Monday, January 18, 2016

ಚೆ೦ದದ ಘಳಿಗೆಗಳಿಗೆ ಆಯಸ್ಸು ಕಮ್ಮಿ..

ವ್ಯವಸ್ಥೆ ಇದ್ದಾಗಲೂ ಗಾಡಿಗಳು ಹಳಿ ತಪ್ಪುತ್ತವೆ. ಆದರೆ ತೀರಾ ನಿಯತ್ತಿನ ಬದುಕಿಗೂ ಕಣ್ಣು ಬೀಳುತ್ತಲ್ಲ...? ನಾವೇನೇ ಬದುಕುತ್ತಿದ್ದೇವೆ೦ದರೂ, ಎಷ್ಟೇ ಚೆ೦ದದ ಗೂಡು ಮಾಡಿಕೊ೦ಡರೂ ಕೊನೆಯಲ್ಲೆಲ್ಲೊೀ ಕೈಮೀರಿದ ಆಘಾತಕ್ಕೆ ಸಿಕ್ಕಿಬಿಡುವುದು ಮಾತ್ರ ದುರ೦ತ. 



ತೀರಾ ಕ್ಲಚ್ಚು, ಪ್ಯಾಡುಗಳಿಗೆ ಕಾಲೂ ನಿಲುಕದಿದ್ದ ಕಾಲದ ಭಯಾನಕ ಸ್ಪೀಡಿನಲ್ಲಿ ಗಾಡಿ ಓಡಿಸುವ, ಇಂಗ್ಲಿಷ್ ಸ್ಟಂಟುಗಳ ಸಾಹಸಕ್ಕೆ ಮನಸೋತಿದ್ದವನು ನಾನು. ಆದರೆ ಗಾಡಿ ಅತ್ಲಾಗಿರಲಿ.. ಓಣಿಯ ಹುಡುಗರೆಲ್ಲ ಮೆಟ್ರಿಕ್ ಹೊತ್ತಿಗೆ ಬೈಕನ್ನು ಸರಾಗವಾಗಿ ಚಲಾಯಿಸುತ್ತಿದ್ದರೆ, ಬಾರ್ ಮೇಲೆ ಸರಿಯಾಗಿ ಕಾಲು ಹಾಕಲೂ ನಾನು ಕಲಿತಿರಲಿಲ್ಲ. ಕಡೆಗೂ ಸ್ವಂತಕ್ಕೊಂದು ಸೈಕಲ್ಲಿನ ಕನಸು ಈಡೇರಲೇ ಇಲ್ಲ. ಕೈಗೆ ದಕ್ಕದ ಆಗಸದ ಬಗ್ಗೆ, ನಿಲುಕುವುದಿಲ್ಲ ಬಿಡು ಎನ್ನಿಸುತ್ತಿದ್ದಂತೆ ಬಿಟ್ಟೂಬಿಡುತ್ತೇನೆ. ಆಗದ್ದನ್ನು ಆಗುವುದಿಲ್ಲ ಎಂದೊಪ್ಪಿಕೊಳ್ಳುವುದರಲ್ಲಿ ನನಗ್ಯಾವ ಅವಮಾನಗಳೂ ಕಾಡಿದ್ದಿಲ್ಲ.
