Sunday, September 25, 2016

ಬದುಕು ಬಣ್ಣಗಳ ಸಂತೆ...!


(ನಾನು ಅನ್ನೋ ಇಗೋಕ್ಕೆ ಬಿದ್ದರೆ ಎಂತಹ ಸಂಬಂಧಗಳೂ ಎಕ್ಕುಟ್ಟಿ ಹೋಗುತ್ತವೆ ಅಂತಹದರಲ್ಲಿ ಯಾರೊಬ್ಬರು ಮೇಲೆದ್ದು ನಿಂತರೂ ಬದುಕು ಮುರಟುವುದರಲ್ಲಿ ಸಂಶಯವೇ ಇಲ್ಲ)

ಹೆಚ್ಚಾಗಿ ಮನೆಯನ್ನು ನೋಡಿಕೊಳ್ಳುವುದು ಹೆಂಗಸರೂ ಮತ್ತು ದುಡಿಯುವದು ಗಂಡಸರು ಎಂಬ ಸಾರ್ವತ್ರಿಕ ಪದ್ಧತಿ ಅನೂಚಾನವಾಗಿ ನಡೆದದ್ದು ನಮ್ಮ ಇತಿಹಾಸದ ಭಾಗವಾದರೂ, ಅದರಲ್ಲಿ ತೀವ್ರ ಬದಲಾವಣೆ ಬಂದಿದ್ದು ಮತ್ತು ಮನೆಯ ಹೆಣ್ಣುಮಕ್ಕಳೂ ಸರಿ ಸುಮಾರಿಗೆ ಸಮಸಮನಾಗಿ ದುಡಿಯಲು, ನಾನೂ ನೌಕರಿ ಮಾಡಲೇಬೇಕೆನ್ನುವ, ದುಡಿಯುವ ವರ್ಗದ ಭಾಗವಾಗಬೇಕೆನ್ನುವ ಮನಸ್ಥಿತಿಯ ಹ್ಯಾಂವಕ್ಕೆ ಬೀಳತೊಡಗಿದ್ದು ಇತ್ತಿಚಿನ ಒಂದೆರಡು ದಶಕದಿಂದೀಚೆಗೆ. ಕೊನೆಯ ತಲೆಮಾರಿನವರೆಗೂ ಯಜಮಾನ್ರು ಎನ್ನುವುದಕ್ಕೆ ಅಷ್ಟು ಸಹಮತವಿರಲಿಲ್ಲ. ಸರಾಸರಿ ಅವರಪ್ಪ- ಅಮ್ಮಂದಿರ ಸಂಸ್ಕೃತಿಯಲ್ಲೂ ಎಲ್ಲಾ ಕಡೆಯಲ್ಲೂ ಇದು ಹಾಸು ಹೊಕ್ಕಾಗಿರಲಿಲ್ಲ. ಆದರೆ ತೀರ ಮತ್ತು ಇತ್ತಿಚಿನ ವಯೋಮಾನದವರಲ್ಲೂ ಅಂದರೆ ಪ್ರಸ್ತುತದಲ್ಲೂ ಸಾಕಷ್ಟು ವಿದ್ಯಾವಂತರಲ್ಲೂ ಚಾಲ್ತಿಯಲ್ಲಿದ್ದು ಗಮನಿಸಿದಾಗ ಅದರಲ್ಲೂ ದೀಪಾಳಂತಹ ಹೆಣ್ಣು ಮಗಳು ಯಜಮಾನ್ರು ಸಂಸ್ಕೃತಿ ಜಾರಿಯಲ್ಲಿಟ್ಟಿದ್ದು ನನ್ನ ಅಚ್ಚರಿಗೂ, ಹುಬ್ಬೇರಲೂ ಕಾರಣವಾಗಿತ್ತು.
ಮೊದಲೆಲ್ಲಾ ಶಾಲೆ ಓದುವುದೇ ದೊಡ್ಡ ವಿಷಯವಾಗಿದ್ದ ನಮ್ಮ ದೇಶದಲ್ಲಿ ನಿಜಕ್ಕೂ ಕೆಲಸಕ್ಕೆಂದು ದೂರದೂರಿಗೆ ಹೆಣ್ಣುಮಕ್ಕಳು ಹೊರಟು ನಿಲ್ಲುವ ಪರಿಸ್ಥಿಯೇ ಇರಲಿಲ್ಲ. ಏನಿದ್ದರೂ ಮಾಸ್ತರಿಕೆ ಮತ್ತು ತಾಲೂಕು ಆಫೀಸುಗಳಲ್ಲಿ ದುಡಿಯುತ್ತಿದ್ದುದೇ ದೊಡ್ಡದು. ಆದರೆ ಇಂಜಿನಿಯರಿಂಗೂ, ಹಗಲು ರಾತ್ರಿ ಕೆಲಸ ಎನ್ನುವುದೆಲ್ಲಾ ಶುರುವಾದದ್ದೇ ಇತ್ತಿಚಿನ ಎರಡು ದಶಕದ ಬದಲಾವಣೆಯಲ್ಲಿ ಅದರಲ್ಲೂ ಆರ್ಥಿಕ ಸಧೃಢತೆ ಮುಖ್ಯ ನೆಲೆಗೆ ಬಂದ ಮೇಲೆ. 
ಇವತ್ತಿಗೂ ಆರ್ಥಿಕ ಬೆಂಬಲ, ನೌಕರಿಯಲ್ಲಿದ್ದಾಳೆ ಎನ್ನುವ ಕಾರಣಕ್ಕೇನೆ ಹುಡುಗಿ ಹೇಗಿದ್ದರೂ ಪರವಾಗಿಲ್ಲ ಎಂದು ಮದುವೆ ಮಾಡಿಕೊಳ್ಳುವ ಗಂಡಸರಿಗೇನೂ ಬರವಿಲ್ಲ. ಅದಾಯ ಮತ್ತು ಮನೆಗೆ ಸರ್ವೀಸು ಹೀಗೆ ಎರಡೆರಡು ಸೌಲಭ್ಯ ಎಲ್ಲಿ ಸಿಗುತ್ತದೆ..? ಕಾರಣ ಆವ್ರ ಲೆಕ್ಕದಲ್ಲಿ ಹುಡುಗಿ ಎಂದರೆ ಕಮಾಡಿಟಿ. ಇಂಥಾ ಜೋಡಿಗಳ ಬಗ್ಗೆ `..ಕಂಬಳಿ-ಶಾಲು ಜೋಡಿ. ಪಗಾರದ ಮಾರಿ ನೋಡಿ ಮದುವ್ಯಾಗ್ಯಾನು ಬಿಡು..' ಎನ್ನುವುದನ್ನು ತುಂಬ ಹತ್ತಿರದಿಂದ ಕೇಳಿದ್ದೇನೆ. ಇರಲಿ ಕಳೆದ ವಾರ ನಿಲ್ಲಿಸಿದ್ದ ಕತೆಗೆ ಬರುತ್ತೇನೆ.
ಆ ಹುಡುಗಿಗೇ ಅದ್ಯಾಕೆ ಶಿಕ್ಷಣ ತಲೆಗೆ ಹತ್ತಲಿಲ್ಲವೋ ಅಥವಾ ಕಲಿಯಲು ಮನೆಯಲ್ಲಿನ ಪರಿಸ್ಥಿತಿಯೂ ಸರಿಗಿರಲಿಲ್ಲವೋ ಒಟ್ಟಾರೆ ಮೆಟ್ರಿಕ್ಕಿಗೆ ಆಕೆಯ ಓದು ಗೊಟಕ್ಕೆಂದಿತ್ತು. ಬಹುಶ: ಹುಡುಗಿ ಹದವಾಗಿ ಬೆಳೆದಿದ್ದಾಳೆ ಇನ್ನೇನಿದ್ದರೂ ಮದುವೆ ಮಾಡುವುದು ಎಂಬಲ್ಲಿಗೆ ಸೀಮಿತವಾಗಿತ್ತಲ್ಲ. ಹಾಗಾಗಿ ಆಕೆ ಮನೆ ಕೆಲಸ, ಮಧ್ಯಾನ್ಹ ಭರ್ತಿ ನಿದ್ದೆ, ಸಂಜೆ ಪಕ್ಕದ ಮನೆಯ ಹೆಂಗಸರೊಂದಿಗೆ ಒಂದಿಷ್ಟು ಹರಟೆ, ಸರಿಯಾಗಿ ರಾತ್ರಿಗೆ ಅಮ್ಮನೊಂದಿಗೆ ನಿಂತು ಅಡುಗೆ. ಉಳಿದಂತೆ ಆಕೆಗಿದ್ದ ಇಬ್ಬರೂ ಅಕ್ಕಂದಿರು ಒಂದಿಷ್ಟು ದಿವೀನಾಗಿ ಓದಿಕೊಂಡಿದ್ದರೂ ಕೆಲಸ ನೌಕರಿ ಎರಡೂ ಬರಕತ್ತಾಗಿರಲಿಲ್ಲ. ಆದರೂ ಓದಿದವರು ಎನ್ನುವ ಕಾರಣಕ್ಕೇ ಮನೆಯ ಕಸ ಮುಸುರೆಗೆ ವಿನಾಯಿತಿ ಇರುತ್ತಿತ್ತು. ಮೂರನೆಯವಳಿಗೆ ಅಂಥಾ ಯಾವ ವಿನಾಯಿತಿ ಏನೂ ಇರಲಿಲ್ಲ. ಆಕೆಗೂ ಅದರ ಗೊಡವೆ ಇರಲಿಲ್ಲ. ಹೇಗಿದ್ದರೂ ಮೆಟ್ರಿಕ್ಕು ಫೇಯಿಲ್, ಯಾರೋ ಒಬ್ಬ ಮದುವೆ ಮಾಡಿಕೊಳ್ಳುತ್ತಾನೆ ಆತ್ಲಾಗೆ ಎದ್ದು ಹೋದರಾಯಿತು ಎಂದು ಸುಮ್ಮನಾಗಿದ್ದಳು.
ಆದರೆ ಮನೆಗೆ ಅಕ್ಕಂದಿರನ್ನು ನೋಡಲಿಕ್ಕೆ ಬರುವ ಹುಡುಗರು, ಹೊರಗೆದ್ದು ಹೋಗಿ ಮಧ್ಯಸ್ಥಿಕೆಯವನ ಹತ್ತಿರ  `ತೋರ್ಸಿದ ಹುಡುಗಿ ಬ್ಯಾಡ. ಬಾಗಲ ಕಡೆ ನಿಂತಿದ್ಲಲ್ಲ ಆಕೀನ ಕೊಡ್ತಾರೇನು ಕೇಳ್ರಿ' ಎನ್ನುತ್ತಿದ್ದರು. ಮನೆಯಲ್ಲಿ ಪರಿಸ್ಥಿತಿ ವಿಷಮಿಸತೊಡಗಿತ್ತು. ಕೊನೆಕೊನೆಗೆ ಆಕೆಯನ್ನು ಅಕ್ಷರಶ: ಬಚ್ಚಿಟ್ಟು ಬಿಡುತ್ತಿದ್ದರು. ಪಕ್ಕದ ಮನೆಗೆ ಯಾರಾದರು ಕನ್ಯಾ ನೋಡ್ಲಿಕ್ಕೆ ಬಂದರೂ ಇಲ್ಲಿ ಈಕೆಯನ್ನು ಕೂಡಿ ಹಾಕುತ್ತಿದ್ದರು. ಹೊರಗೆ ಮಾತ್ರ `..ಮನ್ಯಾಗ ಮೂರು ಮಂದಿ ಅದಾರು ಯಾವಾಗ ಖಾಲಿ ಅಗ್ತದ ಗೊತ್ತಿಲ್ಲ..' ಎನ್ನುವ ಡೈಲಾಗಿಗೆ ಕಿವುಡಿಯಾವುದರ ವಿನ: ಬೇರೆ ದಾರಿ ಇರಲಿಲ್ಲ. ಕಾಲ ಬದಲಾಯಿತು. ಮೊದಲಿನವರು ಮದುವೆಯಾಗುವ ಮೊದಲೇ ಡಾಕ್ಟರಿಕೆ ಓದಿದವನೊಬ್ಬನಿಗೆ ಅಚಾನಕ್ ಆಗಿ ಕಣ್ಣಿಗೆ ಬಿದ್ದ ಹುಡುಗಿಗೆ ತಿಂಗಳೊಪ್ಪತ್ತಿನಲ್ಲಿ ಮದುವೆಯ ಬಾಸಿಂಗ ಕಟ್ಟಲಾಗಿತ್ತು. ಅದರೆ ಎಲ್ಲರೂ ಹುಬ್ಬೇರುವಂತೆ ಆಕೆ ಆ ಕಾಲದಲ್ಲೇ ಮದುವೆಗೂ ಮೊದಲೇ ಅವನನ್ನು ಖಾಸಗಿಯಾಗಿ ಅರ್ಧಗಂಟೆ ಮಾತಾಡಿಕೊಂಡು ಹತ್ತನ್ನೆರಡು ವರ್ಷ ಅಂತರದಲ್ಲಿದ್ದವನನ್ನು ಮದುವೆಯಾಗಲು ಸಮ್ಮತಿಸಿದ್ದಳು. `ಎರಡೂ ಕಡೆ ಖರ್ಚು ನಮ್ದ..' ಎನ್ನುತ್ತಿದ್ದಂತೆ ಮೊದಲಿನ ಮಾಲು ಇದ್ದರೂ ಪರವಾಗಿಲ್ಲ ಇದೊಂದು `ಖರ್ಚಾದರೆ' ಖುಲಾಯಿಸಬಹುದೆಂದು ಅವರಪ್ಪ ಹುಳ್ಳಗಾಗಿದ್ದರು. ಅಲ್ಲಿಂದ ಬರೊಬ್ಬರಿ ಎರಡೂವರೆ ದಶಕದ ಹಾದಿಯಲ್ಲಿ ಆಕೆ ಇವತ್ತಿಗೂ ಕುಟುಂಬಕ್ಕೆ ಬಡಿದಾಡಿಕೊಳ್ಳುವ ಬಗ್ಗೆ ನನಗಿದ್ದ ಕುತೂಹಲ ಮಾತ್ರ ತಣಿದಿರಲಿಲ್ಲ. ಅದಕ್ಕೆ ಸರಿಯಾಗಿ ಆಕೆ `ನನ್ನದ ಕತೀ ಬರ್ದೀದಿ ಆದರ ಪಸಿ ಹೀಡಿಲಿಕ್ಕ ಮಾತ್ರ ಆಗಿಲ್ಲ ನೋಡು ನಿನಕಡೆ..' ಎನ್ನುತ್ತಿದ್ದರೆ ನಾನು ಪ್ಯಾಲಿ ನಗೆ ನಕ್ಕಿದ್ದೆ. 
ತೀರ ಹತ್ತನೆತ್ತಿ ಪಾಸಾಗದ ಹುಡುಗಿ ಇವತ್ತು ಗಂಡನ ಖಾಸಗಿ ನರ್ಸಿಂಗ್‍ಹೋಮ್‍ನ ಮೇಲ್ಗಡೆ ತನ್ನ ಟ್ಯೂಟರ್ ನಡೆಸುತ್ತಿದ್ದಾಳೆ. ಯಜಮಾನ್ರ ಸರಿ ಸಮಕ್ಕೆ ತಿಂಗಳಿಗೆ ಲಕ್ಷದ ಲೆಕ್ಕದಲ್ಲಿ ಗುಡ್ಡೆ ಹಾಕುತ್ತಿದ್ದಾಳೆ. ಕಾರಣ ಮದುವೆ ಆಗುತ್ತಿದ್ದಂತೆ ಮತ್ತೆ ಓದಿಗೆ ಕುದುರಿಕೊಂಡಿದ್ದ ದೀಪಾ ಅರೇ.. ಎನ್ನುವಷ್ಟು ಮಾರ್ಕು ಬರುತ್ತಿದ್ದಂತೆ ಡಿಗ್ರಿಯಿಂದ ಮುಂದುವರೆದಿದ್ದಾಳೆ.  ಆತ ಮೊದಲೇ ಎಂ.ಬಿ.ಬಿ.ಎಸ್ಸು. ಈಗ ಹುಡುಗಿ ಬಸರು, ಬಾಣಂತನ ಜತೆಗೇ ಪಿಹೆಚ್ಡಿ. 
`ಏನು ಹಂಗ ನೋಡ್ತಿ.. ನನಗೂ ಮೆಟ್ರಿಕ್ ಫೇಲಾದಾಗ ಅನ್ನಿಸಿತ್ತು ಚಲೋತ್ನಾಗ ಓದಿದರ ಏನಾರ ಮಾಡಬೋದಿತ್ತು ಅಂತ. ಆದರೆ ಮನ್ಯಾಗ ಮೂರು ಜನ ಹೆಣ್ಮಕ್ಕಳು ಖರ್ಚಾಗದ ಸಾಮಾನಗತೆ ಕುಂತಿದ್ವಿ ನೋಡು. ಅದಕ್ಕ ಯಜಮಾನ್ರ ವಯಸ್ಸಿನ ಫರಕ್ಕ ಇದ್ದರೂ ಚಾನ್ಸ್ ತೊಗೊಂಡೆ. ಹೆಂಗಿದ್ದರೂ ಒಂದ ರಿಸ್ಕ್ ತೊಗೊಳ್ಳಬೇಕಿತ್ತು. ಒಂದಂತೂ ಖರೇ, `ಹುಡುಗ ಸುಮಾರು ಅವನ ವಯಸ್ಸ ಹೆಚ್ಚಿಗ ಐತಿ, ರೊಕ್ಕದ ಮಾರಿ ನೋಡಿ ಹೂಂ ಅಂದ್ಲು ದೀಪೀ...' ಅಂತ ಮಂದೀ ಮಾತಾಡಿದ್ದೂ ಖರೇನ ಇತ್ತು. ಮನ್ಯಾಗ ಸಾಮಾನಗತೆ ಇರೋದಕಿಂತ್ಲೂ ಇಲ್ಲಿ ಸ್ವಲ್ಪ ಹೊಂದಿಸ್ಕೊಂಡ್ರೆ ಚೋಲೊದಲ್ಲ. ಲೆಕ್ಕ ತಪ್ಪಲಿಲ್ಲ. ನನಗೂ ಅದ್ಯಾಕ ಬುದ್ಧಿ ಬಂತೋ ಓದು ಕೈಗೆ ಹತ್ತತು. ಇವತ್ತು ನನಗ ಯಾವುದಕ್ಕೂ ಕಮ್ಮಿ ಇಲ್ಲ. ಮನ್ಯಾಗ ನಾನೂ, ಇಬ್ರೂ ಅಕ್ಕಂದರು ಖರ್ಚಾಗದ ಮಾಲು ಅನ್ನಿಸಿಕೊಂಡಿದ್ದು ಹೆಂಗ ಮರೀಲಿ. ಅದಕ್ಕ ಆವತ್ತು ರಿಸ್ಕ ತೊಗೊಂಡು ಹೊರಗ ಬಿದ್ದೆ. ಮನಿಯವ್ರು ನನಗ ಯಾವತ್ತೂ ಯಾವದಕ್ಕೂ ಬ್ಯಾಡ ಅನ್ನೋದಿಲ್ಲ. ನನಗ ಕೊಟ್ಟ ಮಾತೂ ಉಳಿಸ್ಕೊಂಡಾರ ಅವರನ್ನ ಯಜಮಾನ್ರು ಅಂದರ, ನನಗ ಖುಶಿಯಾಗೋ ಸೇವಾ ಮಾಡಿದರ ತಪ್ಪೇನದ..? ಅದರಾಗೂ ತನ್ನ ಮನೀ, ಸಂಸಾರ ಅಂತಂದರ ಯಾವ ಹೆಂಣಮಗಳಿಗೂ ಹೊರೀ ಅನ್ಸಾಂಗಿಲ್ಲ. ಅದೇನಿದ್ರೂ ಫ್ಯಾಶನಿನ್ನ ಲೆಕ್ಕಕ್ಕ, ನಾನು ಅನ್ನೋ ಇಗೋಕ್ಕ ಬಿದ್ದಾವ್ರಿಗೇ ಯಾಕ ಯಜಮಾನ್ರು ಅನ್ನಬೇಕು ಅಂತ ಅನ್ನಿಸಬೋದು. ದೇವರೂ ಹಿಂಗ ಸವಲತ್ತು ಕೊಡ್ತಿದ್ನೋ ಇಲ್ವೋ ಹಂಗದೀನಿ ಇವತ್ತು. ಅವರನ್ನ ಯಜಮಾನ್ರು ಅನ್ನೋದಾರಗ ಖುಷಿನ ಅದಾ..' ದೀಪಾ ಕುಲುಕುಲು ಮಾತಾಡುತ್ತಿದ್ದರೆ ಮಧ್ಯದಲ್ಲೇ ತಡೆದೆ. 
`..ಆದೇನು ಆವತ್ತು ಮದುವಿಗೂ ಮದಲು ಮಾತಾಡಿದ್ಯಲ್ಲ ಏನದು..? ಅಕಸ್ಮಾತ ಅವ್ರು ಅಮೇಲೆ ಆಗೋದಿಲ್ಲ ಅಂದಿದ್ರ ಏನ ಮಾಡ್ತಿದ್ದಿ..?'ಎಂದೆ.
` ಏನು ಮಾಡ್ಲಿಕ್ಕ ಆಗ್ತಿತ್ತು. ಏನಾರ ಒಂದು ಚಾನ್ಸ್ ತೊಗೊಳ್ಳಬೇಕಿತ್ತಲ್ಲ ತೊಗೊಂಡೆ. ಊಟ ಉಣಿಸು ಆರಾಮ ಅಂತೂ ಇದ್ದ ಇರ್ತದ ಅಂತ ಗೊತ್ತಿತ್ತು. ಆದರೂ ಅವರ ಬಂದೂ ಇದ ಹುಡುಗಿ ಬೇಕಂದಾಗ, `ನಿಮಗ ಹೆಂಗ ಬೇಕು ಹಂಗ ಬದುಕು, ಸಂಸಾರ ಮಾಡ್ಕೊಂಡ ಇರ್ತೇನಿ. ಆದರ ನನಗ ಮತ್ತ ಓದಿಸ್ತೀರೇನು ಅಂದಿದ್ದೇ..'. ಡಾಕ್ಟರರು ಒಮ್ಮೆ ನಕ್ಕ `ಆತು ಬಿಡು ಅಷ್ಟ ಹೌದಿಲ್ಲೋ ಓದ್ಕೊವಂತಿ ಬಾ' ಅಂದಿದ್ದರು. ಆವತ್ತು ಅವರಿಗೂ ಭರವಸೆ ಇರ್ಲಿಲ್ಲಂತ. ಎಸ್ಸೆಲ್ಸಿ ಫೇಲ್ ಏನು ಓದಾತಾಳು ಅಂತ ಸುಮ್ನ ಹೂಂ.. ಅಂದಿದ್ರಂತ. ಆದರ ಯಾವಾಗ ಪಿಯುಸಿ ತೆಕ್ಕಿಗಟ್ಟಲೇ ಮಾರ್ಕು ಬಂದ್ವು ನೋಡು ಒಂದು ವಿಶ್ವಾಸ ಬಂತು. ಅಲ್ಲಿಂದ ಮುಂದೆ ಲೆಕ್ಚರ್ ಆಗೋವರಿಗೂ ನಡೀತು. ಆದರ ನಾನು ಓದ್ಕೊತಿದ್ದರೂ ಇತ್ತ ಮಕ್ಕಳು ಮರಿ ಆದರೂ, ನಾ ಮದಲ ಹೇಳಿದಂಗ ಅವರ ಕಡೀಗಿನ ಗಮನ ಯಾವತ್ತೂ ಕಡಿಮೆ ಮಾಡ್ಲಿಲ್ಲ. ಎಲ್ಲಾ ಹೆಂಗಸರ ಕೈಯಾಗಿರ್ತದ. ಗಂಡಸರು ಮಣ್ಣಿನ ಮುದ್ದಿ ಇದ್ದಾಂಗ. ಯಾವಾಗ ಹೆಂಗ ಬೇಕಾದರೂ ತೀಡ್ಕೊಬಹುದು. ಹಂಗಂತ ಜಾಸ್ತಿ ಸುಟ್ಟರ ಒಡದ ಹೋಗ್ತಾವ. ಈಗೀನ ಹೆಂಗಸರಿಗೆ ಗೊತ್ತಾಗೋ ಹೊತ್ತಿಗೆ ಟೈಮ್ ಹೋಗಿರ್ತದ..' ಎನ್ನುತ್ತಾ`..ಚಾ.. ಕುಡಿ ಆರಿ ಹೋಗ್ತದ.. ಇನ್ನೇನು ಯಜಮಾನ್ರು ಬರ್ತಾರ ನಾಸ್ಟಾ ಮಾಡುವಂತಿ..' ಎನ್ನುತ್ತಿದ್ದರೆ ಈ ಬಾರಿ ಆಕೆಯ ಬಾಯಿಂದ ಬಂದ ಯಜಮಾನ್ರು ಎನ್ನುವ ಪದ ನನಗೆ ಅಹಿತ ಅನ್ನಿಸಲಿಲ್ಲ. 
ಕಾರಣ
ಅವಳು ಎಂದರೆ...

