Saturday, March 12, 2016

ಅವಳದ್ದು ನೂರು ಪ್ರಶ್ನೆಗಳ ಸ್ವಾತಂತ್ರ್ಯ...!
ತುಂಬ ವ್ಯವಸ್ಥಿತವಾಗಿ ಮತ್ತು ನಿಯತ್ತಾಗಿ ಒಂದು ಕಡೆಯಲ್ಲಿ ಕೂತು ಕೆಲಸ ಮಾಡುವ ವಿಷಯದಲ್ಲಿ ಹೆಚ್ಚಿನ ಕ್ರೆಡಿಟ್ಟು ಹೆಣ್ಣುಮಕ್ಕಳದ್ದೇ. ಕಾರಣ ಗಂಡಸರಂತೆ ಆಗಿಷ್ಟು ಈಗಿಷ್ಟು ಎಂದು ಅರ್ಧಗಂಟೆಗೊಮ್ಮೆ ಕಾಫಿ, ಸಿಗರೇಟು, ಗಂಟೆಗೊಮ್ಮೆ ಬಾತ್‌ರೂಮು, ಆಗೀಗ ಕಳ್ಳ-ನು, ಮಸಾಲೆ ವಿಡಿಯೋ, ಗುಟಕಾಕ್ಕೊಂದು ಜಾಗ ಹೀಗೆ ಎದ್ದು ಹೋಗಲು ಮತ್ತು ಮಾತುಕತೆಯಾಡಲು ಹಲವು ಕಾರಣಗಳು ಮಹಿಳೆಯರಿಗಿಲ್ಲ.ಅವರದ್ದೇನಿದ್ದರೂ ದಿನಕ್ಕೆರಡು ಬಾರಿ ಕಾಫಿ, ಅದೂ ಕೂತಲ್ಲೇ ತಂದುಕೊಡುವವರಿದ್ದರೆ ಅಕ್ಕಪಕ್ಕ ಅಲ್ಲೇ ಕುರ್ಚಿ ಜರುಗಿಸಿ ಐದು ನಿಮಿಷ ಗುಸುಗುಸು ಮಾಡುತ್ತಾ ಕಳೆದಾರು. ಬಾಕಿ ಇನ್ನೇನಿದ್ದರೂ ನಿನ್ನೆ ಆನ್‌ಲೈನ್‌ನಲ್ಲಿ ಕೊಂಡ ಚೂಡಿದಾರ್ ಟಾಪು, ಬಾರ್ಡರಿಲ್ಲದ ಹೊಸ ಸೀರೆ, ವಾಟರ್‌ಪ್ರೂ- ಸಾರಿ ಬಗ್ಗೆ (ಒಗೆಯುವ ಗೋಜಿಲ್ಲದ)ಆಶ್ಚರ್ಯದ ಮಾತುಕತೆ, ಟಾಪ್ ಚೆನ್ನಾಗಿದೆಯೆಂದು ಮ್ಯಾಚಿಂಗ್ ಟೈಟ್ಸು ತೊಗೊಂಡು ತಾವೇ ಮಾಡಿಕೊಳ್ಳುವ ಹೊಸ ಕಾಂಬಿನೇಶನ್ನು, ಎರಡೂ ಇಲ್ಲದೆ ಸುಮ್ಮನೆ ಮೂಲೆಯಲ್ಲಿ ಮುಚ್ಚಟೆಯಿಂದ ಎತ್ತಿಟ್ಟಿದ್ದ ದುಪ್ಪಟಾ ಮೆತ್ತಗಿದೆಯೆನ್ನುವ ಕಾರಣಕ್ಕಾಗೆ ಅದಕ್ಕೊಂದು ಟಾಪು, ಪ್ಯಾಂಟುಕೊಂಡೆ ನೋಡ್ರಿ ಎನ್ನುವಲ್ಲಿಗೆ ಹೆಚ್ಚಿನ ಹೆಣ್ಣುಮಕ್ಕಳ ಸರಕು ಮುಕ್ತಾಯವಾಗುತ್ತದೆ (ಹಾಗಂತ ಎಲ್ಲ ಹೆಣ್ಣುಮಕ್ಕಳು ನಿಯತ್ತಾಗಿ ದುಡಿಯುತ್ತಾರೆಂದಲ್ಲ).

