Thursday, August 1, 2013

ಮೌನದ ಮಾತುಗಳು : ಸಾವಿನ ಹಕ್ಕಿಯ ರೆಕ್ಕೆಯ ಕೆಳಗೆ.

( ಅಷ್ಟು ಸತತ ಪ್ರಯತ್ನಗಳ ಹೊರತಾಗಿಯೂ ಜೀವ ಎನ್ನುವ ಅಮೂಲ್ಯ ಶಕ್ತಿ ಅದ್ಹೇಗೆ ಕೈಯಿಂದ ತಪ್ಪಿಸಿಕೊಳ್ಳುತ್ತಿತ್ತು ಗೊತ್ತಾಗಲೇ ಇಲ್ಲ. ಬಹುಶ: ಅದಕ್ಕಾಗೇ ಸಾವು ಈಗಲೂ ಯಾವಾಗಲೂ ನಿಗೂಢಾ... ವಿವರಿಸಲು ಅದೊಂದಕ್ಕೆ ಮಾತ್ರ ಅನುಭವಿಗಳಿಲ್ಲ... )

ಹೀಗೆ ಸತತವಾಗಿ ಹಲವು ಸಾವುಗಳಿಗೆ ನಾನು ಜೀವಂತ ಸಾಕ್ಷಿಯಾಗಿದ್ದುದು ಬಹುಶ: ಇದೇ ಮೊದಲ ಬಾರಿಯಾ..? ಇರಬೇಕು. ಯಾಕೆಂದರೆ ಕಳೆದ ಮೂರ್ನಾಲ್ಕು ದಿನದಲ್ಲಿ ನಾನು ಕುಳಿತಿದ್ಡ ಜಾಗವೇ ಹಾಗಿತ್ತು. ಹೆಚ್ಚೆ೦ದರೆ ಎಡದಿಂದ ಬಲಕ್ಕೆ ನಾನು ಕುಳಿತ ಸ್ಟೂಲಿನ ದಿಕ್ಕು ಬದಲಾಗುತ್ತಿತ್ತೇ ವಿನಹ ಉಳಿದದ್ದೆಲ್ಲವೂ ಎಂದಿನಂತೆ ಆಚೀಚೆ ಯಾವಾಗ ಪ್ರಾಣ ಹೋದಿತೋ ಎಂದು ಭಯಬೀಳುವ, ಗುಳಿ ಬಿದ್ದ ಕಣ್ಣುಗಳ, ಬಾಯಿಯಲ್ಲಿ, ಕೈಯ್ಯಲ್ಲಿ, ಕೊನೆಗೆ ಅವರ ಸ್ರಾವ ಮತ್ತು ಬಾಹ್ಯ ವಿಸರ್ಜನೆಗಳಿಗೂ ನಳಿಕೆ ಹಾಕಿಕೊಂಡ, ಕೆಲವೊಂದು ದೇಹಗಳು ಊಟಕ್ಕೂ ನಳಿಕೆ ಏರಿಸಿಕೊಂಡು ಮಲಗಿರುವ ಕರುಣಾಜನಕ ಹೃದಯ ವಿದ್ರಾವಕ ದೃಶ್ಯ ಮಾಮೂಲು.
ಅಸಲಿಗೆ ಹಾಗೆ ನಾನು ಮೊದಲ ದಿನ ಹೋಗಿ ಅಲ್ಲಿಗೆ ಕುಳಿತುಕೊಳ್ಳುತ್ತಲೇ ವಾತಾವರಣ ಸಹಜ ಇಲ್ಲ ಎನ್ನಿಸಿತ್ತು. ಯಾಕೆಂದರೆ ನಾನಿದ್ದ ಆ ಕೋಣೆಗೆ ಆಲ್ಲಿದ್ದ ಇತರೆ ಜನರೂ, ಸಿಬ್ಬಂದಿಗಳೇ ಕಾಲಿಡಲು ಯಾಕೋ ಅನುಮಾನಿಸುತ್ತಾ ನಿಂತಿರುತ್ತಿದ್ದುದು ಅದರಲ್ಲೂ ರಾತ್ರಿ ಸರಹೊತ್ತು ಕಳೆಯತೊಡಗುತ್ತಿದ್ದಂತೆ ಎಲ್ಲೆಂದರಲ್ಲಿ ಆಚೀಚೆ ಹರಡಿಕೊ೦ಡಿರುತ್ತಿದ್ದ ಸಿಬ್ಬಂದಿಗಳು ಕಾಫೀಯ ನೆವದಲ್ಲಿ ಒಂದೇ ಟೇಬಲ್ಲಿನ ಬಳಿಗೆ, ಗಾಢ ದೀಪದ ಬುಡದಲ್ಲಿ ಸೇರಿಕೊಂಡು ಯಾವಾಗ ರಾತ್ರಿ ಎರಡರಿಂದ ಬೆಳಗಿನ ಐದರವರೆಗೆ ಹೊತ್ತು ಕಳೆದು ಬೆಳಕು ಮೂಡಿತೋ ಎಂದು ಕಾಯುತ್ತಾ, ಸಮಯ ಸವೆಸಿ ಆಗೀಗ ಮಧ್ಯದ ಹಾಲ್‌ನಿಂದಲೇ ಉಳಿದೆಲ್ಲಾ ಕೋಣೆಗಳಿಗೂ, ಅಲ್ಲಿದ್ದ ಜೀವಚ್ಛವಗಳ ಮೇಲೂ ಅವುಗಳ ಮಧ್ಯದಲ್ಲೇ ಮುಚ್ಚಿರುತ್ತಿದ್ದ ಬೆಳ್ಳಗಿನ ಬಟ್ಟೆಗಳ ಉದ್ದಾನುಉದ್ದ ಮ೦ಚಗಳ ಕಡೆಗೂ ಬೆರಗು ಕಣ್ಣು ಬೀರುತ್ತಾ, ಹೋದ ವೇಗದಲ್ಲೆ ಹಿಂತಿರುಗಿ ಹಾಲ್ ಮಧ್ಯೆ ಸೇರಿಕೊಂಡು ಬಿಡುತ್ತಿದ್ದರು.
ಹೀಗೆ ಸರಿ ರಾತ್ರಿ ಎರಡೂವರೆ ಹೊತ್ತಿಗೆ ಪಿಳಿ ಪಿಳಿ ಕಣ್ಣು ಬಿಟ್ಟು ಕೂತಿರುತ್ತಿದ್ದ ನನ್ನನ್ನು ಒಂದು ಪ್ರೇತವೆಂಬಂತೆ ಕಣ್ಣು ಬಿಟ್ಬಿಟ್ಟು ನೋಡುತ್ತಾ ಇದ್ದಾಗಲೇ ನಾನು ಅದನ್ನು ಗಮನಿಸಿದ್ದು. ಅದಕ್ಕೆ ಕಾರಣ ನನ್ನ ಬೆನ್ನ ಹಿಂದೆ ಒಂದೇ ಒಂದು ಅಡಿಗೂ ಕಮ್ಮಿ ದೂರದಲ್ಲಿ ಪ್ರಯಾಸ ಪಡದೆಯೂ ಕೈಚಾಚಿದರೆ ನಿಲುಕುವಷ್ಟು ಪಕ್ಕದಲ್ಲೇ ಒಂದು ಶವವಿತ್ತು. ನಾನು ಅಂದೇ ಸಂಜೆ ಕೆಲವೇ ಗಂಟೆಯ ಮೊದಲು ಅವರು ಉಸಿರಿಗಾಗಿ ಚಡಪಡಿಸುವುದನ್ನೂ ನೋಡಿದ್ದೆ. ಈಗ ಇದ್ದಕ್ಕಿದ್ದಂತೆ ವ್ಯಕ್ತಿ "ಬಾಡಿ"ಯಾಗಿ ಬದಲಾಗಿದ್ದ. ಭಯ ಹುಟ್ಟಿಸಿದ್ದ. ಅದನ್ನು ಗಮನಿಸುವ ಮೊದಲು ಎಷ್ಟೋ ಬಾರಿ ನಿದ್ರೆಯ ಜೊಂಪು ತಡೆಯುವ ಭರದಲ್ಲಿ ನಾನು ಕೂಡಾ ಅದೇ ಮ೦ಚಕ್ಕೆ ಒರಗಿ ಸಣ್ಣಗೆ ರೆಸ್ಟು ಮಾಡಿದ್ದೆ. ಈಗ ನೋಡಿದರೆ ಸರಿ ರಾತ್ರಿಯಲ್ಲಿ ಹಾಲ್ ಮಧ್ಯದಿಂದ ನನ್ನನ್ನು, ಪಕ್ಕದ ಶವವನ್ನು ಒಂದೇ ಥರಹ ನೋಡುತ್ತಿದ್ದಾರೆ.