Saturday, September 17, 2016

ಯಜಮಾನ್ರು ಅನ್ನೋಕೆ ಮಂಡಿ ಮಾಲೀಕರಾ?

ಮಾತಿಗೊಮ್ಮೆ ನಮ್ಮ ಯಜಮಾನ್ರು ಎಂದು ಓಡುವುದೂ, ಆತ ಆಕೆಯನ್ನು ಕರೆಕರೆದು ಸರ್ವೀಸು ಮಾಡಿಸಿಕೊಳ್ಳುವುದು, ಆಕೆ ಪತ್ನಿಯಾ ಅಥವಾ ಸರ್ವರಾ..? ಉತ್ತರಿಸುವವರು ಯಾರು..?
 

ಬಹುಶಃ ಮೂರ್ನಾಲ್ಕು ವರ್ಷದ ಹಿಂದಿನ ಮಾತು. ಆ ಹೊತ್ತಿಗೆ ನನ್ನ ಗಾಂಪರ ಗುಂಪು ಇದ್ದಕ್ಕಿದ್ದಂತೆ ಸೇರಿಕೊಂಡು ಪಾರ್ಟಿ ಎನ್ನುತ್ತಾ ಅಥವಾ ಔಟಿಂಗ್ ಎನ್ನುತ್ತಾ ಹೊರಟು ಯಾರದ್ದಾ ತೋಟದ ಮನೆಯ, ಇನ್ನೆ ಸೇರಿಕೊಂಡು ಒಂದರ್ಧ ದಿನ ಕಾಲಕ್ಷೇಪ ಮಾಡುವುದೂ ಇತ್ತು. ಆಗೆ ಸೇರಿಕೊಳ್ಳುತ್ತಿದ್ದ ಇತರ ಸ್ನೇಹಿತರ ಮಧ್ಯದಲ್ಲಿದ್ದೂ ತನ್ನದೇ ಲೋಕ ಸೃಷ್ಟಿಸಿಕೊಂಡಂತಿರುತ್ತಿದ್ದ ದೀಪಾಳದ್ದು ಇವತ್ತಿಗೂ ನನಗೆ ಅರಿವಾಗದ ಪರಿಸ್ಥಿತಿ. ಅದ್ಯಾವತ್ತೂ ಗಂಡನ ನೆರಳಿನಿಂದ, ಮಕ್ಕಳ ಮೈದಾನದಿಂದ ಹೊರಬಂದೇ ಗೊತ್ತಿಲ್ಲ ಎನ್ನುವಂತಿದ್ದಾಳೆ. ಎಲ್ಲದರ ಹಿಂದೆಯೂ ಬರೀ ಗಂಡ, ಮಕ್ಕಳ ಕಾಳಜಿ. ಇಂಥದ್ದಾಂದು ಸ್ವಭಾವ ಅಷ್ಟು ಸುಲಭವಾಗಿ ಮೈಗೂಡುತ್ತದಾ ಅಥವಾ ಹೀಗೆ ಮನೆ, ಮಕ್ಕಳು-ಮರಿ ಎನ್ನುತ್ತಲೇ ಕಣ್ಣಿಕಟ್ಟಿದ ದನದಂತೆ ದುಡಿಯಲು ನಿಂತುಬಿಡುವುದನ್ನೇ ಹೆಣ್ಣುಮಕ್ಕಳಿಗೆ ಕಲಿಸಿರುತ್ತಾರಾ..? ಅಥವಾ ಮದುವೆಯಾದ ಮೇಲೆ ಇದೆ ಕಡ್ಡಾಯ ಎಂದು ಬ್ರೇನ್‌ವಾಶ್ ಮಾಡಿರುತ್ತಾರಾ..? ನನ್ನ ಯಾವೊಬ್ಬಳೂ ಸ್ನೇಹಿತೆಯೂ ಯಾವತ್ತೂ ಇದಕ್ಕೆ ನೇರ ಉತ್ತರ ಕೊಟ್ಟಿದ್ದಿಲ್ಲ. ಕಳೆದ ಬಾರಿ ಹಾಗೇ ಆಯಿತು. ಬರುತ್ತಲೇ ನಾವೆಲ್ಲ ಆಗಲೇ ಮೈಸೂರು ರಸ್ತೆಯಲ್ಲಿ ಕಾಲುಚಾಚಿ ನಿಂತುಕೊಂಡು, ಹೆಚ್ಚಿನ ಅವಧಿಗಾಗಿ ಅರ್ಧರ್ಧ ಕಾಫಿಯನ್ನೂ ಕುಡಿದಾಗಿತ್ತು. ಆಕೆಯ ಸವಾರಿ ಬಂದು ತಲುಪದಿದ್ದಾಗ, ಇಂತಲ್ಲಿ ತೋಟಕ್ಕೆ ಬಾ, ಇದು ದಾರಿಗುರುತು, ನಾವು ಮುಂದೆ ಹೋಗಿರ್ತೀವಿ ಎಂದು ಸುದ್ದಿ ಕೊಟ್ಟು ಹೇಳಿ ಹೊರಟಾಗಿತ್ತು.
  ಇನ್ನೇನು ಸಮಯ ಮೀರುತ್ತಿದೆ ಎನ್ನುವಾಗ ಕಾರಿನಲ್ಲಿ ‘ಯಜಮಾನ’ರೊಂದಿಗೆ ಆಗಮಿಸಿದ್ದಳು ದೀಪಾ. ಮಕ್ಕಳು, ಜತೆಗೆ ಅಷ್ಟೇ ಸೈಜಿನ ಬ್ಯಾಗು ಎತ್ತಿಕೊಂಡು ಬಂದು ಕಟ್ಟೆಯ ಮೇಲಿಟ್ಟು, ಒಂದೆರಡು ಐಟಮ್ಮು, ಟವೆಲ್ಲು ಇತ್ಯಾದಿ ಜೋಡಿಸಿಟ್ಟುಕೊಂಡು ಮಕ್ಕಳಿಗೆ ಏನೋ ಒಂದಷ್ಟು ಹೇಳಿ, ಅಷ್ಟರಲ್ಲಿ ನಮ್ಮ ಮಿತ್ರರೊಬ್ಬರು ‘ಟೀ ಬಂತು ಬನ್ನಿ’ ಎನ್ನುತ್ತಿದ್ದಂತೆ ಎಲ್ಲ ಅವರ ಇಷ್ಟಕ್ಕೆ ತಕ್ಕಂತೆ ಅರ್ಧ ಕಪ್ಪೋ, ಮುಕ್ಕಾಲೋ ತೆಗೆದುಕೊಂಡು ಹೊರಟು ಸುತ್ತ ಕುಳಿತುಕೊಳ್ಳುತ್ತಿದ್ದರೆ, ದೀಪಾ ಮಾತ್ರ ಅಲ್ಲಿಯೇ ಸನಿಹದಲ್ಲಿ ಮೊದಲೇ ಒಂದು ಚೇರ್ ಹಾಕಿಟ್ಟು ಅಲ್ಲಿ ಗಂಡನಿಗೆ ಕೂರಿಸಲು ವ್ಯವಸ್ಥೆ ಮಾಡಿ, ಅಲ್ಲಿಗೆ ಬಂದು ಒಂದು ಕಪ್ಪು ಟೀ ತೆಗೆದುಕೊಂಡು ಹೊರಟವಳು ವಾಪಸ್ಸು ಬಂದು ಒಂದು ಖಾಲಿ ಕಪ್ಪನ್ನು ಎತ್ತಿಕೊಂಡು ಹೋದಳು. ಅಲ್ಲಿ ಏನೋ ಒಂದಷ್ಟು ಗುಸ-ಪಿಸ ಎಂದು ಇಬ್ಬರೂ ಮಾತಾಡಿಕೊಂಡು, ಗಂಡನಿಗೆ ಅದರಿಂದ ಎಷ್ಟು ಬೇಕೊ ಅಷ್ಟು ಸುರಿದುಕೊಟ್ಟು, ಅದಕ್ಕೂ ಮೊದಲೇ ‘ಸಕ್ರೆ ಬೇಕಾ..?’ ಎನ್ನುತ್ತಾ ವಿಚಾರಿಸಿಕೊಂಡು, ‘ಮಕ್ಕಳಿಗೂ ಕೊಡಬೇಕು’ ಎನ್ನುತ್ತಾ ಇನ್ನೆರಡು ಕಪ್ಪುಗಳಲ್ಲಿ ಅರ್ಧರ್ಧ ಹಿಡಿದುಕೊಂಡು, ಮೇಲೆ ಕೆಳಗೆ ಮಾಡಿ ಆರಿಸಿ, ಮುಗಿಯುವ ಹೊತ್ತಿಗೆ ನಾವು ಟೀ ಕುಡಿದು ದುಂಡುಮೇಜಿನ ಪರಿಷತ್ತೂ ಮುಗಿಯುವ ಹಂತಕ್ಕೆ ಬಂದಿತ್ತು. ಆಕೆ ಹಾಗೆ ನಿಂತ ಒಂದು ಗುಕ್ಕು ಕುಡಿದು, ಸೊರ ಸೊರ ಮಾಡಿ.. ಅರ್ಧ ಕುಡಿಯುವ ಮೊದಲೇ ಅವನ ಕೂಗು ಬಂತು.
  ‘ನಮ್ಮ ಯಜಮಾನ್ರು ಕರೀತಿದಾರೆ.. ಬಂದೆ..’ ಎನ್ನುತ್ತಾ ಅರ್ಧಕ್ಕೆ ಆ ಕಪ್ಪನ್ನು ಬಿಟ್ಟು ಹೋಗಿ, ಯಜಮಾನ್ರ ಕೈಯಿಂದ ಖಾಲಿ ಕಪ್ಪನ್ನು ಪಡೆದು ಡಸ್ಟ್ ಬಿನ್‌ಗೆ ಹಾಕುವ ಹೊತ್ತಿಗೆ, ಮಕ್ಕಳ ಬುಲಾವ್. ಅಲ್ಲಿಗೆ ಹೋಗಿ ಅವರ ಸೇವೆ ಮಾಡಿ ಟೀ ಪ್ರಹಸನ ಮುಗಿಸುವ ಹೊತ್ತಿಗೆ ಮತ್ತೆ ಯಜಮಾನ್ರ ಅಪ್ಪಣೆ.
  ‘ಸಣ್ಣವನಿಗೆ ಶೀತ ಆಗಿತ್ತಲ್ಲ. ದೀಪಾ.. ಸಿರಪ್ ಕುಡಿಸಿದ್ಯಾ?’ ಎನ್ನುತ್ತಿದ್ದಂತೆ ಕಟ್ಟೆಯ ಮೇಲಿನ ಬ್ಯಾಗಿನಿಂದ ಬಾಟಲ್ ತೆಗೆದು ಅವನನ್ನು ಹುಡುಕಿಕೊಂಡು ಹೋಗಿ, ಅಕ್ಷರಶಃ ಅವನು ಈಕೆಗೆ ಮ್ಯಾರಾಥಾನ್ ಮಾಡಿಸಿ ಅಂತೂ ಕುಡಿದು ಬಾಯಿ ಒರೆಸಿ ಅದು ಅಂಟಂಟಾಗಿ, ಮತ್ತೆ ನೀರಿನ ಕೈಯಿಂದ ಬಾಯಿ ಒರೆಸಿ, ಅಷ್ಟರಲ್ಲಿ ಅವಕ್ಕೆ ಆಡುವ ಮೂಡ್ ಬಂದು ಬ್ಯಾಗಿನಿಂದ ಅವರ ಆಟದ ಸಾಮಾನು ತೆಗೆದುಕೊಟ್ಟು, ಅವರಿಬ್ಬರನ್ನೂ ಎಂಗೇಜ್ ಮಾಡುವ ಹೊತ್ತಿಗೆ ಮತ್ತೆ ಕರೆ ‘ಇವತ್ತಿನ ಪೇಪರ್ ತಂದಿದೀಯಾ?’. ದುಡುದುಡು ಓಡಿದ ಆಕೆ ಬ್ಯಾಗಿನ ಪಕ್ಕದ ಜಿಪ್ ತೆಗೆದು, ಅದರಲ್ಲಿ ಇರಿಸಿಕೊಂಡಿದ್ದ ಆವತ್ತಿನ ಪೇಪರ್ ತೆಗೆದುಕೊಂಡು ಅವನಿದ್ದಲ್ಲಿಗೆ ಒಯ್ದು ಕೊಟ್ಟು, ತನ್ನ ಪ್ಲೇಟೆತ್ತಿಕೊಂಡು ತಿನ್ನುವ ಹೊತ್ತಿಗೆ ನಮ್ಮದೆ ಮಾತುಕತೆ ಮುಗಿದು ಇನ್ನೊಂದು ರೌಂಡು ಹೊಸ ಐಟಂ ಏನು ಎಂದು ಹುಡುಕತೊಡಗಿದ್ದೆವು.
