Monday, June 26, 2017

ಯಾರೂ ಯಾವತ್ತೂ ನಿಕೃಷ್ಟರಲ್ಲ... ಕಾಲ ಬದಲಿಸುತ್ತದೆ.
ನಾವು ನಾಳೆ ಯಾರು ಏನಾಗುತ್ತೇವೆಯೋ ಯಾರಿಗೂ ಗೊತ್ತಿಲ್ಲ. ಅದರೆ ಪ್ರತಿಯೊಬ್ಬರೂ ನನಗೆ ಮಾತ್ರ ಏನೂ ಆಗುವುದಿಲ್ಲ ಎನ್ನುವ ಗ್ಯಾರಂಟಿಯೊಂದಿಗೆ ಬದುಕುತ್ತಿರುತ್ತೇವೆ. ಪಕ್ಕದಲ್ಲೇ ಮಾರಣಾಂತಿಕ ಆಕ್ಸಿಡೆಂಟ್ ಆಗಿದ್ದರೂ ನಮ್ಮ ಕಾನ್ಫಿಡೆನ್ಸು ಹೇಗಿರುತ್ತದೆಂದರೆ, ಮರುಕ್ಷಣದಲ್ಲೇ ಎಂಭತ್ತರ ವೇಗಕ್ಕೆ ಪೆಡಲು ಒತ್ತುತ್ತಿರುತ್ತೇವೆ. ಅದು ಆಗಿನ ಕ್ಷಣಿಕ ದಿಗಿಲು. ಕಾರಣ ನಮ್ಮ ಬದುಕಿಗೆ ಸಮ್ಮತವಲ್ಲದ ಸಂಬಂಧಿಸಿಲ್ಲದ ಕ್ರಿಯೆಯಿಂದಾಗಿ ನಾವು ನಿರಾಳ. ಆದರೆ ದಶಕಗಳ ಕಾಲಾವಧಿಯಲ್ಲಿ ನಾವು ಏನಾಗಲಿಕ್ಕಿಲ್ಲ ಎಂದು ನಿರ್ಧರಿಸಿರುತ್ತೇವೆಯೋ ಅದು ತಿರುಗುಮುರಾಗಾಗಿ ಎದುರು ನಿಂತಾಗಿ ಬದುಕು, ಮನಸ್ಸು ಎಲ್ಲಾ ಕಕ್ಕಾಬಿಕ್ಕಿ ಎನ್ನುವುದಕ್ಕಿಂತಾ ಅಂತಹ ಪರಿಸ್ಥಿತಿಯಲ್ಲಿ ಮುಖ ಮತ್ತು ಮನಸ್ಸು ಎದ್ದು ನಿಲ್ಲಲೆತ್ನಿಸಿದರೂ ಏನೂ ಇರುವುದಿಲ್ಲ.ಸುಮಾರು ವರ್ಷಗಳ ಹಿಂದೆ ನಾನು ಏನೂ ಅಲ್ಲದಿದ್ದಾಗ, ನನಗೊಂದು ದಿಕ್ಕು ದೆಸೆ ಅಂತಲೇ ಇಲ್ಲದಿದ್ದಾಗ ಇದ್ದ ಚಿಕ್ಕ ಆಸರೆಯಂತಹ ನೌಕರಿಯ ಭಾಗವಾಗಿ ದಿನಾ ಬೆಳಿಗೆದ್ದು ಕಾರಿಡಾರನಲ್ಲಿ ನಡೆದುಕೊಂಡು ಹೋಗುವಾಗ ಮೊದ ಮೊದಲು ಅರ್ಥವಾಗದ ಮಾತಿಗೆ ಕಿವಿಗೊಡುತ್ತಿರಲಿಲ್ಲ. ಅಮೇಲಾಮೇಲೆ ಅದು ನಮ್ಮನ್ನೆ ಗೇಲಿ ಮಾಡಿಕೊಂಡು ಆಡಿಕೊಳ್ಳುತ್ತಿದ್ದಾರೆ ಎಂದರಿವಾಗಿತ್ತು. ಬೇರೇನೂ ಸಿಗದಿದ್ದರೂ ನಮ್ಮ ಬಟ್ಟೆ ಬರೆಗಳೂ ಗೇಲಿಗೀಡಾಗುತ್ತಿದ್ದವು. ಉಳಿದ ವಿಷಯಗಳೇನೆ ಇರಲಿ ಮೊದಲಿನಿಂದಲೂ ನಾನು ಡ್ರೆಸ್ಸು ಮತ್ತು ಆಯಾ ಹೊತ್ತಿಗಿನ ಕೆಲಸದ ವಿಷಯದಲ್ಲಿ ಅಚ್ಚುಕಟ್ಟು. ಅಂತಹ ಶಿಸ್ತು ನಮಗೆ ಇನ್ನಿಲ್ಲದ ವಿಶ್ವಾಸ ಕೊಡುತ್ತಿರುತ್ತದೆ. ಇದು ಆಗಲೂ ಈಗಲೂ ಹಲವರ ಕಿರಿಕಿರಿಗೂ, ಕಹಿಗೂ ಕಾರಣವಾಗಿದೆ. ಆಗಿನ ಕಾಲದಲ್ಲಿ ಹಾಗೆ ಗೇಲಿ ಮಾಡುತ್ತಿದ್ದವರಲ್ಲಿ ಅವನೊಬ್ಬನಿದ್ದ. ಅವನೇನು ಕೆಲಸ ಮಾಡುತ್ತಿದ್ದ ಸರಿಯಾಗಿ ಯಾರಿಗೂ ಗೊತ್ತಿಲ್ಲ. ಆದರೆ ಕಂಡೊರ ಮೇಲೆಲ್ಲಾ ಸುಖಾಸುಮ್ಮನೆ ಏರಿ ಹೋಗುವುದೂ, ನಾಲ್ಕಾರು ಹುಡುಗರನ್ನು ಕಟ್ಟಿಕೊಂಡು ಧುಮಡಿ ಮಾಡುವುದು ಮಾಮೂಲಿಯಾಗಿತ್ತು. ಸಣ್ಣಸಣ್ಣ ಕಾರಣಕ್ಕೂ, ನಮಸ್ಕಾರ ಎಂದರೂ ಮೇಮೇಲೆ ಏರಿಬರುತ್ತಿದ್ದ. ಅವನಿಗೆ ಇಂತಹದ್ದಕ್ಕೆಲ್ಲಾ ಕೇವಲ ಅವಕಾಶ ಬೇಕಿತ್ತು ತನ್ನ ರುಬಾಬು ತೋರಿಸಲು ಅಷ್ಟೆ. ಯಾರೂ ಮಾತಾಡದಷ್ಟು ಕೆಟ್ಟಾ ಕೊಳಕಾಗಿಯೂ, ತಲೆ ಬುಡವಿಲ್ಲದ ಗೇಲಿ ಮಾಡುವುದರಿಂದಲೂ ಅವನು ಸುತ್ತಮುತ್ತಲಿಗೆ ಯಾರೂ ತಡುವಿಕೊಳ್ಳಲಾಗದಷ್ಟು ಅಸಹ್ಯದ ಪರಮಾವಧಿಯಲ್ಲಿದ್ದ.ಆಗಲೇ ನಾನು ಒಂದಿಷ್ಟು ಅವನ ಬಗ್ಗೆ ಮಾಹಿತಿ ಕಲೆ ಹಾಕಿದೆ. ಅವನೊಬ್ಬ ಆಫೀಸ್‍ಬಾಯ್. ನೀರು ಟೀ ತಂದು, ಟೇಬಲ್ ಒರೆಸಿ ಸಾಹೇಬರಿಗೆ ಊಟಕ್ಕಿಟ್ಟು, ಅವರ ತಟ್ಟೆ ಎತ್ತುತ್ತಿದ್ದ. ಅದರೆ ರೋಪು ಮಾತ್ರ ಆ ಅಧಿಕಾರಿಗಿಂತಲೂ ದೊಡ್ಡದಿತ್ತು. ಕಲಿತು ಬಿಟ್ಟಿದ್ದು ಏಳನೆಯ ತರಗತಿ. ಅದಕ್ಕಿಂತ ದೊಡ್ಡ ಕೆಲಸ ದೊರಕುವುದೂ ಸಾಧ್ಯವಿರಲಿಲ್ಲ. ಅದವನ ಕೀಳರಿಮೆಯೋ, ಸಂಕಟವೋ ನಮ್ಮ ಮೇಲೆಲ್ಲಾ ಎಗರುತ್ತಾ ಪಬ್ಲಿಕ್ಕಾಗಿ ಬೈದು ಮರ್ಯಾದೆಗೀಡು ಮಾಡುತ್ತಿದ್ದ.ನಾನೂ ಅಲ್ಲಿಂದ ಹೊರಬಿದ್ದೆ. ದಶಕಗಳೇ ಉರುಳಿದವು. ಊರು ರಾಜ್ಯ ಮತ್ತೆ ನಗರ ಎಲ್ಲಾ ಬದಲಾದವು. ಆದರೂ ಮನುಶ್ಯ ಅವನ ಚಹರೆ ಬದಲಾಗುತ್ತದೆಯೇ..? ಮೊನ್ನೆ ಮೊನ್ನೆ ಒಂದು ಖಾಸಗಿ ಕಾರ್ಯಕ್ರಮಕ್ಕೆ ಫಾರ್ಮ್‍ಹೌಸಿಗೆ ಹೋಗಿದ್ದೆ. ಅಲ್ಲೊಂದು ಚಿಕ್ಕ ಸಮಾರಂಭವಿತ್ತು. ಸುಮ್ಮನೆ ಒಂದಿಪ್ಪತ್ತು ಸ್ನೇಹಿತರು ಸೇರಿದ್ದೆವು. ಮಾತುಕತೆ, ಮೊಗೆಯ ಗೋಷ್ಠಿ. ನನಗೂ ಹೆಚ್ಚಿನ ಹಳೆಯ ಸ್ನೇಹಿತರು ಸಿಕ್ಕ ಖುಶಿಯಲ್ಲಿ ಲೋಕಾಭಿರಾಮವಾಗಿ ಹರಟಿ ಎದ್ದು ಬರುವಾಗ ಬೇಡ ಎಂದರೂ ಹಿಂದಿರುಗಿ ನೋಡಿದ್ದೆ.