Saturday, January 9, 2016

ಕೈಗೆಟುಕದ ಕಾಡುಬೆಳದಿಂಗಳು...   


ಬಹುಶಃ ಒಳ್ಳೆಯತನ ಎನ್ನುವುದು ಹುಟ್ಟಿನಿಂದಲೇ ಬಂದಿರುತ್ತಾ ಅಥವಾ ಬೆಳೆಯುತ್ತಾ ಹಾಗೊಂದು ಸ್ಥಿತಿಗೆ ಹೆಣ್ಣುಮಕ್ಕಳು ಈಡಾಗಿಬಿಡುತ್ತಾರಾ ಗೊತ್ತಿಲ್ಲ. ಆದರೆ ಗಂಧದಂತೆ ಸ್ವತಃ ತೇಯ್ದು ಕಂಪು ಹರಡುವ ಗಟ್ಟಿತನವಿರುವುದು ಮಾತ್ರ ಆ ಜೀವದ ಎನ್ನುವುದು ಸಾಬೀತಾಗುತ್ತಲೇ ಇರುವ ಸತ್ಯ.
ಬಡತನ ಮತ್ತು ಮಕ್ಕಳೆನ್ನುವುದು ಒಂದಕ್ಕೊಂದು ಸೇರಿಕೊಂಡೆ ಬೆಳೆಯುವುದು ಆಗಿನ ಸಹಜತೆಯಾಗಿತ್ತು. ಅದರಲ್ಲೂ ಹಳ್ಳಿಗಳಲ್ಲಿ ಬದುಕು ಕಳೆಯುತ್ತಿದ್ದುದೇ ಮಕ್ಕಳು ಸಾಲುಸಾಲಾಗಿ ಹುಟ್ಟಿದರೆ ಎನ್ನುವ ಪರಿಸ್ಥಿತಿಯಿದ್ದ ಕಾಲ ಅದು. ಗುಂಪಿನಲ್ಲಿ ಗೋವಿಂದ ಎನ್ನುವಂತೆ ಆರು ಮಕ್ಕಳ ದೊಡ್ಡ ಟೀಮಿನೊಂದಿಗೆ ನಾನು ಏಳನೆಯವನಾಗಿ ಯಾವ ನಾಚಿಕೆಯೂ ಇಲ್ಲದೆ ಸೀತಕ್ಕನ ಮನೆಯಲ್ಲಿ ಗಂಗಾಳ ಹಿಡಿದುಕೊಂಡು ಕೂರುತ್ತಿz. ಲಿಂಗಾಯಿತರ ಮನೆ ರುಚಿಗಳೇ ಬೇರೆ. ಅದರಲ್ಲೂ ಮಾದೇಲಿಯಂತಹ ಗೋಧಿ ಕಜ್ಜಾಯಕ್ಕೆ ಎಂಥವನೂ ‘ಇನ್ನೊಂದ್ಸಲ್ಪ ಹಾಕ..’ಎನ್ನಬೇಕು. ಆದರೆ ಸೀತಕ್ಕ ಮಾತ್ರ ‘ಭಟ್ಟಾ... ನಿಮ್ಮಪ್ಪ ಬೈದ್ರ ನಂಗ್ ಗೊತ್ತಿಲ್ಲ. ಮೊದಲ ಹೇಳಿಲ್ಲ ಅನಬ್ಯಾಡ..’ ಎನ್ನುತ್ತಿದ್ದಳಾದರೂ,‘ಮಾಮಾ ಬೈದ್ರ ನನ್ನೆಸರು ಹೇಳು. ಏನೂ ಅನ್ನಾಂಗಿಲ್ಲ..’ ಎಂದೂ ಮುಚ್ಚಟೆ ಮಾಡುತ್ತಿದ್ದಳು. ಎಲ್ಲರಂತೆ ಸೀತಕ್ಕನ ಕುಟುಂಬವೂ ಆಗೀಗಿನ ಹಳವಂಡಗಳಿಗೆ ಸಿಲುಕುತ್ತಿತ್ತಾದರೂ, ಅದ್ಯಾವ ಸಂಕಟಗಳಿಗೂ ಮನೆಯ ಯಜಮಾನ ಇತ್ತ ತಲೆಯೇ ಹಾಕದಿದ್ದಿದ್ದು ಸೋಜಿಗ.