  ಮಧ್ಯಾಹ್ನದ ಊಟದ ಹೊತ್ತಿಗೂ ಆಕೆಯ ಯಜಮಾನ್ರು ಕೂತಲ್ಲಿಗೇ ಪ್ಲೇಟು, ಸ್ಪೂನುಗಳ ಸರಬರಾಜು, ಮಕ್ಕಳಿಗೆ ಆಯಾ ಮಕ್ಕಳ ರುಚಿ ಆಶೋತ್ತರಗಳಿಗೆ ತಕ್ಕಂತೆ ಬಡಿಸಿ, ಉಣಿಸಿ ಯಜಮಾನ್ರಿಗೆ ಒಂದೊಂದೇ ಐಟಮ್ಮು ಎರಡೆರಡು ಸರ್ತಿನೂ ಕೇಳಿ, ಕೊನೆಯ ಮೊಸರನ್ನದವರೆಗೂ ‘ಎರಡು ಸ್ಪೂನ್ ಕೊಡ್ಲಾ.. ನಿಮಗೆ ಹುಳಿ ಜಾಸ್ತಿ ಆಗಲ್ಲ. ಪಲಾವ್ ತಂದುಕೊಡ್ಲಾ’ ಎನ್ನುತ್ತಾ ಯಥೇಚ್ಛ ಸೇವೆ ಸಲ್ಲಿಸಿ, ಅಷ್ಟಾಗುವ ಹೊತ್ತಿಗೆ ಸಣ್ಣ ಹುಡುಗನಿಗೆ ಉಂಡು ತಿಂದು ಕುಣಿದು ಕುಪ್ಪಳಿಸಿ ಆಗಿತ್ತಲ್ಲ, ಈಗ ‘ಸೂಸ್ಸೂ’ ಎಂದು ಚಡ್ಡಿ ಹಿಡಿದುಕೊಂಡು ನಿಂತಿತ್ತು. ಅದನ್ನು ಅಷ್ಟು ದೂರದ ಪಾರ್ಕಿನ ಕೊನೆಯ ಮೂಲೆಯಲ್ಲಿದ್ದ ತಿರುವಿನ ಬಳಿಗೆ ಕರೆದೊಯ್ದು, ಅಷ್ಟೂ ಹೊತ್ತು ಹೊರಗೆ ನಿಂತಿದ್ದು ಅದಕ್ಕೆ ಕೈ ಕಾಲು ತೊಳೆಸಿ, ಅದರ ಡ್ರೆಸ್ಸು ಸರಿಮಾಡಿ ಅಷ್ಟರಲ್ಲಿ ಅದು ಬಿಸಿಲು ಎನ್ನುತ್ತಾ ನಿಂತುಕೊಂಡರೆ, ಅದನ್ನೂ ಹೊತ್ತುಕೊಂಡು ಇಲ್ಲಿ ಕರೆತಂದು ಇಳಿಸುವ ಹೊತ್ತಿಗೆ ಯಜಮಾನ್ರು ಊಟ ಮುಗಿಸಿ ಪ್ಲೇಟು ಸ್ಪೂನ್ ಹಿಡಿದುಕೊಂಡು ಕೈನೀಡಿ ಕೂತಿದ್ದರಲ್ಲ.
  ಅದನ್ನು ಕೈಗೆತ್ತಿಕೊಂಡು ಅ ನಲ್ಲಿಯ ಪಕ್ಕದ ಡಸ್ಟ್‌ಬಿನ್ನಿಗೆ ಹಾಕಿ, ಮನೆಯಿಂದ ತಂದಿದ್ದ ನೀರಿನ ಬಾಟ್ಲಿಯಿಂದ ಅದನ್ನು ಬಗ್ಗಿಸಿ ಗ್ಲಾಸಿಗಿಷ್ಟು ಸುರಿದು ಅವರಿಗೆ ಕೊಟ್ಟು ಮಗುವಿಗೂ ಕುಡಿಸಿ, ವಾಪಸ್ಸು ಮುಚ್ಚಿಟ್ಟು ಬ್ಯಾಗು ಸರಿಮಾಡಿ ಅಲ್ಲಿವರೆಗೆ ಅರೆಬರೆ ಖಾಲಿ ಆಗಿದ್ದನ್ನೆಲ್ಲ ಸರಿಪಡಿಸಿ, ಉಸ್ಸೆನ್ನುತ್ತಾ ನಿಂತ ಪೇಪರ್ ತಟ್ಟೆಗೆ ಒಂದಿಷ್ಟು ಸುರಿದುಕೊಂಡು ಗಬಗಬ ತಿನ್ನುತ್ತಿದ್ದರೆ ನಿರಂತರವಾಗಿ ಗಮನಿಸುತ್ತಿದ್ದ ನನಗೆ ಇಷ್ಟೆ ಮಾಡಿಕೊಂಡಿರುವುದಾದರೆ ಆಕೆ ಹೊರಗೆ ಕೊಂಚ ಚೇಂಜ್ ಇರಲಿ ಅಂತಾ ರಜಾದಿನಕ್ಕೆ ಬಂದಿದ್ದಾದರೂ ಯಾಕೆ ಅನ್ನಿಸತೊಡಗಿತ್ತು. ಊಟ, ಗಾಳಿ, ಸೊಂಪಾದ ನೆರಳು; ಈಗ ಯಜಮಾನರು ಕೂತ ನಿದ್ರೆಗೆ ಜಾರಿದ್ದರು. ಪೇಪರು ಗಾಳಿಗೆಗರುತ್ತಿದ್ದವು. ಮಕ್ಕಳು ಅಲ್ಲ ಕಿರುಚಾಡಿ ಕೈಕಾಲು ಬಡಿಯುತ್ತಿದ್ದರೆ, ದೀಪಾ ಪ್ಲೇಟಿಟ್ಟು ಓಡುವ ಆತುರಕ್ಕೆ ಬೀಳುತ್ತಿದ್ದವಳನ್ನು ತಡೆದು ನಿಲ್ಲಿಸಿದೆ. ಆಕೆಯ ಕಣ್ಣಲ್ಲಿ ಪ್ರಶ್ನೆ ಮತ್ತು ಅರ್ಧ ಉತ್ತರ ಎರಡೂ ನೋಡಿ ನಿಜಕ್ಕೂ ನಾನು ದಿಗಿಲಾಗಿದ್ದಾ.
  ಅವನೇನೂ ತೀರಾ ಅರಿಯದ ಪುರಾತನ ಗಂಡಸಲ್ಲ. ಇಬ್ಬರೂ ಸರಿಸಮಾನಾಗಿ ಡಾಕ್ಟರಿಕೆ ಓದಿದ್ದಾರೆ. ಅವನಿಗಿಂತ ಒಂದು ಕೈ ಮೇಲೆ ಎನ್ನುವಂತೆ ಆಕೆ ದುಡಿಯುತ್ತಾಳೆ. ಆದರೆ ಇದೇನು, ಮಾತಿಗೊಮ್ಮೆ ನಮ್ಮ ಯಜಮಾನ್ರು ಎಂದು ಓಡುವುದೂ, ಆತ ಆಕೆಯನ್ನು ಕರೆಕರೆದು ಸರ್ವೀಸು ಮಾಡಿಸಿಕೊಳ್ಳುವುದೂ, ಆಕೆಯೇನು ವೇಟರ್ರಾ..? ಉತ್ತರಿಸುವವರು ಯಾರು..?
  ಅದೆಲ್ಲಕ್ಕಿಂತಲೂ ದಿಗಿಲು ಮತ್ತು ಹಿಂಸೆ ಹುಟ್ಟಿಸಿದ್ದಾಂದರೆ ಮಾತಿಗೊಮ್ಮೆ ‘ಯಜಮಾನ್ರು’ ಎನ್ನುವ ಪದ. ಅದ್ಯಾವ ರೀತಿಯಲ್ಲಿ ದಾಂಪತ್ಯ ಸಂಬಂಧ ಅನುಬಂಧವಾದೀತೋ ನನಗಂತೂ ಗೊತ್ತಿಲ್ಲ. ಮನೆ ಎನ್ನುವುದು ಫ್ಯಾಕ್ಟರಿನಾ, ಅಡಕೆ ಮಂಡಿನಾ..? ಅವನಿಗೆ ಯಜಮಾನ್ರು ಎನ್ನುವ ಸಂಬೋಧನೆಯೇ ನನಗಿವತ್ತಿಗೂ ವಿಚಿತ್ರ ಭಾವನೆ ಮೂಡಿಸುತ್ತದೆ. ಸಂಸಾರದ ಚೆಂದದ ಘಳಿಗೆಗಳಲ್ಲಿ ಆಕೆ ಸೇವಕಿಯಾಗುವುದಾದರೆ ಅದಿನ್ನೆಂಥಾ ಬಾಂಧವ್ಯ?
  ಮಾತಿಗೊಮ್ಮೆ, ‘ಟ್ರಿಪ್ ಹೋಗೋಕೆ ಯಜಮಾನ್ರ ಹತ್ತಿರ ಪರ್ಮಿಷನ್‌ಗೆ
  ಅಪ್ಲಿಕೇಷನ್ ಹಾಕ್ತೀನಿ’, ‘ಯಜಮಾನ್ರ ಮೂಡ್ ನೋಡ್ಕೊಂಡು ಇವತ್ತು ಅವರಿಗೆ ಅಪ್ಲೈ ಮಾಡ್ತೀನಿ’, ‘ಅವರ ಲೆಕ್ಕಾಚಾರ ಗೊತ್ತಿಲ್ಲ. ಇವತ್ತು ಟ್ರಿಪ್‌ಗೆ
  ಸ್ಯಾಂಕ್ಷನ್ ಕೇಳ್ತೀನಿ’ ಇಂಥ ಹಲವು ಮಾತುಗಳನ್ನು ನನ್ನ ಸ್ನೇಹಿತೆಯರು ಉದುರಿಸುತ್ತಲೇ ಇರುತ್ತಾರೆ. ಅವರೆ ದೀಪಾಳಿಗಿಂತ ಭಿನ್ನವೆಂದೇನೂ ಅನ್ನಿಸುತ್ತಿಲ್ಲ. ಇದೇನು ಆಫೀಸಾ ಮನೇನಾ..? ಸ್ಯಾಂಕ್ಷನ್ನು, ಅಪ್ಲಿಕೇಷನ್ನು, ಪರ್ಮಿಷನ್ನು, ಇದನ್ನೇ ಅವನು ಮಾಡುವುದಾರೆ ಅವನಿಗೆ ಪತ್ನಿ ಯಾಕೆ ಬೇಕು, ಕೆಲಸಕ್ಕೊಬ್ಬರನ್ನು ನೇಮಿಸಿಕೊಂಡಿದ್ದರೆ ಆಗ್ತಿತ್ತಲ್ವಾ..? ಮಾತಿಗೆ ಮುಂಚೆ ಲೆಕ್ಕಾಚಾರ, ಆಕೆ ಜೀವನಪೂರ್ತಿ ಜತೆಗಿರಬೇಕಾದವನನ್ನು ಅಡಿಕೆಮಂಡಿ ಮಾಲೀಕ ಎನ್ನುವಂತೆ ಘಳಿಗೆಗೊಮ್ಮೆ ‘ಯಜಮಾನ್ರು’ ಎನ್ನುತ್ತಾ ಇರುವುದು ಸರಿನಾ..?
  ನನ್ನ ಪ್ರಶ್ನೆಗಳೇನೇ ಇರಲಿ, ‘ಜೀವನಪೂರ್ತಿ ಇರಬೇಕಾದವಳು ಎನ್ನುವ ಅರಿವಿದ್ದೂ ಒಂದು ಮೆಟ್ಟಿಲು ಕೆಳಗೆ ಎನ್ನುವಂತಹ ಮನಸ್ಥಿತಿಯೊಂದಿಗೆ ಬದುಕಬೇಕಾದ ಅನಿವಾರ್ಯತೆ ಬರೀ ಹಣದ್ದಲ್ಲ. ಇನ್ನಿತರ ಆಯಾಮಗಳೂ ಇರ್ತಾವೆ. ಅದು ನಿನ್ನಂಗೆ ಇರೋರಿಗೆ ಅರ್ಥವಾಗಲ್ಲ. ನೆಮ್ಮದಿ ಮುಖ್ಯ’ ಎನ್ನುತ್ತಾ ಮತ್ತೆ ಮಕ್ಕಳ ಚಾಪೆ ಎತ್ತಿಡಲು ಹೋದ ದೀಪಾಳ ಕತೆ ಮುಂದಿನ ವಾರಕ್ಕಿರಲಿ. ಆದರೆ ನನ್ನ ಪ್ರಶ್ನೆಗಳಿಗೆ ಮಾತ್ರ ಕೊನೆಗೂ ಉತ್ತರವಿರಲಿಲ್ಲ.
ಕಾರಣ
   ಅವಳು ಎಂದರೆ...

                      (ಲೇಖಕರು ಕಥೆ-ಕಾದಂಬರಿಕಾರರು)

