Tuesday, May 3, 2016

ಆ ಕೋಣೆಯನ್ನಾಕೆ ಬಿಟ್ಟೂ ಬಿಡದೆ ಕಾಯುತ್ತಿದ್ದಳು...!
(ನಾನು ಅಲ್ಲೇ ಇದ್ದರೆ ಸಮಸ್ಯೆ ಪರಿಹಾರವಾಗುತ್ತಿತ್ತಾ..? ಇಲ್ಲ. ಎಲ್ಲಿಯವರೆಗೆ ಸ್ತ್ರೀಯೊಬ್ಬಳು ಇನ್ನೊಬ್ಬಳ ಸಮಸ್ಯೆಗೆ ಕಾರಣವಾಗುತ್ತಾ ಹೋಗುತ್ತಾಳೊ ಅಲ್ಲಿಯವರೆಗೆ ಯಾರು ಏನೇ ಮಾಡಿದರೂ ಸಾಧ್ಯವಿಲ್ಲ. ಅಷ್ಟಕ್ಕೂ ತನ್ನಂತೆ ಅವಳೂ, ಎನ್ನಿಸುವ ಆಪ್ತ ಮನಸ್ಥಿತಿಗ್ಯಾಕೆ ಮಹಿಳೆಯರು ಪಕ್ಕಾಗುತ್ತಿಲ್ಲ..? ಉತ್ತರವನ್ನೂ ಆಕೆ ಕೊಡಲಾರಳು..)
ಕೊನೆಯ ಕ್ಷಣದವರೆಗೂ ನನಗೆ ಅರ್ಥವಾಗದೇ ಉಳಿದು ಹೋಗಿದ್ದ ಆ ಕೋಣೆಯ ರಹಸ್ಯ ಮೊದಲೇ ಅರಿವಿಗೆ ಬಂದಿದ್ದರೆ ಇನ್ನೊಂದಿಷ್ಟು ಕಾಲ ಅಲ್ಲೇ ಸೆಟೆದು ನಿಲ್ಲುತ್ತಿದ್ದೇನೆನೋ. ಆದರೆ ತೀರ ಕಂಕುಳಲ್ಲೇ ಪ್ರಕ್ಷುಬ್ಧತೆಯನ್ನೂ, ಮೂಗಿನ ಮೇಲೆನೆ ಸಿಡುಕುತನವನ್ನೂ ಕಟ್ಟಿಕೊಂಡು ಓಡಾಡುತ್ತಿದ್ದೇನಲ್ಲ. ಹಾಗಾಗಿ ಆ ಅವಕಾಶವೇ ಬರಲಿಲ್ಲ. ಆದರೆ ಇವತ್ತಿಗೂ ಆ ಮರಾಠಾ ಚಾಳ್‍ನ ಘಟನೆ ನೆನಪಿಗೆ ಬಂದಾಗಲೆಲ್ಲಾ ಮನಸ್ಸು ವಿಲವಿಲ ಎನ್ನುತ್ತದೆ.
ನಾನಾಗಲೇ ಎರಡ್ಮೂರು ಕಂಪನಿಗಳಲ್ಲಿ ಕೆಲಸ ಮಾಡುತ್ತಾ ಎಲ್ಲೂ ಸಲ್ಲದೇ, ನೌಕರಿಗಿಂತಲೂ ಮೊದಲು ಎಂಟು ದಿನದ ಪಗಾರ ಈ ಅಡ್ರೆಸ್ಸಿಗೆ ಎಂ.ಓ. ಮಾಡ್ರಿ ಎಂದು ನಿಗುರಿಕೊಂಡೆದ್ದು ಈಚೆಗೆ ಬರುತ್ತಿದ್ದೆ. ಅದರ ಕೊನೆಯ ಕಂತಾಗಿ ಎಮ್.ಸಿ.ಎಲ್.ನಲ್ಲಿ ಮಶೀನ್‍ಆಪರೇಟರ್ ಆಗಿ ಕೆಲಸಕ್ಕೆ ಸೇರಿದ್ದೆ. ಅದೇನೂ ನಾನು ಕಲಿತಿದ್ದ ಅಥವಾ ಅರಿತಿದ್ದ ಕೆಲಸವೂ ಅಲ್ಲ. ವಿಶೇಷ ಜ್ಞಾನ, ಡಿಗ್ರಿ ಎರಡೂ ಬೇಕಿರಲಿಲ್ಲ. ಕನ್ವೇಯರ್ ಬೆಲ್ಟ್ ಮೇಲೆ ಟೈಲ್ಸುಗಳು ಬಿಸಿಬಿಸಿಯಾಗಿ ಹರಿದು ಬರುತ್ತಿದ್ದವು. ಅವನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಾ ಬಿರುಕು, ಕಿತ್ತುಹೋದ ಪೀಸು, ತುಂಡಾಗುವ ಸಾಧ್ಯತೆ ಇರುವುದನ್ನು ಗಮನಿಸುತ್ತಾ, ಬೆಲ್ಟಿನಿಂದ ಕೆಳಗೆ ತಳ್ಳಬೇಕಿತ್ತು. ಅವು ದಭಾರನೆ ಶಬ್ದಿಸುತ್ತಾ ಟ್ರಂಚ್‍ಗೆ ಬೀಳುತ್ತಿದ್ದವು. ಸಂಜೆ ಹೊತ್ತಿಗೆ ಅಮರಗೋಳ ಬ್ರಿಡ್ಜ್ ಮೇಲೆ ಕೂತು ಒಟ್ರಾಸಿ ಎಷ್ಟು ಒಡೆದೆವು ಎಂದು ಲೆಕ್ಕಿಸುತ್ತಿದ್ದೇವು. ಅದರಲ್ಲಿ ಒಳ್ಳೆಯದೂ ಸೇರಿರುವ ಹಕೀಕತ್ತು ನಮ್ಮ ಚರ್ಚೆಯ ವಸ್ತುವಾಗುತ್ತಿತ್ತು. ಆಗ ನನಗೆ ಆ ಚಿಕ್ಕ ಕೋಣೆ ಕೊಡಿಸಿದವನು ವಿನಾಯಕ. ಪಾಟೀಲ್‍ನ ಖಾಸಾ ಗುಂಡುಗೋವಿ.
ಚಿಕ್ಕ ವಠಾರದ ಇದ್ದ ಎಳೆಂಟು ಕುಟುಂಬದಲ್ಲೇ ಸಾಮರಸ್ಯವಿರಲಿಲ್ಲ. ಓನರು ಪಾಟೀಲ್ ಬಿಳಿಯ ಮುಂಡಿಚಾಟು ಧರಿಸಿ, ಜುರುಕಿ ಮೆಟ್ಟಿಕೊಂಡು ಓಡಾಡುತ್ತ ಕೆಲಸಕ್ಕಿಂತ ಜಾಸ್ತಿ ಗಡಂಗಿನಲ್ಲೇ ಇರುತ್ತಿದ್ದ. ನಾನು ಇದ್ದ ರೂಮು ಅದ್ಯಾಕೆ ಹಾಗಿತ್ತೋ ಗೊತ್ತಿಲ್ಲ ಉಳಿದ ಬಾಗಿಲುಗಳಿಗೆ ವಿರುದ್ಧವಾಗಿ ನಾನಿದ್ದೆ. ಅವರಿಗೆಲ್ಲಾ ಇಲ್ಲಿ ಏನು ನಡೆಯುತ್ತದೆ ಎನ್ನುವುದೇ ಗೊತ್ತಾಗುವಂತಿರಲಿಲ್ಲ. ಒಬ್ಬಂಟಿಯಾಗಿದ್ದವನು ವಠಾರದ ಮಕ್ಕಳೊಂದಿಗೆ ಬೇರೆಯುತ್ತಾ, ಕ್ರಮೇಣ ಕುಟುಂಬಗಳೆಲ್ಲ ಚಲನಶೀಲತೆಗೆ ತೆರೆದುಕೊಳ್ಳುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದೆ. ಆದರೆ ವಠಾರದ ಕೊನೆಯ ಕುಟುಂಬದ ಮಾಮಿಗೆ ಮಾತ್ರ ನಾನು ಬಂದಾಗಿಂದಲೇ ಅದ್ಯಾಕೋ ಭಯಾನಕ ಅಸಹನೆ ಎದ್ದುಬಿಟ್ಟಿತ್ತು.
