Saturday, May 6, 2017


ಅವಳ ಕನಸು ಕಮರುವ ಮೊದಲು...  


(ಅವಳೊಂದು ಭಾವಗೀತೆಯಾ..?ಅವಳೊಂದು ಕವಿತೆಯಾ...? ಯಾರಿಗೆ ಗೊತ್ತು..? ಸರಿಯಾಗಿ ಓದಿಕೊಂಡರೆ ದೊಡ್ಡ ಕಾವ್ಯವೇ ಆದಾಳು. ಆದರೆ ಎಂಜಲು ಹಚ್ಚದೆ ಪುಟ ತಿರುವಬಲ್ಲ ಹಿಕಮತ್ತು ಅವನಿಗೆ ಗೊತ್ತಿರಬೇಕಿತ್ತು. ಪ್ರತಿ ಹುಡುಗಿಯ ಕನಸಿಗೊಂದು ತಿರುವು ಸಿಗುವುದೇ ಈ ಹಂತದಲ್ಲಿ... )
                 
"..ಮದುವೆ ಅಂತಾಗಿಬಿಟ್ಟರೆ ಹುಡುಗಿಯರೆಲ್ಲಾ ಸುಖವಾಗೇ ಇರ್ತಾರೆ ಅಂತೀಯಾ..?"
ಸರಕ್ಕನೆ ತೀರ ಉತ್ತರಿಸಲಾಗದ ಪ್ರಶ್ನೆ ಕೇಳಿಬಿಟ್ಟಿದ್ದಳು ಶಾಂತಿ. ನಾನು ಸುಮ್ಮನೆ ಶಬ್ದಗಳನ್ನು ತಡುವಿಕೊಂಡಿದ್ದೆ. ಅಸಲಿಗೆ ಹಾಗೆ ಸುಖ ಎನ್ನುವುದನ್ನು ಮತ್ತು ಅದಕ್ಕೊಂದು ಮಾನದಂಡವನ್ನು ಯಾರೂ ರೂಪಿಸಿಲ್ಲವಾದರೂ ಒಂದು ಖಚಿತತೆಯ ಹಾದಿಯಲ್ಲಿ, ಬದುಕು ಹೂವಿನ ಹಾಸಿಗೆ ಎಂದುಕೊಳ್ಳುವುದಕ್ಕೆ ಎಲ್ಲರೂ ಅವರವರ ಭಾವಕ್ಕೆ ಪಕ್ಕಾಗೇ ಇರುತ್ತಾರೆ.
ಆದರೆ ಇಂತಹದ್ದೊಂದು ಮೂಲಭೂತ ಪ್ರಶ್ನೆಯನ್ನಿಟ್ಟುಕೊಂಡು ಉತ್ತರ ಹೇಳು ಎನ್ನುವಂತೆ ಮುಖ ನೋಡಿದ ಶಾಂತಿಗೆ ಎನೂ ಉತ್ತರಿಸದೆ ಸುಮ್ಮನೆ ಒಂದು ಪ್ಯಾಲಿ ನಗೆ ನಕ್ಕೆ. ಕಾರಣ ಎಂಥದ್ದೇ ಬುದ್ಧಿವಂತ ಎಂದುಕೊಂಡರೂ ಗಂಡಸು ಹೆಣ್ಣಿನ ಮನಸ್ಸಿಗೂ, ಆಕೆಯ ಒಳಾವರಣಕ್ಕೂ ಲಗ್ಗೆ ಇಕ್ಕಿದ್ದು ಕಡಿಮೆಯೇ. ಹಾಗಂತ ಎಲ್ಲಾ ಗಂಡಸಿನದೇ ತಪ್ಪಾ..? ಖಂಡಿತಾ ಅಲ್ಲ. ಅರಳಿಕೊಳ್ಳುವಷ್ಟಾದರೂ ಅರಳದಿದ್ದರೆ ಅದು ಮೊಗ್ಗಾಗೇ ಇರುತ್ತದೆ ಎನ್ನುವುದು ಹೇಗೆ ಸತ್ಯವೋ ಹಾಗೆ ತೆರೆದುಕೊಳ್ಳುವಷ್ಟಾದರೂ ಅವನೊಂದಿಗಿನ ಸಾಂಗತ್ಯಕ್ಕೆ ಬೀಳದಿದ್ದರೆ ಆಕೆ ಹೂವಾಗಲಾರಳು.