ಕ್ರಮೇಣ ವಿಷಯ ಈಚೆ ಬಂದಿತ್ತು. ಸೀತಕ್ಕನ ಗಂಡ ಇನ್ಯಾವಳz ಜೊತೆ ಹೋದವನು ಮನೆಗೇ ಬರುತ್ತಿರಲಿಲ್ಲ. ಇದರಿಂದ ಯಜಮಾನನಿಲ್ಲದ ಪರಿಸ್ಥಿತಿ ಏನಾಗಬಹುದಿತ್ತೋ ಅದೇ ಆಗಲಿದೆ ಎಂದೇ ಭಾವಿಸಲಾಗಿತ್ತು. ಆದರೆ ಸೀತಕ್ಕ ಯಾವ ಬಿಸಿಯೂ ತನಗೂ, ತನ್ನ ಅರ್ಧ ಡಜನ್ ಮಕ್ಕಳಿಗೂ ತಟ್ಟಗೊಡಲಿಲ್ಲ. ಜಮೀನು ಪರಭಾರೆ ಮಾಡಿ ವರ್ಷಕ್ಕಿಷ್ಟು ಹಣ, ಊಟಕ್ಕಿಷ್ಟು ಅಕ್ಕಿ ಎಂದು ಪಂಚಾಯ್ತಿಕೆ ಮಾಡಿಸಿ ಬಗೆಹರಿಸಿಕೊಂಡಿದ್ದಳು. ಹಣದ ದಾರಿ ಬಂದಾಗುತ್ತಿದ್ದಂತೆ ಗಂಡ ಮನೆ ಬಾಗಿಲಿಗೆ ನಿಂತು ಗಲಾಟೆಗಿಳಿದಿದ್ದ. ಸೀತಕ್ಕನ ದೊಡ್ಡಮಗ ಮತ್ತು ಊರ ಹಿರಿಯರು ಅವನನ್ನು ಊರಾಚೆ ದಬ್ಬಿದ್ದರು. ಇದೆಲ್ಲದರ ಮಧ್ಯೆಯೂ ಎಲ್ಲ ಮಕ್ಕಳನ್ನು ಎಂಥಾ ಪರಿಸ್ಥಿತಿಯಲ್ಲೂ ಶಾಲೆಗೆ ಕಳಿಸಿ ಓದು ಮತ್ತು ವಿದ್ಯೆ ಎರಡಕ್ಕೂ ವಗಾತಿ ಮಾಡಿಕೊಂಡಿದ್ದಳು.
ಒಬ್ಬರಾದ ಮೇಲೊಬ್ಬರು ಕಲಿತು ನೌಕರಿ, ದಂಧೆ ಎನ್ನುತ್ತ ಊರು ಬಿಟ್ಟು ಪಟ್ಟಣದ ದಾರಿ ಹಿಡಿದಾಗಲೂ, ಹೆಣ್ಣುಮಕ್ಕಳಿಗೆ ಮದುವೆ ಆಗಿ ಹೋಗುವಾಗಲೂ ಸೀತಕ್ಕನ ಮಾತಿನಗಲಿ, ಮುಖದ ಮೇಲಾಗಲಿ ತನ್ನ ಬದುಕು ಹಿಂಗಾಯಿತಲ್ಲ ಎನ್ನಿಸಗೊಡಲಿಲ್ಲ. ವಾರಿಗೆಯ ಹೆಂಗಸರಿಗೂ ಸೀತಕ್ಕ ಗಟ್ಟಿಗಿತ್ತಿ. ಆದರೆ ಕ್ರಮೇಣ ಆಸ್ತಿ ಕೊಡುಕೊಳ್ಳುವಿಕೆಯಲ್ಲಿ ಮನಸ್ತಾಪಗಳಾದಾಗ ಮಾತ್ರ ಸೀತಕ್ಕ ಎಲ್ಲ ಮಕ್ಕಳನ್ನೂ ಕರೆದು ಹೇಳಿದ್ದಳು.
