Sunday, November 8, 2015

ಏರುವ ಮೆಟ್ಟಿಲ ಮರೆತ ಘಳಿಗೆಯಲಿ...

ನಾ ಲ್ಕಾರು ವರ್ಷಗಳ ಹಿಂದೆ, ತೀರಾ ವೈಯಕ್ತಿಕ ಹಂತದ ಚರ್ಚೆಯ ಕೌನ್ಸಿಲಿಂಗ್‌ಗಾಗಿ ತಂಡದ ಹಿರಿಯ ಸದಸ್ಯೆ ವಿಮಲಾ ಅರ್ಗಾ ಆಕೆಯನ್ನು ಕಳಿಸಿದ್ದರು. ‘ನೋಡಪಾ ಸ್ವಲ್ಪ ಪರ್ಸನಲ್ ಪ್ರಾಬ್ಲಂ ಇದ್ದಂಗಿದೆ. ಮಾತಾಡ್ಸು’ ಎಂದಿದ್ದರು. ನೋಡಿದರೆ ಒಂದಿಷ್ಟು ಈ ಮೊದಲೇ ಪರಿಚಯವಿದ್ದ ವನಜಳ ಕೇಸು ಅದು. ಸಂಸಾರ ಅಂತಾ ಒಂದೆರಡು ವರ್ಷ ಅವನ ಜೊತೆಗಿದ್ದೀನಿ, ಹಾಗಂತ ಆಕೆ ಹೇಳಿಕೊಳ್ಳುತ್ತ ಎರಡು ವರ್ಷದಿಂದ ಎಲ್ಲ ಬಿಟ್ಟು ಅಪ್ಪನ ಮನೆಯಲ್ಲೇ ಉಳಿದಿದ್ದು ಈಗ ಕಾನೂನು ಪ್ರಕಾರ ನೋಟಿಸ್ ಬಂದಿದ್ದರಿಂದ ಡಿವೋರ್ಸ್‌ಗಾಗಿ ಓಡಾಡುತ್ತಿದ್ದಾಳೆ.ಅಸಲಿಗೆ ಪ್ರತಿ ಹೆಂಗಸರೂ ಎಲ್ಲೋ ಒಂದು ಕಡೆಯಲ್ಲಿ ಕಿರಿಕ್‌ಗಳಿಗೆ ಈಡಾದವರೆ. ಇದು ಸಾಮಾನ್ಯವಾಗಿ ಎದ್ದು ಕಾಣುವ ಅಂಶ. ಕೊಂಚ ಹೈಪ್ರೊ-ಲ್ ಕೇಸುಗಳಾದರೆ ಆಸ್ತಿಗಾಗಿ ಜೀವಮಾನದ ಸುರಕ್ಷತೆ, ಮಕ್ಕಳ ನಿರ್ವಹಣೆ ಹೆಸರಿನಲ್ಲಿ ಸಿಕ್ಕಷ್ಟು ಗುಂಜಿಕೊಳ್ಳೋಣ ಎನ್ನುವ ಜಟಾಪಟಿ ಸಹಜ. ಆದರಿಲ್ಲಿ ಅಂಥ ಯಾವ ಸಂಗತಿಯೂ ಇರಲಿಲ್ಲ.
ಗಂಡನೆಂಬ ಜೋಭದ್ರನ ಜೊತೆ ಎರಡು ವರ್ಷಕಾಲ ಮಲಗಿದ್ದು (ಹಾಗಂತ ಆಕೆಯ ನಿಲುವು) ಬಿಟ್ಟರೆ ಇನ್ನೇನೂ ಇರಲಿಲ್ಲ. ತಕ್ಷಣಕ್ಕೆ ಬೋರಲು ಹಿಡಿದು ಮಾಡಿ ಕುಲುಕಿದರೆ ಅವನಿಂದ ಎಂಟಾಣೆ ಉದುರುವುದೂ ಸಾಧ್ಯವಿರಲಿಲ್ಲ. ಅಸ್ತಿಪಾಸ್ತಿಯ ಬಡಿದಾಟ ಎಲ್ಲಿಯದು..? ಸುಲಭವಾಗಿ ಇಬ್ಬರೂ ಸಂಬಂಧ ಕಿತ್ತುಕೊಂಡರು. ಅಂತೂ ಬಿಡುಗಡೆ ಸಿಕ್ಕಿ ಆಕೆ ಹೊರಬಿದ್ದು ಹೋಗಿದ್ದಳು. ಪವಾಡದಂತೆ ಬದುಕಲ್ಲೂ ಕೆಲವೊಮ್ಮೆ ಅನಿರೀಕ್ಷಿತಗಳು ನಡೆದುಬಿಡುತ್ತವೆ. ಡಿವೋರ್ಸಾದ ಹುಡುಗಿಗೆ ಸರ್ಕಾರಿ ನೌಕರಿಯೂ ಸಿಕ್ಕುಬಿಟ್ಟಿದೆ. ಚಿಕ್ಕ ಸಂಬಳದ್ದಾದರೂ ಕಾಯಂ ನೌಕರಿ ಬದುಕಿನ ಬಗ್ಗೆ ಇನ್ನಿಲ್ಲದ ಭರವಸೆ ನೀಡಿದೆ.ಹೆಚ್ಚಿನಂಶ ಎಡವಟ್ಟುಗಳು ನಡೆಯುವುದೇ ಈ ಹಂತದಲ್ಲಿ. ಕಾರಣ ಬದುಕು ಹಸನಾದ ಸಂಭ್ರಮಕ್ಕೆ ಮನಸ್ಸು ಮತ್ತೆ ಚಿಗಿತುಕೊಂಡಿರುತ್ತದೆ. ಹಳೆಯ ಗಾಯ ವಾಸಿಯಾಗುತ್ತಿದ್ದಂತೆ ಹೊಸ ಕೆರೆತಕ್ಕೆ ಹಾತೊರೆದಿದ್ದಳು. ಹುಡುಗಿ ಅನ್ಯಕೋಮಿನವನೊಂದಿಗೆ ಸಾಂಗತ್ಯಕ್ಕೆ ಬಿದ್ದಿದ್ದಳು. ಮತ್ತೆ ಮದುವೆ ಇತ್ಯಾದಿ ರಗಳೆಯೇ ಬೇಡವೆಂದು ಗೌಪ್ಯ ಸಂಸಾರಕ್ಕೆ ಕೈಹೂಡಿದ್ದಳು. ಅದಕ್ಕಾಗಿ ಮನೆಗೆ ಬರುತ್ತಿದ್ದ ಅಪ್ಪ, ಅಮ್ಮನನ್ನೂ ದೂರಮಾಡಿದ್ದಳು.
ಒಂಟಿಯಾಗಿ ಗೂಡು ಮಾಡಿಕೊಂಡು ದಿನವಿಡೀ ಮೈಮರೆತು ಅವನೊಂದಿಗೆ ಸ್ಪೈಸಿ ಬದುಕಿಗೆ ಹಾತೊರೆದು ಸುತ್ತತೊಡಗಿದ್ದಳು. ಆದರೆ ಇಂಥವು ತುಂಬ ದಿನ ಬಾಳುವುದಿಲ್ಲ. ಇಬ್ಬರ ಮಧ್ಯೆ ಮನಸ್ಸು ಮುರಿದು, ಸಂಬಂಧ ಕಡಿದುಕೊಳ್ಳಲು ಸ್ನೇಹಿತರನ್ನು ಕಟ್ಟಿಕೊಂಡು ನನ್ನ ಮೇಲೆ ಒತ್ತಡ ತಂದಿಟ್ಟಿದ್ದಳು. ಏನಾದರೂ ಮಾಡು ಮಾರಾಯಾ ಎಂದು ಉಳಿದವರೂ ಕೋರಸ್ಸಾದಾಗ, ವನಜಾಳ ಕೆಟ್ಟ ಪರಿಸ್ಥಿತಿ ಅರಿವಿಗೆ ಬಂದಿದ್ದು. ಆಗಿದ್ದಿಷ್ಟು...ಹೊಸ ಸಂಗಾತಿ ಯಾವ ಮುಲಾಜು ಇಲ್ಲದೆ ಬಳಸಿಕೊಂಡಿದ್ದಾನೆ. ದಿನವೂ ಅವನ ಬುಲ್ಲೆಟ್ಟು ಹತ್ತಿ ಗಲ್ಲಿಗಳನ್ನೂ ಸುತ್ತಿದ್ದಾಳೆ. ಕೊಂಚ ಸಲುಗೆಯಾದರೂ ಸಾಕು ಸ್ನೇಹಿತರು ಸೊಂಟಕ್ಕೆ ಕೈಹೂಡಿ ಓಡಾಡುವಷ್ಟು ಸಲುಗೆ ಕೊಡುತ್ತಾಳೆ.
