Sunday, November 1, 2015

ಮಕ್ಕಳೇ, ಮನಸುಗಳ ಕೊಲ್ಲಬೇಡಿ…

edit-ankana-1
ಇವತ್ತು ಸಾವಿರ ರೂಪಾಯಿ ಕೊಡುವುದು ಸುಲಭ. ಆದರೆ, ಮನೆಯವರಿಗಾಗಿ ಒಂದು ಗಂಟೆ ಕೊಡುವ ಮನಸ್ಸು ನಮಗಿಲ್ಲ. ತೀರಾ ಆತ್ಮೀಯರಿಗೆ ಬೇಕಿರುವುದು ಮುಷ್ಟಿಗಟ್ಟಲೇ ಹಣದ ಪಿಂಡಿಯಲ್ಲ. ಒಂದು ಹಿಡಿ ಚೆಂದದ ಮಾತು ಮತ್ತು ಅವರೊಂದಿಗೆ ಒಂದಿಷ್ಟು ಲಭ್ಯತೆ. ಆ ವಿಷಯದಲ್ಲಿ ನಮ್ಮದು ಅಪ್ಪಟ ದಾರಿದ್ರ್ಯ
***
ಕಳೆದ ಎರಡ್ಮೂರು ದಶಕಗಳ ಅವಧಿಯಲ್ಲಿ ಸಂಪರ್ಕ ತಪ್ಪಿದಾಗೆಲ್ಲ ನಾನೇ ಕರೆ ಮಾಡಿ ಎಟುಕಿಸಿಕೊಳ್ಳುವಂತೆ, ನಾನೂ ಇನ್ನೇನು ಮರೆತು ಬಿಡುತ್ತೇನೆ ಎನ್ನುವಾಗ ಫಕ್ಕನೇ ನನ್ನ ನೆನಪಿಸಿ ತಡವಿಕೊಂಡು ನನ್ನ ಬಾಲ್ಯದಿಂದಲೂ ಅಪಾರ ಅನುಭವಕ್ಕೀಡು ಮಾಡುವಲ್ಲಿ ಹಿರಿಯರ ಕೊಡುಗೆ ಸಾಕಷ್ಟಿದೆ. ಅದರಲ್ಲೂ ಮಲೆನಾಡಿನ ಮೂಲೆಮೂಲೆಗಳ ಒಂಟಿ ಮನೆಗಳಲ್ಲಿ ಪಡೆದ ಅನುಭವಗಳೇ ಬಹುಶಃ ನನ್ನನ್ನಿವತ್ತು ಈ ಮಟ್ಟಿಗಿಟ್ಟಿದೆ ಎಂದರೆ ಸುಳ್ಳಲ್ಲ.
ಆಗಿನ ಮಳೆಗಾಲದ ಪರಿಸ್ಥಿತಿ ಗಂಭೀರ. ರಾಡಿಯೇಳುವ ರಸ್ತೆಗಳು, ಅದಕ್ಕೂ ಮೊದಲೇ ಕಾಲಿಗೇರುವ ಉಂಬಳಗಳು, ಭಯಾನಕ ಚಳಿ, ಜಿಟಿಜಿಟಿ ಮಳೆಯಿಂದ ತಿಂಗಳಾನುಗಟ್ಟಲೇ ಮನೆಯಿಂದಾಚೆ ಬಾರದಿರುವವರೂ ಇದ್ದರು. ಮನೆಯಂಗಳದ ಒಲೆಯ ಬೆಂಕಿ, ಮಾಡಿಗೆ ತೂಗುತ್ತಿದ್ದ ಮೊಗೆಕಾಯಿ, ನಾಗಂದಿಗೆಯಲ್ಲಿ ತುಂಬಿಸಿಟ್ಟ ಬೆಲ್ಲದ ಡಬ್ಬಿಗಳಲ್ಲಿ ಬದುಕು ಮುಗಿದು ಹೋಗುತ್ತಿದ್ದುದು ಸುಳ್ಳಲ್ಲ.
