Saturday, July 2, 2016

ತಲ್ಲಣಗಳ ಮಧ್ಯೆ ಕಟ್ಟಿಕೊಂಡಷ್ಟೇ ಬದುಕು..
ಈಗಲೂ ಹಣ, ಒಡವೆ, ಆಸ್ತಿ ಎನ್ನುತ್ತ ಹೆಣ್ಣಿನ ಮನೆಯವರ ಸಂಪತ್ತಿಗೆ ದುರಾಸೆಪಡುವವರಿಗೇನೂ ಕಮ್ಮಿ ಇಲ್ಲ. ಆದರೆ, ಹಾಗೆ ಎತ್ತಾಕಿಕೊಳ್ಳುವ ಕಾಸು ಕುಡಿಕೆ ಎಷ್ಟು ದಿನ ಬರುತ್ತೋ?
ದಪ್ಪ ಕನ್ನಡಕದ, ತನ್ನ ವೇಗಕ್ಕೆ ಯಾವ ರೀತಿಯಲ್ಲೂ ಸರಿ ಹೋಗದ ಹುಡುಗನನ್ನು ಭಾವನಾ, ಅವರಪ್ಪ ‘ಹೂಂ ಹುಡುಗ ಅಡ್ಡಿಲ್ಲ’ ಎಂದೊಡನೆ ಅದ್ಯಾಕೆ ಒಪ್ಪಿ ಮದುವೆಯಾಗಿದ್ದಳೋ ನನಗಿವತ್ತೀಗೂ ಅರ್ಥವಾಗಿಲ್ಲ. ಕಾರಣ ಆಕೆಯ ಬಿಸುಪು, ಪುಟಿಯುತ್ತಿದ್ದ ಜೀವನೋತ್ಸಾಹಗಳ ಎದುರಿಗೆ ಅವನೆಲ್ಲಿಯೂ ನಿಲ್ಲುತ್ತಿರಲಿಲ್ಲ. ನಾನು ಎರಡ್ಮೂರು ಸರ್ತಿ ಭೇಟಿಯಾದಾಗಲೂ ‘ಹೂಂ, ಹೆಂಗದೀರಿ? ಆರಾ..ಮಾ’ ಎಂದು ಎಳೆದೆಳೆದು ಮಾತಾಡುತ್ತಿದ್ದ ಹುಡುಗ ಸರ್ಕಾರಿ ನೌಕರಿಯಲ್ಲಿದ್ದಾನೆ ಮತ್ತು ತಿಂಗಳಿಗೊಮ್ಮೆ ಕಾಯಂ ಪಗಾರ ಬರ್ತದೆ ಎನ್ನುವುದೇ ಮದುವೆಯಾಗಲು ವ್ಯವಸ್ಥೆ ಕಲ್ಪಿಸಿದ್ದ ಆಯಾಮವಾಗಿತ್ತು.
ನಿಮಗೊಂದು ವಿಷಯ ಗೊತ್ತಿರಲಿ. ಹೊಸ ಪೀಳಿಗೆಯಲ್ಲಿ, ಸವಾಲೆಸೆಯುವ ಹುಡುಗರು ಬರುವವರೆಗೂ ಎಂಥದ್ದೇ ನೌಕರಿಯಾಗಲಿ, ಸರ್ಕಾರಿ ನೌಕರಿಯ ಅಳಿಯನೇ ಬೇಕೆನ್ನುವ ಜಮಾನಾದ ಮದುವೆಗಳನ್ನು ನಾನು ತುಂಬ ನೋಡಿದ್ದೇನೆ. ಅಂಥಲ್ಲಿ ಆಯ್ಕೆಯಿಲ್ಲದ ಸುಂದರಿಯರ ಮದುವೆಗೆ ಅಸೂಯೆ ಪಟ್ಟುಕೊಂಡು, ಚೆಂದದ ಹುಡುಗಿಯರು ಕರೆಂಟು ಹೊಡೆದ ಕಾಗೆಯಂತಹ ಹುಡುಗನೊಂದಿಗೆ (ಸರ್ಕಾರಿ ನೌಕರಿ ಇದ್ದಿದ್ದಕ್ಕೆ) ಹೋಗುವಾಗ ನಾವು ಹಿಂದಿನಿಂದ ‘ಕಂಬಳಿ-ಶಾಲು ಜೋಡ್ಯಾಗಿ ಹೊಂಟಾವು ನೋಡ್ರಲೇ’ ಎಂದಾಡಿಕೊಂಡು ಪರಸ್ಪರರ ಸಂಕಟ ಸಮಾಧಾನಿಸಿಕೊಳ್ಳುತ್ತಿದದ್ದು  ನೆನಪಿದೆ.