ತಾನೇ ಮೇಲೆ ಬಿದ್ದು ಹುಡುಗರ ಬಗಲಿಗೆ ಕೈಯಿಕ್ಕಿ ಓಡಾಡುವುದು ಆಕೆಯ ಸೋಷಿಯಲ್ ವರಸೆ. ಅದಕ್ಕಾಗೇ ಹುಡುಗರು ಅವಳನ್ನು ಸುತ್ತಿಸುತ್ತಾರೆ. ಅದವನಿಗೆ ಪಚನವಾಗಲಿಲ್ಲವೋ, ಆಕೆಗೆ ಸಾಕೆನ್ನಿಸಿತ್ತೋ ಒಟ್ಟಾರೆ ಕಳಚಿಕೊಳ್ಳಲೆತ್ನಿಸುವಾಗ ಅವನು ಮೂಗುದಾರ ಹಿಡಿದ. ಮೇಜವಾನಿಗಾಗಿ ಮದುವೇನೂ ಆಗುತ್ತೀನಿ ಎಂದು ಭೋಂಗುಬಿಟ್ಟ.ಆಕೆಯೊಂದಿಗಿನ ಅಪ್ಪಟ ತಡರಾತ್ರಿಯ ಚಿತ್ರಗಳನ್ನಿಟ್ಟು ಬೆದರಿಸಿದ್ದಾನೆ. ಇಬ್ಬರೂ ಮೈಮರೆತಾಗಿನ ತೀರಾ ಖಾಸಗಿ ಕ್ಷಣಗಳ ಚಿತ್ರಣ ಇಂಥ ಸಮಯದಲ್ಲಿ ಉಪಯೋಗಿಸಲೆತ್ನಿಸಿದ್ದಾನೆ. ಹೆಂಗಸರ ಮಾಮೂಲಿನ ವರಸೆಯಂತೆ ಆಕೆ ಅಳುಮುಖ ಮಾಡಿ ನಿಂತಿದ್ದಾಳೆ, ಎಲ್ಲ ಮುಗಿಸಿಕೊಂಡು. ನೌಕರಿಯ ಆಸರೆ ಹೊರತುಪಡಿಸಿದರೆ, ಮನೆಯವರನ್ನೂ ಆಗಲೇ ದೂರಮಾಡಿಕೊಂಡಿದ್ದರಿಂದ ಆಕೆಯೊಂದಿಗೆ ನಿಲ್ಲುವರಾರೂ ಇಲ್ಲ. ಅನಧಿಕೃತವಾಗಿ ಕೇಸು ಮುಗಿಸಬೇಕಿತ್ತು. ತಡರಾತ್ರಿ ಅವನನ್ನು ಕರೆತಂದು ಎದುರಿಗೆ ಕುಳ್ಳಿರಿಸಿಕೊಂಡು ‘ಏನಪ್ಪಾ ಏನು ವಿಷಯ’ ಎನ್ನುತ್ತಿದ್ದಂತೆ ನಮಗೆಲ್ಲ ಅಶ್ಚರ್ಯವಾಗುವಂತೆ ಸಿ.ಡಿ.ಗಳನ್ನೂ, ಪೆನ್‌ಡ್ರೈವ್‌ನ್ನು ಎದುರಿಗಿಟ್ಟು ಕೇಸು ನಿಕಾಲಿ ಮಾಡಿಕೊಳ್ಳುವ ಮಾತಿಗಿಳಿದಿದ್ದಾನೆ.
ತನ್ನಿಂದ ಆಕೆ ಎತ್ತಿಕೊಂಡಿರುವ ಬುಲೆಟ್ಟು, ಜಾಕೆಟ್ಟು, ಹೆಲ್ಮೆಟ್ಟು ವಾಪಸ್ ಕೊಡಿಸಿ ಎನ್ನುವ ಪಂಚಾಯ್ತಿಕೆ ಆರಂಭವಾಗುತ್ತಿದ್ದಂತೆ ಎದ್ದು ಈಚೆಗೆ ಬಂದಿದ್ದೆ. ಕಾರಣ ಜೊತೆಗಿದ್ದಾಗ ಅನುಭವಿಸುವ ಮುದ ಮತ್ತು ಇಳಿದ ಮದ ಎರಡರಲ್ಲೂ ತಮ್ಮದೆನ್ನುವ ಪಾಲುದಾರಿಕೆಗೆ ಇಳಿಯುವ ಹೇಯ ಮನಸ್ಥಿತಿ ಹೊಲಸು ಹೇಸಿಗೆ. ಅದೇನೇನು ಹಣಕಾಸಿನ ವ್ಯವಹಾರಗಳಿದ್ದವೋ ಅದನ್ನೆಲ್ಲ ಒಂದು ಹಂತಕ್ಕೆ ಪೂರೈಸಿಕೊಂಡ ವನಜಾ ನಿರುಮ್ಮಳವಾಗಿ, ‘ನೀನು ಇದ್ದಿ ಅಂತಾ ಎಲ್ಲ ಸೆಟ್ಲಾಯಿತು. ಎಷ್ಟು ಟೆನ್ಷನ್ ಆಗಿತ್ತು. ಅದೆಂಗೆ ನಾನು ಅವನನ್ನ ಮದುವೆ ಆಗ್ತಿನಿ ಅಂತ ಅವ್ನು ಅನ್ಕೊಂಡ..’ ಎನ್ನುವ ಸಮಜಾಯಿಷಿಗಿಳಿದಾಗ‘ನೋಡು, ಮಲಗುವಾಗ ಇರದ ಜಾತಿ, ಧರ್ಮ ಬೇರಾದಾಗ ಪ್ರತಿಯೊಂದರಲ್ಲೂ ಹುಳುಕು ಕಾಣಿಸೋದು ಮನುಷ್ಯನ ನೀಚ ನಡವಳಿಕೆ ವಿನಾ ಬೇರೇನಲ್ಲ. ಅನಧಿಕೃತ ಸಂಬಂಧ ಇರಿಸಿಕೊಂಡೂ, ಇದೇ ಕಾಯಂ ಜೀವನ ಎನ್ನುವಂತೆ ಬೇಕಾದ್ದಕ್ಕೆಲ್ಲ ಪೋಸು ಕೊಟ್ಟಿದ್ದೀಯಲ್ಲ ನಾಲ್ಕಾರು ಜನ ಹುಡುಗರನ್ನು ಕಟ್ಟಿಕೊಂಡು ಅವನು ತಿರುಗಿ ಬಿದ್ದಿದ್ರೆ? ನಿನ್ನ ಪುಣ್ಯ. ಅಷ್ಟಕ್ಕೆ ಮುಗಿಸಿದ. ಏನು ಸುಖಾ ಸುರಕೊಂಡರೂ ಪರವಾಗಿಲ್ಲ, ಈ ರಗಳೆಗಳ್ಯಾಕೆ ಗೊತ್ತಾಗಲ್ಲ. ಕುತೂಹಲ ಮನುಷ್ಯನ ಸಹಜತೆ. ಆದರೆ ಅಲ್ಲಲ್ಲೇ ಸಾಕ್ಷಿಯಾಗುಳಿಸುವ ಹುಂಬತನ ನಿಮ್ಮ ಮುಠ್ಠಾಳತನಕ್ಕೆ ಸಾಕ್ಷಿ.
ಸಮಜಾಯಿಷಿ ಬೇಡ. ಗಂಡಸರು ಎಷ್ಟು ಜನ ಬೇಕಾದರೂ ಸಿಕ್ಕಿಯಾರು. ಆದರೆ ಒಮ್ಮೆ ಅಮ್ಮ ಕಳೆದುಹೋದರೆ ಮತ್ಯಾವತ್ತೂ ಬರಲ್ಲ. ಅಷ್ಟಕ್ಕೂ ಅಮ್ಮನ ಮಹತ್ವ ಗೊತ್ತಾಗೋದೆ ಕಳಕೊಂಡ ಮೇಲೆ. ನನಗಿಂತ ಬೇರೆ ಅನುಭವ ಅದಕ್ಕೆ ಬೇಕಿಲ್ಲ. ಅಮ್ಮನ್ನ ಕರಕೊಂಡು ಬಂದು ನನಗೆ ಕಾಲ್ ಮಾಡು’ ಎಂದು ಗದರಿಸಿದೆ. ಎಷ್ಟು ಆಕೆಗೆ ಪಥ್ಯವಾಯಿತೋ ಇಲ್ಲವೋ ಗೊತ್ತಿಲ್ಲ. ಆದರೆ ಮತ್ತೆ ಇಂಥದನ್ನು ಮೈಗೆ ಅಂಟಿಸಿಕೊಳ್ಳದಂತೆ ಹುಡುಗರನ್ನೂ ಗದರಿದ್ದೆ. ಇದಾಗಿ ವರ್ಷವೊಂದು ಕಳೆದಿರಬೇಕು. ‘ಸರ್ ಫ್ರೀ ಇದ್ರೆ ಭೇಟಿಯಾಗ್ಬೇಕು..’ ದನಿ ಗುರುತಿಗೆ ನಿಲುಕಲಿಲ್ಲ. ಅವನೇ ವನಜಾಳೊಟ್ಟಿಗೆ ವರ್ಷಗಟ್ಟಲೆ ಓಡಾಡಿದ್ದವ. ಸದ್ಯಕ್ಕಿಲ್ಲ ಎಂದೇನಾದರೂ ಬಂದು ಎದುರಿಗೆ ಕೂತಾಗ ಎದ್ದುನಡಿ ಅನ್ನಲಾಗಲಿಲ್ಲ. ‘ಸಾರ್.. ನಿಮಗೂ ಗೊತ್ತಿರುತ್ತೆ. ಆವತ್ತು ವನಜಂದು ಸಿ.ಡಿ.ಕೊಟ್ನಲ್ಲ ಅದರ ಕಾಪಿ ನನ್ನ ಹತ್ತಿರ ಇಟ್ಕೊಂಡಿರಲ್ಲ ಅಂತಹೆಂಗೆ ಭಾವಿಸಿದ್ರಿ.?’ ಎಂದ. ‘ಇಲ್ಲ ನೀನು ಪೂರ್ತಿ ಡಿಲೀಟ್ ಮಾಡಿರಲ್ಲ ಅಂತ ಗೊತ್ತಿತ್ತು. ಆದರೆ ಅನವಶ್ಯಕ ತಡವಿಕೊಳ್ಳಲಿಕ್ಕಿಲ್ಲ ಅಂತಾ ಕಾನಿಡೆನ್ಸು.