`..ಬ್ಯಾಚಲ್ರ್ ಹುಡುಗ್ರು ಸರಿಗಿರಲ್ಲ.. ಮಾಮಾಗ ಏನೂ ತಿಳಿಯೋದಿಲ್ಲ. ರೂಮು ಕೊಟ್ಟ ಬಿಡತಾರು ..' ಎಂದು ಬೆಳ್ಳಬೆಳಿಗ್ಗೆನೆ ನೀರು ಹಿಡಿಯುವಾಗ ತಿವಿಯುತ್ತಿದ್ದಳು. ನಾನಿದ್ದ ಕರ್ಮಕ್ಕೆ ಅದಕ್ಕಿಂತ ಹೆಚ್ಚಿಗೆ ಉತ್ತರಿಸುವಂತೇನೂ ಇರಲಿಲ್ಲ. ಆದರೆ ಪಾಟೀಲ್‍ನ ಹೆಂಡತಿ ಇದರ ಹಿಂದಿನ ಕಾರಣ ಎಂದರಿವಾಗುವ ಹೊತ್ತಿಗೆ ಒಂದಷ್ಟು ತಿಂಗಳು ಕಳೆದಿದ್ದವು. ಉಳಿದವರೊಂದಿಗೆ ನಾನು ಪಕ್ಕಾಗಿದ್ದರೆ, ಮಾಮಿ ಮಾತ್ರ ಕಣ್ಣಲ್ಲಿ ಗುರಾಯಿಸುತ್ತಿದ್ದಳು. 
ಇತ್ತ ಪಾಟೀಲ್ ಇರಲಿ ಬಿಡಲಿ ನಾನು ವೈನಿ.. ವೈನಿ..ಎನ್ನುತ್ತಾ ಊಟಕ್ಕೂ, ಅಡುಗೆಗೂ, ಅವನ ಭಾರದ ಚೇತಕ್ ಸ್ಕೂಟರು ಹತ್ತಿ ಸಾಮಾನು ತರಲೂ ಖಾಯಂಮ್ಮಾಗಿದ್ದೆ. ಮನೆಯ ಊಟ ಎನ್ನುವ ಆಪ್ತತೆಗೆ ಇರುವ ರುಚಿಯೂ, ಒಮ್ಮೆ ನಿಂತು ನೋಡೊಣ ಎನ್ನಿಸುವಷ್ಟು ಚೆಂದವಿದ್ದ ಆಕೆಯ ಆಕರ್ಷಣೆಗೋ, ಅಪರೂಪಕ್ಕೆ ಸಿಗುತ್ತಿದ್ದ ಟಿ.ವಿ. ಹೀಗೆ ಹೆಚ್ಚಿನಂಶ ಅವರ ಮನೆಯಲ್ಲೇ ಇರುತ್ತಿದ್ದೆ. ಮಾಮಾಗೂ ಇದರ ಬಗ್ಗೆ ಆಕ್ಷೇಪಣೆಯೇನೂ ಇರಲಿಲ್ಲ. ಹಾಗಾಗಿ ಒಂದೆಡೆ ಭಾರಕ್ಕೆ ಜಗ್ಗುತ್ತಿದ್ದ ಅವನ ಸ್ಕೂಟರ್‍ನ್ನು ಸಿಕ್ಕಿದ್ದೇ ಪರಮಾನ್ನ ಎಂದುಕೊಳ್ಳುತ್ತಾ ಓಡಿಸುತ್ತಿದ್ದೆ ಅವಳನ್ನೂ ಹಿಂದೆ ಕೂರಿಸಿಕೊಂಡು. ಹಾಗೆ ಹೋಗುವಾಗೆಲ್ಲಾ ಸ್ಕೂಟರು ಶಬ್ದ ಬರುತ್ತಿದ್ದಂತೆ ಕೊನೆಯ ಮನೆಯಲ್ಲಿ ಮಾಮಿ ಠಣ್ಣನೆ ಲೋಟ್ ಬೀಸಿದ ಸದ್ದು, ಕಿಟಿಕಿ ಬಾಗಿಲು ಜಪ್ಪಿದ ಸದ್ದು ಕೇಳಿಸತೊಡಗುತ್ತಿತ್ತು. ವೈನಿ ಇನ್ನಷ್ಟು ವೈಯ್ಯಾರವಾಗಿ ನನ್ನ ಭುಜ ಹಿಡಿದು ಕೂರುತ್ತಿದ್ದಳು.