ಆದರೆ ಕೆಲವೊಮ್ಮೆ ಸಮಯ ನಮಗರಿವಿಲ್ಲದೆ ಲಬಕ್ಕನೆ ತಿರುಗಿಬಿಡುತ್ತದೆ. ಹಾಗೆ ತಿರುಗಿದ ಹೊತ್ತಿನಲ್ಲಿ ಅನಾಮತ್ತಾಗಿ ಆಗಿನ ಕಾಲದ ಆರ್ಟಿಝೆಡ್ಡು, ಕಮ್ಯಾಂಡರ್ ಜೀಪು, ಅಂಬಾಸೆಡರು, ಫೀಯೆಟ್ಟು ಕೊನೆಗೆ, ಬೆಳಗಿನ ಹಾಲು ಪೂರೈಸುವ ವ್ಯಾನುಗಳು, ತರಕಾರಿ ವಾಹನ, ಕಾರ್ಪೋರೇಷನ್ನಿನ ನಾಯಿ ಹಿಡಿಯುವ ಗಬ್ಬುಗಾಡಿ ಹೀಗೆ ಕಣ್ಣಿಗೆ ಕಂಡ ಗಾಡಿಗಳೆಲ್ಲ ಕೈಗೆಟುಕಿ ಹೋಗಿದ್ದು ಮತ್ತು ಆ ಕಾಲ ಎರಡೂ ಇತಿಹಾಸ. ಹಾಗೆ ನನ್ನ ಗಾಡಿಗಳ ಹುಕಿಯನ್ನು ಮತ್ತು ಇಲ್ಲಿವರೆಗಿನ ಕನಿಷ್ಠ ಒಂದೂ ಕಾಲು ಲಕ್ಷ ಕಿ.ಮೀ. ಡ್ರೈವಿಂಗನ್ನು  ದೇಶದ ಉದ್ದಗಲಕ್ಕೂ ಯಾವುದೇ ಅಪಘಾತವಿಲ್ಲದೆ ಪೂರೈಸಿದ್ದರೆ ಖಂಡಿತಕ್ಕೂ ಅದರ ಕ್ರೆಡಿಟ್ಟು ಚಂದುಕಾಕನಿಗೆ ಸಲ್ಲಬೇಕು.
‘ಸ್ಟೆರಿಂಗ್ ಮ್ಯಾಲೆ ಕೈಯಿಟ್ಟು ಕಣ್ಮುಚ್ಚಿದರೂ ಕೈಕಾಲು ಅಲ್ಲ ಹೋಗಬೇಕು, ಗಸಕ್ಕಂತ ಬ್ರೇಕ್ ಹೊಡದರೂ ಎದಿ ಒಡ್ಕೊಬಾರದು ನೋಡು. ಅಂದರನ ಪಕ್ಕಾ ಡ್ರೈವಿಂಗ್..’ ಎನ್ನುತ್ತಿದ್ದ ಚಂದುಕಾಕ. ಅವನ ಯೆಜ್ಡಿ ಅತಿದೊಡ್ಡ ಆಕರ್ಷಣೆ ಆಗ. ಸ್ವತಃ ಮೆಕಾನಿಕ್ ಆಗಿದ್ದ ಚಂದುಕಾಕ ಅಗತ್ಯಕ್ಕಿಂತ ದೊಡ್ಡ ಟೈರು, ಮ್ಯಾಚೇ ಆಗದ ಹ್ಯಾಂಡಲ್ಲು, ಒಂಟೆಯ ಡುಬ್ಬದಂತಹ ಸೀಟು, ಮೊರದಂತಹ -ಟ್‌ರೆಸ್ಟು ಇಂತಹ ಅವತಾರಗಳಿಂದ ಪಕ್ಕದ ಹೊಸ ಗಾಡಿ ನಿಲ್ಲಿಸಿದ್ದರೂ, ಜನರ ಕಣ್ಣು ಅಲ್ಲಿಂದ ಕದಲುತ್ತಿರಲಿಲ್ಲ. ತುಂಬ ನುರಿತ ಡ್ರೈವರ್ ಆಗಿದ್ದ ಚಂದುಕಾಕನೇ ನನ್ನಲ್ಲಿ ಡ್ರೈವಿಂಗ್‌ನ ನಶೆ ಏರಿಸಿದವನು ಎಂದರೂ ತಪ್ಪಾಗಲಿಕ್ಕಿಲ್ಲ. ಇವತ್ತಿಗೂ ಸತತ ಹದಿನಾರು ಗಂಟೆ ಕಾರು ಚಲಾಯಿಸುವ ಹವ್ಯಾಸಕ್ಕೆ ಪಕ್ಕದಲ್ಲಿ ಕೂತಿದ್ದವರೇ ಹೈರಾಣಾದರೂ ನಾನು ಆಕ್ಸಿಲೇಟರಿಂದ ಕಾಲ್ತೆಗೆದದ್ದಿಲ್ಲ.
ಚಂದುಕಾಕನ ಗಾಡಿ ರಸ್ತೆಗಿಳಿದರೆ ಸಾಕು ಮುದ್ದು ಮುzಗಿದ್ದ ಅವನ ಮಗಳು ಕಿಂಯ್ಯೋ.. ಎಂದರಚುತ್ತ ಬಾಗಿಲ ಬಳಿಯಲ್ಲಿ ತೆವಳಲು ಪ್ರಯತ್ನಿಸುತ್ತಿತ್ತು. ಐದು ತಿಂಗಳ ಮಗುವನ್ನು ಎದುರಿಗೆ ಕಪ್ಪೆ ತರಹ ಬಾರಲು ಕೂರಿಸಿಕೊಂಡು ಕಾಕಾ ಸುತ್ತು ಹೊಡೆಸುತ್ತಿದ್ದ. ಪಿಳಿಪಿಳಿ ಕಣ್ಣು ಬಿಡುತ್ತಾ ಪುಟ್ಟಿ ಪೆಟ್ರೋಲ್ ಟ್ಯಾಂಕಿನ ಮೇಲೆ ದಬ್ಬಾಕಿಕೊಂಡು ಕೂರುತ್ತಿತ್ತು. ಅವನು ಸೈಡು ಸ್ಟ್ಯಾಂಡ್ ಹಾಕಿದರೂ ಕದಲದೆ ಅದರ ಮೇಲೆ ಗುರಾಯಿಸುತ್ತಾ ಕೂತೇ ಇರುತ್ತಿದ್ದ ಮಗುವನ್ನು ಅವನಿಗಿಂತ ಮೊದಲು ನಾನು ಎತ್ತಿಕೊಂಡು ಇಳಿಸಿಕೊಳ್ಳುತ್ತಿz.‘ಇದೆ ಮಕ್ಳಿಗೆ ಅಭ್ಯಾಸ ಅಗ್ಬೇಕು ಸುಮ್ನಿರ್ ನೀನು..’ ಎಂದು ಗದರುತ್ತಿದ್ದ. ಆದರೆ ಅದೆಲ್ಲಿಂದಲೋ ಸುಂಟರಗಾಳಿಯಂತೆ ಬರುತ್ತಿದ್ದ ಕಕ್ಕಿ, ‘ಇನ್ನೊಮ್ಮೆ ಪುಟ್ಟಿನ್ನ ಕರ್ಕೊಂಡು ಹೋದರ ಬರೀ ಕೊಡ್ತೇನ್ ನೋಡ. ನಡೀರಿ ಅತ್ಲಾಗೆ. ಗಲೀಜ್ ಗಾಡಿ.. ಕರ್ರನ ಬಣ್ಣ, ಗಬ್ಬವಾಸನಿ, ಅದರ ಮೈತೊಳದ ಎಷ್ಟ ದಿನಾ ಆತೋ. ಸಣ್ಣ ಕೂಸ ಅನ್ನೋ ಖಬರ್ ಬ್ಯಾಡ’ ಎಂದು ಯಾವ ಲೆಕ್ಕದಲ್ಲೂ ಪಾಲುದಾರನಲ್ಲದ ನನ್ನನ್ನೂ ಸೇರಿಸಿಕೊಂಡು ಕೈಗೆ ಸಿಕ್ಕಿದ ಪಾತೇಲಿ, ಟುವಾಲು, ಪಿಸವಿ, ಮೊಗಚಿಕಟ್ಟಿಗಿ... ಯಾವುದೆಂದರೆ ಅದರಿಂದ ಅಟ್ಟಾಡಿಸುತ್ತಿದ್ದಳು.