Thursday, September 15, 2016

ಹಾಟ್ ಎ೦ಬ ಇನ್‍ಬಾಕ್ಸ್ ಸುಪ್ರಭಾತ

‘ಸುಮಾರು ಅರ್ಧ ಸಾವಿರ ರಿಕ್ವೆಸ್ಟು ಬಿದ್ದಿದ್ವು. ನೋಡಿ ನೋಡಿ ಒಂದೈವತ್ತು ಹೂಂ ಅಂದೆ. ಅದೇ ತಪ್ಪಾಯ್ತು. ಅವರ - ಮತ್ತವರ ಕಾಮನ್ ಡ್ ಅಂತಾ ಮತ್ತಷ್ಟೇ ರಿಕ್ವೆಷ್ಟು ಏರಿ ಕೂತಿವೆ.’ (ಒಳ್ಳೆಯ ಸ್ನೇಹಿತರೂ ಆಗಬಹುದು ಎಂದು ನಿರೀಕ್ಷಿಸಿದ ಸ್ನೇಹಿತೆಯ ಸಂಕಟ)‘..-ಟೋನೆ ಹಿಂಗಿದೆ, ಇನ್ನು ವಾಯ್ಸ್ ಹೆಂಗಿರಬಹುದು.. ವಾಟ್ಸಾಪ್‌ಲಿ ವಾಯ್ಸ್ ಮೆಸೇಜ್ ಕಳ್ಸಿ...’ (ಇದು ಹೇಗಾದರೂ ನಂಬರು ಪಡೆಯೋಕೆ ಮಾಡುವ ಚೀಪ್ ಟ್ರಿಕ್ಕು). -ಸ್‌ಬುಕ್ಕಿನ ಹಾವಳಿಗಳ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ. ಅದರಲ್ಲೂ ಹೆಣ್ಣು ಎನ್ನುವ ಕಾರಣಕ್ಕೆ ಸುಖಾಸುಮ್ಮನೆ ಲೈಕು/ಕಮೆಂಟು ಒತ್ತುವ ಜನರಿಗೆ ಆಕೆ ಸ್ನೇಹದ ವಿನಾ ಇನ್ನಾವುದೇ ಭಾವನಾತ್ಮಕ ಸಂಬಂಧಕ್ಕೆ ಈಡಾಗಬಯಸುವುದಿಲ್ಲ ಎನ್ನುವುದನ್ನು ಹೇಗೆ ಅರ್ಥೈಸುವುದೋ ಸದ್ಯದ ಪ್ರಶ್ನೆ.ಮೊನ್ನೆ ಆಕೆ ಇನ್‌ಬಾಕ್ಸ್ ತೆರೆದದ್ದೇ ತಡ, ಮೆಸೇಜುಗಳು ದಾಳಿ. ಅದರಲ್ಲಿ ಅರ್ಧಕ್ಕೂ ಹೆಚ್ಚು ‘..ಯೂ ಆರ್ ಹಾಟ್..’ ಅಯ್ಯೋ ರಾಮಾ! ಇದೇನು ಎನ್ನುತ್ತಾ ಸೀದಾ ಆಕೆ ಬ್ಲಾಕ್ ಮಾಡತೊಡಗಿದ್ದಾಳೆ. -ಸ್‌ಬುಕ್ ಎಂಬ ಸಾಮಾಜಿಕ ಜಾಲತಾಣದಲ್ಲಿ ವಯಸ್ಸಿನ ಪರಿವೆ ಇಲ್ಲದೆ ನಡೆಯುತ್ತಿರುವ ಈ ಇನ್‌ಬಾಕ್ಸ್ ದಾಳಿಗೆ ಹೆಣ್ಣು ಎನ್ನುವ ಏಕೈಕ ಕ್ರೈಟೀರಿಯಾ ಹೊರತುಪಡಿಸಿದರೆ, ಆಕೆಯ ವಯಸ್ಸು, ಆಸಕ್ತಿ, ಸ್ವಭಾವ, ಆಕೆಗೆ ಬೇಕಾ ಬೇಡ್ವಾ ಇತ್ಯಾದಿಗಳ ಯಾವ ಲಾಜಿಕ್ಕೂ ಬೇಕಾಗೇ ಇಲ್ಲ.ಆಕೆ ಸ್ಪಂದಿಸದೆ ಇದ್ದಾಗಲೂ ‘..ಗಣೇಶ ಹಬ್ಬದ ಸೀರೆಯಲ್ಲಿ ನಿಮ್ಮನ್ನು ನೋಡುವ ಭಾಗ್ಯ ನನಗಿರಲಿ. ನೀವು ವಾಲ್ ಮೇಲಂತೂ ಹಾಕೋಲ್ಲ’ ಎಂದು ಎಮೋಷನ್ಸ್ ಜತೆಗೆ ರಿಲಿಜಿಯಸ್ ಒತ್ತಾಯ. ಇದ್ಯಾವುದೂ ಅರ್ಥವಾಗದಷ್ಟು ಆಕೆ ಪೆದ್ದಳೇನಲ್ಲ. ಆದರೆ ಇಂತಹದನ್ನೂ ಎಂಜಾಯ್ ಮಾಡುವ, ಎಲ್ಲದಕ್ಕೂ ಸ್ಪಂದಿಸುವ, ಯಾರಾದರೂ ಸರಿ ಬಗಲಿಗೆ ಕೈ ಹೂಡುವ ಧಾರ್ಷ್ಟ್ಯದ ಹೆಣ್ಣುಗಳಿಗೂ ಬರ ಇಲ್ಲ. ಅವರಿಗೆ ಸ್ನೇಹದ ಪರಿಭಾಷೆಯ ಚೆಂದದ ಮುದ ಕೊಡುವ ಫೀಲಿಂಗೇ ಇರುವುದಿಲ್ಲ. ಇವತ್ತಿಗೆ ಇವನು, ಇನ್ನಾರು ತಿಂಗಳಿಗೆ ಅವನ ಸ್ನೇಹಿತ, ಅವನೂ ಬೋರಾದರೆ ಅವನ ಗೆಳೆಯ - ಹೀಗೆ ಸಾಗುವ ಮಹಿಳೆಯರು ಈ ವಿಷಯದಾಚೆಗಿರಲಿ. ಆದರೆ ಇಂತಹವರಿಂದಲೇ ಉಳಿದ ಹೆಣ್ಣುಮಕ್ಕಳ ಮೇಲೂ ಸಾಮಾಜಿಕ ತಾಣದಲ್ಲಿ ಪರೋಕ್ಷ ಪ್ರಭಾವ ಬೀಳುತ್ತಿದೆಯಾ?ಇಂತಹ ಯಾವುದೇ ಇನ್‌ಬಾಕ್ಸ್ ಮೆಸೇಜು ನಮ್ಮ ವ್ಯಕ್ತಿತ್ವವನ್ನೇ ಡ್ಯಾಮೇಜ್ ಮಾಡುತ್ತವೆ ಎನ್ನುವುದನ್ನು ಮೆಸೇಜಿಸುವ ಮೊದಲು ಅರಿಯಬೇಕು. ಜತೆಗೆ ಹೆಚ್ಚಿನ ಗಂಡಸರಿಗೆ ಒಂದು ವಿಷಯ ಅರಿವಾಗುತ್ತಿಲ್ಲ. ಸ್ನೇಹ ಎನ್ನುವ ಚೆಂದದ ಸಂಬಂಧಕ್ಕೆ -ಸ್‌ಬುಕ್ಕಿನ ಪರಿಭಾಷೆಯಲ್ಲಿ ಅರ್ಥವೇ ಬದಲಾಗುತ್ತಿದೆ. ಏನಿದ್ದರೂ ವಿರುದ್ಧ ಲಿಂಗಿ ಇದ್ದರೆ ಕಾಳು ಹಾಕುವುದಕ್ಕೇ ಪ್ರಾಶಸ್ತ್ಯ ಎನ್ನುವ ಹಲವುಇನ್‌ಬಾಕ್ಸ್‌ಗಳ ಹಪಾಹಪಿತನವೇ ಎಂಥವರನ್ನೂ ಸಂಶಯಿಸುವಂತೆ ಮಾಡುತ್ತಿದೆ.ಅಕ್ಸಪ್ಟ್ ಮಾಡುತ್ತಿದ್ದಂತೆ ಮಾಹಿತಿ ಸಂಗ್ರಹ ಆರಂಭವಾಗುತ್ತದೆ. ಮನೆಯಲ್ಲಿ ಒಬ್ಬಳೇ ಇರುತ್ತಾಳೆ ಎಂದಾದರೆ ಹೇಗಾದರೂ ಸಂಪರ್ಕ ಮಾಡಲು ಬಯಸುವವರು, ಅತ್ತೆ-ಮಾವ ಇದಾರೆ/ಅಮ್ಮ ಇರ್ತಾರೆ/ಮನೇಲಿ ಇನ್ಯಾರಾದರೂ ಇದ್ದಾರೆ ಎನ್ನುವದು ದೃಢವಾಗುತ್ತಿದ್ದಂತೆ ಹೆಚ್ಚಿನ ಇನ್‌ಬಾಕ್ಸ್ ಚರ್ಚೆಗಳು ಅಲ್ಲಲ್ಲೇ ನಿಂತುಹೋಗುವುದು ಏನನ್ನು ಸೂಚಿಸುತ್ತದೆ? ಚಿಕ್ಕ ಕುಟುಂಬದ ಹೆಣ್ಣಿದ್ದರೆ ಸಂಪರ್ಕ ಸಲೀಸು. ಏನಾದರೂ ನೆಪದಲ್ಲಿ ಮನೆಯವರೆಗೂ ಪಾದ ಬೆಳೆಸಬಹುದೆನ್ನುವ ಹುನ್ನಾರ.‘ನಾನು ಇಂತಹ ಅಸಭ್ಯ ಮಾತು ಇಷ್ಟಪಡುವುದಿಲ್ಲ’ ಎಂದಾಕೆ ಮುಲಾಜಿಲ್ಲದೆ ತಿರಸ್ಕರಿಸಿದಾಗಲೂ, ‘..ಬರೀ ಚಾಟ್ ಬಾಕ್ಸ್ ಎಂಜಾಯ್‌ಮೆಂಟ್. ನಾವೇನೂ ಭೇಟಿಯಾಗಬೇಕಿಲ್ಲ..’ಎಂದು ಒತ್ತಾಯಿಸುವವರಿಂದ ಹಿಡಿದು, ಬ್ಲಾಕ್ ಮಾಡಿದರೂ ಕೂಡಲೇ ಇನ್ನೊಂದು ಐ.ಡಿ. ಮೂಲಕ ಇಣುಕಿ, ‘ಸಾರಿ...ನಾನು ಯಾವ ಮೆಸೇಜೂ ಮಾಡಲ್ಲ. ಸುಮ್ನೆ ನಿಮ್ಮ ವಾಲ್ ಮೇಲಿರ್ತೀನಿ’ ಎಂದು ಹಲ್ಲು ಗಿಂಜುತ್ತಾ ಹಿಡಿಯಾಗಿ ನಿಂತುಕೊಳ್ಳುವ ಇವರಿಗೆ ಅದರಿಂದ ಸಿಗುವುದಾದರೂ ಏನು? ಆಕೆಯ ಪ್ರಶ್ನೆಗೆ ಉತ್ತರಿಸುವವರಾರು?ಕಾಫಿ ಆಯ್ತಾ..? ತಿಂಡಿ..? ಜಿಎಮ್, ಜಿಈವ್, ಜಿಏನ್ ಹೀಗೆ ಅವಽಗೊಂದಾವರ್ತಿ ಮೆಸೇಜಿಸುತ್ತಲೇ ಇದ್ದರೆ, ಆಕೆ ಈ ಹಾವಳಿಗೆ ತಲೆ ಕೆಟ್ಟು ಬ್ಲಾಕ್ ಮಾಡಿದರೆ, ಆವತ್ತೇ ಸಂಜೆಯಿಂದ ಯಾವ ಮುಲಾಜೂ ಇಲ್ದೇ ಆಕೆಯ ಚಾರಿತ್ರ್ಯಹರಣ ಆರಂಭವಾಗುತ್ತದೆ.‘ಆಕೆ ಯಾರ್ಯಾರಿಗೆ ಲೈಕ್ ಒತ್ತುತ್ತಾಳೆ, ಅವನಿಗೆ ಮಾತ್ರ ಕಮೆಂಟ್ ಮಾಡ್ತಾಳೆ, ಅಲ್ಲಿ ನೋಡು ಆ ವಾಲ್ ಮೇಲೆ ಮೇಸೇಜ್ ಹಾಕಿದಾಳೆ, ಇಲ್ಲಿ ನೋಡ್ರಿ ಇವನ ಜತೆ -ಟೋನೂ ಇದೆ. ಹೋಟೆಲ್‌ನಲ್ಲಿ ಊಟ ಮಾಡಿ ಪಾರ್ಟಿ ಮಾಡಿದಾರೆ. ನಾ ಹೇಳಿರಲಿಲ್ವಾ ಆಕೆ ಸರಿ ಇಲ್ಲ ಅಂತ’ ಎಂದು ಸರ್ಟಿಫೀಕೇಟ್ ಕೊಟ್ಟು ಕುತ್ಸಿತ ಖುಶಿ ಅನುಭವಿಸಿ, ಹೊಸ ವಾಲ್ ಮೇಲೆ ಕಾಳು ಹಾಕಲು ಹೊರಡುತ್ತಾರೆ.ಅಸಲಿಗೆ ಆಕೆಗೆ ಬೇಕಿರುವುದು ನಿಮ್ಮ ಉಪಚಾರವಲ್ಲ. ಒಂದು ಚೆಂದದ ಬರಹ, ಇನ್ಯಾರದ್ದೋ ಕಮೆಂಟು, ಕಾಲೆಳೆಯುವ ಚರ್ಚೆ, ಪ್ರಧಾನಿಯ ಬಗ್ಗೆ ಗಂಭೀರ ಚಿಂತನೆ, ಇನ್ಯಾವುದೋ ದೇಶದ ಪೇಂಟಿಂಗು, ಆ ತುದಿಯ ದೇಶದ ಪುಟ್ಟ ಮಗುವಿನ ಗಲೀಜು ಕೆನ್ನೆಯ ಮುಗ್ಧತೆ, ಇನ್ನಾವುದೋ ಮೂಲೆಯ -ಟೊಗ್ರಾ-ರ್‌ನ ವಾಹ್.. ಎನ್ನುವ ಚಿತ್ರ - ಹೀಗೆ ಆಕೆಯ ಆದ್ಯತೆಗಳು. ಅದಕ್ಕೆ ತಕ್ಕಂತೆ ಚೆಂದದ ಸ್ನೇಹಿತರ ಹುಡುಕಾಟ. ಆಕೆಗೆ ಒಂದು ನಂಬಿಕೆ ಬರುವವರೆಗೂ ಹುಡುಕಾಟ ಮುಂದುವರಿದೇ ಇರುತ್ತದೆ. ಅಂತಹ ನಂಬಿಗೆಗೆ ಅರ್ಹರಾದಲ್ಲಿ ಅವಳನ್ನು ದಿನಕ್ಕೆ ಮೂರಾವರ್ತಿ ವಿಚಾರಿಸಿಕೊಳ್ಳಲೇ ಬೇಕಿಲ್ಲ. ಆಕೆಯೇ ಮುಂದಾಗಿ ‘..ಗಣಪತಿ ಹಬ್ಬದ ದಿನ ಚಂದ್ರನ ನೋಡಕಂಡು ತಿರುಗಬ್ಯಾಡವೋ ಗುಂಡುಗೋವಿ..’ಎಂದು ಆಪ್ತವಾಗಿ ಎಚ್ಚರಿಸುತ್ತಾಳೆ.ಅದರೆ ಆ ಸಹನೆ-ನಂಬಿಕೆಯಿಂದ ವರ್ತಿಸುವ, ಉಳಿಸಿಕೊಳ್ಳುವ ಅಗತ್ಯ ಎರಡೂ ಇಲ್ಲದೇ ಬರೀ ಕಾಳು ಹಾಕಲೆಂದೇ ನಿಂತುಬಿಡುವವರಿಗೇನು ಅರ್ಥವಾದೀತು ಸ್ನೇಹದ ಮಹತ್ವ? ಕೊನೆಗೆ ಲಭ್ಯವಾಗೋದು ಬ್ಲಾಕ್ ಭಾಗ್ಯ ಅಷ್ಟೇ.

