Saturday, July 29, 2017


ಉತ್ಸಾಹವನ್ನೆಲ್ಲಿಂದ ಆಕೆ ಕಡ ತರುತ್ತಾಳೆ...?

ಸರಹೊತ್ತಿನಲ್ಲಿ ಹೆಂಡತಿ ಸತ್ತು ಹೋಗುವ ಗಂಡಸಿನ ಕತೆ ಮತ್ತೆರಡ್ಮೂರು ವರ್ಷದಲ್ಲೇ ಮುಗಿದು ಹೋಗುತ್ತದೆ. ಅದರಲ್ಲೂ ವಯಸ್ಸು ಮಾಗುತ್ತಿದ್ದರಂತೂ ಮಾರ್ಜಿನಲ್ ಬದುಕು ಅವನದು. ಅದೇ ಗಂಡ ನೆಗೆದು ಬಿದ್ದಾಗ ಸ್ವರ್ಗ ಕಿತ್ತು ಹೋಗುವಂತೆ ಭೋರಾಡುವ ಹೆಣ್ಣು ಅದರ ನಂತರವೂ ದಶಕಗಳ ಕಾಲ ಅದೇ ಸ್ವಾಸ್ಥ್ಯದಿಂದ ಬದುಕು ಕಟ್ಟಲು ಎದ್ದು ನಿಲ್ಲುತ್ತಾಳೆ. ಅದಕ್ಕೆ ವಯಸ್ಸಿನ ಹಂಗೇ ಇರುವುದಿಲ್ಲ. ಮತ್ತೂ ದಶಕಗಳ ಕಾಲ ಓಟ ಸಾಗುತ್ತಿರುತ್ತದೆ...ಅದ್ಯಾಕೆ ಗಂಡಸಿಗೆ ಬದುಕುವ ಛಲ ಅಥವಾ ಸ್ವಾಸ್ಥ್ಯ ಸತ್ತೇ ಹೋಗುತ್ತದೆ..? ಆಕೆ ಅದೆಲ್ಲಿಂದ ಬದುಕುವ ಉತ್ಸಾಹ ಕಡ ತರುತ್ತಾಳೆ..? ಗೊತ್ತಿಲ್ಲ. ಅದನ್ನಾಕೇಯೆ ಉತ್ತರಿಸಿಬೇಕು.. ಆದರೆ ಅದರ ನಂತರವೂ ಬದುಕಿಗೆ ಆಗತ್ಯದ ಅಹಾರ, ಮೈಥುನ ನಿದ್ರೆ ಎಂದು ಬೇಸಿಕ್ಕುಗಳನ್ನು ಪಾಂಗಿತವಾಗಿ ಪೂರೈಸಿಕೊಳ್ಳುವುದಿದೆಯಲ್ಲ ಅದು ಮಾತ್ರ ನಿಜಕ್ಕೂ ಜೀವವನ್ನು ಬದುಕಿಸಿಕೊಳ್ಳುವ ಪರಿಯಾ...? ನನಗೆ ಗೊತ್ತಿಲ್ಲ. ಅದರೆ ತೀರ ತಾನು ಹೆಣ್ಣು ಎಂದು ಬಯಸುವ ರಿಸರ್ವೇಶನ್ನಿಗೂ, ಅಗತ್ಯ ಬಿದ್ದಾಗ ಆ ಬೌಂಡರಿಯಾಚೆ ಬದುಕುವ ಹೆಣ್ಣಿಗೂ ಮಧ್ಯೆ ಒಂದು ಢಾಳಾದ ವ್ಯತ್ಯಾಸ ಇದ್ದೆ ಇದೆ ಮತ್ತು ಆ ಮುಖವಾಡದ ಅಗತ್ಯ ಇವತ್ತಿನ ದಿನಗಳಿಗಿಲ್ಲ ಎನ್ನುವುದೇ ಒಳಗೊಳಗೇ ಒಪ್ಪಿಕೊಳ್ಳುತ್ತಿರುವ ಪರಮ ಸತ್ಯವೂ ಹೌದಾ ಎನ್ನಿಸಿತ್ತು ಆಕೆಯ ಮಾತು ಕೇಳುತ್ತಿದ್ದರೆ.
ಕಾರಣ ನೈತಿಕತೆ ಎನ್ನುವುದನ್ನು ಕೇವಲ ಏಕಪಕ್ಷೀಯವಾಗಿಸುವ ಪುರುಷ, ಸಮಾಜ ಮತ್ತು ಅಗತ್ಯ ಬಿದ್ದಾಗ ಅದಕ್ಕೆ ತನ್ನ ಪರಮಶೀಲತೆಯನ್ನು ಢಾಳಾಗಿಸುವ ಆಕೆ ಇಬ್ಬರೂ ಪುರಸ್ಕರಿಸಿದಾಗಲೇ ಒಂದು ಸಮಾಗಮ ನಡೆದು ಹೋಗುತ್ತದೆ ಎನ್ನುವುದನ್ನು ಏಕೆ ಮರೆತುಬಿಡುತ್ತಾರೋ...? ನೆನಪಿರಲೇಬೇಕಲ್ಲವಾ ಎರಡೂ ಕೈ ಸೇರಿದಾಗಲೇ ಚಪ್ಪಾಳೆ ಎಂದು. ಅಗುವುದೆಲ್ಲಾ ಆದ ನಂತರ ನನ್ನ ಶೀಲ ಹೋಯಿತು, ನಾನು ಕಳೆದುಕೊಂಡದ್ದು ಯಾರು ಕೊಡುತ್ತಾರೆ..? ಅಯ್ಯೋ.. ಹುಂಯ್ಯೋ.. ನಾನು ನಂಬಿದ್ದು ಮೋಸವಾಗ್ತಿದೆ ಎಂದು ರಣಾರಂಪ ಮಾಡುತ್ತಿದ್ದರೆ, ಸಿಕ್ಕಿದಾಗೆಲ್ಲಾ ಅಲವತ್ತುಕೊಳ್ಳುತ್ತಿದ್ದರೆ ಅದಕ್ಕಿಂತ ದೊಡ್ಡ ಅಪಹಾಸ್ಯ ಇನ್ನೊಂದಿಲ್ಲ. ಅಂತಹದ್ದೊಂದು ಸಂಬಂಧ ಬೆಳೆದಿತಾದರೂ ಹೇಗೆ..? ಹಾಗೆ ನೋಡಿದರೆ ಅದು ಪುರುಷರಿಗೂ ಅಷ್ಟೆ ಅಪ್ಲಿಕೇಬಲ್ ಆಗುತ್ತೆ ಆದರೆ ಜನ್ಮತ: ತನಗೇನೂ ಆಗಿಲ್ಲ ಎಂಬಂತೆ ಬದುಕುವುದೇ ಪುರುಷತ್ವ ಎಂಬಂತಿರುವ ಗಂಡು ಪ್ರಾಣಿ(ಅನಿವಾರ್ಯ ಮತ್ತು ಅವಿಷ್ಕಾರ ರೂಪಿಯಾ.?)ಅದರಿಂದ ಸುಲಭಕ್ಕೆ ಹೊರಬಂದಿದ್ದಾನೆ ಎನ್ನಿಸಿದರೂ ಯಾವೊಂದು ಸೂತ್ರ ಇಬ್ಬರಿಗೂ ಅಪ್ಲಿಕೇಬಲ್ಲೇ ಅಲ್ವಾ..?
ನಾನು ಮಾತಾಡಲಿಲ್ಲ ಮಧ್ಯದಲ್ಲಿ. ಕಾರಣ ಇರುವುದನ್ನು ಇರುವಂತೆ ಅದರಲ್ಲೂ ಮರುತ್ತರಕ್ಕೆ ಅವಕಾಶ ಇಲ್ಲದಂತೆ ಸ್ಪಷ್ಟೀಕರಿಸುವ ಸ್ತ್ರೀಯರ ಎದುರಿಗೆ ವಿತಂಡವಾದಕ್ಕೆ ಇಳಿಯುವ ಅಗತ್ಯತೆ ಅವಶ್ಯಕತೆ ಎರಡೂ ಇರಿಸಿಕೊಳ್ಳಬಾರದು.
ಕಾರಣ ಮದುವೆ ಎನ್ನುವ ಸಂಭ್ರಮವೇ ಇವತ್ತು ಮೊದಲ ಮೂರು ವರ್ಷದಲ್ಲೇ ತನ್ನ ನಂಬಿಕೆ ಮತ್ತು ತಾನು ಅನ್ನಿಸಿಕೊಂಡ ಕನಸಿನ ಪ್ರಪಂಪಚವಲ್ಲ ಅಥವಾ ಮದುವೆಯ ನಂತರದ ಬದುಕು ಹೀಗೀಗಿರುತ್ತೆ ಎಂದುಕೊಂಡಂತಿಲ್ಲ ಎನ್ನುವ ನಗ್ನಸತ್ಯ ಅರಿವಾಗುತ್ತಿದ್ದರೆ ಅಯ್ಯೋ ನನಗೆ ಮೋಸ ಆಯಿತು ಎನ್ನುವ ಅವಕಾಶ ಅಥವಾ ಅಲ್ಲೂ ನನ್ನ ಶೀಲ ಹಾಳಾಯಿತು ಎಂದು ಬೊಬ್ಬೆ ಹೊಡೆವ, ಹೊಡೆದ ಹೆಂಗಸರಿದ್ದಾರಾ..? (ಹೆಚ್ಚಿನವು ಆರ್ಥಿಕ,ಕೌಟುಂಬಿಕ ಬೆಂಬಲ ಇರುವಲ್ಲಿ ಡೈವರ್ಸಿಗೆ ಹೋಗುತ್ತವೆ. ಅಲ್ಲೆಲ್ಲಾ ನನ್ನ ಶೀಲ ವಾಪಸ್ಸು ಕೊಡು ಎಂದು ಕಾಲುಚಾಚಿ ಕೂತ್ತಿದ್ದಿದೆಯಾ..?) ಬಾಯಿ ಮುಚ್ಚಿಕೊಂಡೊ, ಜಗಳ ಮಾಡಿಕೊಂಡೋ ಕೊನೆಗೆ ಯಾವುದೋ ಒಂದು ಪಾಯಿಂಟ್‍ನಲ್ಲಿ ಕಾಂಪ್ರಮೈಸಿಗೆ ಬದುಕು ಬಂದು ನಿಲ್ಲೋದಿಲ್ವಾ..? ಹಾಗಿದ್ದಾಗ ಹೀಗೊಂದು ನಂಬಿಕೆ ಮೂಡಿ ಒಂದು ಸಂಬಂಧ ಬೆಳೆದು ಇಬ್ಬರಲ್ಲೂ ಇಂಟಿಮಸಿ ಎನ್ನುವ ಬೌಂಡರಿ ಸಿPಕ್ಸರಿಗೇರಿದಾಗ ನಿಜಕ್ಕೂ ಆತ್ಮಸಾಂಗತ್ಯ ಒಡಮೂಡತೊಡಗುತ್ತಿರುತ್ತದೆ. ಹೇಗೆ ಇದ್ದರೂ ಎಲ್ಲೇ ಇದ್ದರೂ ಒಬ್ರಿಗೊಬ್ಬರು ಹತ್ತಾರು ದಿನದ ನಂತರವೂ ಸಂಪರ್ಕ ಇಟ್ಟುಕೊಂಡೆ ಬದುಕುವ ಹುಮ್ಮಸ್ಸು ಗುಪ್ತವಾಗಿ ಹನಿಯುತ್ತಿರುತ್ತದೆ. ಆದರೆ ಹೀಗೊಂದು ಸಂಬಂಧದಲ್ಲೆ ಚೆಂದವಾಗಿ ಬದುಕುತ್ತೇನೆ ಎಂದು ಹೊರಟುನಿಲ್ಲುವ, ಒಬ್ಬರ ತಲೆಯ ಮೇಲೊಬ್ಬರು ಹತ್ತಿ ಕೂರುವ ಸಂದರ್ಭ ಉಂಟಾಗಿಬಿಟ್ಟರೆ ದೇವರಾಣೆ ಮತ್ತಲ್ಲಿ ಚಿಗುರು ಕೊನರುವುದು ಕಡಿಮೆಯೇ. ಕಾರಣ ಸಂಬಂಧ ಎನ್ನೋದು ಇಂತಹ ನಂಬಿಕೆಯಲ್ಲಿ ಒಳಗೊಳಗೇ ಹನಿಸುವ ಚಿಗುರಾಗುತ್ತದೆಯೇ ವಿನ: ಅದಕ್ಕೊಂದು ಅಧಿಕೃತ ಅಥವಾ ತನಗೆ ಬೇಕಾದಂತೆ ಬದುಕುವ ಹೊರಾಂಗಣ ಲಭ್ಯವಿರುವುದೇ ಇಲ್ಲ. ಅದೇನಿದ್ದರೂ ಅವರವರ ಮಟ್ಟಿಗೆ ತುಂಬ ಪ್ರಿಯ ಸಂಗತಿ. ಆದರೆ ಎಷ್ಟೆ ಆತ್ಮೀಯರಿಗೆ ಅದೊಂದು ಸರಿಯಲ್ಲ ಎನ್ನುವ ವಿಷಯವೇ ಆಗುತ್ತದೆ ಹೊರತಾಗಿ ಅದರಿಂದ ಇನ್ನಾವ ಉತ್ಪನ್ನಗಳೂ ಹುಟ್ಟುವುದೇ ಇಲ್ಲ.