ಆ ಕ್ಷಣಕ್ಕೆ ಮಗುವನ್ನು ಕಿತ್ತುಕೊಂಡು ನಮ್ಮನ್ನು ಬೈದಾಡಿ ಹೋದರೂ ಕಕ್ಕಿಗೆ ಚಂದೂಕಾಕನ ಗಾಡಿಗಳ ವ್ಯಾಮೋಹದ ಬಗ್ಗೆನೂ ಅಷ್ಟೇ ಹೆಮ್ಮೆ ಇತ್ತು. ಅವನ ಗ್ಯಾರೇಜು ಮತ್ತು ಗಾಡಿ ಅಷ್ಟಿಷ್ಟು ಹೊಲಸಾದರೂ, ತಾನೆ ಬೆಳಬೆಳಗ್ಗೆ ನೀರು ಸೋಕಿ ತಿಳಿದಷ್ಟು ಸ್ವಚ್ಛ ಮಾಡಿಡುತ್ತಿದ್ದಳು. ತುಂಬ ಸಂಯಮದಿಂದಲೂ, ಎಚ್ಚರಿಕೆಯಿಂದಲೂ, ಬಳಲಿಕೆ, ಬಾಯರಿಕೆ ಇತ್ಯಾದಿ ಬಾಧೆಗಳಿಗೆ ಒಗ್ಗಿಕೊಂಡೂ, ಸ್ಥೀಮಿತತೆ ಕಳೆದುಕೊಳ್ಳದೆ ಹೇಗೆ ಡ್ರೈವರಿಕೆ ಮಾಡಬೇಕೆನ್ನುವುದರ ಅಪ್ಪಟ ಗುರು ಅವನೇ ನನಗೆ. ಊರಿಗೆಲ್ಲ ಚಂದುಕಾಕಾ -ಮಸ್ಸಾದರೂ ಕಕ್ಕಿಗೆ ಮಾತ್ರ ಆತ ಎಬಡ ಡ್ರೈವರ್.
‘ಬರೇ ಬ್ರೆಕ್ ಹಾಕ್ತಾರು, ಜೋಲಿ ಹೋದಂಗಾಗ್ತದ, ಇವ್ರ ಗಾಡ್ಯಾಗ ಕುಂತಷ್ಟ ಹೊತ್ತೂ ನಿಗರಾಣಿ ಇಟ್ಟ ಕುಂದರಬೇಕ ನೋಡು, ಜೋರ್ ಓಡಸ್ತಾರು, ತಿರುವಿನ್ಯಾಗೂ ಹಾರ್ನ್ ಮಾಡೊಲ್ಲ, ನಡಬರಕ ಓಡಸ್ತಾರು, ಎಡ ಬಲ ಇಲ್ಲ. ಕಿಡಕಿ ತಗದಿಟ್ಟರ ಗಾಳಿ ಭಾಳ, ವಾಂತಿ ಬಂದಂಗಾಗ್ತದ...’ ಹೀಗೆ ಒಂದೆರಡಲ್ಲ ಆಕೆಯ ಕಂಪ್ಲೆಂಟುಗಳು.
