Wednesday, May 10, 2017

ಪಾತಾಳ ಗಂಗೆ… ಬರಿದಾಗಲಿರುವ ಅಂತರಗಂಗೆ…

ಪಾತಾಳ ಎನ್ನುವುದೇ ಒಂದು ಕಲ್ಪನೆ. ಅಂದರೆ ಯಾರೂ ಮುಟ್ಟಲಾಗದ ಆಳ, ತಡವಲಾಗದ ಬುಡತುದಿ ಎಂದೇ ಅರ್ಥ. ಪುರಾಣಗಳ ಹೊರತುಪಡಿಸಿದರೆ ಪಾತಾಳ ಕೈಗೆ ದಕ್ಕುವುದು ಅಸಾಧ್ಯವಾದುದರಿಂದಲೇ ಅದನ್ನು ಕೈಯಳತೆಗೆ ಸಿಗದ ಉದಾಹರಣೆಯಾಗಿ ಬಳಸುತ್ತೇವೆಯೇ ವಿನಾ ಪ್ರಾತ್ಯಕ್ಷಿಕ ರೂಪಕ್ಕೆ ಎಟುಕಿಸಿಕೊಂಡಿದ್ದೇ ಇಲ್ಲ.  ಭೂಮಿಯ ನಾಲ್ಕಾರು ಸಾವಿರ ಮೀಟರ್ ಆಳದಲ್ಲಿನ ಪರಿಸ್ಥಿತಿ ಹೇಗಿದೆ ಎನ್ನುವುದನ್ನು ಯಾವ ಉಪಗ್ರಹವೂ ನಮಗೆ ಬಿಡಿಸಿಕೊಟ್ಟಿಲ್ಲ. ಅದು ಸಾಧ್ಯವೂ ಇಲ್ಲ. ಅದೇನಿದ್ದರೂ ತರಂಗಗಳ ಮೂಲಕ ನೀಡುವ ಕಲರ್ ಕೋಡಿಂಗ್ ಇಟ್ಟುಕೊಂಡು ನಾವು ವಿಶ್ಲೇಷಿಸುವ ಮೂಲಕ ಭೂಮಿಯ ಇಂತಿಂಥ ಭಾಗದಲ್ಲಿ ಹೀಗೆ ಇದೆ ಎಂಬ ಲೆಕ್ಕಾಚಾರಕ್ಕೆ ಬಂದಿದ್ದೇವೆ. (ಇವೆಲ್ಲ ಪಕ್ಕಾ ಮಾಹಿತಿ ಸಿಕ್ಕುವುದಾಗಿದ್ದರೆ ಕೊಳವೆ ಬಾವಿಗೆ ಬಿದ್ದ ಮಗುವನ್ನು ಪಾರು ಮಾಡಲು ಇಂತಲ್ಲಿ ಹೀಗೇ ಗುಂಡಿ ಹೊಡೆಯಬೇಕೆನ್ನುವುದು ಸುಲಭದ ಲೆಕ್ಕಚಾರವಾಗುತ್ತಿತ್ತು. ಆದರೆ ಈವರೆಗೂ ಕಲ್ಲು ಅಡ್ಡ ಬಂದಾಗಲೇ ಗೊತ್ತಾಗುತ್ತೆ ನಮ್ಮ ಅಂದಾಜು ತಪ್ಪಾಗಿದ್ದು) ಆದರೆ ನೀರಿನ ವ್ಯವಸ್ಥೆ ಹಾಗಿಲ್ಲ. ಹಾಗಿರೋದಕ್ಕೆ ಸಾಧ್ಯವೂ ಇಲ್ಲ. ಯಾವ ತಂತ್ರಜ್ಞಾನದ ಮೂಲಕವೂ ಭೂಮಿಯ ಆಳದ ಚಹರೆ ಮತ್ತು ಸಾಧ್ಯತೆಯನ್ನು ನಿಖರವಾಗಿ ನಿರ್ಧರಿಸಲು ಸಾಧ್ಯವೇ ಇಲ್ಲ. ಅಷ್ಟಕ್ಕೂ ಭೂಮಿಯ ಆಳದಲ್ಲಿ ನೀರಿನ ಸಂಗ್ರಹ ಆಗುತ್ತಾದರೂ ಹೇಗೆ..? ಎರಡು ವಿಧದಲ್ಲಿ. ಅದರಲ್ಲಿ ಮೊದಲನೆಯದು ಮೇಲ್ಮೈ ಮೂಲಕ.