ಅದಕ್ಕೂ ಮೀರಿದ್ದೆಂದರೆ, ತಿಂಗಳಿಗೊಮ್ಮೆ ಒಕ್ಕರಿಸುವ ಪಿರಿಯಡ್ಡಿನ ಸಮಯದಲ್ಲಿ ಒಂದಷ್ಟು ಖಾಸಗಿಯಾಗಿ ಪದೇಪದೆ ಬಾತ್‌ರೂಮಿಗೆ ಓಡುವುದೋ, ಆ ಹೊತ್ತಿಗೆ ಮನಸ್ಸಿನ ನೆಮ್ಮದಿಗಾಗಿ ಒಂದಷ್ಟು ಏಕಾಂತ ಮತ್ತು ಸೋಮಾರಿಯಾಗಿರಲು ಅವಕಾಶವಿದೆಯೆಂತಾದರೆ ಹೆಚ್ಚಿನದೇನೂ ಬೇಕಿರಲಿಕ್ಕಿಲ್ಲ. ಅಕಸ್ಮಾತ ಅದಕ್ಕೂ ಬಾಸ್ ಕಿರಿಕಿರಿ ಮಾಡಿದ್ದೇ ಆದರೆ ‘ಈ ನನ್ಮಗನಿಗೂ ವರ್ಷಕ್ಕೊಮ್ಮೆಯಾದರೂ ಪಿರಿಯಡ್ಡಾಗಬೇಕು ಆಗ ಗೊತ್ತಾಗುತ್ತದೆ..’ ಎಂದು ಒಳಗೊಳಗೆ ಬೈದು ನಗೆಯಾಡಿಕೊಳ್ಳುವುದು ಬಿಟ್ಟರೆ ಕೆಲಸದಲ್ಲಿ ಸೋಮಾರಿಯಾಗುವುದು ಕಮ್ಮಿನೇ. ಅದರಲ್ಲೂ ಬುದ್ಧಿವಂತಿಕೆ ಮತ್ತು ಪಗಾರ ಎರಡೂ ಚೆನ್ನಾಗಿರುವ ಹೆಣ್ಣುಮಕ್ಕಳಿಗೆ ನೌಕರಿಯ ಬಗೆಗಿನ ಆಸ್ಥೆಯೇ ಬೇರೆ.ಹಾಗೇ ಒಳ್ಳೆಯ ಸಂಬಳದ ಕೆಲಸದಲ್ಲಿದ್ದು, ಸ್ವಂತಕ್ಕೊಂದು ಕಾರು ಇರಿಸಿಕೊಂಡಿರುವ ದೀಪಾ, ನಾನು ಸಿಕ್ಕಿದಾಗ ಬೆಂಗಳೂರಿನಲ್ಲಿ ಆಗಷ್ಟೆ ಕಣ್ಬಿಡುತ್ತಿದ್ದ ಬರಿಸ್ಟಾಗೆ ಕರೆದೊಯ್ದು ಅದರ ರುಚಿ ತೋರಿಸಿದ್ದವಳು. ಒಂದು ಕಾಫಿಗೇ ಇಷ್ಟು ದುಡ್ಡಾ ಎಂದು ನಾನು ಪಿಳಿಪಿಳಿ ಆಡುತ್ತಿದ್ದರೆ, ‘ಹಾಂ.. ಇವತ್ತು ಕಿಶೋರ್‌ಗೆ ಹೇಳಿ ಒಂದು ಗಂಟೆ ಪರ್ಮಿಶನ್ ತೊಗೊಂಡು ಬಂದಿದ್ದೀನಿ, ಕಾಫಿಗೆ ನೀನು ಬರ್ತೀದಿಯಾ ಅಂತಾ..’ ಇತ್ಯಾದಿ ಮಾತುಕತೆಯೊಂದಿಗೆ ನಮ್ಮ ಭೇಟಿ ಮುಗಿದಿತ್ತು.