ಹೀಗೆ ಒಂದು ಸಾಮಾಜಿಕ ಚೌಕಟ್ಟಿನಲ್ಲಿ ಚೆಂದದ ಸಂಸಾರಕ್ಕೂ ಅದಕ್ಕಿಂತಲೂ ಚೆಂದವಾಗಿ ಈ ಬದುಕು ಹುಟ್ಟಿದ ಮೇಲೆ ಆರಂಭಿಸಿಬಿಡಬೇಕೆನ್ನುವ, ಅನಾಮತ್ತಾಗಿ ಅನುಭವಿಸಿಬಿಡಬೇಕೆನ್ನುವ ಅಗಾಧ ಆಸೆಗೂ, ತನ್ನ ಏನೆಲ್ಲಾ ಕನಸಿನ, ಬದುಕಿನ ಫ್ಯಾಂಟಸ್ಸಿಗೆ ಆಕೆ ಕಾಯುವುದು ಒಬ್ಬ ರಾಜಕುಮಾರನಿಗಾಗಿ, ಬದುಕು ಏನೇ ಗ್ಯಾಜೆಟ್‍ಗಳ ಸಾಂಗತ್ಯದಲ್ಲಿ ವೃತ್ತದೊಳಗೆ ಸೇರಿಕೊಂಡಿದೆ ಎಂದುಕೊಂಡರೂ ಸುರುಳಿಯಲ್ಲಿನ ತಿರುವುಗಳಿಗೊಂದು ಮಹತ್ವ ಬರಲು ವೃತ್ತ ಬೇಕೆ ಬೇಕು ಎನ್ನುವಂತೆ ಆಕೆ ಅವನಿಗಾಗೇ ಕಾದಿರುತ್ತಾಳೆ. ತನ್ನ ಬದುಕು ಅವನೊಂದಿಗೆ ಆರಂಭ ಮತ್ತು ಅವನೊಂದಿಗೆ ಅಂತ್ಯ.. ಅಲ್ಲಿ ಏನೆಲ್ಲಾ ಖುಶಿ ಅಥವಾ ಭರಿಸಲಾಗದ ಹಳವಂಡಗಳಿದ್ದರೂ ಎಲ್ಲವೂ ತನ್ನದೇ. ತಾನು ಆ ಜಗತ್ತಿನ ಅಧೀಕೃತ ಸಾಮ್ರಾಜ್ಞಿ ಎಂದೇ ಹೆಗಲು ಒಡ್ಡಲು ತಯಾರಾಗಿ ನಿಂತಿರುತ್ತಾಳೆ. ಹೊರುತ್ತಾಳಾ ಇಲ್ವಾ ಅದು ಸೆಕಂಡರಿ.
ಕಾರಣ ಅಲ್ಲಿಯವರೆಗಿನ ಅನಿವಾರ್ಯದ ಓದು, ಬದುಕಿನ ಮೊದಲ ಹೀರೊ ಅಪ್ಪನ ಪ್ರೀತಿ, ಅಣ್ಣನ ರಕ್ಷಣೆಯ ಸಾಂಗತ್ಯ, ತಮ್ಮನ ಓಲೈಕೆ, ತಂಗಿಯ ಹುಸಿಮುನಿಸು, ಅಕ್ಕನ ಕದನ, ಯಾವಾಗಲೂ ಒಂದು ಕಣ್ಣಿಟ್ಟೆ ಕಾಯುವ ಅಮ್ಮನ ಬೇಹುಗಾರಿಕೆ, ದೂರದಿಂದಲೇ ಹೊಂಚುತ್ತಿದ ಊರ ಹುಡುಗರು, ಇನ್ಯಾವಾಗಲೋ ಮೈ ಕೈ ತಾಗಿಸುವ ಸಮೀಪದ ಸಂಬಂಧಿ, ಉಗುಳಲಾಗದ ಬಿಸಿ ತುಪ್ಪದಂತಹ ಕುಟುಂಬದ ಕ್ಲೋಸು ಮನುಶ್ಯ, ಒಲ್ಲೆನೆಂದರೂ ಬೀಡದ ಅವಳ್ಯಾರೋ ಸ್ನೇಹಿತೆ, ಯೌವ್ವನ ಹೊಸ ಬಿಸಿಗಳನ್ನೆಲ್ಲ ಕದ್ದು ತೋರಿಸುವ ಆಗೀಗ ಮಜ ಕೊಡುವ ಕೊಂಚವೇ ಸಿನಿಯರ್ ಹುಡುಗಿ, ಆಗೆಲ್ಲಾ ಇದ್ದಕ್ಕಿದ್ದಂತೆ ಎದೆಗೆ ಕೈಯಿಕ್ಕಿಬಿಡುವ ಆಕೆಯ ಚರ್ಯೆ ಮುಜುಗರ ತರಿಸಿದರೂ ಹೊಸ ವಿಷಯಗಳ ಬಗ್ಗೆ, ಅರಿಯದ ಖಾಸಗಿ ಜಗತ್ತಿನ ಅಗಾಧತೆಗಳನ್ನು ಆಕೆ ಎತ್ತಿಡುವಾಗ, ಕದ್ದಾದರೂ ಸರಿ ಆಕೆಯ ಒರಟು ಸಾಮೀಪ್ಯ ಬೇಕೆನ್ನಿಸಿರುತ್ತದೆ ಪ್ರತಿ ಹುಡುಗಿಗೆ.