‘ನೋಡ್ರಪಾ.. ಒಬ್ಬ ತಾಯಾಗಿ ಏನು ಮಾಡ್ಬೇಕೊ ಅದನ್ನು ಮಾಡೀನಿ. ನಾ ಇರೋತಂಕ ಜಮೀನು ವ್ಯವಹಾರ ಎಲ್ಲ ಹಿಂಗ ನಡೀತದ. ಆ ಮೇಲೆ ಏನಾರ ಮಾಡ್ಕೊಳ್ರಿ. ಎಲ್ಲ ನಿಮ್ ನಿಮ್ ಊರಾಗ ಅರಾಮದಿರಿ. ನಿಮ್ಮನ್ನೆಲ್ಲ ಒಂದ ದಂಡಿಗೆ ಹಚ್ಚುವ ನನ್ನ ಕರ್ತವ್ಯಾ ನಾ ಮುಗ್ಸೇನಿ. ಕೋರಿಕುಂಟಿ ಅಂತ ಲೆಕ್ಕಾಪತ್ರಾ ಎ ಈಗ ಬ್ಯಾಡ...’ ಇತ್ಯಾದಿ ನುಡಿದದ್ದೇ ತಪ್ಪಾಗಿ ಹೋಯಿತಾ ಗೊತ್ತಿಲ್ಲ. ತೀರಾ ಹೆಣ್ಣುಮಕ್ಕಳೂ ಸಹಿತ ಯಾಕೋ ಮುನಿಸಿಕೊಂಡುಬಿಟ್ಟರು. ಸ್ವತಃ ಬದುಕಿಗೊಂದು ಗಮ್ಯ ಕಲ್ಪಿಸಿಕೊಂಡು, ವ್ಯವಸ್ಥಿತವಾಗಿ ತಾವೆಲ್ಲ ದಡ ಸೇರಿದ್ದರೂ, ಮನೆಯ ಮೂಲದ ಅರಿವಿದ್ದರೂ ಕೇವಲ ಜಮೀನು ಮತ್ತು ಹಣದ ವಿಷಯವಾಗಿ ಸೀತಕ್ಕ ಕೊನೆಕೊನೆಗೆ ಒಂಟಿಯಾಗುವಂತೆ ಮಾಡಿಬಿಟ್ಟಿದ್ದರು.
ಸೀತಕ್ಕ ಮಾತ್ರ ಅನಾಮತ್ತು ಹದಿನೈದು ವರ್ಷ ಥೇಟ್ ಜಿದ್ದಿಗೆ ಬಿದ್ದವರಂತೆ ಯಾರಿಗೂ ದಮ್ಮಯ್ಯ ಎನ್ನದೇ ಬದುಕಿದಳು. ಆದರೆ ಮುಪ್ಪು ಮತ್ತು ಅಸಹಾಯಕತೆ ಕೊನೆಗೊಮ್ಮೆ ಸೀತಕ್ಕನನ್ನು ಕೆಡುವಿ ಹಾಕಿತ್ತು. ಯಾರೂ ನೀಗದ ಹೊತ್ತಲ್ಲಿ ಸೀತಕ್ಕನ ತಂಗಿ ಆಗೀಗ ಬಂದು ನೋಡಿಕೊಳ್ಳುತ್ತ ಉಪಚಾರಕ್ಕೊಬ್ಬ ಹೆಣ್ಣಾಳನ್ನು ಇರಿಸಿzಳೆ. ಸುದ್ದಿ ತಿಳಿದು ಸಮಯ ಹೊಂದಿಸಿಕೊಂಡು ಊರ ಕಡೆ ಹೋಗಿ ಸೀತಕ್ಕನ ಮನೆಗೆ ಕಾಲಿಕ್ಕಿದರೆ, ಸ್ವಾಗತಿಸಿದ್ದು ಮಾತ್ರ ಬದುಕಿನ ಕಷ್ಟಗಳೆಡೆಗೊಂದು ದಿವ್ಯ ನಿರ್ಲಕ್ಷ್ಯ ಬೆಳೆಸಿಕೊಂಡೆ ಬದುಕಿದ್ದ ಸೀತಕ್ಕನ ಅದೇ ಕಾನಿಡೆಂಟ್ ನಗು.
ಮೂರು ದಶಕಗಳ ಹಿಂದೆ ಹೇಗಿತ್ತೋ ಹಾಗೆಯೇ ಇತ್ತು. ಯಾವ ಕಂಪ್ಯೂಟರ್ ಮತ್ತು ತಂತ್ರeನಗಳೂ ಮನುಷ್ಯತ್ವವನ್ನೂ, ಬದುಕಿನೆಡೆಗಿನ ಅವರವರ ಅವಗಾಹನೆಯನ್ನೂ ಬದಲಿಸಲು ಸಾಧ್ಯವಿರಲಿಲ್ಲ. ಏನಿದ್ದರೂ ಮನುಷ್ಯ ತನ್ನೊಳಗೆ ಬದಲಾಗದೆ ಬದುಕು-ಜಗತ್ತೂ ಎರಡೂ ಬದಲಾಗದು ಎನ್ನಿಸಿದ್ದಕ್ಕೆ ಜ್ವಲಂತ ಉದಾಹರಣೆ ಸೀತಕ್ಕನ ಪರಿಸ್ಥಿತಿ. ಇಲ್ಲವಾದರೆ ಜಗತ್ತಿನ ಇಷ್ಟೂ ಅಗಾಧ ಬದಲಾವಣೆಗಳ ನಡುವೆಯೂ ಸೀತಕ್ಕ ಇವತ್ತಿಗೂ ಅದೇ ಕೌದಿಯ ಅಂಚು, ಹುರಿಗಳು ನೇತಾಡುತ್ತಿದ್ದ ಹೊರಸಿನ ಮೇಲೆ ನೆಲಕ್ಕೆ ಜೋಲುವಂತೆ ಮಲಗಿದ್ದ ದೃಶ್ಯ ಎದುರಿಗಿರುವುದು ಬಹುಶಃ ನಾ ಕಂಡ ಜೀವಜಗತ್ತಿನ ಅತಿದೊಡ್ಡ ವಿಪರ್ಯಾಸ.
ಹೊರಸಿನ ಮೇಲೆ ತಿರುಗಿ ಮೇಲಕ್ಕೆ ದಿಟ್ಟಿಸುತ್ತಾ ಮಲಗಿದ್ದ ಸೀತಕ್ಕ ಬಹುಶಃ ಸಾವಿನ ದಾರಿಯನ್ನು ಕಾಯುತ್ತಿದ್ದಳಾ? ಗೊತ್ತಿಲ್ಲ. ಅರೆಬರೆ ಬಟ್ಟೆ. ಉದುರಿದ್ದ ಊಟ ಅವಶೇಷಗಳು. ಡೆಟಾಲ್ ಗಾಢತೆ. ಮುಕುರುತ್ತಿದ್ದ ನೊಣಗಳ ಹಿಂಡು. ಕಣ್ಣಿನಲ್ಲಿ ಮಾತ್ರ ಈಗಲೂ ಬದುಕಿನ ಬಗೆಗೆ.. ಇದಿಷ್ಟೆ ಬಿಡು.. ಎನ್ನುತ್ತಿದ್ದ ಧಾರ್ಷ್ಟ್ಯ ಧೋರಣೆ ಸ್ಪಷ್ಟವಾಗಿ ಗೋಚರಿಸುತ್ತಿತ್ತು.
‘..ಸೀತಕ್ಕ ನಾನು ಭಟ್ಟರ ಹುಡುಗ... ಸಣ್ಣಾಂವ’ ಎಂದು ಪರಿಚಯಿಸಿಕೊಳ್ಳುತ್ತಿದ್ದರೆ ಅರೆಬರೆ ವಾಲುತ್ತಿದ್ದ, ಸ್ಥಿಮಿತದಲ್ಲಿಲ್ಲದ ಕೈ ಆಡಿಸುತ್ತಾ ‘ಯಾಕೋ ಗುರುತು ಸಿಗಲ್ಲ ಅನ್ಕಂಡಿಯೇನು..? ನೀವೆಲ್ಲ ಮರತ್ರೂ ನಾನು ಮರ್ತಿ. ಆದ್ರ ನನ್ನ ಮಾತ್ರ ಆ ದೇವರೂ ಮರ್ತ್ ಬಿಟ್ಟಾನ ನೋಡು..’ ಎನ್ನುತ್ತಿದ್ದರೆ ‘ಏನಿದು ಸೀತಕ್ಕ.. ಯಾಕ ಮಂಜಿ, ಶೀಲಾ ಯಾರೂ ಬರ್ಲಿನು..? ಹಿಂಗ್ಯಾಕ..?’ ಎನ್ನುತ್ತಿದ್ದರೆ ಅದ್ಯಾಕೋ ಸೀತಕ್ಕನಿಗೆ ಆ ಕ್ಷಣದಲ್ಲೂ ಮಕ್ಕಳ ಮತ್ತು ತನ್ನವರ ನಿರ್ಲಕ್ಷತನ, ಆ ಸಂಕಟದ ಬಗ್ಗೆ ಹೇಳಿಕೊಳ್ಳಬೇಕೆನಿಸಲಿಲ್ಲವೋ ಅಥವಾ ಏನಿದ್ದರೂ ನನ್ನ ದುರದಷ್ಟ ಎಂದು ಅದಕ್ಕೆಲ್ಲ ಬದ್ಧಳಾಗಿಬಿಟ್ಟಿದ್ದಳೋ ಎನ್ನುವುದೇ ಆಶ್ಚರ್ಯ.