ಅಂತಹದರಲ್ಲಿ ನೀನು ಅದನ್ನು ಸಂಬಂಧ ಎನ್ನುತ್ತಿಯೋ, ಪ್ರೀತಿನೋ ಏನೋ ಒಂದಿರಲಿ. ಆದರೆ ಮದುವೆ ಅಂತಾಗಿ ಏನೆಲ್ಲಾ ಕನಸಿಸುವ ಮೊದಲೇ ಪ್ರತಿ ಪೈಸೆಗೂ, ಕೊನೆಗೆ ಪೇಪರ್ ಓದುವುದಕ್ಕೂ, ಎಲ್ಲಿಯಾದರೂ ಹೋಗುವುದಕ್ಕೂ, ಸ್ನೇಹಿತೆಯೊಂದಿಗೆ ಮಾತಾಡುವುದಕ್ಕೂ, ಯಾರದ್ದೋ ಮಿಸ್‍ಕಾಲ್ ಅಂದರೆ ಯಾರದ್ದು ಎನ್ನುವದಕ್ಕೆ ಜವಾಬು ಕೊಡುವ ಹೊತ್ತಿನಲ್ಲಾಗುವ ಸಣ್ಣ ಎಂಬ್ರಾಸಿಂಗು, ನನ್ನದೇ ಸ್ವಾತಂತ್ರ್ಯ ಇರಿಸಿಕೊಳ್ಳಲಾಗದ ದಾಂಪತ್ಯಗಳು, ಇಷ್ಟೆಲ್ಲಾ ಓದಿನ, ಜಗತ್ತು ಉದ್ಧಾರ ಮಾಡುತ್ತಿರುವ ಹೊಸ ಆಧುನಿಕ ಬದುಕಿನಲ್ಲೂ ನಡೆಯುತ್ತಿರುವಾಗ ನಾನು ಮತ್ತೊಮ್ಮೆ ಮದುವೆ ಎನ್ನುವ ಬಾಣಲೆಗೆ ಬೀಳಬೇಕಿತ್ತಾ..? ಇದ್ದಾರು ಅಂತಹ ಸೆಂಟಿಮೆಂಟುಗಳು. ಆದರೆ ಗೊತ್ತಿದ್ದೂ ಗೊತ್ತಿದ್ದೂ ಮತ್ತೆ ಅದನ್ನೇ ಮಾಡಿಕೊಳ್ಳುವವಳು ನಾನಲ್ಲ. ಇನ್ನು ಪುರುಷರು ಏನು ಬೇಕಾದರೂ ಮಾಡಿಕೊಂಡಿರುವಾಗ, ಅಂತಹದ್ದೊಂದಕ್ಕೆ ಯಾವ ಅಬ್ಜಕ್ಷನ್ನೂ ಇಲ್ಲದಿರುವಾಗ ನನ್ನ ವೈಯಕ್ತಿಕ ಸುಖ ದುಖ:ಗಳ ಪರಿಚಾರಿಕೆಯ ಉಸಾಬರಿ ಬೇಕಾ..? ಹೌದು ಅವನೊಂದಿಗೆ ನನಗೆ ಸ್ನೇಹವಿದೆ ವಿಶ್ವಾಸ ಇದೆ. ಆದರೆ ನನ್ನನ್ನು ಮಾತ್ರ ಕುಲಟೆ ಎಂಬಂತೆ ನೋಡುವ ಜನರಿಗೆ ಸಿಕ್ಕಿದರೆ ಒಂದು ಕೈ ನನಗೂ ಎನ್ನುವವರಿಗೇನೂ ಬರವಿಲ್ಲ ಮಾರಾಯ. ಅಲ್ಟಿಮೇಟ್ಲಿ ಹೆಚ್ಚಿನ ಮಾತಾಡುವ ಗಂಡಸು/ಹೆಂಗಸರ ಇಬ್ಬರದೂ ಅಂತರಾಳದ ವರ್ಷನ್ನು ಒಂದೇ. ಏನೆಂದರೆ ತಾವು ಬದುಕಲಾಗದ ಸ್ವಂತಂತ್ರ ಬದುಕಿನ ಫ್ಯಾಂಟಸ್ಸಿ ಬದುಕು ಆಕೆ ಕಟ್ಟಿಕೊಳ್ಳುತ್ತಿದ್ದಾಳೆ, ಬದುಕುತ್ತಿದ್ದಾಳೆ ಎನ್ನುವುದೆ ಇವರೆಲ್ಲರಿಗೆ ಪರಮಘಾತಕ ಅಷ್ಟೆ ಹೊರತಾಗಿ ಯಾರಿಗೂ ಮನಸ್ಸಿನಲ್ಲಿ ಆಸೆ ಗೂಡು ಕಟ್ಟಿಕೊಂಡಿಲ್ಲವೆಂದಲ್ಲ. ಅಷ್ಟೆ.."
ಆಕೆಯ ಬದುಕಿಗೆ ಆಕೆಯೇ ಜವಾಬುದಾರಳು. ತೀರ ಸ್ಪಷ್ಟ ನಡೆಯ ಶೋಭಳ ಸ್ಥಿತಿಗೆ ಡಿಬೇಟ್ ಮಾಡುವಂತಹದ್ದೇನೂ ಇರಲಿಲ್ಲ. ಆಕೆ ಮಾನಸಿಕವಾಗಿ ಅನುಭವಿಸಿರಬಹುದಾದ ಹಿಂಸೆ ಆಕೆಯ ಹೊರತು ಇನ್ನಾರಿಗೂ ಗೊತ್ತಾಗಲಿಕ್ಕೆ ಸಾಧ್ಯವಿಲ್ಲ. ಅವಕಾಶ ಸಿಕ್ಕಿದಾಗ ಸ್ವತಂತ್ರವಾಗಿ ಚೆಂದದ ಬದುಕು ಕಟ್ಟಿಕೊಳ್ಳುತ್ತಿರುವಾಗ ಅದನ್ನು ಆಡಿಕೊಳ್ಳುವ, ಕಮೆಂಟು ಮಾಡುವ ಹಕ್ಕಾದರೂ ನಮಗೆ ಎಲ್ಲಿರುತ್ತದೆ..? ಬೀದಿಗೆ ಬಂದ ಬದುಕಿಗೊ ಈಗ ಆಕೆ ಕಾಲೂರಿ ನಿಂತಿರುವ ಬದುಕಿಗೆ ಸ್ವತ: ರಿಸ್ಕು ತೆಗೆದುಕೊಂಡವಳನ್ನು ನಾವು ಯಾಕಾದರೂ ಆಡಿಕೊಳ್ಳಬೇಕು.
ಕಾರಣ ಶೋಭಾ ಅಂತಹದ್ದೊಂದು ಗಂಡನ ಮರಣದ ಆಕಸ್ಮಿಕದ ಪ್ರಪಾತದಿಂದೆದ್ದು ನಿಂತ ಪರಿಯಿದೆಯಲ್ಲ ಅದರ ಕತೆಯೇ ಬೇರೆ. ಸರಹೊತ್ತಿಗೆ ನೆಗೆದುಬಿದ್ದ ಗಂಡ, ಪೂರ್ತಿ ಸಾಲ ಮತ್ತು ಎದುರಿಗೆ ಮೈ ಚೆಲ್ಲಿಕೊಂಡು ಮಲಗಿದ್ದ ಖಾಲಿ ಬದುಕು ಎರಡನ್ನೂ ಪುಷ್ಕಳವಾಗಿಯೇ ಬಿಟ್ಟು ಹೋಗಿದ್ದ. ಆದರೆ ಅದಾವುದಕ್ಕೂ ಜಗ್ಗದೆ ಗೃಹಕೈಗಾರಿಯ ಅಂಗವಾಗಿ ಹಪ್ಪಳ ಸಂಡಿಗೆ ಪೂರೈಸುವುದಕ್ಕೆ ಕೈ ಹಾಕಿ ಗೆದ್ದಿದ್ದಳು. ಕೆಲಸಕ್ಕೂ ಪ್ರೀತಿಗೂ ಬಿದ್ದರೆ ಹೆಣ್ಣನ್ನು ಸಂಭಾಳಿಸುವುದು ಕಷ್ಟ ಎನ್ನುವುದಕ್ಕೆ ಆಕೆ ಉದಾ.ಯಾಗಿದ್ದಳು. ಬದುಕನ್ನು ನೋಡುನೋಡುವಷ್ಟರಲ್ಲಿ ಕಟ್ಟಿಕೊಂಡಿದ್ದ ಆಕೆ ಈಗ ಯಾರೊಂದಿಗೋ ಇದ್ದಾಳೆನ್ನುವುದನ್ನು ಆಕೆಯ ಸ್ಥಿತಿಗೆ ಜೊತೆಯಾಗದ ನಾವು ಆಡಿಕೊಳ್ಳಲು ಯೋಗ್ಯರಾ..?
ಅಸಲಿಗೆ ಇವತ್ತು ಅಫೇರು ಎನ್ನುವುದೋ ಅಥವಾ ಒಂದು ಸಾಂಗತ್ಯ ಎನ್ನುವುದನ್ನು ಹೆಚ್ಚಿನಂಶ ಪ್ರತಿಯೊಬ್ಬರು ಒಳಗೊಳಗೇ ಅಂಗಿಕರಿಸುವ ಆದರೆ ಎದುರಾ ಎದುರು ಬಂದಾಗ ಮಾತ್ರ ಮುಖವಾಡ ತೊಟ್ಟು ತಾವು ಸಭ್ಯಸ್ಥರಂತೆ ನಿಲ್ಲುವ ಮನಸ್ಥಿತಿಯವರಾಗಿರುವುದೇ ಪ್ರಸ್ತುತ ಸಮಾಜದ ಅತಿ ದೊಡ್ಡ ಹಾದರತನ. ಕಾರಣ ಬದಲಾಗುವ ಮತ್ತು ಬದಲಾಗಿದ್ದ ಪರಿಸ್ಥಿತ್ಯಲಿ ಆಕೆಯ ಜಾಗದಲ್ಲಿ ಇನ್ಯಾರಾದರೂ ಗಂಡಸಿದ್ದಿದ್ದರೆ ಇದ್ದ ಸಂಸಾರ ಆಚೆಗಿಟ್ಟು ಮೊದಲು ಇನ್ನೊಬ್ಬಳನ್ನು ಮದುವೆ ಅಗುವುದೋ ಇನ್ನೊಂದೊ ಮಾಡಿಕೊಳ್ಳುತ್ತಿದ್ದ ಮತ್ತು ಯಾರು ಹೇಗೆಲ್ಲಾ ಸಂಸಾರ ಸುಧಾರಿಸುತ್ತಾರೆ ಎನ್ನುವುದು ನಮ್ಮ ಕಣ್ಣುಗಳೆದುರಿಗೆ ಸಾವಿರ ಇದ್ದರೂ ತನಗೆ ತನ್ನ ಬದುಕಿಗೆ ಏನು ಬೇಕೋ ಅದನ್ನು ಮಾಡಿಕೊಂಡು ಮಕ್ಕಳನ್ನು, ಪರಿಸ್ಥಿಯನ್ನು ಸುಧಾರಿಸಿದ ಆಕೆಗೆ ಕಮೆಂಟು ಮಾಡಲು ನಾವ್ಯಾರು...? ಎಲ್ಲಾ ಅವರವರಿಗೆ ಹಾಸಿ ಹೊದೆಯುವಷ್ಟಿದ್ದರೂ ಪರರ ಚಾದರಿನೊಳಾಗೆ ಇಣುಕುವುದನ್ನು ಬಿಡದ ಕಾರಣವೆ ಬದುಕು ಕಾಲೊರೆಸುವ ಬಟ್ಟೆಯಾಗುತ್ತಿರುವುದು. ಇಲ್ಲದಿದ್ದರೆ ಇದನ್ನೆಲಾ ನಾನು ಪಿಸುನುಡಿಯುವ ಅಗತ್ಯವಾದರೂ ಏನಿರುತ್ತೆ..?

