Friday, June 3, 2016

ಅವಳ ಪ್ರೀತಿ ಮಾತ್ರ ಯಾಕೆ ಅನೈತಿಕ ಅನ್ನಿಸಿಕೊಳ್ಳುತ್ತೆ...?

ಪುರುಷನೊಬ್ಬ ಮಾಡಿದರೆ ಅವನು ಗಂಡಸು ಎನ್ನುವ ಎಲ್ಲರಿಗೂ ಹೆಣ್ಣುಮಕ್ಕಳ ಪ್ರೀತಿ ಅನೈತಿಕ ಎಂದು ಯಾಕಾದರೂ ಅನಿಸುತ್ತದೆ.ಅಸಲಿಗೆ ಹಾಗೊಂದು ಸಂಬಂಧ ಕುದುರುವಿಕೆಯಲ್ಲಿ ಅವನೂ ಪಾಲುದಾರನೇ ಅಲ್ಲವೆ? ಯಾರೂ ಉತ್ತರಿಸುತ್ತಿಲ್ಲ!

ಒಂದಿಷ್ಟು ಅನುಭೂತಿ, ಕಾಳಜಿ ಮತ್ತು ಕಾಲಕಾಲದ ಸಹಾಯಕ್ಕೆ ಎಂದು ಆಪ್ತವಾಗುವ ಪುರುಷನನ್ನು ಹೆಣ್ಣು ಸುಲಭಕ್ಕೆ ನಂಬುತ್ತಾಳೆ, ನಂಬಬೇಕಾಗುತ್ತದೆ ಕೂಡಾ. ಕಾರಣ ತೀರಾ ಬೆಳಗ್ಗೆ ಬಸ್ ತಪ್ಪಿದೆ. ಒಂಚೂರು ಡ್ರಾಪ್, ಮಕ್ಕಳನ್ನು ರೆಡಿ ಮಾಡೋಕಾಗ್ತಿಲ್ಲ ಎಂದು ಲೇಟಾದರೂ ಕರೆದೊಯ್ಯುದ, ಮನೆಯಲ್ಲಿ ಎಲ್ಲವನ್ನೂ ತನ್ನ ಮೇಲೆ ಬಿಟ್ಟಾಕಿ ತನ್ನ ಕಂಫರ್ಟ್ಸ್
ಮಾತ್ರ ನೋಡುವ, ಹೆಂಡತಿಯ ಯಾವ ಅಗತ್ಯದ ಪ್ರಕ್ರಿಯೆಗಳಿಗೆ ದಿನವಹಿ ಒಡನಾಟದಲ್ಲಿ ಸಹಸ್ಪಂದನೆ ತೋರದ ವರ್ತನೆಗಳ ಜತೆಯಲ್ಲಿ ಏಗುವ ಹೆಣ್ಣುಮಕ್ಕಳಿಗೆ, ಇತರರು ತೋರಿಸಿ ಬೀಡಬಹುದಾದ ಅತಿ ಚಿಕ್ಕ ಕನ್ಸರ್ನೂ ಕೂಡಾ ಒಂದು ವಿಶ್ವಾಸ ಬೆಳೆಯಲು ಅನುವು ಮಾಡಿಕೊಡುತ್ತದೆ.