ಮೂಲತಃ ಭೂಮಿಯ ಸಂದಿಯಲ್ಲಿ ಒಳಗಿಳಿಯುವ ನೀರು, ನಿಸರ್ಗದತ್ತವಾಗಿ ಸಾವಿರಾರು ಕೋವೆಗಳಿಂದ ಸೋಸಿ, ಬಸಿದುಕೊಂಡು ಸೆಲೆಯಾಗಿ ಒಂದಕ್ಕೊಂದು ಸೇರುತ್ತಾ ಮತ್ತೂ ಇಳಿಮುಖವಾಗಿ ಗುರುತ್ವದತ್ತ ಒಸರುತ್ತಾ, ಗಟ್ಟಿಯಾದ ನೆಲದ ಪದರು ದೊರಕಿದರೆ ಅಲ್ಲೇ ಸಂಗ್ರಹವಾಗಿ, ನಿಂತಲ್ಲೆ ತನ್ನ ಕೆಳಗಿನ ನೆಲವನ್ನು ಕ್ರಮೇಣ ತೋಯಿಸಿ, ಒದ್ದೆಯಾಗಿಸಿ ಮತ್ತೂ ಕೆಳಗಿಳಿಯಲು ದಾರಿ ಮಾಡಿಕೊಂಡು, ಒಂದು ಸಂದಿನ ಬಿರುಕನ್ನು ಸೇರಿ, ಭೂಮಿಯ ಮೇಲ್ಪದರದ ಅಪ್ಪಟ ಬುಡ ದಾಟಿ ಇನ್ನೇನು ಮುಂದಕ್ಕೆ ಹೋಗುವುದು ಸಾಧ್ಯವೇ ಇಲ್ಲ ಎನ್ನುವಂತೆ ಶಿಲಾ ಪದರ ಅಡ್ಡ ಬಂದಾಗ ಅಲ್ಲೇ ಒಟ್ಟಾಗಿ ಸಂಗ್ರಹದ ಮಟ್ಟ ಏರಿ, ಹಾಗೆ ಏರಿದಾಗ ಉಕ್ಕಿ ಹರಿದ ಭಾಗದಲ್ಲಿಂದ ಇನ್ನೂಂದು ಸ್ಥಳಕ್ಕೆ ದೌಡಾಯಿಸುತ್ತಾ, ಆಚೀಚೆಗೂ ನೀರಿನ ಸಂಗ್ರಹ ಹೆಚ್ಚಿಸುತ್ತಾ ನಿಂತುಬಿಡುವ ನೀರೇ ನಮಗೆ ಪೂರೈಕೆಯಾಗುವ ನೆಲ ಜಲವಲಯ. ಇದಕ್ಕೆ ಪ್ರತಿ ಮಳೆಗಾಲದಲ್ಲಿ, ನೆರೆ ಬಂದ ಸಂದರ್ಭಗಳಲ್ಲಿ ಈ ರೀತಿಯ ಆವರ್ತನದಲ್ಲಿ ಭರ್ತಿಯಾಗುತ್ತಲೇ ಇರುತ್ತದೆ.