ಈವಾಗೇನು?’ ಎಂದೆ. ‘ಸರ್ ಜಗಳಕ್ಕೇನೂ ಬಂದಿಲ್ಲ. ಆವತ್ತು ನೀವು ವನಜಾಂಗೆ ಸಪೋರ್ಟ್ ಮಾಡಿದ್ರಿ. ಈಗ ಎಲ್ಲಿದಾಳೆ ಗೊತ್ತೆ?’ ಎಂದ. ಮತ್ಯಾಕೆ ಕೇಸು ಕೆದರುತ್ತಿದ್ದಾನೆ ಎನ್ನಿಸುತ್ತಿದ್ದಂತೆ,‘ನೀವೇನೋ ಆವತ್ತಿಗೆ ನನ್ನನ್ನು ಕೂರಿಸಿಕೊಂಡು ತಾಕೀತು ಮಾಡಿದ್ರಿ. ಅಸಲಿಗೆ ನನಗೂ ಒತ್ತಾಯದ ಸಂಬಂಧ ಬೇಕಿರಲಿಲ್ಲ. ಸಂಬಂಧದಲ್ಲಿ ಚೆನ್ನಾಗಿರು, ಮೋಸ ಮಾಡ್ಬೇಡ ಅಂತಾ ಹೇಳ್ತಿದ್ದೆ. ಹಾದರತನವಾದ್ರೂ ಕನಿಷ್ಠ ನಿಯತ್ತಿರಬೇಕು ಸರ್. ಅದಾಕೆಗೆ ಇರ್ಲಿಲ್ಲ. ವರ್ಷಕ್ಕೊಬ್ಬೊಬ್ಬ ಗಂಡಸರನ್ನು ಬದಲಾಯಿಸ್ತಾಳೆ. ಅದನ್ನು ಬಯಲಿಗೆಳೆಯೋಕೆ ಅಂತಾನೆ ಮದುವೇನೂ ಆಗ್ತೀನಿ ಅಂದೆ. ದಿನಾ ಸಂಜೆ ಬುಲೆಟ್ ಮೇಲೆ ಕರ್ಕೊಂಡು ಕಂಡಲ್ಲೆಲ್ಲ ಸ್ಪೈಸಿ ತಿನ್ನಿಸೋಕೆ, ಖರ್ಚಿಗೆ ಸಾಮಾನು ಕೊಡಿಸೋಕೆ, ಪಬ್ಲಿಕ್ನಲ್ಲಿ ಕೈಹಿಡ್ಕೊಂಡಿರೋಕೆ ಒಬ್ಬಾತನ್ನ ಇಟ್ಕೊಳ್ಳೊ ಖಯಾಲಿ ಹೆಂಗಸು ಆಕೆ. ಸುಖ, ಚಟ ಎರಡಕ್ಕೂ ಆಯ್ತು. ನಂದು ತಪ್ಪಿದ್ರೆ ಮೆಟ್ಟಲ್ಲಿ ಹೊಡಿರಿ. ಆದರೆ ಅವಳೇನೂಂತ ನೀವೆ ಕೇಳಿ ನೋಡಿ’ ಅಂದ. ಅವನ ಕಣ್ಣಲ್ಲಿನ ನಿಜಾಯಿತಿಗೆ ಒಂದರೆಕ್ಷಣ ಹಿಮ್ಮೆಟ್ಟಿದೆ. ತಕ್ಷಣ ವನಜಗೆ ರಿಂಗಿಸಿದೆ.‘ಎಲ್ಲಿದ್ದೀಯಾ? ಯಾರಿದ್ದಾರೆ ಜೊತೆಗೆ?’ ಎನ್ನುತ್ತಿದ್ದಂತೆ ತಡವರಿಸುತ್ತಿದ್ದವಳಿಗೆ, ‘...ನ ಜೊತೆಲಿರೋದು ನಿಜಾನಾ?’ ಅಂದೆ. ಅಷ್ಟೆ, ಸಂಪರ್ಕ ಕಡಿದು ಬಿತ್ತು. ಮತ್ತೆರಡು ದಿನದಲ್ಲಿ ಆಕೆಯ ಹೊಸ ಸಂಸಾರದ ಕತೆ.
ಒಂದೇ ವರ್ಷದಲ್ಲಿ ಮೂರನೆಯವನ ಜೊತೆ.‘ಸರ್.. ಗಂಡಸರು ಯಾಮಾರಿಸಿದರೆ ಎಲ್ಲರೂ ತಿರುಗಿ ಬೀಳೊರೇ. ಆದರೆ ಹೆಚ್ಚಿನಂಶ ಹೆಂಗಸರೆ ಕಿರಿಕ್ ಮಾಡ್ಕೊಂಡಿರ್ತಾರೆ. ಇವತ್ತಿಗೂ ಪಾಪ ಅಂತಾ ಹಿಂದೆ ಬೀಳೋರು ಗಂಡಸರೇ ಗಮನಿಸಿ ಸರ್. ಹೆಂಗ್ಸು ಒಂದೇ ದಿವಸದಲ್ಲಿ ಬೇಕಿದ್ರೂ ಪಲ್ಟಿ.. ಆದರೆ ಗಂಡಸರು ಹಂಗೆ ತಿರುಗಿ ಬಿದ್ದಿದ್ದು ಇದ್ಯಾ? ಒದೆ ಬೀಳ್ತಾವೆ ಅಷ್ಟೆ. ಇನ್ನೊಮ್ಮೆ ಯಾರನ್ನಾದರೂ ಎತ್ತಾಕ್ಕೊಂಡು ಬರೋ ಮೊದ್ಲು ಯೋಚನೆ ಮಾಡಿ ಸರ್. ನಾನು ಈ ಚಿತ್ರ ಎಲ್ಲ ಅಪ್‌ಲೋಡ್ ಮಾಡಿದ್ದಿದ್ರೆ..?’ ಎಂದವನ ಮುಖ ಎದುರಿಸಲಾಗಲಿಲ್ಲ. ಪೇಲವವಾಗಿ ಕಾಫಿ ಎಂದೆ. ಸುಮ್ಮನೆ ಪ್ಯಾಕೆಟ್ ಕೊಟ್ಟು ಎದ್ದುಹೋದ. ಇವಳಿತ್ತ ಬೆಂಗಳೂರಿನ ಸಂಜೆಗಳಿಗೆ ವರ್ಷಕ್ಕೊಬ್ಬ ಗಂಡಸಿನೊಡನೆ ರಂಗೇರುತ್ತಿದ್ದಾಳೆ. ಅತ್ತ ಇದೇನೂ ಗೊತ್ತಿಲ್ಲದೆ, ‘ಮಗಳು ತುಂಬ ಕಷ್ಟಪಡುತ್ತಿದ್ದಾಳೆ, ಪಾಪ ಒಬ್ಬಳೇ ಏನು ಮಾಡಿಕೊಂಡಿದ್ದಾಳೊ..’ ಎಂದು ಕನವರಿಸುತ್ತ ಮೈಸೂರು ಹೆದ್ದಾರಿಯ ಪುಟ್ಟ ಕೋಣೆಯಲ್ಲಿ, ಇವತ್ತಲ್ಲ ನಾಳೆ ಕರೆದೊಯ್ದಾಳು ಎಂದು ಕಾಯುತ್ತಿರುವ ಅಮ್ಮ ಕೂತೆ ಇದ್ದಾಳೆ. ಅವಳಿಗೆ ತಿಳಿಸಿದರೂ ಈ ವಯಸ್ಸಿನಲ್ಲಿ ಆ ಜೀವ ಇನ್ನಷ್ಟು ನೊಂದುಕೊಳ್ಳುತ್ತದೆ ಹೊರತಾಗಿ ಮಗಳು ಕೆಟ್ಟಿದ್ದಾಳೆ ಎನ್ನಲಾರಳು. ಹೆಂಗೋ ಒಂದು ಮಗಳು ಸುಖವಾಗಿದ್ದರೆ ಸಾಕು ಎನ್ನುತ್ತದೆ ಆ ಜೀವ. ಯಾವ ಅಮ್ಮನೂ ಮಗಳ ಸುಖಕ್ಕೆ ಅಡ್ಡ ಬಂದ ಉದಾಹರಣೆಗಳಿಲ್ಲ. ಆದರೆ ಮಗಳು ಅಮ್ಮ ಆದಾಳೆಯೇ...?ಕಾರಣಅವಳು ಎಂದರೆ...

Sunday, November 1, 2015

ಮಕ್ಕಳೇ, ಮನಸುಗಳ ಕೊಲ್ಲಬೇಡಿ…

edit-ankana-1
ಇವತ್ತು ಸಾವಿರ ರೂಪಾಯಿ ಕೊಡುವುದು ಸುಲಭ. ಆದರೆ, ಮನೆಯವರಿಗಾಗಿ ಒಂದು ಗಂಟೆ ಕೊಡುವ ಮನಸ್ಸು ನಮಗಿಲ್ಲ. ತೀರಾ ಆತ್ಮೀಯರಿಗೆ ಬೇಕಿರುವುದು ಮುಷ್ಟಿಗಟ್ಟಲೇ ಹಣದ ಪಿಂಡಿಯಲ್ಲ. ಒಂದು ಹಿಡಿ ಚೆಂದದ ಮಾತು ಮತ್ತು ಅವರೊಂದಿಗೆ ಒಂದಿಷ್ಟು ಲಭ್ಯತೆ. ಆ ವಿಷಯದಲ್ಲಿ ನಮ್ಮದು ಅಪ್ಪಟ ದಾರಿದ್ರ್ಯ
***
ಕಳೆದ ಎರಡ್ಮೂರು ದಶಕಗಳ ಅವಧಿಯಲ್ಲಿ ಸಂಪರ್ಕ ತಪ್ಪಿದಾಗೆಲ್ಲ ನಾನೇ ಕರೆ ಮಾಡಿ ಎಟುಕಿಸಿಕೊಳ್ಳುವಂತೆ, ನಾನೂ ಇನ್ನೇನು ಮರೆತು ಬಿಡುತ್ತೇನೆ ಎನ್ನುವಾಗ ಫಕ್ಕನೇ ನನ್ನ ನೆನಪಿಸಿ ತಡವಿಕೊಂಡು ನನ್ನ ಬಾಲ್ಯದಿಂದಲೂ ಅಪಾರ ಅನುಭವಕ್ಕೀಡು ಮಾಡುವಲ್ಲಿ ಹಿರಿಯರ ಕೊಡುಗೆ ಸಾಕಷ್ಟಿದೆ. ಅದರಲ್ಲೂ ಮಲೆನಾಡಿನ ಮೂಲೆಮೂಲೆಗಳ ಒಂಟಿ ಮನೆಗಳಲ್ಲಿ ಪಡೆದ ಅನುಭವಗಳೇ ಬಹುಶಃ ನನ್ನನ್ನಿವತ್ತು ಈ ಮಟ್ಟಿಗಿಟ್ಟಿದೆ ಎಂದರೆ ಸುಳ್ಳಲ್ಲ.
ಆಗಿನ ಮಳೆಗಾಲದ ಪರಿಸ್ಥಿತಿ ಗಂಭೀರ. ರಾಡಿಯೇಳುವ ರಸ್ತೆಗಳು, ಅದಕ್ಕೂ ಮೊದಲೇ ಕಾಲಿಗೇರುವ ಉಂಬಳಗಳು, ಭಯಾನಕ ಚಳಿ, ಜಿಟಿಜಿಟಿ ಮಳೆಯಿಂದ ತಿಂಗಳಾನುಗಟ್ಟಲೇ ಮನೆಯಿಂದಾಚೆ ಬಾರದಿರುವವರೂ ಇದ್ದರು. ಮನೆಯಂಗಳದ ಒಲೆಯ ಬೆಂಕಿ, ಮಾಡಿಗೆ ತೂಗುತ್ತಿದ್ದ ಮೊಗೆಕಾಯಿ, ನಾಗಂದಿಗೆಯಲ್ಲಿ ತುಂಬಿಸಿಟ್ಟ ಬೆಲ್ಲದ ಡಬ್ಬಿಗಳಲ್ಲಿ ಬದುಕು ಮುಗಿದು ಹೋಗುತ್ತಿದ್ದುದು ಸುಳ್ಳಲ್ಲ.
ಮೇಲಿನ ಮನೆಯ ಚಂದ್ರಿಕತ್ತೆ, ಮಾವ ಇಂಥ ಚೆಂದದ ಅನುಭವಕ್ಕೀಡು ಮಾಡಿದವರು. ಇವತ್ತಿನ ಮಟ್ಟಿಗೆ ತೀರಾ ಮಾಯವಾಗಿರುವ ಮುಳ್ಳಣ್ಣು ಆಗ ಯಥೇಚ್ಛವಾಗಿ ನಾನು ಸವಿದಿದ್ದರೆ ಅದಕ್ಕೆ ಕಾರಣ ಚಂದ್ರತ್ತೆಯೇ. ಸಂಜೆಯ ಹೊತ್ತಿಗೆ ದೊಡ್ಡ ಮುಳ್ಳಿನ ಹೆಣೆಯನ್ನೇ ಕಡಿದು ತಂದು ಅಂಗಳದಲ್ಲಿ ಬಿಸಾಕುತ್ತಿದ್ದ ಮಾವ. ರಾಚುತ್ತಿದ್ದ ಮಳೆಯ ಇರಚಲು, ಅದನ್ನು ತಡೆಯಲು ಕಟ್ಟಿದ್ದ ಸೋಗೆಯ ತಡಸಲು, ಜಿಬಿರು ಜಿಬಿರಾಗಿ ಬೀಳುತ್ತಿದ್ದ ಬೆಳಕಿನಲ್ಲೇ ಉರಿಯುತ್ತಿದ್ದ ಒಲೆಯ ಎದುರಿಗೆ ಕೂತು ಮುಳ್ಳಣ್ಣು ಹರಿದದ್ದೇ ಕೊನೆ. ಬಹುಶಃ ಅದರ ನಂತರದಲ್ಲಿ ಬದಲಾದ ನಿಸರ್ಗದ ಹೊಡೆತಕ್ಕೆ ಹಣ್ಣು ಮತ್ತು ಕರಡದ ಬ್ಯಾಣ ಎರಡೂ ಇವತ್ತಿಲ್ಲ.
ಆಗೆಲ್ಲ ಬ್ಯಾಣದಲ್ಲಿ ಮುಖಕ್ಕೆ ರಾಚುವಷ್ಟೆತ್ತರ ಬೆಳೆಯುತ್ತಿದ್ದ ಕರಡ, ಇವತ್ತು ಒಂದಡಿಗಿಳಿದಿದೆ ಎನ್ನುವುದು ವಾಸ್ತವ. ಆದರೆ ಮಕ್ಕಳು, ಬಂದವರಿಗೆಲ್ಲ ಮಾಡುವುದು ಮಟ್ಟುವುದರಲ್ಲಿ ಚಂದ್ರತ್ತೆ ಮಾತ್ರ ಯಾವತ್ತೂ ಕಡಿಮೆ ಮಾಡಿದ್ದಿಲ್ಲ. ತೀರಾ ಬೆಳಗ್ಗೆನೆ ಮಕ್ಕಳು ತೆಳ್ಳವು ತಿಂದು ಹೊರಟರೆ, ಕಂಬಳಿಗೊಪ್ಪೆ ಹಾಕಿಕೊಂಡು ಸೈಕಲ್ಲಿನ ಟೈರು ಹುಗಿಯುತ್ತಿದ್ದ ಕಚ್ಚಾ ರಸ್ತೆಯಲ್ಲೂ ಒದ್ದಾಡುತ್ತಲೇ ಪೆಡಲು ತುಳಿಯುತ್ತಿದ್ದ ಮಾವ. ಅವನ ಹಿಂದೆ ಮುಂದೆ ಬಾರಿನ ಮೇಲೆ ಮುದುರಿ ಕೂರುತ್ತಿದ್ದ ಮಕ್ಕಳೊಂದಿಗೆ, ಆಚೀಚೆ ಬ್ಯಾಣದ ಬುಡದಿಂದ ಹೊರಬರುತ್ತಿದ್ದ ಇತರೆ ಮಕ್ಕಳನ್ನೂ ಸೈಕಲ್ಲಿನ ಬಾರ್ ಮಧ್ಯೆ ಕೂರಿಸಿಕೊಳ್ಳುತ್ತಿದ್ದ.
ಅಷ್ಟೆಲ್ಲ ಮಾಡಿ ಮಕ್ಕಳನ್ನು ಸ್ಕೂಲಿಗೆ ಕಳುಹಿಸಿ ಬಂದು ತೋಟಕ್ಕೆ ಹೋದರೆ ಮಧ್ಯಾಹ್ನದವರೆಗೆ ಕೆಲಸ. ನಂತರ ಉರಿನೆತ್ತಿಯ ಹೊತ್ತು ಕೆಂಪಗಾಗಿರುತ್ತಿದ್ದ ಮಾವ ಮೊಗೆಕಾಯಿ ಹುಳಿ ಉಂಡು ಒಂದರ್ಧ ಗಂಟೆ ವಿರಮಿಸಿ ಮತ್ತೆ ತೋಟಕ್ಕಿಳಿದರೆ, ಐದರ ಹೊತ್ತಿಗೆ ಸೈಕಲ್ಲು ತುಳಿಯುತ್ತ ಸ್ಕೂಲಿಗೆ ದೌಡಾಯಿಸುತ್ತಿದ್ದ. ಓದಿಗೆ ಪ್ರಾಮುಖ್ಯತೆ ಬಹಳವಿತ್ತು. ಕಾರಣ ಮಾವನ ಕಾಲಕ್ಕೆ ಇಂಥ ಭಾಗ್ಯವೇ ಇರಲಿಲ್ಲ. ಶಾಲೆಯ ಮುಖ ನಾಲ್ಕನೆಯ ಇಯತ್ತೆಗೆ ಮುಗಿದಿತ್ತು. ಅದಕ್ಕಾಗೇ ‘ನಂಗಳ ಬದೀಗೆಲ್ಲ ಆವಾಗ ಶಾಲಿನೇ ಇರ್ಲಿಲ್ಯೆ. ನಮಗಾದ ಕಷ್ಟ ಮಕ್ಕಳಿಗೂ ಬ್ಯಾಡ ಹೇಳಿ. ಸರಿಯಾಗಿ ಕಲಿದಿದ್ರೆ ಈಗ ಎಂಥದ್ದೂ ಅಗದಿಲ್ಲ ಅಲ್ದನಾ..’ ಎನ್ನುತ್ತಿದ್ದರೆ ಮಕ್ಕಳು ಮುಸುಮುಸು ಮಾಡುತ್ತ ಪುಸ್ತಕ ಎತ್ತಿ ಓಡುತ್ತಿದ್ದವು. ಓದುವ ಮಕ್ಕಳಿಗೆ ಕಷ್ಟ ತಾಗದಂತೆ ಜೋಪಾನ ಮಾಡಿದರು. ಮಕ್ಕಳಿಬ್ಬರೂ ಚೆನ್ನಾಗೇ ಓದಿದರು. ‘ಸುತ್ತಲಿನ ಶಾಲೆಗೆಲ್ಲ ತಮ್ಮ ಮಕ್ಕಳೇ ಫಸ್ಟು’ ಎನ್ನುವಾಗ ಚಂದ್ರತ್ತೆಯ ಹೆಮ್ಮೆಯ ಡೌಲು. ಪ್ರತಿವರ್ಷವೂ ಫಲಿತಾಂಶಕ್ಕೆ ಮನೆಯಲ್ಲಿ ಹಬ್ಬದೂಟ. ಆಳುಗಳಿಗೂ ಊಟೋಪಚಾರ. ಮನೆಗೂ ಹೋಳಿಗೆ ಕಟ್ಟಿಕೊಡುತ್ತಿದ್ದಳು ಚಂದ್ರತ್ತೆ. ಅವಳ ಈ ಸಡಗರಕ್ಕೆ ನಾನು ಸಣ್ಣಗೆ ಹಲ್ಕಿರಿಯುತ್ತಿದ್ದೆ. ಕಾರಣ ಅಂತೂ ಎಸ್ಸೆಸ್ಸೆಲ್ಸಿ ಉಸುರುಕಟ್ಟಿ ಸೆಕೆಂಡ್ ಕ್ಲಾಸು ನಾನು. ಆ ಹುಡುಗ ತೊಂಭತ್ನಾಲ್ಕು ಮಾರ್ಕಿಗೆ, ಹೇಗೆ ಆರು ಕಮ್ಮಿಯಾಯಿತೆಂದು ಬಟ್ಟು ಮಡಚಿ ಎಣಿಸುತ್ತಿದ್ದರೆ ನಾನು ಬಾಯಿ ಬಿಟ್ಟುಕೊಂಡು ನೋಡುತ್ತಿದ್ದೆ. ‘ನನಗಿದರ ಮುಕ್ಕಾಲು ಬಂದರೂ ಸಾಕಿತ್ತು’ ಮಾರಾಯ ಎಂದು ಗೊಣಗಿಕೊಳ್ಳುತ್ತಿದ್ದರೆ ಮಾವ, ‘ಅಲ್ಲಲೇ ಗೊಣಗಬ್ಯಾಡ ಮಾಣಿ. ಎಂಥಾದ್ದೋ ನಾಲ್ಕು ಪರ್ಸೆಂಟು ಹೇಳಿ ಅವಂದು ಸಂಕಟ ಅಂವಂಗೆ. ನಿಂಗೆ ಎಂತಾ ಮಾರಿಜಾತ್ರೆಗೆ ಹೋಗ ಅರ್ಜೆಂಟಾ..’ ಎಂದು ಗದರುತ್ತಿದ್ದ. ನಾನು ಕಿಸಕ್ಕೆನ್ನುತ್ತಿದ್ದೆ. ಹುಡುಗ ಹುಡುಗಿ ಸಾಲಾಗಿ ಇಂಜಿನಿಯರಿಂಗ್ ಓದಿದರು. ಅತ್ತೆಗಂತೂ ಸಂಭ್ರಮವೋ ಸಂಭ್ರಮ. ಬೆಂಗಳೂರಿನಲ್ಲಿ ಆಗಷ್ಟೆ ಐ.ಟಿ. ಕಣ್ಬಿಡುತ್ತಿತ್ತು. ಕೆಲಸ, ದುಡ್ಡು ಎರಡೂ ಕೈಗೆ ಹತ್ತಲು ತಡವಾಗಲಿಲ್ಲ. ದೂರವಾಗಿದ್ದು ಹಳ್ಳಿ ಮನೆಯ ಅಪ್ಪ-ಅಮ್ಮ ಮಾತ್ರ.