Sunday, September 11, 2016

ನಾನೂ ಸಹಕರಿಸದೆ ಉಳಿದಿದ್ದರೆ..?
‘ಫಾರಿನ್‌ನಲ್ಲಿ ಮದುವೆಗೂ ಮೊದಲು ಮೆಡಿಕಲ್ ಸರ್ಟಿಫಿಕೇಟ್ ಕೇಳ್ತಾರಂತೆ ಅಂತ ಓದಿದ ನೆನಪು. ನಮ್ಮಲ್ಲೂ ಅದನ್ನೇ ಜಾರಿಗೆ ತಂದು ಗಂಡನಾಗುವವ ಸರಿ ಇದ್ದಾನ ಇಲ್ವಾ ಅಂತಾ ನೋಡ್ಕೊಂಡು ಈಗಿನ ಹುಡುಗೀರು ಮದುವೆ ಆಗೋದು ಒಳ್ಳೆಯದು ನೋಡು. ನಿನಗಿದೆ ಗೊತ್ತಿರಬೇಕಲ್ಲ..’ ಎನ್ನುತ್ತ ಕ್ರಾಂತಿಕಾರಕ ಅನಧಿಕೃತ ಕಾನೂನನ್ನು ವಿದೇಶದಂತೆ ನಮ್ಮ ಮಡಿವಂತ(?) ಸಮಾಜದಲ್ಲಿ ಹೇರಲೇಬೇಕು ಎನ್ನುವ ರೀತಿಯಲ್ಲಿ  ಫಾರ್ಮಾನು ಹೊರಡಿಸುತ್ತಾ  ಫೋನಿನ ಎಗಾದಿಗಾ ನನಗೆ ಕ್ಲಾಸ್ ತೆಗೆದುಕೊಳ್ಳತೊಡಗಿದ್ದ ತುಂಗಳಿಗೆ ಅಸಲಿಗೆ ಆದ ಲುಕ್ಸಾನಾದರೂ ಏನು ಎನ್ನುವುದೇ ಆರಂಭದಲ್ಲಿ ನನಗರ್ಥವಾಗಿರಲಿಲ್ಲ. ಹೆಚ್ಚಿನಂಶ ಹಣ, ಒಳ್ಳೆಯ ನೌಕರಿ ಜೊತೆ ಸೆಟ್ಲ್, ಎಲಿಜಿಬಲ್ ಬ್ಯಾಚುಲರ್ (?) ಎನ್ನುವ ಗಂಡು ಹುಡುಗರಿಗೆ ಈಗಲೂ ಫುಲ್ ಡಿಮ್ಯಾಂಡು. ಪ್ರತಿಯೊಬ್ಬ ಹೆಣ್ಣುಮಕ್ಕಳ ಕುಟುಂಬ ಯಾವತ್ತಿನಿಂದಲೂ ಇದಕ್ಕೆ ಮಹತ್ವ ಕೊಡುತ್ತಾ ಬಂದಿದ್ದು ಇತಿಹಾಸ. ಜಾತಕ ನೋಡುವ ತಾಂತ್ರಿಕ ಪ್ರಕ್ರಿಯೆಯಲ್ಲಿ (ಅದಾಗುತ್ತದೋ ಇಲ್ಲವೋ ನಂತರ ಮಾತು ಆಚೆಗಿರಲಿ) ಎಲ್ಲದರಂತೆ ಮೈಥುನಕ್ಕೆ ಅದರದ್ದೇ ಆದ ಪ್ರಾಶಸ್ತ್ಯದ ಸ್ಪಷ್ಟ ಲೆಕ್ಕಾಚಾರ ಇರುವುದು ಬಹಳಷ್ಟು ಜನರಿಗೆ ಗೊತ್ತಿರಲಿಕ್ಕಿಲ್ಲ. ಇದ್ದರೂ ಅದನ್ನು ಗಣಿಸಿದವರು ಕಡಿಮೆ. ಅದೇನೆ ಇದ್ದರೂ ಸಂಸಾರದ ಬಹಿರಂಗದ ಸರ್ವ ಗುಣಗಳಿಗೆ ಹುಡುಗರನ್ನು ತೂಗಿ ನೋಡುವ ನಮ್ಮ ಪದ್ಧತಿ ಮತ್ತು ನಂಬುಗೆಗಳಲ್ಲಿ ‘ಮದುವೆಯ ನಂತರ ಹುಡುಗ ಸಶಕ್ತವಾಗಿ ದಾಂಪತ್ಯವನ್ನೂ ನಿಭಾಯಿಸುತ್ತಾನಾ..? ಅದನ್ನೂ ನೋಡಬೇಕು..’ ಎನ್ನುವ ಪ್ರಶ್ನೆಗೆ ಯಾವ ಕಿಮ್ಮತ್ತೂ ಇಲ್ಲದಿರುವುದೆ ತುಂಗಳ ಕ್ರೋಧಕ್ಕೆ ಕಾರಣವಾಗಿತ್ತು.
ಇಂದು ವಿಷಯ ಹೇಳಬೇಕು. ಹುಡುಗನಿಗಿಂತಲೂ ನಾಲ್ಕಾರು ವರ್ಷಕ್ಕೆ ಚಿಕ್ಕವಳಿರುವ ಹುಡುಗಿ ಇವತ್ತು ಸಣ್ಣ ಅಂದಾಜಿನ ಗಂಡನಾಗುವವ ಸರಿ ಇದ್ದನಾ ಇಲ್ಲವಾ ಎನ್ನುವಷ್ಟು ಪ್ರಬುದ್ಧಳಾಗಿರುತ್ತಾಳೆ. ಅದರಲ್ಲೂ ಇತ್ತೀಚಿನ ಬಿಡಿ ಕಳೆದೆರಡು ದಶಕಗಳ ಹಿಂದೆಯೂ ಹುಡುಗಿಯರು ಅಗತ್ಯಕ್ಕಿಂತ ಮೊದಲೇ ಗಾಂಭೀರ್ಯ ಮತ್ತು ತಕ್ಕಷ್ಟು ಪ್ರೌಢಿಮೆಯನ್ನೂ ಪಡೆದಿದ್ದರು ಎಂದರೂ ತಪ್ಪಿಲ್ಲ. ಅದಕ್ಕೆ ಅಪ್ಪಟ ಉದಾಹರಣೆ ತುಂಗಳ ಸ್ನೇಹಿತೆ ಸುಶೀಲ. ‘..ನೋಡೇ ಲವ್ವರ್ ಅಂತೀಯಾ. ಒಂದು ವರ್ಷದಿಂದ ಓಡಾಡ್ತ ಇದ್ದೀಯ. ಮನೆಯಲ್ಲೂ ಒಪ್ಪಿಗೆ ಆಗಿದ್ದು ಯಾವ ನಿರ್ಬಂಧನೂ ಇಲ್ಲ ನಿಮಗೆ. ಹಾಗಿದ್ದಾಗಲೂ ಅವನು ಯಾವುದಕ್ಕೂ ಫೋರ್ಸ್ ಮಾಡ್ತಿಲ್ಲ ಅಂದರೆ, ದೈಹಿಕ ಸಾಂಗತ್ಯಕ್ಕೆ ಪ್ರಯತ್ನಿಸಿಲ್ಲ ಅಂದರೆ ಖಂಡಿತ ಏನೋ ಪ್ರಾಬ್ಲಂ ಇರಬೇಕು.. ಹುಷಾರಾಗಿರು. ಇಲ್ಲದಿದ್ರೆ ಹುಡುಗ್ರು, ಗಂಡಸರು ಹಿಂಗೆ ತೆಪ್ಪಗಿರೋ ಪ್ರಾಣಿಗಳೇ ಅಲ್ಲ..’ ಎಂದು ಅದ್ಯಾವ ಬಾಯಿಯಿಂದ ಸುಶೀಲ ನುಡಿದಿದ್ದಳೊ ಅಥವಾ ಅದಿನ್ನೆಂಥಾ ಅನುಭವ ಆಕೆಗೆ ಜೀವನದ ಪಾಠ ಕಲಿಸಿತ್ತೋ ಗೊತ್ತಿಲ್ಲ. ಆದರೆ ಹತ್ತಾರು ವರ್ಷಗಳ ಮೊದಲೇ ಹಾಗೆಂದು ಬಿಟ್ಟಿದ್ದ ಆಕೆಯ ಎಚ್ಚರಿಕೆ, ನಿಜವಾಗಿಬಿಟ್ಟಿದ್ದು ಮಾತ್ರ ತುಂಗಳ ಪಾಲಿಗೆ ದುರದೃಷ್ಟ.
ನನ್ನೊಂದಿಗೆ ಸೈಕಲ್ ಸವಾರಿಯಿಂದ ಹಿಡಿದು ಹೊಂಡದ ಪೌಳಿಯ ಮೇಲೆ ನಿಂತು ನಮ್ಮ ಸಮಸಮಕ್ಕೆ ನೀರಿಗೆ ಡೈವ್ ಹೊಡೆಯುತ್ತಿದ್ದ ಹುಡುಗಿ ತುಂಗ ಒಂದು ಹಂತಕ್ಕೆ ಬರುವವರೆಗೂ ಆಕೆಯನ್ನು ಹುಡುಗಿ ಎಂದು ಯಾರೂ ಕನ್ಸಿಡರೇ ಮಾಡಿರಲಿಲ್ಲ. ಅಷ್ಟಕ್ಕೂ ನಮ್ಮೆಲ್ಲರ ಗುಂಪಿನಲ್ಲಿ ಸೈಕಲ್ಲು ಸೇರಿದಂತೆ ಪ್ರತಿಯೊಂದಕ್ಕೂ ಕಟ್ಟಕಡೆಯದಾಗಿ ಪಕ್ಕಾದವನು ನಾನು. ಅಂದರೆ ಸೀಟಿನ ಮೇಲೆ ಕೂತರೆ ಸರಾಗವಾಗಿ ಕಾಲು ನೆಲಕ್ಕೆ ತಾಗುವಷ್ಟಾಗುವವರೆಗೂ ನನಗೆ ಸೈಕ ಬರುತ್ತಿರಲಿಲ್ಲ. ಹಾಗಾಗಿ ಹಿಂದಿನಿಂದ ಜೋರಾಗಿ ಆಕೆಯ ಸೈಕಲ್ಲು ತಳ್ಳುತ್ತಾ ಲಬಕ್ಕನೆ ಹಾರಿ ಸೀಟು ಹಿಡಿದು ಹಿಂದೆ ಹತ್ತಿ ಕೂರುವುದಷ್ಟೆ ನನ್ನ ಪಾಲಿಗಿತ್ತು. ನಮ್ಮೆಲ್ಲರ ತಿದಿಯೊತ್ತುವಂತೆ ಅಟ್ಟಾಡಿಸಿ ಬಡಿಯಲೂ ಹಿಂದೆ ಮುಂದೆ ನೋಡದ ಕಡ್ಡಿಕಡ್ಡಿ ಹುಡುಗಿ ತುಂಗ ನೀರಿಗೆ ಬಿದ್ದರೆ ಅಪ್ಪಟ ಜಲಕನ್ನಿಕೆಯ ಹಾಗೆ ಕೈ ಬೀಸುತ್ತಿದ್ದಳು. ನಾವೊಂದಿಷ್ಟು ಹುಡುಗರು ‘..ಯೇ ಅಲ್ಲಿ ನೀರಾಗ ಸುಳಿ ಅದಂತ. ಒಳಗ ಎಳ್ಕೋತದಂತ ಅಲ್ಲಿಗೆ ಹೋಗೋದು ಬ್ಯಾಡ..’ ಎಂದು ಕೈಲಾಗದ ದೂರಕ್ಕೆ ಅಪಾಯದ ನೆಪ ಹೇಳುತ್ತಾ ವಾಪಸ್ಸು ಕೈಬೀಸಿ ದಂಡೆಗೆ ಬರುತ್ತಿದ್ದರೆ ಆಕೆ ಮಾತ್ರ ಅದ್ಯಾವುದಕ್ಕೂ ಕ್ಯಾರೆ ಅನ್ನದೆ ಆಚೆ ದಂಡೆಗೆ ನಿಂತು ನಮ್ಮನ್ನೆ ಅವಮರ್ಯಾದೆಗೆ ಈಡು ಮಾಡುತ್ತಿದ್ದಳು. ಅವಳೊಂದಿಗೆ ಕೆಲವು ಕಾಲ ಒಡನಾಡಿದ ಸಮಯದ ಸರಪಳಿಯಲ್ಲಿ ಅಷ್ಟೇ ಬೇಗ ಅವರಪ್ಪನಿಗೆ ವರ್ಗ ಆಯಿತು ಎನ್ನುತ್ತಾ ದೂರದ ಮುಂಡಗೋಡು, ನಂತರ ಹೆಬ್ರಿ ಹೀಗೆ ಎ ಅಪ್ಪನ ಹಿಂದೆ ಸಂಸಾರ ಸರಿದುಹೋಗಿತ್ತು.
ಮಧ್ಯದ ಕಾಲಾವಧಿಯಲ್ಲಿ ಮೊಬೈಲು ಎಲ್ಲರ ಬದುಕಿನಲ್ಲಿ ಬಣ್ಣಗಳ ತರಂಗಗಳನ್ನೆಬ್ಬಿಸುವ ಹೊತ್ತಿಗೆ ಮತ್ತೆ ದೂರ ದೂರಗಿದ್ದವರು ಕ್ರಮೇಣ ಸಂಪರ್ಕಕ್ಕೂ ಸಿಗತೊಡಗಿ ಯಾವ ಊರು ದೇಶ ಎಂಬೆ ಅಂತರಗಳು ಈಡಾಗುವ ಹೊತ್ತಿಗೆ ತುಂಗ ನಾನೀಗ ಬೆಂಗಳೂರ ಇದೀನೋ ಎನ್ನುತ್ತಾ ಮತ್ತೆ ತಗಲಿಕೊಂಡಿದ್ದಳು. ಅತ್ತೆ- ಮಾವ ಸುಖಿ ಕುಟುಂಬ ಎನ್ನುವ ಎಲ್ಲಾ ಸವಲತ್ತುಗಳೊಡನೆ ತುಂಗ ಪುಟಾಣಿ ಬಂಗಲೆಯಲ್ಲಿ ಬದುಕುತ್ತಿದ್ದಾಳೆ. ಮಕ್ಕಳಿಲ್ಲ ಆಗುತ್ತಿಲ್ಲ ಎನ್ನುವ ದೂರು ಹಾಗು ಅಸಮಾಧಾನ ಆಕೆಯ ಮೇಲಿದೆ. ಅದಕ್ಕಾಕೆ ಉತ್ತರಿಸಲಾರಳು.
ಮದುವೆಯಾದ ಮೊದಲ ದಿನದಿಂದಲೇ ಆಕೆಯನ್ನು ದೂರ ಇಟ್ಟಿರುವ ಗಂಡನೆದುರಿಗೆ ಇರುವ ನೆಪ ಆತನೊಬ್ಬ ಗುರುಗಳ ಆರಾಧಕ. ಅವನ ಆರಾಧನೆಯಲ್ಲಿ ದಾಂಪತ್ಯಕ್ಕೆ ಸ್ಥಾನವಿಲ್ಲ. ತಂದೆ, ತಾಯಿ, ಗುರು ಸೇವೆಯೇ ಮುಖ್ಯ ಪ್ರಿಯಾರಿಟಿ. ಅದಕ್ಕೆ ‘..ನಾವು ಹಿಂಗೇ ಇದ್ದು ಬಿಡೋಣ. ನನಗೇನೂ ಬೇಕು ಅಂತಾ ಇಲ್ಲ. ದೀಕ್ಷೆ ತೊಗೊಂಡಿದ್ದೀನಿ’ ಇತ್ಯಾದಿ ಸತ್ಯಗಳು (?) ಅವನ ಬಾಯಿಂದ ಬಂದಾಗ ದಂಗಾದೋಳು ತುಂಗ. ಆದರೆ ಇದನ್ನು ಸುಧಾರಿಸುವುದಾದರೂ ಹೇಗೆ..? ಆಕೆಯ ಅಣ್ಣ, ಹತ್ತಿರದ ವರಸೆಯ ಸೋದರ ಎ ಹೇಳಿ ನೋಡಿದರೂ ಏನೂ ಉಪಯೋಗವಾಗಲೇ ಇಲ್ಲ. ಮೂಲತ: ಅವನ ಏನಾದರೂ ಸಮಸ್ಯೆ ಇದೆಯಾ ಎನ್ನಲು ಅದಕ್ಕಾದರೂ ಒಪ್ಪಬೇಕಲ್ಲ. ಬೇರಾವ ಕಿರಿಕಿರಿಯೂ ಇಲ್ಲವೇ ಇಲ್ಲ. ಆದರೆ ‘ಮದುವೆ ಗಂಡಿಗೆ ಅದೇ ಇಲ್ಲ, ನೀರಿಗೆ ಚಾಣಗಿ ಹಿಡಿದರ ಏನ ಬಂತು’ ಎನ್ನುವಂತೆ ಆತ ತನ್ನ ಸನ್ಯಾಸತ್ವದ ವರಸೆಗೆ ಪಕ್ಕಾಗಿದ್ದಾನೆ. ಇಬ್ಬರಿಗೂ ಬೇಕಾದ ಆತ್ಮೀಯರು ಅವರನ್ನು ಕೂರಿಸಿಕೊಂಡು ಮಾತಾಡಿದರೆ, ಪುಣ್ಯಾತ್ಮ ‘ನಿನಗ ಬೇಕಾದಾರ ನನ್ನ -ಂಡ್ಸ್ ಬರ್ತಾರ. ಎಲ್ಲಾ ಗುಟ್ಟಾಗೇ ಇರ್ತದ’ ಎನ್ನಬೇಕಾ..? ಯಾರಿಗಿದೆ ಇಂಥಾ ಫ್ರೀ ಆಫರ್..?
‘..ಯಾರಿಗರೇ ಹೇಳಿದರ ನಂಬೊ ಮಾತಾ ಇದು. ಕೂಡಿಕಿ ಮಾಡ್ಕೊಂಡು ಇರು ನನಗೇನೂ ಬೇಜಾರಿಲ್ಲ ಅನ್ನೋ ಗಂಡನ್ನ ಕಟ್ಕೊಂಡು ಬಾಳೇ ಮಾಡು ಅಂದರ..? ಅವನಿಗೆ ಅದೇನು ಪ್ರಾಬ್ಲಂ ಐತೋ ಗೊತ್ತಿಲ್ಲ. ಅದರ ಏನೂ ಗೊತ್ತೇ ಆಗದಂಗ ಇದ್ದು ಬಿಟ್ರ ಬಗೆಹರಿಸೋದಾದರ ಹೆಂಗೆ..? ಅಲ್ಲ ಸಂತೋಷಾ.. ಗಂಡ ಹೆಂಡತಿ ಒಟ್ಟಿಗಿದ್ದರ ತಾನೆ ಮಕ್ಕಳಾಗೋದು. ನಿಮ್ಮ ಮಗನಿಗೆ ಕೇಳ್ರಿ ಅಂತ ಅತ್ತಿ, ಮಾವಂಗ ಉತ್ರಾ ಕೊಡಬಹುದು. ಆದರೆ ನನ್ನ ಗಂಡ ನನ್ನ ಜತೆ ಮಕ್ಕೊಳೋದಿಲ್ಲ, ಅದಕ್ಕೆ ಮಕ್ಕಳಾಗ್ತಿಲ್ಲ ಅಂತ ಯಾವ ಹೆಣ್ಣಮಗಳು ಹೇಳ್ಕೋತಾಳ ಹೇಳು ನೋಡೋಣ. ಜನಕ್ಕೆ ಮಾತಾಡಲಿಕ್ಕೆ ಸುಲಭ. ಬಂಗಾರದ ಪೆಟಗಿ ಒಳಗಿದ್ದು ಅನುಭವಿಸೋದು ನನಗ ಗೊತ್ತು’ ಎನ್ನುತ್ತಿದ್ದರೆ ಹೀಗೂ ಜನ ಸುಖಾಸುಮ್ಮನೆ ತಂತಮ್ಮ ಕಾಲ ಮೇಲೆ ಕಲ್ಲು ಚೆಲ್ಲಿಕೊಳ್ಳುತ್ತಾರಾ ಅನ್ನಿಸಿದ್ದು ನಿಜ.
ಅಸಲಿಗೆ ಅವನದ್ದು ಸನ್ಯಾಸತ್ವವಾ, ದೈಹಿಕ ಅಸಮರ್ಥತೆಯಾ ಅತ್ತ ಇರಲಿ. ಆದರೆ ದಾಂಪತ್ಯದಲ್ಲಿ ಲೈಂಗಿಕತೆ ಕೇವಲ ತೀಟೆಯಲ್ಲ. ಅದೊಂದು ಕೊನೆಯವರೆಗೂ ದಂಪತಿಗಳನ್ನು ಬಿಗಿಯಾಗಿರಿಸುವ ಮಧುರ ಅನುಭೂತಿಯ ಬಾಂಧವ್ಯವೂ ಹೌದು. ಅಕಸ್ಮಾತ್ ಮದುವೆಯ ನಂತರ ಹೆಣ್ಣೊಬ್ಬಳು ನಾನು ಸನ್ಯಾಸಿ ಹಂಗಿರ್ತೀನಿ, ನನಗೆ ಆಸಕ್ತಿ ಇಲ್ಲ, ಇದು ಆರಾಧನೆ ಎಂಬಿತ್ಯಾದಿ ಕಾರಣಗಳೊಂದಿಗೆ, ಗಂಡನಿಂದ ದೂರ ಉಳಿದ ಇತಿಹಾಸ ಇದೆಯಾ..? ಯಾವುದೇ ತೀರ ಹೌದೇ ಎನ್ನುವಂತಹ ಅನಾರೋಗ್ಯದ ಕಾರಣಗಳಿದ್ದರೂ ಸಹಿಸಿಕೊಂಡು ಮಲಗಿದ್ದಿದೆಯೇ ಹೊರತು ಹೆಂಡತಿಯಾದವಳು ಹೀಗೆ ಗೆರೆ ಕೊರೆದದ್ದೇ ಇಲ್ಲ. ಹಾಗಿದ್ದೇ ಆದಲ್ಲಿ ಮೊದಲ ವಾರವೇ ಆಕೆಯನ್ನು ಯಾವ ಮುಲಾಜೂ ಇಲ್ದೆ, ‘ನನ್ನ ಜತೆ ಇವಳು ಮಲಗುತ್ತಿಲ್ಲ’ ಎಂದು ನಿರ್ಲಜ್ಜವಾಗಿ ಹರಾಜು ಹಾಕಿಯೇ ಮನೆಯಿಂದ ಹೊರದಬ್ಬುತ್ತಿದ್ದರು, ಇಲ್ಲಾ ಆಕೆ ತಡೆದುಕೊಂಡಷ್ಟು ದಿನವೂ ರೇಪು ನಿರಂತರವಾಗಿರುತ್ತಿತ್ತು. ಹೆಂಡತಿಯನ್ನು ಒತ್ತಾಯದಿಂದ ಸೇರುವುದೂ ರೇಪೆ ಅಲ್ವಾ..? ದಿನಗಳ ಲೆಕ್ಕಾಚಾರ ನನಗೆ ಗೊತ್ತಿಲ್ಲ. ಆದರೆ ಇವತ್ತಿಗೂ ನನ್ನ ಗಂಡ ನನಗೆ ಸರಿಯಾಗಿ ಸಾಂಗತ್ಯ ಕೊಡುತ್ತಿಲ್ಲ ಎಂದು ದೂರು ಕೊಟ್ಟು ದಾಂಪತ್ಯ ಸಂಬಂಧಕ್ಕೆ ಎಳ್ಳು ನೀರು ಬಿಡುವ ಹೆಣ್ಣುಮಕ್ಕಳನ್ನು ನಾನು ಕಂಡಿಲ್ಲ ಇಲ್ಲಿವರೆಗೂ. ಅಕಸ್ಮಾತ್ ಹಾಗಾಗಿದ್ದೇ ಆದಲ್ಲಿ ಹೆಚ್ಚಿನ ಡಿವೋರ್ಸ್ ಕೇಸುಗಳಲ್ಲಿ ಇದೇ ಪ್ರಮುಖ ಕಾರಣವಾಗಿರುತ್ತಿತ್ತು ಅಷ್ಟರ ಮಟ್ಟಿಗೆ ಗಂಡಸರು ಈಗಲೂ ಬಚಾವ್. ಆದರೆ ಕಳೆದುಹೋಗುವ ಇಂತಹ ಜೀವಂತಿಕೆಯ ಬದುಕನ್ನು ಮರಳಿ ಕಟ್ಟಿ ಕೊಡುವವರಾದರೂ ಯಾರು..?
ಕಾರಣ ಅವಳು ಎಂದರೆ...

