Saturday, March 26, 2016

ದಾಕ್ಷಿಣ್ಯದ ಬದುಕಿಗೆ ತೆತ್ತ ಕಂದಾಯ...
ನಮ್ಮ ಹೆಣ್ಣುಮಕ್ಕಳ ದೌರ್ಭಾಗ್ಯವದು. ದಾಕ್ಷಿಣ್ಯದ, ಋಣಭಾರದ, ಕೃತಜ್ಞತೆಯ ಕಟ್ಟುಪಾಡಿಗೆ ಸಿಕ್ಕು ಏನೆಲ್ಲ ಮಾಡಿಕೊಂಡು ಬಿಡುತ್ತಾರೆಂದರೆ ಸ್ವತಃ ಸೂರೆ ಹೋಗುತ್ತಿದ್ದರೂ ಏನು ಮಾಡಬೇಕೋ ಗೊತ್ತಾಗದೆ ಉಳಿದುಬಿಡುವ ಪಾಪತನವಿದೆಯಲ್ಲ, ಅದು ನಿಜಕ್ಕೂ ಆಘಾತಕಾರಿ. ನತದೃಷ್ಟಳೊಬ್ಬಳ ವಿಷಯದಲ್ಲಿ ಆಗಿದ್ದೂ ಅದೇ. ಆದರೆ ಸರಿಪಡಿಸೋದು ಹೇಗೆ..?
ಎಲ್ಲರೂ ಅವರವರ ಪಾಡಿಗಿದ್ದು ಬಿಟ್ಟರೆ ಯಾವ ಸಮಸ್ಯೆಯೂ ಬೆಳೆಯುವುದೇ ಇಲ್ಲ. ಆದರೆ, ಅನಗತ್ಯವಾಗಿ ಮಾತಾಡಿ ಅದ್ಯಾವ ಮಟ್ಟಕ್ಕೆ ಇನ್ನೊಬ್ಬರ ಬದುಕನ್ನು ಹಾಳು ಮಾಡಿಬಿಡುತ್ತಾರೆಂದರೆ ಅದಿನ್ಯಾವತ್ತೂ ರಿಪೇರಿಗೆ ಬಾರದ ಸ್ಥಿತಿಗೆ ತಲುಪಿಸಿ ಬಿಡುತ್ತಾರೆ. ಅದರಲ್ಲೂ ಮಹಿಳೆಯರ ವೈಯಕ್ತಿಕ ಸರಕುಗಳನ್ನು ಅವರ ಸ್ನೇಹಿತೆಯರೇ ಹಾಳುಗೆಡುವಿರುತ್ತಾರೆ. ಬೆಳಗ್ಗೆ ವಾಕಿಂಗ್‌ನಿಂದ, ಸಂಜೆ ಸಂಕಷ್ಟಿಯ ಪೂಜೆಯಲ್ಲೂ ತಮಗೆ ಬೇಕಾದಂತೆ ಕತೆಗಳನ್ನು ಕಟ್ಟಿ, ಸ್ವತಃ ಕಂಡವರಂತೆ ಆಡಿಕೊಳ್ಳುವ ಗೃಹಿಣಿಯರ ಲೆಕ್ಕದ ಹೆಂಗಸರು ಖಾಸಾ ಸ್ನೇಹಿತೆಯರ ಬದುಕನ್ನೂ ಮೂರಾಬಟ್ಟೆ ಮಾಡಿರುತ್ತಾರೆ. ಗಂಡಂದಿರನ್ನು ನೌಕರಿಗೆ ಕಳುಹಿಸಿ ಆಡಿಕೊಳ್ಳುವುದಿದೆಯಲ್ಲ ಅದರಿಂದ ಬದುಕೇ ಎಕ್ಕುಟಿ ಹೋಗುತ್ತದೆಂದೇಕೆ ಅರಿವಾಗುವುದಿಲ್ಲವೋ..? ಅಸಲಿಗೆ ಮನಸಾರೆ ಒಪ್ಪದೆ ಯಾವೊಬ್ಬ ಹೆಣ್ಣೂ ಮಂಚಕ್ಕೆ ಬರಲಾರಳು ಎನ್ನುವುದೇ ಈಗಲೂ ಅಪೂರ್ವ ಗೌರವ ಉಳಿದುಕೊಳ್ಳಲು ಕಾರಣವಾಗಿರುವ ಅಂಶ.