‘ಕಂಡವರೆಲ್ಲ ನನ್ನ ಡ್ರೈವರಿಕಿ -ಮಸ್ಸು ಅಂತಾರ. ಈಕೀಗ ಮಾತ್ರ ಗಾಡ್ಯಾಗ ಕುಂಡ್ರಾಕ ಹೆದ್ರಿಕಿ. ಇನ್ನ ಹೆಂಗ ಗಾಡಿ ಹೋಡಿಲ್ಯೋ..? ಬರೇ ಇಪ್ಪತ್ತರಾಗ ಓಡಿಸ್ಲೇನು..’ ಎಂದು ಕಾಕಾ ರವರವ ಚೀರುತ್ತಿದ್ದ. ಅವರಿಬ್ಬರ ಚೆಂದದ ಸರಸಕ್ಕೂ, ಪ್ರೀತಿಯ ಜಗಳಕ್ಕೂ ಎರಡೂ ಕಡೆ ಪಾರ್ಟಿ ವಹಿಸಬೇಕಾದಾಗೆಲ್ಲ ಕಾಕಾನ ಕಡೆಯಿಂದಲೂ ಮೇಜುವಾನಿಗೂ, ಕಕ್ಕಿಯ ಕಡೆಯಿಂದ ಕಜ್ಜಾಯದ ಸಂತೆಗೂ ನಾನು ಪಕ್ಕಾಗುತ್ತಿz.
ಕೆಲದಿನದ ಹಿಂದೆ ಅವನಿಂದ ತಂದುಕೊಂಡಿದ್ದ ಗಾಡಿ ನನ್ನ ಬಳಿಯೇ ಉಳಿದು ಎರಡ್ಮೂರು ವಾರವೇ ಆಗಿತ್ತು. ಗ್ಯಾರೇಜಿಗೆ ಬಿಟ್ಟು ಬರೋಣವೆಂದು ಮನೆ ಕಡೆ ಹೋಗುವ ಹೊತ್ತಿಗೆ ಜನಸಂದಣಿ. ಮನೆ, ಗ್ಯಾರೇಜು, ರಸ್ತೆ ಎಲ್ಲೂ ಜನವೋ ಜನ. ಊರಕಡೆಯಿಂದ ಟೆಂಪೋದಲ್ಲಿ ಬರುತ್ತಿದ್ದ ಕಕ್ಕಿ ಜೀವಂತವಾಗಿ ಈಚೆಗೆ ಬಂದಿಲ್ಲ. ಅರಳುಮರಳಿನ ಕಾಕಾ, ಏನೂ ತಿಳಿಯದ ಮಗು ಪೆಕರು ಪೆಕರಾಗಿ ಅರಬರೆ ಅಳುತ್ತಾ ಕೂತಿದೆ. ಗಾಡಿ, ಅಲ್ಟರೇಷನ್ನು, ಆ ವೇಗ ಎಲ್ಲ ಮಡಚಿಟ್ಟ ಬದುಕು ಬಾರಲು ಬಿದ್ದಿತ್ತು. ಬಂದಿದ್ದ ಜನ ನೆಂಟರು ಎಲ್ಲ ಕರಗಿದರು. ಚಂದುಕಾಕಾ, ಪುಟ್ಟಿ ಮತ್ತು ಗ್ಯಾರೇಜು ಎಲ್ಲ ಮೌನವಾಗಿ ಹೋಗಿದ್ದವು. ಆದರೆ ತಿಂಗಳೊಪ್ಪತ್ತಿನಲ್ಲಿ ಎದ್ದು ನಿಂತಿದ್ದ ಕಾಕಾ.