Sunday, July 16, 2017

ಸಾಂಗತ್ಯವಿಲ್ಲದ ಬದುಕಿಗೆ ಬಣ್ಣಗಳೆಲ್ಲಿಂದ ಬರಬೇಕು...?


 ಸರಿಯಾಗಿ ಮೂರೇ ವರ್ಷದ ಹಿಂದೆ ಗಂಡನೆಂಬ ಬಾಟಲಿಬಾಯ್‍ನನ್ನು ಕಳೆದುಕೊಂಡು ಕುರ್ಚಿ ತುದಿಗೆ ಪಿಳಿಪಿಳಿ ಮಾಡುತ್ತಾ ಕೂತಿದ್ದವಳು ಇವಳೇನಾ ಎನ್ನುವಂತೆ ಮಾತಾಡುತ್ತಿದ್ದಾಳೆ ಶೋಭಾ. ಆವತ್ತು ಗಂಡನೆಂಬ ಮನುಷ್ಯಾಕೃತಿಯಲ್ಲಿದ್ದ ಜೀವಂತ ಕೃತಿ ನೆಗೆದು ಬಿದ್ದಾಗ ಜಗತ್ತೇ ಆಕೆಯ ತಲೆ ಮೇಲೆ ಬಿದ್ದಿತ್ತು. ಇವತ್ತು ಆಕೆ ಒಂದು ಕಾಲು ಮೇಲೆತ್ತಿ ಯಾರ ತಲೆ ಮೇಲಿಡಲಿ ಎನ್ನುವಷ್ಟು ಗಟ್ಟಿಯಾಗಿದ್ದಾಳೆ. ಹೌದು ಇವತ್ತಿಗೂ ಮದುವೆ ಅಂತಾಗಿಬಿಟ್ಟರೆ ಆ ಗಂಡನೆಂಬುವನು ಹೇಗಿದ್ದರೂ ಅವನಿಗೆ ಗಂಡ ಎಂಬ ಪಟ್ಟದೊಂದಿಗೆ ಸಾವರಿಸಿಕೊಂಡು ಹೋಗುವ ಸಂಸಾರಗಳು ನಮ್ಮಲ್ಲಿ ಲೆಕ್ಕದ ಹೊರಗಿವೆ.

ಅದೇನೆ ಇರಲಿ ಮದುವೆ ಆಗಿದೆ ಮಕ್ಕಳೂ ಆಗಿವೆ ಅಂತಾದ ಮೇಲೆ ಸುಮ್ನೆ ತಿಂದಾದರೂ ಬಿದ್ದಿರಲಿ ಬಿಡು ಎನ್ನುವದಿದ್ದರೂ ಕೈಲಾಗದಂತೆ ಎನೇ ಮಾಡದೆ ಸುಮ್ಮನಿದ್ದರೂ, ಅಪೂಟು ಸೋಮಾರಿ ಎಲ್ಲವನ್ನೂ ಕೈಗೆ ಹಿಡಿಸಿಯೂ ಬುಡ ಮಾತ್ರ ಸ್ವಂತ ತೊಳೆದುಕೊಳ್ಳುವ ಕ್ಷಮತೆಯ, ಆಗೀಗ ಕುಡಿದು ಗಲಾಟೆ ಮಾಡುವವನಿದ್ದರೂ, ಸುಖಾಸುಮ್ಮನೆ ಬಡಿದೆದ್ದು ಹೋಗುವವನಿದ್ದರೂ, ಕೆಲವೊಮ್ಮೆ ನಾಪತ್ತೆ ಆಗಿ ಇನ್ಯಾವಾಗಲೋ ಪ್ರತ್ಯಕ್ಷನಾಗುವವನಿದ್ದರೂ, ಏಷ್ಟೊ ಸರಿ ಮನೆಯದೆ ದುಡ್ಡು ಕದ್ದು ಕೆಲವೊಮ್ಮೆ ಹೆಂಡತಿಯ ಹೆಸರು ಹೇಳಿ ಇದ್ದಬದ್ದವರಿಂದ ದುಡ್ಡು ದುಗ್ಗಾಣಿ ಎತ್ತಿಕೊಂಡು, ಸಂಬಂಧಿಕರ ಸ್ನೇಹಿತರ ಹತ್ತಿರ ಸಾಲ ಸೋಲ ಮಾಡಿಕೊಂಡು, ಯಾವ ದಂಧೆಯೂ ಬರಕತ್ತಾಗದೆ, ಮಾತೆತ್ತಿದ್ದರೆ ಅಟೋದವನು ಇವತ್ತು ಐದು ರೂಪಾಯ್ ಕಡಿಮೆ ಅಂದರೆ ಬರಲ್ಲ, ನಾನು ಯಾವ ಲೆಕ್ಕದಲ್ಲಿ ಕಮ್ಮಿ ಎಂಬ ಧಿಮಾಕಿಗೇನೂ ಕಮ್ಮಿ ಇರದ, ಅದರೆ ಎಂಟಾಣಿ ದುಡಿಯಲೊಲ್ಲದ ಅಪೂಟು ಸೋಮಾರಿ ಅದರೆ ಊರಿಗೆಲ್ಲಾ ಹಂಚುವಷ್ಟು ಸೊಕ್ಕಿನ ಮಾತುಗಳ ಮತ್ತು ಜಂಭದ ಹೀಗೆ ಹಲವು ತಗಾದೆಗಳ ಅಪಕ್ವ ಗಂಡಸು, ಗಂಡ ಅಂತಾದ ಮೇಲೆ ಇರಬಹುದಾದ ಎಲ್ಲಾ ರೂಪದಾಚೆಗೊ ಅವನು ಗಂಡನಾಗೆ ಇರುತ್ತಾನೆ.

ಅದರೆ ಅದೆಲ್ಲಾ ಉಸಾಬರಿ, ಜಗಳ, ಮುನಿಸು, ಕೋಪ, ಸರಸ, ಕುಡಿತ, ಬಡಿತ, ಇವಳದ್ದೂ ಇದ್ದೇ ಇರುವ ಕಿರಿಕ್ರಿರಿತನದ ಮಾತುಗಳು, ಅದಕ್ಕವನ ಮತ್ತೆ ಪಿಸಣಾರಿತನ, ಊರಿಗಿಲ್ಲದ ಬಿಂಕಕ್ಕೇನೂ ಕಡಿಮೆ ಇಲ್ಲದ, ಏನೂ ಮಾಡಲೊಲ್ಲನಾದರೂ ಯಾರಾದರೂ ಬಂದಾಗ ಅತ್ಯಂತ ಸುಭಗನಂತೆ ಮಾತಾಡಿ ಅಯ್ಯೋ ಇವರ ಯಜಮಾನ ಎಷ್ಟು ಆದರ ಸದರ ಮಾಡುತ್ತಾರೆ ಎನ್ನಿಸಿಕೊಳ್ಳುವ, ಮನೇಲಿ ಕಾಫಿ ಪುಡಿ ಇದಿಯಾ ಇಲ್ವಾ ನೋಡದೆ " ಏಯ್ ಇವಳೆ ನೆಸ್ ಕಫೆ ಮಾಡೆ " ಎಂದು ಕೂಗಿಕೊಂಡು ಆರ್ಡರ್ ಮಾಡುವ, ಅವರೊಂದಿಗೆ ತಾನೂ ಲಯಬದ್ಧವಾಗಿ ಕೂತು ವರಚ್ಚಾಗಿ ಕಾಫಿ ಹೀರುವ ಬಂದ ಅಭ್ಯಾಗತರು ಅದೇನು ಒಳ್ಳೆಯವರು ಎನ್ನಬೇಕು ಹಾಗೆ ನಾಜೂಕಿನ ಮಾತಾಡುವ, (ಈ ಯಜಮಾನ ಎನ್ನುವ ಪದ ಬಳಕೆಗೆ ನನ್ನ ವಿರೋಧವಿದೆ. ಗಂಡ ಗಂಡ ಅಷ್ಟೇ.. ಹೆಂಡತಿ ಕೂಡಾ ಹೆಂಡತಿ ಅಷ್ಟೆ. ಅದ್ಯಾಕೆ ಯಜಮಾನ ಯಜಮಾನತಿ ಆಗುತ್ತಾರೋ ಅದೇನು ಒಬ್ಬರಿಗೊಬ್ಬರು ದುಡ್ಡು ದುಗ್ಗಾಣಿ ಪೇಮೆಂಟು ಮಾಡುತ್ತಾರಾ..? ಇದು ನನ್ನ ವೈಯಕ್ತಿಕ ಮತ್ತು ನನಗೀಗಲೂ ಅರ್ಥವಾಗದ ವಿಷಯ) ಎಷ್ಟೂ ದುಡಿದರೂ ಒಯ್ದು ಗಡಂಗಿಗೂ ತನ್ನ ಸಿನೇಮಾಕ್ಕೂ ಖರ್ಚು ಮಾಡಿಕೊಂಡು ಉಳಿದದ್ದು ಮಾತ್ರ ದಾಕ್ಷಿಣ್ಯಕ್ಕೆ ಮನೆಗೆ ಖರ್ಚು ಮಾಡುವ ಹೀಗೆ ತರಹೇವಾರಿ ಗಂಡಸರು ಗಂಡ ಅಂತಾದ ಮೇಲೆ ಗಂಡನೇ ಆಗಿ ಹೋಗಿರುತ್ತಾನೆ ಹೊರತಾಗಿ ಬೇರಾವ ರೀತಿಯಲ್ಲೂ ಬದುಕಿನ ಅಂಗಳದಲ್ಲಿ ಬದಲಾಗುವುದೇ ಇಲ್ಲ. ಅದು ನಮ್ಮ ಅನುಭವದ ಜೀವನ ರೀತಿಯೋ ಇನ್ನೇನೋ ಒಟ್ಟಾರೆ ಹೆಣ್ಣು ಮಕ್ಕಳೂ ಅದನ್ನೂ ಹೆಚ್ಚು ಕಡಿಮೆ ಹಾಗೆಯೇ ಸ್ವೀಕರಿಸಿ ಬಿಟ್ಟಿರುತ್ತಾರೆ.

