Saturday, August 3, 2013


ಅವನಿಗೇನೋ ಕಾರಣಗಳಿದ್ದವು. ನನಗ್ಯಾವ ಕೀಳರಿಮೆ ಕಾಡಿತ್ತು ... ?


SANTOSHKUMAR MEHANDALE's picture
ಬಾಲ್ಯ ಕಾಲದ ಕಥನ 
ಮೌನದ ಮಾತುಗಳು..
 ( ಹತ್ತಾರು ವರ್ಷಗಳ ಹಿಂದೆ ಆತ " ಬೇರೆದಾವ್ರ ಕಡಿಂದ ಹೇಳಿಸಿಕೊಂಡ ನಗೋದಕ್ಕಿಂತ ನಾವ ಹೇಳಿಕೊಂಡ್ರ ಏನೂ ಅನಸಾಂಗಿಲ್ಲ ನೋಡಲೇ..." ಎಂದಿದ್ದ..) ಮೊನ್ನೆ ಮೈಸೂರಿನಲ್ಲೊಂದು ರಾಷ್ಟ್ರಮಟ್ಟದ ಕಾನ್ಫ್‌ರೆನ್ಸಿನಲ್ಲಿ ಪಾಲ್ಗೊಳ್ಳುವ, ತನ್ಮೂಲಕ ಮರಾಠಿಯ ಜನಪ್ರಿಯ ದಿನಪತ್ರಿಕೆ " ಲೋಕಸತ್ತಾ" ದ ಸಂಪಾದಕರಾದ ಶ್ರೀಯುತ ಕುಮಾರ್ ಕೇತ್ಕರ್ ಅವರ ಜೊತೆಯಲ್ಲಿ ವಿಡಿಯೋ ಕಾನ್ಫರೆನ್ಸಿನಲ್ಲಿ ನಮ್ಮವರ ಪರವಾಗಿ ಸಂವಾದ ನಡೆಸುವ ಅಪರೂಪದ ಅವಕಾಶ ದೊರಕಿತ್ತು. ಈ ಸಂವಾದ ಮುಂಬೈನ ಮುಖ್ಯ ವಾಹಿನಿಯಲ್ಲಿ ಪ್ರಸಾರವಾಯಿತು ಕೂಡಾ. ಬಹುಶ: ನನಗಾದ ಒಟ್ಟು ವಯಸ್ಸಿನಷ್ಟು ಅವರ ಪತ್ರಿಕೋದ್ಯಮ ಸೇರಿದಂತೆ ಅನುಭವಕ್ಕೇನೆ ಅಷ್ಟು ವಯಸ್ಸಾಗಿದ್ದಿರಬೇಕು.
ಅದರಲ್ಲಿ ದೇಶದ ಸೈನ್ಸ್‌ಫಿಕ್ಷನ್ ಸಾಹಿತ್ಯ ಜಗತ್ತಿನ ಗಣ್ಯಾತಿಗಣ್ಯರೆಲ್ಲಾ ಪಾಲ್ಗೊಂಡಿದ್ದರು. ಚೆನೈನ ಶ್ರೀ ಪನ್ನೀರ್ ಸೆಲ್ವಂ ಎಂಬ ವಿದೇಶದಲ್ಲೆಲ್ಲಾ ಇನ್ನಿಲ್ಲದಂತೆ ಸೈನ್ ಫಿಕ್ಷನ್ ಬಗ್ಗೆ ಪಾಂಗಿತವಾಗಿ ಮಾತಾಡಿ ಹೆಸರು ಗಳಿಸಿದ ಬುದ್ಧಿಜೀವಿಯೂ ಅಲ್ಲಿದ್ದರು. ದಿನಕರ ಚರಕ ಎಂಬ ತುಂಬು ಮುಖದ ಕಾಶ್ಮೀರಿ ಸುಂದರಾಂಗ ಜಾಗತಿಕವಾಗಿ ಹೆಸರು ಮಾಡಿರುವ ಛಿಜಿezಥಿಛಿ.ಜಣಡಿ ಎಂಬ ವೆಬ್ ಮಾಲೀಕ ಹಾಗು ಸಂಪಾದಕ ಅಮೇರಿಕೆಯಿಂದ ಬಂದು ಅದರಲ್ಲಿ ಪಾಲ್ಗೊಂಡಿದ್ದ. ಹಾಗೆ ತುಂಬ ಅಕಸ್ಮಿಕವಾಗಿ ನನಗೆ ಅವಕಾಶ ಲಭ್ಯವಾಗಿದ್ದ ಆ ಸಮಾರಂಭದಲ್ಲಿ ತುಂಬು ವಯಸ್ಸಿನ ಹಿರಿಯರಾದ ಜಿ.ಟಿ.ನಾರಾಯಣರಾವ್ ಕೂಡಾ ಸೇರಿದ್ದರಲ್ಲದೇ ಕೊನೆಯಲ್ಲಿ ಹೋಗುವಾಗ ಕಾಲಿಗೆ ನಮಸ್ಕರಿಸಲೆಂದು ಹೋದರೆ, ಕೆಳಕ್ಕೆ ಬಿಡದೆ ತಬ್ಬಿಕೊಂಡು "...ಇನ್ನು ತುಂಬಾ ಬೆಳೀಬೇಕಪ್ಪಾ ಚೆನ್ನಾಗಿ ಬರೀತಿ... ಹೀಗೇ ಬರೀತಿರು..." ಎಂದು ಹರಸಿದ್ದರು. ಮಾತಾಡದೆ ಸುಮ್ಮನೆ ಅವರಿಗೆ ತಲೆ ಬಾಗಿದ್ದೆ.
ಅದೇ ದಿನ ಸಂಜೆ ಒಂದು ಕರೆ ನನ್ನ ಅಂಕಣವನ್ನು ಹೊಗಳಿಕೊಂಡು ಬಂದಿತ್ತು. ಅಸಲಿಗೆ ಕರೆ ನೀಡಿರುವ ವ್ಯಕ್ತಿಯನ್ನು ನಾನು ಯಾವುದೇ ಕಾರಣಕ್ಕೂ ನೆನಪಿಸಿಕೊಳ್ಳುವ ಸಂಪಕ೯ವಿರಲೇ ಇಲ್ಲ. ಅಸಲಿಗೆ ಆತ ನಾನಿದ್ದ ಊರಿನವನೂ ಅಲ್ಲ. ಹಿಂದೊಮ್ಮೆ ನಾನಿದ್ದ ಪಕ್ಕದ ಅರ್ಲವಾಡಾದಿಂದ ಕರೆ ನೀಡಿದ್ದ. ತುಂಬು ಧನ್ಯವಾದಗಳೊಂದಿಗೆ ಸಂಪರ್ಕ ಕಡಿಯುವಾಗ ನಮ್ಮೂರಿನ ಹುಡುಗನೊಬ್ಬನ ನೆನಪು ತೂರಿ ಬಂದಿತ್ತು. ಅಲ್ಲಿಯವರೆಗೂ ಆತ ನನ್ನ ನೆನಪಿನಾಳದಲ್ಲಿ ಕದಲಿರಲೇ ಇಲ್ಲ. ಅಸಲಿಗೆ ಅವನ ಹೆಸರೂ ಕೂಡಾ ನನಗೆ ನೆನಪಿಲ್ಲ. ನಾನಿದ್ದ ಊರಿನಲ್ಲಿ ಹಿಂದಿನ ಓಣಿಯಲ್ಲಿ ಅವನು ವಾಸಿಸುತ್ತಿದ್ದ. ಅವನು ಬಹುಶ: ನನಗಿಂತಲೂ ಎರಡ್ಮೂರು ವರ್ಷಕ್ಕೆ ದೊಡ್ಡವನಿದ್ದ. ಒಂದು ಕಾಲು ಕೊಂಚ ಊನವಿತ್ತಾ ಈಗ ಖಚಿತವಾಗಿ ನೆನಪಾಗುತ್ತಿಲ್ಲ. ನಾನು ಬಹುಶ: ಏಳನೆಯ ತರಗತಿಯಲ್ಲಿದ್ದೆ. ಆತ ಆಗಲೇ ಹೊಲದ ಕೆಲಸಕ್ಕೆ ಹೋಗುತ್ತಿದ್ದ. ಕೊಂಚ ವಿಚಿತ್ರವಾಗಿ ಆಡುತ್ತಿದ್ದ ಅವನು. ಆ ಬಗ್ಗೆ ಯಾರೂ ಅಷ್ಟಾಗಿ ಗಮನ ನೀಡಿರದಿದ್ದರೂ ಕೂಡಾ ಅವನಲ್ಲಿ ಒಂದು ಇನ್ಫೀರಿಯಾರಿಟಿ ಬೆಳೆದುಬಿಟ್ಟಿತ್ತಾ ಈಗಲೂ ಖಚಿತವಾಗುತ್ತಿಲ್ಲ.