ಇವೆಲ್ಲದರ ಆಚೆಗೆ ಇದೆಲ್ಲವನ್ನೂ ನಿವಾಳಿಸಿ ತನ್ನದೇ ಒಂದು ಪ್ರಪಂಚ, ಅಲ್ಲೊಂದು ಅಧ್ಬುತ ಕಚಗುಳಿ, ಅದಕ್ಕೂ ಮಿಗಿಲಾದ ತನ್ನೆಲ್ಲಾ ಕನಸಿಗೆ ನೀರೆರೆಯುವವನ ಸಾಂಗತ್ಯ, ಅಲ್ಲಿ ತನ್ನ ಮೇಲೆ ಕಣ್ಣಿರಲ್ಲ, ಇತರರ ಕಣ್ಣಿಂದ ಕಾಯಲು ಅವನಿರುತ್ತಾನೆ. ತನಗೆ ಏನು ಬಂದರೂ ಬಾರದಿದ್ದರೂ ಅವನು ಕಲಿಸುತ್ತಾನೆ. ತಾನು ಶೃದ್ಧೆಯಿಂದ ಒಪ್ಪವಾಗಿ ಒಂದು ಗೂಡಿನಲ್ಲಿ ಬದುಕು ಬಣ್ಣಗಳ ಸಂತೆಯಾಗಿಸಬೇಕೆನ್ನುವ ಸಮಯಕ್ಕೆ ಆಕೆ ಸರಹೊತ್ತಿನಲ್ಲೂ ಕನಸುಗಟ್ಟಿ ಕಾಯುತ್ತಿರುತ್ತಾಳೆ. ಆಕೆ ಬದುಕು ಮತ್ತು ಕ್ಷಣಗಳೂ ಆರಂಭವಾಗುತ್ತಿದ್ದುದೇ ಹಾಗೆ.
ಪ್ರಿಯ ದೊರೆ... ಒಂದು ಉಮ್ಮಾ...
ಪ್ರತಿ ಮಾತಿನ ಮೊದಲು ಮತ್ತು ಕೊನೆಗೊಮ್ಮೆ ಅಧರ ಮುದ್ರೆಯೊತ್ತದಿದ್ದರೆ ಬದುಕಿನ ಸವಿಯ ಕ್ಷಣಗಳು ಕಳೆದುಕೊಂಡಂತೆನೆ ಎನ್ನುವುದು ಆಕೆಯ ನಿಲುವು. ಅದಕ್ಕೆ. ಉಮ್ಮಾ... ಎಂದೇ ಆರಂಭಿಸು ಎಂದೇ ಆಕೆಯ ವಾದ. ಪ್ರೀತಿಯ ವಾದಕ್ಕೆ ಅಕೆಯ ಎದುರಿನಲ್ಲಿ ಅವನು ಗೆದ್ದಿದ್ದು ಕಮ್ಮಿ. ಅವನದೇನಿದ್ದರೂ ಆಕೆಗೆ ಸೋತು ಗೆಲ್ಲುವುದು.