ಎರಡನೆಯದ್ದು ಲಕ್ಷಾಂತರ ವರ್ಷಗಳ ಹಿಂದೆ ಭೂಮಿ, ಹಿಮಗಲ್ಲುಗಳ ಉಂಡೆಯಾಗಿ ಸುತ್ತುತ್ತಿದ್ದಾಗ, ಕಾಲಗರ್ಭದೊಂದಿಗೆ ಭೂಗರ್ಭದಲ್ಲಿ ಸೇರಿಕೊಂಡು ಅದರ ಜೌಗು ಅಲ್ಲಿನ ಹೀರು ಶಿಲಾ ಪದರ, ಒಸರು ಪ್ರದೇಶ ಸೇರಿ ಗಾಳಿಯಾಡದೆ ಉಳಿದು ಹೋಗಿ ಒತ್ತಡಕ್ಕೊಳಗಾಗಿ ಸ್ಪಂಜಿನ ಅಥವಾ ಮಂಜಿನ ರೂಪದಲ್ಲಿ ಶಿಲಾ ಪದರದಲ್ಲಿ ಸಂಚಯವಾಗಿ ಶೇಖರವಾಗಿದ್ದು ಇದೆ. ಇದನ್ನು ಕಣ ಶಿಲೆ ಅಥವಾ ಉಪ್ಪುಗಲ್ಲು ಎನ್ನುತ್ತೇವಲ್ಲ ಅವು ಹಿಡಿದುಕೊಂಡಿರುತ್ತವೆ. ಇದರಲ್ಲಿ ಅಗಾಧ ಪ್ರಮಾಣದ ನೀರಿನ ಸಂಗ್ರಹ ಇದ್ದಿದ್ದು, ಈಗಲೂ ಇದೆ. ಆದರೆ ಅದು ನಮ್ಮ ಕೈಗೆಟುಕುವ ಅಂದಾಜಿನ ಹೊರಗಿದ್ದುದರಿಂದಲೇ ನಾವದನ್ನು ‘ಪಾತಾಳ ಗಂಗೆ’ ಎನ್ನುವುದು. ವೈಜ್ಞಾನಿಕವಾಗಿ ‘ಪೆಲಿಯೋ ವಾಟರ್’ ಎಂದು ಹೆಸರು. ಅದರೆ ಅದು ಎಲ್ಲಾ ಕಡೆಯಲ್ಲೂ ಇಲ್ಲ. ತೀರ ನೀರಿನ ಒರತೆಯ ಜತೆ ಎಲ್ಲಿ ಮರಳು ಶಿಲೆಗಳ ಫಲಕಗಳಿವೆಯೋ ಅಲ್ಲಿ ಮಾತ್ರ ಈ ನೀರಿನ ಖಜಾನೆ ಭದ್ರವಾಗಿ ಇದೆ. ಹಾಗೆ ಇದ್ದುದರಿಂದಲೇ ನಮ್ಮ ಮೇಲ್ಮೈನ ನೆಲ ಜಲವಲಯ ಭದ್ರವಾಗಿ ಉಳಿದುಕೊಂಡಿದ್ದು. ಆದರೆ ದಕ್ಷಿಣ ಭಾರತ ಒರಟು ಶಿಲಾ ಫಲಕಗಳ ಭೂಮಿ. ಇಲ್ಲಿ ಏನಿದ್ದರೂ ನೆಲ ಜಲವಲಯವೇ ನಮಗೆ ಜೀವಾಳ. ಪಾತಾಳ ಗಂಗೆಯ ಖಜಾನೆ ಇಲ್ಲಿ ನೆಪ ಮಾತ್ರಕ್ಕೆ.
ನಿಸರ್ಗದ ಇಂಥ ಸಂಕೀರ್ಣ ವ್ಯವಸ್ಥೆಯಿಂದಾಗೇ ನಾವು ಇಲ್ಲಿವರೆಗೂ ಸಿಹಿ ನೀರಿನ ಕೊರತೆ ಅಷ್ಟಾಗಿ ಅನುಭವಿಸಿಲ್ಲ. ಅದರೆ ಕ್ರಮೇಣ ಮೇಲ್ಮೈ ವಲಯಕ್ಕೆ ಆಧುನೀಕರಣದ ಕಾಂಕ್ರಿಟ್ ಹೊಡೆತ ಕೊಟ್ಟು ನೀರು ಒಸರುವ ಸೆಲೆಯ ಸಂದುಗಳನ್ನು ಹಾಳುಗೆಡವುತ್ತಾ ಬಂದೆವಲ್ಲ ಆ ಕಾರಣಕ್ಕೆ ಒಕ್ಕರಿಸಿದ್ದೇ ಅಗಾಧ ಬರ ಮತ್ತು ಸಿಹಿನೀರ ಕೊರತೆ.