ಆದರೆ ಇದ್ದಕ್ಕಿದ್ದಂತೆ ಒಂದಿನ ಸಂಜೆಯ ಹೊತ್ತು ಊರ ಹೊರಗಿನ ಬಯಲಲ್ಲಿ ಇತರ ಹುಡುಗರು ಆಟವಾಡುತ್ತಾ ಆನಂದಿಸುತ್ತಿದ್ದ ವಾಲಿ ಬಾಲ್ ಸಂಭ್ರಮದಲ್ಲಿ ಭಾಗಿಯಾಗಿ ತಾನೂ ಇನ್ನಿಲ್ಲದಂತೆ ಕುಣಿಯುತ್ತಿದ್ದವನು ಅಷ್ಟು ದೂರದಲ್ಲಿ ಚಪ್ಪಾಳೆ ತಟ್ಟುತ್ತಾ ಕಾಲು ಕುಣಿಸುತ್ತಾ ನಿಂತಿದ್ದ ನನ್ನ ಬಳಿಗೆ ಸಾಗಿದ್ದ.
ಮೊದ ಮೊದಲು ಮಾಮೂಲಿನ ಮಾತುಕತೆ ಸಾಗಿದವಾದರೂ ಬರುಬರುತ್ತಾ ಆತ ಆಡುತ್ತಿದ್ದ ಮಾತುಗಳಲ್ಲಿ ಹುದುಗಿದ್ದ ಅರ್ಥ ಈಗೀಗ ತುಂಬಾ ಸ್ಪಷ್ಟವಾಗಿ ಆಗುತ್ತಿದೆ. ಬಹುಶ: ಮೊದಲೇ ಹೇಳಿದಂತೆ ಓದಿನಲ್ಲೂ ಅಷ್ಟಕ್ಕಷ್ಟೆ ಎನ್ನಿಸುವಂತಿದ್ದ ಅವನ ಆವರೇಜುತನ ಹಾಗು ಅವನಿಗಿದ್ದ ನೂನ್ಯತೆಗಳು ಅವನನ್ನು ಹಾಗೆ ಆಡಿಸಿತ್ತಾ ಗೊತ್ತಿಲ್ಲ.
" ನಿನಗೇನ್ ಬಿಡೊ ನಿಮ್ಮಕ್ಕ... ಅಣ್ಣ ಹೇಳಿಕೊಡ್ತಾರು. ಭಟ್ಟರ ಹುಡುಗ್ರ ಇದೀರಿ.. ಶಾಣ್ಯಾ ಇರ್ತೇರಿ.. ಓದ್ತೇರಿ... " ಎಂದವನು ನಿಲ್ಲಿಸಿ " ... ನೋಡಲೇ, ನನಗ ಗಣಿತ ತಲ್ಯಾಗ ಹೋಗಾಂಗಿಲ್ಲ... ಮತ್ತ ಹುಡುಗೋರು ಹ೦ಗ.. ಮಾಡ್ತಾರ ನೋಡ... ಸುಮ್ಮ ಸುಮ್ಮನ ಮಶ್ಕೀರಿ ಮಾಡ್ತಾರ. ಅದಕ್ಕ ನನ್ನ ನೋಡಿ ಯಾವನಾರ ನಗೋ ಬದಲಿಗೆ ನಾನ ಜೋಕ್ ಮಾಡಿ ಬಿಡ್ತೇನಿ " ಎಂದಿದ್ದ. ಯಾಕೆ ಅವನಿಗೆ ಆ ವಯಸ್ಸಿನಲ್ಲಾಗಲೇ ಅಂಥದ್ದೊಂದು ಕೀಳರಿಮೆ ಮೂಡಿ ಬಿಟ್ಟಿತ್ತಾ..?