ಜತೆಗೆ ಕಾಲಕಾಲಕ್ಕೆ ಅವಳಿಗಾಗಿ ಸಮಯ ಮೀಸಲಿಡುವ ಅವನು, ಮನೆಯವರೂ ಆಗದಿದ್ದ ಸಹಾಯಕ್ಕೆ ಬಂದು ನಿಲ್ಲುತ್ತಿದ್ದಾನೆ ಎನ್ನುವ ಕಾರಣಕ್ಕೆ ಸಹಜವಾಗಿ ಮನಸ್ಸು ಕೊಂಚ ಮೃದುವಾಗಿ ಬಿಡುತ್ತದೆ. ನಿರಂತರವಾಗಿ ಅವಳೊಂದಿಗೆ ಸಂಪರ್ಕದಲ್ಲಿದ್ದು, ಆಕೆಯ ಮನಸ್ಸನ್ನು ಹೆಣೆದು ಬಿಡುವ ಗಂಡಸು ಅಂತಿಮವಾಗಿ ಆಕೆಯನ್ನು ತಿಂದು ಮುಗಿಸಿರುತ್ತಾನೆ. ಅದಾಕೆಗೆ ಗೊತ್ತಾಗಿ ತಾನು ಅವನ ಕುಕೃತ್ಯಕ್ಕೆ ಬಲಿಯಾದೆ ಎಂದರಿವಾಗುವ ಹೊತ್ತಿಗೆ ಕಾಲ ಮೀರಿರುತ್ತೆ. ಆದರೆ, ಅದರಿಂದ ಹೊರಬರುವ ಸಮಯಕ್ಕೆ ಜನರೆದುರಿಗೆ ಆಕೆಯ ವರ್ತನೆ ಅನೈತಿಕ ಎಂದಾಗಿರುತ್ತದೆಯೇ ಹೊರತಾಗಿ ಇಂತಹದ್ದೆಲ್ಲ ಅನಿವಾರ್ಯತೆಗಳ, ಸಣ್ಣಸಣ್ಣ ಹಿಂಸೆಗಳ ಮಧ್ಯದಲ್ಲಿ ಬದುಕು ಕಟ್ಟಿಕೊಳ್ಳುವ ಹಂತದಲ್ಲಿಯೂ ಪ್ರೀತಿ ಮೊಳೆದಿತ್ತು ಮತ್ತು ಅದನ್ನವನು ದೂರಾಲೋಚನೆಯಿಂದ ಟ್ಯೂನ್ ಮಾಡುತ್ತ ಆಕೆಯನ್ನು ಬಳಸಿಕೊಂಡಿದ್ದರೆ, ಆಕೆ ಅವನಿಂದ ಮೋಸಕ್ಕೊಳಗಾಗಿದ್ದಳು ಎಂದು ವಿಶ್ಲೇಷಿಸುವ ಬದಲಿಗೆ ಅನೈತಿಕ ಎಂದಾಗಿಬಿಡುತ್ತದೆ. ಹಾಗೆಯೇ ಹೆಣ್ಣುಮಕ್ಕಳೂ ಗಂಡಸರನ್ನು ಬಳಸಿ ಬಿಸಾಡುವುದಿಲ್ಲವೆಂದಲ್ಲ, ಅಗತ್ಯಕ್ಕೆ, ನೌಕರಿಗೆ, ದುಡ್ಡಿಗೆ, ಸಾಂಗತ್ಯಕ್ಕೆ ಹೀಗೆ ಹಲವು ರೂಪದಲ್ಲಿ ಬಳಸಿಕೊಳ್ಳುತ್ತಾರೆ. ಅದು ಬೇರೆ ಇರಲಿ. ಹಾಗಾಗಿ ಆಕೆಯದ್ದು ಅನೈತಿಕ ಎಂದೇ ವ್ಯಾಖ್ಯಾನಿಸುವುದಾದರೆ ಅವನ ಪ್ರೀತಿಯ ನಾಟಕ ಅಥವಾ ವ್ಯವಸ್ಥಿತ ಹುನ್ನಾರವನ್ನು ಏನೆನ್ನೋಣ?
ವಿಜಿ ಅವನನ್ನು ನಂಬಿಕೊಂಡು ಮುಂಬೈ ಸೇರಿದ್ದಳಲ್ಲ. ಆರಂಭದಲ್ಲಿ ಎಲ್ಲ ಚೆನ್ನಾಗೇ ಇತ್ತು. ಬೆಂಗಳೂರಿಗೆ ಬಂದವನು ವಾಪಸ್ ಹೋಗುವಾಗ ಈಕೆಯನ್ನೂ ಕರೆದೊಯ್ದಿದ್ದಾನೆ. ಇಬ್ಬರೂ ಪ್ರೀತಿಸಿದ್ದಾರೆ. ಮದುವೆ ಎಂದು ಅದೇನು ಮಾಡಿಕೊಂಡಿದ್ದರೋ, ವರ್ಷದ ಕೊನೆಗೆ ಯಾಕೋ ವಿಜಿಗೆ ಅನುಮಾನ ಶುರುವಾಗಿದೆ. ಒಮ್ಮೆ ಹೊರಗೆ ಹೋದರೆ ಗಂಡನಾದವ ಬರುತ್ತಲೇ ಇಲ್ಲ. ಏನಿದ್ದರೂ ಬಂದರೆ ಎರರ್ಡ್ಮೂರು ದಿನ ಇತ್ತ, ಹೋದರೆ ಅತ್ತ. ಕೆಲವೊಮ್ಮೆ ಟೂರ್ ಎಂದು ಹದಿನೈದು ದಿನವಾದರೂ ಪತ್ತೆ ಇಲ್ಲವಾಗತೊಡಗಿದ ಮೇಲೆ ವಿಜಿ ಎಚ್ಚರಕ್ಕೆ ಬಂದಿದ್ದಾಳೆ. ಬದುಕನ್ನು ಹದಗೆಡಿಸಿಕೊಳ್ಳುವ ಬದಲಿಗೆ ನಿಧಾನವಾಗಿ ಎಲ್ಲವನ್ನೂ ಸಮೀಕರಿಸಿದ್ದಾಳೆ.