ವಿದ್ಯಾವತಿಗೆ ಹುಡುಗ ಪ್ರಕಾಶ ಸುಲಭವಾಗಿ ಒಲಿದಿದ್ದಾನೆ. ಕೂಡಲೇ ಒಪ್ಪಿಗೆಯಾಗದಿದ್ದರೂ ಕ್ರಮೇಣ ಅವನ ಮೇಲೊಂದು ಅಕ್ಕರಾಸ್ಥೆ ಆಕೆಗೆ ಬೆಳೆದಿದೆ. ನಾಲ್ಕಾರು ವರ್ಷದಿಂದ ಒಂದೇ ಮನೆಯಲ್ಲೂ ಆಗೀಗ ಗಾಡಿ ಮೇಲೆ ಓಡಾಟ ಇತ್ಯಾದಿ ಇದ್ದಾಗ ಇವೆಲ್ಲ ಸುಲಭಕ್ಕೆ ಸಾಧ್ಯವಾಗುತ್ತದೆ. ಅದರಲ್ಲೂ ಅಪ್ಪನಷ್ಟು ಮಗ ಕುಶಲಿಯಂತೂ ಮೊದಲೇ ಅಲ್ಲ. ಹಾಗಾಗೇ ಅತೀವ ಓದು ಮತ್ತು ಬುದ್ಧಿವಂತಿಕೆಯಿಂದಿದ್ದ ಅಪ್ಪನ ಎದಿರು ಮಗ ಅಷ್ಟಾಗಿ ಯಾವ ವಾದಕ್ಕೂ ಇಳಿಯುತ್ತಿರಲಿಲ್ಲ. ಅಂಥವನ ಬದುಕಿನಲ್ಲಿ ಬುದ್ಧಿವಂತಳೂ, ನೌಕರಿಯಲ್ಲಿರುವ ಸೊಸೆಯನ್ನು ತರುವುದು ಅವರಪ್ಪನಿಗೆ ಸುಲಭವೇ ಆಯಿತು. ಇತ್ತ ಅವನೊಂದಿಗೆ ಮನಸ್ಸು ಸೇರುತ್ತಿದ್ದಂತೆ ಅದೂ ಒಂದೇ ಮನೆಯಲ್ಲಿದ್ದಾಗ ಏನಾಗಬೇಕೋ ಆದಾಗಿ ಹೋಗಿದೆ. ಸುಲಭದಲ್ಲಿ ಬಸಿರಾಗಿದ್ದಾಳೆ ಹುಡುಗಿ.
ಚಿಕ್ಕದೊಂದು ವ್ಯವಹಾರ ಇಟ್ಟುಕೊಂಡು, ಅಷ್ಟಿಷ್ಟೆ ಸೆಟ್ಲಾಗುತ್ತಿದ್ದ ಮದುವೆ ವಯಸ್ಸಿನ ಹುಡುಗ ಸುಲಭಕ್ಕೆ ಆಕೆಯ ಜೊತೆಗೆ ಪ್ರೀತಿಗಿಳಿದಿದ್ದಾನೆ. ಹಾಗಾಗಿ ದೂರದ ಸಂಬಂಧಿಕ ಯಜಮಾನ, ವಧು ಕೋರಿ ವಾಸ್ತವದೊಂದಿಗೆ ಬರುತ್ತಿದ್ದಂತೆ ಅಷ್ಟಕ್ಕಷ್ಟೆ ಎನ್ನುವಂತಿದ್ದ ವಿದ್ಯಾವತಿಯ ಅಪ್ಪ-ಅಮ್ಮಂದಿರು ಸಮ್ಮತಿಸಿದ್ದಾರೆ. ಶೀಘ್ರವಾಗಿ ಮದುವೆಯೂ ನಡೆದು ಹೋಗಿದೆ. ಪ್ರಕಾಶ ತೀರಾ ಸಂತಸವನ್ನೂ ವ್ಯಕ್ತಪಡಿಸಲಿಲ್ಲ. ಬಂದಂತೆ ಬದುಕು ಎನ್ನುವಂತಿದ್ದುದು, ವಿದ್ಯಾ ಮದುವೆ ಎನ್ನುವ ಶಾಸ ಮುಗಿಸಿ ಎದ್ದು ಹೋದದ್ದು, ಸಮಯಕ್ಕೂ ಮೊದಲೇ ಮಗು ಹಡೆದದ್ದೂ ಸೂಕ್ಷ್ಮವಾಗಿ ಗಮನಿಸುವವರ ಕಣ್ಣಿಗೆ ಬೀಳದಿರುತ್ತದೆಯೇ..? ಅವಳಿಗರಿವಿಲ್ಲದೆ ಅಥವಾ ಕಂಡು ಕಾಣದಂತೆ ಸುಮ್ಮನಿದ್ದಳಾ ಗೊತ್ತಿಲ್ಲ. ಪುಂಖಾನುಪುಂಖವಾಗಿ ಕತೆಗಳು ಅವಳಿಗಿಂತಲೂ ಮೊದಲು ಆಕೆಯ ಕೆಲಸದ ಕಚೇರಿ ತಲುಪಿ ಹಿಂಸೆಗೀಡು ಮಾಡತೊಡಗಿದವು. ವರ್ಷಾನುಗತಿಯಲ್ಲಿ ಮತ್ತೊಂದು ಗಂಡು ಮಗುವಿಗೂ ವಿದ್ಯಾ ಜನ್ಮ ಕೊಟ್ಟಳು. ಕತೆ ಹೊಸ ತಿರುವು ಪಡೆಯಲಾರಂಭಿಸಿದ್ದೇ ಆವಾಗ.
ಅದು ಅಪೂಟು ಪ್ರಕಾಶನಂತೆ ಪೆದ್ದು ಪೆದ್ದಾಗಿತ್ತು. ಮೊದಲ ಮಗಳು ಅದ್ಭುತ ಎನ್ನುವಂತೆ ಬುದ್ಧಿವಂತಿಕೆಯಿಂದ ಬೆಳೆಯತೊಡಗಿದ್ದಳು. ಜೊತೆಗೆ ಯಾವ ಲೆಕ್ಕದಲ್ಲೂ ಅದು ಇವರಿಬ್ಬರನ್ನೂ ಹೋಲುತ್ತಿರಲಿಲ್ಲ. ಅಂಥದ್ದಾಂದು ದೈಹಿಕ ಸಾಮ್ಯತೆಯ ವ್ಯತ್ಯಾಸ ಈಗೀಗ ತೀರಾ ಸ್ಪಷ್ಟವಾಗಿ ಎದ್ದು ಕಾಣತೊಡಗಿತ್ತು. ವಿದ್ಯಾಳ ಬದುಕು ತೋಪೆದ್ದು ಹೋಗಿತ್ತು. ಮನೆಯಲ್ಲಿ ಅತ್ತೆ ಮಾತೇ ಆಡುತ್ತಿರಲಿಲ್ಲ. ಪ್ರಕಾಶ ಮನೆ ಬಿಟ್ಟರೆ ವಾರಕ್ಕೊಮ್ಮೆ ಬರುತ್ತಿದ್ದ. ಕೆಲಸದ ಸ್ಥಳದಲ್ಲೂ ಕುಹಕದ ನೋಟಕ್ಕೀಡಾಗಿ ಇನ್ನಿಲ್ಲದಂತೆ ಹಿಂಸೆ ಅನುಭವಿಸುತ್ತಿದ್ದಳು. ಕತೆಯ ತಿರುವಿನಲ್ಲಿದ್ದ ಹುಡುಗಿ ಹೊರಳು ದಾರಿಯಲ್ಲಿ ನಿಂತಿದ್ದರೆ, ಕತೆ ಕೇಳಿದ ಶಾಕ್‌ನಲ್ಲಿ ನಾನು,