ಈಗಿನ ಹುಡುಗಿಯರನ್ನು ಈ ಕೆಟಗರಿಗೆ ನಾನು ಸೇರಿಸಿಲ್ಲ. ಕಾರಣ ಮದುವೆ ಆದ ಮೂರೇ ತಿಂಗಳಿಗೆ ಕಡ್ಡಿಹಿಡಿ ಎತ್ತಿಕೊಂಡು ನಿಲ್ಲುವ ಹುಡುಗಿಯರೂ ಈಗ ಸಹಜವಾಗಿದ್ದಾರೆ ಮತ್ತು ಬದುಕಿಗೆ ಅನುಭವಕ್ಕೆ ತಕ್ಕಂತೆ ಬದಲಾಯಿಸಿಕೊಳ್ಳುವವರೂ ಇದ್ದಾರೆ. ಅದರೆ ಕೆಲವರು ಮಾತ್ರ ಈಗಲೂ ಮನಸ್ಸಿನ ಕೈಗೆ ವಾಸ್ತವವನ್ನು ಕೊಟ್ಟು, ಬಂದಂತೆ ಸ್ವೀಕರಿಸದೆ ಬದುಕು ತಾವಾಗೇ ಹಾಳು ಮಾಡಿಕೊಳ್ಳುವುದೂ ಇದೆ. ಹಾಗಾಗಿ ಶೋಭಾಳ ಎನ್ನುವ ಮಿಡ್ಲಕ್ಲಾಸ್ ಬದುಕಿನ ಗಂಡ ಗಂಡನಾಗಿದ್ದೂ ಹೊಸದೇನಿರಲಿಲ್ಲ. ಅದರೆ ಏನೆಲ್ಲಾ ಅಗದಿದ್ದವನು ಸತ್ತಾಗ ಮಾತ್ರ ಅಯ್ಯಯ್ಯೋ ಎನ್ನುವುದಿದೆಯಲ್ಲ ಅದು ಆ ಬಾಂಧವ್ಯವನ್ನು ತೋರಿಸುತ್ತಿತ್ತೇನೋ. ಆದರೆ ಆಕೆ ಅಷ್ಟೇ ಬೇಗ ಚೇತರಿಸಿಕೊಂಡು ಬದುಕು ಕಟ್ಟಿಕೊಂಡಿದ್ದಳು. ಜೊತೆಗೆ ಮಗಳು ಅಮ್ಮನ ಬಾಲಂಗೋಚಿ ಅಧ್ಬುತವಾಗಿ ಓದುತ್ತಾ, ದಿನದ ಉಳಿದ ಹೊತ್ತಲ್ಲಿ ಹಪ್ಪಳ ಒತ್ತುತ್ತಾಳೆ ಸಾಲುಸಾಲಾಗಿ. (ಅಂದಹಾಗೆ ಕೆಲವರು ನನ್ನೊಂದಿಗೆ ಇಂತಹ ಮನೆಯ ಕೆಲಸಗಳು ಈಗಲೂ ನಡೆಯುತ್ತವಾ ಎಂದು ಕೇಳಿದ್ದಿದೆ. ನಿಜ ಹೇಳ ಬೇಕೆಂದರೆ ಹೀಗೆ ಮನೆಯ ಹಪ್ಪಳ,ಉಪ್ಪಿನಕಾಯಿ, ಚಟ್ನಿಪುಡಿ ಮಾಡಲು ಎಷ್ಟು ಜನರಿದ್ದರೂ ಇವತ್ತು ಕಮ್ಮಿ ಎನ್ನುವ ಕನಿಷ್ಟ ಆರೆಂಟು ಸಂಸ್ಥೆಗಳು ನನಗೇ ಗೊತ್ತು. ಆದರೆ ಜನರಿಗೆ ಸುಲಭದ ದುಡ್ಡು ಮಾಡಬೇಕಿರುವುದರಿಂದ ಮತ್ತು ಸರಕಾರದ ಪುಕ್ಸಟ್ಟೆ ಅಕ್ಕಿ, ಎಣ್ಣೆ ಎಂದು ಸೋಮಾರಿಗಳಾಗಿಸಿದ ಫಲವಾಗಿ ಯಾವುದಕ್ಕೂ ಮೈಮುರಿಯಲು ಜನರಿವತ್ತು ತಯಾರಿಲ್ಲ. ಹೊರತಾಗಿ ಇಂತಹ ಹೋಮ್‍ಮೇಡ್‍ಗಳಿಗೆ ಅದ್ಯಾವ ಪರಿಯಲ್ಲಿ ಬೇಡಿಕೆ ಇದೆಯೆಂದರೆ ಸರಾಸರಿ ಸಾವಿರ ಕೂಲಿಗಳು ಪ್ರತಿ ದಿನದ ಉತ್ಪನ್ನಕ್ಕೆ ಇದ್ದರೂ ಸಾಕಾಗಲಿಕ್ಕಿಲ್ಲ)

ತೀವ್ರವಾಗಿ ಸಾಮಾಜಿಕ ಬದುಕಿನ ಶ್ರೀಮಂತಿಕೆ ಮತ್ತು ಬಡತನ ರೇಖೆ ದಪ್ಪವಾಗುತ್ತಲೆ ಸುಲಭಕ್ಕೆ ಜೀವನದಲ್ಲಿ ದುಡ್ಡು ಕೈಗೆ ಹತ್ತುವುದಿಲ್ಲ. ಅದೇನಿದ್ದರೂ ಇದ್ದಲ್ಲೇ ಬೆಳೆಯುವ ಸಂಭ್ರಮವೇ ಜಾಸ್ತಿ. ಹೀಗಿದ್ದಾಗ ಬಂದಿದ್ದರಲ್ಲಿ ಅರ್ಧ ಕುಡಿದೇ ಹಾಳು ಮಾಡುತ್ತೇನೆ ಎಂದು ನಿಂತ ಮನೆಯ ಯಜಮಾನನನ್ನು ನಂಬಿ ಉದ್ಧಾರವಾದ ಕುಟುಂಬಗಳಿಲ್ಲವೇ ಇಲ್ಲ ಎಂದರೂ ಸರಿನೇ. ಆವತ್ತು ಆಗಿದ್ದು ಕೂಡಾ ಹಾಗೇನೆ. ಕರೆಂಟು ಕಂಪೆನಿಯಲ್ಲಿ ಕೆಲಸಕ್ಕಿದ್ದಾನೆ ಎಂದು ಬಂದ ಸಂಬಂಧಕ್ಕೆ ಹುಡುಗಿಯನ್ನು ಕೊಡದಿರಲು ಯಾವ ಕಾರಣವೂ ಇರಲಿಲ್ಲ. ದುಡ್ಡು ಬರುತ್ತದಂತಾದರೆ ಕೋತಿಯೊಂದಿಗೂ ಮದುವೆ ಆಗೋಕೆ ರೆಡಿ ಇರುವ ಹುಡುಗಿಯರೂ, ದುಡ್ಡಿದ್ದರೆ ಸಾಕು ಸಂಸಾರ ಸಂಭ್ರಮದಲ್ಲಿರುತ್ತದೆ ಎಂದುಕೊಳ್ಳುವ ಪಾಲಕರದ್ದು ಈಗಲೂ ಕಮ್ಮಿ ಇಲ್ಲ. ಆಗಲೂ ಇರಲಿಲ್ಲ. ಹಾಗಾಗಿ ಶೋಭಾ ಏನೆಲ್ಲಾ ಘಟಿಸುವ ಹೊತ್ತಿಗೆ ಒಮ್ಮೆ ಕುಸಿದುಹೋಗಿದ್ದಳಾದರೂ ಗಂಡನೆನ್ನುವ ಪ್ರಾಣಿ ನೆಗೆದು ಬಿದ್ದ ಮೂರ್ನಾಲ್ಕು ವರ್ಷದಲ್ಲೇ ಎಲ್ಲಾ ವ್ಯವಸ್ಥಿತ ಮಾಡಿಕೊಳ್ಳುವ ಹೊತ್ತಿಗೆ ಹೊಸತೊಂದು ಸಂಬಂಧಕ್ಕೂ ಈಡಾಗಿದ್ದಳು. ಬದುಕು ಹೊಸ ದಾರಿ ಹೊಸ ತಿರುವು ತೆಗೆದುಕೊಂಡಿತ್ತು.

"...ಅಯ್ಯೋ ಹೀಗಾಯ್ತಲ್ಲ ಎನ್ನುವುದಕ್ಕಿಂತ ಬದುಕು ಒಂಥರಾ ಬದಲಾಗಿದೆ, ನಾನೂ ಹೊಸದಾಗಿ ಎಲ್ಲವನ್ನೂ ಅರಂಭಿಸಿದರೂ ಚಾಲೆಂಜಿಂಗ್ ಆಗಿ ಎದುರಿಸಿದ್ದೇನೆ.. ಹಾಗೆ ಅವನೊಂದಿಗೇ ಇದ್ದರೆ ಯಾವತ್ತೂ ಯಾವ ಬದುಕಿಗೂ ಹೊಸ ಧಡಾಪಡಿಗೂ ತೆರೆದುಕೊಳ್ತಾನೆ ಇರಲಿಲ್ವೇನೋ. ಅದೊಂಥರಾ ಗೊತ್ತಿದ್ದೂ ಉಸಿರು ಗಟ್ಟಿದಂಗಿರ್ತದೆ. ಜನ  ಎನಂದುಕೊಳ್ತಾರೆ ಬಿಟ್ಟಾಕು. ಆದರೆ ನಾನು ಯಾರ ಜೊತೆಗೋ ರಿಲೇಶನ್‍ನಲ್ಲಿದ್ದೇನೆ ಅನ್ನೋದು ಉಳಿದವರಿಗೆ ಏನೋ ಅನ್ನಿಸಬಹುದು ಅದರೆ.." ಎಂದು ಮಾತು ನಿಲ್ಲಿಸಿದವಳ ಕತೆ ಮುಂದಿನ ವಾರಕ್ಕಿರಲಿ. ಶೋಭಾ ಹೇಳಿದುದರಲ್ಲಿ ಎರಡು ಮಾತಿರಲಿಲ್ಲ. ಅಷ್ಟಕ್ಕೂ ಸಾಂಗತ್ಯವಿಲ್ಲದ ಬದುಕಿನಲ್ಲಿ ಬಣ್ಣಗಳ ವಿಜೃಂಭಣೆಯಾದರೂ ಎಲ್ಲಿಂದ ಬಂದೀತು..? ಬದುಕಿಗೆ ಒಲವಿಲ್ಲದೆ, ಪ್ರೇಮ, ಕಾಮವಿಲ್ಲದೆರಂಗಿನ ಹರವು ರೂಪ ಪಡೆಯುವುದಾದರೂ ಹೇಗೆ..? ಉಳಿದದ್ದು ಮುಂದಿನ ವಾರಕ್ಕೆ..

Monday, July 10, 2017


ಬಹಿರಂಗವಾಗಿ ಬೆತ್ತಲಾಗುವುದೂ ಒಂದು ಸಂಭ್ರಮವಾ..?