ವಠಾರದ ಅಷ್ಟೂ ಜನಕ್ಕೆ ನಾನು ಆಗ ಬೇಕಾಗಿದ್ದೆ. ಹುಡುಗರಿಂದ ಎಲ್ಲರಿಗೂ `..ಬಾಳ್ಯಾ..ಅಗದೀ ಮಸ್ತ್ ಮಾಣುಸ್. ಕಾಮಾ ಕಾಯಿತರಿ ಸಾಂಗಾ.. ಪೂರೋಡತಾತ ಬಗಾ..'ಎನ್ನುತ್ತಿದ್ದರು. ನಾನು ಹಲ್ಕಿರಿದು ಯಾವ ಮನೆಗಾದರೂ ಹೋಗಿ ಕಾಲುಚಾಚಿ ಕೂತುಬಿಡುತ್ತಿದ್ದೆ ಯಾವ ಮುಲಾಜೂ ಇಲ್ಲದೆ. ಈ ಮಧ್ಯೆ ಆಗೀಗ ರಾತ್ರಿ ಹತ್ತಾದ ಮೇಲೂ ಪಾಟೀಲ್ ಬಾರದಿದ್ದಾಗ ಹೋಗಿ ಅದೇ ಸ್ಕೂಟರಿನ ಮೇಲೆ ಕರೆತಂದು ಮನೆ ಸೇರಿಸತೊಡಗಿದ್ದೆ. ಅದೊಂದಿನ ಅವನು ಬೆಳಬೆಳಿಗ್ಗೆ ನನ್ನ ಕೋಣೆಗೆ ಬಂದು ಮೂಲೆಯಲ್ಲಿ ಕೂತು ಕುಡಿಯತೊಡಗಿದ್ದ. ನಾನು ಸೀದಾ ವೈನಿಯನ್ನು ಹುಡುಕಿ ಅವನನ್ನು ವಾಪಸ್ಸು ಕರೆದೊಯ್ಯುವಂತೆ ತಾಕೀತು ಮಾಡಿದ್ದೆ. ನನಗೇನೂ ಅದು ಹೊಸದಲ್ಲವಾಗಿದ್ದರೂ ಹೀಗೆ ಬೆಳಬೆಳಿಗ್ಗೆ ಉಹೂಂ..