ಮಗು ಏಳುವ ಮೊದಲೇ ಎದ್ದು ಕಕ್ಕಿ ಮಾಡುತ್ತಿದ್ದಂತೆ ಬೆಳ್‌ಬೆಳಗ್ಗೆ ಹಾಲು, ಆಮೇಲೆ ತಿಂಡಿ, ಮಧ್ಯಾಹ್ನ ತರಕಾರಿ, ಊಟದ ನಂತರ ಒಂದು ಗುಕ್ಕು ನಿz.. ಆಗ ಶುರುವಾಗುತ್ತಿತ್ತು ಮರಣಸಂಕಟ. ಮಗು ‘ನಾನು ಮಧ್ಯ ಮಲಗಬೇಕು. ಅಮ್ಮ ಎಲ್ಲಿ..’ ಎನ್ನುತ್ತಾ ಎದ್ದು ಕೂತು ಬಿಡುತ್ತಿತ್ತು. ಭರಭರನೆ ಮನೆಯೆಲ್ಲ ಹುಡುಕುತ್ತಿತ್ತು. ಕಕ್ಕಿ ಇzಗ ಕರ್ಟನ್ ಹಿಂದೆ ನಿಂತು ಬಚ್ಚಿಟ್ಟುಕೊಂಡು ಆಡಿಸುತ್ತಿದ್ದ ಕಣ್ಣಮುಚ್ಚಾಲೆ ನೆನೆಸಿಕೊಂಡು ಬಾಗಿಲಿನದಷ್ಟೇ ಅಲ್ಲ ಕಿಟಕಿಯ ಕರ್ಟನ್‌ಗಳನ್ನೂ ಅಡಿಸಿ ನೋಡುತ್ತ, ಕುಸುಕುಸು ಮಾಡಿ ಅಳುತ್ತ ‘ಅಮ್ಮ ಕಾತ ಕೊದಲ್ಲ..ಬಾ..’ ಎಂದು ತೊದಲಾಡುತ್ತಾ ನಿಂತು ಬಿಡುತ್ತಿದ್ದರೆ ಜಗತ್ತಿನ ಅಷ್ಟೂ ಅಳು ಅಲ್ಲೇ ಸುರಿಯುತ್ತಿತ್ತು.
ತೀರಾ ಹಲ್ಲು ಕಚ್ಚಿ ಕೂರುತ್ತಿದ್ದ ಕಾಕಾ ಅರೆಬರೆ ಅಳುತ್ತಾ ‘ಅಮ್ಮ ಟಾಯ್ಲೆಟ್ಟಿಗೆ ಹೋಗಿದೆ ಪುಟ್ಟ..’ ಎನ್ನುತ್ತಾ ಸಂಭಾಳಿಸಲು ನೋಡುತ್ತಿದ್ದನಾದರೂ ಮಗು ಸೋಲೊಪ್ಪದೆ, ಅಲ್ಲೂ ಬಾಗಿಲಾಚೆ ನಿಂತು ಸಂದಿಗೆ ಪುಟ್ಟ ಪುಟ್ಟ ಬೆರಳಿಂದ ತಟ್ಟುತ್ತಾ‘ಅಮ್ಮ ಬಾ ..ಬಾ..’ ಎನ್ನುತ್ತಿತ್ತು. ಮನೆಯೆಲ್ಲ ಭಣಭಣ ಎನಿಸುವುದು ಮಗುವಿಗೂ ಸಹ್ಯವಾಗುತ್ತಲೇ ಇರಲಿಲ್ಲ. ಅಂತೂ ಮತ್ತಾರು ತಿಂಗಳು ಕಳೆಯುವ ಹೊತ್ತಿಗೆ ಅಮ್ಮ ಬರುವುದಿಲ್ಲ ಎನ್ನುವ ಕಹಿಸತ್ಯದ ಜೊತೆಗೆ ಅಪ್ಪನಿಗೆ ಹೊಂದಿಕೊಳ್ಳುವ ಅನಿವಾರ್ಯತೆಗೆ ಪಕ್ಕಾಗತೊಡಗಿತ್ತು. ಗ್ಯಾರೇಜನ್ನು ಹುಡುಗರು ನೋಡಿಕೊಳ್ಳುತ್ತಿದ್ದರು. ಅಗತ್ಯ ಬಿzಗ ಮಾತ್ರ ಮಗುವನ್ನು ಬಿಟ್ಟು ಕೈಗೆ ಗವಸು ತೊಡುತ್ತಿದ್ದ ಕಾಕಾ ಮಗುವನ್ನು ಅಪ್ಪಟ ಕಕ್ಕಿಯಂತೆ ದೇಖರೇಖಿ ಮಾಡುತ್ತಿದ್ದ. ಆಗೀಗ ಸುಮ್ಮನೆ ಕಾಕಾ ಜೊತೆ ಕೂತೆದ್ದು ಬರುವುದರ ವಿನಃ ನಮ್ಮ ಹುಡುಗರ ಹಿಂಡಿಗೂ ಮಾತೇ ಇರಲಿಲ್ಲ.