‘ಏನಿಲ್ಲ ಬಿಡೊ.. ಬದುಕು ಅಂದ ಮ್ಯಾಲ ಇವೆ ಇದ್ದೇ ಇರ್ತಾವ. ಇಲ್ಲಿ ಮಾಡಿದ್ದನ್ನು ಇ ಅನುಭವಿಸಿ ಹೋಗ್ಬೇಕು ನೋಡು ಅದಕ್ಕ ಹಿಂಗೆಲ್ಲ ಆಗ್ತದ. ಯಾಕೋ ಏನೋ ಗೊತ್ತಿಲ್ಲದನ ಏನಾರೆ ತಪ್ಪು ಮಾಡಿರ್ತೇವಿ ಅದಕ್ಕ ದೇವ್ರು ಇ ಶಿಕ್ಷೆ ಕೊಡ್ತಾನಂತ. ನಿಮ್ಮಪ್ಪನೇ... ಇಷ್ಟೆಲ್ಲ ಪುರಾಣ ಹೇಳ್ತಿದ್ದ ಮತ್ತ ನೀನೇ ಕೇಳ್ತಿಯ..?’ ಎನ್ನುತ್ತಿದ್ದರೆ ‘ಅದೆ ಖರೆ ಸೀತಕ್ಕ. ಮದಲಿಂದು ಏನರ ಇರ್ಲಿ. ಕಾಕಾಗ ಈ..ಗರ ಸವಡಾಗಬೇಕಿತ್ತು. ಎಷ್ಟು ದಿನಾ ಅಂತ ನೀಲತ್ತಿ ನೋಡಿಕೊಂಡಾಳು..?’ ಎನ್ನುತ್ತಿದ್ದಂತೆ ಅಲ್ಲಿವರೆಗೂ ನಮ್ಮನ್ನೆಲ್ಲ ಒಂದು ಮಾರು ದೂರ ಇಟ್ಟೆ, ಯಾವ ದುಃಖವೂ ತನಗಲ್ಲ ಎಂದೇ ಬದುಕಿದ್ದ ಸೀತಕ್ಕ ಆ ಒಂದು ವಿಷಯಕ್ಕೆ ಬಂದಾಗ ಪೂರ್ತಿ ಕುಸಿದು ಹೋಗುತ್ತಿದ್ದಳು.
‘ನಿನಗ ಗೊತ್ತಿಲ್ಲದ್ದೇನದನೋ ಮಾರಾಯ. ಆಂವ ಈಗರ ಯಾಕ ಬರ್ತಾನು. ನಾ ಗಟ್ಟಿ ಇzಗ ಎರಿಗೂ ಬೇಕಾಗಿದ್ದೆ. ಇನ್ನೇನು ದಿನಾ ಎಣಿಸೋ ಟೈಮ್ ನೋಡು. ಆರು ಮಕ್ಕಳ ಮೈಗೆ ಅರಬಿ, ಹೊಟ್ಟಿಗ ಹಿಟ್ಟು ಕೂಡಿಸ್ವಾಗ ಹಿಂಗ್ಯಾಕ ಅಂತ ಅವನನ್ನು ಕೇಳಿಲ್ಲ. ಬರ್ಲಿ ಅಂತ ಈಗ್ಯಾಕ ಅನ್ನಸ್ಬೇಕು... ಅಲ್ಲಪಾ, ನಾನೇನೋ ಗಟ್ಟಿ ಇದ್ದೆ. ನಮ್ಮು ಅರ್ಧ ಡಜನ್ ಮಕ್ಕಳೂ ದಂಡಿಗೆ ಹತ್ತಿದ್ವು. ತಮ್ಮ ಮನಿ ಮಕ್ಕಳು ಹಿಂಗಧಿಧಿ.. ಪರದೇಶಿ ಆದ್ರ ಹೆಂಗಾದೀತು ಅಂತ ಆಕೀಗರ ತಿಳಿಬಾರದೇನು..? ವರ್ಷಕ್ಕೊಮ್ಮೆ ಕಂಡ ಗಂಡಸರ ಜೋಡಿ ಮಕ್ಕೋತ ಮಜಾ ಮಾಡೊ ಮುಂಚೆ ತಾನೂ ಒಂದ್ ಹೆಣ್ಣಮಗಳು, ತನ್ನ ಹಾಂಗ ಆಕೀಗೂ ಸಂಕಟಾದೀತು ಅಂತ ಗೊತ್ತಾಗಬೇಕಲ್ಲ. ಅದ ನೋಡು ನನ್ನ ದೊಡ್ಡ ಬ್ಯಾನಿಗ ತಳ್ಳಿದ್ದು. ನಾವ್ ನಾವ ಸರಿ ಇರದಿದ್ರ ಮಂದಿನ ಅಂದು ಏನಾದೀತು..? ಮಕ್ಕಳು ಮರಿ ನಾವು ಬೆಳಸೋತಂಕ. ನನ್ನ ಕೈಲಾದದ್ದು ಮಾಡಿ ಎರ ಬದುಕೂ ನಿಸೂರ ಆಗೋ ಹಂಗ ಮಾಡೇನಿ. ಯಾಕೋ ಕಡಿಗೊಮ್ಮೆ ಮಕ್ಕಳು, ಮೊಮ್ಮಕ್ಕಳು ಬಂದು ಮುಖಾ ತೋರಸ್ಲಿ ಅನ್ಸತದ. ಆದ್ರ ಯಾಕೋ ಯಾರೊಬ್ರೂ ಈ ಕಡೀಗೆ ಹಾಯ್ಲಿಲ್ಲ. ಇರ್ಲಿ ಬಿಡು ದೇವ್ರು ಅವರನ್ನೆಲ್ಲ ಛಲೋತ್‌ನಾಗ್ ಇಡ್ಲಿ. ಎಷ್ಟೆಂದರೂ ನಂದ.. ಸಂತಾನ ಅನು. ನನ್ನಂಗ ಅರಮರ್ಧ ಬದುಕು ಯಾರದೂ ಆಗೋದು ಬ್ಯಾಡ..’
ಈಗಲೂ ಒಳ್ಳೆಯದು ಅಂತ ಭೂಮಿಯ ಮೇಲೆ ಉಳಿದಿದ್ದರೆ ಬಹುಶಃ ಸೀತಕ್ಕನಂತವರಿಂದಲೇ. ತನ್ನ ಮರಣಸಂಕಟದ ಮಧ್ಯೆಯೂ ಅಪ್ಪಿತಪ್ಪಿಯೂ ಕೇಡು ನುಡಿಯದ ಸೀತಕ್ಕ ನಿಜಕ್ಕೂ ಅದ್ಯಾವ ದರ್ದಿಗೆ ಬಿದ್ದು ಅಷ್ಟೊಂದು ಒಳ್ಳೆಯತನದಿಂದ ಬದುಕಿದ್ದಳು..? ಕೇಳೋಣ ಎಂದರೆ ಮತ್ತೆರಡು ತಿಂಗಳಿಗೆ ಸೀತಕ್ಕನ ಜಾತ್ರೆ ಮುಗಿದಿತ್ತು. ಆದರೆ ಆಕೆಯ ನುಡಿ ಮತ್ತು ಜೀವನದುದ್ದಕ್ಕೂ ಏನೇ ಸಂಕಟಗಳಿಗೀಡಾದರೂ ಯಾರೊಬ್ಬರಿಗೂ ಕೇಡು ಹಾರೈಸದ ಮನಸ್ಥಿತಿ ನನ್ನನ್ನು ಇವತ್ತಿಗೂ ಕಲಕುತ್ತಲೇ ಇರುತ್ತದೆ. ಸೀತಕ್ಕ ಎ ಇದ್ದೀಯ. ಎಲ್ಲ ನಿನಗೆ ಕಾಣುತ್ತೆ. ಅದರೂ ನಿನ್ನಾತ್ಮ ನೆಮ್ಮದಿಯಾಗಿರಲಿ. ಅದಕ್ಕಿಂತ ಹೆಚ್ಚಿನದು ನಿನ್ನಂಥ ಅಮ್ಮನಿಗೆ ಏನು ಕೊಡುತ್ತೇನೆಂದರೂ ಕಡಿಮೆಯೇ.ಕಾರಣಅವಳು ಎಂದರೆ...
(ಲೇಖಕರು ಕಥೆ-ಕಾದಂಬರಿಕಾರರು)

No comments:

Post a Comment