ನನ್ನ ಸಂಶಯ ನಿಜವಾಗಿತ್ತು. ಟೇಬಲ್ಲು ಒರೆಸಿ ನೆಲಕ್ಕೆ ಬಿದ್ದಿದ್ದ ತಿನಿಸಿನ ತುಣುಕುಗಳನ್ನು ಬಗ್ಗಿ ಎತ್ತಿಟ್ಟು, ಹಳೆಯ ಬಟ್ಟೆಯಿಂದ ನೆಲ ಒರೆಸುತ್ತ, ಕುಡಿದ ಗ್ಲಾಸುಗಳನ್ನು ಎತ್ತುತ್ತಾ ಅವನು ನೋಡುತ್ತಿದ್ದಾನೆ. ಅದು ಎದುರಿನವರು ನನ್ನ ಗುರುತು ಹಿಡಿದರಾ..? ನಾನು ಯಾರೆಂದು ಗೊತ್ತಾಗಿ ಹೋಯಿತಾ..? ಎನ್ನುವ ಅನುಮಾನ ಮತ್ತು ಅವಮಾನ ಭರಿತದ ದೃಷ್ಟಿ. ಆ ನೋಟದಲ್ಲಿ ತಾನೀಗಲೂ ತಟ್ಟೆ ಲೋಟ ಎತ್ತುತ್ತಿದ್ದೇನೆ, ನೆಲ ಒರೆಸುತ್ತಿದ್ದೇನೆ, ಹಿಂದ್ಯಾವತ್ತೋ ತಾನು ಎಗರುತ್ತಿದ್ದಾಗ "ನಿನ್ನ ಹಣೆ ಬರಹ ಇಷ್ಟೆ" ಎಂದು ಸುಮ್ಮನೆ ತಡುವಿಕೊಳ್ಳದೆ ಹೋಗುತ್ತಿದ್ದವನ ಮುಖದಲ್ಲಿ, ತನ್ನ ಬಗ್ಗೆ ಅವಹೇಳನ ಇದೆಯಾ ಎಂದು ಮುಖದ ಗೆರೆಗಳಲ್ಲಿ, ತನ್ನ ಬಗೆಗಿನ ಭಾವವನ್ನು ಹುಡುಕುವ ಅಪಸವ್ಯ ಭರಿತ, ಅವಮಾನಿತ ನೋಟ ಅದು. ಬೇರೇನೂ ಮಾಡಲಾಗದ ಆದರೆ ಹಿಂದಿನ ಕತೆ, ಈಗಿನ ಅವಮಾನಕರ ಸ್ಥಿತಿ ಎರಡಕ್ಕೂ ಏಗಲಾಗದ ಎಂಬ್ರಾಸಿಂಗ್ ನೋಟ ಅದು. ಕೆಲವೇ ಸೆಕೆಂಡು...ಬಿಟ್ಟು ಬಿಟ್ಟೆ. ಮತ್ತೆ ನಾನು ಅವನನ್ನು ದೃಷ್ಟಿಸಲಿಲ್ಲ.ಕಾರಣ ಈಗ ಅವನಿಗೆ ಏನಾದರೂ ಹೇಳಿ ಅಥವಾ ಮತ್ತೆ ನೋಡು ಈಗ ಹೆಂಗೆ...? ಎಂದು ಅವನನ್ನು ದೃಷ್ಟಿಸಿ ಆಗಬೇಕಾದುದೇನೂ ಇರಲಿಲ್ಲ. ಅಸಲಿಗೆ ಹಾಗೆ ಅವನ ಸ್ಥಿತಿಯನ್ನು ನಾನು ಮತ್ತೊಮ್ಮೆ ಅವನಿಗೆ ನೆನಪಿಸುವ ಅಗತ್ಯವೂ ಇರಲಿಲ್ಲ. ಅವನಿಗೆ ತನ್ನೆರಡೂ ಪರಿಸ್ಥಿತಿಗಳೂ ಅರಿವಿಗೆ ತಾನಾಗೇ ಬಂದಿರುತ್ತದೆ. ಅವಕಾಶ ಅಗತ್ಯ ಮತ್ತು ತಾಕತ್ತು ಇದ್ದಾಗ ಹಾರಾಡುವ ಮನುಶ್ಯ ನೆಲಕಚ್ಚಿದಾಗ ಮುಖದ ಮೇಲೆ ಚದರುವ ಅಂತಹ ಅವಮಾನಿತ ಖದರಿನ ಸತ್ತು ಹೋಗುವಷ್ಟು ಸಂಕಟದ ಲಕ್ಷಣಗಳನ್ನು ನಾನು ಸುಲಭವಾಗಿ ಗುರುತಿಸಬಲ್ಲೆ ಮತ್ತು ಹಾಗೆ ನನಗೆ ಗೊತ್ತಾಗುತ್ತಿದೆ ಎನ್ನುವುದನ್ನೂ ಎದುರಿನ ಅಪಮಾನಿತ ಸುಲಭಕ್ಕೆ ಅರಿತುಬಿಡುತ್ತಾನೆ ಸುಮ್ಮನೆ ಒಂದು ನೋಟಕ್ಕೆ. ಅದನ್ನು ಉದ್ದೇಶ ಪೂರ್ವಕವಾಗಿ ಮಾಡಲೇಬೇಕಿರುವುದಿಲ್ಲ. ಆದರೆ ಆ ಒಂದೆರಡು ಕ್ಷಣದಲ್ಲಿ ನಮಗರಿವಿಲ್ಲದೆ ಕೆಲವೊಂದು ಭಾವವನ್ನು ಹೊಮ್ಮಿಸುವ ಮನಸ್ಸು ಮತ್ತು ಮುಖ ಹಾಗು ನೆನಪು ಮತ್ತು ಎಲ್ಲಾ ಘಟನೆಗಳ ಇತಿಹಾಸ ಕ್ಷಣಾರ್ಧದಲ್ಲಿ ಮುಖಕ್ಕೆ ನುಗ್ಗಿ ಎಲ್ಲವನ್ನು ಮೇಳೈಸಿಬಿಡುತ್ತದೆ. ಕಾರಣ ಅದನ್ನು ಮರೆತಿರದ ಮನಸ್ಸು ನಿಮ್ಮ ಪ್ರತಿಕ್ರಿಯೆಗೂ ಮೊದಲೇ ಪ್ರತಿಬಿಂಬಿಸಿ ಬಿಟ್ಟಿರುತ್ತದೆ. ಅಷ್ಟೆ..ನೆಲಕ್ಕೆ ಕೂತೇ ಇದ್ದ ಅವನ ಭಂಗಿ, ಕೈಯ್ಯಲ್ಲಿದ್ದ ಮಾಪಿಂಗ್ ಬಟ್ಟೆ, ಎತ್ತಿದ್ದ ತಟ್ಟೆ ಜೊತೆ ತಲೆ ತಗ್ಗಿಸಿದ್ದ ಹುಳ್ಳಗಿನ ಮುಖ ಎಲ್ಲ ಒಂದೆರಡು ಸೆಕೆಂಡಿನಲ್ಲಿ ಗಮನಿಸಿದವನು ಸುಮ್ಮನೆ ನಡೆದು ಬಂದಿದ್ದೆ. ಅವನಿಗೆ ನೆನಪಿಸಿ ಆಗಬೇಕಾದುದೇನೂ ಇರಲಿಲ್ಲ. ಅವನೆದುರಿಗೆ ಈಗ ಹೆಂಗೆ..? ಎಂದು ನಾನು ಎದೆಯುಬ್ಬಿಸುವುದರ ಅವಶ್ಯಕತೆಯೂ ನನಗಿರಲಿಲ್ಲ. ಕೊಂಚವಾದರೂ ಮನುಶ್ಯ ಆಂತರಿಕವಾಗಿ ಬೆಳೆದಿದ್ದರೆ ಬದುಕು ಕಾಲಾನುಕ್ರಮದಲ್ಲಿ ಗಮ್ಯಗಳನ್ನು ಹೇಗೆ ತೋರಿಸಿತ್ತು ಎನ್ನುವುದವನ ಅರಿವಿಗೆ ಬಂದಿರುತ್ತೆ. ಆದರೆ ಇಂತಹ ಹಲವು ಘಟನೆಗಳಿಂದ ಪದೆ ಪದೆ ನನ್ನನ್ನು ನಾನು ಅಳೆದುಕೊಳ್ಳಲು ಅನುಕೂಲವಾಗುತ್ತಲೇ ಇರುತ್ತದೆ. ಪ್ರತಿ ದಿನ, ಘಟನೆಗಳು ನಮಗೆ ಸುತ್ತಿ ಹೊಡೆದಂತಹ ಪಾಠ. ಹಾಗೆ ಅವಕಾಶ ಇದ್ದಾಗ ಕಲಿತಷ್ಟೂ ಒಳ್ಳೆಯ ವಿದ್ಯಾರ್ಥಿಯಾಗುತ್ತೇನೆ. ಕಲಿಯುವ ಹಂಬಲ, ಅರ್ಜಿಸುವ ಮನಸ್ಸು ಹುಡುಕುತ್ತಲೇ ಇರುತ್ತದೆ. ಕಾಲ ಎಲ್ಲರಿಗೂ ಎಲ್ಲವನ್ನೂ ಕಲಿಸುತ್ತಲೇ ಇರುತ್ತದೆ. ಕೆಲವರಿಗೆ ಅರಿವಿಗೆ ಬರುತ್ತದೆ.. ಕೆಲವರಿಗೆ ಅರಿವಾಗುವ ಹೊತ್ತಿಗೆ ಜೀವನವೇ ಮುಗಿದಿರುತ್ತದೆ.ಲೈಫು ಇಷ್ಟೆ ಕಣ್ರಿ...

Monday, June 19, 2017

ಅಸಹಾಯಕತೆಯ ಕವಲುದಾರಿಗಳು...


ಕೆಲವೊಮ್ಮೆ ತೀರ ನಮ್ಮ ನಂಬಿಕೆ ಮತ್ತು ವಿಶ್ವಾಸಕ್ಕೆ ಪಾತ್ರರಾದವರೇ ಕೈ ಎತ್ತಿ ಬದುಕಿಗೆ ಬೀಗವಿಕ್ಕಿ ಬಿಡುತ್ತಾರೆ. ಅದರಲ್ಲೂ ಅಂತಹ ಮಾಹಿತಿ ಮತ್ತು ಘಟನೆಯ ಕೊನೆಯ ಕಂತು ಪೂರೈಸಿದಾಗಲೇ ತಿಳಿಯಬೇಕಾದವರ ಗಮನಕ್ಕೆ ಬರುವ ಹೊತ್ತಿಗೆ ನಿಜಕ್ಕೂ ಸಮಯ ಮೀರಿ ಹೋಗಿರುತ್ತದೆ. ಆಗಿದ್ದನ್ನು ಅರಗಿಸಿಕೊಂಡು ಮುಂದಡಿ ಇಡುವ ಹೊತ್ತಿಗೆ ಸುತ್ತಲಿನ ಜಗತ್ತು ನಮ್ಮ ಕೈಬಿಟ್ಟು ಬಹುದೂರ ನಡೆದುಹೋಗಿರುತ್ತದೆ.