ಇತ್ತ ಅದರ ಪರಿಣಾಮವೋ, ಹೆಚ್ಚಾಗುತ್ತಿದ್ದ ಕಡೆಯ ಮನಿಯ ಮಾಮಿಯೊಂದಿಗಿನ ಅಸಹನೆಗೋ ಪಾಟೀಲ ನನಗೆ ಖೋಲಿ ಬಿಡುವಂತೆ ಆಗೀಗ ವರಾತ ಶುರು ಮಾಡಿದ್ದ. ಅದಷ್ಟು ಸುಲಭವಿರಲಿಲ್ಲ. ಹಾಗಾಗಿ ನಾನು ವೈನಿಯೊಂದಿಗಿನ ಸಲುಗೆಯಿಂದಾಗಿ ಕೋಣೆಯನ್ನು ಗಟ್ಟಿಗೊಳಿಸಿಕೊಳ್ಳುತ್ತಿದ್ದೆ. ಆಕೆಯೂ `..ಹುಡುಗ ಎಲ್ಲೂ ಹೋಗೋದು ಬ್ಯಾಡ. ಬೇರೆ ಮತ್ತ ಹುಡ್ಕಾಡೊದ್ಯಾಕ..?..' ಎನ್ನುತ್ತಾ ಬೆಂಬಲಿಸುತ್ತಿದ್ದಳು. 
ಹೀಗೆ ಹಗ್ಗ ಜಗ್ಗಾಟದಲ್ಲಿ ಪಾಟೀಲ ತೀರ ಕಿರಿಕಿರಿ ಮಾಡುತ್ತಿರಲಿಲ್ಲವಾದರೂ ನನಗೆ ಖೋಲಿ ಬೀಡುವ ಒತ್ತಡ ಬರತೊಡಗಿತ್ತು. ಅದರೆ ಆಕೆಯಿಂದಾಗಿ ನಾನು ಗಟ್ಟಿಯಾಗಿ ಕಾಲೂರಿ ನಿಂತಿದ್ದೆ ಇನ್ನೂ. ಮಧ್ಯೆ ಮಧ್ಯೆ ವೈನಿ ಪಾಟೀಲನ ಎದುರಿಗೇ ಕೂರಿಸಿ, ನನ್ನ ಹೆಗಲು ಬಳಸಿ ಹಿಡಿದುಕೊಂಡು `..ಬಾಳ್ಯಾ.. ಎಲ್ಲೂ ಹೋಗೋದು ಬೇಡ.. ಕರೆಕ್ಟಾಗಿ ಖೋಲಿ ಬಾಡಿಗಿನೂ ಕೋಡ್ತಿದಾನಲ್ಲ. ಯಾರದರ ಮಾತು ಕೇಳಿ ಪಾಪ ಕಟಗೊಬ್ಯಾಡರಿ..' ಎಂದು ವಕೀಲಿಕೆ ಅರಂಭಿಸುತ್ತಿದ್ದಳು. ಈ ಮಧ್ಯಸ್ಥಿಕೆಗೆ ಉಳಿದ ಮನೆಯವರು`..ಏನಪಾ ವೈನಿ ವಶೀಲಿ ಜೋರ ಮಾಡ್ತಳಲ್ಲ..' ಎಂದು ಹುಬ್ಬು ಹಾರಿಸುತ್ತಿದ್ದುರ ಹಿಂದಿನ ಮರ್ಮ ಮತ್ತು ವ್ಯಂಗ್ಯ ಎರಡೂ ಅರಿವಾಗುತ್ತಿತ್ತಾದರೂ ತೆಪ್ಪಗಾಗುತ್ತಿದ್ದೆ. 