‘ಆಗಿzತು ಕಾಕಾ ಪುಟ್ಟಿ ಬಾಳೆನರ ಹಸನಾಗಬೇಕಲ್ಲ. ಹಿಂಗ ಕೂಡಬ್ಯಾಡ’ ಎನ್ನುತ್ತಿದ್ದರೆ,‘ಆಕೀ ಜೊತಿಗೇ ಅರ್ಧಬದುಕು ಹೋತು ಇನ್ನೇನಿದ್ದರೂ ಪುಟ್ಟಿ ಮಾತ್ರ. ಆಕೀ ಇzಗ ದಿನಾ ನಾವಿಬ್ಬರೂ ಮಲಗೋತಂಕ ನಿಗಾ ಇಡತಿದ್ಲು. ಎಷ್ಟೊ ಸರ್ತಿ ನಾವಿಬ್ಬರೂ ಮಲಗಿದ್ದನ್ನು ಕಣ್ತುಂಬ ನೋಡಕೋತ ಹಂಗ ಕೂತಿರ್ತಿದ್ಲು. ಆಕೀ ಇಲ್ಲದ ವರ್ಷಾದರೂ ಮನೀ ಮಾತ್ರ ಇನ್ನು ಭಣಭಣ ಅನ್ನಿಸ್ತದನೋ. ಪುಟ್ಟಿ ಅಂದರ ಆಕೀಗೆ ಜೀವ. ನಿಮ್ಮ ಕಾಕಿ ನೋಡ್ಕಂಡಂಗ ಆಗೂದಿಲ್ಲ. ಆದರ ಕಸರಿಲ್ದಂಗ ಮಾಡ್ತೇನಿ. ಆಕೀ ಅಲ್ಲಿಂದನ ಪುಟ್ಟಿ ಮ್ಯಾಲ ನಿಗಾ ಇಟ್ಟಿರ್ತಾಳ ಮಾರಾಯ. ಈಗ ನೋಡು... ನಾ ಹೆಂಗಿದ್ದರೂ ಪಿಸವಿ ತೊಗೊಂಡು ಭಾರಸಾಕ ಯಾರೂ ಇಲ್ಲ. ಆದರ ಗಾಡಿ ಹೊಡಿಯೋ ಉಮೇದಿನ ಸತ್ತುಹೋತು ನೋಡ..’ ಚಂದುಕಾಕನ ಮಾತಿಗೆ ಕಣ್ಣೀರು ಕಪಾಳಕ್ಕೆ ಇಳಿಯುತ್ತಿದ್ದರೆ ನಾನೂ ಒzಯಾಗಿ ಹೋಗುತ್ತಿz. ಹೇಗೋ ಬದುಕು ಹಳಿಗೆ ಹತ್ತುತ್ತದಾ ಎನ್ನಿಸತೊಡಗಿತ್ತು. ವರ್ಷಗಳು ಉರುಳಲಾರಂಭಿಸಿದ್ದವು. ಪುಟ್ಟಿ ಬದುಕಿಗೆ ಏಗಿದ್ದಳು. ಆದರೆ ದೇವರು ಯಾಕೋ ಆ ಕುಟುಂಬದ ಮೇಲೆ ಮುನಿಸಿಬಿಟ್ಟಿದ್ದ. ಅದು ಮುಂದಿನ ವಾರಕ್ಕಿರಲಿ.
ಕಾರಣ
ಅವಳು ಎಂದರೆ..
(ಲೇಖಕರು ಕಥೆ-ಕಾದಂಬರಿಕಾರರು)

No comments:

Post a Comment