ಎಲ್ಲಿದ್ದೀಯೋ.. ಯಾವ ಗುಡ್ಡ ಹತ್ತುತ್ತಿದ್ದಿಯೋ ಗೊತ್ತಿಲ್ಲ. ನಾನು ಮಾತ್ರ ಕಮ್ಮಗಿನ ಕಬ್ಬಿನ ಹಾಲನ್ನೂ ಅದರ ನೊರೆಯ ಜೊತೆಗೆ ತುಟಿಯೆಲ್ಲ ನೊರೆಯಾಗುವಂತೆ ಮಾಡಿಕೊಳ್ಳುತ್ತಾ ಸಂಜೆಯ ಚಳಿಗೆ ಮುದುರುತ್ತಾ, ಅದರೊಳಗೂ ಕಾಡಿ ನೆನಪಾಗುವ ನಿನ್ನ ತುಂಟತನಕ್ಕೆ ಸಣ್ಣಗೆ ಅಲ್ಲಲ್ಲೆ ಖಾಸಗಿಯಾಗಿ ಒದ್ದೆಯಾಗುತ್ತಾ ಕೂತಿದ್ದೇನೆ. ಜೀವನದಲ್ಲಿ ಮೊದಲನೇ ಬಾರಿಗೆ ಅರಿವಿಲ್ಲದೇ ನಿನ್ನ ಮಿಸ್ ಮಾಡ್ಕೊಳ್ಳೋಕೆ ಶುರುವಿಟ್ಟುಕೊಂಡೆನಲ್ಲ ‌ ..ನಿನ್ನ ಕರೆಗೆ ಯದ್ವಾ ತದ್ವಾ ಕಾಯೋಕೆ ಪ್ರಾರಂಭಿಸಿದೆನಲ್ಲ ..ಸಾವಿರಾರು ದ್ವಂಧ್ವಗಳ, ಭಯಗಳ ನಡುವೆಯಲ್ಲೂ ಇನ್ನಿಲ್ಲದ ದರ್ದಿನಲ್ಲಿ ಮೊದಲನೇ ಸಲ ನಿನ್ನ ಭೇಟಿ ಮಾಡಿದ್ನಲ್ಲ ಆವತ್ತೇ ಅನ್ನಿಸಿಬಿಡ್ತು ನಂಗೆ ಇವ್ನ ಕಟ್ಕೊಂಡು ಬದುಕು ಕಷ್ಟ ಅಂತ ...!
ಯಾಕೆ ಗೊತ್ತಾ ? ಯಾವತ್ತೂ ನಿನ್ನಿಂದ ತಪ್ಪಿಸಿಕೊಂಡು ಓಡದ ಹಾಗೆ ಅಡಿಕ್ಟು ಆಗಿದ್ದು ಆವತ್ತೇ ...ಪ್ರತೀ ದಿನ ಪ್ರತೀ ಕ್ಷಣ ನಿನಗಾಗಿ ಕಾಯುವ ಹಾಗೇ ಹಂಬಲಿಸುವ ಹಾಗೇ ಮಾಡಿದ್ದೀಯಲ್ಲ ...ಇವತ್ತಿಡೀ ನೆನಪಿಸಿಕೊಳ್ದೇ ತೆಪ್ಪಗಿರೋಣ ಅಂತ ಶಪತ ಹಾಕಿ ಆಣೆ ಮಾಡ್ಕೊಂಡು ದಿನವನ್ನು ಶುರುವಿಟ್ಟುಕೊಳ್ಳೋಣ ಅಂತ ಹೊರಟ್ರೂ ..ನಿನಗೊಂದು ತಣ್ಣನೆಯ ಮೆಸೇಜ್ ಮಾಡ್ದೇ ಇದ್ರೆ ಆ ದಿನವೇ ಮುಂದೆ ಹೋಗದೇ ಭೂಮಿನೇ ನಿಂತುಬಿಟ್ಟಿದ್ಯೇನೋ ಅನ್ನುವಷ್ಟು ಅಡಿಕ್ಷನ್ ಮನಸ್ಸಿಗೆ ಒಗ್ಗಿದೆ ಅಂತಾದ್ರೆ ನೀನೇ ಹೇಳು...ನಿನ್ನ ಕಟ್ಕೊಂಡು ಬದುಕು ಕಷ್ಟ ಆಗುತ್ತೆ ಅಂತ ನಂಗೆ ಅನ್ಸಿದ್ದು ತಪ್ಪಾ ಅಥವಾ ಬದುಕು ಅಂತಹ ಅಪರೂಪದ ಸುಖದ ಒತ್ತಡದಲ್ಲಿ ಬದುಕೊದಕ್ಕೆ ಅಂತನೆ ಹಿಂಗೆ ಮಾಡಿಕೊಂಡೆನಾ..? ನನ್ನ ಬದುಕಿನಲ್ಲಿ ನಡೆದು ಬಂದು ಕಾಲೂರಿ ನಿಂತವನು ನೀನು... ಬರುವದಕ್ಕೇ ಕಾಯುತ್ತಿರುವವಳಂತೆ ನಿನ್ನ ತೆಕ್ಕೆಗೆಳೆದುಕೊಂಡವಳು ನಾನು.. ಇಬ್ಬರಿಗೂ ಅದು ಅನಿರೀಕ್ಷಿತ..!
ಬೆಟ್ಟ ಹತ್ತುವಾಗ ಸಿಕ್ಕ ಪುಟ್ಟ ನವಿಲುಗರಿಯಂತೆ... ಒಂಟಿ ಸಂಜೆಯಲ್ಲೊಂದು ಕವಿತೆಯ ಸಾಲು ಹೊಳೆದಂತೆ ..ಯಾವತ್ತೋ ಕಳೆದು ಹೋದ ಬಾಲ್ಯದ ಗೆಳತಿಯ ಪತ್ರ ಸಿಕ್ಕಂತೆ ..ಆಮೇಲಿನದೆಲ್ಲ ವಿವರಣೆಗೆ ದಕ್ಕುವದಿಲ್ಲ ಬಿಡು.. ನೀನು ನನ್ನ ಕವಿತೆಗಳಲ್ಲಿ, ಬರೆದ ಸಾಲುಗಳಲ್ಲಿ, ಹಾಡುವ ಹಾಡುಗಳಲ್ಲಿ, ಅಲೆದ ದಾರಿಗಳಲ್ಲಿ, ಮಾಡುವ ಕೆಲಸಗಳಲ್ಲಿ, ಮಾಡಿಕೊಂಡ ಸಿಂಗಾರದಲ್ಲಿ, ಎಲ್ಲಿ ನೀನು ದಾಕಲಾಗಲಿಲ್ಲ ಹೇಳು..? ಕಾಲಿನ ಹೆಬ್ಬೆರಳ ತುದಿಯಿಂದ ಹಿಡಿದು ನೆತ್ತಿಯ ಮೇಲಿನ ಜೀವ ನಾಡಿಯ ತನಕ ...ನಿನ್ನ ಮುಂದೆ ಬೆತ್ತಲಾಗದೇ ಉಳಿದದ್ದೇನಿದೆ ..? ಎಲ್ಲೆಲ್ಲೋ ನನಗೆ ಗೊತ್ತಿಲ್ಲದಂತೆ ಹುಟ್ಟಿಕೊಳ್ಳುವ ಸುಖದ ಸಣ್ಣ ಗುಳ್ಳೆಗಳನ್ನೂ ಬಿಡದೆ ನೇವರಿಸಿ ಕಿಚ್ಚೆಬ್ಬಿಸುವ ನಿನ್ನ ಹುಚ್ಚೆಬ್ಬಿಸುವ ಸ್ಪರ್ಷಕ್ಕೆ ಕೋಣೆಯ ತಾಪವೇ ಏರುತ್ತದಲ್ಲ...?ಅದೇನಾ ಬದುಕಿನ ಅರಿಯದ ಸುಖದ ಗಮ್ಯ..? ನನಗೆ ಗೊತ್ತಿಲ್ಲ. ವಿವರಿಸಬೇಕಾದ ನೀನು ವೃತ್ತದಾಚೆಗೀಗೀಗ.
