Thursday, August 1, 2013

ಮೌನದ ಮಾತುಗಳು ..! - ಅದು ಬದುಕಿನ ಆರಂಭದ ಹೊಸ ರಾತ್ರಿ

ಬಹುಶ ಚಳಿಗಾಲದ ಡಿಸೆಂಬರ್ ಹದಿನೆಂಟು ಅಥವಾ ಇಪತ್ತೊಂದು ಇರಬೇಕು... ಸರಿಯಾಗಿ ೨೦ ವರ್ಷದ ಹಿಂದೆ ನಾನು ಬೆಂಗಳೂರಿನ ಗಲ್ಲಿಗಳಿಗೆ ಇಷ್ಟಿಷ್ಟೆ ಇಂಚು ಇಂಚಾಗಿ ತೆರೆದುಕೊಳ್ಳುತ್ತಿದ್ದೆ. ದಿನವೂ ಸಂಜೆ ಹೋಗಿ ಎಂ.ಜಿ. ರಸ್ತೆಯ ಪಕ್ಕೆಗೆ ಆತುಕೊಂಡಂತಿದ್ದ ಹೌಸ್ ಆಫ್ ಲಾರ್ಡ್ಸ್‌ನ ಮೇಲ್ಮಹಡಿಯಲ್ಲಿ ಕಂಪ್ಯೂಟರಿಗೆ ಕೈ ಹೂಡಿ ಕುಳಿತುಕೊಂಡರೆ ಬೆಳಗಿನ ಎರಡು ಗಂಟೆಯವರೆಗೂ, ಕುಳಿತಲ್ಲೇ ಕುಳಿತು ಬುಡ ಚಪ್ಪಟೆಯಾಗುತ್ತಿದ್ದವು. ಇದ್ದ ಆರು ಹುಡುಗರ ಪೈಕಿ ಎಲ್ಲರನ್ನೂ ಆಗೀಗ ಗೋಳು ಹೊಯ್ದುಕೊಳ್ಳುತ್ತಿದ್ದ, ನನ್ನ ಕಿರಿಕಿರಿ ಮಾಡುತ್ತಿದ್ದ ಕಮೆಂಟುಗಳು ಮತ್ತು ಗಂಟೆಗೊಮ್ಮೆ ಪ್ಲಾಸ್ಕಿನಿಂದ ಬಗ್ಗಿಸಿಕೊಂಡು ಸೊರ್ರ್ ಎಂದು ಹೀರುತ್ತಿದ್ದ ಕಾಫಿಯ ಶಬ್ದ ಬಿಟ್ಟರೆ, ನಮ್ಮದೇ ಮಾತು ನಗೆ.. ಮಧ್ಯೆ ಮಧ್ಯೆ ..ಬ್ರೆಡ್ಡು.. ಅಪರೂಪಕ್ಕೊಮ್ಮೆ ಯಾರಾದ್ರೂ ಸ್ಪಾನ್ಸರ್ ಮಾಡಿದ್ರೆ ಅಲ್ಲೇ ಪಕ್ಕದಲ್ಲಿದ್ದ ಗಾಡಿಯಂಗಡಿಯಿಂದ ಮೆಣಸಿನಕಾಯಿ ತಂದಿಟ್ಟುಕೊಂಡು ಚಪ್ಪರಿಸುತ್ತಿದ್ದೇವು. ಹಾಗೆ ತಿನ್ನುವಾಗಲೆಲ್ಲಾ ಕದ್ದು ನೋಡುತ್ತಿದ್ದ ನೀಲಿ ಚಿತ್ರದ ತುಣುಕುಗಳಿಗೆ ಬೆಚ್ಚಗಾಗುತ್ತ, ನಮಗೆ ಗೊತ್ತಿರುವ ಹುಡುಗಿಯರನ್ನು ಅದಕ್ಕೆ ಹೋಲಿಸುತ್ತಾ, ಆಗೀಗ ಬಂದು ಕಣ್ಣು ಬಿಡುವ ಸೂಪರ್ ವೈಸರ್ ಆಚೆ ಹೋಗುತ್ತಿದ್ದಂತೆ ಕಿಸಕ್ಕನೆ ನಕ್ಕು, ಅವನು ಇತ್ತ ತಿರುಗುವುದರೊಳಗಾಗಿ ಮತ್ತೆ ಅದೇ ಗಂಭೀರ ಗಣಪತಿಯಂತೆ ಮೂತಿ ಉದ್ದವಾಗಿಸಿಕೊಂಡು, ಹುಳ್ಳಗಾಗುವ ಅವನ ಮುಖವನ್ನು ಊಹಿಸಿಕೊಳ್ಳುತ್ತಾ ಕೀಬೋರ್ಡ್ ಚಟಪಟಗುಟ್ಟಿಸುತ್ತಾ ಕುಳಿತು ಬಿಟ್ಟಿರುತ್ತಿದ್ದೇವು. ದಿನವೂ ನಮ್ಮ ಹುಡುಗು ಗ್ಯಾಂಗಿನ ಸದಸ್ಯರು ಬೆಳಿಗ್ಗೆ ಎದ್ದು ಶಿವಾಜಿನಗರದ ತಿರುವು ಬರುವ ಮುಂಚಿನ ಚಿಕ್ಕ ಟೀ ಅಂಗಡಿಯಲ್ಲಿ ಗದಗುಟ್ಟುತ್ತಾ ನಿಂತು ಬಿಸಿಬಿಸಿ ಟೀ ಕುಡಿದು ಮೊದಲ ಬಸ್ಸಿಗೆ ರೂಮಿನತ್ತ ಮರಳುವುದು ವಾಡಿಕೆ. ಈಗಲೇ ಯಾಕೋ ರೂಮಿಗೆ ಹೋಗುವುದು ಬೇಡ ಎನ್ನಿಸಿದರಂತೂ ಅಲ್ಲೇ ಬೆಳಿಗ್ಗೆಯೇ ಘಮಘಮಿಸುತ್ತಿದ್ದ ಪರೋಟಾ ತಿನ್ನಲು ಕಾಲು ಮಡಚಿ ಕುಳಿತು ಬಿಡುತ್ತಿದ್ದುದು ಇತ್ತು. ನನ್ನೊಬ್ಬನನ್ನು ಬಿಟ್ಟು, ಯಾಕೆಂದರೆ ಹಾಗೆ ನಾನೂ ಅವರೊಂದಿಗೆ ಕುಳಿತು ಕೊಂಡು ಹರಟುವ ಮತ್ತು ತೀರ ಬೆಳಗಿನ ನಿರ್ಜನ ರಸ್ತೆಗಳು ನಮ್ಮವೇ ಎಂದು ಕ್ಯಾಕಿ ಹಾಕಿಕೊಂಡು ಕಿರುಚುತ್ತಾ, ಅಲ್ಲಲ್ಲಿ ಅರ್ಧ ಸಿಗಾರ್ ಉರಿಸುತ್ತಾ ನಲಿಯುತ್ತಿದ್ದ ದಿನಗಳ ಮಧ್ಯದಲ್ಲೇ ನಾನು ಆ ಸಾ೦ಗತ್ಯವನ್ನು ಕಳೆದುಕೊಂಡಿದ್ದೆ. ನಾನೋ ಆ ಹೊತ್ತಿಗೆ ಅಪರೂಪಕ್ಕೆ ನಮ್ಮಂಥವರಿಗೆ ಸುಮ್ಮನೆ ಮುಟ್ಟಿ ನೋಡಲು ಮಾತ್ರ ಸಿಗುತ್ತಿದ್ದ ಕವಾಸಕಿ ಗಾಡಿಯೊಂದನ್ನು ಇರಿಸಿಕೊಂಡಿದ್ದೆ. ಸ್ವಂತದ್ದಲ್ಲ ಆಫೀಸಿನದ್ದು. ತೀರ ಅಪದ್ಧವಾದ ಹೊತ್ತಿನಲ್ಲಿ ನನಗೆ ಆಫೀಸಿಂದ ಕರೆ ಕಳಿಸಿದರೆ, " ನಾನು ಬಸ್ಸು ಪ್ರಾಬ್ಲಮ್ಮು... ಮೂರು ಬಸ್ಸು ಹಿಡಿಯಬೇಕು..." ಎನ್ನುತ್ತಾ, ಇವೆಲ್ಲವೂ ಹಳೆಯದೆನ್ನಿಸಿದರೆ " ಮನೆಯ ಓನರ್ರು ಲೂಸ್ ಮೋಷನ್ ಆಗಿ ಮನೆಯೆಲ್ಲಾ ರಾಡಿ ಮಾಡ್ಕಂಬಿಟ್ಟಿದ್ದಾ " ಎಂದೋ... ಅಥವಾ ಕಟ್ಟಕಡೆಯದಾಗಿ " ಪಕ್ಕದ ರೂಮಿನವನಿಗೆ ಪೈಲ್ಸ್ ಆಪರೇಶನ್ ಇತ್ತು ಸಾರ್ " ಎಂದೋ ಇತ್ಯಾದಿ ಸಬೂಬು ಹೇಳಿ, ಮಧ್ಯಾನ್ಹದ ಹೊತ್ತೆ ಜಿರಾಫ್ಹೆಯಂತೆ ಯಾವಾಗೆಂದರೆ ಆಗ ಕತ್ತೆತ್ತಿ " ಯಾರಾದ್ರೂ ಬೀಯರ್ ಸುರಿರೋ " ಎಂದು ನಾಲಿಗೆ ಚಾಚಿ ನಿಂತು ಬಿಡುತ್ತಿದ್ದ ಅದ್ಭುತ ಜೀವಿ ರವಿಯೊಂದಿಗೆ ಜಾಲಹಳ್ಳಿಯ ಎಂ.ಇ.ಎಸ್. ರಸ್ತೆಯ ಮೂಲೆಯ ಬಾರಿನಲ್ಲಿ ಕುಳಿತುಬಿಟ್ಟಿರುತ್ತಿದ್ದೆ. ಅಲ್ಲಿಲ್ಲವೆಂದರೆ ಎಚ್.ಎಂ.ಟಿ. ಟಾಕೀಸಿನಲ್ಲಿ ಎರಡೂವರೆ ರೂಪಾಯಿ ಕೊಟ್ಟು ಬಾಲ್ಕನಿಗೆ ಕುಳಿತು ಚಿತ್ರ- ನಿದ್ದೆ ಎರಡೂ ಮುಗಿಸಿ ಎದ್ದಿರುತ್ತಿದ್ದೆ.  ಹೀಗಾಗಿ ಕೊಂಚ ಯೋಚಿಸಿದ ಬಾಸು " ನಿನಗೆ ಟ್ರಾನ್ಸ್ ಪೋರ್ಟ್ ಆರೇಂಜ್ ಮಾಡ್ತೇವೆ... ದಿನಾಲು ಸಂಜೆ ಬಂದುಬಿಡು. ರಾತ್ರಿ ಎಷ್ಟಕ್ಕಾದರೂ ಸರಿ ಕೆಲಸ ಮುಗಿಸಿ ಹೋಗಕ್ಕಾಗುತ್ತಾ ? " ಎಂದು ಪ್ರಪೋಸಲ್ಲು ಕೊಟ್ಟ. ಇದೂ ಒಂದು ರೀತಿಯಲ್ಲಿ ಒಳ್ಳೆಯದೇ ಅನ್ನಿಸಿತು. ಯಾಕೆಂದರೆ ಬೆಳಿಗ್ಗೆಯಿಂದ ಸಂಜೆಯವರೆಗೂ ಆರಾಮವಾಗಿ ನಿದ್ರೆ ಊಟ... ಸೀನೇಮಾ... ನಂತರ ಗುಂಡು ಎಲ್ಲಾ ಮುಗಿಸಿಕೊಂಡು ಸಂಜೆ ಆಫೀಸಿಗೆ ಹೋಗಿ ಕುಳಿತರಾಯಿತಲ್ಲ. ಹೇಗೇ ಕೆಲಸ ಮಾಡಿದರೂ ನಾನು ಎರಡು ಗಂಟೆಯ ಮೇಲೆ ಮಾಡುವ ಅಗತ್ಯ ಬರುವುದಿಲ್ಲ ಎನ್ನುವುದು ಆಗಲೇ ತಿಳಿದಿದ್ದರಿಂದಾಗಿ ಹೂಂ ಆಯಿತು... ಎಂದು ಬಿಟ್ಟೆ. ಅದಕ್ಕೆ ಕಾರಣವೂ ಇಲ್ಲದಿರಲಿಲ್ಲ. ಆ ಹೊತ್ತಿಗೆ ತೀರ ದುರ್ಲಭವಿದ್ದ ಕ್ಯಾಡ್-ಕ್ಯಾಮ್ ಸರ್ವಿಸ್‌ನ್ನು ನಮ್ಮ ಕಂಪೆನಿ ಕೊಟ್ಟಂತೆ ಇನ್ನಾರೂ ಕೊಡುತ್ತಿರಲಿಲ್ಲ. ನಾನು ಅದರಲ್ಲಿ ಆರ್ಟ್‌ವರ್ಕ್ ಮಾಡುತ್ತಿದ್ದೆ. ತುಂಬಾ ವೇಗವಾಗಿ ಡ್ರಾಯಿಂಗುಗಳನ್ನು ಮತ್ತು ಪಿ.ಸಿ.ಬಿ. ಡಿಸೈನ್ ಕೂಡಾ ಮಾಡುತ್ತಿದ್ದೆ. ಅದರಲ್ಲೂ ಈಗಿನಂತೆ ಕಂಪ್ಯೂಟರು ಬೆಳವಣಿಗೆ ಇನ್ನೂ ಅಷ್ಟಾಗಿ ಕಂಡಿರದ ದಿನದಲ್ಲಿ " ಮೈಕೋ ಬಾಶ್ " ಸೇರಿದಂತೆ ದೊಡ್ಡ ಕ್ಲೈಂಟ್‌ಗಳ ಗುಂಪಿನ ಪ್ರಸೆಂಟೇಶನ್ ಸಹಿತ ಯಾವುದೇ ರೀತಿಯ ಪ್ರೊಫಾಯಿಲ್ಸ್ ಬೇಕೆಂದರೂ ನಾನು ಹೂಂ ಎಂದು ಕೂತು ಬಿಡುತ್ತಿದ್ದೆ. ಸತತ ಹದಿನೆಂಟು ಗಂಟೆಗಳ ಕಾಲ ಬೇಕಿದ್ದರೂ ಕೂತು ಕೆಲಸ ಮಾಡುತ್ತಿದ್ದುದು ಇವತ್ತೀಗೂ ನನ್ನ ಸರ್ವಕಾಲಿಕ ದಾಖಲೆ. ಅದಕ್ಕಾಗೇ ನೀನು ದಿನಾ ರಾತ್ರಿ ಬರೋದಾದರೆ ಗಾಡಿ ಕೊಡ್ತೇನಿ ಎಂದು ಅದ್ಯಾವುದೋ ಹೊತ್ತಿನಲ್ಲಿ ನನ್ನ ಕೈಗೆ ಕೀ ಕೊಟ್ಟಿದ್ದ. " ಹೋ ಗಾಡಿ ಕೊಟ್ರೆ ಯಾವ ಸರಹೊತ್ತಿಗಾದರೂ ಸರಿ ಬಂದು ಬಿಡ್ತೇನೆ. ಒಂದು ಪೇಜರ್ರೂ ಕೊಡ್ಸಿ ಬಿಡಿ ಸಾರ್ " ಎಂದು ನಾನೂ ಚಿಗುರಿದ ಹೋರಿಯಂತೆ ಅವನೆದುರು ಪುಟಿದು ನಿಂತಿದ್ದೆ. ಅವನು ಹೂಂ ಎಂದಿದ್ದನಾದರೂ ಅವನು ಪೇಜರು ಆರ್ಡರು ಮಾಡುವ ಮೊದಲೇ ನಾನು ಕೆಲ್ಸಕ್ಕೆ ರಾಜೀನಾಮೆ ಬೀಸಾಡಿ ಎದ್ದು ಬಂದಿದ್ದೆ ಅದು ಬೇರೆ ಕಥೆ. ಸರಿಯಾಗಿ ಆಗಿನ್ನೂ ಮೀಸೆ ಬಲಿಯದ, ಇಪ್ಪತ್ತೂ ತುಂಬದ ಪಡ್ಡೆ ನಾನು. ಅಂತಹ ಹೊತ್ತಿನಲ್ಲಿ ಒಂದು ಬೈಕು ಕೈಗೆ ಸಿಕ್ಕಿ ಬಿಟ್ಟರೆ ಏನಾಗಬೇಕೋ ಅದೇ ಆಗುತ್ತಿತ್ತು. ಗಾಡಿ ಇದೆ ಸರಿ. ಆನಾಮತ್ತು ನೀರಿನಂತೆ ಅದು ಪೆಟ್ರೋಲ್ ಕುಡಿಯುತ್ತಿತ್ತು. ಯಾವತ್ತೋ ಒಂದು ದಿನ ಪೆಟ್ರೋಲ್‌ಗೆ ದುಡ್ಡಿಲ್ಲದೇ, ತೀರ ಮೂರು ಲೀಟರ್ ಹಾಕಿಸಿಕೊಂಡು, ಡ್ರಾಪ್‌ಗೆಂದು ಹತ್ತಿಸಿಕೊಂಡ, ಆಚೆ ನಿಂತಿದ್ದ ದಾರಿ ಹೋಕನನ್ನು ತೋರಿಸಿ ಅವನು ದುಡ್ಡು ಕೊಡ್ತಾನೆ ಎಂದು ಹೇಳಿ, ಬಂಕ್ ಹುಡುಗ ಅವನನ್ನು ವಿಚಾರಿಸಲು ಅತ್ತ ತಿರುಗುವ ಮೊದಲೇ ಗಾಳಿಯಲ್ಲೆಗರುತ್ತಾ ಬಂದವನು ಇಂದಿರಾ ನಗರದ ಆ ಬಂಕಿನ ಕಡೆಗೆ ಆರು ತಿಂಗಳು ಸುಳಿದಿರಲಿಲ್ಲ. ಹಾಗಿದ್ದಾಗ ಉಳಿದವರು ಬೆಳಿಗೆದ್ಡು ಹೋಗ್ತಾರೆ ಅಂತಾದರೆ ನಾನ್ಯಾಕೆ ಹೋಗಲಿ, ನಾನು ರಾತ್ರಿನೆ ರೂಮಿಗೆ ಹೋಗ್ತೇನಿ ಎಂದು ತುಂಬ ಸರಹೊತ್ತಿನಲ್ಲಿ ಬೈಕನ್ನೆರಿಕೊಂಡು ಭರ್ರೊ ಎಂದು ಬೀಸುವ ಗಾಳಿಗೆ ಮುಖವೊಡ್ಡುತ್ತಾ ತೀರ ಚಳಿಯಲ್ಲಿ ರೈಡು ಬೀಳುತ್ತಿದ್ದೆ. ಸೀದಾ ಎಂ.ಜಿ. ರೋಡಿನಿಂದ ಕೆಲವೊಮ್ಮೆ ಟಾಟಾ ಇನ್ಸಿಟ್ಯೂಟ್ ಮೇಲೆ ಹಾಯ್ದು ಬಂದರೆ ಕೆಲವೊಮ್ಮೆ ಚಟಕ್ಕೆ೦ದು ಬೇಕೆಂದೇ ಅರಮನೆಯ ಕಡೆಗೆ ತಿರುಗಿಸಿ ಮೇಖ್ರಿ ಸರ್ಕಲ್ಲು ಹಾಯ್ದು ಅಲ್ಲಿಂದ ಸುಲಭ ದಾರಿಯಾದ ನ್ಯೂ ಬಿ.ಈ.ಎಲ್. ರಸ್ತೆಗಿಳಿಯುವುದನ್ನು ಬಿಟ್ಟು ಮತ್ತೆ ಬಿ.ಎಚ್.ಈ.ಎಲ್. ಕಡೆ ತಿರುಗಿಸಿ ಯಶವಂತಪುರದ ಮೇಲೆ ಹಾಯ್ದು ಮತ್ತಿಕೆರೆಗೆ ಬಂದು ಗೋಕುಲದ ಮಸೀದೆಯ ಮೇಲ್ಗಡೆಯಿದ್ದ ರೂಮನ್ನು ಸೇರಿಕೊಳ್ತಿದ್ದೆ. ಅಷ್ಟಕ್ಕೂ ಬೆ೦ಗಳೂರಿನಲ್ಲಿ ರಾತ್ರಿ ಆಗುವುದೇ ಇಲ್ಲವಲ್ಲ. ಹಾಗಾಗಿ ಬೆಳ್ಳಂಬೆಳಿಗ್ಗೆ ಮೂರರ ಹೊತ್ತಿನಲ್ಲಿ ಮತ್ತಿಕೆರೆಯ ಮೂಲೆಯ ಬಸ್ ಸ್ಟ್ಯಾಂಡಿನ ಪಕ್ಕದಲ್ಲಿ ಇದ್ದ ಗೂಡಂಗಡಿಗೆ ನಿಂತು, ಗಾಡಿಯಿಂದಿಳಿಯದೆ ಅರ್ಧ ಕಾಲು ನೆಲಕ್ಕೆ ತಾಗಿಸಿ ಅಲ್ಲಿಂದಲೇ " ಒಂದ್ ಫುಲ್ " ಎಂದು ಕೂಗಿ ಬಿಸಿಬಿಸಿ ಟೀ ಕುಡಿದು ರೂಮು ಸೇರಿದರೆ ಉಳಿದವರು ಕವಕವ ಎನ್ನುತ್ತಾ ಬಂದು ರೂಮು ಸೇರುವವರೆಗೆ ನನ್ನದು ಮುಕ್ಕಾಲು ನಿದ್ರೆ ಮುಗಿದಿರುತ್ತಿತ್ತು. ಆದರೆ ಅಷ್ಟು ಬೇಗ ಆ ರಾತ್ರಿಗಳಿಗೆ ಭಯ ಅನ್ನೋದು ಸುತ್ತಿಕೊಳ್ಳುತ್ತೆ ಎಂದುಕೊಂಡವನೂ ಅಲ್ಲ ಮತ್ತು ಆ ಒಂದು ರಾತ್ರಿಯೇ ಬಹುಶ ನನಗೆ ಬೆಂಗಳೂರಿನ ಹತ್ತು ಹಲವು ಕೋವೆಗಳಿಗೆ, ಪರಿಚಯದ ಹಾದಿಯನ್ನು ತೋರಿಸಿತು ಎಂದರೂ ತಪ್ಪಲ್ಲ. ಹಾಗೆ ಆ ದಿನ ಸರಹೊತ್ತಿನ ಎರಡೂ ಮುಕ್ಕಾಲಿಗೆ ಹೌಸ್ ಆಫ್ ಲಾರ್ಡ್ಸ್‌ನಿಂದ ಹೊರಬಂದು ಬೈಕನ್ನೇರಿ ದೌಡಾಯಿಸುತ್ತಾ ಇನ್ನೇನು ಶಿವಾಜಿ ನಗರದ ಕ್ರಾಸ್ ತಿರುಗಬೇಕು, ಅಸಲಿಗೆ ಆ ದಿನ ನಾನು ಹಾಗೆ ಹೋಗದೆ ನೇರ ಬಂದು ಎಡಕ್ಕೆ ತಿರುಗಿದ್ದರೂ ಆಗುತ್ತಿತ್ತು. ಅದೇನೋ ಗೊತ್ತಿಲ್ಲ. ಹಾಗೇ ಬಸ್‌ಸ್ಟ್ಯಾಂಡ್ ತಿರುಗಿ ಬಲಕ್ಕೆ ತಿರುಗುವುದಕ್ಕೂ ಎದುರಿನಿಂದ ಕ್ರಿಕೇಟ್ ಪ್ಲೇಯರ್‌ನಂತೆ ಡೈ ಹೊಡೆಯುತ್ತಾ ಬಂದು ಅವನು ಎದ್ದು ನಿಲ್ಲುವುದಕ್ಕೂ ಸರಿ ಹೋಯಿತು. ನಾನು ಇನ್ನಿಲ್ಲದಂತೆ ಬೈಕ್ ಕಂಟ್ರೋಲ್ ಮಾಡುವ ಮುಂಚೆ ಅವನು ಎದುರಿಗೆ ನಿಂತು ಮಚ್ಚನ್ನೆತ್ತಿ ಕತ್ತಿಗಿರಿಸಿದ್ದ. ನಾನು ಕಣ್ಣು ಬಿಡುವ ಮುಂಚೆ ಆತ ಹಿ೦ದಕ್ಕೆ ಕುಳಿತು " ಗುರು. ಗಾಡಿ ನಿಲ್ಲಿಸ್ ಬ್ಯಾಡ. ಅವ್ರ ಅಕ್ಕನ್ ಅವ್ರು ಹಿಂದವ್ರೆ... ಹಂಡ್ರೆಡ್ ಸ್ಪೀಡ್‌ನಲ್ಲಿ ಓಡ್ಸು..." ಎಂದ. ನಾನು ಒಮ್ಮೆ ಉಸಿರೆಳೆದುಕೊಂಡು ಮುಂದಕ್ಕೆ ಚಿಮ್ಮಿಸಿದ್ದೆ. ನಂತರದ್ದು ಬರೆದರೆ ಅದೇ ಮಿನಿ ಕಾದಂಬರಿಯಾದೀತು. ಅದಿನ್ಯಾವತ್ತಾದರೂ ಬರೆದೇನು. ಆದರೆ ಬೆ೦ಗಳೂರಿನ ಕಾಣದ ಗಲ್ಲಿಗಳಿಗೆ ಪರಿಚಯಿಸಿದವನು ಅವನೇ ಮತ್ತು ತುಂಬ ಐನ್ ಟೈಂನಲ್ಲಿ ಸಹಾಯಕ್ಕೆ ಒದಗಿ ಬಂದವನೂ ಹೌದು. ವಿಪರ್ಯಾಸವೆಂದರೆ ಅವನು ಭೇಟಿಯಾದಾಗ ಅವನ ಹಿಂದೆ ಇದ್ದಂತೆ, ತೀರ ಬೆಂಗಳೂರು ಬಿಡುವಾಗ, ನನ್ನ ಹಿಂದೆಯೂ ಜನಗಳು ಬೆನ್ನು ಬಿದ್ದಿದ್ದರು. " ಹೋಗ್ ಗುರು ಈ ಬೆಂಗಳೂರು ಬ್ಯಾಡ " ಎಂದು ಚಿಕ್ಕ ತಮ್ಮನಂತೆ ಪಕ್ಕದಲ್ಲಿ ಕೂರಿಸಿಕೊಂಡು ಪೀಣ್ಯ ಪಕ್ಕದ ಸುದರ್ಶನ ಧಾಬಾದಲ್ಲಿ ಬೆಳಗಿನವರೆಗೂ ಕುಡಿಸುತ್ತಾ ಕುಳಿತಿದ್ದವನ ಬೆಂಗಾವಲಿಗೆಂದೇ ಮೂರು ವಾಹನಗಳು ಕಾದು ನಿಂತಿದ್ದವು ಹೈವೆ ಮೇಲೆ. ಬದುಕು ಎಲ್ಲಿಂದೆಲ್ಲಿಗೋ ಅಪದ್ಧ ಹೊತ್ತಿನಲ್ಲಿ ತಿರುವು ತೆಗೆದುಕೊಳ್ಳುವುದೆಂದರೆ ಇದೇನಾ... ? ಕೇಳಬೇಕೆಂದರೆ ಅವನು ಸಾವಿಗೆ ಸಿಲುಕಿ ಇದೇ ಜನೇವರಿಗೆ ಸರಿಯಾಗಿ ನಾಲ್ಕು ವರ್ಷಗಳಾಗುತ್ತಿವೆ. ಬಹುಶ ಈ ನೆನಪಿನೊಂದಿಗೆ ಅವನ ಆತ್ಮ ಮಗ್ಗುಲು ಬದಲಿಸುತ್ತದಾ ? ಗೊತ್ತಿಲ್ಲ... ಉಳಿದದ್ದು ಮುಂದೆಂದೋ ಬರಲಿದೆ ಇಲ್ಲೇ... - See more at: http://vismayanagari.com/node/12241#sthash.nCDhje3O.dpuf

No comments:

Post a Comment