ತೀರ ಮಧ್ಯವಯಸ್ಸಿಗೆ ಬರುವ ಹೊತ್ತಿಗೆ ಬಾಬಣ್ಣ ಮಗಳಿಗಿಷ್ಟು ಮಗನಿಗಿಷ್ಟು ಎಂದು ಎತ್ತಿಟ್ಟು ಬದುಕು ಕಟ್ಟಿಕೊಂಡಿದ್ದನಾದರೂ ಮಗ ಹೆಂಗೂ ಕೈಗೆ ಬರೋದು ತಡ ಅದೆ... ನಡೀತದೆ.. ಎಂದುಕೊಂಡು ಚೆನ್ನಾಗಿ ಓದುತ್ತಿದ್ದ ಮಗಳ ಮೇಲೆ ಅಪೂಟು ಪ್ರೀತಿ ಇಟ್ಟುಕೊಂಡು, ಎಲ್ಲವೂ ಅರಾಮಾಗಿ ನಡೆಯುತ್ತಿದೆ ಎಂದು ನಿಶ್ಚಿಂತೆಯಾಗೂ ಇದ್ದ.
ಚೆನ್ನಾಗೇ ಓದಿಕೊಂಡಿದ್ದ ಮಗಳು ಇಂಜಿನಿಯರ್ ಆದಳು. ಒಂದು ಕೆಲಸವೂ ಸಿಕ್ಕಿತು. "ಮಗಳು ಸೆಟ್ಲ್ ಆದಳು ಇನ್ನೇನು ಮದುವೆ ಮಾಡಿದರಾಯಿತು. ಎಲ್ಲಾರಗೂ ಜೀವನಾ ಹಿಂಗಿದ್ದರ ಭಾಳ ಅರಾಮ ನೋಡು.." ಎಂದು ಇತರರ ಒಳ್ಳೆಯತನಕ್ಕೂ ಮನದುಂಬಿ ಹಾರೈಸುತ್ತಿದ್ದ ಬಾಬಣ್ಣ ಆವತ್ತು ಕರೆ ಮಾಡಿದಾಗ ನನಗೂ ಒಂದಷ್ಟು ಹೊತ್ತು ಮನಸ್ಸು ಅಲ್ಲಾಡಿ ಹೋಗಿತ್ತು. ಕಾರಣ ಆ ದನಿಯಲ್ಲಿ ಜೀವವೇ ಇರಲಿಲ್ಲ. ಶಕ್ತಿಯಂತೂ ಅದಕ್ಕೂ ಮೊದಲೇ ಸತ್ತು ಹೋಗಿತ್ತು. ಚೆಂದವಾಗಿ ಮದುವೆ ಮತ್ತು ಬೀಗರು ಎಂದೆಲ್ಲಾ ಕನಸ್ಸು ಕಾಣುತ್ತಾ ಸಂಜೆಗಳಲ್ಲಿ ವಿಹರಿಸುತ್ತಿದ್ದ ಅವನ ಕನಸಿಗೂ, ಮನಸ್ಸಿಗೂ ಬೆಂಕಿ ಇಟ್ಟ ಮಗಳು ಎಲ್ಲಾ ಇದ್ದೂ ಏನೂ ಇಲ್ಲದವನೊಡನೆ ಓಡಿ ಹೋಗಿದ್ದಳು.
(ಈ ಓಡಿ ಹೋಗುವ ಹುಡುಗಿಯರ ಲಾಜಿಕ್ಕು ಅಧ್ಬುತವೂ ವಿಚಿತ್ರ ಆಗಿರುತ್ತವೆ. ಅದೆಷ್ಟು ಬಾಲಿಷ ಮತ್ತು ಚೈಲ್ಡಿಷ್ ಆಗಿರುತ್ತಾರೆಂದರೆ ಸ್ವಂತ ದುಡ್ಡು ದುಗ್ಗಾಣಿ ಚೆನ್ನಾಗಿದ್ದರೂ ಗೆಳೆಯನಾದವ ಆಗೀಗ ಗಿಫ್ಟು ಕೊಡುತ್ತಾನೆ ಎಂಬ ಕಾರಣಕ್ಕೆ ಓಡಿ ಹೋಗುವ ಹುಡುಗಿಯರಿದ್ದಾರೆ. ಅದರಲ್ಲೂ ಮೊಬೈಲ್ ಮತ್ತು ಅದರ ಚಾರ್ಜ್‍ಗಾಗಿ ಮುಲಾಜಿಲ್ಲದೆ ಖರ್ಚು ಮಾಡುತ್ತಾರೆ ಎನ್ನುವ ಕಾರಣಕ್ಕೇನೆ ಓಡಿ ಹೋಗುವ, ಸಂಬಂಧ ಹೊಂದಿದ ಹುಡುಗಿಯರ ಬಗ್ಗೆ ಆಗಾಗ ಸುದ್ದಿಯಾಗುತ್ತಲೇ ಇರುತ್ತದೆ. ಅದರ ಬಗ್ಗೆ ಮತ್ತೆ ಬರೆಯುತ್ತೇನೆ)