ಅದೆಲ್ಲ ಬಿಡು ಕೊಟ್ಟದ್ದು, ಪಡೆದದ್ದು, ಸುಖಕ್ಕೆ ಮೈಯೊಡ್ಡಿದ್ದು, ತೋಯ್ದು ಮುದ್ದೆಯಾದದ್ದು, ಹನಿದು ನೀರಾದದ್ದು, ಕರಗಿ ಕಳೆದು ಹೋದದ್ದು, ಸಾವಿರ ಮಾತಾಡಿದ್ದು,  ಆಡದೇ ಮನದಲ್ಲಿ ಉಳಿದು ಹೋದದ್ದು ಲಕ್ಷಾಂತರ ಮೆಸೇಜ್ ಕಳಿಸಿಕೊಂಡದ್ದು, ಇದೆಲ್ಲವೂ ಬರೀ ಕಡು ಕತ್ತಲೆಯ ಬೆತ್ತಲೆಯ ಮೋಹ ಅಂತ ಯಾರಾದ್ರೂ ಹೇಳಿದ್ರೆ ..ಅಥವಾ ನಮಗೇ ಇನ್ಯಾವತ್ತೋ ದುರ್ಬಲ ಕ್ಷಣದಲ್ಲಿ ಹಾಗನ್ನಿದ್ರೆ ಮರೆತು ಬಿಡಬಹುದು..ಆದ್ರೆ ನೀನು ಸಿಕ್ಕಾಗ ಅನುಭವಿಸಿದ ಬೆರಳಂಚಿನ ಪುಳಕ ...ಒಂಟಿ ಸಾಯಂಕಾಲದ ಹಿತ್ತಲಿನಲ್ಲಿ ನಿನ್ನದೇ ನೆನಪು ಮಾಡುತ್ತ ಕಳೆದು ಬಿಡುವ ಬೇಸರ...ಬದುಕು ಬೇಸರ ಅನ್ನಿಸಿದಾಗ ನೀನೊಬ್ಬನಿದ್ದೀಯಲ್ಲ ಆತ್ಮಬಂದು ಅಂತ ಅಂದುಕೊಂಡು ಹಗುರಾಗುವ ಆ ಕ್ಷಣ ..."
ಹೀಗೆ ಬದುಕಿನ ಬಗ್ಗೆ ಆಕೆಯ ಕನಸು,ಹುಟ್ಟಿಕೊಂಡ ಚಿಗುರು ಗರಿಕೆಗಳ ಒಡಲಲ್ಲಿ ಅಸೆಗಳ ಒರತೆ ಮೂಟೆ ಮೂಟೆ.  ಅವಳೊಂದು ಭಾವಗೀತೆಯಾ..? ಅವಳೊಂದು ಕವಿತೆಯಾ...? ಯಾರಿಗೆ ಗೊತ್ತು..? ಸರಿಯಾಗಿ ಓದಿಕೊಂಡರೆ ದೊಡ್ಡ ಕಾವ್ಯವೇ ಆದಾಳು. ಆದರೆ ಎಂಜಲು ಹಚ್ಚದೆ ಪುಟ ತಿರುವಬಲ್ಲ ಹಿಕಮತ್ತು ಅವನಿಗೆ ಗೊತ್ತಿರಬೇಕಿತ್ತು. ಶಾಂತಿಯ ಬದುಕು ಪುಟ ಮಗುಚಿದಂತೆಲ್ಲಾ ಬಣ್ಣಗಳ ಕದಡಿದ್ದು ನನಗೆ ಸ್ಪಷ್ಟವಾಗಿ ಕಂಡಿತ್ತು. ಬದುಕಿನ ಮೊದಲ ಪುಟಕ್ಕೆ ಕಾಲಿಟ್ಟಾಗ ಎಲ್ಲವೂ ಹೊಸ ಪಾನುಗಳೇ. ಆದರೆ ಗಂಡಸೆಂಬುವನು, ಗಂಡನಾದಾಗ ಪಾನುಗಳಲ್ಲಿ ಚಿತ್ಕಾಟು ಎದ್ದು ಕಾಣತೊಡಗುತ್ತದೆ. ಏನೇ ಸ್ನೇಹಿತನಂತಿದ್ದಾನೆ ಎಂದುಕೊಂಡರೂ ಸ್ನೇಹಿತೆಯೊಬ್ಬಳ ಕಾಲ್‍ಗೂ ಕೂಡಾ ಮನ ಬಿಚ್ಚಿಕೊಂಡು ಆಚೆ ಹೋಗಿ ಮಾತಾಡಬಲ್ಲ ಸಣ್ಣ ಸ್ವಾತಂತ್ರ್ಯ ಅರಿವಿಲ್ಲದೆ ಬಂಧಕ್ಕೊಳಗಾದಾಗಲೇ, ಆಕೆಯ ಕನಸಿನ ಲೊಕಕ್ಕೆ ಸೂಚಿಯ ಮೊನೆ ತಾಗಿದ್ದು ಗೊತ್ತಾಗೋದು. ವಿಚಿತ್ರವೆಂದರೆ ಪ್ರತಿ ಗಂಡಸೂ ತನ್ನವಳ ಎದುರು ಸಾಚಾ ಮತ್ತು ಹೀರೋ ಆಗೇ ಇರಬಯಸುತ್ತಾನೆ ಎನ್ನುವುದು ಆಕೆಗೆ ಗೊತ್ತಾಗುತ್ತಿದ್ದರೂ ಅದನ್ನಾಕೆ ನಂಬಿ ಬದುಕು ಕಟ್ಟಲು ಎದ್ದು ನಿಂತಿರುತ್ತಾಳೆ.