ಅಂಗಾತ ಮಲಗಿ, ತೆರೆದ ಬಾಯಿ ಹಾಗೇ ಬಿಟ್ಟುಕೊಂಡಿದ್ದ ಶವ, ಆಗಾಗ ಹಾರಿ ಬರುತ್ತಿದ್ದ ಸಣ್ಣ ಸೊಳ್ಳೆಯ ಗುಂಯ್ ಬಿಟ್ಟರೆ ಈ ಹಾಲ್ ಮಧ್ಯೆ ಸೇರಿಕೊಂಡಿದ್ದ ಹುಡುಗಿಯರ ಪಿಸ ಪಿಸ, ಆಗೀಗೊಮ್ಮೆ ಬದುಕುಳಿದಿದ್ದವರು ಮೈ ಮುರಿಯುತ್ತಿದ್ಡ, ಹೊರಳಿ ಮಗ್ಗಲು ಬದಲಿಸುವ ಸಶಬ್ದಕ್ಕೆ ಸಾಕ್ಷಿಯಾಗುತ್ತಾ ಅವರ ಕಣ್ಣಿಗೆ ಆಹಾರವಾಗಿ ಕುಳಿತೇ ಇದ್ದೆ. ಇದಾದ ಮರುದಿನ ಸಂಜೆ ಎಂದಿನಂತೆ ಅದೇ ರೂಮಿನೊಳಕ್ಕೆ ಕಾಲಿಟ್ಟಾಗ ಪರಿಸ್ಥಿತಿ ಇನ್ನೂ ಗಂಭೀರವಾಗಿತ್ತು. ಯಾಕೆಂದರೆ ನಿನ್ನೆಯ ಹಿಂದಿನ ಮ೦ಚ ಖಾಲಿಯಾಗಿತ್ತು. ಅದರ ಪಕ್ಕದಲ್ಲಿ ಇದ್ದ ವ್ಯಕ್ತಿಗೆ ಕೃತಕವಾಗಿ ಹೃದಯ ಅದುಮಿ ಉಸಿರು ಹೊರಳಿಸುವ ಪ್ರಯತ್ನ ನಡೆದಿತ್ತು. ಬೆಳ್ಳಂಬೆಳಿಗ್ಗೆಯಷ್ಟೆ ಬಂದಿದ್ದ ವ್ಯಕ್ತಿಯತ್ತ ಸಣ್ಣಗೆ ಸಾಂತ್ವನದ ನಗೆ ಬೀರಿ ಎದ್ದು ಹೋಗಿದ್ದೆ. ಈಗ ನೋಡಿದರೆ ಅವನೂ ಶವವಾಗುತ್ತಾನಾ..? ನನ್ನ ಸಂಶಯ ಸುಳ್ಳಾಗಿರಲಿಲ್ಲ.
ರಾತ್ರಿಯ ಭಯಾನಕ ಅವಧಿ ಇನ್ನು ಒಂದು ಗಂಟೆ ಇರುವಂತೆ ಅಷ್ಟು ದೂರದಲ್ಲಿ ಆ ದಿನ ರಾತ್ರೆಯ ಕಂಪೆನಿಗೆಂಬಂತೆ ಮತ್ತೊಂದು ಶವ ತಯಾರಾಗಿತ್ತು. ಇದೇನು ದಿನವೂ ಶವಗಳ ಜೊತೆ ಕುಳಿತುಕೊಳ್ಳುತ್ತಿದ್ದೇನೆ ಎಂದು ದಿಕ್ಕು ತಿರುಗಿಸಿದೆ. ಎಂದಿನಂತೆ ಆ ರಾತ್ರಿಯೂ ನಟ್ಟಿರುಳ ಹೊತ್ತಿನಲ್ಲಿ ಎದುರಿಗಿನ ಹಾಲ್‌ನಲ್ಲಿದ್ದ ಸಿಬ್ಬಂದಿ ನರ್ಸ್ ಹುಡುಗಿಯರ ಕಣ್ಣಿಗೆ ಆಸಕ್ತಿಯ ಪ್ರಾಣಿಯಾಗಿ ಕುಳಿತಿದ್ದೆ. ಯಾಕೆಂದರೆ ನನ್ನಂತೆ ಆ ರೂಮಿನಲ್ಲಿ ಇದ್ದವರಾರೂ ಸರಿರಾತ್ರಿಯ ಹೊತ್ತಿನಲ್ಲಿ ಹೀಗೆ ಅಬ್ಬೆ ಪಾರಿಗಳಂತೆ ಕಣ್ಬಿಟ್ಟು ಕೂರುತ್ತಿರಲಿಲ್ಲ. ಹೇಗೋ ಒಂದು ಜಾಗ ಅಡ್ಜಸ್ಟ್ ಮಾಡಿಕೊಂಡು ಆಯಾ ಮ೦ಚದ ಪಕ್ಕದಲ್ಲಿ ಮಲಗಿರುತ್ತಿದ್ದರು. ನಿದ್ರೆಗೂ ಮೊದಲೇ ಅಥವಾ ತಮ್ಮ ಪಕ್ಕದ ಮ೦ಚದಲ್ಲೊಮ್ಮೆ ಶವವಿದೆ ಎನ್ನುವುದನ್ನು ತಿಳಿದುಕೊಳ್ಳುವ ಗೋಜಿಗೂ ಹೋಗದೆ ನಿದ್ರಿಸಿರುತ್ತಿದ್ದರು. ಹೀಗಾಗಿ ನನ್ನ ಮೇಲಿನ ಅನುಕಂಪವೋ, ಆಸಕ್ತಿಯೋ ರಾತ್ರಿಯ ಎರಡೂವರೆಗೆ ಹಾಲ್ ಮಧ್ಯದಿಂದ ಕಾಫಿಗೆ ಕರೆ ಬಂತು.
ಇಷ್ಟಗಲ ಕಣ್ಬಿಡುತ್ತಿದ್ದ ನರ್ಸ್ ಟ್ರೈನಿಂಗ್ ಹುಡುಗಿಯ ಕಣ್ಣಲ್ಲಿ ಸಣ್ಣ ಅನುಮಾನದ ಸೆಳಕು ನನ್ನ ಮೇಲಿತ್ತು "..ಯಾಕೆ ನೀವು ಹೊರಕ್ಕೆ ಬಂದು ಮಲಗೋಲ್ಲ ಅಥ್ವಾ ಆ ಮ೦ಚಗಳಿಂದ ಇತ್ತ ಸರಿಯಲ್ಲ.. ಅಲ್ಲಿ ಪಕ್ಕದಲ್ಲಿ ಬಾಡಿಯಿದೆ..!.." ಏನಂದು ಉತ್ತರಿಸಲಿ. ಜೀವವಿದ್ದಾಗ ಹೆದರಿಸದ ಮನುಶ್ಯ ಶವವಾದ ತಕ್ಷಣ ಅದ್ಯಾಕೆ ಹೆದರಿಸುತ್ತಾನೆ...? ಒ೦ದು ಕಾಲದಲ್ಲಿ ನಾನು ಹೀಗೇ ಶವಗಳನ್ನು ಹೂಳಿದ್ದ/ಸುಟ್ಟಿದ್ದ ಸ್ಮಶಾನದಲ್ಲಿ ಸರಹೊತ್ತಿನವರೆಗೂ ಕಾಲು ಚಾಚಿ ಕುಳಿತಿರುತ್ತಿದ್ದುದು, ಸದ್ದಿಲ್ಲದೇ ಎಡೆ ಎತ್ತಿಕೊಂಡು ಬಿಡುತ್ತಿದ್ದುದು ಈಗಲೂ ಆಡಿಕೊಳ್ಳುವ ವಿಷಯ. ಉತ್ತರ ಬಹುಶ: ಮರುದಿನ ಸಿಗಲಿತ್ತಾ ಗೊತ್ತಿಲ್ಲ. ಮೂರನೆಯ ದಿನದ ರಾತ್ರಿ ಮತ್ತೆ ಶವಗಳ ಜೊತೆ ನನ್ನ ರಾತ್ರಿ ಸಂಸಾರ ಆರ೦ಭವಾಗಿತ್ತು. ಇವತ್ತು ಎದುರಿಗಿದ್ದ ಮ೦ಚ ಬಿಟ್ಟು ಉಳಿದವರು ಜೀವ೦ತ ಇದ್ದಾರಾ..? ಸಂಶಯ.