ಬಾಬಣ್ಣ ಕುಸಿದು ಕುಳಿತುಬಿಟ್ಟಿದ್ದ. ತಲೆ ಮೇಲೆ ಚಪ್ಪಡಿ ಎಳೆದ ಮಗಳು ಸಲೀಸಾಗಿ ಇನ್ಯಾವುದೋ ಜಾತಿಯವನನ್ನು ಮತ್ತು ಸರಿಯಾಗಿ ಕೆಲಸವೂ ಇಲ್ಲದವನೊಡನೆ ರೈಟ್ ಹೇಳಿದ್ದಳು. ಕಾಲ ಎಲ್ಲವನ್ನೂ ಮಾಯಿಸುತ್ತದಲ್ಲ ಹಾಗೆ ಬಾಬಣ್ಣ ಕೂಡಾ ಕ್ರಮೇಣ ಚೇತರಿಸಿಕೊಂಡ. ಇದ್ದೊಬ್ಬ ಮಗನಾದರೂ ಚೆನ್ನಾಗಿದ್ದರೆ ಸಾಕೆಂದು ಮುತುವರ್ಜಿಯಿಂದ ಓದಿಸಿದ. ಮಗಳ್ಯಾವಾಗಲೋ ತಪ್ಪಾಯಿತು ಎಂದು ಕಾಲಿಗೆ ಬೀಳ ಬಂದವಳನ್ನು ತಲೆ ನೇವರಿಸಿ ನಡೀ ಎಂದಿದ್ದ. ಆದರೆ ಮನಸ್ಸಿಗೆ ಅದ ಗಾಯ ಕೆರೆಯುತ್ತಾ ಉಳಿದಿದ್ದು ಮಾಯುವುದಾದರೂ ಹೇಗೆ..? ಒಟ್ಟಾರೆ ಬಾಬಣ್ಣ ಮತ್ತೆ ಎದ್ದು ನಿಂತಿದ್ದ. ನನಗೂ ಕ್ರಮೇಣ ಅವನೊಂದಿಗಿನ ಸಂಪರ್ಕವೂ ಕಡಿಮೆiÀiÁಗಿ ಮೊಬೈಲ್ ಹಾವಳಿಯಲ್ಲಿ ಬದುಕು ದ್ವೀಪದಂತಾಗತೊಡಗಿ ಬಾಬಣ್ಣ ಒಂದು ದಶಕದ ಅವಧಿಯಲ್ಲಿ ಹೆಚ್ಚು ಕಡಿಮೆ ಮರೆಯಾಗೇ ಹೋಗಿದ್ದ.
ಆವತ್ತು ಕಚೇರಿಯೊಂದಕ್ಕೆ ಹೋದವನು ಹೊರ ಬರುವಾಗ ಅಷ್ಟು ದೂರದಲ್ಲಿ ರಿಜಿಸ್ಟರ್ ಮಾಡುತ್ತಾ ಎನೋ ಬರೆಯುತ್ತ ಕುಳಿತಿದ್ದ ವ್ಯಕ್ತಿಯೊಬ್ಬರು ಕಾಣಿಸಿದ್ದರು. ವಯಸ್ಸು, ದೇಹ ಎರಡೂ ನಿವಾಳಿಸಿದಂತಿತ್ತು. ಆದರೂ ಬದುಕಿಗೆ ಅಧಾರವಾಗಿ ಕೆಲಸ ಮಾಡುವ ಅವರ ತನ್ಮತಯಿಂದಲೇ ಶರೀರ ಮತ್ತು ಮನಸ್ಸು ಎರಡೂ ಬಸವಳಿದದ್ದು ಕಾಣಿಸುತ್ತಿತ್ತು. ಹೌದೋ ಅಲ್ಲವೋ ಎನ್ನುತ್ತಲೇ "..ಬಾಬಣ್ಣಾ.." ಎಂದೆ. ಕನ್ನಡಕ ಏರಿಸುತ್ತಾ ನೋಡಿದವರು ಎದ್ದು ನಿಧಾನಕ್ಕೆ ಬಂದು ಸುಮ್ಮನೆ ಹೆಗಲಿಗೆ ಕೈ ಹಾಕಿ ನಿಂತು "..ನಡೀ ಚಾ ಕುಡಿಯೋಣ.." ಎನ್ನುತ್ತಾ ಬಂದರು. ನನಗೆ ಮಾತಾಡಿ ಏನಾಯಿತು ಎನ್ನುವುದೆಲ್ಲಾ ವಿಚಾರಿಸುವ ಅಗತ್ಯ ಇಲ್ಲದಂತೆ ಅವರ ಪರಿಸ್ಥಿತಿ ವಿವರಿಸುತ್ತಿತ್ತು.