ಅಪ್ಪನಾದವನಿಗೆ ಮಗಳ ಬಾಳು ನೀಸೂರಾಗಿಸುವ ಉಮೇದಿ ಮತ್ತು ಅರ್ಜೆಂಟಿಗೆ, ಹುಡುಗಿಗೆ ಆಯ್ಕೆ ಕಮ್ಮಿ. ಹೆಣ್ಣು ಅನ್ನುವುದಷ್ಟೇ ಆಕೆಯ ಕ್ರೈಟಿರಿಯಾ ಆಗಿರುತ್ತಿತ್ತು. ಉಳಿದಂತೆ ಇಂಜಿನಿಯರು ಅಥವಾ ಇನ್ನಾವುದೇ ಹುದ್ದೆ (ಆಗ ಇವೆಲ್ಲಾ ದೊಡ್ಡ ಮನೆತನಕ್ಕೆ ಸೀಮಿತವಾಗಿದ್ದವು) ಭಾಳ ದೂರದ ಮಾತು. ಕನ್ನಡ ಸಾಲಿ ಮಾಸ್ತರು, ಕರೆಂಟು ಬಿಲ್ ಹರಿಯಾಂವ, ಗುಮಾಸ್ತರುಗಳು, ಶಾಲೆಯ ಕ್ಲರ್ಕು, ಬ್ರಾಂಚ್ ಆಫೀಸ್ ಪೊಸ್ಟ್‌ಮಾಸ್ತರು ಇಲ್ಲ ಬಟ್ವಾಡೆಗಾರ, ಸರ್ಕಾರದ ಸಣ್ಣಪುಟ್ಟ ನೌಕರಿಯಾಗಿರಲಿ, ಪಿಡಬ್ಲೂಡ್ಯಾಗ ಕಾರಕೂನ ಅದಾನ್ರಿ ಎಂದು ಬಿಟ್ಟರೆ ನಿಕ್ಕಿಯಾಗಲು ಬಾಕಿ ಎಲ್ಲಾ ಮಾಫಿ. ಹೆಚ್ಚಿನ ದರ್ಜೆಯವರು ಸಿಗುತ್ತಿರಲಿಲ್ಲವೆಂದಲ್ಲ. ಆದರೆ, ಸಂಭಾಳಿಸೋದು ಕೆಳವರ್ಗಕ್ಕೆ ಅಸಾಧ್ಯವಿತ್ತು. ವರದಕ್ಷಿಣೆ ನೇರವಾಗಿಲ್ಲದಿದ್ದರೂ, ಗಾಡಿ, ಗೋಢಾ ಕೇಳಿದರೆ ಎಲ್ಲಿಂದ ಪೂರೈಸುವುದು. ಹಾಗಾಗಿ ‘ಹುಡುಗಿ ಭೇಷದಾಳು. ಏನಾರೆ ಮಾಡ್ತಾಳ ಬಿಡ್ರಿ’ ಎನ್ನುವುದು ಸಹಜವಾಗಿತ್ತು. ಇದು ಕಳೆದ ದಶಕಕ್ಕೂ ಮೊದಲು ಸರ್ಕಾರಿ ನೌಕರಿಗಿದ್ದ ಬೇರೆಯದೇ ಕಿಮ್ಮತ್ತಾಗಿದ್ದರೆ, ಅದನ್ನೆಲ್ಲ ಗಲಬರಿಸಿದಂತೆ ಬದಿಗೆ ಸರಿಸಿದ ಕೀರ್ತಿ ಐ.ಟಿ. ರಂಗದ್ದು. ಆದರೆ ಅದೂ ಹೊಯ್ದಾಡುತ್ತಿದೆ. ಕಾಸು, ಕುಡಿಕೆ ಎರಡನ್ನೂ ಕಂಪನಿಗಳು ಪೂರೈಸಿದವಾದರೂ, ಕುರ್ಚಿಗೆ ಆತು ಕೂತು ಕೂತೇ ಹುಡುಗರ ಶಕ್ತಿದ್ರವ್ಯ ಒಣಗಿ ಹೋಗತೊಡಗಿತ್ತು. ಹಾಗಾಗಿ, ಡಿವೋರ್ಸುಗಳು ಗುಡ್ಡೆಯಾಗತೊಡಗಿದ್ದವು.
ತ್ತೀಚೆಗೆ ಮತ್ತದೆ ಸರ್ಕಾರಿ ನೌಕರಿ ಮುನ್ನೆಲೆಗೆ ಬರುತ್ತಿದೆ. ಒಂದು ದಶಕ ನೌಕರಿ ಸಾಮ್ರಾಜ್ಯವನಾಳಿದ ಐ.ಟಿ.ಯ ಭ್ರಮನಿರಸನವಾಗುತ್ತಿದ್ದಂತೆ ಎಷ್ಟು ತೊಂಭತ್ತು ತೆಗೆದರೆ ಸಾಕಾ? ಎಂದು ಸರ್ಕಾರಿ ನೌಕರಿಗೆ ಪರೀಕ್ಷೆ ಬರೆಯುವವರಲ್ಲಿಯೇ ಕಾಂಪಿಟೇಶನ್ನು ಪಂಸಂದಾಗತೊಡಗಿದೆ. ಕಾರಣ, ವಿದೇಶದಲ್ಲಿ ಕೆಲಸ ನಿರ್ವಹಿಸಿಯೂ, ಭೇಷ್ ಎನ್ನಿಸಿಕೊಂಡು ವಾಪಸ್ಸು ಬಂದ ಸ್ನೇಹಿತೆಯೊಬ್ಬಳು, ಇಲ್ಲಿನ ಐ.ಟಿ.ಗಳ ಒಳತುಮಲಗಳು, ಅನಾಹುತಕಾರಿ ಸಂಕಟಗಳು, ಒತ್ತಡ, ತಾರತಮ್ಯತೆಯಿಂದ ಈಗ ತನ್ನದೇ ಅಕಾಡೆಮಿ ಕಟ್ಟಿಕೊಂಡು ಮಕ್ಕಳಿಗೆ ಟ್ಯೂಶನ್ ಹೇಳುವ ವೃತ್ತಿ ಆಯ್ಕೆ ಮಾಡಿಕೊಂಡಿದ್ದಾಳೆಂದರೆ ಕೂತು ಲೆಕ್ಕಿಸಿ. ಹಾಗಾಗಿ ಎಲ್ಲಾ ರೀತಿಯ ಪದವೀಧರರಿಗೂ ಸರ್ಕಾರಿ ರಂಗದ ಆಸಕ್ತಿ ತೀವ್ರವಾಗುತ್ತಿದೆ. ಇಂಥ ಇತಿಹಾಸ ಹೊಂದಿರುವ ಕಾರಣ ‘ಹುಡುಗಂದು ಸರ್ಕಾರಿ ನೌಕರಿ. ಪಡಪೋಶಿ ಅಲ್ಲ. ಏಕದಂ ಶಾಣ್ಯಾ..’ ಎಂಬ ವಿಶೇಷಣಗಳೊಂದಿಗೆ ಬಂದಿಳಿದು ಭಾವನಾಳನ್ನು ಮದುವೆ ಮಾಡಿಕೊಂಡು ಹೋಗಿದ್ದಾರೆ. ಆದರೆ, ಚೆಂದದ ಸಂಸಾರಕ್ಕೆ ನೀರು ಬಿಡುವಂತೆ ಹಚ್ಚಿಕೊಡುವ ದುರ್ವರ್ತನೆ ಸಂಬಂಧಿಕರಲ್ಲಿ ಆಗಲೂ ಇತ್ತು, ಈಗಲೂ ಇದೆ. ‘ಹುಡುಗನಿಗೆ ಬಂಗಾರ ಕೇಳ್ರಿ, ಗಾಡಿ ಕೇಳ್ರಿ, ಹುಡುಗಂದು ಸರ್ಕಾರಿ ನೌಕರಿ. ದೀಪಾವಳಿಗೆ ದಾಗೀನ ಕೇಳ್ರಿ...’  ಎಂದು ಆಕೆಯ ಅತ್ತೆ-ಮಾವನನ್ನು ವರಾತಕ್ಕೆ ಸಜ್ಜುಗೊಳಿಸಿಬಿಟ್ಟಿದ್ದರು. ಮೊದ ಮೊದಲಿಗೆ ಭಾವಿಗೂ ಅವರಪ್ಪನಿಗೂ ಇಂಥಹದ್ದೆಲ್ಲ ಜೀರ್ಣಿಸಿಕೊಳ್ಳಲು ಆಗಿಲ್ಲ. ಅಮ್ಮನ ಸೆರಗಿನ ಹಿಂದೆ ನಿಂತ ಹುಡುಗ ಅದರ ಚುಂಗು ತಿರುವುತ್ತಾ ‘ಮತ್ತ ಮತ್ತ, ಈ ಸರ್ತಿ ಬಂಗಾರ ಜೋಡಿ ಬಂದರ ಮನಿಗೆ ಬಾ...’ ಎನ್ನುತ್ತ ಅಂತೂ ಜೀವನದ ದೊಡ್ಡ ಮಾತನ್ನು ಆಡಿದ್ದ. ಆದರೆ ಬಂಗಾರ ಬಿಡಿ ಸರಿಯಾಗಿ ಅನ್ನ ತಿನ್ನಲೂ ಆತ ಉಳಿಯಲಿಲ್ಲ. ಆವತ್ತೇ ಸಂಜೆ ಎಂ.80 ಮೇಲಿಂದ ಡಿಕ್ಕಿ ಹೊಡೆದು ಅಸುನೀಗಿದ್ದ. ಹಿಂದೆ ಕೂತಿದ್ದ ಭಾವಿಯ ಮೈಯ್ಯಲ್ಲಿ ಇದ್ದುದ್ದೇ ಮುಕ್ಕಾಲು ಕೆ.ಜಿ. ಮಾಂಸ, ದೀಡ (ಒಂದೂವರೆ) ಬಾಟ್ಲಿ ರಕ್ತ. ಎಲ್ಲಾ ಬಸಿದು ಮುದ್ದೆಯಾಗಿ ಹೋಗಿದ್ದಳು ಹುಡುಗಿ. ‘ಹುಡುಗಿ ಕಾಲ್ಗುಣ ಸರೀಗಿರಲಿಲ್ಲ. ಅದಕ್ಕ ನಮ್ಮಡುಗ ಬಲಿಯಾತ ನೋಡ್ರೆವಾ’ ಎಂದು ಅತ್ತೆ ಭೋರ್ಗರೆಯುತ್ತಿದ್ದರೆ, ಇದ್ದಬಿದ್ದವರೆಲ್ಲಾ ಬದುಕಿದ್ದ ಭಾವಿಯನ್ನು ಸಾಯಿಸಲು ಪ್ರಯತ್ನಿಸುತ್ತಿದ್ದರು ಮಾತಾಡಿ ಆಡಿಯೇ.