ಆಗ ಇದನ್ನೆಲ್ಲ ಅರ್ಥಮಾಡಿಕೊಂಡು ಸಮಾಧಾನಿಸುವ ವಯಸ್ಸೂ ಅಲ್ಲ. ಅದಕ್ಕಿಂತಲೂ ಮಿಗಿಲಾಗಿ ಗಣಿತ ಪಿರಿಯಡ್ ಬಂದಕೂಡಲೇ ನಾನೇ ಎಷ್ಟೋ ಬಾರಿ ಪಿಳಿ ಪಿಳಿ ಕಣ್ಬಿಟ್ಟುಕೊಳ್ಳುತ್ತಿದ್ದವನು. ನಾನೇ ಓದಿನಲ್ಲಿ ತೋರಿಸದ ಶ್ರದ್ಧೆ... ಎಲ್ಲರನ್ನೂ ಪ್ರಶ್ನಿಸುವ... ಮಾತು ಮಾತಿಗೂ ರೇಗುವ ಶಾರ್ಟ್ ಟೆಂಪರ್‌ಮೆಂಟಿನಿಂದಾಗಿ ಕಿಲಾಡಿತನ ಮಾಡಿಕೊಂಡು ಅಲ್ಲಲ್ಲಿ "... ಭಟ್ಟರ ಹುಡುಗ, ಕಡೆದಾಂವ ಸಲ್ಪ ಬರೊಬ್ಬರ ಇಲ್ಲ... ಸುಮಾರ " ಎಂದು ಆಡಿಕೊಳ್ಳುವಷ್ಟು ಆವರೇಜಿಗೆ ಸರಿದು ನಿಂತಿದ್ದವನು. ಹಾಗಾಗಿ ಇನ್ನು ಅವನು ನನ್ನ ಬಗ್ಗೆ ಇವ್ರ ಶಾಣ್ಯಾರ ಮನಿಯಂವ ಅಂತ ಅಂದ್ಕೊಂಡಿದ್ದಕ್ಕೆ ಕೊಂಚ ಒಳಗೊಳಗೇ ಬೀಗಿದ್ದೆನಾ...?
ಯಾಕೆಂದರೆ ನನಗೂ ಓದಿಗೂ ಆವತ್ತಿನ ಮಟ್ಟಿಗೆ ಅಷ್ಟಕ್ಕಷ್ಟೆ. ಆರಂಭದಲ್ಲಿ ಹುಶಾರಿನ ಹುಡುಗ ಅನ್ನಿಸಿಕೊಂಡವ ತೀರ ಎಸ್ಸೆಸ್ಸೆಲ್ಸಿ ಬರುವ ಹೊತ್ತಿಗೆ ಸೆಕೆ೦ಡ್ ಕ್ಲಾಸಿನಲ್ಲಿ ಉಸಿರು ಕಟ್ಟಿ ಪಾಸಾಗಿದ್ದೆ. ನಂತರದ ದಿನದಲ್ಲಿ ಅದ್ಯಾವ ಜಿದ್ದಿಗೆ ಬಿದ್ದೆನೋ ಗೊತ್ತಿಲ್ಲ. ಸಾಕೆನ್ನಿಸುವಷ್ಟು ತೆಕ್ಕೆ ತುಂಬಾ ಡಿಗ್ರಿಗಳನ್ನು ಮಾಡಿಕೊಂಡೆ ಆ ಪ್ರಶ್ನೆ ಬೇರೆ. ಆದರೆ ಹಾಗೆ ಹೇಳಿದ್ದ ಅವನು ನಂತರದಲ್ಲಿ ಎರಡ್ಮೂರು ಸಲ ನಾನು ಗಮನಿಸಿದಂತೆ ತನ್ನಲ್ಲಿ ಕೀಳರಿಮೆಯನ್ನೂ, ಊರಿನಲ್ಲಿ ಸಾಮಾನ್ಯವಾಗಿ ಎಲ್ಲರಿಗೂ ಒಮ್ಮೆಯಲ್ಲ ಒಮ್ಮೆ ಕಾಡಿಯೇ ಕಾಡಿದ್ದ ಕೊಂಚ ಬಡತನ.. ಇತ್ಯಾದಿಗಳ ಜೊತೆಯಲ್ಲಿ ಓದಿನಲ್ಲೇನೂ ಇಲ್ಲದ ಅವನಿಗೆ ಅದು ಮನದಲ್ಲೆಲ್ಲೋ ತುಂಬಾ ಗಾಯದಂತೆ ತಾಗಿ ಬಿಟ್ಟಿತ್ತಾ. ಆದ್ರೆ ನಂತರದ ಹಲವು ಬಾರಿಯ ಮಾತಿನಲ್ಲಿ ಅವನು ಸಹಜವಾಗಿ ಎಂಬಂತೆ ತನ್ನ ಕೊಂಚ ವಿಶಿಷ್ಟ ಮ್ಯಾನರಿಸಮ್ಮಿನ ಆಂಗಿಕ ಅಭಿನಯದ ಮೂಲಕ ತನಗೇನು ಆಗಿಲ್ಲ ತಾನು ಎಲ್ಲರಂತೆ ಎನ್ನುವ ವಿಷಯವನ್ನು ತೋರಿದ್ದ. ಅದು ಸಹಜವೂ ಆಗಿತ್ತು. ಅವನಾಗಿ ಮಾಡುತ್ತಿದ್ದ ಗುಣ ಲಕ್ಷಣವಲ್ಲ ಅದು. ಮನಸ್ಸು ತನಗೇ ಅರಿವಿಲ್ಲದೇ ಕೀಳರಿಮೆಯನ್ನು ಮುಚ್ಚಿಟ್ಟುಕೊಳ್ಳಲು ಅನುಸರಿಸುವ ಒಂದು ರೀತಿಯ ನಾಟಕ ಅದು.
ಆಗಲೂ ನನಗೆ ಅಂಥಾ ವ್ಯತ್ಯಾಸವೇನೂ ಈ ವಿಷಯದಲ್ಲಿ ಗೋಚರಿಸಿರಲ್ಲಿಲ್ಲ. ಆದರೆ ನಂತರದ ಒಂದು ಸಂಜೆ ಇದ್ದಕ್ಕಿದ್ದಂತೆ ಅವನು ತೀರಿಕೊಂಡ ಸುದ್ದಿ ಬಂದಿತ್ತು. ಕೊನೆ ಕೊನೆಗೆ ನಮ್ಮದೇ ಊರಿನ ಟ್ರಕ್ಕೊಂದರಲ್ಲಿ ಕೆಲಸ ಮಾಡುವಾಗ ಮೇಲಿಂದ ಬಿದ್ದು ತೀರಿಕೊಂಡಿದ್ದ ಎಂಬ ಸುದ್ದಿ ಬಂದಿತ್ತು. ಅದು ಅವನು ಮೇಲಿಂದ ಬಿದ್ದಿದ್ದನೋ ಅಥವಾ ಅವನ ಮೇಲೆ ಅವನು ಲಾರಿಗೆ ತುಂಬಿಸುತ್ತಿದ್ದ ಹತ್ತಿಯ ಅಂಡಿಗೆಗಳು ಬಿದ್ದಿದ್ದವೋ ಒಟ್ಟಾರೆ ಒಂದು ಆಕಸ್ಮಿಕದಲ್ಲಿ ಅವನು ತೀರಿಕೊಂಡಿದ್ದ. ಆ ಹೊತ್ತಿಗೆ ನನಗೂ ಎಲ್ಲರಂತೆ ಛೇ ಪಾಪ ಎನ್ನಿಸಿ ಸುಮ್ಮನಾಗಿಸಿದ್ದ ಆ ಸುದ್ದಿ ಮೊನ್ನೆ ಮೊನ್ನೆಯವರೆಗೂ ಏನೂ ಅನ್ನಿಸಿರಲೇ ಇಲ್ಲ. ಆದರೆ ಇದ್ದಕ್ಕಿದ್ದಂತೆ ಊರ ಕಡೆಯಿಂದ ಚಿಮ್ಮಿ ಬಂದ ಒಂದು ಕರೆ ಅದ್ಯಾಕೋ ತನ್ನ ಪರಿಚಯವನ್ನು ಹೇಳಿಕೊಂಡು ಮಾತಾಡುತ್ತಿದ್ದರೆ ಹತ್ತು ನಿಮಿಷದಲ್ಲಿ ಇನ್ನಿಲ್ಲದಂತೆ ಅವನ ನೆನಪನ್ನು ತಂದಿಟ್ಟು ಬಿಟ್ಟಿತ್ತು. ಹಾಗೆ ತನ್ನನ್ನು ಪರಿಚಯಿಸಿಕೊಂಡು " ನೀವು ಆಗ ಭಾಳ ಸಣ್ಣಗ ಇದ್ರಿ... ಈಗ ಫೋಟೊದಾಗ್ ನೋಡಿದ್ರ ಗುರ್ತ ಸಿಗಧಂಗಾ ಆಗಿದಿರಿ..." ಇತ್ಯಾದಿ ಮಾತಾಡುತ್ತಿದ್ದರೆ ಯಾಕೋ ಅದ್ಯಾರೆಂದು ಎಷ್ಟು ತಲೆ ಕೊಡಹಿದರೂ ನೆನಪಾಗದ ವ್ಯಕ್ತಿಯ ಬದಲಿಗೆ ಇವನ ನೆನಪಾಗಬೇಕೆ.
ವಿಚಿತ್ರವೆಂದರೆ ಹತ್ತಾರು ವರ್ಷಗಳ ಹಿಂದೆ ಆತ " ಬೇರೆದಾವ್ರ ಕಡಿಂದ ಹೇಳಿಸಿಕೊಂಡ ನಗೋದಕ್ಕಿಂತ ನಾವ ಹೇಳಿಕೊಂಡ್ರ ಏನೂ ಅನಸಾಂಗಿಲ್ಲ ನೋಡಲೇ..." ಎಂದಿದ್ದ, ತನ್ನನ್ನು ತಾನೇ ಗೇಲಿಗೊಳಪಡಿಸಿಕೊಳ್ಳುವ ಅಂಥಾ ಬುದ್ಧಿಜೀವಿಯೇನೂ ಅಲ್ಲದ ಅವನ ಆ ಮಾತು ಇವತ್ತು ಇನ್ನಿಲ್ಲದಂತೆ ತಿವಿದದ್ದು ಸುಳ್ಳಲ್ಲ. ಅಸಲಿಗೆ ನನ್ನ ವೃತ್ತಿಗೂ ಓದಿಗೂ ಏನೊಂದು ಸಂಬಂಧವಿಲ್ಲದೆಯೂ, ಅಷ್ಟಕ್ಕೂ ತೀರ ಸೆಕೆಂಡ್ ಕ್ಲಾಸಿನಲ್ಲಿ ಎಸ್ಸೆಲ್ಸಿ ಪಾಸಾದ ನಾನು ಯಾವ ಕೀಳರಿಮೆಯನ್ನು ಮೆಟ್ಟಿ ಹಾಕಲು ಹಾಗೆ ತೆಕ್ಕೆ ತುಂಬಾ ವರ್ಷಕ್ಕೆರಡು ಡಿಪ್ಲೋಮಾಗಳನ್ನು... ಮಾಸ್ಟರ್ ಡಿಗ್ರಿಯನ್ನು ಓದಿಕೊಂಡೆ...?.
ನಾನ್ಯಾವ ಕೀಳರಿಮೆಯನ್ನು ಮೆಟ್ಟಲು ಪ್ರಯತ್ನಿಸಿದೆ. ಗೊತ್ತಾಗುತ್ತಿಲ್ಲ. ಆದರೆ ಹೀಗೆ ತೀರ ಸಂಜೆಯ ಹೊತ್ತಿನಲ್ಲಿ ಕರೆದು ಒಂದು ಯೋಚನೆಯನ್ನು ನನ್ನಲ್ಲಿ ಸ್ಫುರಿಸುವಂತೆ ಮಾಡಿದ ಊರ ಹತ್ತಿರದ ಮಿತ್ರನಿಗೆ ಹೃದಯ ಪೂರ್ವಕ ನಮಸ್ಕಾರಗಳಿದ್ದೆ ಇದೆ.

No comments:

Post a Comment