ಹುಡುಗ ಬೆಂಗಳೂರಿನಲ್ಲಿ ಜೊತೆಲಿದ್ದ ಹುಡುಗಿಯನ್ನೇ ಮದುವೆ ಆದ. ಅತ್ತೆ ಏನೋ ಹೇಳಲು ಬಾಯಿ ತೆರೆವ ಮೊದಲೇ, ಮಾವ ಸಂಭಾಳಿಸುತ್ತ ಹುಡುಗನಿಗೆ ‘ಆಯ್ತು ಮಾರಾಯಾ.. ನಿನ್ನಿಷ್ಟ. ಆದರೆ ಮನೆ ತೋಟ ಎಲ್ಲ ನೋಡ್ಕಳವಲಿ. ಈ ಬದೀಗೂ ಲಕ್ಷ್ಯ ಇಲೋ ಮತ್ತೆ’ ಎಂದಿದ್ದ. ಅದೇ ಮುಳುವಾಯಿತಾ? ಗೊತ್ತಿಲ್ಲ. ಮಗಳಂತೂ ಮೊದಲೇ ಹಳ್ಳಿಮನೆ ಬಿಡಲು ನಿರ್ಧರಿಸಿದ್ದಳಂತೆ. ಎಲ್ಲ ಮಲೆನಾಡ ಹುಡುಗಿಯರಂತೆ. ‘ಹೋಗಾ ಹಳ್ಳಿ ಬದೀಗ ಯಾರಿರ್ತಾರೆ…’ ಎಂದು ಬಿಟ್ಟಿದ್ದಳು. ನೋಡನೋಡುತ್ತಿದ್ದಂತೆ ಮಕ್ಕಳ ವರಸೆ ಬದಲಾಗಿತ್ತು. ವಯಸ್ಸಾಗುತ್ತಿದ್ದ ದಂಪತಿ ಮನಸ್ಸು ಮುರಿದು ಹೋಗಿತ್ತು. ಮಾವ ಇತ್ತೀಚೆಗೆ ಮಾತಾಡುವುದನ್ನೂ ಬಿಟ್ಟಿದ್ದ. ಮನೆಲೂ ಮಾತೇ ಆಡುತ್ತಿಲ್ಲವಂತೆ. ಯಾಕೋ ಒಮ್ಮೆ ನೋಡಿಯೇ ಬರೋಣ ಎನ್ನಿಸಿ ಹೊರಬಿದ್ದು ನಾನು ಮನೆಯ ಹೆಬ್ಬಾಗಿಲಿಗೆ ಕಾಲಿಟ್ಟಾಗಲೇ ಅನ್ನಿಸಿದ್ದು ಮನೆಯಿಂದ ಸಂಭ್ರಮ ಎನ್ನುವುದು ಒಮ್ಮೆ ಆಚೆ ಹೋಗಿಬಿಟ್ಟರೆ, ಹೇಗೆ ಗರ ಹೊಡೆಯುತ್ತದೆ ಎಂದು. ಅಂಗಳದಲ್ಲಿ ಅನಾಯಾಸವಾಗಿ ಅಡರುತ್ತಿದ್ದ ಲವಲವಿಕೆ ಸತ್ತು ಹೋಗಿತ್ತು.
ಇಬ್ಬರ ಕಣ್ಣಲ್ಲೂ ಆಸೆ ಬಿಡಿ, ಭರವಸೆಯ ಬೆಳಕೂ ಗೋಚರಿಸುತ್ತಿರಲಿಲ್ಲ. ಮುಖದಲ್ಲಿ ಬದುಕಿನ ಗಮ್ಯಗಳ ಕಡೆಗಿನ ನಿರೀಕ್ಷೆಯ ಆಸೆ ಕಮರಿದ್ದು ಸ್ಪಷ್ಟ. ಬದುಕಿನಲ್ಲಿ ಉತ್ಸಾಹ ಸೋರಿದ್ದರ ಸಂಕೇತ ಎನ್ನುವಂತೆ ಹಾರುಹೊಡೆದಂತಿದ್ದ ಅಂಗಳ, ಬೂದಿ ತುಂಬಿದ್ದ ಒಲೆ, ದೊಡ್ಡ ಅಡುಗೆ ಮನೆಯ ಮಧ್ಯದಲ್ಲಿ ಖಾಲಿ ಖಾಲಿ ಜಾಗ. ಮೂಲೆಯಲ್ಲಿ ಒಂದಿಬ್ಬರ ಬದುಕಿನ ಅನಿವಾರ್ಯವಾಗಿದ್ದ ಒಂದೆರಡು ಪಾತ್ರೆಗಳು. ಎಲ್ಲಕ್ಕಿಂತಲೂ ತೀರಾ ಘಾಸಿಗೊಳಿಸಿದ್ದು ಅವರಿಬ್ಬರ ಮೌನ. ತೀರಾ ಉಸಿರುಕಟ್ಟುವ ಅಸಹನೀಯ ಮೌನ ಆ ಮನೆಗೆ ಭರಿಸುವಂತಹದ್ದಾಗಿರಲಿಲ್ಲ. ಎಲ್ಲೆಲ್ಲೂ ಹರಿಯುತ್ತಿದ್ದ ಗೌಜಿಯ ಹೊನಲು ಇಲ್ಲದ್ದು ಅರಗಿಸಿಕೊಳ್ಳಲೇ ಕೆಲನಿಮಿಷ ಬೇಕಾದವು.
ಆದರೂ ಅತ್ತೆಯ ಮನಸ್ಸು ದೊಡ್ಡದು. ಒತ್ತಾಯದ ನಗು ಮೂಡಿಸಿಕೊಳ್ಳುತ್ತ, ‘ಕಷಾಯ್ ಮಾಡ್ತೀನಾ ಮಾಣಿ’ ಎನ್ನುತ್ತ ಎದ್ದರೆ ದೇಹ ಕೂಡ ಅದ್ಯಾವ ಪರಿ ಸೋತು ಹೋಗಿತ್ತೆಂದರೆ ಸುಮ್ಮನೆ ಮಾನವಾಕೃತಿಯೊಂದು ಚಲಿಸುವಂತೆ ಕಾಣಿಸುತ್ತಿತ್ತು. ಮಾವ ತಲೆ ಬಾಗಿಲಿಗೆ ಕೂತಿದ್ದವ ಎದ್ದು ಒಳ ಬಂದಿರಲಿಲ್ಲ. ಮಾತು ಮೊದಲೇ ನಿಲ್ಲಿಸಿಬಿಟ್ಟಿದ್ದ.
‘ಮಾಣಿ.. ನಮ್ಮುಡುಗ ಮನೆ ತೋಟ ನೋಡ್ಕಳದಿಲ್ಲ ಸರಿನೇ, ಆದರೆ ಆಗೀಗ ಬಂದು ಹೋಗಲೂ ಅಗದಿಲ್ಯೆ? ಇಷ್ಟೆಲ್ಲ ಓದಿಸಿ, ಹುಡುಗ್ರನ್ನ ಮುಂದಕ್ಕ ತಂದಿದ್ದು ನಮ್ಗೆ ತಿಂಗ್ಳು ತಿಂಗ್ಳು ದುಡ್ಡು ದುಗ್ಗಾಣಿ ಕೊಡಲಿ ಅಂತಲ್ಲ. ಬದುಕಲು ಕಲೀಲಿ ಅಂತಾ ಶಾಲಿಗೆ ಕಳಿಸಿದ್ದಾಗಿತ್ತು. ನಮ್ಮ ನಂತರ ಏನಾರ ಮಾಡಿಕೊಳ್ಳಲಿ. ಆದರೆ ಈ ತೋಟ ಬ್ಯಾಣಾ ಕಟ್ಟೊಕ್ಕೆ ನಿಮ್ಮಾವ ಜೀವಾನೆ ತೆಯ್ದಿದಾರೆ ಮಾಣಿ. ಅವ್ರು ಇರೋ ತಂಕಾ ಬಂದು ಹೋಗಿ ಮಾಡಿದ್ರೆ ಸಾಕಿತ್ತು. ನಾನಾದರೂ ಒತ್ತಾಯ ಮಾಡಲ್ಲ. ಆದರೆ ಇದನ್ನೆಲ್ಲ ನಾವಿದ್ದಾಗ್ಲೇ ಮಾರಿ ಬೆಂಗಳೂರಲ್ಲಿ ಅಸ್ತಿ ಮಾಡ್ತೀನಿ ಅಂತಾ ಹೊರಟಿದಾನಲ್ಲ ಸರಿನೇನೋ..? ನಿಮ್ಮಾವಂಗೆ ಈ ಭೂಮಿ ಅಂದ್ರೆ ಜೀವಾ. ಭೂಮಿ ಬೆಲೆ ಏನೂಂತ ಓದದಿರೋ ನಮಗೇ ತಿಳಿಬೇಕಾದರೆ ಇಷ್ಟೆಲ್ಲ ಚೆಂದ ಓದಿದ ಇವ್ನಿಗೆ ತಿಳಿಯದಿಲ್ವ..? ಈಗ ನಾವು ಹೂಂ ಅನ್ಲಿಲ್ಲ ಅಂತ ಮೂರು ವರ್ಷದಿಂದ ಮನೆಗೆ ಬಂದಿಲ್ಲ. ಮಗಳೂ ನನ್ನ ಕೇಳದೆ ಮಾರೋ ಹಂಗಿಲ್ಲ ಅಂತ ಕಾನೂನು ಮಾತಾಡ್ತಾಳೆ.