ಅದಾದ ಮೇಲೂ ಒಂದೆರಡು ಬಾರಿ ನನ್ನೊಂದಿಗೆ ಊರು ಸುತ್ತೋಕೆ ಜೊತೆಯಾಗುವ ಮಾತು ನಡೆದಿತ್ತು. ಹತ್ತಾರು ಸಾವಿರದ ಖರ್ಚು, ಎರಡ್ಮೂರು ದಿನದ ಟ್ರಿಪ್ಪು ಎಂದೆಲ್ಲ ಲೆಕ್ಕಿಸುವಾಗ, ಪ್ರತಿ ಬಾರಿಯೂ ದೀಪಾ ಇದಕ್ಕೆಷ್ಟಾಗುತ್ತೆ, ಅದಕ್ಕೆಷ್ಟಾಗುತ್ತೆ ಎಂದು ಬಾಕಿ ಎಲ್ಲದಕ್ಕಿಂತ ಲೆಕ್ಕಾಚಾರದ ಬಗ್ಗೆಯೇ ಹೆಚ್ಚು ಕಾಳಜಿವಹಿಸಿದ್ದು ಕೊನೆಗೆ ‘ನಂದು ನಾಳೆ ಹೇಳ್ತೀನಿ’ ಎಂದಿದ್ದಳು. ಆದರೆ ಅವತ್ತೇ ರಾತ್ರಿ ಗ್ರೂಪ್‌ಚಾಟ್ ಬಾಕ್ಸಿಗೆ ಮೆಸೇಜು ಮೇಲೆ ಮೆಸೇಜು ತೂರಿಬಿಡತೊಡಗಿದ್ದಳು.‘ನಂಗೆ ಪರ್ಮಿಶನ್ ಸಿಕ್ತು. ಆದ್ರೆ ಕರೆಕ್ಟಾಗಿ ಹೇಳಿದ ಟೈಂಗೆ ವಾಪಸ್ಸು ಬರ್ಬೇಕಂತೆ. ಹೂಂ ಅಂದು ಬಿಟ್ಟಿದಿನಿ. ಉಳಿದದ್ದು ಆಮೇಲೆ.. ಟೆನ್ಶನ್ ಫ್ರೀ. ಕಿಶೋರ್ ಯಾಕೋ.. ಒಂದೇ ಸಲಕ್ಕೆ ಹೂಂ ಅಂದ..’ಇತ್ಯಾದಿ. ಚಾಟ್ ಮುಚ್ಚಿಟ್ಟು ಕೂತವನು ಗೊಂದಲಕ್ಕೆ ಬಿದ್ದೆ. ಏನಿದು ಎಲ್ಲದಕ್ಕೂ ಪರ್ಮಿಶನ್ನಿನ ಗೋಜಲು?ಆಫೀಸಿನಲ್ಲಿ ಇದ್ದಕ್ಕಿದ್ದಂತೆ ಸ್ನೇಹಿತರೆಲ್ಲಾ ಗುಂಡು ಪಾರ್ಟಿಯ ಯೋಜನೆ ರೂಪಿಸಿದರೆ ಹೇಗಿರುತ್ತೆ? ವೀಕೆಂಡ್‌ಗೆ ಇಂತಲ್ಲಿ ಸೇರೋದು, ಯಾರು ಯಾರನ್ನು ಪಿಕ್ ಮಾಡ್ತಾರೆ, ಎಲ್ಲಿ ಸೇರುವುದು? ಬರುವಾಗ ಏನು ವ್ಯವಸ್ಥೆ, ಯಾವ ಹೋಟೆಲ್ ಬೆಟರ್ರು? ಕುಡಿಯದೇ ಡ್ರೈವಿಂಗ್ ಮಾಡುವವರು ಯಾರು? ಅಕಸ್ಮಾತ್ ಟ್ರಿಪ್ ಅಂತಾದರೆ ಹೋಟೆಲ್ ಬುಕಿಂಗ್, ಗಾಡಿ, ಕ್ಯಾಶಿಯರ್, ಮೆಡಿಕಲ್ ಲೀವ್ ಯಾರದ್ದು, ಹೆಂಡತಿ ಎಲ್ಲಿಯಾದರೂ ಹೋಗುವವಳಿದ್ದರೆ ಅದಕ್ಕೆ ಏನು ಅಲ್ಟರ್‌ನೇಶನ್ನು? ಮಗುವನ್ನು ಎಲ್ಲಿ ಬಿಡ್ಬೇಕು? ಇಲ್ಲವೆಂದರೆ ಇನ್ನೊಬ್ಬನ ಅಕ್ಕನ ಮನೆ ಇಲ್ಲೆ ಇದ್ಯಂತೆ ಅಲ್ಲಿ ಒಂದಿನದ ಮಟ್ಟಿಗೆ ಹೆಂಡತಿಯನ್ನು ಬಿಡೋದು, ಎಲ್ಲ ಡಿಷ್ಕಶನ್ನಿಗೆ ಒಂದು ಗ್ರೂಪ್‌ಚಾಟ್ ಮಾಡ್ಬೇಕು.. ಹೀಗೆ ಏನೇನು ಆಗ್ಬೇಕು, ಮಾಡ್ಬೇಕು ಚರ್ಚೆಯಾಗುತ್ತಲೇ ಪ್ರೋಗ್ರಾಂ ಫಿಕ್ಸೂ ಆಗಿಬಿಡುತ್ತದೆ. ಆದರೆ ಒಬ್ಬನೇ ಒಬ್ಬನೂ ‘ನಾನೊಮ್ಮೆ ಹೆಂಡ್ತೀನ ಕೇಳಿ ನಾಳೆ ಹೇಳ್ತೀನಿ’ ಅಂದದ್ದಾಗಲಿ, ಅಲ್ಲೇ ಒಂದು ಮೆಸೇಜ್ ಮಾಡಿದ್ದಾಗಲಿ ಕಾಣುವುದಿಲ್ಲ. ಎಲ್ಲರಿಗೂ ಅದು ಗ್ರಾಂಟೆಡ್. ಯಾರ ಪರ್ಮಿಷನ್ ಬೇಕೇ ಆಗಿಲ್ಲ. ಬೇಕು ಎಂದ ಕೂಡಲೇ ಹೊರಡೋದೇ. ಹೆಚ್ಚೆಂದರೆ ರಾತ್ರಿಪಾರ್ಟಿ ಇದ್ದಲ್ಲಿ ‘ಬರೋದು ಲೇಟ್..’ ಎಂದು ಒಂದು ಮೆಸೇಜು ಅಷ್ಟೇ. ಅದರ ನಂತರ ರಾತ್ರಿ ಹನ್ನೆರಡರ ಮೊದಲು ಮಾತುಕತೆ ಇದ್ದರೆ ಕೇಳಿ.ಬಹುಶಃ ನಾ ಕಂಡ ಮತ್ತು ಎಲ್ಲ ಹೆಣ್ಣುಮಕ್ಕಳೂ ಅನುಭವಿಸುತ್ತಿರುವ ಸಿಹಿಯಾದ ಶೋಷಣೆ ಇದು. ಸ್ವತಂತ್ರವಾಗಿದ್ದು, ಭೋಗವೇ ಜೀವನ, ಖರ್ಚಿಗೆ, ಮಸಾಲೆ ತಿನಿಸಿಗೆ, ಬುಲೆಟ್‌ರೈಡ್‌ಗೆ ಕೊನೆಗೆ ಅವನೂ ಬರಕತ್ತಾಗದಿದ್ದಾಗ ವರ್ಷಕ್ಕೊಬ್ಬ, ಅವನಿಲ್ಲದಿದ್ದರೆ ಅವನ -ಂಡು ಹೀಗೆ ಮಜಕ್ಕಾಗೇ ಒಂಟಿಯಾಗಿರುತ್ತಾ, ಗಂಡನನ್ನೂ ಬಿಟ್ಟು ಬೇರೆ ಮನೆ ಮಾಡಿಕೊಂಡು, ಅಪ್ಪ ಅಮ್ಮಂದಿರನ್ನೂ ದೂರ ಇಟ್ಟು ಬದುಕುತ್ತಿರುವ ಹೆಂಗಸರ ಲೆಕ್ಕದಲ್ಲಿ ಸ್ವಾತಂತ್ರ್ಯ ಎಂದರೆ ಬೇರೇನೆ. ಅವರು ಈ ವಿಷಯದಲ್ಲಿ ಬರಲ್ಲ.ಇವತ್ತು ಗಂಡನಂತೆ ಲಕ್ಷ ಸಂಪಾದಿಸುವ ದೀಪಾ ಗಳಿಗೆಗೊಮ್ಮೆ ಲೆಕ್ಕ ಕೇಳುತ್ತಿದ್ದುದು ಮತ್ತು ಎಲ್ಲಾ ಆದ ಮೇಲೂ ಅದಕ್ಕೆ ಒಂದಿಷ್ಟು ಐನೂರು ಜಾಸ್ತಿ ಸೇರಿಸಿ ಲೆಕ್ಕ ಕೊಡುವುದರ ಹಿಂದಿನದ್ದು ಮರ್ಮ ಎನ್ನುವುದಕ್ಕಿಂತಲೂ ಜರೂರತ್ತು ಎಂದೇ ನನಗನ್ನಿಸಿದ್ದು ಅದರಲ್ಲಿ ಯಾವ ತಪ್ಪೂ ಇರಲಿಲ್ಲ. ಆದರೆ ಸಂಸಾರಕ್ಕೂ, ದುಡಿಯುವುದಕ್ಕೂ ಇಬ್ಬರೂ ಸಮಾನ ಪಾಲುದಾರರು ಅಂತಾದ ಮೇಲೆ ಕಿಶೋರನಿಗೆ ಯಾಕೆ ಈ ನ್ಯಾಯ ಅಪ್ಲೈ ಆಗುತ್ತಿಲ್ಲವೋ?ತನಗೆ ಬೇಕಾದಾಗ ಪಾರ್ಟಿಗೂ, ಟ್ರಿಪ್ಪಿಗೂ, ಹೊರಗೆ ತನ್ನಿಷ್ಟದ ಕೆಲಸಗಳಿಗೂ, ಮೋಜಿಗೂ ತೆರಳುವಾಗ ಒಂದು ಮೆಸೇಜು ಹಾಕಿ, ‘ನಾನು ಹಿಂಗೆ ಮಾಡುತ್ತಿದ್ದೇನೆ, ನಾಡಿದ್ದಿನಿಂದ ಎರಡು ದಿನಾ ಇರಲ್ಲ ಅಥವಾ ಇವತ್ತು ರಾತ್ರಿ ಲೇಟಾಗಿ ಬರ್ತೀನಿ, ರಮೇಶ್ ಬಂದಿದಾನೆ ಇಲ್ಲಿಂದಲೇ ಅವ್ನ ಮನೆಗೆ ಹೋಗಿ ಬೆಳಗ್ಗೆ ಬರ್ತೀನಿ’ ಎನ್ನುವುದಕ್ಕೂ, ದೀಪಾ ಈ ಟ್ರಿಪ್ಪಿಗೆ ಹೋಗುವ ಸಲುವಾಗಿ ಪೀಠಿಕೆಯ ಜೊತೆಗೆ, ಮೊಟ್ಟಮೊದಲನೆಯದಾಗಿ ಮಗನನ್ನು ಅಕ್ಕನ ಮನೆಯಲ್ಲಿ ಬಿಡುವ ಯೋಜನೆ ಪ್ರಸ್ತುತಪಡಿಸಿ, ಟ್ರಿಪ್ಪು ಹಿಂಗೇ ಇರುತ್ತದೆ, ಇಂಥಿಂಥವರು ಬರುತ್ತಿದ್ದಾರೆ, ಇಂತಲ್ಲೇ ಉಳಿಯುವ ಪ್ಲಾನ್, ನಂಜೊತೆ ಬರ್ತಿರೋದು.. ಸ್ಯಾಮ್.. ಅಂದರೆ ‘ಅದೇ ಅವತ್ತು ನಿಮಗೆ ಪರಿಚಯ ಮಾಡಿಸಿದ್ನಲ್ಲ, ಹಿಮಾಲಯನ್ ಟ್ರೆಕ್ಕಿಂಗ್ ಮಾಡ್ಕೊಂಡು ಅವತ್ತೇ ವಾಪಸು ಬಂದಿದ್ರಲ್ಲಾ ಅವ್ರು..’ ಹೀಗೆ ಅದಕ್ಕೊಂದು ರೆ-ರೆನ್ಸು ಕೊಟ್ಟು, ಆಮೇಲೆ ಜೊತೆಗೆ ಬರ್ತಿರೋದು ವಾಣಿ, ಅವಳು ಹೋಗ್ತಿದಾಳೆ ಅಂತಾನೇ ನಾನೂ ಹೋಗ್ತಿದ್ದೀನಿ ಎಂದು ಆಕೆಯನ್ನೂ ತಲೆದಂಡಕ್ಕೀಡು ಮಾಡಿ, ಅಷ್ಟರಲ್ಲಿ ಆಕೆಯ ಹೆಸರು ಬರುತ್ತಿದ್ದಂತೆ, ‘ಓಹ್.. ವಾಣೀನಾ ಸರಿ ಸರಿ ಹಂಗಾದರೆ ಹೋಗಿ ಬಾ.. ಅವ್ಳು ಪೂರ್ತಿ ಎರಡೂ ದಿನಾ ನಿನ್ ಜೊತೇನೆ ಇರ್ತಾಳೆ ತಾನೆ..’ ಎಂದು ಕೂಡಲೇ ವಾಟ್ಸ್‌ಆಪ್‌ನಲ್ಲಿ ಅವಳನ್ನೂ ಕನ್-ರ್ಮ್ ಮಾಡಿಕೊಂಡು, ಹತ್ತಾರು ವರ್ಷ ಸಂಸಾರ ಮಾಡಿರುವ ಹೆಂಡತಿಯ ಮೇಲೆ ಬಾರದ ವಿಶ್ವಾಸ ಆ ವಾಣಿಯ ಮೇಲೆ ಏನೂ ಗೊತ್ತಿಲ್ಲದಿದ್ದರೂ ಅದು ಹೇಗೆ ಬರುತ್ತದೋ ಗೊತ್ತಿಲ್ಲ..?ವಾಣಿಯೊಬ್ಬಳಿದ್ದರೆ ಸಾಕು ಹೆಂಡತಿಯ ಶೀಲಸಹಿತ ಸರ್ವ ರೀತಿಯ ರಕ್ಷಣೆಯೂ ಆಗಿಬಿಡುತ್ತದೆನ್ನುವ ಎಲ್ಲೋ ದೂರದಲ್ಲಿ ಚುಚ್ಚುವ, ಒಳನಂಬಿಕೆಯನ್ನು ಗಟ್ಟಿಗೊಳಿಸಿಕೊಳ್ಳುತ್ತಾ, ಆ ಕ್ಷಣಕ್ಕೆ ಮಗನದ್ದೂ ಎರಡ್ಮೂರು ದಿನದ ಮಟ್ಟಿಗೆ ಅಕ್ಕನ ಮನೆಯಲ್ಲಿರುವ ವ್ಯವಸ್ಥೆಯಾಗಿರುವುದರಿಂದ ಎಲ್ಲಾ ಕರೆಕ್ಟಾಗಿ ತನಗ್ಯಾವ ತೊಡಕೂ ಬಾರದಿರುವ ಬಗ್ಗೆ ಸುನಿಶ್ಚಿತವಾದಾಗ ಆಕೆಯ ಟ್ರಿಪ್ಪಿನ ಯೋಜನೆಗೆ ಓ.