ಮೇಲಿನ ಮನೆಯ ಚಂದ್ರಿಕತ್ತೆ, ಮಾವ ಇಂಥ ಚೆಂದದ ಅನುಭವಕ್ಕೀಡು ಮಾಡಿದವರು. ಇವತ್ತಿನ ಮಟ್ಟಿಗೆ ತೀರಾ ಮಾಯವಾಗಿರುವ ಮುಳ್ಳಣ್ಣು ಆಗ ಯಥೇಚ್ಛವಾಗಿ ನಾನು ಸವಿದಿದ್ದರೆ ಅದಕ್ಕೆ ಕಾರಣ ಚಂದ್ರತ್ತೆಯೇ. ಸಂಜೆಯ ಹೊತ್ತಿಗೆ ದೊಡ್ಡ ಮುಳ್ಳಿನ ಹೆಣೆಯನ್ನೇ ಕಡಿದು ತಂದು ಅಂಗಳದಲ್ಲಿ ಬಿಸಾಕುತ್ತಿದ್ದ ಮಾವ. ರಾಚುತ್ತಿದ್ದ ಮಳೆಯ ಇರಚಲು, ಅದನ್ನು ತಡೆಯಲು ಕಟ್ಟಿದ್ದ ಸೋಗೆಯ ತಡಸಲು, ಜಿಬಿರು ಜಿಬಿರಾಗಿ ಬೀಳುತ್ತಿದ್ದ ಬೆಳಕಿನಲ್ಲೇ ಉರಿಯುತ್ತಿದ್ದ ಒಲೆಯ ಎದುರಿಗೆ ಕೂತು ಮುಳ್ಳಣ್ಣು ಹರಿದದ್ದೇ ಕೊನೆ. ಬಹುಶಃ ಅದರ ನಂತರದಲ್ಲಿ ಬದಲಾದ ನಿಸರ್ಗದ ಹೊಡೆತಕ್ಕೆ ಹಣ್ಣು ಮತ್ತು ಕರಡದ ಬ್ಯಾಣ ಎರಡೂ ಇವತ್ತಿಲ್ಲ.
ಆಗೆಲ್ಲ ಬ್ಯಾಣದಲ್ಲಿ ಮುಖಕ್ಕೆ ರಾಚುವಷ್ಟೆತ್ತರ ಬೆಳೆಯುತ್ತಿದ್ದ ಕರಡ, ಇವತ್ತು ಒಂದಡಿಗಿಳಿದಿದೆ ಎನ್ನುವುದು ವಾಸ್ತವ. ಆದರೆ ಮಕ್ಕಳು, ಬಂದವರಿಗೆಲ್ಲ ಮಾಡುವುದು ಮಟ್ಟುವುದರಲ್ಲಿ ಚಂದ್ರತ್ತೆ ಮಾತ್ರ ಯಾವತ್ತೂ ಕಡಿಮೆ ಮಾಡಿದ್ದಿಲ್ಲ. ತೀರಾ ಬೆಳಗ್ಗೆನೆ ಮಕ್ಕಳು ತೆಳ್ಳವು ತಿಂದು ಹೊರಟರೆ, ಕಂಬಳಿಗೊಪ್ಪೆ ಹಾಕಿಕೊಂಡು ಸೈಕಲ್ಲಿನ ಟೈರು ಹುಗಿಯುತ್ತಿದ್ದ ಕಚ್ಚಾ ರಸ್ತೆಯಲ್ಲೂ ಒದ್ದಾಡುತ್ತಲೇ ಪೆಡಲು ತುಳಿಯುತ್ತಿದ್ದ ಮಾವ. ಅವನ ಹಿಂದೆ ಮುಂದೆ ಬಾರಿನ ಮೇಲೆ ಮುದುರಿ ಕೂರುತ್ತಿದ್ದ ಮಕ್ಕಳೊಂದಿಗೆ, ಆಚೀಚೆ ಬ್ಯಾಣದ ಬುಡದಿಂದ ಹೊರಬರುತ್ತಿದ್ದ ಇತರೆ ಮಕ್ಕಳನ್ನೂ ಸೈಕಲ್ಲಿನ ಬಾರ್ ಮಧ್ಯೆ ಕೂರಿಸಿಕೊಳ್ಳುತ್ತಿದ್ದ.