ಮಾಣಿ ನೀನೊಮ್ಮೆ ಅವರಿಬ್ರಿಗೂ ಮಾತಾಡ್ತೀಯಾ..? ನಾವು ಹೋದ ಮ್ಯಾಲೆ ಏನಾದರೂ ಮಾಡಿಕೊಳ್ಳಲಿ. ಆದರೆ ನಾವಿರುವಾಗಲೇ ಮಾರಿ, ನಮ್ಮನ್ನು ಸಿಮೆಂಟಿನ ಮನೇಲಿ ಕೂರಿಸೋದು ಬ್ಯಾಡಪ್ಪ. ಇನ್ನೆಷ್ಟು ದಿನಾನೋ ನಮ್ಮದೂ ಟೈಮಾಯ್ತು. ಆದರೂ ಮಕ್ಕಳ ಬಗ್ಗೆ ಬೇಜಾರಿಲ್ಲ. ಇಬ್ರಿಗೂ ಮೊದ್ಲಿನ ಹಂಗೆ ಬಂದು ಹೋಗಿ ಮಾಡ್ಕಂಡಿರೋಕೆ ಹೇಳು. ನನ್ನದೂ ಅಂತಿರೋ ಬಂಗಾರ, ಒಡವೆ ಎಲ್ಲ ಕೊಡ್ತೀನಿ ಅದನ್ನು ಒಯ್ಲಿ. ಆದರೆ ನಾವಿದ್ದಾಗ್ಲೇ ಭೂಮಿ ಮಾರಿ ಮಾವನ್ನ ಬದುಕಿದ್ದಾಗ್ಲೆ ಸಾಯಿಸ್ಬ್ಯಾಡ ಅಂತ ಹೇಳ್ತೀಯ.. ಅವ್ರಿಗೆ ಮಾತೇ ನಿಂತಂಗಾಗಿದೆ. ಹು..ಹಾ ಅನ್ನೋದು ಬಿಟ್ರೆ ಬೇರೆ ಮಾತೇ ಆಡ್ತಿಲ್ಲ..’ ಅತ್ತೆ ಮೆಲುದನಿಯಲ್ಲಿ ಬೇಡಿಕೊಳ್ಳುತ್ತಿದ್ದರೆ ಯಾಕೋ ಮುಳ್ಳಣ್ಣಿನ ಮುಳ್ಳು ಎದೆಯಲ್ಲಿ ಮುರಿದ ಸಂಕಟ. ಯಾಕೋ ನಾನು ಸೆಕೆಂಡ್ ಕ್ಲಾಸು ಬಂದಿದ್ದೇ ಒಳ್ಳೆಯದಾಯ್ತು ಅನ್ನಿಸಿತೊಮ್ಮೆ. ಹೊರಟವನೊಮ್ಮೆ ದಣಪೆಯಿಂದ ತಿರುಗಿ ನೋಡಿದೆ. ಬಾಗಿಲಲ್ಲಿ ನಿರೀಕ್ಷೆಯ ಸಣ್ಣ ಆಸೆಯಲ್ಲಿ ಕೈ.. ಸೆರಗು..ಎರಡೂ ಬಾಯಿಗಿಟ್ಟುಕೊಂಡು ಹೊಸ್ತಿಲ ಮೇಲೆ ಸಣ್ಣ ಆಕೃತಿ ಬಾಯಿ ಕಚ್ಚಿ ನಿಂತಿದ್ದು ಕಾಣಿಸಿತು. ನನಗರಿವಿಗೂ ಮೊದಲೆ ಬಿಕ್ಕಳಿಕೆ ಬಂತು..
ಕಾರಣ ..
ಅವಳು ಎಂದರೆ…
(ಲೇಖಕರು ಕಥೆ-ಕಾದಂಬರಿಕಾರರು)

Saturday, October 10, 2015

ಅಪ್ಪ.. ತಪ್ಪು ನಿಂದಲ್ಲ ಸುಮ್ನಿರು...
ಪ್ರತಿಬಾರಿಯೂ ವೈಯಕ್ತಿಕವಾಗಿ ಮುಗ್ಗರಿಸಿದಾಗಲೂ ಹೆಣ್ಣೊಬ್ಬಳ ವಕಾಲತ್ತು ಬದುಕಿಗೊಂದು ತಿರುವನ್ನುತಂದಿಟ್ಟುಬಿಡುತ್ತದೆಅಷ್ಟೆ... ಅಲ್ಲಿವರೆಗೂ ಬದಲಾಗುತ್ತ ಇಲ್ವಾ ಅನ್ನಿಸುತ್ತಿದ್ದ ಎಂಥದ್ದೇ ಅರೆಬರೆ ಜೀವನ ಕೂಡಇದ್ದಕ್ಕಿದ್ದಂತೆ ಹಳಿಗೆ ಹತ್ತುತ್ತದೆಆದರೆ ಬದಲಾದ ಜೀವನಪಥದಲ್ಲಿ ಬದುಕು ನಿಭಾಯಿಸೋದಾದರೂಗೊತ್ತಿರಲೇಬೇಕು...

ನಾರಾಯಣ ನಮಗೆಲ್ಲ ನಾಣಿಯಾಗಿದ್ದ (ಹೆಸರು ಬದಲಿಸಿದ್ದೇನೆ). ಪೂರ್ತಿ ಮಂದನೂ ಅಲ್ಲದ ಇತ್ತ ಹೇಳಿದ್ದೋಮ್ಮೆಲೆ ಅರ್ಥವೂ ಆಗದ ಹುಡುಗ. ಗುಂಪಿನಲ್ಲಿ ಅತ್ಯಂತ ಗೇಲಿಗೂ, ಆಗೀಗ ತಲೆ ಮೇಲೆ ಮೊಟಕಿಸಿಕೊಳ್ಳಲು ಒಂದು ತಲೆಯೂ ಬೇಕಾಗಿ ಅವನಿದ್ದನೇ ಹೊರತಾಗಿ ಅವನ್ಯಾವತ್ತೂ ತನ್ನದೂ ಒಂದು ತಲೆ ಎಂಬ ಐಡೆಂಟಿಟಿ ತೋರಿದವನೇ ಅಲ್ಲ.
ಅವನ ಕಾಲದ ಅತಿ ದೊಡ್ಡ ತ್ರಾಸೆಂದರೆ ಗಣಿತದಲ್ಲಿ ಸೊನ್ನೆಯಾದರೆ ಇಂಗ್ಲಿಷ್ ಅಪೂಟು ತಲೆಗೆ ಹೋಗುತ್ತಿರಲಿಲ್ಲ. ಅವನಷ್ಟೇ ಯಾಕೆ ನನ್ನ ಕಾಲದ ಅತಿ ಹೆಚ್ಚು ಹುಡುಗರ ಇಂಗ್ಲಿಷಿನ ಕಥೆಯೂ ಹೀಗೇ. ಕಾರಣ ನಮ್ಮ ಮಾಸ್ತರುಗಳಿಗೇ ಪಾಪ ಭಾಷೆಯೊಂದು ಭವಿಷ್ಯತ್ತಿನಲ್ಲಿ ಹೀಗೆ ದೇಶವನ್ನಾಳಬಹುದೆನ್ನುವ ಅಂದಾಜಿರಲಿಲ್ಲ. ಇನ್ನು ನಮಗೆಲ್ಲಿಂದ ಬರಬೇಕು..? ಆ ಕಾಲಕ್ಕಾದ ಪ್ರಮಾದ ನಮ್ಮನ್ನು ಈಗಲೂ ಕಾಡುತ್ತದೆ. ನಾನಿವತ್ತಿಗೂ ಬರೆದಷ್ಟು ಸುಟವಾಗಿ ಅಂಗ್ರೇಜಿ (ಇಂಗ್ಲಿಷ್) ಮಾತನಾಡಲಾರೆ. ಆದರೆ ಸಂವಹನಕ್ಕೆ ಅಗತ್ಯವಿರುವಷ್ಟು ಗಲಗಲ ಎನ್ನುತ್ತೇನೆ. ಅಷ್ಟಕ್ಕೂ ಎದುರಿನವರನ್ನು ನಂಬಿಸಲಿಕ್ಕೆ, ಅವರಿಗೊಂದು ಸ್ಪಷ್ಟ ಚಿತ್ರ ಕೊಡುವುದಕ್ಕೆ ಭಾಷೆಗಿಂತಲೂ ವಿಷಯದ ಅರಿವು ಮತ್ತದನ್ನು ಪ್ರಸ್ತುತಪಡಿಸುವ ರೀತಿ ಮುಖ್ಯವಾಗುತ್ತದೆ ಹೊರತಾಗಿ ಭಾಷೆನೇ ಎಲ್ಲವೂ ಅಲ್ಲ. ಹಾಗಾಗಿ ದೇಶದ ಯಾವ ಮೂಲೆಯಲ್ಲೂ ನನಗಿವತ್ತು ಭಾಷೆ ತೊಂದರೆಯೆಂದೆನಿಸಿಲ್ಲ.