ವಿಜಿ ಮೋಸಕ್ಕೀಡಾಗಿದ್ದಳು. ಅವನಿಗೆ ಆಗಲೇ ಮದುವೆ, ಮಕ್ಕಳೂ ಆಗಿ ಎಂಟ್ಹತ್ತು ವರ್ಷವಾಗಿದೆ. ಎರಡೂ ಕಡೆ ಸಂಸಾರ ನಿಭಾಯಿಸುತ್ತಿದ್ದಾನೆ. ಅಸಲಿಗೆ ವಿಜಿಗೂ ಹೋದ ಹೊಸದರಲ್ಲಿ ಕೆಲಸ ಮತ್ತು ಮುಂಬೈ ಮಹಾನಗರ ಪರಿಚಯವಾಗುವ ಹೊತ್ತಿಗೆ ಆರೆಂಟು ತಿಂಗಳು ಕಳೆದಿತ್ತಲ್ಲ. ಅವನೇ -ಟ್ ಕೊಡಿಸಿದ್ದ. ಆದರದು ತಾತ್ಪೂರ್ತಿಕ ಯೋಜನೆ. ಅವನು ಕೈಎತ್ತಿದ್ದ. ಬದುಕು ಬೀದಿಗೆ ಬಿದ್ದಿತ್ತು. ಎರಡು ವರ್ಷದಲ್ಲಿ ಅವನ ವಾಂಛೆ ಮುಗಿದು ಹೋಗಿತ್ತು, ಪ್ರೀತಿ ಎಲ್ಲಿಂದ ಹುಟ್ಟುತ್ತದೆ? ವಾಂಛೆಗೆ ಪ್ರೀತಿ ಬೇಕಿಲ್ಲ. ಅವನ ವಿಳಾಸ ಏನೂ ಗೊತ್ತಿರಲಿಲ್ಲ. ಅಕ್ಷರಶಃ ರಸ್ತೆಗೆ ಬಂದಿದ್ದ ವಿಜಿ ಎರಡನೇ ಯೋಚನೆ ಮಾಡದೆ ಬೆಂಗಳೂರು ಹಾದಿ ಹಿಡಿದಿದ್ದಳು. ಎಲ್ಲೋ ಕೆಲಸ, ಇನ್ನೇಲ್ಲೋ ಪಿ.ಜಿ., ಇನ್ಯಾವಾಗಲೋ ಬದುಕು ಎನ್ನುತ್ತ ಹೊಸದಾಗಿ ಕಟ್ಟುತ್ತ ಎದ್ದು ನಿಂತವಳಿಗೆ ಇನ್ನೊಬ್ಬ ಜತೆಯಾಗಿದ್ದಾನೆ. ಬದುಕಿನಲ್ಲಿ ಕಾಮನಬಿಲ್ಲು ಅರಳತೊಡಗಿತ್ತು. ವಿಜಿ ಗಂಭೀರವಾಗಿ ಬದುಕಿನಲ್ಲಿ ತೊಡಗಿಕೊಂಡಿದ್ದಳು. ಹಳೆಯ ಸ್ನೇಹಿತೆಯರು ಒಟ್ಟಾಗಿದ್ದಾರೆ. ಮಗಳೊಬ್ಬಳು ಕೈಗೆ ಬಂದು ಒಂದು ದಶಕದ ಕಾಲಾವಧಿಯಲ್ಲಿ ಗಂಡನಾದವನ ಮಾಮೂಲಿನ ಕಿರಿಕಿರಿಗಳ ಮಧ್ಯೆಯೂ ಬದುಕು ನಡೆಯುತ್ತಿದೆ. ಹೆಚ್ಚಿನ ಗಂಡಸರಿಗೆ ಒಂದೋ ಹೆಂಡತಿಯರ ಬಗ್ಗೆ ಅನಾದರವಿರುತ್ತದೆ, ಇಲ್ಲ ಅಕೆಯ ಮೇಲೆ ವಿನಾಕಾರಣ ಸಂಶಯವಿರುತ್ತದೆ. ಎಲ್ಲಿ ಹೋದರೂ, ಬಂದರೂ, ಸಮಯ, ಹಣದ ಲೆಕ್ಕಾಚಾರ, ಆಕೆಯ ಮೊಬೈಲನ್ನು ಕದ್ದು ಪರೀಕ್ಷಿಸುವುದು, ಎಲ್ಲಿ ಏನು ಮಾತಾಡುತ್ತಾಳೆ ಹೀಗೆ ಸಂಶಯಗಳಿಗೆ ಯಾವುದೇ ನೆಲೆ ಇಲ್ಲದ ಪಕ್ಕಾಗಿಬಿಟ್ಟಿರುತ್ತಾರೆ.