‘ಎಲ್ಲ ಸರಿ ಆದರೆ ಎಲ್ಲ ಗೊತ್ತಿದ್ದೂ ಪ್ರಕಾಶ ಯಾಕೆ ಈ ಮದುವೆಗೆ ಒಪ್ಪಿಕೊಂಡ? ಅಷ್ಟಕ್ಕೂ ಅವನಿಗಂತಹ ದರ್ದೇನಿತ್ತು ? ನೀನು ಇಲ್ಲಿವರೆಗೆ ಎರಡನ್ನೂ ಹೇಗೆ ಸೈರಿಸಿದೆ ಮಾರಾಯ್ತಿ’ ಎನ್ನುತ್ತಿದ್ದರೆ ತಲೆ ತಗ್ಗಿಸಿದ್ದಳು ವಿದ್ಯಾ. ನಮ್ಮ ಹೆಣ್ಣುಮಕ್ಕಳ ದೌರ್ಭಾಗ್ಯವದು. ದಾಕ್ಷಿಣ್ಯದ, ಋಣಭಾರದ, ಕೃತಜ್ಞತೆಯ ಕಟ್ಟುಪಾಡಿಗೆ ಬಲುಬೇಗ ಬೀಳುತ್ತವೆ. ಹಾಗಾಗಿ ಆ ಭಾರಕ್ಕೆ ಸಿಕ್ಕು ಏನೆಲ್ಲ ಮಾಡಿಕೊಂಡು ಬಿಡುತ್ತಾರೆಂದರೆ ಸ್ವತಃ ಸೂರೆ ಹೋಗುತ್ತಿದ್ದರೂ ಏನು ಮಾಡಬೇಕೋ ಗೊತ್ತಾಗದೆ ಉಳಿದುಬಿಡುವ ಆ ಪಾಪದ ಪರಮಾವಧಿಯಿದೆಯಲ್ಲ ಅದು ನಿಜಕ್ಕೂ ಆಘಾತಕಾರಿ. ವಿದ್ಯಾಳ ವಿಷಯದಲ್ಲಿ ಆದದ್ದೂ ಅದೇ. ಸ್ವತಃ ಓದುವ, ಕೆಲಸಕ್ಕೆ ಸೇರುವ ಇಚ್ಛೆಯಿಂದ ಸಂಬಂಧಿಕರ ಮನೆ ಸೇರಿದಳೇನೋ ಸರಿನೇ. ಆದರೆ, ಆ ಕಾರಣಕ್ಕೆ ಮುಲಾಜಿಗೆ ಬಿದ್ದು ಆ ಮನೆಯ ಮತ್ತು ಮನೆಯವರೊಂದಿಗೆ ಆ ಯಜಮಾನನೊಡನೆ ಒಂದು ಸಲುಗೆ ಬೆಳೆಯಿತಲ್ಲ ಅದು ಗೌರವ ರೂಪಕವಾಗಿದ್ದೇನೋ ಸರಿ. ಆದರೆ ಹೆಚ್ಚಿನ ಸಂದರ್ಭದಲ್ಲಿ ಅದರ ದುರ್ಬಳಕೆಯಾಗಿ ಬಿಡುತ್ತದೆ. ಗೌರವ ಕಾಳಜಿ ಎಲ್ಲ ಬಂಧನಕ್ಕೊಳಪಡಿಸುತ್ತದೆ. ಪಡೆದ ಸಹಾಯಕ್ಕೆ ಬದುಕೇ ಕಂದಾಯವಾಗಿಬಿಡುತ್ತದೆ. ಜೀವನ ತಿರುಗಣಿಗೆ ಸಿಕ್ಕಿ ತೋಪೆದ್ದು ಹೋಗುವುದೇ ಆವಾಗ. ವಿದ್ಯಾಳ ಬದುಕಲಾದದ್ದೂ ಅದೇ.
ಕೆಲವೇ ಸಮಯದಲ್ಲಿ ಯಜಮಾನ ವಿದ್ಯಾಳನ್ನು ಗೌಪ್ಯವಾಗಿ ಬಳಸಿಕೊಳ್ಳತೊಡಗಿದ್ದಾನೆ. ವರ್ಷಾವಧಿಯಲ್ಲಿ ಇದು ಸೂಕ್ಷ್ಮವಾಗಿ ನಡೆಯುತ್ತಿದ್ದುದು, ಮಗ ಪ್ರಕಾಶ ಕೂಡಾ ಈ ಹುಡುಗಿಯನ್ನು ಇಷ್ಟಪಡುತ್ತಾನೆ ಎನ್ನುವ ಸುಳಿವು ಸಿಗುತ್ತಿದ್ದಂತೆ ಮನೆಯಲ್ಲಿ ಚಾಣಾಕ್ಷ ನಡೆ ನಡೆಸಿದನಾ..? ಗೊತ್ತಿಲ್ಲ. ಆದರೆ ಅಪ್ಪನ ಈ ನಡೆಗಿಂತಲೂ ವೇಗವಾಗಿ ವಿದ್ಯಾಳಿಗೆ ತಗುಲಿಕೊಂಡಿದ್ದ ಪ್ರಕಾಶ ಹೇಗೂ ಮನೆಯ ಹುಡುಗಿ, ಅಪ್ಪನೂ ಬೇಡ ಎನ್ನಲಿಕ್ಕಿಲ್ಲ ತನ್ನಂತಹ ಅರೆಬರೆ ಓದುಗನಿಗೆ ಅವಳಿಗಿಂತ ಒಳ್ಳೆಯ ಕನ್ಯೆ ಹುಡುಕಿದರೂ ಸಿಗಲಿಕ್ಕಿಲ್ಲ. ಅವಸರಕ್ಕೆ ಬಿದ್ದು ತಾನೂ ಹುಡುಗಿಯನ್ನು ಕೂಡಿ ಬಿಟ್ಟಿದ್ದಾನೆ. ಆ ಹೊತ್ತಿಗೆ ಮದುವೆ ಪ್ರಸ್ತಾಪವಾಗಿದ್ದು. ಆದರೆ ಗೊಂದಲವಿದ್ದುದು ಹುಡುಗಿಗೆ ‘ಮಗುವಿನ ಅಪ್ಪ ಯಾರು..?’ ಅಕಸ್ಮಾತ ಅದಲು ಬದಲಾದರೆ ಅಪ್ಪ-ಅಜ್ಜ ಇಬ್ಬರೂ ಒಬ್ನೆ ಇದೆಂಗೆ? ಮಾತು, ಚರ್ಚೆ, ಸಮಸ್ಯೆ ಇತ್ಯಾದಿಗಳ ಸಂವೇದನೆಯನ್ನೂ ಮೀರಿ ಕಾಲ ಮದುವೆಯ ಬಂಧನಕ್ಕೆ ಅವಳನ್ನು ನೂಕಿತ್ತು. ಅಲ್ಲಿಂದ ಆರಂಭವಾದ ಸಂಕಟ ಮೊದಲನೆಯ ಮಗು ಆದಾಗ ಅಷ್ಟಾಗಿ ಬಾಧಿಸಿಲ್ಲ. ಎರಡನೆಯ ಮಗು ಮತ್ತು ಪ್ರಕಾಶನ ನಡವಳಿಕೆಯಲ್ಲಿ ಮೊದಲಿನಿಂದಲೂ ಇದ್ದ ಮುಗ್ಗುಮ್ಮುತನ ಕನ್ ಫಾರ್ಮ್ ಆದದ್ದು ಎರಡೂ ಮಕ್ಕಳೂ ಸಾಕಷ್ಟು ದೊಡ್ಡವಾದಾಗ, ನಡವಳಿಕೆ ಮತ್ತು ಹೋಲಿಕೆಯಲ್ಲಿ ವ್ಯತ್ಯಾಸವಾದಾಗ.