ಈಗ ಪಾತಾಳಕ್ಕೆ ಡ್ರಿಲ್ಲು ಹೊಡೆದು ಆ ಶಿಲಾಗರ್ಭಕ್ಕೆ ತೂತು ಕೊರೆದು ಅಲ್ಲಿಂದ ನೀರನ್ನು ಮೇಲಕ್ಕೆಬ್ಬಿಸಿ ತಂದು (ಗಂಟೆಗೆ ಒಂದು ಲಕ್ಷ ಲೀ. ಬರುತ್ತದಂತೆ!) ಅದನ್ನು ಕರ್ನಾಟಕಕ್ಕೆ ಹರಿಸುವ ಯೋಜನೆಗೆ ಸರಕಾರ ಸಿದ್ಧವಾಗಿ ನಿಂತಿದೆ. ವಿಚಿತ್ರವೆಂದರೆ ಹಾಗೆ ಪಾತಾಳದಿಂದ ನೀರು ಎಬ್ಬಿಸಿದ್ದೇ ಅದರೆ ಮುಂದೊಮ್ಮೆ ನೆಲ ಸಡಿಲಗೊಂಡು, ಶಿಥಿಲಾವಸ್ಥೆಯಿಂದಾಗಿ ಸಣ್ಣ ಅಲುಗಾಟಕ್ಕೂ ಕುಸಿದು, ಪೂರ್ತಿ ಶಿಲಾ ರಚನೆಯ ವ್ಯವಸ್ಥೆಯನ್ನೇ ಹದಗೆಡಿಸುವುದಲ್ಲದೆ, ಸಣ್ಣ ಭೂಕಂಪಕ್ಕೂ ಅನಾಹುತಕಾರಿ ಭೂಕುಸಿತವಾಗಿ ಇರುವ ಮೂಲ ಭೂ ಬಂಧದ ರಚನೆಯನ್ನೇ ಹಾಳು ಮಾಡುವ ಈ ಪದ್ಧತಿಯ ಬಗ್ಗೆಯೇ ವೈಜ್ಞಾನಿಕವಾಗಿ ತಕರಾರಿದೆ. ಕಾರಣ, ಭೂಗರ್ಭದಲ್ಲಿರುವುದು ಸಿಹಿ ನೀರೇ ಎನ್ನುವುದಕ್ಕೆ ಯಾವುದೇ ಪುರಾವೆ, ರಿಪೋರ್ಟುಗಳನ್ನು ಯಾರೂ ಸಮೀಕ್ಷೆ ಮಾಡಿ ನೀಡಿಲ್ಲ. ಅಕಸ್ಮಾತ್ ಸಿಹಿ ನೀರೇ ಆಗಿದ್ದರೂ ಸಾವಿರಾರು ಮೀ. ಆಳದಲ್ಲಿ ಅದು ಸಹಜ ಶಿತಕಾರಕ ಸ್ಥಿತಿಯಲ್ಲಿರುವುದು ಅಸಾಧ್ಯ. ಹೊರ ವಾಯುವಲಯದ ಸಂಪರ್ಕವಿಲ್ಲದೆ ಇರುವುದರಿಂದ ಒಮ್ಮೆಲೆ ತೆರೆದುಕೊಂಡಾಗ ಯಾವ ರೀತಿಯ ರಾಸಾಯನಿಕ ಬದಲಾವಣೆಗೆ ಈಡಾಗುತ್ತದೆ ಎನ್ನುವುದರ ಬಗ್ಗೆಯೂ ಮಾಹಿತಿ ಇಲ್ಲ. ಅದನ್ನು ಎಬ್ಬಿಸಿ ಸಹಜ ಸ್ಥಿತಿಗೆ ತರುವುದಕ್ಕೆ ಬೇಕಾದ ವಿಸ್ತೃತ ನೀಲನಕ್ಷೆ ನಮ್ಮೆದುರಿಗಿಲ್ಲ. ಇನ್ನು ಅದು ಸಹಜ ಶುದ್ಧ ನೀರಾಗಿರುತ್ತದೆ ಎನ್ನಲು ಅಸಾಧ್ಯ. ಕಾರಣ ಸಿಹಿ ನೀರಿಗೆ ಹೊರಾವರಣದ ಆಮ್ಲಜನಕದ ಸಂಪರ್ಕ ನಿರಂತರವಾಗಿ ಬೇಕಾಗುತ್ತದೆ.