ಆದರೆ ನಾಣಿಗೆ ಇಂಗ್ಲಿಷ್ ಹೇಗೆ ಕೈಕೊಟ್ಟಿತ್ತೋ ಹಾಗೆಯೇ ಇತರ ವಿಷಯಗಳೊಂದಿಗೆ ಸಾಮಾನ್ಯಜ್ಞಾನವೂ ಕೈಬಿಟ್ಟಿತ್ತು. ಅವನಪ್ಪ ಇವನನ್ನು ತಿದ್ದಲು ಭಯಾನಕ ಶಿಕ್ಷೆಗೆ ಈಡು ಮಾಡುತ್ತಿದ್ದರು. ಎಷ್ಟೋ ಬಾರಿ ಅವನನ್ನು ಬೆತ್ತಲೆ ನೇತುಹಾಕಿದ್ದನ್ನು ನೋಡಿಕೊಂಡು ನಾವು ದೂರದಿಂದಲೇ ಓಡಿ ಹೋದದ್ದೂ ಇದೆ. ಮುಖ ಮೂತಿ ನೋಡದೆ ಬಾರಿಸುತ್ತಿದ್ದರು. ಅವನ ಕಿರುಚುವಿಕೆಗೆ ಯಾರಾದರೂ ಎದುರು ಮನೆಯ ಅಜ್ಜಿಯಂದಿರು ಹೋಗಿ, ಅವರಪ್ಪನನ್ನು ಬೈದು ಹುಡುಗನನ್ನು ಎತ್ತಾಕಿಕೊಂಡು ಬಂದು ಮನೆಯೊಳಗೆ ಇರಿಸಿಕೊಳ್ಳುತ್ತಿದ್ದರು. ಅಂಗಿ-ಚೆಡ್ಡಿಗಳಿಲ್ಲದ ಹುಡುಗ ಬುಳುಬುಳು ಮಾಡುತ್ತಾ ಕಟ್ಟೆ ಮೇಲೆ ಕೂತಿರುತ್ತಿದ್ದರೆ ರಾತ್ರಿಯಾಗುವ ಹೊತ್ತಿಗೆ ಅಪ್ಪನೆಂಬ ನರಸಿಂಹ ಮಗನನ್ನು ಮೈದಡವಿ ಹೊದೆಸಿ ನಿz ಬರುವವರೆಗೂ ಕುಚ್ಚು ತಟ್ಟುತ್ತಿದ್ದ. ಅದೇನೇ ಇದ್ದರೂ ವಿಪರೀತ ಓದುವ ಬಗೆಗಿನ ಆಸ್ಥೆ ಮತ್ತವನನ್ನು ಇನ್ನಿಲ್ಲದಂತೆ ಹಿಂಬಾಲಿಸುತ್ತಿದ್ದ ಪಾಲಕರ ನಿಗಾದಿಂದ ಅವನಿಗೆ ಓದು, ಶಾಲೆ ಮತ್ತು ವ್ಯವಸ್ಥೆಯ ಬಗ್ಗೆಯೇ ಹೇವರಿಕೆ ಬಂದು ಬಿಟ್ಟಿತ್ತಾ ಗೊತ್ತಿಲ್ಲ. ತೀರಾ ಕಾಲೇಜಿನ ಹೊತ್ತಿಗೆ ಜಸ್ಟ್‌ಪಾಸ್ ಎನ್ನುವಲ್ಲಿಗೆ ಬಂದು ನಿಂತಿದ್ದ.
ಊರ ತುಂಬೆಲ್ಲ ನಾಣಿ ಅಪಹಾಸ್ಯಕ್ಕೀಡಾಗುತ್ತಿದ್ದ. ‘ಹುಡುಗ ಓದೋದು ಒಂದ ಬಿಟ್ಟ ಬಾಕಿ ಎಲ್ಲಾ ಮಾಡ್ತಾನು’ ಎನ್ನಿಸಿಕೊಳ್ಳುವಲ್ಲಿಗೆ, ಅವನ ಮಿತಿಗೂ ಮೀರಿದ ನಿರೀಕ್ಷೆಗಳಿಂದಾಗಿ ನಾಣಿ ಇನ್ನಷ್ಟು ಕುಬ್ಜನಾಗತೊಡಗಿದ್ದ. ಆದರೆ ಅದ್ಯಾವದಕ್ಕೂ ತಲೆ ಕೊಡದೆ ಹೇಗೋ ಕಾಲೇಜು ಮುಗಿಸುವ ಹಂತದಲ್ಲಿzಗ ಅವನಿಗರಿವಾಗಿಯೋ, ಅವನ ಪಾಪದ ಪರಿಸ್ಥಿತಿಗೋ ಹುಡುಗಿಯೊಬ್ಬಳು ಒಲಿದು ಬಿಟ್ಟಿದ್ದಳು.
ಅಷ್ಟೆ.. ನಾಣಿಯ ಖದರು ಮತ್ತು ವರಸೆ ಎರಡೂ ಬದಲಾಗಿದ್ದವು. ಐನ್‌ಟೈಮಿಗೆ ಮಾತಿನಲ್ಲಿ ಅಡರಿಕೊಳ್ಳುತ್ತಿದ್ದ ಉಗ್ಗುತನ, ಆತ್ಮವಿಶ್ವಾಸ ಕದಡಿಹೋಗಿದ್ದ ಬದುಕಿನ ಪಳಿಯುಳಿಕೆಯಂತಿದ್ದ ನಾಣಿ ಸರಕ್ಕನೆ ಎದ್ದುನಿಂತಿದ್ದ. ಯಾರೆಂದರೆ ಯಾರಿಗೂ ಗುಟ್ಟು ಬಿಟ್ಟು ಕೊಡದೆ ಇಬ್ಬರೂ ಕದ್ದು ಭೇಟಿಯಾಗುತ್ತಿದ್ದರೆ ಕೋಟೆ ಸುತ್ತಲಿನ ಸಂಜೆಗಳಿಗೆ ರಂಗು ನಶೆಯಾಗತೊಡಗಿತ್ತು. ಕಾಲೇಜು ಕೊನೆಯ ವರ್ಷದಲ್ಲಿ ಅವನ ಈ ದಿನದಿಂದ ದಿನಕ್ಕೆ ಬದಲಾಗುತ್ತಿದ್ದ ವರ್ತನೆಗೆ, ದಿರಿಸಿಗೆ, ಮಾತುಕತೆಯಲ್ಲಿನ ದಮ್ಮಿಗೆ ಎಲ್ಲರೂ ಹುಬ್ಬೇರಿಸತೊಡಗಿದ್ದರು. ಹುಡುಗಿ ಅವನಂದು ಹೊಸ ಭರವಸೆ ಮತ್ತು ಬೆಳಕು ಮೂಡಿಸಿದ್ದು ದಿಟ. ಬದುಕು ಕವಲೊಡೆದು ಹೊಸ ಹೊರಳಿನಲ್ಲಿ ತಿರುಗತೊಡಗಿತ್ತು. ಇಬ್ಬರಲ್ಲೂ ಪ್ರಾಮಾಣಿಕ ಪ್ರೀತಿ, ನಂಬಿಕೆ ಎರಡೂ ಇದ್ದವು.
ಯಾವ ಕಾರಣಕ್ಕೂ ಪ್ರೀತಿಯಿಂದ ಕೂರಿಸಿ ಮುದ್ದು ಮಾಡಿರದ ಬದುಕಿನಲ್ಲಿ ಸೇವಿ(ಸೇವಂತಿ) ಅದ್ಯಾವ ಗಳಿಗೆಯಲ್ಲಿ ಕಾಲಿಟ್ಟಿದ್ದಳೋ ಅಚ್ಚರಿಯೆಂಬಂತೆ ನಾಣಿಯ ಉಗ್ಗು ಹಾರಿಹೋಗಿತ್ತು. ಸೇವಿ ಅದೆಂಥ ಪರಿಯಲ್ಲಿ ಅವನಂದು ಧಿಶಕ್ತಿಯನ್ನು ಸ್ಥಾಪಿಸಿಬಿಟ್ಟಿದ್ದಳೆಂದರೆ ಸುಮ್ಮನೆ ಸೋತಂತೆ ನಡೆಯುತ್ತಿದ್ದ ಅವನ ದೈಹಿಕ ಪರಿಭಾಷೆಯೇ ಬದಲಾಗಿತ್ತು. ಯಾವತ್ತೂ ಸರಿಯಾಗಿ ಕೂದಲೂ ತೀಡದವನು ಜೊಂಪೆ ಹಾರಿಸುತ್ತಾ, ‘ವಯ್... ಸಂತೂ ನಿನ್ನ ಕೂಲಿಂಗ್ ಗ್ಲಾಸ್ ಕೊಡಪಾ ನಾಳೆ ಒಂದಿನಾ’ ಎನ್ನುವಲ್ಲಿಗೆ ಬಂದು ನಿಂತಾಗ ಹಕ್ಕಿಗಳು ಹಾರುವ ಸ್ಪಷ್ಟ ಚಿತ್ರಣ ಎದುರಿಗಿತ್ತು. ಬೇರೆ ದಾರಿನೂ ಇರಲಿಲ್ಲ ಅವರಿಗೆ. ಅವನಿಗಿದ್ದ ನಂಬಿಕೆ ಎಂದರೆ ನಾನು ಮತ್ತು ಶಂಕರ ಮಾತ್ರ ಅವನ ಪ್ರೀತಿಯ ಬಳ್ಳಿಗೆ ಆಧಾರವಾಗಬಹುದಾಗಿತ್ತು. ಅವನು ಮಾತಾಡುತ್ತಿದ್ದರೆ ಕೈಯೆಲ್ಲ ಬೆವರಿ ಒದ್ದೆಯಾಗುತ್ತಿದ್ದವು. ಎಲ್ಲಿ ಯಾವಾಗ ಯಾರು ತನ್ನನ್ನು ಸಂಶಯಿಸುತ್ತಿzರೋ ಎನ್ನುವಂತೆಯೇ ಅವನ ದೇಹದ ಕದಲಿಕೆಗಳು ಭಿನ್ನವಾಗಿರುತ್ತಿದ್ದವು.
 ‘ನಮ್ಮಪ್ಪನಿಗೆ ಗೊತ್ತಾಗೋ ಮುಂಚೆ ಓಡಿ ಹೋದರ ಹ್ಯಾಂಗ..? ನಿನಗೆ ನಾಲ್ಕಾರು ಊರ ಅಡ್ಯಾಡಿ ಗೊತ್ತದ ಸಂತೂ. ಇಲ್ಲಿದ್ದರ ಒಂದೋ ನಮಪ್ಪ ಕೊಂದಬಿಡ್ತಾನು ಇಲ್ಲಂದರೆ ಆಕೀ ಅಣ್ತಮ್ಮಂದಿರು ನನ್ನ ಬಡಿತಾರು ಏನ್ ಮಾಡಲಿ. ಹೆಂಗಾರ ಒಂದು ಎರಡ ವಾರ ಉಳಿಯೋ ವ್ಯವಸ್ಥೆ ಮಾಡಲ್ಲ ಸಂತೂ..." ಎನ್ನುತ್ತಾ ಅಸಹಾಯಕ, ಅಮಾಯಕ ನಾಣಿ, ಅಪರೂಪಕ್ಕೆ ಬದುಕಿನಲ್ಲಿ ಅರಳಿದ್ದ ಪ್ರೀತಿಯ ಬೆಳಕನ್ನು ರಕ್ಷಿಸಿಕೊಳ್ಳುವ ಆತುರಕ್ಕಿಳಿದಿದ್ದ. ಅದು ಅವನ ಮೊಟ್ಟಮೊದಲ ಗೆಲುವಾಗಿತ್ತು. ಅವನ ಜೀವನದ ಹೊಸ ಬಣ್ಣವಾಗಿತ್ತು. ಅದಿಲ್ಲದೆ ಅವನಿನ್ನು ಬದುಕಲಾರದ ಹಂತ ತಲುಪಿದ್ದ ಮತ್ತು ಇನ್ನೇನಾದರೂ ಸಾಧಿಸಲು ಒಂದು ಶಕ್ತಿಯಾಗಿ ನಾಣಿ ತನ್ನ ಪ್ರೀತಿಯನ್ನು ಬಳಸಿಕೊಂಡಿದ್ದ.