ಈಗ ಅತ್ತೆ ಮುಖ ಕೊಡುವುದಿಲ್ಲ. ಮೊದಲನೆಯ ಮಗುವಿನ ಅಪ್ಪನಿಗೆ ಈಗವಳ ರಗಳೆಗಳೆಲ್ಲ ಬೇಕಿಲ್ಲ. ಆಗೀಗ ಮನೆಯಲ್ಲಿ ನಡೆಯುತ್ತಿರುವ ರಾಮಾಯಣದಿಂದಾಗಿ, ಮಕ್ಕಳ ಬುದ್ಧಿವಂತಿಕೆ ಚಹರೆಯ ವ್ಯತ್ಯಾಸದಿಂದಾಗಿ ಕತೆ ನಿಧಾನಕ್ಕೆ ಬೀದಿಗೆ ಬಂದಿದೆ. ಮರ್ಯಾದೆಯ ಪ್ರಶ್ನೆಯಾಗಿ ಬಾಯಿ ಬಿಡದಿದ್ದರೂ ಪ್ರಕಾಶ ಈಗ ಮನೆಗೆ ಬರುವುದನ್ನೇ ನಿಲ್ಲಿಸಿದ್ದಾನೆ. ಅವನಾಯಿತು, ಅವನ ವ್ಯವಹಾರವಾಯಿತು.ಈ ಬಗ್ಗೆ  ಜಾಸ್ತಿ ಚರ್ಚೆಗಿಳಿದರೆ ಅಪ್ಪನ ಆಸ್ತಿ ಕೈ ತಪ್ಪುತ್ತದೆ. ಅದನ್ನು ನೇರ ಕೇಳಿ ದಕ್ಕಿಸಿಕೊಳ್ಳುವ ಧೈರ್ಯ ಅವನಿಗಿಲ್ಲ.
‘ಏನು ಮಾಡಲಿ ಸರ್. ಪ್ರಕಾಶಂಗೆ ಮೊದಲೆ ಗೊತ್ತಿದ್ರೂ ಹೂಂ ಅಂದ್ನಾ? ಅಪ್ಪನ ಮರ್ಯಾದೆ ಉಳಿಸೋಕೋಸ್ಕರ ಹಿಂಗೆ ಮಾಡಿದನಾ? ಒಟ್ಟಾರೆ ನಾನು ಬಲಿಯಾದೆ. ಈಗ ಏನು ಮಾಡಲಿ? ಪ್ರಕಾಶ ಇನ್ನೊಬ್ಬಳೊಂದಿಗೆ ಸೆಟ್ಲಾಗ್ತಿದ್ದಾನೆ. ಯಾಕೆ ಏನು ಕೇಳಿದರೆ ಹುಳ್ಳಗೇ ನಗುತ್ತಾನೆ. ‘ನಾನೇ ಹೇಳ್ಬೇಕಾ?’ ಅಂತ. ಮನೆಯಲ್ಲಿ ಎಲ್ಲರ ಮುಖಗಳೂ ಗೋಡೆ ಕಡೆಗೆ. ದೂರದೂರಿಗೆ ಇಲ್ಲಿಂದ ಹೋಗುವ ಹಾಗೂ ಇಲ್ಲ ಸರ್. ಇರೋ ನಾಲ್ಕಾರು ಬ್ರಾಂಚ್‌ನ ನೌಕರಿ ಮಾಡ್ಬೇಕಿದೆ. ಬೇರೆ ಮನೆ ಮಾಡೋಣ ಎಂದರೆ ಅದಕ್ಕೂ ಬಿಡಲ್ಲ. ಮರ್ಯಾದೆ ಪ್ರಶ್ನೆ ಅಂತೆ. ಇದೆಂಥಾ ಮರ್ಯಾದೆ ಸರ್? ಎಲ್ಲ ಸೇರಿ ನನ್ನ ಬದುಕು ಮೂರಾಬಟ್ಟೆ ಮಾಡಿದ್ದಾರೆ. ಅಪ್ಪ, ಅಮ್ಮನಿಗೆ ಹೇಳಿದರೆ ನೊಂದ್ಕೊತಾರೆ’.