ಇವೆಲ್ಲಾ ಸರಿ ಇದ್ದರೂ ಒಂದು ಬಾವಿಗೆ ಹತ್ತು ಕೋಟಿ ರು. ಸುರಿದು ನೀರು ಮೇಲೆತ್ತಿದರೂ ಎಷ್ಟು ಕಾಲ ಎತ್ತಬಲ್ಲಿರಿ? ಹಾಗೆ ಖಾಲಿಯಾಗುವ ನೀರಿಗೆ ಮರುಪೂರ್ಣ ಹೇಗೆ ಮಾಡುವುದು? ಹಾಗೆ ಖಾಲಿ ಮಾಡಿ ಮುಂದಿನ ಪೀಳಿಗೆಗೆ ಖಾಲಿ ಒಡಲನ್ನು ಬಿಡುವುದೇ? ಎಲ್ಲದಕ್ಕಿಂತ ದೊಡ್ಡ ಲೋಪವೆಂದರೆ ಹಾಗೆ ಪಾತಳಕ್ಕೆ ಗರಡಿ ಹಾಕಲು ದಕ್ಷಿಣ ಭಾರತದ ನೆಲ ಸೂಕ್ತ ಎಂದು ಸಲಹೆ ಕೊಟ್ಟಿದ್ಯಾರು? ಯಾವ ಉಪಗ್ರಹದ ನೆರವಿನಿಂದ ಯೋಜನೆಯ ನಕ್ಷೆ ತಯಾರಿಸಲಾಗಿದೆ? ಅಕಸ್ಮಾತ್ ಡ್ರಿಲ್ಲು ಕೊರೆದದ್ದೇ ಆದರೆ ಯಾವ ರೀತಿಯ ನೀರು ಬರಬಲ್ಲದು? ಆಯಾ ಸ್ಥಳದಲ್ಲಿ ಇರುವ ನೀರಿನಲ್ಲಿ ಇರುವ ಅಂಶಗಳು ಯಾವುದು? ಹಾಗೆ ಸಾವಿರಾರು ಮೀ. ಆಳವನ್ನು ಹೊರ ಮೈ ವಾಯು ವಲಯಕ್ಕೆ ತೆರೆದುಕೊಡುತ್ತಿದ್ದಂತೆ ಆಗಬಹುದಾದ ರಾಸಾಯನಿಕ ಪಲ್ಲಟಗಳ ಮಾಹಿತಿ ಇದೆಯಾ?