ನಾನು ಸೂರ್ಯ.. ಹಗಲೇನೂ ರಾತ್ರಿನೂ ಬೆಳಕು ಬೀರುವವನೇ ಬೇಕಿದ್ರೆ ಇರಿ ಇಲ್ಲಾ ರೈಟ್ ಹೇಳಿ ಎಂದು ಆ ಸೂರ್ಯ ಉರಿಯುತ್ತ ನಿಲ್ಲತೊಡಗಿದರೆ ಏನು ಮಾಡಲಾದೀತು...? ಆದರೆ ಯಾವಾಗ ಕತ್ತಲಾಗಬೇಕು ಮತ್ತು ಯಾವ ಬೆತ್ತಲಾಗಬೇಕು ಎನ್ನುವುದು ಅರಿವು ನಮಗಿರದಿದ್ದರೆ ಬದುಕಿನ ಸಂಭ್ರಮದ ಸ್ವಾರಸ್ಯ ಬಹಿರಂಗವಾಗುತ್ತಾ ಕೆಲವೇ ಸಮಯದಲ್ಲಿ ನಾವು ರಸಹೀನ ಬದುಕಿನ ಪಳಯುಳಿಕೆಗಳಾಗಿಬಿಡುತ್ತೇವೆ. ನೋಡಿ ಬೇಕಿದ್ರೆ ನೀವು ಸೂರ್ಯ ಇಲ್ಲದಿದ್ದರೂ ಇನ್ನೊಂದು ದೀಪ ಉರಿಸಿ ಅಥವಾ ಇನ್ನೇನೋ ಮಾಡಿ ಒಂದಷ್ಟು ಬೆಳಕು ಪ್ರಜ್ವಲಿಸಬಹುದು ಆದರೆ ನೆನಪಿರಲಿ ಅಪೂಟು ಕತ್ತಲೆಯನ್ನು ನಾವು ಸೃಷ್ಠಿಸಲಾರೆವು. ಈಗಾಗಲೇ ಅತಿ ಹೆಚ್ಚು ಆಕರ್ಷಣೆ ಮತ್ತು ಆಸಕ್ತಿ ಕಳೆದುಕೊಳ್ಳುತ್ತಿರುವ, ಕಳೆದುಕೊಂಡಿರುವ ಹೊಸ ಹೊಸತಿನ ಬದುಕುಗಳಿಗೆ ಕಾರಣ ಬೀಡುಬೀಸಾಗಿ ಪ್ರತಿಯೊಂದನ್ನು ಬಹಿರಂಗ ಬದುಕಿಗೆ ತೆರೆದುಕೊಂಡಿದ್ದೇ ಕಾರಣ ಎನ್ನುತಾರೆ ತಜ್ಞರು.
ಇತ್ತಿಚೆಗೆ ಅತಿ ಹೆಚ್ಚು ಪ್ರದರ್ಶನವೇ ತಮ್ಮ ಕ್ವಾಲಿಟಿ ಎಂದುಕೊಂಡಿರುವ ಹೆಣ್ಣುಮಕ್ಕಳನ್ನು ಒಂದು ಕೇಳಬೇಕೆನ್ನಿಸುತ್ತದೆ. ಹೀಗೆ ಬಿಚ್ಚುತ್ತಾ ಖಾಸಗಿತನವನ್ನು ಪ್ರದರ್ಶನಕ್ಕಿಡುವುದರಿಂದ ನಿಮ್ಮನ್ನು ನೋಡಿ ಅಹಾ... ಎನ್ನುವವರಿಗೇನೂ ಕಡಿಮೆ ಇರದಿರಬಹುದು. ಅದರೆ ಯಾವುದನ್ನು ಬೆತ್ತಲುಗೊಳಿಸಬೇಕು, ಬಾರದು ಎನ್ನುವ ಅವಗಾಹನೆ ಮತ್ತು ಎಷ್ಟು ಎನ್ನುವುದರ ಮಟ್ಟ ನಮ್ಮ ಕೈಲಿರಬೇಕು. ಇದನ್ನು ಹೇಳಲು ಕಾರಣ, ಒಂದು ಕಾಲದಲ್ಲಿ ದೇಹದ ಯಾವ ಭಾಗವನ್ನೂ ಸ್ವಂತ ಗಂಡನೆದುರಿಗೇ ಬೆತ್ತಲಾಗೋಕೆ ನಾಚಿಕೊಳ್ಳುತ್ತಿದ್ದ, ಆ ನಾಚಿಕೆಯ ಮೂಲಕವೇ ಒಂದು ಸುಮಧುರ ಬಾಂಧವ್ಯಕ್ಕೆ ಸರಸದ ತಿರುಗಣಿಗೆ ಹೊರಳಿಕೊಳ್ಳುತ್ತಿದ್ದ ಸಹ್ಯ ದೇಹ ಭಾಷೆಯ ಬಳಕೆಯ ಬದಲಿಗೆ, ಆಕೆ ಇವತ್ತು ತೊಡೆ ಸಂದಿನ ಮೇಲೆ, ಎದೆಯ ತಿರುವಿನಲ್ಲಿ, ಹೊಕ್ಕಳ ಗುಳಿಯೊಳಗೆ, ಹಿಂಭಾಗದ ಉಬ್ಬಿನ ಇಳಿಜಾರನ್ನು ಒಡ್ಡಿ ಅಪರಿಚಿತನಿಂದ ತೀಡಿ ತಿದ್ದಿ ಟ್ಯಾಟು ಬರೆಸಿಕೊಂಡು, ಫೇಸ್‍ಬುಕ್‍ಗೆ ಅಪೆÇ್ಲೀಡು ಮಾಡುತ್ತಾಳೆ. ಇದ್ಯಾವ ಪರಿಯ ಮೆರವಣಿಗೆ ನನಗರ್ಥವಾಗುತ್ತಿಲ್ಲ. (ನಾವೆಲ್ಲಿ ಬರೆಸಿಕೊಂಡ್ರೆ ನಿಮಗೇನು ಎನ್ನಬಹುದು. ಪ್ಲೀಸ್ ಸ್ವಲ್ಪ ನಾರ್ಮಲ್ ಆಗಿ ಮಾತಾಡೊಣ) ಇದಿವತ್ತು ನಮ್ಮದೆಲ್ಲವನ್ನೂ ಬಹಿರಂಗಗೊಳಿಸಿ ಬದುಕನ್ನು ರಂಗಾಗಿಸಿಕೊಳುತ್ತಿದ್ದೇವೆ ಎನ್ನುವ ಭ್ರಮಾಧೀನ ಬದುಕಿನ ಪರಮಾವಧಿಗೆ ಬಸಿರಾದವಳು ಸಲೀಸಾಗಿ ಹೊಟ್ಟೆ ಬಿತ್ತರಿಸುತ್ತಿರುವುದು ಹೊಸ ಸೇರ್ಪಡೆ.
ಮೊದಮೊದಲಿಗೆ ಯಾವುದೇ ಸೆಲೆಬ್ರಿಟಿ(ಹೀಗಂದರೇನು ಎಂದು ನನಗೀಗಲೂ ಅರ್ಥವಾಗಿಲ್ಲ. ಹೇಳಿಸಿಕೊಂಡಿದ್ದರೂ ಅದರ ಭಾವಾರ್ಥ ತಿಳಿದಿಲ್ಲ.) ತಾನು ಮದುವೆಯಾದೆ ಬಸಿರಾದೆ ಎನ್ನುವುದನ್ನು ಬಚ್ಚಿಟ್ಟುಕೊಂಡು ಬದುಕಿ ಇದ್ದಕ್ಕಿದ್ದಂತೆ ಮುದ್ದಾದ ಮಗುವಿನೊಂದಿಗೆ ಮತ್ತೆ ತನ್ನ ಅಭಿಮಾನಿಗಳೆದುರಿಗೆ ಬಂದಾಗ, ಅದಕ್ಕೊಂದು ಅಧ್ಬುತ ಸ್ವಾಗತ ದಕ್ಕುತ್ತಿದ್ದುದಕ್ಕೆ ಉದಾ. ಆದರೀಗ ಏನಾಗಿದೆ ನೋಡಿ.
ಮೊನ್ನೆ ಮೊನ್ನೆ ತಾನೀಗ ಬಸುರಿ ಎಂದು ಹೊಟ್ಟೆ ಚಿತ್ರ ತೋರಿಸುತ್ತಾ, ಅದಕ್ಕೆ ಕಲಾಕಾರನೊಬ್ಬನಿಂದ ಒಂದು ರೌಂಡು ಚಿತ್ರವನ್ನೂ ಬರೆಸಿಕೊಂಡು ಅಪ್ ಲೋಡುಮಾಡಿದ ಕನ್ನಡದ ನಟಿ ಮತ್ತು ಹೀಗೆ ನಾನೂ ಬಸುರಿ ಎಂದು ಇದೇ ಅವಕಾಶ ಎಂದು ಸಂಪೂರ್ಣ ಬೆತ್ತಲಾಗಿ ನಿಂತ ಸೇರೆನಾ ತೊಡೆ ಸಂದಿ ಮುಚ್ಚಲು ತೊಡೆ ಅಡ್ಡ ಇರಿಸಿಯೂ, ಎದೆ ಮುಚ್ಚಿಕೊಂಡಿದ್ದೇನೆ ನಾನು ನಗ್ನಳಾಗಿಲ್ಲ ಎನ್ನುವ ಪೆÇೀಸಿಗೋಸ್ಕರ ಎದೆಗೆ ಕೈ ಅಡ್ಡ ಅರಿಸಿಯೂ, ಪತ್ರಿಕೆಯೊಂದರ ಮುಖ ಪುಟಕ್ಕೆ ತನ್ನನ್ನು ಮಾರಿಕೊಂಡಿದ್ದಾಳೆ. ಲಕ್ಷಾಂತರ ಡಾಲರೂ ಪೀಕಿರಬಹುದು ವ್ಯವಹಾರದ ಮಾತು ಆಚೆಗಿರಲಿ. ಮೇಲೆ ಹೇಳಿದಂತೆ ಕನ್ನಡದ ನಟಿಯ ಚಿತ್ರ ಸರಾಸರಿ ಮೂರು ತಿಂಗಳ ಬಸಿರಿನಿಂದಲೂ ಸಾಲಾಗಿ ಹರಿದಾಡುತ್ತಿದೆ.
ಎಲ್ಲೆ ಹೋದರೂ ಅದಕ್ಕೊಂದು ಸೆಲ್ಫಿ, ಕಂಡಲ್ಲೊಂದು ಫೆÇೀಟೊ ಕ್ಲಿಕ್ಕಿಸಿ ಇನ್ಸ್ಟಾಗ್ರಾಂಗೂ, ಫೇಸ್‍ಬುಕ್ಕಿನ ಗೋಡೆಗೆ ಒಗಾಯಿಸಿ ಬದುಕೋದು ನಮಗೀಗ ಅನಿವಾರ್ಯದ ಅಭ್ಯಾಸವಾಗಿಬಿಟ್ಟಿದೆ ಸರಿನೆ. ಸ್ನೇಹಿತರು, ಸಂಬಂಧಿಕರ ಮದುವೆ, ಮನೆ ಕಟ್ಟಿಸಿದಿರಿ, ನೌಕರಿ ಬಂತು, ಮಕ್ಕಳು ಸೆಟ್ಲ್ ಆದರು, ಅವಕ್ಕೂ ಮದುವೆ ನಿಶ್ಚಯದ ಕರೆ ಕೊಡಬೇಕಿದೆ, ಪುಸ್ತಕ ಬಿಡುಗಡೆ, ಬಹುಮಾನ, ಮಕ್ಕಳ ಶಾಲಾ ಫಲಿತಾಂಶದ ಖುಶಿಯ ಶೇಕಡಾವಾರು, ಕಾರು ಖರೀದಿ ಒಂದಾ ಎರಡಾ..? ಬದುಕಿನ ಬಣ್ಣಗಳ ಸಂಭ್ರಮ ಹಂಚಿಕೊಳ್ಳೊಕೆ ಸಾವಿರ ಕಾರಣಗಳು ಕಾಲುಚಾಚಿ ಬಿದ್ದಿರುತ್ತವೆ. ಇಂಥವಕ್ಕೆ ಯಾರು ಬೇಡ ಎನ್ನುವುದೂ ಅಥವಾ ಅಬ್ಜೆಕ್ಷನ್ನು ಎರಡನ್ನೂ ಮಾಡಲಾರರು ಬದಲಿಗೆ ಖುಶಿಪಡುವ ನೂರಾರು ಜನ ಸಿಕುತ್ತಾರೆ. ಕರಬುವವರನ್ನು ಅಲ್ಲೇ ಬಿಟ್ಟು ಬಿಡೋಣ.
ಆದರೆ ಇದೇನಿದು ಬಸಿರಾದೆನೆಂದು ಒಬ್ಬಳು ಹೊಟ್ಟೆ ಬಿಟ್ಟುಕೊಂಡು ಫೆÇೀಟೊ ಹಾಕಿದರೆ, ಇನ್ನೊಬ್ಬಳು ಹಿಂಗೆ ಬಸಿರಾಗಿದ್ದೇನೆ ಎಂದು ಪೂರ್ತಿಬಿಚ್ಚಿ ನಿಲ್ಲುತ್ತಿದ್ದಾಳೆ. ನಾಳೆ ಬಸಿರಿಗೆ ಮೊದಲು ಹೀಗಿಂದ್ವಿ ಎಂದು ಚಿತ್ರ ಹಾಕಲೂ ಹಿಂಜರಿಯಲಿಕ್ಕಿಲ್ಲ. ಆಫ್‍ಕೋರ್ಸ್ ಅವರವರ ಚಿತ್ರ ಅವರವರ ಮೈ ಅವರವರ ಗೋಡೆ ಅದನ್ನು ಕೇಳಲು ಅಥವಾ ಬರೆಯಲು ನಾನ್ಯಾರು..? ಒಪ್ಪಿದೆ.
ಆದರೆ ನಂದು ನಾನೇನು ಬೇಕಾದರೂ ಮಾಡ್ತೀನಿ ಎಂದು ಟಾಯ್ಲೆಟ್ಟಿನಲ್ಲಿ ಕೂತು ಹೋಳಿಗೆ ತುಪ್ಪ ಸುತ್ತಿಕೊಂಡು ತಿನ್ನಲು ಆದೀತೆ..? ಹಾಗೆ ಕೂತೆ ಅದರ ಪಾಡೀಗೆ ಅದು ನನ್ನ ಪಾಡೀಗೆ ನಾನು ಎಂದು ಕೂತಲ್ಲೆ ಮೇಲಿನಿಂದ ಸ್ನಾನನೂ ಮಾಡ್ತಿನಿ ಎನ್ನಲಾದೀತೆ..? ಕೇಸರಿಭಾತಿಗೆ ಬೆಂಡೆಹುಳಿ ಹಾಕಿ ಉಣ್ಣುತ್ತೇನೆ ಎಂದರೆ..? ನಾನು ವಿಭಿನ್ನ ಎನ್ನುವುದು ಪ್ರತಿಯೊಬ್ಬರಿಗೂ ಬೇಕೆ ಬೇಕು ಎನ್ನುವುದನ್ನು ನಾನೂ ಒಪ್ಪುತ್ತೇನೆ. ಆದರೆ ಅದರ ಸಭ್ಯತೆಯ ಎಲ್ಲೆ ಮೀರಿ ವಿಭಿನ್ನತೆ ಎಂದು ಬಿಚ್ಚುವುದೇ ವಿಭಿನ್ನತೆ ಅಂದರೆ. ಅದರ ಅಲ್ಟಿಮೇಟ್ ಫಲಿತಾಂಶ ಇನ್ಯಾವುದೋ ಮುಗ್ಧಳೂ, ನಮ್ಮ ನಿಮ್ಮ ಹೆಣ್ಣು ಮಕ್ಕಳು ಅನುಭವಿಸುತ್ತಾರಲ್ಲ ಅದನ್ನು ಯಾರು ಭರಿಸುತ್ತಾರೆ. ಹೀಗಿನ ಪರಿಣಾಮವೇ ಯಾವುದೋ ಕಾರಣಕ್ಕೆ ಯಾರೊ ರೇಪಿಗೀಡಾಗುತ್ತಿರಬಹುದು. ನೆನಪಿರಲಿ ಚಿತ್ರ ಮತ್ತು ಜಾಹಿರಾತುಗಳಲ್ಲಿ ಅವ್ಯಾಹತವಾಗಿ ಬಿಚ್ಚುವ ಪ್ರಕ್ರಿಯೆ ಇವತ್ತು ಬಲಾತ್ಕಾರದ ಪ್ರಮುಖ ಕಾರಣಗಳಲ್ಲಿ ಒಂದು ಎನ್ನುತ್ತದೆ ಸಮೀಕ್ಷೆ. (ಹೀಗೆ ಬರೆಯುವು ಅಥವಾ ನಾನು ಹೇಳುವುದರಿಂದ ಒಂದು ಹಂತ ಹೆಣ್ಣುಮಕ್ಕಳು ಎಗರಿ ಬೀಳುತ್ತಾರೆ. ಗಂಡಸರಿಗೆ ಬುದ್ದಿ ಬೇಡವೆ, ನಾವೇನು ರೇಪು ಮಾಡು ಅಂತಾ ಬಟ್ಟೆ ಧರಿಸಿದ್ವಾ..? ನೋಡುವವರ ದೃಷ್ಠಿ ಸರಿ ಇರಬೇಕು ಇತ್ಯಾದಿ ಪ್ರಶ್ನೆಗಳೊಂದಿಗೆ ಪ್ರಗತಿಪರತೆಯ ಮುಸುಗಿನಲ್ಲಿ ಗುದುಮುರಿಗೆ ಹೊಡೆಯುವುದಿದ್ದೇ ಇದೆ. ಅದರೆ ಒಂದು ಗೊತ್ತಿರಲಿ. ಹಾಗೆ ಎಗರುವ ಮೊದಲು ಇಂತಹ ಸಂದರ್ಭದಲ್ಲಿ ಅದನ್ನು ನಾವು ಎದುರಿಸಲಿಕ್ಕೂ ಶಕ್ಯ ಇದ್ದೇವಾ ಎಂದು ನಮಗರಿವಿರಬೇಕು. ಎನೇ ಸಮಾನತೆ ಎಂದುಕೊಂಡರೂ ಹೆಣ್ಣು ಮಕ್ಕಳ ಅನುಕೂಲಕಾರಿ ಸಮಾನತೆಯ ಬಗ್ಗೆ ತಿಳಿಯದ್ದೇನೇಲ್ಲ. ಕಾರಣ ಗಡಿಯಾರ ಅದೇ ಅರ್ಧ ಗಂಟೆ ಹಿಂದಕ್ಕೆ ಜರುಗಿಸಲಾಗುವುದಿಲ್ಲ ನೆನಪಿರಲಿ.)
ನಾನು ನನ್ನ ಬಸಿರು, ನಾನು ನನ್ನ ದೇಹ, ನಾನು ನನ್ನ ಬಟ್ಟೆ, ನಾನು ನನ್ನ ಪಿರಿಯೆಡ್ಡು " ಐ ಯಾಮ್ ಹ್ಯಾಪಿ ಟು ಬ್ಲೀಡ್.." ಎಂದೆಲ್ಲಾ ಬರೆದುಕೊಳ್ಳುವುದೇ ಬದಲಾವಣೆಯ ಸಂಕೇತ ಎಂದು ಭಾವಿಸುವುದಾದರೆ ನಿಜಕ್ಕೂ ಮನಸ್ಸುಗಳಿಗೆ ಪಾಠ ಬೇಕಾಗಿದೆ ಎಂದೇ ಅರ್ಥ. ಸ್ರಾವ ಎನ್ನುವುದೂ ನನ್ನ ಪ್ರದರ್ಶನದ ಸಂಕೇತ ಅದಕ್ಕೊಂದು ಹ್ಯಾಪಿಯನ್ನು ಪ್ರಿಫಿಕ್ಸು ಮಾಡುವುದರಿಂದ ಗಂಡಸಿನ/ಹೆಂಗಸಿನ( ಬೇರೊಬ್ಬ ಹೆಣ್ಣಿಗೆ ಅನ್ಯಾಯವಾದಾಗ, ಆಘಾತವಾದಾಗ ಆಕೆಯೆ ಮೇಲೆ ವೈಮನಸ್ಸಿದ್ದರೆ " ಆಕೆಗೆ ಹಾಗೆಯೇ ಆಗಬೇಕಿತ್ತು ಎನ್ನುವ ಹೆಣ್ಣು ಮಕ್ಕಳಿಗೇನೂ ಕಡಿಮೆ ಇಲ್ಲವಲ್ಲ". ಜೊತೆಗೆ ಹೆಚ್ಚಿನ ಹೆಂಗಸರು ಹೇಳುವುದೂ ಅದನ್ನೆ ಅಲ್ಲವೇ..? ಇದ್ಯಾವ ಸೀಮೆಯ ಮನಸ್ಥಿತಿಯೋ  ನನಗೆ ಗೊತ್ತಿಲ್ಲ) ಅಥವಾ ಸಮಾಜ ದೃಷ್ಠಿಕೋನ ಬದಲಾಗುತ್ತದೆ ಅಥವಾ ಏನಾದರೂ ಧನಾತ್ಮಕ ಪರಿಣಾಮ ಇದೆಯೆಂದು ನನಗನ್ನಿಸುವುದಿಲ್ಲ. ಅದರೆ ತೀರ ತೆರೆದು ತೋರುವುದೇ ಬದಲಾವಣೆ, ನಾನು ಡಿಫರೆಂಟು ಅನ್ನೋದಿದೆಯಲ್ಲ ಅದು ಸಜ್ಜನಿಕೆಯ ಗಡಿಯನ್ನು ಮೀರುವಂತಿರಬಾರದು. ಅಷ್ಟೆ. ಕಾರಣ ನಾನೂ ಟ್ಯಾಟೂ ಹಾಕಿಕೊಳ್ಳುತ್ತೇನೆ ಎಂದು ಗಂಡಸೂ ಅರ್ಧ ಬನೀನು, ಲಂಡ ಪ್ಯಾಂಟು, ತೆರೆದೆದೆಯ ಕೋಟು, ಅಂಡಿನ ಸೀಳು ಕಾಣುವ ಇಜಾರ, ಭಯಾನಕ ಕೂದಲು ಬಿಟ್ಟ ಬಗಲು ತೋರಿಸುವ ಅರೆಬರೆ ತೋಳಿನ ಅಂಗಿ, ಬರಗೆಟ್ಟ ಬೆನ್ನಿನ ಬಕ್ಕ ಬಾರಲ ಬೆನ್ನಿನ ಅವಸ್ಥೆ ಕಾಣಿಸುವಂತೆ ಬಟ್ಟೆಗೆ ಫ್ಯಾಶನ್ ಎಂದು ಕೂತರೆ ಆದೀತಾ..? ಹೆಸರು ಮಾಡಿದ ತಕ್ಷಣ ಏನೂ ಮಾಡಿದರೂ ಕೆಲವರು ಜೈಕಾರ ಹಾಕಬಹುದು ಆದರೆ ಒಪ್ಪಿತವಲ್ಲದ ಕ್ರಿಯೆ ಋಣಾತ್ಮಾಕ ಪ್ರಕ್ರಿಯೆಗೆ ನಾಂದಿಹಾಡುತ್ತದೆ ಮತ್ತದಕ್ಕೆ ಎಲ್ಲೋ ನಮ್ಮದೇ ವ್ಯಕ್ತಿ ಬಲಿಯಾದಲ್ಲಿ ಏನಾದೀತು..? ಚರ್ಚೆ ನಿಮಗೆ ಬಿಟ್ಟಿದ್ದು. ಇಲ್ಲದಿದ್ದರೆ ನಾನ್ಯಾಕೆ ಇದನ್ನೆಲ್ಲಾ ಪಿಸುನುಡಿದೇನು..?