ಮಗಳು ಇದ್ದಕ್ಕಿದ್ದಂತೆ ಬದುಕಿನಿಂದ ಕೈಯೆತ್ತಿದವಳು ಮಗ್ಗುಲನ್ನು ಒಮ್ಮೆ ಮುರಿದಿದ್ದಳು. ಆದರೂ ಅದೆಂಗೊ ಚೇತರಿಸಿಕೊಂಡ ಬಾಬಣ್ಣ ಮಗನ ಬದುಕಾದರೂ ಸುಗಮವಾಗಲಿ ಎಂದು ಎಲ್ಲಾ ರೀತಿಯಲ್ಲೂ ಪ್ರಯತ್ನಿಸಿದ್ದ. ಮಗ ಚೆನ್ನಾಗೂ ಓದಿದ, ವಿದೇಶಿ ರೀತಿನೀತಿ ಎಲ್ಲಾ ಕಟ್ಟಿಕೊಂಡ ಅವನ ಇಚ್ಚೆಯಂತೆ ಬಾಬಣ್ಣ ಮದುವೆನೂ ಮಾಡಿದ. ಇದ್ದಬದ್ದ ಹಣವೆಲ್ಲಾ ತೀರಿ ಹೋದರೂ ಬಾಬಣ್ಣ ಮಗ ಹೆಂಗಿದ್ರೂ ಜೊತೆಗಿರುವವ ಎಂದು ಎಲ್ಲಾ ಕೇಳಿದಂತೆ ಮಾಡಿಬಿಟ್ಟ. ಕೊನೆಗೆ ಬೆಂಗಳೂರಿನಲ್ಲಿ ಪ್ರತ್ಯೇಕ ಮನೆಗಾಗಿ ಇದ್ದ ಸ್ವಂತ ಮನೆಯ ಮೇಲೆ ಸಾಲಕ್ಕೂ ಯೋಚಿಸಲಿಲ್ಲ. ಹೆಂಗಿದ್ದರೂ ಮಗ ಜೊತೆಗಿರುವವ ನನ್ನದಾದರೇನು ಅವನದಾದರೇನು ಎಂದು ಲಕ್ಷಗಟ್ಟಲೇ ಸಾಲಕ್ಕೆ ಮುದ್ರೆ ಒತ್ತಿ ಬಿಟ್ಟಿದ್ದ. ಎಲ್ಲಾ ಮುಗಿದು ಹೊಸ ಮನೆ ಗೃಹಪ್ರವೇಶವಾಗಿ ಮಗ ಮನೆಗೆ ಬಾರದಿದ್ದಾಗಲೇ ಗೊತ್ತಾಗಿತ್ತು ಮಗ ಕೈ ಬಿಟ್ಟ ವಿಷಯ.
ಹೊಸ ಫ್ಲಾಟು ತೆಗೆದುಕೊಂಡು ತನ್ನಿಷ್ಟದಂತೆ ಸಂಸಾರ ಆರಂಭಿಸಿದ್ದ ಮಗ ಬಾಬಣ್ಣ ಇದ್ದಾನಾ ಇಲ್ವಾ ಎಂದು ವಿಚಾರಿಸಲು ಈಗ ಬರುತ್ತಿಲ್ಲ. ಕಟ್ಟಬೇಕಿದ್ದ ಸಾಲದ ಬಾಕಿಯನ್ನೂ ನಿಲ್ಲಿಸಿಬಿಟ್ಟಿದ್ದಾನೆ. ಸಂಪೂರ್ಣ ದಿವಾಳಿ ಎಂದು ಘೋಶಿಸುವುದೊಂದೆ ಬಾಕಿ ಇದ್ದಾಗ ಸ್ನೇಹಿತರೊಬ್ಬರು ಅದೇ ಮನೆಯನ್ನು ಕೊಂಡು ಸಾಲ ತೀರಿಸಿ ಅವನಿಗೆ ಉಳಿಯಲೊಂದು ಚಿಕ್ಕ ರೂಮು ಬಿಟ್ಟುಕೊಟ್ಟಿದ್ದಾರೆ. ಬಾಕಿ ಜಾಗವನ್ನು ಬಾಡಿಗೆಗೆ ಮಾಡಿಕೊಂಡಿದ್ದಾರೆ. ಸ್ವಂತ ಮನೆಯಲ್ಲೇ ಬಾಡಿಗೆಯವನಂತೆ ಬದುಕುತ್ತಿರುವ ಕರ್ಮಕ್ಕೆ ಬಾಬಣ್ಣನ ಕೈ ಮತ್ತು ಮನಸ್ಸು ಪೂರ್ತಿಯಾಗಿ  ಖಾಲಿಯಾಗಿದ್ದವು.
ಜಗತ್ತು ಎರಡೂ ಕಡೆಯಿಂದಲೂ ಬಡಿದು ನಿಲ್ಲಿಸಿತ್ತು. ಜೊತೆಗೆ ಇದ್ದ ಹೆಂಡತಿಯೊಂದಿಗೆ ಬದುಕಲೇಬೇಕಲ್ಲ. ಸಾಲವೇನೂ ಇಲ್ಲ. ಆದರೆ ದುಡಿದ ಕೂಡಿಟ್ಟಿದ್ದ ಎಲ್ಲಾ ಸಂಪತ್ತೂ ಮಕ್ಕಳು ಸಲೀಸಾಗಿ ಖಾಲಿ ಮಾಡಿದ್ದರು. ಸೆಟ್ಲ್ ಆಗೋದೆ ಎಂದುಕೊಂಡಿದ್ದ ಬದುಕು ಬೀದಿಗೆ ಬಂದಿತ್ತು. ಯಾವ ರೀತಿಯಲ್ಲೂ ಬದುಕು ಸ್ಥಿರಗೊಳ್ಳುವ ಮೊದಲಿನ ಹಳಿಗೆ ಬರುವ ಲಕ್ಷಣವೇ ಇರಲಿಲ್ಲ. ದಿನವಹಿ ಊಟಕ್ಕೆ, ಖರ್ಚಿಗೆ ಎಲ್ಲಿಂದ ತಂದಾನು. ರಿಟೈರ್ ಆದ ಮೇಲಿನ ದುಡ್ಡು ಕೂಡಾ ಮಗನ ಮನೆಗೂ ಅದಕ್ಕೂ ಮೊದಲೂ ಓದಿಗೂ ಮದುವೆಗೂ ಇವನ ಕೈಯಿಂದಾನೆ ಖರ್ಚಾಗಿ ಹೋಗಿದೆ. ಎಲ್ಲಾ ಮಾಡಿಸಿಕೊಂಡ ಮಗ ಮಗಳು ಇಬ್ಬರೂ ಈಗ ಇದ್ದರೂ ಇಲ್ಲದಂತಾಗಿ, ಅವಮಾನವಾಗಿ ಹಿಂದಿರುಗಿದ್ದಾನೆ. ಕೊನೆಯ ಕಾಲದಲ್ಲಿ ಬದುಕು ದೇಹ ಎರಡರೊಂದಿಗೂ ಬಡಿದಾಡುತ್ತಾ ಮತ್ತೆ ಸಣ್ಣ ಕೆಲಸ ಹುಡುಕಿಕೊಂಡಿದ್ದಾನೆ ಬಾಬಣ್ಣ.
