೆ ಬೇಕಿದ್ದೋ, ಇಲ್ದೆನೋ ಬದುಕಿನ ಭಾರ ಹೊರಬೇಕಾಗುತ್ತೆ. ಯಾವ ಪಾಪನೋ? ಮೊದಲಿನ ಕರ್ಮ ಕಳೀತು ಅನ್ನುವಾಗ ನೀವೆಲ್ಲ ಬೇಡಾ ಎಂದರೂ ಇವನ್ನ ಕಟ್ಟಿಕೊಂಡೆ. ಈಗ ಬೇಕಿತ್ತಾ ಅನ್ನಿಸಿದರೂ ಹಿಂದಕ್ಕೆ ಹೋಗಲಾರೆ. ಇವನ ಕಥೆ ಏನೇ ಇರಲಿ. ಅಮ್ಮಂದಿರಿಬ್ರೂ ಹೆಣ್ಣುಜೀವ ಅಲ್ವೇನು..? ಏನೇ ಆದರೂ ಅವರಮ್ಮ ಇರಲಿ, ನಮ್ಮಮ್ಮ ಇರಲಿ ಎರಡೂ ಹಿರಿಯ ಹೆಣ್ಣುಜೀವಗಳು ಒಂದಲ್ಲ ಒಂದು ಕಾರಣಕ್ಕೆ ಸಿಕ್ಕಿ ನರಳಿರೋವಾಗ ನಾನು ಕೈಜಾಡಿಸಿಕೊಂಡರೆ ಏನು ವ್ಯತ್ಯಾಸ ಇರುತ್ತೆ..? ಇರೋ ಅಷ್ಟು ದಿನಾ ನನ್ನ ಕಡೆ ಅರಾಮಾಗಿರಲಿ ಅಂತಾ. ಯಾವುದೋ ಕರ್ಮಕ್ಕೆ ನಾನು ಸಿಕ್ಕಿದೆ ಅಂತಾ ಹಂಗೆ ಬಿಡ್ಲಾ..? ಆದಷ್ಟು ದಿನಾ ಬಂಡಿ ಎಳಿತೀನಿ. ಅವನಮ್ಮನೂ ಇಲ್ಲಿದ್ರೆ ಕೊಂಚ ನೆಮ್ಮದಿಯಿಂದಾದರೂ ಇರ್ತಾರೆ. ಹೆಂಗೋ ನಡೀತಿದೆ. ಮಗನಿಗೆ ಡಾಕ್ಟರೂ ನಿರಂತರ ಚಿಕಿತ್ಸೆ ಮಾಡ್ತಿದಾರೆ. ಏನಾದರೂ ಸರಿ ಬದುಕನ್ನು ಅಲ್ಲಲ್ಲೇ ಬಿಡೋಕಾಗಲ್ಲ. ಹಂಗಂತ ಹೆಂಗೋ ಬದುಕೋದಕ್ಕೂ ಅಗಲ್ಲವಲ್ಲ. ಮಾಡ್ತೀನಿ ಬಿಡು. ಹೆಗಲಿಗೆ ಭಾರ ಅಭ್ಯಾಸ ಆದ್ಮೇಲೆ ಅದೇ ಸಹಜ ಅನ್ನಿಸಿಬಿಡುತ್ತೆ. ಇವತ್ತು ನೋಡ್ಕೊಬೇಕಾದ ಅಣ್ಣ ಅಮ್ಮನ್ನ ಬೀದಿಗೆ ಬಿಟ್ಟ. ಹಂಗೆಯೇ ಇವ್ನು ಸೋಮಾರಿ ಅಂತ ಅವರಮ್ಮನ್ನೂ ನಾನು ಬಿಡೊಕಾಗುತ್ತಾ? ಇರ್ಲಿ ಬಿಡು ನೀ ಹೆಂಗಿದ್ದಿ? ಚಹಾ ಕೊಡ್ತೀನಿ ಇರು..’ ಮಾರುತ್ತರ ನೀಡಿ ವಟ್ಟಿ ಹೋಗುತ್ತಿದ್ದರೆ, ಒಂದೆಡೆ ಇದೇನೂ ಅರ್ಥವಾಗದೆ ಕೂತಿದ್ದ ಹುಡುಗ, ಪಕ್ಕ ಪಕ್ಕದಲ್ಲೇ ಅಮಾಯಕ ಮುಖದ ಇಬ್ಬಿಬ್ಬರು ಅಮ್ಮಂದಿರು ಪಿಳಿಪಿಳಿ ಕಣ್ಬಿಡುತ್ತ, ಸಾವಿರ ಪ್ರಶ್ನೆಗಳೊಂದಿಗೆ ನನ್ನನ್ನು ದಿಟ್ಟಿಸುತ್ತಿದ್ದರೆ ವಟ್ಟಿ ಹುಂಬತನದಲ್ಲೂ ಗಟ್ಟಿ ಎನ್ನಿಸುವಾಗ ‘ಹೆಣ್ಣಿಗೆ ಹೆಣ್ಣೇ ಶತ್ರು..’ ಖಂಡಿತಕ್ಕೂ ಅಲ್ಲ ಎನ್ನಿಸಿತು.
ಕಾರಣ
ಅವಳು ಎಂದರೆ...
(ಲೇಖಕರು ಕಥೆ-ಕಾದಂಬರಿಕಾರರು)

No comments:

Post a Comment