ಶಂಕರ್‌ರಾವ್ ಹಿಂದೆ ಮುಂದೆ ಯೋಚಿಸದೆ ಹುಡುಗಿಯನ್ನು ಗುಬ್ಬಚ್ಚಿಯಂತೆ ಎತ್ತಿ ಹೆಗಲಿಗೆ ಹಾಕಿಕೊಂಡು, ಊರಲ್ಲಿ ಚಿಕಿತ್ಸೆ ಕೊಡಿಸಿದ್ದಾರೆ. ಕೇಸರಿ ಬಣ್ಣದ ಪ್ಲಾಸ್ಟಿಕ್ ಬಕೀಟಿಗೆ ಹಚ್ಚಿದ ತೇಪೆಯಂತೆ ಕಂದು ಕಲರ್ ಕಾಲು, ಬೂದಿ ಬಣ್ಣದ ಕೈ ಪಟ್ಟಿಯೊಂದಿಗೆ ಭಾವಿ ಎದ್ದು ನಿಂತಿದ್ದಳು. ಆದರೆ ಮತ್ತೊಮ್ಮೆ ಆಕೆ ಗಂಡನ ಮನೆ, ಅವನ ನೆನಪು ಎರಡರ ಕಡೆಗೂ ತಿರುಗಿಯೂ ನೋಡಿರಲಿಲ್ಲ.
‘ಟೈಂ ಸರಿಗಿರಲಿಲ್ಲ ಅನ್ನೊದಕ್ಕಿಂತ, ಬದುಕ್ಕಿದ್ದ ನನ್ನನ್ನು ಮಾತಿನಲ್ಲೇ ಸಾಯಿಸಿಬಿಡ್ತಾರೇನೋ ಅಂದಕೊಂಡಿದ್ದೇ ಮಾರಾಯ. ಏನ್ ರೊಕ್ಕ ರೊಕ್ಕ ಅಂತಾ ಸಾಯ್ತಿದ್ರು. ಪುಣ್ಯಕ್ಕ ಕಾಲ ಮುರಕೊಂಡಾದರೂ ಸರಿ ಆರಾಮಾಗಿದಿನಿ. ಮನಶ್ಯಾಗೆ ಹೊಟ್ಟಿಗೆ, ಮೈಗೆ ತುಸು ಕಮ್ಮಿಯಾದರೂ ಚಿಂತಿಲ್ಲ. ಮನಸ್ಸಿಗೆ ಕಿರಿಕಿರಿ ಇರಬಾರದು ನೋಡು. ಅಪ್ಪ ಒಂದು ವರ್ಷ ನನ್ನ ಸೇವೆ ಮಾಡಿ ನನ್ನನ್ನು ಎಬ್ಬಿಸಿ ನಿಲ್ಲಿಸಿದ. ಆದರೆ, ನಾನು ಹಿಂಗೆ ಕಟಗಿ ಕಾಲೂರಿ ನಿಂತು ಮತ್ತ ನಮ್ಮಪ್ಪನ್ನ ಕೂಡ್ರಿಸಿಕೊಂಡು ಹೆಜ್ಡಿ ಗಾಡಿ ಓಡಿಸೋದನ್ನ ನೋಡೋದು ಅವನ ಹಣೆಬರಹದಾಗಿರಲಿಲ್ಲ.