Saturday, September 3, 2016

ಎಲ್ಲಾ ಇದ್ದರೂ ದುರ್ಬುದ್ಧಿಯ ಬದುಕು..?
ಎಷ್ಟೇ ಓದಿದ ಮತ್ತು ಸಂಸ್ಕಾರಯುತ ಮನುಷ್ಯ ಎಂದುಕೊಂಡರೂ ವಿಶಾಲ ಮನೋಭಾವನೆ ತಳೆಯುವಲ್ಲಿ ಮಾತ್ರ ಪುರುಷ ಇವತ್ತಿಗೂ ಕಂಜೂಸ್‌ನಂತಾಡಲು ಕಾರಣ ಸಹವರ್ತಿಯ ಮೇಲಿನ ಅಪನಂಬಿಕೆಯಾ ಅಥವಾ ಸ್ವಯಂ ನಂಬಿಕೆ ಇಲ್ಲದಿರುವುದಾ..?
ಬಹುಶಃ ಆ ಕಾಲಕ್ಕೆ ವೈದ್ಯಕೀಯ ಮತ್ತು ಇಂಜಿನಿಯರಿಂಗ್ ಓದುವುದೆಂದರೆ ನನ್ನ ಲೆಕ್ಕದಲ್ಲಿ ಅದ್ಭುತ. ಬುದ್ಧಿವಂತಿಕೆಯ ತುಂಡುಗಳು ಮಾತ್ರ ಅಷ್ಟೆ ಓದಲು ಸಾಧ್ಯ ಎನ್ನುವ ತಿಳಿವಳಿಕೆಯ ಜತೆಗೆ, ಅಂತಹ ಸಹಪಾಠಿಗಳನ್ನೇ ಭಯಫಭಕ್ತಿಯಿಂದ ನೋಡುತ್ತಿದ್ದಾ. ಅಜಮಾಸು ಕೊನೆಯ ಆರೆಂಟು ವರ್ಷದ ಗಣಿತ ಮತ್ತು ಇಂಗ್ಲಿಷು ಪೇಪರನ್ನು ಉಸುರುಗಟ್ಟಿ ಪಾಸು ಮಾಡಿದ್ದ ನನಗೆ, ಭಯಪಡಿಸುವ ಮೀಡಿಯಂನಲ್ಲಿ ಸೈನ್ಸ್ ಡಿಗ್ರಿ ಓದುವವರು ಅದ್ಭುತ ಹುಡುಗರಾಗಿ ಕಾಣಿಸುತ್ತಿದ್ದರು.
ನಮ್ಮೂರಿನ ಹಿರಿಯ ಸಹಪಾಠಿಗಳಾದ ಶಂಕರ, ನಾರಾಯಣ, ದಾಕ್ಷಾಯಿಣಿ ಎ ಮೆಡಿಕಲ್ಲು ಎನ್ನುತ್ತಾ ಎ ಹೋಗಿ, ರಜಕ್ಕೆಂದು ಬಂದಾಗೆಲ್ಲ ಅವರದೇ ಟೀಮು ಕಟ್ಟಿಕೊಂಡು ಕೊಂಚವೇ ತಲೆ ಮೇಲೆತ್ತಿ, ಅದುರಿ ಬೀಳದಿದ್ದರೂ ಕನ್ನಡಕ ಸರಿಪಡಿಸುತ್ತಾ, ನನ್ನಂತೆ ನೋಡುತ್ತಾ ನಿಲ್ಲುತ್ತಿದ್ದ ನಮ್ಮ ಕಡೆಗೆ ಮಧ್ಯೆ ಮಧ್ಯೆ ಸಣ್ಣ ನಗುವನ್ನು ಬಿಸಾಕುತ್ತ, ಮುಂದಿನ ಸೆಕೆಂಡ್‌ನಲ್ಲಿ ‘ಯು ನೋ.. ಲಾಸ್ಟ್ ಸೆಮ್..’ ಎಂದು ಸಂಪೂರ್ಣ ಇಂಗ್ಲಿಷಿನ ಗುತ್ತಿಗೆ ಪಡೆದವರಂತೆ ಟುಸ್ಸು.. ಪುಸ್ಸು.. ಅನ್ನುತ್ತಿದ್ದರೆ, ಅಷ್ಟು ದೂರದಲ್ಲಿ ನಿಂತಿರುತ್ತಿದ್ದ ನಾನು ‘ಅವರ ಕೈಯನಾದರೂ ಬರೆದಿರುವ ಚೀಟಿ ಇರಬಹುದಾ, ಅದನ್ನು ನೋಡಿ ಹೀಗೆ ಸರಾಗವಾಗಿ ಮಾತಾಡುತ್ತಾರಾ..’ ಎಂದು ನಿರುಕಿಸುತ್ತಿದ್ದಾ. ಹಾಗೇನೂ ಕಾಣದೇ ಸಣ್ಣ ನಿರಾಸೆಯೂ, ಅದರ ಹಿಂದೇನೆ ಬಾರದ ಭಾಷೆಯ ಬಗ್ಗೆ ಆಂದೋಳನೆಯೂ ಆಗುತ್ತಿತ್ತು.
ಇವತ್ತಿಗೂ ಸರಿಯಾಗಿ ಇಂಗ್ಲಿಷು ಬಾರದ ನಾನು ಯಾವತ್ತೂ ಆ ಭಾಷೆಯ ಗೋಜಿಗೇ ಹೋಗಿಲ್ಲ. ಜಗತ್ತಿನಲ್ಲಿ ಎಲ್ಲಿ ಹೋದರೂ ಬದುಕಬಲ್ಲಷ್ಟು ಅಂಗ್ರೇಜಿ ಬರುತ್ತದೆಯಾದುದರಿಂದ ಓದುವ ಪ್ರಮೇಯ ಬರಲೂ ಇಲ್ಲ. ಅಷ್ಟಕ್ಕೂ ಜಗತ್ತಿನ ಯಾವ ಮೂಲೆಯಲ್ಲೂ ಬದುಕುತ್ತೇನೆನ್ನುವುದಕ್ಕೆ ಭಾಷೆ ಬೇಕಿಲ್ಲ. ಎದೆಯಲ್ಲಿ ಮೀಟರು, ಒಂದಿಷ್ಟು ನಿಜಾಯಿತಿ ಎರಡಿದ್ರೆ ಸಾಕು ಎನ್ನುವ ‘ಚಿರಂಜೀವಿ ರಹಸ್ಯ’ ಗೊತ್ತಾದ ದಿನವೇ, ಇಂಗ್ಲಿಷು ಕಲಿತವರು ಎಂದೇ ಜಾಗ ಪಡೆದಿದ್ದ ನಾಣಿ, ಶಂಕ್ರ, ದಾಕ್ಷಿ ಸೇರಿದಂತೆ ನೂರಾರು ಜನರನ್ನು ಮನಸ್ಸಿನಿಂದ ಹೊರದಬ್ಬಿ ನಿರುಮ್ಮಳವಾಗಿದ್ದಾ. ಆದರೆ ಕುಸುಮ ಮಾತ್ರ ಇಂತಹ ಇಬ್ಬಂದಿತನವನ್ನು ನನಗ್ಯಾವತ್ತೂ ಉಂಟುಮಾಡಿರಲಿಲ್ಲ. ಎಷ್ಟು ಸೂಕ್ಷ್ಮ ಹುಡುಗಿಯೆಂದರೆ ಆಕೆ ಪುಸ್ತಕದ ಪುಟ ತೆರೆಯುವುದೂ ಗೊತ್ತಾಗದಷ್ಟು ನಿಶ್ಶಬ್ದವಾಗಿ ಬದುಕಿಬಿಟ್ಟವಳು. ಹಾಗಾಗೇ ದೇವರು ಆಕೆಯ ಮಿದುಳಿಗೆ ನೇರ ಭೈರಿಗೆ ಮೂಲಕ ಬುದ್ಧಿವಂತಿಕೆ ತುಂಬಿದ್ದನೇನೋ. ನಾನು, ‘ಐವತ್ತು ಪರ್ಸೆಂಟ್ ದಾಟೆದ, ನಂದೂ ಸೆಕೆಂಡ್ ಕ್ಲಾಸ್..’ ಎಂದು ಎದೆಯುಬ್ಬಿಸುವ ಹೊತ್ತಿಗೆ ಆಕೆ, ‘ನೂರಕ್ಕೆ ಎರಡು ಮಾರ್ಕು ಕಮ್ಮಿ ಬಂದುವಲ್ಲ. ಎಲ್ಲಿ ಹೋದವು’ ಎಂಬ ಹುಡುಕಾಟಕ್ಕಿಳಿದಿದ್ದವಳು.
‘ಹೇ ಕುಸ್ಮಿ.. ನಿನ್ನ ಮಾರ್ಕ್ಸಿನ್ಯಾಗ ಮೂರು ಹುಡುಗ್ರು ಪಾಸ್ ಅಗಿರ್ತಾವ ಬಿಡಲೆ. ಎರಡ್ ಹೋದ್ರ ಹೋಗಲಿ..’ ಎಂದು ಗೇಲಿಯಾಡಿದ್ದಾ. ಆಕೆ ಅಷ್ಟೆ ತಣ್ಣಗೆ ‘ಇ ಒಂದು ಉಣಾ ಹಾಕೋದು ಮರತಿದ್ನಿ ನೋಡು, ಅದಕ್ಕ ಎರಡು ಮಾರ್ಕು ಹೋಗಿದಾವು..’ ಎನ್ನುತ್ತಾ ಎದ್ದುಹೋಗಿದ್ದಳು. ನಂತರದ್ದು ಆಕೆಯದು ನಾಗಾಲೋಟ. ರ‍್ಯಾಂಕು ಕೈತಪ್ಪಿದ್ದರೂ ‘ಬೆಂಗ್ಳೂರ್ ನೋಡ್ಬೆಕಲೆ ಒಮ್ಮೆ..’ ಎಂದು ನಾವೆ ಅದೇ ದೊಡ್ಡ ಪ್ರಾಜೆಕ್ಟು ಎಂಬಂತೆ ಮಾತಾಡಿಕೊಳ್ಳುವ ಹೊತ್ತಿಗೆ ಆಕೆ ಅಲ್ಲಿಗೇ ಮೆಡಿಕಲ್ಲು ಓದಲು ಹೊರಟುಹೋಗಿದ್ದಳು.
ಬದುಕಿನ ತಿರುಗಣಿಯಲ್ಲಿ eನೋದಯವಾದಂತೆ ನಾನು ಇದ್ದಕ್ಕಿದ್ದಂತೆ ತಾಂತ್ರಿಕ ತರಬೇತಿ ಅವಧಿಯಲ್ಲಿ ಓದಲು ಎದ್ದು ಕೂತಿದ್ದಾ. ತೆಕ್ಕೆ ತುಂಬ ಮಾರ್ಕು ಕೈಗೆತ್ತಿಕೊಂಡು ಹೊರಬೀಳುವ ಹೊತ್ತಿಗೆ ‘ಆಕೆಗೆ ಮದುವೆ’ ಇತ್ಯಾದಿ ತುಣುಕು ತುಣುಕು ಸುದ್ದಿಗಳು ಲಭ್ಯವಾಗುತ್ತಿದ್ದವು. ಆಗೆಲ್ಲ ‘ಇಬ್ಬರೂ ಡಾಕ್ಟರಂತ.. ತಿಂಗಳಿಗೆ ಒಂದ ಲಕ್ಷ ಪಗಾರ ಬರ್ತದಂತಲೇ..’ ಎಂದು ಹುಡುಗರು ಮಾತಾಡುತ್ತಿದ್ದರೆ ನಾನು ಒಂದರ ಮುಂದೆ ಎಷ್ಟು ಸೊನ್ನೆ ಹಾಕಿದರೆ ಲಕ್ಷ ಆದೀತು ಎನ್ನುತ್ತ ಬಟ್ಟು ಮಡಚುತ್ತಾ ಎಣಿಸಿದರೂ ಲೆಕ್ಕ ತಪ್ಪುತ್ತಿದ್ದಾ. ಕಾರಣ ಆಗೆ ಒಂದು ಸಾವಿರ ರೂ. ಪಗಾರ ಕೂಡಾ ಮುಟ್ಟಿರಲಿಲ್ಲ ನಾನು. ಆದರೆ ಬೆಂಗಳೂರಿನ ಗಲ್ಲಿಗಳಿಗೆ ಪರಿಚಿತನಾಗುವ ಮೊದಲೇ ಬಾರುಗಳಲ್ಲಿ ಅನಾಮಧೇಯನಾಗಿ ಗ್ಲಾಸೆತ್ತುತ್ತಿದ್ದೇನಲ್ಲ, ಆ ಕೆಲಸ ಜಗತ್ತನ್ನು ನನಗೆ ತುಂಬ ಚೆನ್ನಾಗಿ ಪರಿಚಯಿಸಿಬಿಟ್ಟಿತು. 
‘ವಸಂತ ನಗರದ ನಿಮ್ಮ ಕ್ಲಿನಿಕ್ಕಿಗೆ ಬರ್ತೀನಿ.. ನಿನ್ನ ಮನೆಗಿಂತ ದವಾಖಾನಿ ಹುಡಕೋದು ಬೇಷ್‌ಬಿಡ..’ ಎನ್ನುತ್ತಾ ಕುಸುಮಳಿಗೆ ಮಾತಾಡುತ್ತಿದ್ದರೆ, ‘ಬೇಡ ಬೇಡ, ದವಾಖಾನಿಗಂತೂ ಬರೋದ ಬ್ಯಾಡ ಮಾರಾಯ, ಮನೀಗೆ ಬಾ. ನಾ ಹೇಳಿದಾಗ ಬಾ.. ಅರ್ಜೆಂಟ್ ಮಾಡ್ಬ್ಯಾಡ’ ಎನ್ನುತ್ತಾ ಪ್ರತಿ ಹಂತದಲೂ ಸೂಕ್ತ ಸಂದೇಶ ರವಾನಿಸತೊಡಗಿದ್ದು, ಇವಳೇನಾ ಹಳೆಯ ಕುಸ್ಮಿ ಎನ್ನಿಸತೊಡಗಿತ್ತು.
ಚೆಂದದ ಮನೆ ಎನ್ನುವುದಕ್ಕಿಂತಲೂ ಪುಟಾಣಿ ಬಂಗಲೆ ಎಂದರೆ ಸರಿಹೋದೀತೇನೋ. ತಿವಾಸಿಯ ಮೇಲೆ ಎಲ್ಲಿ ನನ್ನ ಬೂಟುಗಳ ಮಾರ್ಕು ಮೂಡುತ್ತವೆಯೇನೋ ಎನ್ನಿಸುವಷ್ಟು ಚೆಂದ, ಸ್ವಚ್ಛ, ಹಸಿರು ಇತ್ಯಾದಿ ನಳನಳಿಸುತ್ತಿತ್ತು. ಪ್ರತಿ ಕೋಣೆಯಲ್ಲೂ ಸಾಗುವಾನಿಯ ಕೆಲಸ ಅಲ್ಲ ನಿಂತು ನೋಡುವಂತೆ ಮಾಡುತ್ತಿತ್ತು. ಎದೆಯೆತ್ತರದ ಆವಾರದಾಚೆಗೆ ಒಳಗಿನ ಬದುಕಿನ ಗಂಧಗಾಳಿಯೂ ಸೋಕದಂತಿತ್ತು. ‘ಏನ್ ತಗೋತಿ..?’ ಎನ್ನುವ ಮೊದಲೇ, ‘ಸ್ವಲ್ಪ್ ಸಕ್ರಿ ಮತ್ತ ಚಾ ಪುಡಿ ಜಾಸ್ತಿ.. ಚಾನೆ ಇರ್ಲಿ..’ ಎಂದಿದ್ದಾ. ವಯಸ್ಸು ಮತ್ತು ಓದು, ಜತೆಗೆ ವೃತ್ತಿಯ ಅನುಭವಕ್ಕನುಗುಣವಾಗಿ ಬಂದುಬಿಡುವ ಗಾಂಭೀರ್ಯವಿದೆಯಲ್ಲ ಅದು ಆಕೆಯ ಮುಖದಲ್ಲೂ ಎದ್ದು ಕಾಣುತ್ತಿತ್ತು. ಯಾರೇ ಇರಲಿ ಅವರವರ ವೃತ್ತಿಯಲ್ಲಿ ಒಳಗೊಳ್ಳುವಿಕೆಯಿಂದ ಅವರ ದೇಹಭಾಷೆ ಕೂಡಾ ಅವರಿಗರಿವಿಲ್ಲದೆ ಬದಲಾಗುತ್ತಿರುತ್ತದೆ. ಹಾಗಾಗಿ ಎದುರಿನವರಿಗೆ ಅರಿವಾಗುವ ಮೊದಲೇ ಒಂದು ರೀತಿಯ ಗೌರವವೂ ಬರುವುದು ಸುಳ್ಳಲ್ಲ. ಹಾಗಾಗಿ ಕುಸುಮ ಎನ್ನುವ ಬಾಲ್ಯಕಾಲದ ಗೆಳತಿಯ ಡಾಕ್ಟರಿಕೆ ನನಗೆ ಈಗಲೂ ಸೋಜಿಗಮಯ ವೃತ್ತಿ. ಬಹುಶಃ ವೈದ್ಯರು ಮತ್ತು ಲಾಯರುಗಳು ಕಂಡಷ್ಟು ತರಹೇವಾರಿ ಬದುಕಿನ, ಸೂಕ್ಷ್ಮ ಮತ್ತು ಸಾವಿರ ತರಹದ ಕತೆಗಳನ್ನು ಇನ್ಯಾರೂ ಕಾಣಲಿಕ್ಕಿಲ್ಲ. ಅದನ್ನೆ ಕುಸುಮಳಿಗೆ ವಿವರಿಸುತ್ತಿದ್ದರೆ.. ‘ಕತೆ ಅಂತೆ.. ಸುಮ್ನಿರೋ ಮಾರಾಯ. ಹಾಸ್ಪಿಟಲ್‌ಗೆ ಬರೋ ಪೇಷಂಟ್ಸ್ ಇನ್ಮುಂದೂ ಬರೋ ಹಂಗಾದರ ಸಾಕು ಅನ್ನೋ ಹಂಗಾಗೇದ ನೋಡು. ಎಷ್ಟು ಕಲತಿದ್ದರೇನು, ಗಂಡನ ಕೈಯಾಗೆ ಸಿಕ್ಕಮ್ಯಾಲೆ ಬದುಕು ಚೌಕಟ್ಟಿನ್ಯಾಗೇ ಸುತ್ತದ.. ಇರ್ಲಿ.. ನಿನ್ನ ಕತೀ ಏನು. ಬರೀ ಕತೀ ಬರ್ಕೊಂಡೆ ಓಡಾಡ್ತಿದ್ದೀಯೇನು..’ ಎನ್ನುತ್ತಿದ್ದರೆ ಮೆತ್ತನೆಯ ತಿವಾಸಿಯ ಮೇಲೆ ಇರಿಸಿದ್ದ ಪಾದಗಳಿಗೆ ಅರಿಯದ ಹಿಂಸೆ. ಇಬ್ಬರಿಗೂ ಸಮಾನ ವೃತ್ತಿ, ಡಾಕ್ಟರರು. ಆದರೆ ಅವನು ಮಾತ್ರ ಗಂಡಸಿನ ಬದುಕಿನ ನಿರ್ಲಜ್ಜ ಧೋರಣೆಯಿಂದ ಹೊರತಾಗೇ ಇಲ್ಲ.
ಆಕೆ ಯಾವುದೇ ಪುರುಷ ರೋಗಿಗಳನ್ನು ನೋಡುವಂತಿಲ್ಲ, ಅವರೊಡನೆ ಮಾತಾಡುವಂತಿಲ್ಲ. ಒಮ್ಮೆ ಚಿಕಿತ್ಸೆ ಪಡೆದ ರೋಗಿ ಅದೇ ವೈದ್ಯರನ್ನು ಬಯಸುವುದು ಸಹಜ. ಹಾಗಾಗಿ ಅವನು ಖಾಲಿ ಇದ್ದರೂ ಬಾರದೆ ಪಕ್ಕದ ಕ್ಯಾಬಿನ್‌ನಲ್ಲಿದ್ದ ಕುಸುಮಳ ಬಳಿ ಚಿಕಿತ್ಸೆಗೆ ರೋಗಿಗಳು ಸಾಲು ನಿಲ್ಲುತ್ತಿದ್ದರೆ ಅವನು ಕೂತ ಉರಿಯುತ್ತಾನೆ. ಅಷ್ಟಕ್ಕೂ ಮಿಗಿಲಾಗಿ ಪೇಷಂಟ್ಸ್ ಬಂದು ಹೋಗುತ್ತಿದ್ದಂತೆ, ‘ಅವ್ನೇನು... ತೋರ್ಸಾಕ ಬಂದಿದ್ನೇನು? ಯಾಕ ಎ ಪೇಷಂಟ್ಸ್‌ಗೆ ನೀನ ಬೇಕು..? ನಿಂದೇನ್.. ತೋರಸ್ತಿ ಅಂಥಾದ್ದು, ಅದೂ ನಾನು ನೋಡಿಲ್ಲದ್ದು..’ ಎಂದು ಪರಮ ಕೊಳಕು ಶಬ್ದಗಳಿಂದ ಹೀಯಾಳಿಸುತ್ತಾನೆ. ಇತ್ತ ಬಿಡುವಂತಿಲ್ಲ ಅತ್ತ ಬದುಕುವಂತೆಯೂ ಇಲ್ಲ. ಬರುಬರುತ್ತಾ ಕ್ರಮೇಣ ಮಹಿಳೆಯರನ್ನಷ್ಟೆ ನೋಡಿದರೂ ಅದಕ್ಕೂ ಒಂದು ಫರ್ಮಾನು ರೆಡಿ ಇದೆ. ‘ಇನ್ಮೇಲೆ ದಿನಕ್ಕ ಎರಡು ಸಾವಿರ ರೂ. ಮಿನಿಮಮ್ ಕಲೆಕ್ಷನ್ ಆಗಬೇಕು. ನಾ ಹೇಳಿದ ಮೆಡಿಸಿನ್ ಮಾತ್ರ ಬರೀಬೇಕು..’ ಎನ್ನುತ್ತಾ ಕುತ್ತಿಗೆ ಮೇಲೆ ಕೂತಿದ್ದಾನೆ. ಫರ್ಮಸಿಗಳ ಜತೆ ಕೈ ಸೇರಿಸಿದ್ದು, ಅದರಲ್ಲೂ ದುಡ್ಡು ಮಾಡಿಕೊಳ್ಳುವ ಹವಣಿಕೆ ಅವನದ್ದಾದರೆ, ಪಾಪ ಹೆಣ್ಣುಮಕ್ಕಳು, ಬಡವರು ಎಂದು ಮರುಗುವ ಕುಸುಮಳ ಸರಳ ಬದುಕು ಅರ್ಧದಾರಿಯಲ್ಲಿ ಬೆತ್ತಲಾಗುತ್ತಿದೆ.
‘ಅವನಿಗೆ ಹೆಣ್ಣಂದರ ಹೆಣ್ಣು ಅಷ್ಟ. ನೂರಾರು ಜನ ಗಂಡಸರ ಬಂದರೂ ನನಗ ಪೇಷಂಟ್ಸ್ ಅಷ್ಟ. ಅವರದ್ದೇನು ನೋಡ್ತಿ ಅಂತ ಕೇಳಿದರ ಏನ್ ಹೇಳಲಿಕ್ಕಾಗ್ತದ..? ಇಷ್ಟೆಲ್ಲ ಓದಿ, ಪಾಪದ ಪೇಷಂಟ್ಸ್‌ನ್ನ ಮಿಸ್‌ಗೈಡ್ ಮಾಡೊ ಮನಸ್ಸು ನನಗಿಲ್ಲ. ಅದರೆ ಇವ್ನ ಕೈಗೆ ಮತ್ತು ಬರೀ ಲೆಕ್ಕಾಚಾರಕ್ಕ ಸಿಕ್ಕು ಬದುಕು ಹೈರಾಣಾಗೇದ ನೋಡು. ಅಲ್ಲ ಈ ಗಂಡಸರಿಗೆ ಹಣ, ಓದು, ಚೆಂದನ ಹೆಂಡತಿ, ಮರ್ಯಾದಿ ಎ ಇದ್ರೂ ಇಂಥಾ ದುರ್ಬುದ್ಧಿ ಯಾಕ ಇರ್ತದ..?’.
ಕುಸುಮ ಮಾತಾಡುತ್ತಾ ತಲೆ ತಗ್ಗಿಸಿ ಕತೆಯಾಗುತ್ತಿದ್ದರೆ ತಲೆ ಮೇಲೆತ್ತುವ ಧೈರ್ಯ ನನಗಾದರೂ ಎಲ್ಲಿಂದ ಬಂದೀತು ..? ಅಸಲಿಗೆ ಇದಕ್ಕೆ ಅಪವಾದಗಳಿವೆಯಾದರೂ ಕುಸುಮಳಂಥವಳ ಬದುಕಿಗೆ ಬದಲಾವಣೆ ಬರುತ್ತದಾ..? ಗೊತ್ತಿಲ್ಲ.ಕಾರಣ 