ಹೊರಡುವ ಮೊದಲು ಬಾಬಣ್ಣನನ್ನು ಬಲವಂತವಾಗಿ ನನ್ನೊಂದಿಗೆ ಕರೆದೊಯ್ದೆ. ಅವನ ಮೊಗೆ ಮೊಗೆ ಬಿಯರ್‍ನ ಋಣ ನಾನು ಮರೆಯಲಾದರೂ ಹೇಗೆ ಸಾಧ್ಯ...? ಸಣ್ಣ ಸಂಕೋಚ ಮತ್ತು ಹಳೆಯ ಅನುಭವದ ಚಳಕುಗಳೊಂದಿಗೆ ಮುದುರಿ ಎದುರಿಗೆ ಕುಳಿತಿದ್ದ ಬಾಬಣ್ಣನ ಕೈಯ್ಯಲ್ಲಿ ಈಗ ತುಂಬು ಮೊಗೆ ಎತ್ತಿಕೊಳ್ಳಲೂ ಶಕ್ತಿ ಇಲ್ಲದಂತಿದ್ದ. ಶರೀರ ನಿಧಾನಕ್ಕೆ ನಡಗುತ್ತಿತ್ತು. ದಶಕಗಳ ಹಿಂದೆ ಇದೇ ಖುರ್ಚಿಯಲ್ಲಿ ಮರ್ಯಾದೆಯುತವಾಗಿ ತಲೆ ಎತ್ತಿ ಕೂಡುತ್ತಿದ್ದ ದೇಹ ಇವತ್ತು ಹಿಡಿಯಾಗಿಸಿ ಕೂತುಕೊಂಡಿತ್ತು. ಕಣ್ಣಿನಲ್ಲಿ ಆತ್ಮವಿಶ್ವಾಸ ಸಾಯಲಿ ಬದುಕು ಯಾವಾಗ ಮುಗಿದೀತು ಎನ್ನುವ ನಿರೀಕ್ಷೆಯ ತಪನೆಯಲ್ಲಿತ್ತು. ಏನಾಗಿ ಹೋಯಿತು ಎನ್ನುವ ದುಗುಡದೊದಿಗೆ ಹೇಗೊ ಒಂದಷ್ಟು ಹೊತ್ತು ಕೂತಿದ್ದ ಬಾಬಣ್ಣ ಊಟ ಮಾತ್ರ ಬಿಲ್ ಕುಲ್ ಒಲ್ಲೆ ಎಂದ.
" ಬೇಜಾರಾಗಬೇಡ. ನಾನು ಇಲ್ಲಿ ಊಟ ಮಾಡ್ತಾ ಇದ್ರ ಮನೆಯಲ್ಲಿ ಅವಳು ಒಬ್ಳೆ ಕಾಯ್ತಿರ್ತಾಳೆ. ಸರಿಯಾಗೋದಿಲ್ಲ. .." ಎನ್ನುತ್ತಿದ್ದರೆ ಸುಮ್ಮನೆ ಅವರ ಭುಜ ಬಳಸಿ ಎಬ್ಬಿಸಿಕೊಂಡು ಬಂದೆ. ಎರಡೂ ಊಟದ ಪಾರ್ಸೆಲ್ ಕೈಗಿತ್ತು ಒಮ್ಮೆ ಮೌನವಾಗಿ ನಿಂತು ತಬ್ಬಿಕೊಂಡು ನಡೆದುಬಿಟ್ಟೆ. ನಿಂತಿದ್ದರೆ ಇಬ್ಬರನ್ನೂ ಸುಧಾರಿಸಲು ಇನ್ನೊಬ್ಬರು ಬೇಕಾಗುತ್ತಿದ್ದರಾ ಗೊತ್ತಿಲ್ಲ. ಆದರೆ ವಾಸ್ತವದ ಭೀಕರತೆಯ ಎದುರು ನಾನೂ ಅಕ್ಷರಶ: ನಡುಗಿದ್ದೆ. ಬಾಬಣ್ಣನ ಮಾತು ಕಿವಿಯಲ್ಲೇ ಗುಂಯ್ ಗುಡುತ್ತಿತ್ತು..
" ಹಿಂಗಾಗುತ್ತೆ ಅನ್ನೋದಾದರೆ ಮಕ್ಕಳ ಸುಖಾನೂ ಬೇಡ. ಈ ವೃದ್ಯಾಪ್ಯ ಅನ್ನೋದು ಮೊದಲೇ ಬೇಡ ನೋಡು..ಉಫ್.." ಉಳಿದದ್ದೇನೆ ಇರಲಿ, ಹೀಗಾಗುವುದಾದರೆ ನನ್ನ ಆಯುಸ್ಸು ಅದಕ್ಕೂ ಮೊದಲೇ ಮುಗಿದು ಹೋಗಲಿ.." ಎನ್ನಿಸಿದ್ದೂ ಸುಳ್ಳಲ್ಲ.