ಪೂರಾ ಒಂದು ವರ್ಷ ನನ್ನ ಮ್ಯಾಲೇಳಾಕ ಬೀಡದ, ಜೀವ ಹೊಂಟಿದ್ದನ್ನ ಹಿಡಿದು ತಂದು ನಿಲ್ಸಿದಾ ಅಪ್ಪ. ಎಲ್ಲಾ ಸರಿಯಾತು ಅನ್ನುವಾಗ ಇಷ್ಟ ದಿನದ ಚಿಂತಿನೋ ಏನೋ ಅಪ್ಪಂಗ ಲಕ್ವಾ ಹೊಡಿತು. ಎಷ್ಟಾಗ್ತದ ಅಷ್ಟರೇ ಗುರುತು ಹಿಡೀಲಿ ಅಂತಾ ದಿನಾ ಟ್ರೈ ಮಾಡ್ತಿದಿನಿ. ಬ್ಯಾರೆದವ್ರನ್ನ ಬಿಡು ನಂದ ಗುರುತುನೂ ಹತ್ತೋದಿಲ್ಲ ಒಮ್ಮೊಮ್ಮೆ. ಪೂರ್ತಿ ಡಿಸ್ಕ್‌ಸ್ಕ್ರಾಚ್ ಆಗೇದ ನೋಡು. ಮಗಳ ಬದುಕು ಅಂದ್ರ ಅಪ್ಪಂದಿರಿಗೆ ಅದೆಂಥ ಸಂಭ್ರಮ ಅಂತಿ. ನಮ್ಮಪ್ಪ ಮಾಡಿದ ಅಂಥ ವಗಾತಿನೇ ನನ್ನ ಬದುಕಿಸಿದ್ದು. ಆದರೆ ಇವತ್ತ ಅಪ್ಪನ ಮುಖದಾಗ ಒಂದ ಗೆರಿನೂ ಅಲ್ಲಾಡೊದಿಲ್ಲ. ಮನಸಿನ್ಯಾಗ ಏನನ್ನಸ್ತದ ಗೊತ್ತಾಗೋದಿಲ್ಲ. ಯಾವಾಗಲಾದರೊಮ್ಮೆ ನೆನಪು ಬರ್ತದ. ಸುಮ್ಮನ ಕಣ್ಣಾಗ ನೀರು ಜಿನಗತಾವು. ಆವಾಗೆಲ್ಲ ಮೈ ಅಲುಗಾಡ್ತದ. ಆದರೆ ಹೇಳಲಿಕ್ಕೆ, ಮಾತಾಡಲಿಕ್ಕ ಆಗೋದಿಲ್ಲ. ಅಳು ಇನ್ನಷ್ಟು ಜೋರಾಗ್ತದ. ಅಂಥ ಟೈಮ್‌ನ್ಯಾಗೆ ಕನಿಷ್ಠ ನಾನು ಓಡಾಡೊ ಹಂಗಾಗೇನಿ, ಇನ್ನ ಆರಾಮ ಇರ್ತೇನಿ ಅಂತ ಅಪ್ಪನ ಒಳ ಮನಸ್ಸಿಗೆ ಗೊತ್ತಾಗಲಿ ಅಂತ್ಹೇಳಿ, ಕುಂಟ ಕಾಲಿಗೆ ಹುಕ್ಕ ಹಾಕ್ಕೊಂಡು ಕಾಲೇರಿಸಿಕೊಂಡು ಅವನ ಮುಂದ ಓಡಾಡೋದು, ನಿಂತ್ಕೊಂಡು ಮಾತಾಡೊದು ಎಲ್ಲಾ ಮಾಡ್ತೇನಿ. ಎಷ್ಟು ಮನಸಿನ್ಯಾಗ ಹೋಗತದೋ ದೇವರಿಗೆ ಗೊತ್ತು. ಮುಖಾ ಕಪ್ಪ ಮಾಡ್ಕೊಂಡು ಕಣ್ಣ ಮ್ಯಾಲೆ ಮಾಡಿ ಕುಂತು ಬಿಡ್ತಾನು. ನನಗಿನ್ನೇನೂ ಬ್ಯಾಡೊ ಮಾರಾಯ. ಬದುಕು ಆರಾಮ ಆಗ್ಯದ. ಹೆಂಗಾರ ಮಾಡಿ ಅಪ್ಪನ ಮನಸಿಗೆ ನಾನು ಆರಾಮಾಗಿ ಅದೀನಿ. ಬದುಕಿಗೆ ಚಿಂತಿ ಮಾಡಬ್ಯಾಡ ಅಂತ ತಿಳಿಸಬೇಕಲ್ಲ. ನನಗಂತೂ ಅವ್ವ ಹೋಗಿದ್ದೇ ಗೊತ್ತಿಲ್ಲ. ಆವಾಗಿಂದನೂ ಎಲ್ಲಾ ಅಪ್ಪನೇ ಮಾಡಿದ. ಈಗ ಮರತ ಹೋಗಿರೋ ತಲ್ಯಾಗೆ ನಂದ ಚಿಂತಿ ಶಾಶ್ವತವಾಗಿದ್ರ ಒಳಗೊಳಗ ಇನ್ನಷ್ಟ ಸಂಕಟ ಪಡ್ಕೊತ ಹಣ್ಣ ಆಗೋದು ಬ್ಯಾಡ ಅಂತ’ ಎನ್ನುತ್ತಾ ಕಾಲು ಸೇರಿಸಿ ಹುಕ್ಕು ಹಾಕಿಕೊಂಡು ಮತ್ತೆ ಶಂಕರ್‌ರಾವ ಎದ್ರಿಗೆ ನಿಂತು...
‘ಭಟ್ಟರ ಹುಡ್ಗ ಬಂದಾನು ಅಪ್ಪ. ನೋಡ್ರಿಲ್ಲೆ...’ ಎನ್ನುತ್ತಾ ಅಲ್ಲಾಡಿಸಿ ಪ್ರಯತ್ನಿಸುತ್ತಲೇ ಇದ್ದಳು ಭಾವಿ. ಅವರ ಮುಖ, ಕಣ್ಣು ಇತ್ತ ತಿರುಗಿದ್ದೇನೋ ನಿಜ. ಆದರೆ, ನಿಸ್ತೇಜದ ಚಲನೆಯಲ್ಲಿ ಜೀವದ ಸುಳಿವು ಕಾಣಲಿಲ್ಲ. ಕಾಲು ಗಂಟೆ ಪ್ರಯತ್ನಿಸಿ ಮತ್ತೆ ಸೋ-ಗೆ ಕೂತ ಭಾವಿಗೆ ಸುಮ್ಮನೆ ಬೆನ್ನು ಸವರಿ ‘ಅಪ್ಪಂಗ ಗೊತ್ತಾಗ್ತದ. ತಂದೀ ಜೀವ ಅದು. ಒಳಗೊಳಗ ತಿಳಿಕೋತದ. ಇದಕ್ಕಿಂತ ನೀನು ಇನ್ನೇನೂ ಮಾಡಕಾಗಲ್ಲ. ಅವ್ರ ಕೆಲಸ ಅವ್ರು ಮಾಡ್ಯಾರು. ನೀನು ಏನೂ ಕಮ್ಮಿ ಮಾಡ್ತಿಲ್ಲ. ಇದಕ್ಕಿಂತ ಹೆಚ್ಚೇನು ಬೇಕು. ಸುಮ್ನಿರು’ ಎಂದು ಬಳಬಳ ಅಳುತ್ತಿದ್ದ ಭಾವಿಗೆ ಸಮಾಧಾನಿಸುತ್ತಿದ್ದರೆ ಪೇಲವ ನಗು ನಕ್ಕಳು. ನನ್ನಲ್ಲಿ ಅದೂ ಕೂಡ ಇರಲಿಲ್ಲ.
ಕಾರಣ
ಅವಳು ಎಂದರೆ...

No comments:

Post a Comment