ಕೆ.ಯ ಮುದ್ರೆ ಬಿದ್ದಿರುತ್ತದೆ. ಇಷ್ಟೆಲ್ಲಾ ಅಗುವಾಗ ರಾತ್ರಿ ಹನ್ನೆರಡಾದರೂ ಆ ಕ್ಷಣದ ಖುಷಿ ಅವಳದ್ದು. ಈ ಎಲ್ಲ ಜಂಜಡದಿಂದ -ಂಡ್ಸ್ ಜತೆ ಎರಡು ದಿನ ಇರಬಹುದಲ್ಲ. ಅದಕ್ಕೇ ರಾತ್ರೋರಾತ್ರಿ ಮೆಸೇಜು ‘ಸ್ಯಾಮ್.. ನಂಗೆ ಪರ್ಮಿಷನ್ ಸಿಕ್ತು.. ಗೆಟಿಂಗ್ ರೆಡಿ...’ಅದೇ ಅವನು ಹೊರಟಾಗ ಇದ್ಯಾವುದೂ ಆಗಿರುವುದೇ ಇಲ್ಲವಲ್ಲ. ಯಾವ ಪರ್ಮಿಶನ್ನು, ಮೆಸೇಜೂ ಏನೂ ಇಲ್ಲ. ಆದರೆ ಅಷ್ಟೆ ದುಡ್ಡು ದುಗ್ಗಾಣಿ, ನೌಕರಿ, ಅದೇ ಟ್ರಾಫಿಕ್ಕು, ಟೆನ್ಶನ್ನು, ಮಗುವಿನ ಸ್ಕೂಲು, ಬಟ್ಟೆ, ಪಾತ್ರೆ ಎಲ್ಲವನ್ನೂ ನಿರ್ವಹಿಸುತ್ತಿರುವ ಅವಳಿಗೆ ಮಾತ್ರ ನೂರು ಪ್ರಶ್ನೆಗಳು ಯಾಕೋ..? ಅಂದರೆ ಹೆಣ್ಣುಮಕ್ಕಳ ಸ್ವಾತಂತ್ರ್ಯ ಅಂದರೆ ಹಿಂಗೆ ಎರಡೆರಡು ದಿನ ಮಾತ್ರವಾ.. ಅಥವಾ ನನಗೇ ಅರ್ಥವಾಗ್ತಿಲ್ಲವಾ..? ಎರಡೇ ದಿನದ ಸ್ವಾತಂತ್ರ್ಯಕ್ಕೂ ದೀಪಾ, ಮಧ್ಯರಾತ್ರಿಯಾದರೂ ಖುಷಿಯಿಂದ ಒಂದೇ ಸಮನೆ ನೂಕುತ್ತಿದ್ದ ಸ್ಮೈಲಿಗಳನ್ನು, ಅದರಲ್ಲೇ ಸುಖಿಸುವ ಆಕೆಯ ನಿಯಂತ್ರಿತ ಜಗತ್ತಿನ ಆರ್ದ್ರತೆಯನ್ನೂ ನೆನೆಯುತ್ತಾ ಕೂತುಬಿಟ್ಟಿದ್ದೆ.ಕಾರಣಅವಳು ಎಂದರೆ...(ಲೇಖಕರು ಕಥೆ-ಕಾದಂಬರಿಕಾರರು)

No comments:

Post a Comment