 ‘ನೋಡು ನಾಣಿ ಹಿಂಗ ಅರ್ಜೆಂಟ್ ಮಾಡಬ್ಯಾಡ. ಈಗ ಓಡಿ ಹೋದರೂ ಆ ಮೇಲೆ ಏನು ಮಾಡಾಂವ..? ಎಷ್ಟ ದಿನಾ ಅಂತಾ ಇಲ್ಲಿಂದ ಒಯ್ದಿದ್ದ ರೊಕ್ಕಾ ಕೆಲಸಕ್ಕ ಬರ್ತದ. ಅದಕ್ಕೆ ಮೊದಲು ಇಬ್ರೂ ಓದಿ ಮುಗಿಲಿ. ಎನಾರ ಒಂದು ವ್ಯವಸ್ಥಾ ಮಾಡ್ಕೊಂಡು ಹೋಗೀರಂತೆ. ಗಡಿಬಿಡಿ ಮಾಡಿ ಎಲ್ಲ ಹಾಳು ಮಾಡ್ಕೊಬ್ಯಾಡ್ರಿ" ಎಂದು ಇಬ್ಬರಿಗೂ ತಿಳಿಹೇಳಿ, ಅವರನ್ನು ಸಧ್ಯಕ್ಕೆ ತಡೆಯುವ ಯೋಜನೆ ಚಾಲನೆ ಬರುವ ಮೊದಲೇ ಅವಘಡ ಘಟಿಸಿಬಿಟ್ಟಿತ್ತು. ದುರದಷ್ಟ ನಾಣಿ ಉಗ್ರನರಸಿಂಹನ ಕೈಗೆ ಸಿಕ್ಕಿಬಿದ್ದಿದ್ದ. ಅವನ ಕಾಲೇಜು ಮುಗಿಯಲು ಕೆಲವೇ ವಾರಗಳಿzಗ ಮತ್ತೊಮ್ಮೆ ಅವರಪ್ಪನ ಹೊಡೆತಕ್ಕೆ ಈಡಾಗಿದ್ದ.ವಿಭಿನ್ನ ಜಾತಿಯ ಹುಡುಗಿಯೊಂದಿಗಿನ ಪ್ರೇಮ ಕಥಾನಕದ ಹೊಸ ಇತಿಹಾಸದಲ್ಲಿ ತಾನು ಯಾವ ರೀತಿಯಲ್ಲೂ ಪಾಲುದಾರನಾಗಲು ಅವರಪ್ಪ ಸಿದ್ಧನಿರಲಿಲ್ಲ. ಒಂದೇ ಹೊಡೆತಕ್ಕೆ ನಾಣಿ ಬಿದ್ದಿದ್ದ. ಮೂರು ದಿನದ ಗೃಹ ಬಂಧನದ ನಂತರ ಆಸ್ಪತ್ರೆಗೆ ದಾಖಲಿಸಿದ್ದು ಗೊತ್ತಾಗಿ ನಾನು ಮತ್ತು ಶಂಕರ ದೌಡಾಯಿಸಿದ್ದೆವು. ಎಷ್ಟೆಂದರೂ ನಮಗೆ ನಾಣಿ ಒಂಥರಾ ಆಪ್ತಬಳಗದ ಹುಡುಗ. ಅದಕ್ಕೂ ಮೊದಲೇ ಸೇವಂತಿಯನ್ನು ಯಾವ ಕಾರಣಕ್ಕೂ ಅತ್ತ ಸುಳಿಯದಂತೆ ತಾಕೀತು ಮಾಡಿ ಅವನ ಕಥೆ, ಪರಿಸ್ಥಿತಿ ಎಲ್ಲಾ ಅವಳಿಗೆ ಚಾಚೂ ತಪ್ಪದೆ ತಿಳಿಸುವುದಾಗಿ ಆಣೆ ಪ್ರಮಾಣದ ಗ್ಯಾರಂಟಿಯೊಂದಿಗೆ ಹೋಗುವ ವೇಳೆಗೆ ಅವನಪ್ಪನ ಹೊಸ ರೂಪ ಕಾಣಿಸುತ್ತಿತ್ತು.
 ಆಸ್ಪತ್ರೆಯ ಹೊರಗೆ ತೀರಾ ಜೋಲು ಮೋರೆಯೊಂದಿಗೆ, ಜೀವನದಲ್ಲಿ ಅಪೂಟು ಸೋತು ಹೋದ ಛಾಯೆ ಹೊತ್ತು ಅವನಪ್ಪ ಕೂತಿದ್ದ. ವಾರ್ಡಿನಲ್ಲಿ ನಾಣಿ ಮಲಗಿದ್ದ. ಆದರೆ ಮುಖದಲ್ಲಿ ಮಂದಹಾಸವಿತ್ತು. ಹುಡುಗ ಏಟಿಗೆ ಹುಶಾರು ತಪ್ಪಿದ್ದು ಅವರಪ್ಪನ ಬಲ ಕುಸಿದುಹೋಗಿತ್ತು. ಅವನಪ್ಪ ಸ್ವತಃ ನಾಣಿ ಎದುರಿಗೆ ನಿಂತು ‘ಹೆಂಗಾದರ ಇರಪ್ಪಾ ಅದರ ಹುಶಾರಾಗಿ ಬಿಡಪ್ಪಾ’ ಎಂದು ಬೇಡಿಕೊಂಡಿದ್ದ. ಆದರೆ ಆಘಾತಕಾರಿ ಎಂದರೆ ನಾಣಿಯದ್ದು ಮೊದಲು ಉಗ್ಗಾದರೂ ಇತ್ತು. ಈಗ ಬರೀ ಗೊರ ಗೊರ.. ಏನೇ ಹೇಳುವುದೂ, ಕೇಳುವುದಕ್ಕೆಲ್ಲ ಬರೆದು ತೋರಿಸಬೇಕು. ಕಾರಣ ಉಗ್ರನರಸಿಂಹನ ಏಟಿಗೆ ಬಲ ಕೆನ್ನೆ ಚೆಕ್ಕು ಚೆದುರುವುದರೊಂದಿಗೆ ಕಿವಿ ತಮಟೆ ಒಡೆದು, ಗಂಟಲೂ ಕೈಕೊಡತೊಡಗಿತ್ತು. ಅವನು ಶಾಶ್ವತವಾಗಿ ಕೆಪ್ಪನಾಗಿದ್ದ. ಇನ್ನೇನಿದ್ದರೂ ಒಂದು ಕಿವಿ ಮಾತ್ರ. ಅದೂ ಕ್ರಮೇಣ ಮಂದವಾಗತೊಡಗಿತ್ತು. ನಾನು ಶಂಕ್ರ ಉಸಿರು ಕಟ್ಟಿ ನಿಂತಿದ್ದೆವು. ಅಷ್ಟಾದರೂ ನಾಣಿ ಗೊರ ಗೊರ ಎನ್ನುತ್ತಾ ಬರೆಯತೊಡಗಿದ್ದ.
‘ಅಪ್ಪಂದೇನೂ ತಪ್ಪಿಲ್ಲ... ಸುಮ್ನೆ ಬೇಜಾರು ಮಾಡ್ಕೊಬ್ಯಾಡ ಅಂತಾ ಹೇಳೋ. ನನಗೇನೂ ಆಗಿಲ್ಲ. ಆದರೆ, ದಿನಾ ಈಗ ಧುಪಟಿ ಹಾಕಿ ಮಲಗಿಸಿ ನಿದ್ದಿ ಬರೋತಂಕ ತಟ್ಟತಾನಲ್ಲ ಹಂಗ ಕುಂತು ತಟ್ಟೊದ ಮಾತ್ರ ನಿಲ್ಲಸಬ್ಯಾಡ ಅಂತ ಹೇಳೊ ಸಂತೂ. ದಿನಾ ಬಾಜೂ ಕೂರಿಸಿಕೊಂಡು ಊಟ ಹಾಕ್ತಾನು. ಅಷ್ಟು ಸಾಕು. ಹೇಳೊದು ಕೇಳೊದೆ ಬರದ ಹೊಂದಕೋತೆನಿ. ಅಪ್ಪ ನಾ ಶಾಣ್ಯಾ ಆಗಲಿ ಅಂತ ಹೊಡಿತಿದ್ದ ಅಷ್ಟೇ. ನಂಗೇನೂ ಬ್ಯಾಸರಿಲ್ಲ. ಅಪ್ಪಂಗ ಹೇಳು ನಿಂದೇನೂ ತಪ್ಪಿಲ್ಲ ಅಂತ. ಮುಖಾ ಸಣ್ಣದ ಮಾಡ್ಕೊಂಡು ಕುಂದರಬ್ಯಾಡ ಅಂತ ಹೇಳಲ್ಲ. ಆದರ ದಿನಾ ನನ್ನ ಜೊತಿಗೆ ಹಿಂಗೆ ಇರಲಿ..ಅಷ್ಟೇ..’ ಮೊದಲ್ಯಾವತ್ತೂ ದಕ್ಕದ ಅಪ್ಪನ ಪ್ರೀತಿಗೆ ನಾಣಿ ಸೋತುಹೋಗಿದ್ದ. ಅತ್ತ ನೋಡಿದರೆ ಅವನಿಗಿಂತಲೂ ಗೊರಗೊರ... ಎನ್ನುತ್ತಾ ಅವನಪ್ಪ ನಾಣಿಯ ತಲೆ ಸವರುತ್ತಾ ನಿಂತಿದ್ದಾನೆ. ಇತ್ತ ನೋಡಿದರೆ ಸೇವಂತಿ ಊರು ಬಿಟ್ಟಿದ್ದಳು. ಉಳಿದದ್ದು ಮುಂದಿನ ವಾರಕ್ಕಿರಲಿ.
 ಕಾರಣ  ಅವಳು ಎಂದರೆ..