ಇದಕ್ಕೆ ಸರಿಯಾಗಿ ವಿಜಿಯ ಅದ್ಯಾವ ಸ್ನೇಹಿತೆ ಬಾಯಿಬಿಟ್ಟಳೋ ಅದೇನಾಯಿತೋ ಮೊದಲೇ ಅಲ್ಪಸ್ವಲ್ಪ ಗೊತ್ತಿದ್ದ ಆಕೆಯ ಮುಂಬೈ ವೃತ್ತಾಂತ ಇದ್ದಕ್ಕಿದ್ದಂತೆ ಭೂತಾಕಾರವಾಗಿ ಬೆಳೆದು ನಿಂತುಬಿಟ್ಟಿದೆ. ಮಧ್ಯವಯಸ್ಸು ದಾಟಿದ ನಂತರ ಹುಟ್ಟುವ ಗಂಡಸೊಬ್ಬನ ವಿಪ್ಲವಗಳ ಫಲಿತಾಂಶ ಅದು. ತೀವ್ರ ಆಸಕ್ತಿದಾಯಕ ಕಾಮ ಇದ್ದಕ್ಕಿದ್ದಂತೆ ಮೈಕೊಡುವಿರುತ್ತದೆ. ಬದುಕು ಮಗ್ಗುಲು ಬದಲಿಸಿದಂತೆ ಪರಿಣಾಮ ಬೀರುವ ವಯಸ್ಸು ಅವನ ಅಹಂನ್ನು ತಡೆದು ಅಳುವಾಗಿಸುವ ದಯನೀಯ ಸ್ಥಿತಿಗೆ ತಂದಿರುತ್ತದೆ. ಹೆಂಡತಿ ಇನ್ನೂ ನಿಗಿನಿಗಿ. ಮೊದಮೊದಲಿಗೆ ಹೆಂಗೋ ಸರಿ ಹೋಗಬಹುದು ಎನ್ನುವ ಒಳಗಿನ ಆಸೆಗೆ, ಏಣಿ ಒದ್ದಂತೆ ಐವತ್ತು ದಾಟುವ ಗಂಡಸರ ಕಾಮನ್ ಪ್ರಾಬ್ಲಮ್ಮು ಪ್ರಾಸ್ಟೆಟ್ ಊದಿಕೊಂಡು ಎದ್ದು ನಿಂತುಬಿಡುತ್ತದೆ. ಅತ್ತಲಿಂದ ಶುಗರ್ ಹಣಿಯುತ್ತಿರುತ್ತದೆ. ಶಕ್ತಿ ಸಾಕಾಗುತ್ತಿರುವುದಿಲ್ಲ. ಇದ್ದಕ್ಕಿದ್ದಂತೆ ಶಾಶ್ವತ ಎನ್ನಿಸುವ ಅಂಶಗಳೆಲ್ಲ ಕೈಕೊಡತೊಡಗಿದ್ದರ -ಸ್ಟ್ರೇಷನ್ನು ಹೆಂಡತಿಯ ಮೇಲಾಗುತ್ತದೆ. ಅದರಲ್ಲೂ ಇಂತಹದ್ದೊಂದು ಬೇಡದ ಇತಿಹಾಸ ಎದ್ದು ಕೂತುಬಿಟ್ಟರೆ ಆಗುವ ಅಪಸವ್ಯಗಳು ಅನಾಹುತಕಾರಿ. ಮನೆ ರಣ ರಂಪವಾಗತೊಡಗಿದೆ. ಇತಿಹಾಸ ವಿಜಿಯ ಬದುಕನ್ನು ಮತ್ತೊಮ್ಮೆ ತಿಂದುಹಾಕಿತ್ತು. ಅಲ್ಲೇ ಉಳಿದಿದ್ದರೆ ಮಗಳ ಬದುಕೂ ಬರಗೆಟ್ಟೀತು ಎಂದು ಇಳಿವಯಸ್ಸಿನ ಹೊಸ್ತಿಲಲ್ಲಿ ವಿಜಿ ಮೈಕೊಡವಿ ಎದ್ದು ನಿಂತಿದ್ದಾಳೆ.