ಅಷ್ಟೆಲ್ಲ ಮಾಡಿ ಮಕ್ಕಳನ್ನು ಸ್ಕೂಲಿಗೆ ಕಳುಹಿಸಿ ಬಂದು ತೋಟಕ್ಕೆ ಹೋದರೆ ಮಧ್ಯಾಹ್ನದವರೆಗೆ ಕೆಲಸ. ನಂತರ ಉರಿನೆತ್ತಿಯ ಹೊತ್ತು ಕೆಂಪಗಾಗಿರುತ್ತಿದ್ದ ಮಾವ ಮೊಗೆಕಾಯಿ ಹುಳಿ ಉಂಡು ಒಂದರ್ಧ ಗಂಟೆ ವಿರಮಿಸಿ ಮತ್ತೆ ತೋಟಕ್ಕಿಳಿದರೆ, ಐದರ ಹೊತ್ತಿಗೆ ಸೈಕಲ್ಲು ತುಳಿಯುತ್ತ ಸ್ಕೂಲಿಗೆ ದೌಡಾಯಿಸುತ್ತಿದ್ದ. ಓದಿಗೆ ಪ್ರಾಮುಖ್ಯತೆ ಬಹಳವಿತ್ತು. ಕಾರಣ ಮಾವನ ಕಾಲಕ್ಕೆ ಇಂಥ ಭಾಗ್ಯವೇ ಇರಲಿಲ್ಲ. ಶಾಲೆಯ ಮುಖ ನಾಲ್ಕನೆಯ ಇಯತ್ತೆಗೆ ಮುಗಿದಿತ್ತು. ಅದಕ್ಕಾಗೇ ‘ನಂಗಳ ಬದೀಗೆಲ್ಲ ಆವಾಗ ಶಾಲಿನೇ ಇರ್ಲಿಲ್ಯೆ. ನಮಗಾದ ಕಷ್ಟ ಮಕ್ಕಳಿಗೂ ಬ್ಯಾಡ ಹೇಳಿ. ಸರಿಯಾಗಿ ಕಲಿದಿದ್ರೆ ಈಗ ಎಂಥದ್ದೂ ಅಗದಿಲ್ಲ ಅಲ್ದನಾ..’ ಎನ್ನುತ್ತಿದ್ದರೆ ಮಕ್ಕಳು ಮುಸುಮುಸು ಮಾಡುತ್ತ ಪುಸ್ತಕ ಎತ್ತಿ ಓಡುತ್ತಿದ್ದವು. ಓದುವ ಮಕ್ಕಳಿಗೆ ಕಷ್ಟ ತಾಗದಂತೆ ಜೋಪಾನ ಮಾಡಿದರು. ಮಕ್ಕಳಿಬ್ಬರೂ ಚೆನ್ನಾಗೇ ಓದಿದರು. ‘ಸುತ್ತಲಿನ ಶಾಲೆಗೆಲ್ಲ ತಮ್ಮ ಮಕ್ಕಳೇ ಫಸ್ಟು’ ಎನ್ನುವಾಗ ಚಂದ್ರತ್ತೆಯ ಹೆಮ್ಮೆಯ ಡೌಲು. ಪ್ರತಿವರ್ಷವೂ ಫಲಿತಾಂಶಕ್ಕೆ ಮನೆಯಲ್ಲಿ ಹಬ್ಬದೂಟ. ಆಳುಗಳಿಗೂ ಊಟೋಪಚಾರ. ಮನೆಗೂ ಹೋಳಿಗೆ ಕಟ್ಟಿಕೊಡುತ್ತಿದ್ದಳು ಚಂದ್ರತ್ತೆ. ಅವಳ ಈ ಸಡಗರಕ್ಕೆ ನಾನು ಸಣ್ಣಗೆ ಹಲ್ಕಿರಿಯುತ್ತಿದ್ದೆ. ಕಾರಣ ಅಂತೂ ಎಸ್ಸೆಸ್ಸೆಲ್ಸಿ ಉಸುರುಕಟ್ಟಿ ಸೆಕೆಂಡ್ ಕ್ಲಾಸು ನಾನು. ಆ ಹುಡುಗ ತೊಂಭತ್ನಾಲ್ಕು ಮಾರ್ಕಿಗೆ, ಹೇಗೆ ಆರು ಕಮ್ಮಿಯಾಯಿತೆಂದು ಬಟ್ಟು ಮಡಚಿ ಎಣಿಸುತ್ತಿದ್ದರೆ ನಾನು ಬಾಯಿ ಬಿಟ್ಟುಕೊಂಡು ನೋಡುತ್ತಿದ್ದೆ. ‘ನನಗಿದರ ಮುಕ್ಕಾಲು ಬಂದರೂ ಸಾಕಿತ್ತು’ ಮಾರಾಯ ಎಂದು ಗೊಣಗಿಕೊಳ್ಳುತ್ತಿದ್ದರೆ ಮಾವ, ‘ಅಲ್ಲಲೇ ಗೊಣಗಬ್ಯಾಡ ಮಾಣಿ. ಎಂಥಾದ್ದೋ ನಾಲ್ಕು ಪರ್ಸೆಂಟು ಹೇಳಿ ಅವಂದು ಸಂಕಟ ಅಂವಂಗೆ. ನಿಂಗೆ ಎಂತಾ ಮಾರಿಜಾತ್ರೆಗೆ ಹೋಗ ಅರ್ಜೆಂಟಾ..’ ಎಂದು ಗದರುತ್ತಿದ್ದ. ನಾನು ಕಿಸಕ್ಕೆನ್ನುತ್ತಿದ್ದೆ. ಹುಡುಗ ಹುಡುಗಿ ಸಾಲಾಗಿ ಇಂಜಿನಿಯರಿಂಗ್ ಓದಿದರು. ಅತ್ತೆಗಂತೂ ಸಂಭ್ರಮವೋ ಸಂಭ್ರಮ. ಬೆಂಗಳೂರಿನಲ್ಲಿ ಆಗಷ್ಟೆ ಐ.ಟಿ. ಕಣ್ಬಿಡುತ್ತಿತ್ತು. ಕೆಲಸ, ದುಡ್ಡು ಎರಡೂ ಕೈಗೆ ಹತ್ತಲು ತಡವಾಗಲಿಲ್ಲ. ದೂರವಾಗಿದ್ದು ಹಳ್ಳಿ ಮನೆಯ ಅಪ್ಪ-ಅಮ್ಮ ಮಾತ್ರ.
ಹುಡುಗ ಬೆಂಗಳೂರಿನಲ್ಲಿ ಜೊತೆಲಿದ್ದ ಹುಡುಗಿಯನ್ನೇ ಮದುವೆ ಆದ. ಅತ್ತೆ ಏನೋ ಹೇಳಲು ಬಾಯಿ ತೆರೆವ ಮೊದಲೇ, ಮಾವ ಸಂಭಾಳಿಸುತ್ತ ಹುಡುಗನಿಗೆ ‘ಆಯ್ತು ಮಾರಾಯಾ.. ನಿನ್ನಿಷ್ಟ. ಆದರೆ ಮನೆ ತೋಟ ಎಲ್ಲ ನೋಡ್ಕಳವಲಿ. ಈ ಬದೀಗೂ ಲಕ್ಷ್ಯ ಇಲೋ ಮತ್ತೆ’ ಎಂದಿದ್ದ. ಅದೇ ಮುಳುವಾಯಿತಾ? ಗೊತ್ತಿಲ್ಲ. ಮಗಳಂತೂ ಮೊದಲೇ ಹಳ್ಳಿಮನೆ ಬಿಡಲು ನಿರ್ಧರಿಸಿದ್ದಳಂತೆ. ಎಲ್ಲ ಮಲೆನಾಡ ಹುಡುಗಿಯರಂತೆ. ‘ಹೋಗಾ ಹಳ್ಳಿ ಬದೀಗ ಯಾರಿರ್ತಾರೆ…’ ಎಂದು ಬಿಟ್ಟಿದ್ದಳು. ನೋಡನೋಡುತ್ತಿದ್ದಂತೆ ಮಕ್ಕಳ ವರಸೆ ಬದಲಾಗಿತ್ತು. ವಯಸ್ಸಾಗುತ್ತಿದ್ದ ದಂಪತಿ ಮನಸ್ಸು ಮುರಿದು ಹೋಗಿತ್ತು. ಮಾವ ಇತ್ತೀಚೆಗೆ ಮಾತಾಡುವುದನ್ನೂ ಬಿಟ್ಟಿದ್ದ. ಮನೆಲೂ ಮಾತೇ ಆಡುತ್ತಿಲ್ಲವಂತೆ. ಯಾಕೋ ಒಮ್ಮೆ ನೋಡಿಯೇ ಬರೋಣ ಎನ್ನಿಸಿ ಹೊರಬಿದ್ದು ನಾನು ಮನೆಯ ಹೆಬ್ಬಾಗಿಲಿಗೆ ಕಾಲಿಟ್ಟಾಗಲೇ ಅನ್ನಿಸಿದ್ದು ಮನೆಯಿಂದ ಸಂಭ್ರಮ ಎನ್ನುವುದು ಒಮ್ಮೆ ಆಚೆ ಹೋಗಿಬಿಟ್ಟರೆ, ಹೇಗೆ ಗರ ಹೊಡೆಯುತ್ತದೆ ಎಂದು. ಅಂಗಳದಲ್ಲಿ ಅನಾಯಾಸವಾಗಿ ಅಡರುತ್ತಿದ್ದ ಲವಲವಿಕೆ ಸತ್ತು ಹೋಗಿತ್ತು.
ಇಬ್ಬರ ಕಣ್ಣಲ್ಲೂ ಆಸೆ ಬಿಡಿ, ಭರವಸೆಯ ಬೆಳಕೂ ಗೋಚರಿಸುತ್ತಿರಲಿಲ್ಲ. ಮುಖದಲ್ಲಿ ಬದುಕಿನ ಗಮ್ಯಗಳ ಕಡೆಗಿನ ನಿರೀಕ್ಷೆಯ ಆಸೆ ಕಮರಿದ್ದು ಸ್ಪಷ್ಟ. ಬದುಕಿನಲ್ಲಿ ಉತ್ಸಾಹ ಸೋರಿದ್ದರ ಸಂಕೇತ ಎನ್ನುವಂತೆ ಹಾರುಹೊಡೆದಂತಿದ್ದ ಅಂಗಳ, ಬೂದಿ ತುಂಬಿದ್ದ ಒಲೆ, ದೊಡ್ಡ ಅಡುಗೆ ಮನೆಯ ಮಧ್ಯದಲ್ಲಿ ಖಾಲಿ ಖಾಲಿ ಜಾಗ. ಮೂಲೆಯಲ್ಲಿ ಒಂದಿಬ್ಬರ ಬದುಕಿನ ಅನಿವಾರ್ಯವಾಗಿದ್ದ ಒಂದೆರಡು ಪಾತ್ರೆಗಳು. ಎಲ್ಲಕ್ಕಿಂತಲೂ ತೀರಾ ಘಾಸಿಗೊಳಿಸಿದ್ದು ಅವರಿಬ್ಬರ ಮೌನ. ತೀರಾ ಉಸಿರುಕಟ್ಟುವ ಅಸಹನೀಯ ಮೌನ ಆ ಮನೆಗೆ ಭರಿಸುವಂತಹದ್ದಾಗಿರಲಿಲ್ಲ. ಎಲ್ಲೆಲ್ಲೂ ಹರಿಯುತ್ತಿದ್ದ ಗೌಜಿಯ ಹೊನಲು ಇಲ್ಲದ್ದು ಅರಗಿಸಿಕೊಳ್ಳಲೇ ಕೆಲನಿಮಿಷ ಬೇಕಾದವು.
ಆದರೂ ಅತ್ತೆಯ ಮನಸ್ಸು ದೊಡ್ಡದು. ಒತ್ತಾಯದ ನಗು ಮೂಡಿಸಿಕೊಳ್ಳುತ್ತ, ‘ಕಷಾಯ್ ಮಾಡ್ತೀನಾ ಮಾಣಿ’ ಎನ್ನುತ್ತ ಎದ್ದರೆ ದೇಹ ಕೂಡ ಅದ್ಯಾವ ಪರಿ ಸೋತು ಹೋಗಿತ್ತೆಂದರೆ ಸುಮ್ಮನೆ ಮಾನವಾಕೃತಿಯೊಂದು ಚಲಿಸುವಂತೆ ಕಾಣಿಸುತ್ತಿತ್ತು. ಮಾವ ತಲೆ ಬಾಗಿಲಿಗೆ ಕೂತಿದ್ದವ ಎದ್ದು ಒಳ ಬಂದಿರಲಿಲ್ಲ. ಮಾತು ಮೊದಲೇ ನಿಲ್ಲಿಸಿಬಿಟ್ಟಿದ್ದ.
‘ಮಾಣಿ.. ನಮ್ಮುಡುಗ ಮನೆ ತೋಟ ನೋಡ್ಕಳದಿಲ್ಲ ಸರಿನೇ, ಆದರೆ ಆಗೀಗ ಬಂದು ಹೋಗಲೂ ಅಗದಿಲ್ಯೆ? ಇಷ್ಟೆಲ್ಲ ಓದಿಸಿ, ಹುಡುಗ್ರನ್ನ ಮುಂದಕ್ಕ ತಂದಿದ್ದು ನಮ್ಗೆ ತಿಂಗ್ಳು ತಿಂಗ್ಳು ದುಡ್ಡು ದುಗ್ಗಾಣಿ ಕೊಡಲಿ ಅಂತಲ್ಲ. ಬದುಕಲು ಕಲೀಲಿ ಅಂತಾ ಶಾಲಿಗೆ ಕಳಿಸಿದ್ದಾಗಿತ್ತು. ನಮ್ಮ ನಂತರ ಏನಾರ ಮಾಡಿಕೊಳ್ಳಲಿ. ಆದರೆ ಈ ತೋಟ ಬ್ಯಾಣಾ ಕಟ್ಟೊಕ್ಕೆ ನಿಮ್ಮಾವ ಜೀವಾನೆ ತೆಯ್ದಿದಾರೆ ಮಾಣಿ. ಅವ್ರು ಇರೋ ತಂಕಾ ಬಂದು ಹೋಗಿ ಮಾಡಿದ್ರೆ ಸಾಕಿತ್ತು. ನಾನಾದರೂ ಒತ್ತಾಯ ಮಾಡಲ್ಲ. ಆದರೆ ಇದನ್ನೆಲ್ಲ ನಾವಿದ್ದಾಗ್ಲೇ ಮಾರಿ ಬೆಂಗಳೂರಲ್ಲಿ ಅಸ್ತಿ ಮಾಡ್ತೀನಿ ಅಂತಾ ಹೊರಟಿದಾನಲ್ಲ ಸರಿನೇನೋ..? ನಿಮ್ಮಾವಂಗೆ ಈ ಭೂಮಿ ಅಂದ್ರೆ ಜೀವಾ. ಭೂಮಿ ಬೆಲೆ ಏನೂಂತ ಓದದಿರೋ ನಮಗೇ ತಿಳಿಬೇಕಾದರೆ ಇಷ್ಟೆಲ್ಲ ಚೆಂದ ಓದಿದ ಇವ್ನಿಗೆ ತಿಳಿಯದಿಲ್ವ..? ಈಗ ನಾವು ಹೂಂ ಅನ್ಲಿಲ್ಲ ಅಂತ ಮೂರು ವರ್ಷದಿಂದ ಮನೆಗೆ ಬಂದಿಲ್ಲ. ಮಗಳೂ ನನ್ನ ಕೇಳದೆ ಮಾರೋ ಹಂಗಿಲ್ಲ ಅಂತ ಕಾನೂನು ಮಾತಾಡ್ತಾಳೆ.