ಅದರಲ್ಲಿ ಸಂಜೆ ಬೇಗ ಆಗಮಿಸಿದಾಗ ಮೊದಲನೆಯ ಮ೦ಚದಲ್ಲಿದ್ದ ವ್ಯಕ್ತಿ ಸರಿಯಾಗಿ ಕುಡಿದು ಕರಳು ಬಕ್ಕಬಾರಲಾಗುವಂತೆ ಸುಟ್ಟಿದ್ದ. ಕುಡಿದದ್ದು ಅರಗಿಸುವ ತಾಕತ್ತಿರಲಿಲ್ಲ. ಸರಿ ಪ್ರಾಯದ ಹೆಂಡತಿ ಮಗುವನ್ನು ಅನಾಥನನ್ನಾಗಿಸಲು ಸಿದ್ಧನಿದ್ದಂತೆ ತನ್ನ ದೇಹವನ್ನು ಸಿಬ್ಬಂದಿ ಕೈಗೊಪ್ಪಿಸಿ ಆಗೀಗೊಮ್ಮೆ ಉಸಿರೆಳೆಯುತ್ತಾ ಮಲಗಿದ್ದ. ಬಾಯಿ, ಮೂಗು ಎಲ್ಲೆಡೆಯಲ್ಲೂ ಕೊಳವೆ ಹಾಕಿ ನಾಲ್ಕಾರು ಜನ ಜೀವ ಹಿಡಿದಿಡುವ ಪ್ರಯತ್ನಕ್ಕಿದ್ದರು. ಕುತೂಹಲಕ್ಕೆ ಪ್ರಾಣ ಹೋಗುತ್ತದಾದರೆ ಹೇಗೆ ಹೋಗುತ್ತದೆ ಎಂದು ಗಮನಿಸುತ್ತಾ ಅವರ ಹಿಂದೇ ನಿ೦ತಿದ್ದೆ. ಉಹೂ೦ ಅಲ್ಲೇನಿದೆ ಗೊತ್ತಾಗಲು. ತಾಜಾ ವೈದ್ಯನೊಬ್ಬ ಹೃದಯ ಅಮುಕಿ ಪ್ರಾಣವಾಯು ಒಳಕ್ಕೆ ಸೆಳೆಯಲು ಪ್ರಯತ್ನಿಸುತ್ತಾ, ಎದೆ ಗೂಡು ಅಮುಕಿ ಅಮುಕಿ ಸುಸ್ತಾಗುತ್ತಿದ್ದ.
ಉಹೂ೦.. ನೋಡ ನೋಡುತ್ತಿದ್ದಂತೆ ಬಾಯಿಗಿಟ್ಟ ಕೊಳವೆಗಳಲ್ಲಿ ಚಲಿಸುತ್ತಿದ ಜೀವದ್ರವ ಅಲ್ಲೆ ನಿಂತು ಹೊರಕ್ಕೆ ಹರಿಯಿತು. ಯುವ ವೈದ್ಯ ಕೈಚಲ್ಲಿದ್ದ. ಸಣ್ಣ ಹತಾಶೆ ಅವನ ಮುಖದಲ್ಲಿತ್ತು. ವಿಚಿತ್ರವೆಂದರೆ ಅವರು ಅದನ್ನಾರಿಗೂ ನೇರವಾಗಿ ಘೋಷಿಸದೇ ಆಪ್ತರಲ್ಲೊಬ್ಬರಿಗೆ ಮಾತ್ರವೇ ವಿವರಿಸಿ ಆಚೆ ನಡೆದಾಗ, ಅದನ್ನು ಅರಿಯದ ಹೆಂಗರಳು ಬಾಯಿಯಲ್ಲಿದ್ದ, ಕೈಗಿದ್ದ ಕೊಳವೆ ನೋಡುತ್ತಾ, ಆಗೀಗ ಮೈದಡುವುತ್ತಾ ".. ಕಾಫಿ ಕುಡಿತಿಯೇನಪ್ಪಾ..? ಗಂಜಿ ಕಾಯ್ಸ್ಕಂಬರಾಕೆ ಅವ್ಳಿಗೆ ಹೇಳಿದಿನಿ ಇನ್ನೇನು ಬಂದಿಬಿಡ್ತಾಳೆ.." ಎನ್ನುವ ಕಕ್ಕುಲಾತಿಗಳ ಮಧ್ಯೆ, ಎದುರಿಗಿದ್ದುದು ಶವ ಎಂದರಿವಾಗುತ್ತಿದ್ದಂತೆ, ಹಿಂದೆ ಸರಿದು ಸುತ್ತೆಲ್ಲಾ ನೋಡಿದಳು. ಅಲ್ಲಿಯವರೆಗೂ ಕಾಫಿ, ಊಟಕ್ಕೆ ಈಡಾಗುತ್ತಿದ್ದ ಉಪಚಾರದ ಜಾಗದಲ್ಲಿ ಭಯ.. ಭಯ.. ಭಯ... ಅದ್ಹೇಗೆ ಇಮ್ಮಿಡಿಯೇಟ್ ವ್ಯತ್ಯಾಸ...? ನನ್ನರಿವಿಗೆ ಬರಲಿಲ್ಲ. ಆಕೆಯ ಕಂಗಳಲ್ಲಿ ಅಲ್ಲಿಯವರೆಗಿದ್ದ ಕಕ್ಕುಲಾತಿಯ ಬದಲಿಗೆ ಸಾವಿನ ನೆರಳು.
ನಾನು ಎದ್ದು ಹೋಗಿ ಒಮ್ಮೆ ನೋಡಿದೆ. ಅಂಗಾತ ಬಿದ್ದಿದ್ದ ಕುಡುಕನ ಎದೆ ಕೆಂಪಗಿತ್ತು. ಅದುಮಿಸಿಕೊಂಡಿದ್ದಕ್ಕಾ ಅಥವಾ ಎದೆಯಿಂದ ಪ್ರಾಣ ಹಾರಿದ್ದಕ್ಕಾ...? ನೋವಿನ ವಿಕಾರ ಗೆರೆಗಳು ಮುಖದ ಮೇಲೆ ಹಾಗೆ ಇದ್ದವು. ಅಂಗಿ ಸರಿಪಡಿಸಿ, ವಿರುದ್ಧ ದಿಕ್ಕಿಗೆ ತಿರುಗಿಕೊಂಡಿದ್ದ ಕೈಗಳನ್ನು ಸ್ವಸ್ಥಾನಕ್ಕೆಸರಿಸಿ.. ಉಹೂ೦ ಅಷ್ಟು ಸುಲಭಕ್ಕೆ ಸಾಧ್ಯವಾಗಲಿಲ್ಲ. ಯಾಕೆಂದರೆ ಆಗಲೇ ಗಂಟೆಗೂ ಮೇಲ್ಪಟ್ಟ ಅವಧಿಯಲ್ಲಿ ದೇಹ ಸೆಟೆದುಕೊಳ್ಳಲಾರಂಭಿಸಿತ್ತು. ಸುಮ್ಮನೇ ಇದ್ದ ಹಳೆಯ ಬೆಡಶಿಟ್ ತಲೆಗೆ ಎಳೆದು ಬಂದು ಕುಳಿತಾಗಲೇ ಗೊತ್ತಾಗಿದ್ದು ಆ ದಿನ ನನ್ನ ಸುತ್ತಲೂ ಮೂರು ಶವಗಳಿದ್ದವು. ಅವುಗಳತ್ತ ಲಕ್ಷ್ಯಕೊಡದೆ ಹಾಗೆ ನಾನು ಬೆಡ್ ಶೀಟ್ ಎಳೆಯುತ್ತಿದ್ದಾಗಲೇ ಹಾಲ್ ಮಧ್ಯದ ಹೊಸ ನರ್ಸ್ ಟ್ರೈನಿಂಗ್ ಹುಡುಗಿ ಇಷ್ಟಗಲ ಕಣ್ಬಿಟ್ಟು ನನ್ನನ್ನು ಒಂದೇ ತರಹ ಗಮನಿಸುತ್ತಿದ್ದುದು.