Saturday, July 1, 2017

ಆಕೆಗೆ ಪ್ರೀತಿ...ನೇ ಬೇಕು ಎಂದೇಕೆ ಹೇಳುತ್ತಿದ್ದೇನೆಂದರೆ...?

ಈ ಜೀವಗಳು ಇಂದಿಗೆ ಸರಿಯಾಗಿ ಐವತ್ತು ಸಾವಿರ ವರ್ಷಗಳ ಹಿಂದೆ ಜನಿಸಿದವು ಎಂದು ಇರಿಸಿಕೊಂಡರೂ ಸರಿಯಾಗಿ ನಾವು ಮನುಷ್ಯರಾಗಿ ಬದುಕಲಾರಂಭಿಸಿದ್ದೇ ಐದಾರು ಸಾವಿರ ವರ್ಷಗಳಿಂದೀಚೆಗೆ. ಅಷ್ಟಕ್ಕೂ ಇತ್ತಿಚಿನ ಐದುನೂರು ವರ್ಷಗಳಲ್ಲಿ ಬಾಂಧವ್ಯ.. ಮನಸ್ಥಿತಿ, ಫೆಮಿನಿಸಮ್ಮು, ಮೇಯಿಲ್ ಡಾಮಿನೇಶನ್ನು ಇತ್ಯಾದಿಗಳಲ್ಲಿ ಏರುಗತಿಯಲ್ಲಿ ಬದಲಾಗಿದ್ದು ಹೆಣ್ಣಿನ ಮನಸ್ಥಿತಿ ಮತ್ತು ಆಕೆಯ ನ್ಯೂರಾನ್ಸ್‍ಗಳು. ಆದರೆ ಪುರುಷನ ನೈಸರ್ಗಿಕವಾಗಿ ವಿನ್ಯಾಸದೋಷ ಸರಿಪಡಿಸಲಾಗದ ದುರಂತವೇ.. ಇನ್ನಷ್ಟೆ ನಮ್ಮ ಒಳಗನ್ನು ನಾವೇ ನೋಡಿಕೊಳ್ಳಬೇಕಿದೆ.
ಆಕೆಯ ಮನಸ್ಸಿನಲ್ಲೊಂದು ಪ್ರೀತಿಯ ಕೋಟೆಯಿದೆ. ಅದು ಹದಿನಾರರ ತುದಿಮೊಗ್ಗರಳುವ ನವಿರುತನವಿರಲಿ, ನಲ್ವತೈದರ ಮುಟ್ಟು ನಿಲ್ಲುವ ಮೆಟ್ಟಿಲೇ ಇರಲಿ. ಯಾವನೊಬ್ಬನೂ ಗಂಡಸೆನ್ನುವ ಕಾರಣಕ್ಕೆ ಕೋಟೆಯನ್ನು ಗೆಲ್ಲುವ ಹುಮ್ಮಸಿನಲ್ಲಿ ಅಖಾಡಕ್ಕಿಳಿದು ಆಕೆ ಜಗಮರೆಯುವಂತೆ ಮನಸಾರೆ ಗೆದ್ದು, ಕಾಲೂರಿದ್ದು ತುಂಬ ಕಡಿಮೆ. ಅಕಸ್ಮಾತ ಹಾಗೆ ನಿಜಾಯಿತಿಯಿಂದ ಕಾಲೂರಿದ್ದೇ ಆದರೆ, ಎಂಥದ್ದೇ ಸ್ವರ್ಗವನ್ನೂ ಎಡಗಾಲಲ್ಲಿ ಸರಿಸುವಷ್ಟು ಸುಖವನ್ನು ಇದೇ ಭೂಮಿಯ ಮೇಲೆ ಆಕೆಯಿಂದಲೇ ಸೂರೆ ಹೊಡೆದನೆನ್ನುವುದನ್ನು ದೇವರೇ ದೃಢೀಕರಿಸಿದ್ದಾನೆ.
ಅದಕ್ಕೆ ಕಾರಣ ಆಕೆಯ ಮನಸ್ಸು. ಅದೊಂದು ಯಾರಿಗೂ ತೆರೆಯದ ದಿಡ್ಡಿಬಾಗಿಲಿನಂತಹದ್ದು. ಅಲ್ಲಿ ಪತಾಕೆ ಹಾರಿಸಬೇಕೆಂದರೆ ಆಕೆಯನ್ನು ನಿಷ್ಕಳಂಕವಾಗಿ ಪ್ರೀತಿಸುವ, ಅವನ ನೆನಪಾಗುತ್ತಿದ್ದಂತೆ ಆಕೆಯ ಮೈಮೇಲೆ ಜಾಜಿಯ ಮಳೆಗೆರೆದಂತೆ ಅನುಭೂತಿಯನ್ನು ಉಂಟುಮಾಡಿದ್ದೇ ಆದರೆ ನಿಜಕ್ಕೂ ಅವನು ಆಕೆಯ ಮನಸ್ಸಿನ ಎಲ್ಲ ಕೋಣೆಗಳ ಕದಗಳನ್ನು ಸಮುದ್ರದ ಹೆದ್ದೆರೆಯ ವೇಗದಲ್ಲಿ ಆಕ್ರಮಿಸಿ ತೆರೆದುಬಿಟ್ಟಿದ್ದಾನೆಂದೇ ಅರ್ಥ. ಹಾಗೆ ಅವನು ಒಳಬಂದ ಕೂಡಲೇ.... ದಿಡ್ಡಿ ಬಾಗಿಲೀಗೀಗ ಒಳಗಿನಿಂದ ಅಗುಳಿ.
ಪ್ರತಿ ಹೆಣ್ಣಿನ ಮನಸ್ಸಿನ ಒಂದು ಮೂಲೆಯಲ್ಲೂ ಯಾವನೂ ತಡುವಲಾಗದ, ಒಂದು ಬಂಧದ ವರ್ತುಳ ಸುಮ್ಮನೆ ಕವಚಿಕೊಂಡು ಕೂತು ಬಿಟ್ಟಿರುತ್ತದೆ. ಆ ಮನಸ್ಸಿನ ಭಾವತಂತುವಿಗೆ ಸರಿಸಮಾನವಾಗಿ ತಂತಿಯನ್ನು ಮೀಟುವವನೊಬ್ಬ ಸಿಗುವವರೆಗೂ ಅದೂ ನಿಸ್ಸಂದೇಹ ಹಾಗೆಯೇ ಕವಚಿಕೊಂಡೆ ಇರುತ್ತದೆ. ದುರಂತವೆಂದರೆ ಹೆಚ್ಚಿನ ಹೆಣ್ಣುಮಕ್ಕಳ ಅಂತಹ ದಿಡ್ಡಿ ಬಾಗಿಲು ಜೀವನ ಪೂರ್ತಿ ತೆರೆಯದೇ ಉಳಿದುಬಿಡುವುದೂ ತುಂಬಾ ಕಾಮನ್. ಹಾಗಾದಲ್ಲಿ ನಿಜಕ್ಕೂ ಈ ಭೂ ತೆಕ್ಕೆಗೆ ಬಂದೂ, ಸ್ವರ್ಗವನ್ನು ಇಲ್ಲೇ ಅನುಭವಿಸುವ ಅವಕಾಶದಿಂದ ಯಾವುದೋ ಒಂದು ಗಂಡು ಪ್ರಾಣಿ ವಂಚಿತವಾಗಿದೆ ಎಂದರ್ಥ.
ಹಾಗಾಗಿ ಜಗತ್ತು, ತಾಂತ್ರಿಕತೆ, ವಿಜ್ಞಾನ, ಅತೀಂದ್ರೀಯ ಶಕ್ತಿ, ಲಸ್ಟು, ಟೆಲಿಪತಿ, ಯೋಗ, ಆಲೆಮನೆ, ಮನೆಗಿಬ್ಬರು ನೌಕರಿ, ಮೂರು ಜನಕ್ಕೆ ನಾಲ್ಕು ಗಾಡಿಗಳು, ಇಬ್ಬರಿಗೂ ಪ್ರತ್ಯೇಕ ಬೆಡ್‍ರೂಮು, ಮನೆಗೆರಡು ಟಾಯ್ಲೆಟ್ಟು, ಆಕಾಶದಲ್ಲೂ ತರಕಾರಿ, ಸೂರ್ಯಂಗೆ ಸ್ವಿಚ್ಚು, ಮನೆ ಮನೆಗೂ ಬೋರ್ ವೆಲ್ಲು, ಕಳೆದು ಹೋಗುತ್ತಿರುವ ವೆಲ್‍ಫೇರು, ವಯಸ್ಸನ್ನು ಯಾಮಾರಿಸುವ ದಿರಿಸುಗಳು, ಬಯಸಿ ಬಯಸಿ ಬದಲಾಗುತ್ತಿರುವ ಮೂರನೆಯ ಲಿಂಗಿ, ಸರಕ್ಕನೆ ಅವನ ನೆನಪೇ ಆಕೆಯನ್ನು ಒದ್ದೆಗೀಡುಮಾಡುವ ಫೀಲು.. ಹೀಗೆ ಯಾವ್ಯಾವುದೋ ಸಂಬಂಧವೇ ಇಲ್ಲದ ವಿಷಯದಲ್ಲೂ ಆಕೆ ಬೆಳೆದು ಸರಸರನೇ ಎದ್ದುನಿಂತು ಬಿಡುತ್ತಿದ್ದಾಳೆ.
ಇತ್ತಿಚಿನ ಎರಡು ನೂರು ಚಿಲ್ರೆ ವರ್ಷಗಳಲ್ಲಿ ಹೆಣ್ಣು ತನ್ನನ್ನು ತೆರೆದುಕೊಂಡ ವೇಗಕ್ಕೆ ಗಂಡು ತೆರೆದುಕೊಂಡಿಲ್ಲದ್ದು ಸೂಕ್ಷ್ಮವಾಗಿ ಅವಲೋಕಿಸಿದರೆ ಗೊತ್ತಾಗುತ್ತದೆ. ಕಾರಣ ವೈಜ್ಞಾನಿಕವಾಗಿ ಗಂಡು- ಹೆಣ್ಣಿನ ಮನಸ್ಥಿತಿಯನ್ನು ನಿರ್ಧರಿಸುವ ಮೆದುಳಿನ ಅಂತರ ಮತ್ತು ಅದನ್ನು ಜೋಡಿಸುವ ಭಾಗದಲ್ಲಿರುವ ಮೂಲ ವ್ಯತ್ಯಾಸದಲ್ಲೇ ಪ್ರಮಾದಭರಿತ ಜುಗಾಡಿದೆ. ಹಾಗಾಗಿ ಗಂಡು ಪ್ರಾಣಿಯನ್ನು ಪಳಗಿಸುವ ಹೊತ್ತಿಗೆ ಹೆಣ್ಣು ತನ್ನ ಬದುಕಿನ ಅರ್ಧ ಚಾಪೆ ಸುತ್ತಿರುತ್ತಾಳೆ.