ನೀರಿನೊಂದಿಗೆ ಸೇರಿಕೊಂಡು ಬರುವ ಫ್ಲೋರೈಡ್, ಸಿಲಿಕಾರ್ಡ್, ಕ್ಲೋರೈಡ್ ರಾಸಾಯನಿಕಗಳು ಮತ್ತು ಉಷ್ಣವನ್ನು ಸಹಜ ಸ್ಥಿತಿಗೆ ತರುವ ವಿಧಾನಗಳೇನು?ಎಲ್ಲಿ ಶಿಲಾ ಪದರುಗಳು ಮತ್ತು ಫಲಕಗಳ ಕೊರತೆಯಾಗಿ ಬರೀ ಬಂಡೆಯ ಅದಿರಿನ ತಳಹದಿ ಹೊಂದಿರುತ್ತವೋ ಅಲ್ಲೆಲ್ಲಾ ಶಿಲಾಮೇಲ್ಮೈ ಪದರದೊಂದಿಗೆ ರಾಸಾಯನಿಕ ಪರಿವರ್ತನೆಗೊಳಪಟ್ಟು ಅದು ಕಲುಷಿತ ನೀರಾಗೇ ಬದಲಾಗಿರುತ್ತದೆ. ಅಕಸ್ಮಾತ್ ಈ ನೀರನ್ನು ಎತ್ತಿ ತಂದರೂ ಅದಕ್ಕೆ ತಗುಲುವ ವೆಚ್ಚ ಒಂದು ಬಾವಿಗೆ ಸುಮಾರು ಹತ್ತು ಕೋಟಿಯಷ್ಟು.  ಹಾಗೆ ಪ್ರತಿ ಗಂಟೆಗೆ ಒಂದು ಲಕ್ಷ ಲೀ. ನೀರು ಬರುತ್ತಿದ್ದಂತೆ ಅದನ್ನು ಸಹಜ ಸ್ಥಿತಿಗೆ ತರಲು ಆಗುವ ಕಾರ್ಯವಾಹಿ ವೆಚ್ಚ, ಅದಕ್ಕೆ ಬೇಕಾಗುವ ಕರೆಂಟು, ಮಾನವ ಶಕ್ತಿ ಹಾಗೂ ಇತರ ಶಕ್ತಿಯ ಮೂಲಗಳ ವೆಚ್ಚ ಇನ್ನೂ ಐದಾರು ಕೋಟಿಯಾದರೂ ಆಗಲಿಕ್ಕಿಲ್ಲವೇ? ಅಷ್ಟೆಲ್ಲಾ ಆದ ಮೇಲೂ ಅಲ್ಲಿಂದ ಎಷ್ಟು ಕಾಲ ನೀರು ಎತ್ತಬಹುದೆನ್ನುವ ಶೇ.1 ರಷ್ಟು ಲೆಕ್ಕಾಚಾರ ಕೂಡಾ ಕಂಪನಿ ಅಥವಾ ಇಲಾಖೆಯ ಬಳಿಯಿಲ್ಲ!
ಅದರ ಬದಲಿಗೆ ಒಂದು ಲಕ್ಷ ಲೀಟರ್ ನೀರು ಇಂಗಿಸುವ ಸಾಮರ್ಥ್ಯದ ಇಂಗು ಗುಂಡಿಗೆ ಒಂದೇ ಲಕ್ಷ ರು. ಖರ್ಚು ಮಾಡಿದಲ್ಲಿ ಪ್ರತಿ ಗುಂಡಿಯಿಂದಾಗಿ ಅದರ ಮೂರು ಕಿ.ಮೀ. ವ್ಯಾಪ್ತಿಯೊಳಗಿನ ಜಲಮೂಲಗಳು ಪುನಃ ಜೀವ ಪಡೆದುಕೊಳ್ಳುತ್ತವೆ. ಅಲ್ಲದೆ ನೆಲಜಲ ವಲಯ ಸಮೃದ್ಧವಾಗುತ್ತದೆ. ಸರಿಯಾಗಿ ಇಂಗು ಗುಂಡಿ ಮತ್ತು ಮಳೆ ಕೊಯ್ಲು ಮಾಡಿದ್ದೇ ಆದರೆ ಐದೇ ವರ್ಷಗಳಲ್ಲಿ ಶೇ. 