ತಲೆ ಕೊಡವಿ ಅಲ್ಲೇ ಇದ್ದ ಡಾಕ್ಟರ್ಸ್‌ಗಳ ಟಬ್ಬಿನೊಳಕ್ಕೆ ಕೈಮುಳುಗಿಸಿ ಸಿಂಕಿನಲ್ಲಿ ತೊಳೆದು ಹೊರಕ್ಕೆಬಂದೆ. ಮಧ್ಯಭಾಗದಲ್ಲಿ ಎಂದಿನಂತೆ ಮಧ್ಯರಾತ್ರಿಯ ಕಾಫ್ಹಿ ಸರಬರಾಜು. ಈ ಬಾರಿ ಸಂಕೋಚವಿಲ್ಲದೇ ಹೋಗಿ ಸ್ಟೂಲೆಳೆದುಕೊಂಡು ಕುಳಿತು ಕಪ್ಪನ್ನೆತ್ತಿಕೊಂಡಿದ್ದೆ. ಹಿಂದೆ ನೋಡಿದೆ ಶವಗಳು ಹಿಂಬಾಲಿಸಿರಲಿಲ್ಲ. ಉಳಿದವರು ನೆಮ್ಮದಿಯಾಗಿ ಕುಳಿತರು. ಆದರೆ ಇನ್ನೊಂದು ಸಾವಿನ ಹಕ್ಕಿ ರೆಕ್ಕೆಯಗಲಿಸುತ್ತಾ ಆಗೀಗ ಅದೇ ಹಾಲ್‌ನ ಮಧ್ಯದಿಂದ ರೂಮಿನೊಳಕ್ಕೆ ಎಷ್ಟೊತ್ತಿಗೂ ಕಾಲಿಡಲಿದೆ ಎಂದು ಅವರಾರಿಗೂ ಗೊತ್ತಿರಲಿಲ್ಲ. ನನ್ನೊಬ್ಬನನ್ನು ಬಿಟ್ಟು. ಕಾಯುತ್ತಲೇ ಕುಳಿತ್ತಿದ್ದೆ. ಯಾಕೋ ಕೊಂಚ ತಡವಾಗಿತ್ತು. ಬಹುಶ: ಅದಕ್ಕೂ ಗೊತ್ತಾಗಿತ್ತೇನೋ ನನ್ನ ಕಾವಲು. ನಾನು ಸತತ ನಾಲ್ಕು ದಿನಗಳ ಶವಾಗಾರದಂತಿದ್ದ ಆ ಆಸ್ಪತ್ರೆಯ ಎಮರ್‌ಜೆನ್ಸಿ ಹಾಲ್‌ನಿಂದ ಈಚೆ ಬಂದಿದ್ದೆ. ಬೆಳಕು ಹರಿಯುವವರೆಗೂ ಯಾವ ಶವಗಳೂ ಹುಲು ಮಾನವರಂತೆ ಕದಲದೇ ಜೀವ ಇದ್ದವರಿಗಿಂತಲೂ ಸಾಧುವಾಗಿ ಸುಮ್ಮನಿದ್ದವು. ಕ್ಷಣ ಕಾಲವೂ ನನ್ನ ಕಾಡಿರಲಿಲ್ಲ. ಜೀವಂತ ಮನುಶ್ಯರಿಗಿಂತ ನಿಜಕ್ಕೂ ಮೇಲೆನಿಸಿದ್ದವು. ಭಯ ಬೀಳಲು ಕಾರಣವೇನಿರಲಿಲ್ಲ. ಆದರೆ ಕಾಯ್ದು ಕೂತಿದ್ದ ಇನ್ನೊಂದು ಸಾವು ತನ್ನ ಕರಿ ನೆರಳ ರೆಕ್ಕೆಯಗಲಿಸಿ ಫಡಫಡಿಸುತ್ತಲೇ ಇತ್ತು. ಅಂತೆಯೇ ನನ್ನ ಕಾವಲು ಕೂಡಾ...!

1 comment:

  1. kathe tumbaa kaaDitu.... kathaa naayakana jaagadalli nintu noDidaaga bhayavaagatte.....

    ReplyDelete