ಅಸಲಿಗೆ ಆಕೆಗೆ ಜೀವನದಲ್ಲಿ ಬೇರೇನೂ ಬೇಕೆ ಆಗಿಲ್ಲ. ಹಾಗಂತ ಉಪವಾಸ ಇಡು.. ನಾನು ನಿನ್ನ ಪ್ರೀತೀಲಿ ಹಂಗೆ ಇದ್ದು ಸಾಯ್ತಿನಿ ಅಂತಾನೂ ಯಾವ ಹೆಣ್ಣೂ ಫಿಲ್ಮಿ ಡೈಲಾಗು ಹೇಳಲಾರಳು. ಆದರೆ ಯಾವತ್ತೂ ತನ್ನ ಹುಡುಗ ತನ್ನನ್ನು ಮಾತ್ರ ಪ್ರೀತಿಸಲಿ, ತನ್ನೊಬಳನ್ನೇ ಪ್ರಾಮಾಣಿಕವಾಗಿ ಪ್ರೀತಿಸಲಿ ಎನ್ನುವುದಿದೆಯಲ್ಲ ಅದನ್ನು ಯಾವತ್ತೂ ಬದಲಿಸಲಾರಳು. ಆದರೆ ಅದು ಗೊತ್ತಾಗುವ ಹೊತ್ತಿಗೆ ಆಕೆಯಲ್ಲಿ ಪ್ರೀತಿ ಸತ್ತು ಹೋಗಿರುತ್ತದೆ. ಇವನಲ್ಲಿ ಹೊಸದಾಗಿ ಚಿಗರೊಡೆಯಲು ಕಾದಾರಿದ ಮೇಲೆ ತೇವವೇ ಇರುವುದಿಲ್ಲ. ಬದುಕು ಅಲ್ಲಲ್ಲೆ ಪಾಚಿಯಂತೆ ಜಾರತೊಡಗುತ್ತದೆ. ಅದ್ಯಾಕೆ ಪುರುಷನೊಬ್ಬ ಹೆಣ್ಣಿನಷ್ಟೆ ವೇಗವಾಗಿ ಬದುಕನ್ನು ನಿರಂತರತೆಯ ದಾರಿಯ ಮೇಲೆ ಹಳಿ ಇಟ್ಟು ಓಡಿಸುತ್ತಿಲ್ಲ..? ಉತ್ತರ ಹೀಗೇ ಎಂದು ಯಾವೊಬ್ಬನೂ ಕೊಡುತ್ತಿಲ್ಲ. ಅಘಾತವೆಂದರೆ ತನ್ನೊಬ್ಬಳನ್ನೆ ಪ್ರೀತಿಸಲಿ ಎಂದಷ್ಟೆ ಆಪ್ತವಾಗಿ ಅವನನ್ನು ಪ್ರೀತಿಸಿ ಕಾಯ್ದಿರಿಸಿಕೊಳ್ಳಬೇಕಿರುವ ಹೆಣ್ಣೂ ಆ ವಿಷಯದಲ್ಲಿ ಬೆಳೆದೇ ಇಲ್ಲವಾ..? ಅವನನ್ನು ಹಾಗಿರಿಸಿಕೊಳ್ಳುತ್ತಿಲ್ಲವೇಕೆ..? ಸುಮ್ಮನೆ ಒಬ್ಬರನ್ನೇ ದೂಷಿಸಬೇಕೆ...? 
ಗಂಡಿಗೆ ಪರಮ ಆಕರ್ಷಣೆಯಾಗಿ ಸೆಕ್ಸೂ, ಹೆಣ್ಣಿಗೆ ಅದು ಕೊನೆಯದಾಗಿ ಸಂದಾಯವಾಗೋ ಕಂತಾಗಿಯೂ  ಬದಲಾಗುವಾಗ, ಗಂಡು ಪುನುಗು ಬೆಕ್ಕಿನಂತೆ ಎದ್ದು ನಿಲ್ಲುವುದಕ್ಕೂ, ಹೆಣ್ಣು ಕೇವಲ ಕಣ್ಣಿನ ನೋಟದಲ್ಲೇ, ಕೂತಲ್ಲೇ, ಮಾತೇ ಆಡದೆ ಒದ್ದೆಯಾಗಿ ಬಿಡುತ್ತಾಳಾದರೆ ಅದಕ್ಕೆ ಕಾರಣ ವೈಯಕ್ತಿಕವಾಗಿ ನೈಸರ್ಗಿಕವಾಗಿ ಇಬ್ಬರ ರಚನೆಂiÀಲ್ಲಿರುವ ವ್ಯತ್ಯಾಸವೇ ಕಾರಣ ಹೊರತಾಗಿ ಉದ್ದೇಶ ಪೂರ್ವಕವಾಗಿ ಪ್ರಕ್ರಿಯೆಯ ಮೂಲಕ ನಮಗೆ ಬೇಕಾದಂತೆ ಆಕೆಯ/ಅವನ ಯಾವ ಕ್ರಿಯೆಯನ್ನು ನಾವು ನಮಗೆ ಬೇಕಾದಂತೆ ನಿಯಂತ್ರಿಸಲಾರೆವು. 
ಇದಕ್ಕೆಲ್ಲಾ ಕಾರಣವಾಗಿರುವ ಮನಸ್ಸನ್ನು ನಾವು ನಿಯಮಿತವಾಗಿ,ಮನಸ್ಸನ್ನು ಆವರಿಸಿಕೊಳ್ಳುವ ಅನುಭೂತಿಯನ್ನು ಅನುಭವಿಸಲು ಅದನ್ನು ಸಿದ್ಧವಾಗುವಂತೆ ಹದಹೊಡೆಯದಿರುವುದೇ ನಮ್ಮ ಪ್ರಮುಖ ಸೋಲು. ಆಕೆಗೆ ಬೇಕಿರುವುದೇ ಪ್ರೇಮವಾದರೆ, ಅವನದ್ದು ಶುದ್ಧ ಕಾಮ ಎಂದುಕೊಂಡಿರೋದು ದೋಷವಲ್ಲ. ಅದರೆ ಅದನ್ನು ಹೆಣ್ಣಿಗೆ ತಿಳಿಸುವ ವಿಧಾನ ಯಾವುದು..? ಕಾರಣ ಉನ್ಮಾದಕ್ಕೆ ಬೀಳುವ ಹೆಣ್ಣು ಪುರುಷನಿಗಿಂತಲೂ ಮೇಲೆ. ಇದನ್ಯಾಕೆ ಲೆಕ್ಕಕ್ಕೆ ತೆಗೆದುಕೊಳ್ಳುವುದಿಲ್ಲ. ಇಬ್ಬರೂ ಹಂಚ ಹೊರಟಿದ್ದು ಬರೀ ಹಸಿಹಸಿ ಕಾಮ. ಆಳಕ್ಕಿಳಿದು ಹುಡುಕಿ ನೋಡಿದರೆ ಪ್ರೇಮವೆಲ್ಲಿದೆ..? ಎರಡಕ್ಕೂ ಮ್ಯಾಚೇ ಇಲ್ಲ. ಪ್ರೇಮವಿಲ್ಲದೇ ಕಾಮವಿಲ್ಲ...ಬಾಕಿ ಎಲ್ಲ ಬರೀ ಲಸ್ಟು ಎಂದರೂ ಅದು ಹುಟ್ಟುವುದೂ ಪ್ರೀತಿಯಲ್ಲೆ.
ಒದ್ದೆಯಾದ ಬಾವಿಯೊಂದೆ ಅಂತಿಮವಲ್ಲ. ಹಾಗಂತ ಪುರುಷ ಕಾಮದಿಂದ ಪ್ರೇಮಿಸುತ್ತೇನೆಂದು ಹೊರಟು ನಿಂತು ಆಕೆಯನ್ನು ಗೆದ್ದ ಅಥವಾ ತಾನು ಸೋತಾದರೂ ಗೆದ್ದ ಉದಾಹರಣೆಗಳಿಲ್ಲ. ಆಕೆ ಬರೀ ಪ್ರೀತಿಸುತ್ತೇನೆಂದು ತನ್ನ ಕೋಟೆ ಕಾಯ್ದುಕೊಂಡ ಉದಾ.ಗಳೂ ಇಲ್ಲ.
ಅದೇ ಆಕೆಯಲ್ಲೊಂದು ಪ್ರೀತಿಯ ದೀಪವಿಟ್ಟು ಅಗೀಗಿಷ್ಟು ಅದಕ್ಕೆ ಸರಿಯಾಗಿ ಪ್ರಾಣವಾಯುವೆಂಬ ಮನಸ್ಸಿನ ಎಣ್ಣೆಯನ್ನು ಹದವಾಗಿ ಹರಿಸಿ ನೋಡಿ. ಕಾಮನೆಗಳು ಪ್ರೀತಿಯಿಂದ ಕೆರಳಿದ್ದೇ ಆದಲ್ಲಿ, ಆಕೆಯ ಮನಸ್ಸು ಪ್ರೀತಿಯಿಂದ ಹದ ಹೊಡೆದು ಮಂಚಕ್ಕೆ ಬಂದಿದ್ದೇ ಆದಲ್ಲಿ ಗಂಡಸಿನ ತಾಕತ್ತು ಬಸವಳಿದು ಹೋಗುತ್ತದೆ. ಇದನ್ನು ಅದೇ ಪ್ರೀತಿಯಿಂದ ಸಾಧಿಸುವ ಗಂಡಸು ಎಲ್ಲದರಲ್ಲೂ ಗೆದ್ದು ಬೀಗುತ್ತಾನೆ. ಹಾಗೆ ಗೆಲ್ಲಲು ಸೋಲುವ ಹೆಣ್ಣು ಸೋತು ಗೆಲ್ಲುತ್ತಾಳೆ. ಅಂತಿಮವಾಗಿ ಗೆಲ್ಲುವ ಮುನ್ನಿನ ಸೋಲಿನಲ್ಲೂ ಹಿತವಾದ ಸೊಬಗು ಅವರ ಮೈಮನದಲ್ಲಿ ಅರಳುತ್ತದೆ. ಯಾರಿಗೆ ಬೇಕಿಲ್ಲ ಇಂತಹ ಜೊತೆ. ಪ್ರೀತಿ..ಉಮೇದಿ... ಆ ನಿರಂತರತೆ.. ಆ ಮುದ.. ಆ ಹೊಸ ಹೊನಲು..? ಆದರೆ ಇದ್ದ ಬಾಂಧವ್ಯದಲ್ಲೇ ಅದನ್ನೆಲ್ಲಾ ಅರಳಿಸಿಕೊಳ್ಳೊದು ಹೇಗೆ..? 
ನೀವು ಅವಳಿಗೆ ಹೇಳಲಾರದೆ ಉಳಿಸಿಕೊಂಡ ಅಹಂನ ಉಸಿರುಗಳಿವೆಯಲ್ಲ, ಹುಡುಗಿ ಅವನಿಗೆ ಹೇಳದೆ ತಡವರಿಸುವ ತುಮಲಗಳಿವೆಯಲ್ಲ ಅವನ್ನೆಲ್ಲಾ ಕೊಸರಾಡುತ್ತಾ ಉಸಿರ್ಗರೆದು ಸಮಜಾಯಿಸುವ ಬದಲಿಗೆ ಪ್ರೀತಿಸಿ ಬಿಡಿ. ಏನಾಗಿದ್ದರೂ ಎಲ್ಲಾ ಮರೆತು. ಅದೊಂದು ಚೆಂದದ ಮುಂಜಾನೆಯ ಇಬ್ಬನಿಯಲ್ಲಿ ತೊಯ್ದ ಚೆಂಗುಲಾಬಿಯ.. ಪಕಳೆಯಂತಹದ್ದು. ಹನಿ ಸಿಂಪಡಿಸಿಕೊಳ್ಳಬೇಕಿರುವ ನಾವು ಯೋಚಿಸಬೇಕಿದೆ.. ಅಂತಹ ಹನಿಯ ಮೂಲ ಯಾವುದು..? ಅದು ಪ್ರೀತಿನೇ ಅಲ್ವಾ.. 
ನಾನು ಹೇಳಹೊರಟಿದ್ದೂ ಅದನ್ನೆ.. ಮೊನ್ನೆಯಷ್ಟೆ ವರ್ಷ ತುಂಬಿದ ಈ ಪುಸ್ತಕಕ್ಕೀಗ ನಾಲ್ಕನೆಯ ಮುದ್ರಣದ ಸಂಭ್ರಮ ಇದೇನಿದ್ದರೂ ಬರೀ ಮುನ್ನುಡಿ. ಉಳಿದಂತೆ "ಯಾವ ಪ್ರೀತಿಯೂ ಅನೈತಿಕವಲ್ಲ.." ಅಂತಾ ನಾನು ಪಿಸುನುಡಿಯುವ ಅಗತ್ಯ ಇದೆಯೇ..