ಒಟ್ಟಾರೆ ವಠಾರದಲ್ಲಿ ಅಸಹನೆ ಹೆಚ್ಚತೊಡಗಿತ್ತು. ಆಗೀಗ ನನ್ನ ರೂಮಿಗೆ ತಿಂಡಿ, ಊಟ ಕೊಡುತ್ತಿದ್ದ ವೈನಿ ಒಂದಿನ ನಾನು ಸೈಕಲ್ಲು ನಿಲ್ಲಿಸುವ ವೇಳೆಗೆ ಯಾರಿಗೋ ಬೆಂಡು ತೆಗೆಯುತ್ತಿದ್ದಳು. `..ಆ ಹುಡುಗ ಹೆಂಗಿದ್ದರೇನು..? ನಿಮ್ಮ ಜೋಡಿ ಏನರ ತಪ್ಪ ಮಾಡ್ಯಾನೇನು..?ಆಂವ ಇಲ್ಲೇ ಇರತಾನ. ನೀವ ಮನೀ ಬಿಡ್ರಿ ಬೇಕಿದ್ದರ..' ಎನ್ನುತ್ತಾ ನಾನು ಬಂದಿದ್ದನ್ನು ಗಮನಿಸಿ, ಪಿಳಿಪಿಳಿ ಮಾಡುತ್ತ ನಿಂತಿದ್ದ ನನ್ನನ್ನು ದರದರ ಎಳೆದುಕೊಂಡು ಮನೆ ಬಾಗಿಲು ರಪ್ಪಂತ ಮುಚ್ಚಿದ್ದಳು. ಆವತ್ತು ಸಂಜೆಯಾಗುವ ಮೊದಲೇ ವಠಾರ ಬಿಸಿಯಾಗಿತ್ತು. ರಾತ್ರಿ ಪಾಟೀಲ್ ಸುಮ್ಮನೆ ಇನ್ನೊಂದು ರೌಂಡು ಕುಡಿದು, `..ಸುಮ್ಮನ ಜಗಳ ಕಟಗೋಡಬ್ಯಾಡಲೇ.. ಯಾಕೋ ಕಂಪ್ಲೆಂಟ್ ಬರ್ತಿದಾವು ನಿನ್ನ ಮ್ಯಾಲ. ಹುಶಾರಾಗಿರು..' ಎನ್ನುತ್ತಾ ಎರಡೂ ಕಡೆ ಮಾತಾಡುತ್ತಿದ್ದ. 
ಇದು ಎಲ್ಲಿಗೆ ಹೋಗಿ ಮುಟ್ಟುತ್ತಿತ್ತೋ, ಏನಾಗಲಿತ್ತೋ ವೈನಿ ಎಷ್ಟು ದಿನ ನನ್ನ ಕಾಯುತ್ತಿದ್ದಳೊ ಗೊತ್ತಿಲ್ಲ.  ಒಳಗೊಳಗೇ ಪಾಟೀಲ್ ಮತ್ತು ಕಡೆಯ ಮನೆಯ ಮಾಮಿ ಇಬ್ಬರ ನಿರೀಕ್ಷೆನೂ ಪೂರ್ತಿಯಾಗುವ ಕಾಲಕೂಡಿ ಬಂದಿತ್ತು.  ನಾನು ಅಲ್ಲಿಂದಲೂ ಕೆಲಸ ಕಳೆದುಕೊಂಡು ಹೊರಬಿದ್ದಿದ್ದೆ. ನೌಕರಿನೇ ಇಲ್ಲ ಖೋಲಿ ತೊಗೊಂಡು ಏನು ಮಾಡಲಿ..? ಒಂದು ವಾರದ ನಂತರ ಖಾಲಿ ಮಾಡುವುದಾಗಿ ತಿಳಿಸಿ ನಾಲ್ಕು ದಿನ ಊರಕಡೆ ಬಂದು, ವಾಪಸ್ಸು ಹೋದರೆ ರೂಮಿಗೇ ಬಂದ ಅವಳು ತೆಕ್ಕಿಗೆ ಬಿದ್ದು ಭೋರ್ರೆಂದು ಅಳತೊಡಗಿದ್ದಳು. ಎರಡನೆ ದಿನ ಸಂಜೆಯ ಹೊತ್ತಿಗೆ ಹಳೆಯ ಬ್ಯಾಗನ್ನು ಬೆನ್ನಿಗೇರಿಸಿ ಕಬೋಜಿಯಂತೆ ಹೊರಡುವಾಗ ಆಕೆ ಕಣ್ಣು ಕೆಂಪಗೆ ಮಾಡಿಕೊಂಡು ನಿಂತಿದ್ದರೆ, ಕಡೆಯ ರೂಮಿನ ಮಾಮಿ ಕಡೆಗೂ ಗೆಲುವಿನ ನಗೆ ಬೀರಿದ್ದಳು. ನನಗೆ ಕೊನೆಯ ಕ್ಷಣದಲ್ಲಿ ಗೊತ್ತಾದ ಸಂಕಟಕಾರಿ ಸಂಗತಿ ಅದು. ಮೊದಲೇ ಹೀಗೆಂದು ಗೊತ್ತಾಗಿದ್ದರೆ ಏನಾದರೂ ಮಾಡಿ ನಾನು ಅಲ್ಲಿಯೇ ಉಳಿದು ಆಕೆಗೆ ಸಹಾಯಕ್ಕೆ ಬರುತ್ತಿದ್ದೇನೆನೋ..? ಅದರೆ ಆಗಲೇ ಹೊರಬಿದ್ದಾಗಿತ್ತು. ಮಾಮಿಯ ಕಣ್ಣಲ್ಲಿ ಮತ್ತು ಅಷ್ಟು ದೂರದಲ್ಲಿದ್ದ ಪಾಟೀಲ್‍ನ ಮುಖದಲ್ಲಿದ್ದ ಬೆರಗಿನ ನಗೆ, ನನ್ನ ಕಣ್ಣೆದುರಿಗೆ ಇವತ್ತು ಅಚ್ಚಳಿಯದಂತಿವೆ. ಯಾರಿಗೂ ಕೊಡದೆ ಉಳಿಸಿಕೊಳ್ಳುತ್ತಿದ್ದ ಆ ಕೋಣೆಯನ್ನು ವೈನಿಗೆ ಗೊತ್ತಾಗದಂತೆ ಪಾಟೀಲ್, ಮಾಮಿಯೊಂದಿಗಿನ ಗುಟ್ಟಾದ ಸಂಸಾರಕ್ಕಾಗಿ ಬಳಸಿಕೊಳ್ಳುತ್ತಿದ್ದ. ಅದಕ್ಕಾಗೇ ವೈನಿ ನನ್ನನ್ನು ಗುರಾಣಿಯನ್ನಾಗಿಸಿ ಅದಕ್ಕೆ ಅಡ್ಡಿಯಾಗುವ ಕ್ರಿಯೆಗೆ ಚಾಲನೆ ಕೊಟ್ಟಿದ್ದಳು. ಇನ್ನು ಮತ್ತೆ ಅವರ ಆಟ ಶುರುವಾಗುತ್ತದೆ.
ಥತ್.. ಮೊದಲೇ ಗೊತ್ತಾಗಿದ್ದರೆ ಏನಾದರೂ ಮಾಡುತ್ತಿದ್ದೆ. ಆದರೆ ಅದು ತೀರ ಕೊನೆಯ ಕ್ಷಣದಲ್ಲಿ ಅರಿವಾಗಿ ಎಲ್ಲೂ ನೆಲೆ ಇಲ್ಲದ ನಾನು ಏನೂ ಮಾಡಲಾಗದೆ ಮುಖ ಚಿಕ್ಕದು ಮಾಡಿಕೊಂಡು ಒಂದೆ ಸಮನೆ ಕಣ್ಣೀರಿಡುತ್ತಿದ್ದ ವೈನಿಯ ಕೈಯ್ಯದುಮಿ ಹೊರಬಿದ್ದಿದ್ದೆ. ಗಂಡನ ಹಾದರತನದ ವಿರುದ್ಧ ಆಕೆ ಮಾಡಿಟ್ಟುಕೊಂಡಿದ್ದ ಗುರಾಣಿಯ ನೆನಪಾದಾಗೆಲ್ಲಾ ಮನಸ್ಸು ತಪ್ತ...ಆ ಮೂಲಕ ಆಕೆ ಬಯಸಿದ್ದ ಸಣ್ಣ ಸಾಂತ್ವನ, ಆ ಅಸಹಾಯಕತನ ನೆನಸಿಕೊಂಡರೆ ಈಗಲೂ ಮನಸ್ಸು ದ್ರವಿಸಿಹೋಗುತ್ತದೆ. 
ಕಾರಣ
ಅವಳು ಎಂದರೆ...

No comments:

Post a Comment