ಶಾಂತಿ ಇದರಲ್ಲಿ ಮೊದಲಲ್ಲ ಮತ್ತು ಕೊನೆಯೂ ಅಲ್ಲ. ನನ್ನ ಕಥಾನಕದ ಸಾವಿರಾರು ಕೊವೆಗಳಲ್ಲಿ ತಮ್ಮ ಬಿಸಿಯುಸಿರು ಬಿಟ್ಟು ನನ್ನ ಹೆಗಲಿಗೆ ಕತೆಯನ್ನೆಲ್ಲಾ ದಾಟಿಸಿ ನಿರುಮ್ಮಳ್ಳವಾಗಿ ಎದ್ದು ಹೋದ ತಾಯಂದಿರಿದ್ದಾರೆ, ಸಹೋದರಿಯರಿದ್ದಾರೆ, ಪುಟ್ಟ ಪುಟ್ಟ ಅಮ್ಮಂದಿರಿದ್ದಾರೆ, ಸಾಂಗತ್ಯವೇ ಇಲ್ಲದೆ ಮಕ್ಕಳು ಹಡೆದ ನತದೃಷ್ಟೆಯರಿದ್ದಾರೆ, ಒಪ್ಪತ್ತಿನ ಊಟಕ್ಕಾಗಿ ದೈಹಿಕವಾಗಿ ಬೆತ್ತಲಾಗಿ ನಿಂತು ಬಿಟ್ಟ ಜಿವಚ್ಛವಗಳಿದ್ದಾರೆ, ಭಾವನೆಗಳ ಬಿಕರಿಗಿಟ್ಟು ಹಲ್ಕಿರಿದು ನಿಲ್ಲುತ್ತಿರುವ ದೈನೆಸಿ ಚಿಕ್ಕಮ್ಮಂದಿರಿದ್ದಾರೆ, ಹೆಂಗೋ ಗಂಡ ಅಂತೊಬ್ಬನಿರಲಿ ಎಂದು ಗೊತ್ತಿದ್ದೂ ಹಳ್ಳಕ್ಕೆ ಬಿದ್ದು ಕಾಲಿಗೆ ಕಲ್ಲು ಕಟ್ಟಿಕೊಂಡ ಹೆಂಗಸರಿದ್ದಾರೆ. ಹೆಣ್ಣಿನ ಸಾಕಿದ್ದೇ ಗಂಡಸುತನ ಎಂದುಕೊಂಡ ಪುಂಗವರಿದ್ದಾರೆ ಅದಕ್ಕೂ ಮಿಗಿಲಾಗಿ ತನಗೆ ಸಂಬಳ ಎಷ್ಟು ಏನು ಮಾಡುತ್ತಿದ್ದೇನೆ ಎನ್ನುವುದನ್ನೂ ತಿಳಿಪಡಿಸದ ಕುರಿಯಂತೆ ಹೆಂಡತಿಯನ್ನು ಸಾಕುತ್ತಿರುವವರಿದ್ದಾರೆ.
ಇವೆಲ್ಲದರ ಮಧ್ಯೆ ಬದುಕನ್ನು ನೇರ್ಪುಗೊಳಿಸುವ ಆಕೆಯ ಬಿಸಿಯುಸಿರು, ಹೇಳಿಕೊಂಡು ಹಗುರವಾದೇನಾ ಎನ್ನುವ ಹೃದಯದ ಪಿಸುಮಾತಿಗೆ ದನಿಯಾಗುವ ಮೂಲಕ ಕೊಂಚವಾದರೂ ಸಾಂತ್ವನ ನೀಡಿದ್ದೇ ಆದರೆ ಅಷ್ಟರ ಮಟ್ಟಿಗೆ ನಾನು ಧನ್ಯ. ಅಂತಹ ಹಲವು ಹರವುಗಳ ದನಿಗಳ ಭಾವಜಾಲ ನಿಮ್ಮೆದುರಿಗೆ ಇನ್ನು ಮೇಲೆ ಪ್ರತಿವಾರ
ಪಿಸುಮಾತಿನ ಪಾರಿಜಾತ...

No comments:

Post a Comment