Thursday, September 1, 2016

ಗಂಡಸರು ಯಾಕೆ ಸುಮಾರಾಗಿಬಿಡುತ್ತಾರೆ

ಹೊರ ಜಗತ್ತಿಗೆ ಮನೆಯೊಳಗಿನದನ್ನು ಕಾಣಿಸದಂತೆ ಬಾಗಿಲಿಕ್ಕಿಕೊಳ್ಳುವುದು ಸುಲಭ. ಆದರೆ ಮನಕ್ಕೆ ಬಿದ್ದ ಕನ್ನದ ಕಿಟಕಿಗೆ ಅಗುಳಿಹಾಕುವುದಾದರೂ ಹೇಗೆ..?ಅದೂ ಹಾರುಹೊಡೆತಕ್ಕೆ. ಅಂಥ ಶಾಶ್ವತ ತೇಪೆ ಇದೆಯಾದರೂ ಎಲ್ಲಿ..?


ಬಹುಶಃ ಅನಿವಾರ್ಯತೆ ಮತ್ತು ಬಡತನ ಮಾತ್ರ ಇಂಥ ಸಹಿಸುವಿಕೆಗೆ ಕಾರಣವಾಗುತ್ತದಾ ಅಥವಾ ಅದಿನ್ಯಾವ ಒತ್ತಡಕ್ಕೆ ಬಿದ್ದು ಹೆಣ್ಣುಮಕ್ಕಳು ಹೀಗೆ ಬದುಕು ಕಳೆದುಕೊಳ್ಳುತ್ತಾರೋ ನನಗಂತೂ ಗೊತ್ತಿಲ್ಲ. ಆದರೆ ಇವತ್ತಿಗೂ ಸಮಾಜದಲ್ಲಿ ಹೆಣ್ಣಿನ ಬಳಸಿಕೊಳ್ಳುವಿಕೆಯ ಸ್ಥಿತಿಗತಿಯಲ್ಲಿ ಯಾವ ಬದಲಾವಣೆಯೂ ಕಾಣುತ್ತಿಲ್ಲ. ಅದರಲ್ಲೂ -ಮಿನಿಸ್ಟುಗಳು ಬೆಂಗಳೂರಿನಾಚೆಗೂ ಕೊಂಚ ಕಣ್ಬಿಟ್ಟರೆ ಹೆಣ್ಣುಮಕ್ಕಳ ಪರಿಸ್ಥಿತಿ ಬದಲಾಗೇ ಇಲ್ಲ ಎನ್ನುವ ಅನಾಹುತಕಾರಿ ದುರಂತ ರಾಚೀತು.
ಆದರೆ ಗಂಡಸಿನ ಹಿನ್ನೆಲೆಯ ವಿವೇಚನೆ ಇಲ್ಲದೆ ಪುಕ್ಕಟೆ ಬೋರ್ಡಿಂಗ್/ಲಾಡ್ಜಿಂಗ್ ವ್ಯವಸ್ಥೆ ಕಲ್ಪಿಸುತ್ತಾ, ಹಗಲು ಕಚೇರಿ ಮತ್ತು ರಾತ್ರಿ ಕಂಡವನ ಬಗಲಿಗೆ ಕೈ ಸೇರಿಸಿ ಬಾರು, ಬುಲೆಟ್ಟು ಎನ್ನುತ್ತ ಹೊರಟುಬಿಡುವ, ವರ್ಷಕ್ಕೊಬ್ಬ ಸಂಗಾತಿ ಜತೆಗೆ ಗಂಡಸರು ಬದಲಾದಂತೆ ಮನೆಗಳನ್ನು ಬದಲಿಸುವ, ಬುಲೆಟ್ ಬೆಡಗಿಯರು ಇವತ್ತು ಹೆಣ್ಣುಮಕ್ಕಳ ಬಗೆಗಿನ ಗೌರವವನ್ನು ಸುಮಾರಾಗಿಸುತ್ತಿದ್ದಾರೆ, ಅದರಲ್ಲೂ -ಸ್‌ಬುಕ್‌ನಂತಹ ಸಾಮಾಜಿಕ ತಾಣದಲ್ಲಿ. ಅಂಥವರು ಬದುಕಿನಲ್ಲಿ ಬಟ್ಟೆ, ಗಂಡಸು ವ್ಯತ್ಯಾಸ ಇರದವರು. ಇಂಥವರಿಂದಾಗಿ ತುಂಬ ಕಷ್ಟದಿಂದ ಮರ್ಯಾದೆಯುತ ಜೀವನ ನಡೆಸುವ ಹೆಣ್ಣುಮಕ್ಕಳ ಬಗ್ಗೆಯೂ ಹಗುರ ಭಾವನೆ ಮೂಡುತ್ತಿದೆ.
ಗೀತಾ.. ಮದುವೆ ಎನ್ನುವ ಸಮಯಕ್ಕೆ ಬಂದಾಗ ಅದ್ಭುತ ಎನ್ನುವ ಮೇಲ್ವರ್ಗದ ಕುಟುಂಬಕ್ಕೇನೂ ಸೊಸೆಯಾಗಿ ಹೋದವಳಲ್ಲ. ಆದರೆ ಖಂಡಿತಕ್ಕೂ ‘ಬೇಷಾತು ಬಿಡ, ಚಲೋ ಮನತನಾ..’ ಎಂದು ಹೇಳುವಷ್ಟು ಸ್ಥಿತಿವಂತರು. ‘ಎರ್ಡೂ ಕಡೀಗಿನ ಖರ್ಚು ನಮದ..’ ಎಂದು ಮದುವೆ ಮಾಡಿಕೊಂಡಿದ್ದರು ಬೀಗರು. ‘..ಪುರಮಾಶಿ ಐಟಮ್.. ಊಟ ಮನಗಂಡ ಆತು ನೋಡು..’ ಎಂದು ಖುಶಿಯಿಂದ ಆಡಿಕೊಂಡು, ಆಕೆಯ ಮನೆಯ ಕಡೆಯವರು ಜುಲುಮೆಯಿಂದ ಊಟ ಬಡಿಸಿದ್ದು ನನಗೀಗಲೂ ಹಸಿರು. ಆವತ್ತಿಗೆ ಅಲ್ಲ ಮರೆತುಹೋಗಿದ್ದ ಗೀತ ಮೊನ್ನೆ ಆಕಸ್ಮಿಕವಾಗಿ ಸಂಪರ್ಕಕ್ಕೆ ಬಂದಾಗಲೇ ಗೊತ್ತಾಗಿದ್ದು ದಶಕಗಳ ಬದಲಾವಣೆಯಲ್ಲಿ ಬದುಕು ಹಲವು ದಿಸೆಯಲ್ಲಿ ಬದಲಾಗಿದೆ ಎಂದು. ‘ಬೆಂಗಳೂರಿನಿಂದ ಐವತ್ತೇ ಕಿ.ಮೀ. ಇ ಇದೀಯ. ಮುಂದಿನವಾರ ಬರ್ತೀನಿ’ ಎಂದೆ. ‘ಬೇಡ ಬೇಡ. ನಾ ಹೇಳಿದಾಗ ಬಾ ಸಾಕು.. ಅದಕೂ ಮದಲ ಬ್ಯಾಡ’ ಎಂದಿದ್ದಳು.
ಬರುತ್ತೇನೆಂದರೂ ಬೇಡ ಎನ್ನುವುದು, ಮೊಬೈಲ್‌ನಲ್ಲಿ ಮಾತಾಡುತ್ತಿzಗ ಆ ಕಡೆಯವರಿಗೆ ಹುಡುಗಿ ಎನ್ನಿಸುವಂತೆ ಮಾತಾಡಿಬಿಡುವುದು, ಮಾತಿಗೊಮ್ಮೆ ‘..ಏನೇ ಅಮ್ಮ ಹೆಂಗಿzಳೆ..’ ಎಂದು ಮಾತಿನ ವರಸೆಯನ್ನೇ ಬದಲಿಸಿಬಿಡುತ್ತಿzಳೆಂದರೆ ಹುಡುಗಿ ಖಂಡಿತಕ್ಕೂ ಆಚೆಬದಿಯಲ್ಲಿ ಸ್ವತಂತ್ರವಾಗಿಲ್ಲ ಎಂದೇ ಅರ್ಥ. ಇಂತಹ ಹಲವು ಸನ್ನಿವೇಶಗಳಿಗೆ ನಾನು ಇದಿರಾಗುತ್ತಲೇ ಇರುವುದರಿಂದ ‘..ಆಯ್ತ ಮೆಸೇಜ್ ಮಾಡು..’ ಎಂದು ಆವತ್ತಿಗೆ ಮಾತು ಮುಗಿಸಿದವನು ಮರೆತೂಬಿಟ್ಟಿದ್ದೆ.
ಗೀತ ನನಗೆ ತೀರಾ ಅಪರಿಚಿತಳೇನಲ್ಲ; ಆದರೂ ಅಷ್ಟಾಗಿ ಸಂಪರ್ಕದಲ್ಲೂ ಇರದಿದ್ದ ಹುಡುಗಿ. ಊರಕಡೆಯಲ್ಲಿzಗ ಆಗೀಗ ಪರಿಚಿತಳಾಗಿದ್ದರೂ ಯಾವ ಲೆಕ್ಕದಲ್ಲೂ ನಮ್ಮ ಹಿಂಡು ಸೇರದೆ ಉಳಿದಿದ್ದುದರಿಂದ ಸ್ವಾಭಾವಿಕ ಸಂಪರ್ಕಗಳೂ ಉಳಿದಿರಲಿಲ್ಲ. ಆದರೆ ಮೊಬೈಲು ಬಂದು ಎಲ್ಲವನ್ನೂ ಸಲೀಸು ಮಾಡತೊಡಗಿ ಗೀತ ಆಗೀಗ ಕರೆಗೆ ಸಿಗತೊಡಗಿದ್ದಳು. ಬನಶಂಕರಿ 2ನೆಯ ಹಂತದಲ್ಲಿನ ಮನೆಯ ಕರೆಗಂಟೆ ಒತ್ತಿ ಕಾಯುತ್ತಿz. ಕಿಟಕಿಯಿಂದ ಮಾತಾಡಿಸಿ ಕನ್ ಫಾರ್ಮ್ ಆದ ಮೇಲೆ ಗೀತ ಬಾಗಿಲು ತೆರೆದಿದ್ದು.ವಿಶಾಲ ಹಾಲಿನಲ್ಲಿ ಎದುರಿಗೇ ಟಿ.ವಿ., ಪಕ್ಕದಲ್ಲಿದ್ದ ಮಟ್ಟಸವಾದ ಸೋ-.ಎಲ್ಲೂ ಅಡ್ಡಾದಿಡ್ಡಿ ಪೇಪರು ಇತ್ಯಾದಿಗಳಿರಲಿಲ್ಲ.
‘ಹೆಂಗಿದ್ದಿ.. ನಾನು ಕಾಫಿ ಮನುಷ್ಯಾ ಅಲ್ಲ. ಚಹನೇ ಮಾಡಿಬಿಡು ..’ ಎನ್ನುತ್ತಾ ಒಂದಿಷ್ಟು ತಿಳಿಯಾಗಲು ಪ್ರಯತ್ನಿಸುತ್ತಿದ್ದರೆ ತಲ್ಲಣಗಳ ಮಧ್ಯದಲ್ಲಿ ಸಿಲುಕಿದ್ದ ಗೀತ ಅರೆಬರೆ ಮಾತಾಡುತ್ತಿದ್ದಳು.
ತೀರಾ ವೈಯಕ್ತಿಕ, ಆಕೆಯ ಬದುಕಿನಲ್ಲಿ ಆಕೆ ಮಾತ್ರ ಇಣುಕಿಕೊಂಡು ನೋಡಬಹುದಾಗಿದ್ದ ಖಾಸಗಿ ಸಮಸ್ಯೆಗಳಿಗೆ ಯಾವ ರೀತಿಯಲ್ಲೂ ನಾನು ಸಾಂತ್ವನ ಕೊಡುವ ಸ್ಥಿತಿಯಲ್ಲಿ ಇರಲಿಲ್ಲ. ಕಾರಣ ಕೆಲವೊಮ್ಮೆ ಹೆಣ್ಣುಮಕ್ಕಳು ನುಂಗಲೂ, ಉಗುಳಲೂ ಆಗದ ಸ್ಥಿತಿಯಲ್ಲಿರುತ್ತಾರೆ. ಅದರಲ್ಲೂ ಹೆಣ್ಣನ್ನು ಪ್ರತಿ ಹಂತದಲ್ಲೂ ದೈಹಿಕವಾಗಿ ಬಳಸಿಕೊಳ್ಳುವವರ ಎದುರಿಗೇ ಬದುಕು ಕಟ್ಟಿಕೊಳ್ಳಲು ಯತ್ನಿಸುವುದಿದೆಯಲ್ಲ ಅದಂತೂ ಘೋರ ನರಕ. ಇಂತಹ ಏನೂ ಮಾಡಲಾಗದ ಆಂತರಿಕ ಸಮಸ್ಯೆಗಳಿಗೆ ಯಾವ ಡೊಮೆಸ್ಟಿಕ್ ವಯಲೆನ್ಸು ಉತ್ತರ ಕೊಡುತ್ತದೋ ಗೊತ್ತಿಲ್ಲ. ಗೀತಳ ಮೈ ಮನಸ್ಸು ಎರಡೂ ಲೂಟಿಯಾಗುತ್ತಾ ಬದುಕಿದ್ದು ಸ್ಪಷ್ಟ.