50ರಷ್ಟು ಸಿಹಿ ನೀರ ಅಂತರ್ಜಲ ಪ್ರಮಾಣ ಏರಿಸಬಹುದು. ಇದಕ್ಕೆ ತಗುಲುವ ವೆಚ್ಚ ಶೇ.1ಮಾತ್ರ. ಇನ್ನು ಈ ಯೋಜನೆ ಕೈಗೆತ್ತಿಕೊಳ್ಳುತ್ತಿರುವ ‘ವಾಟರ್ ಕ್ವೆಸ್ಟ್’ ಕಂಪನಿ ಬಳಿ ಒಂದೇ ಒಂದು ವೈಜ್ಞಾನಿಕ ಮಾಹಿತಿ ಇಲ್ಲ. ತನ್ನ ವೆಬ್‌ಸೈಟಿನಲ್ಲಿ ಶಾಲೆ ಹುಡುಗರು ಕಲರ್ ಹೈಲೈಟರ್‌ನಿಂದ ಮಾರ್ಕ್ ಮಾಡಿರುವ ನಾಲ್ಕಾರು ನಕಾಶೆಗಳನ್ನು ಸೇರಿಸಿಟ್ಟಿದೆ. ನಾಲ್ಕು ಆಳಕೊಳವೆ ಬಾವಿ ಹೊಡೆಯುವ ಮಶಿನ್ ಚಿತ್ರ ಬಿಟ್ಟರೆ ತಾನು ಹೇಗೆ, ಯಾವ ಆಧಾರದ ಮೇಲೆ ಇಲ್ಲಿ ನೀರಿನ ಅಂತರಾಳದ ಬಗ್ಗೆ ಖಾತರಿ ಕೊಡುತ್ತಿದ್ದೇನೆ ಎನ್ನುವ ಬಗ್ಗೆ ಒಂದಕ್ಷರದ ಮಾಹಿತಿಯೂ ಇಲ್ಲ. ಅವರ ಕಾರ್ಯ ತಂತ್ರದ ಬಗ್ಗೆಯೂ ಖಚಿತತೆ ಇಲ್ಲ. ಅವರ ವಿಶ್ವಾಸವೆಂದರೆ ಎರಡ್ಮೂರು ಸಾವಿರ ಅಡಿ ನೆಲಕ್ಕೆ ಡ್ರಿಲ್ಲು ಹೊಡೆದು ಭೂಮಿಗೆ ತೂತು ಕೊರೆದದ್ದೇ ಆದರೆ ಎಲ್ಲಿದ್ದರೂ ನೀರು ಬಂದೇ ಬರುತ್ತದೆ. ಅದಕ್ಕೆ ಹೆಚ್ಚಿನ ವೈಜ್ಞಾನಿಕ ವಿಶ್ಲೇಷಣೆ ಬೇಕಿಲ್ಲ ಎಂಬುದು. ಆದರೆ ನೀರು ಇಲ್ಲೇ ಇಷ್ಟೇ ಇದೆ ಎನ್ನುವುದು ಮತ್ತು ಅಲ್ಲಿರುವ ನೀರನ್ನು ತೆಗೆದಾದ ಮೇಲೆ ಭೂಮಿಯೊಳಗೆ ಸ್ವಯಂ ಮರುಪೂರಣ ವ್ಯವಸ್ಥೆ ಇದೆ ಎನ್ನುವ ಬಗ್ಗೆ ಕಂಪನಿ ಕರಾರುವಕ್ಕಾಗಿ ಕಿವಿಗೆ ಗೊಂಡೆ ಹೂವಿಡುತ್ತಿದೆ. ನೆನಪಿರಲಿ ಸಮುದ್ರದ ನೀರು ಸಿಹಿನೀರಾಗಿ ಪರಿವರ್ತನೆಯಾಗಿ ಭೂಮ್ಯಾಂತರಾಳ ಸೇರುವ ಪ್ರಕ್ರಿಯೆಯೇ ಇಲ್ಲ.
ಇಂಡಿ, ಆಲಂದ ಚಿಕ್ಕನಾಯಕನಹಳ್ಳಿ, ಶಿಡ್ಲಘಟ್ಟ, ಚಳ್ಳಕೆರೆ, ಆನೇಕಲ್, ಮಹಾಲಿಂಗಪುರ, ಅಣ್ಣಿಗೇರಿಯಲ್ಲಿ ಇಂಥ ಯೋಜನೆಯನ್ನು ಪ್ರಾಯೋಗಿಕವಾಗಿ ಪ್ರಸ್ತಾಪಿಸಿರುವ ನೀರಾವರಿ ಇಲಾಖೆ ಪ್ರತಿ ದಿನ ಇಲ್ಲಿಂದ ಸರಾಸರಿ 100 ದಶ ಲಕ್ಷ ಲೀ. ನೀರು ಮೇಲೆತ್ತುವ ಪ್ರಸ್ತಾವನೆಗೆ ಅನುಮೋದನೆ ನೀಡುತ್ತಿದೆ. ಆದರೆ ಇಲ್ಲಿನ ಗಂಟೆಗೆ ಸುಮಾರು 100 ದ.ಲ. ಕ್ಯೂಬಿಕ್ ಮೀ. ನೀರು ಹರಿವು ಭೂಮಿಯಾಳದಲ್ಲಿ ಸರಾಸರಿ 350 ಮೀ. ನಂತರ 600 ಮೀ. ವರೆಗೂ ಇದೆ ಎನ್ನುವುದನ್ನು ಯಾವ ಸಂಸ್ಥೆ ದೃಢಪಡಿಸಿದೆ? ಉತ್ತರ ಸೊನ್ನೆ. ಇದನ್ನೂ ‘ವಾಟರ್ ಕ್ವೆಸ್ಟ್’ ಸಂಸ್ಥೆಯೇ ವರದಿ ನೀಡಿದ್ದು, ನೀರು ಬಾರದಿದ್ದರೆ ದುಡ್ಡು ಬೇಡ ಎನ್ನುವ ಆಕರ್ಷಕ ಆಫರ್ ಕೊಟ್ಟಿಿದೆ! ಆದರೆ ಅಷ್ಟು ಆಳಕ್ಕೆ ಬೋರ್ ಇಳಿಸಿದರೆ ನೀರು ಬಂದೇ ಬರುತ್ತದೆ. ಇದಕ್ಕೆ ದೊಡ್ಡ ಲೆಕ್ಕಾಚಾರವೇನೂ ಬೇಕಿಲ್ಲ. ಅದನ್ನು ಶುದ್ಧೀಕರಿಸಲು ಇದರ ಎರಡು ಪಟ್ಟು ದುಡ್ಡು ಪೀಕುವ ಸಂಸ್ಥೆ ಆ ವಿಶ್ಲೇಷಣೆಯನ್ನು ಇಲ್ಲಿ ಮಾಡಿಯೇ ಇಲ್ಲ. ಅಕಸ್ಮಾತ್ ನೀರು ರಾಸಾಯನಿಕಮಿಶ್ರವಾಗಿದ್ದರೆ ಅದನ್ನು ಶುದ್ಧೀಕರಿಸಲೇಬೇಕಲ್ಲ ಆಗ? ಸಮುದ್ರದ ನೀರು ಅಲ್ಲಿಂದ ಇಂಗಿ ಸಿಹಿ ನೀರಾಗಿ ಪರಿವರ್ತನೆಯಾಗಿ ಇಲ್ಲೆಲ್ಲ ಕೋಟ್ಯಂತರ ಲೀಟರ್‌ಗಟ್ಟಲೆ ಸಂಗ್ರಹವಾಗಿದೆ ಎನ್ನುವ ಕತೆ ಕೇಳಲಷ್ಟೇ ಚೆಂದ. ಅಂಥ ನೈಸರ್ಗಿಕ ಪ್ರಕ್ರಿಯೆ ಅಸಾಧ್ಯ ಎನ್ನುವುದನ್ನು ವಿಜ್ಞಾನದ ಸೆಕೆಂಡರಿ ಹುಡುಗನೂ ಹೇಳಬಲ್ಲ. ಹಾಗಿದ್ದಾಗ ಸ್ವಯಂ ಮರುಪೂರಣ ಎನ್ನುವ ಕತೆ ಹಾಗೂ ನೀರು ಮೇಲೆತ್ತುವ ಲೆಕ್ಕಾಚಾರ ನೋಡಿದರೆ ಬರಲಿರುವ ದಿನಗಳಲ್ಲಿ ಕರ್ನಾಟಕವನ್ನು ಸ್ಮಶಾನವನ್ನಾಗಿಸುವ ಹುನ್ನಾರದ ಹೊರತಾಗಿ ಬೇರೆ ಒಂದೇ ಒಂದು ಧನಾತ್ಮಕ ಅಂಶವೂ ಅದರಲ್ಲಿಲ್ಲ.
ಸಂತೋಷ ಕುಮಾರ ಮೆಹೆಂದಳೆ

No comments:

Post a Comment