ಇಂಥಾ ಹೊತ್ತಿನಲ್ಲಿ ಮಕ್ಕಳ ಓದು, ಭವಿಷ್ಯದ ಕಾಳಜಿಯ ಜೊತೆಯಲ್ಲಿ ಬದುಕಿನ ಬಂಡಿ ತುಂಬ ಬೇಗ ಹಳಿಗೆ ತರಬೇಕಾದ ಅನಿವಾರ್ಯತೆಗಳು ಹೆಣ್ಣುಮಕ್ಕಳನ್ನು ತರಹೇವಾರಿ ಕೆಲಸಕ್ಕೂ, ಯೋಜನೆಗೂ, ಹೂಂ ಅಂದುಬಿಡುವುದಕ್ಕೂ ಪ್ರೇರೇಪಿಸುತ್ತವೆ. ಏನಾದರೂ ಮಾಡಿ ಕೂಡಲೇ ಎದ್ದು ನಿಲ್ಲಬೇಕಿರುತ್ತದೆ. ಹೇಗೋ ಆದೀತು ಬಿಡು ಅನ್ನುವಂತೆಯೂ ಇರುವುದಿಲ್ಲ. ಹೋದಲ್ಲಿ ಬಂದಲ್ಲಿ ‘ಮನೆಯವರು ಏನು ಮಾಡ್ತಾರೆ ’ ಎಂದು ಆಪ್ತರಂತೆ ಅನಗತ್ಯವಾಗಿ ಕುಟುಂಬದ ಮಾಹಿತಿಯನ್ನು ಹೊರಗೆಳೆಯುವವರ ಮಧ್ಯೆ ಕಾಲೂರಿ ನಿಲ್ಲಬೇಕಿರುತ್ತದೆ. ‘ಅದರಲ್ಲೂ ಇಷ್ಟು ದಿನ ಎಲ್ಲಿದ್ರಿ? ಈಗ ಯಾಕೆ ಹೊಸ ಕೆಲ್ಸ ಶುರು ಮಾಡಿದ್ರಿ? ಯಾಕೆ -ಮಿಲಿ ಪ್ರಾಬ್ಲಂ ಆ..?’ ಎನ್ನುತ್ತಲೇ ಈಕೆ ಒಬ್ಬಂಟಿ. ಎಲ್ಲಿಯಾದರೂ ದಕ್ಕಿಯಾಳಾ, ಸಹಾಯದ ನೆಪದಲ್ಲಿ ಪಟಾಯಿಸಬಹುದಾ ಎನ್ನುವ ಆಯಕಟ್ಟಿನವರ ಮಾತು, ನಗೆಯಲ್ಲಿನ ಕಂಡೂ ಕಾಣದ, ನೀವು ಹೂಂ.. ಅಂದರೆ ಏನು ಸಹಾಯ ಮಾಡಬಹುದು ಎನ್ನುವ ಬೆರಳು ಮಾಡಿ ತೋರಿಸಲಾಗದ ಅಪಸವ್ಯಗಳ ಮಧ್ಯೆ ಅನಿವಾರ್ಯತೆಯ ಬದುಕಿಗೆ ಕೋಲು ಕೊಟ್ಟು ನಿಲ್ಲಿಸಬೇಕಿರುತ್ತದಲ್ಲ. ಇಂಥ ಹೊತ್ತಿನಲ್ಲೇ ಬೇಳೆ ಬೇಯಿಸಿಕೊಳ್ಳುವ ಗಂಡಸಿನ ಕೈಗೆ ಸಿಕ್ಕು ಪಾಪದ ಹೆಣ್ಣು ಖಾಲಿಯಾಗುತ್ತಿರುತ್ತಾಳೆ. ವಿಜಿ ಈಗ ಪಾಲಿಸಿ ಮಾಡಿಸುತ್ತ, ಇತರೆ ಬ್ಯಾಂಕಿಂಗ್ ಸರ್ವೀಸಿಗೆ ಕೈಯಿಕ್ಕಿ ಓಡಾಡುತ್ತಿದ್ದಾಳೆ.