ಹೆಣ್ಣುಮಕ್ಕಳ ಸಮಸ್ಯೆಗಳಿಗೆ ಸಂಘಗಳು, ವೇದಿಕೆಗಳು, ಸರ್ಕಾರಿ ಪ್ರಾಯೋಜಿತ ಕಲ್ಯಾಣ ಕಾರ್ಯಕ್ರಮ ಸಾವಿರವಿದ್ದರೂ, ಕೌಟುಂಬಿಕ ದೌರ್ಜನ್ಯದಲ್ಲಿ ಬಲಿಯಾಗುತ್ತಲೇ ಇರುವವರನ್ನು ರಕ್ಷಿಸುವುದು ಮಾತ್ರ ಸಾಧ್ಯವಾಗುತ್ತಿಲ್ಲ. ಮದುವೆಯಾದ ಮೊದಲ ದಿನವೇ ಆಘಾತ ಎದುರಿಸಿದ್ದಳು ಗೀತ. ಎಷ್ಟು ಖುಶಿಯಿಂದ ಮದುವೆ ಆಗಿದ್ದಳೊ ಅಷ್ಟೇ ವೇಗದಲ್ಲಿ ಭವಿಷ್ಯ ಕಪ್ಪಿಟ್ಟಿತ್ತು. ಇಷ್ಟೊಂದು ಮುತುವರ್ಜಿ ವಹಿಸಿ, ಖರ್ಚು ಹಾಕಿಕೊಂಡು, ಕಕ್ಕುಲಾತಿ ತೋರಿದ ಹಕೀಕತ್ತು ಒಂದೆರಡು ವಾರದ ಗೀತಳಿಗೆ ಗೊತ್ತಾಗಿತ್ತು. ಗಂಡನ ಬದಲಿಗೆ ಕೋಣೆ ಪ್ರವೇಶಿಸುತ್ತಿದ್ದುದು ಸ್ವತಃ ಮಾವ. ‘ಹುಡುಗ ಗಂಡಸಲ್ಲ. ಹಂಗಂತ ನೀನಗೇನೂ ತ್ರಾಸ ಕೊಡೋದಿಲ್ಲ. ನಾನ ನೋಡ್ಕೋತಿನಿ ಸುಮ್ಕಿರು...’ ಎಂದಿದ್ದ. ಅಷ್ಟಕ್ಕೂ ಹುಡುಗನಿಗೆ ಗಂಡಸುತನವೇ ಇಲ್ಲದ ಮೇಲೆ ಮದುವೆ ಯಾಕೆ ಮಾಡಬೇಕಿತ್ತು..? ಕುಟುಂಬದ ನಿರ್ಲಜ್ಜ ಮರ್ಯಾದೆಗೆ ಗೀತ ಬಲಿಯಾಗಿದ್ದಳು. ಹುಡುಗ ಆ ಕಡೆಗೆ ತಿರುಗಿ ಮಲಗೆದ್ದು ಹೋಗಿದ್ದ ಬೆಳಗಾದ ಕೂಡಲೇ. ‘ಮನಿತನಾ ಇಲ್ಲಿಗೆ ನಿಂತುಹೋಗಬಾರದು. ಅದಕ್ಕ ನಾನೇ ನಿನ್ನ ಗಂಡನಂಗಿರ್ತೆನಿ..’ ಎನ್ನುತ್ತಾ ಮಾವ ಗೀತಳನ್ನು ಬಳಸಿಕೊಂಡು ಬಿಟ್ಟಿದ್ದ. ಅಲ್ಲಿಂದ ನಿರಂತರ ಮೂರು ವರ್ಷ ಕಳೆದರೂ ಮಕ್ಕಳೂ ಆಗಲಿಲ್ಲ, ಮಾವನ ಹಿಂಸೆಯಿಂದ ಮುಕ್ತಳೂ ಆಗಲಿಲ್ಲ. ಬದುಕು ಹೊರಗಡೆಯಿಂದ ತುಂಬ ಚೆಂದ, ಕೊರತೆ ಇಲ್ಲದೆ ನಡೆಯುತ್ತಿತ್ತು. ಮಗಳು ನೆಮ್ಮದಿಯಾಗಿzಳೆಂದು ಅವಳ ಅಪ್ಪ-ಅಮ್ಮ ತುಂಬ ನಿರುಮ್ಮಳವಾಗಿದ್ದರು. ತವರುಮನೆಯ ನೆಮ್ಮದಿ ಕದಡುವ ಯಾವ ಪ್ರಯತ್ನವನ್ನೂ ಗೀತ ಮಾಡುವಂತೆಯೇ ಇರಲಿಲ್ಲ. ‘ಮಕ್ಕಳು ಆಗಿಲ್ವಂತೆ’ ಎನ್ನುವ ಸುತ್ತಮುತ್ತಲಿನ ಕೊಂಕಿಗೆ ಬಲಿಯಾಗುವ ಬದಲಿಗೆ ಮನೆಯಿಂದಾಚೆಗೆ ಬರುವ ಪ್ರಯತ್ನವನ್ನೂ ಗೀತ ಬಿಟ್ಟುಬಿಟ್ಟಿದ್ದಳು.
ಗಂಡನ ವೀಕ್‌ನೆಸ್ ಅನ್ನು ಬಳಸಿಕೊಂಡು ಮಾವ ಪೀಡಿಸುತ್ತಿದ್ದ. ಹೋಗಲಿ ಅವನಿಂದಾದರೂ ಮಕ್ಕಳು ಅಂತಾದುವಾ? ಇಲ್ಲ. ಮಾವ ದೈಹಿಕ ಸುಖ ಪಡೆಯುವಾಗ ಮಾತ್ರ ಗಂಡಸಾಗುತ್ತಿದ್ದ. ವಯಸ್ಸಿಗನುಗುಣವಾಗಿ ಮೊಳೆಯಿಸುವ ಶಕ್ತಿ ಮುರುಟಿಹೋಗಿತ್ತು. ಆದರೆ ಆಘಾತಕಾರಿ ಮತ್ತು ಘೋರವಾಗಿದ್ದುದು ಎಂದರೆ, ಇಂತಹ ಅಪಸವ್ಯಗಳ ಮಧ್ಯೆ ಇನ್ನೊಂದು ಹಿಂಸೆಗೆ ಬಲಿಯಾಗಿದ್ದುದು; ಅದೂ ಬಾಯ್ಬಿಡಲಾಗದ ವರಸೆಯಲ್ಲಿ.
ಎ ಗೊತ್ತಾಗಿದ್ದ, ಹುಡುಗನ ಪರಿಸ್ಥಿತಿಯ ಅರಿವೂ ವೈದ್ಯರಿಗಿತ್ತು. ಆದರೂ ಗೀತ ನಾಲ್ಕನೆ ವರ್ಷ ಬಸುರಿಯಾಗಿದ್ದಳು. ಮುಖ-ಮನಸ್ಸು ಎರಡೂ ಎದ್ದು ನಿಲ್ಲುವ ಸ್ಥಿತಿಯಲ್ಲಿರಲೇ ಇಲ್ಲ. ಕಾರಣ ಮಾವನ ತಮ್ಮನ ಮಗನೊಬ್ಬ ಇದನ್ನೆ ಪತ್ತೆಮಾಡಿ ಗೀತಳನ್ನು ಬಳಸಿಕೊಂಡಿದ್ದ. ಗಂಡನ ಮನೆಯ ಇಬ್ಬಿಬ್ಬರು ವಿಟರು ಆಕೆಯನ್ನು ಹಣಿಯತೊಡಗಿದ್ದರು. ಏನೂ ಮಾಡಲಾಗದ ಗಂಡನೊಂದಿಗಿನ ವಿಚಿತ್ರ ದಾಂಪತ್ಯದಲ್ಲಿ ಅಸಹಾಯಕತೆ, ಅನಿವಾರ್ಯದ ಬದುಕು; ತವರುಮನೆಯ ಅಪ್ಪ-ಅಮ್ಮ, ಇತರರನ್ನು ಬೇಗುದಿಗೆ ತಳ್ಳಲಾಗದ ಗೀತ ತುಂಬ ಹಸಿಹಸಿಯಾಗಿ ನುಡಿದಿದ್ದಳು- ‘ನನ್ನ ಬದುಕು ಒಂದು ರೀತೀಲಿ ಬಿಟ್ಟಿಸೂಳೆ ತರಹ ಆಗ್ಬಿಟ್ಟಿದೆ ಮಾರಾಯ. ಅವರಾದರೂ ‘ಹೌದು..ದಂಧೇ..’ ಅಂತ ಮುಖ ಎತ್ತಿ ಬದುಕ್ತಾರೆ.. ನಾನು..? ಆತ್ಮಹತ್ಯೆ ಅಂತ ಎಷ್ಟು ಸಲ ಸ್ಟೂಲ ಹತ್ತಿ ಇಳ್ದೀನಿ ಗೊತ್ತಿಲ್ಲ. ಮನ್ಯಾಗಿನ ಗಂಡಸರು ಮಾಡಿರೋ ಹೊಲಸು ಕರ್ಮಕ್ಕೆ ಏನೂ ಗೊತ್ತಿಲ್ಲದ ಮಗು ಯಾಕೆ ಬಲಿಯಾಗ್ಬೇಕು ಅಂತ ಸುಮ್ನಿದೀನಿ..’.
ಮುಂದಿನ ಮಾತು ಕೇಳಿಸಿಕೊಳ್ಳುವ, ಜೀರ್ಣಿಸಿಕೊಳ್ಳುವ ಎರಡೂ ಶಕ್ತಿ ನನಗಿರಲಿಲ್ಲ. ಆದರೆ ಅದಕ್ಕೆ ಪಕ್ಕಾಗಿಯೂ ಬದುಕುತ್ತಿರುವ ಗೀತ ಅದೆಲ್ಲಿಂದಲೋ ಮೈಗೂ ಮನಸ್ಸಿಗೂ ತಾಕತ್ತು ಒಗ್ಗೂಡಿಸಿಕೊಂಡು ಈಗ ತಿರುಗಿಬಿದ್ದಿzಳೆ. ಇಲ್ಲಿವರೆಗಿನ ನಿರಂತರ ಅತ್ಯಾಚಾರದ ವಿರುದ್ಧ ಸೆಟೆದು ನಿಂತಿzಳೆ. ಮೈ ‘ಜುಂ’ ಎಂದುಬಿಟ್ಟಿತ್ತು. ಸುಮ್ಮನೆ ತಲೆಸವರಿ.. ಏನೋ ಒಂದಷ್ಟು ಸಮಾಧಾನ ಹೇಳಿದೆ. ಮುಂದೆ ಮಾತನಾಡಲೂ ಆಗದೆ ಹೊರಬೀಳುತ್ತಿದ್ದರೆ, ಸೊಂಟದಲ್ಲಿದ್ದ ಮಗುವಿಗೆ ಮುದ್ದುಮಾಡುತ್ತಾ ಕಿಟಕಿಯಿಂದ ‘ಬೈ ಬೈ’ ಅನಿಸುತ್ತಿzಳೆ. ನಾನು ಹಿಂದಿರುಗಿ ನೋಡುವ ಮೊದಲೇ ಬಾಗಿಲು ಹಾಕಿಕೊಂಡಾಗಿತ್ತು ಆಕೆ. ಜಗತ್ತಿನ ದೃಷ್ಟಿಗೆ ಬಾಗಿಲು ಮುಚ್ಚಿತ್ತು; ಆದರೆ ಆಕೆಯ ಮನಸ್ಸಿನ ಕದಕ್ಕೆ ಹೊಡೆದ ಹಾರು ಮುಚ್ಚುವರಾರು..?
ಗೀತ ಆಡಿದ್ದ ಮಾತೊಂದು ಕಿವಿಯಲ್ಲಿನ್ನೂ ಕೊರೆಯುತ್ತಲೇ ಇತ್ತು- ‘ಯಾಕ ಗಂಡಸರು ಅಂದರ ಎ ಕಡೆಲೂ ಸುಮಾರು ಅನ್ಸಿಬಿಡ್ತದ ಅಂತ ಗೊತಾಯ್ತ. ಮೊದಲೇ ಬರಗೆಟ್ಟವರು ಅನ್ನಿಸಿಬಿಡುವಾಗ ಹಿಂಗೂ ಆದರ ಎಂಥವರೂ ಸುಮಾರು ಅನ್ಸೋದರಾಗ ತಪ್ಪೇನದ..?’. ಏನು ಹೇಳಲಿ. ಅತ್ತ ಹೊಸ ಚೆಟಕ್ಕೇ ನಿಂತ ಹೆಣ್ಣುಗಳು, ಮರ್ಯಾದಸ್ಥ ಮಹಿಳೆಯರನ್ನೂ ಸುಮಾರಾಗಿಸುತ್ತಿದ್ದರೆ, ಇತ್ತ ಗೀತಳ ಅನುಭವದೆದುರಿಗೆ ಇದಕ್ಕಿಂತ ಒಳ್ಳೆಯ ಭಾವನೆ ಬರುವುದಾದರೂ ಹೇಗೆ ಸಾಧ್ಯವಿತ್ತು..?