ಇತ್ತ ವಿದ್ಯಾಳ ಮಕ್ಕಳಿಗೆ ಮನೆಯಲ್ಲಿ ಎಲ್ಲವೂ ಸರಿಯಿಲ್ಲ ಎನ್ನುವುದು ಗೊತ್ತಾಗುತ್ತಿದೆ. ಸುಮ್ಮನೆ ಅವಳ ಹಿಂದೆ ಸುತ್ತುತ್ತವೆ. ಯಾವುದೋ ಸಂಕಟದಲ್ಲಿದ್ದಂಗೆ ಇರ್ತಾವೆ. ಅಪ್ಪ ಯಾಕೆ ಬರ್ತಿಲ್ಲ ಅಂತಾ ಕೇಳೋದನ್ನು ನಿಲ್ಲಿಸಿವೆ. ‘ಅವಕ್ಕೆಲ್ಲ ಈಗ ಅರ್ಥ ಆಗೋ ವಯಸ್ಸು. ಮೊದಲನೆಯವಳು ತುಂಬಾ ಬುದ್ಧಿವಂತಳು. ಎಡೆ ಅವಹೇಳನವಾಗುವುದನ್ನು ತಪ್ಪಿಸಲು ಎರಡನ್ನೂ  ಹಾಸ್ಟೆಲ್‌ನಲ್ಲಿ ಬಿಟ್ಟಿದಿನಿ. ಸರ್’ ವಿದ್ಯಾ ಮಾತಾಡುತ್ತಿದ್ದರೆ ನಾನು ಮತ್ತು ಸ್ನೇಹಿತೆ ತೆಪ್ಪಗೆ ಕುಳಿತುಬಿಟ್ಟಿದ್ದಾವು.  ಆದ ಕತೆಯ ಆಘಾತಕ್ಕಿಂತಲೂ, ಪ್ರಕಾಶ ಅಗತ್ಯ ಮತ್ತು ಅವಕಾಶ ಬಳಸಿಕೊಳ್ಳುತ್ತ ತನ್ನ ಬದುಕು ಕಟ್ಟಿಕೊಂಡಿದ್ದಾನೆ. ಅಪ್ಪನ ಮರ್ಯಾದೆ ಉಳಿಸಬೇಕಿತ್ತು ಎನ್ನುತ್ತಲೇ ಇನ್ನೊಬ್ಬಳೊಂದಿಗೆ ನಿಸೂರಾಗುತ್ತಿದ್ದಾನೆ. ಮನೆ, ಅಂಗಡಿ, ಹೊಸ ಹೆಂಡತಿ ಎಲ್ಲ ಇದೆ. ಅದರೆ ಎಲ್ಲ ಇದ್ದೂ ಏನೂ ಇಲ್ಲದಂತಾಗಿ ಮಾತಾಡಿಕೊಳ್ಳುವವರ ಬಾಯಿಗೆ ಸುಲಭಕ್ಕೆ ಒಂದು ದಶಕದಿಂದ ಸಿಕ್ಕಿ ನರಳುತ್ತಿರುವ ವಿದ್ಯಾ ಎರಡು ಬಾರಿ ಅತ್ಮಹತ್ಯೆಯಿಂದ ಬಚಾವ್. ತನ್ನದಂತೂ ಬದುಕು ಮುಗಿದು ಹೋಗಿದೆ ಇನ್ನು ಮೇಲೆ ಮಕ್ಕಳಿಗಾಗಿಯಾದರೂ ಬದುಕಬೇಕು ಎನ್ನುವ ಹಂತದ ಕೊನೆಯ ವೈರಾಗ್ಯವನ್ನು ಭರಿಸುತ್ತಿದ್ದಾಳೆ. ಬದುಕು ಜೀವಂತ ನರಕ ಎಂದರೆ ಇದೇನಾ? ಉತ್ತರಿಸಬೇಕಾದ ಹೆಣ್ಣುಮಕ್ಕಳ ಧ್ವನಿ ಒತ್ತಲಾಗಿದೆ. ಅದಕ್ಕೂ ಮೊದಲೇ ನಮ್ಮದೂ... ಕಾರಣ ಅವಳು ಎಂದರೆ...
(ಲೇಖಕರು ಕಥೆ-ಕಾದ೦ಬರಿಕಾರರು)

1 comment:

  1. ಹೀಗಗ್ಬಿತ್ರೆ ಹೇಗೆ ?
    ಸಂಬಂದಗಳಿಗೆ ಬೆಲೆನೇ ಇಲ್ಲ
    ತುಂಬಾ ಬೇಜಾರಾಯಿತು

    ReplyDelete