‘ನನಗೇನೂ ಮೊದಲನೆ ಸಲ ಹಿಂಗಾತು ಅಥವಾ ಎರಡನೆ ಸಲಾನೂ ಬದುಕು ಕೈಕೊಡ್ತು ಎಂದು ಅಳ್ತಾ ಕೂರ್ಬೇಕಾಗಿರಲಿಲ್ಲ. ಆದರೆ ಪ್ರತಿ ಕಡೆನೂ ವಯಸ್ಸು, ಇಲ್ಲದಿರೋ ಆಕರ್ಷಣೆ, ನನ್ನ ಪರಿಸ್ಥಿತಿ ಎಲ್ಲ ಗೊತ್ತಿದ್ದೂ ಟ್ರೈ ಮಾಡ್ತರಲ್ಲ ಜನ, ಜೊತಿಗೆ ಅವರ ಕೆಲಸ ಆಗಲಿಲ್ಲಂದರ ಗೊತ್ತಿರೋ ಅಷ್ಟೆ ವಿಷಯಕ್ಕೆ ಕತೆ ಸೇರಿಸಿ ಎಲ್ಲ ಬದುಕು ಪೂರ್ತಿ ನಾನು ಅನೈತಿಕವಾಗೇ ಬದುಕಿದೆ ಅಂತಾರಲ್ಲ. ನನ್ನ ಟ್ರೈ ಮಾಡ್ತಿದ್ದ ಮಾಡ್ತಿರೋ ಗಂಡಸರ ಬದುಕು ಏನು ಹಂಗಾದರೆ? ಮುಂಬೈನಲ್ಲಿ ಹೀಗೆ ವಿಷಯ ಅಂತಾ ಗೊತ್ತಾಗ್ತಿದ್ದಂತೆ ಇನ್ನೊಬ್ಬಳ ಬದುಕಿಗೆ ನಾನು ಮುಳ್ಳಾಗಬಾರದು. ಆಕೆನೂ ನನ್ನಂಗೆ ಹೆಣ್ಣು ಅಂತ ಎದ್ದು ಬಂದೆ. ಹಂಗಂತ ನಾನು ತೀಟೆಗೆ ಹೋಗಿರ್ಲಿಲ್ಲ ಮಾರಾಯ. ಎರಡನೇ ಸರ್ತಿನೂ ಹಿಂಗಾಗುತ್ತೆ ಅಂತ ಯಾರಿಗೆ ಗೊತ್ತಿರುತ್ತೆ. ಬದುಕಿಗೊಂದು ದಿಕ್ಕು ಬೇಕಲ್ವಾ ? ಅದರೆ ಹೆಣ್ಣು ಬದುಕೋ ರೀತಿ ಮಾತ್ರ ಅನೈತಿಕವಂತೆ ಯಾಕೆ? ಅವಳ ಪ್ರೀತಿ ಲೆಕ್ಕಕ್ಕಿಲ್ಲ. ಇದಕ್ಕ ಉತ್ತರ ಯಾವನೂ ಕೊಡಲ್ಲ ಬಿಡು. ನೀನು ಸುಮ್ಮನೆ ಬರ್ದು ಬರ್ದು ಗುಡ್ಡೆ ಹಾಕೋದೆ ಆಗ್ತದೆ. ಇನ್ನೇನೂ ಆಗಲ್ಲ’ ವಿಜಿ ಅನಾಹುತಕಾರಿ ಕಹಿ ಸತ್ಯವನ್ನು ಅನಾವರಣಗೊಳಿಸುತ್ತಿದ್ದರೆ ನಾನು ಎರಡು ದಿನ ಮೌನವಾಗಿದ್ದೆ. ಆಕೆಯ ಯಾವ ಮಾತು ಸುಳ್ಳಿರಲಿಲ್ಲ.
ಕಾರಣ
ಅವಳು ಎಂದರೆ..

No comments:

Post a Comment