ಮಾಣಿ ನೀನೊಮ್ಮೆ ಅವರಿಬ್ರಿಗೂ ಮಾತಾಡ್ತೀಯಾ..? ನಾವು ಹೋದ ಮ್ಯಾಲೆ ಏನಾದರೂ ಮಾಡಿಕೊಳ್ಳಲಿ. ಆದರೆ ನಾವಿರುವಾಗಲೇ ಮಾರಿ, ನಮ್ಮನ್ನು ಸಿಮೆಂಟಿನ ಮನೇಲಿ ಕೂರಿಸೋದು ಬ್ಯಾಡಪ್ಪ. ಇನ್ನೆಷ್ಟು ದಿನಾನೋ ನಮ್ಮದೂ ಟೈಮಾಯ್ತು. ಆದರೂ ಮಕ್ಕಳ ಬಗ್ಗೆ ಬೇಜಾರಿಲ್ಲ. ಇಬ್ರಿಗೂ ಮೊದ್ಲಿನ ಹಂಗೆ ಬಂದು ಹೋಗಿ ಮಾಡ್ಕಂಡಿರೋಕೆ ಹೇಳು. ನನ್ನದೂ ಅಂತಿರೋ ಬಂಗಾರ, ಒಡವೆ ಎಲ್ಲ ಕೊಡ್ತೀನಿ ಅದನ್ನು ಒಯ್ಲಿ. ಆದರೆ ನಾವಿದ್ದಾಗ್ಲೇ ಭೂಮಿ ಮಾರಿ ಮಾವನ್ನ ಬದುಕಿದ್ದಾಗ್ಲೆ ಸಾಯಿಸ್ಬ್ಯಾಡ ಅಂತ ಹೇಳ್ತೀಯ.. ಅವ್ರಿಗೆ ಮಾತೇ ನಿಂತಂಗಾಗಿದೆ. ಹು..ಹಾ ಅನ್ನೋದು ಬಿಟ್ರೆ ಬೇರೆ ಮಾತೇ ಆಡ್ತಿಲ್ಲ..’ ಅತ್ತೆ ಮೆಲುದನಿಯಲ್ಲಿ ಬೇಡಿಕೊಳ್ಳುತ್ತಿದ್ದರೆ ಯಾಕೋ ಮುಳ್ಳಣ್ಣಿನ ಮುಳ್ಳು ಎದೆಯಲ್ಲಿ ಮುರಿದ ಸಂಕಟ. ಯಾಕೋ ನಾನು ಸೆಕೆಂಡ್ ಕ್ಲಾಸು ಬಂದಿದ್ದೇ ಒಳ್ಳೆಯದಾಯ್ತು ಅನ್ನಿಸಿತೊಮ್ಮೆ. ಹೊರಟವನೊಮ್ಮೆ ದಣಪೆಯಿಂದ ತಿರುಗಿ ನೋಡಿದೆ. ಬಾಗಿಲಲ್ಲಿ ನಿರೀಕ್ಷೆಯ ಸಣ್ಣ ಆಸೆಯಲ್ಲಿ ಕೈ.. ಸೆರಗು..ಎರಡೂ ಬಾಯಿಗಿಟ್ಟುಕೊಂಡು ಹೊಸ್ತಿಲ ಮೇಲೆ ಸಣ್ಣ ಆಕೃತಿ ಬಾಯಿ ಕಚ್ಚಿ ನಿಂತಿದ್ದು ಕಾಣಿಸಿತು. ನನಗರಿವಿಗೂ ಮೊದಲೆ ಬಿಕ್ಕಳಿಕೆ ಬಂತು..
ಕಾರಣ ..
ಅವಳು ಎಂದರೆ…
(ಲೇಖಕರು ಕಥೆ-ಕಾದಂಬರಿಕಾರರು)

No comments:

Post a Comment