Friday, April 15, 2016

ಪಿಂಡ...!
ಹಾವೇರಿ ದಾವಣಗೇರಿಯನ್ನು ಇಬ್ಭಾಗ ಮಾಡಲೆಂದೇ ತುಂಗಭದ್ರೆ ಹರಿಯುತ್ತಿದ್ದರೆ, ರಾಘವೇಂದ್ರ ಮಠದಲ್ಲಿ ಶೇಖರ ಮತ್ತವನ ಸಹೋದರರು ನಾಡಿದ್ದು ಹದಿಮೂರನೆ ದಿನದ ತಿಥಿ ಊಟಕ್ಕೆ ಎನೇನು ಮಾಡಿಸ್ಬೇಕು ಎನ್ನುವ ಗಂಭೀರವಾದ ಚರ್ಚೆಗೆ ತೊಡಗಿದ್ದರು. "...ಕೇಸರಿ ಭಾತ್, ಕಾಳಪಲ್ಯೆ ಮಾಡಿದರ ಇಪ್ಪತ್ತೆರಡೆ ರೂ. ಜಾಸ್ತಿ..."ಎಂದು ಮ್ಯಾನೇಜರ್ ಕುಲ್ಕರಣಿ, ಇನ್ನೂರು ಊಟಕ್ಕೆ ಹತ್ತು ರೂಪಾಯಿ ಜಾಸ್ತಿ ಆದರೂ, ಮಠಕ್ಕೆ ಬರುವ ಆಮದನಿ ಸಾವಿರದಷ್ಟು ಆಚೀಚೆ ಆಗುತ್ತವೆ ಎಂದು ಲೆಕ್ಕ ಹಾಕುತ್ತಾ ಪುಸಲಾಯಿಸುತ್ತಿದ್ದರು. ಆದರೆ ಶೇಖರನ ಲೆಕ್ಕಾಚಾರವೇ ಬೇರೆ.
ಒಟ್ಟಾರೆ ನೂರು ಚಿಲ್ಲರ ಮಂದಿ ಮತ್ತು ಆಫೀಸಿನವರೂ ಸೇರಿದರೆ ಎರಡನೂರು ಜನ ಆಗಬಹುದು. ಜೊತೆಗೆ ಊರಕೇರಿಯಿಂದ, ಸಂಬಂಧಿಕರು, ನೆಂಟರಿಷ್ಟರು, ದಿನಕ್ಕೆ ಮೊದಲೆ ಬರುವವರು ಸೇರಿದರೆ ಮನೆಯಲ್ಲಿ ಹತ್ತುಸಾವಿರ ಖರ್ಚಾಗುತ್ತದೆ. ಅದಕ್ಕೆಲ್ಲಾ, 
"ಇಷ್ಟು ಖರ್ಚ ಆತು, ಒಟ್ಟೂ ಹದಿಮೂರು ದಿನಕ್ಕ ಇಷ್ಟ ಕೊಡ್ರಿ..."ಎಂದು ಸಹೋದರರನ್ನು ಕೇಳುವುದಾದರೂ ಹೇಗೆ..? ಅಣ್ಣತಮ್ಮಂದಿರು ದಿನದ ಖರ್ಚು ಹಂಚಿಕೊಳ್ಳೋಣ ಎಂದು ಹೇಳಿದ್ದರೂ ಈ ಎಲ್ಲಾ ಇತರೆ ಖರ್ಚು ಕೊಡುವವರು ಯಾರು..? ಅದಕಾಗೇ ಶೇಖರ ಆ ಲೆಕ್ಕವನ್ನೂ ಸರಿತೂಗಿಸುವ ನಿಟ್ಟಿನಲ್ಲಿ ಕುಲ್ಕರಣಿಗೆ ಲೆಕ್ಕದ ಚೀಟಿ ಹೆಂಗೆ ಬರೀಬೇಕು ಎಂದು ಮೊದಲೇ ಹೇಳಿಟ್ಟಿದ್ದ. ಅದರಲ್ಲಿ ಈ ಎಲ್ಲಾ ಖರ್ಚೂ ಸೇರಿಸಿದರೆ ಒಂದಿಷ್ಟು ತನಗೂ ಹಗುರಾಗುತ್ತದೆ. ಹಾಗಾಗೇ ಅದೇ ಚೀಟಿ ತೋರಿಸಿ ಇತರ ದಿನಗಳ ಖರ್ಚೂ ಹೊಂದಿಸಿಕೊಳ್ಳುವುದು ಅವನ ದೂರಾಲೋಚನೆ. ಅಷ್ಟಕ್ಕೂ ಅವನಿಗೂ ತನ್ನದೇ ಲೆಕ್ಕಾಚಾರಗಳಿದ್ದವು ಮತ್ತದು ಸುಳ್ಳೂ ಆಗಿರಲಿಲ್ಲ. ಅವನಿಗೇನೂ ಖರ್ಚು ಮಾಡಬಾರದು, ಯಾಕೆ ವೈದಿಕದ ಖರ್ಚು ಮಾಡ್ಬೇಕು..? ಎಂದೇನೂ ಇರಲಿಲ್ಲ. ಪದ್ಧತಿ ಪ್ರಕಾರ ಆಗಬೇಕೆನ್ನುವುದೂ ಸರಿನೇ. ಆದರೆ ಪೂರ್ತಿ ಇತ್ತ ಬೆಂಗಳೂರೂ ಅತ್ತ ಬೆಳಗಾಂವಿಗೆ ಮಧ್ಯದ ಹರಿಹರದ ಬಾತಿ ಗುಡ್ಡದ ಕೆಳಗಿದ್ದ ಶೇಖರನ ಮನೆಗೆ ಹೆಣ್ಣು ಮಕ್ಕಳು ಬಂದು ಹೋಗುವ ಅನುಕೂಲತೆಯಿಂದಾಗಿ ಇದೇ ತವರು ಮನೆಯಾಗಿಬಿಟ್ಟಿತ್ತು. ಉಳಿದಿಬ್ಬರ ಸಹೋದರರ ಮನೆಗಳಿಗೆ ಹೋಗುವುದು, ಅಲ್ಲೆಲ್ಲ ಜೈಲಿನಲ್ಲಿದ್ದಂತೆ ಇರುವುದು ಉಳಿದವರಿಗೂ ಅನಾನುಕೂಲ. ಜೊತೆಗೆ ಮೊದಲಿನಿಂದಲೂ ಅಪ್ಪ ಅಮ್ಮ ಆದಿಯಾಗಿ ಸಂಸಾರ ಹೆಚ್ಚು ಕಡಿಮೆ ಬೆಳೆದದ್ದು ಇಲ್ಲಿಯೇ.
ಅಲ್ಲದೆ ಹವಾ ನೀರು ಕೂಡಾ ಭೇಷ ಎನ್ನಿಸಿ, ನಿವೃತ್ತಿ ಆದ ಮೇಲೆ ನಾರಾಯಣಾಚಾರ್ಯರು ದೊಡ್ಡ ಮಗನ ಮನೆ ಬಿಟ್ಟು ಇಲ್ಲೆ ಇರ್ತೆನಿ ಅಂದಿದ್ದರು. ಅಲ್ಲದೆ ತಮ್ಮ ಕೊನೆಯ ಒಂದೆರಡು ದಶಕಗಳ ಸರ್ವೀಸಿಗಾಗಿ ಅಲ್ಲಿಯೇ ಹತ್ತಿರದ ಕರೂರಿನಲ್ಲಿದ್ದರು ಎನ್ನುವುದೂ ಮೋಹ ಅವರಿಗೆ. ಹಾಗಾಗೇ ನಿವೃತ್ತಿ ಜೀವನ ನಡುವಿನ ಮಗ ಶೇಖರನೊಟ್ಟಿಗೆ ಎಂದಾಗಿಬಿಟ್ಟಿತ್ತು.
ಆಚಾರ್ಯರು ಮನೆ ಕಟ್ಟಿಸುವುದಕ್ಕೆಂದು ಬಾತಿ ಹತ್ತಿರ ಸಾಕಷ್ಟು ದೊಡ್ಡ ಜಾಗವನ್ನೇ ಕೊಂಡಿದ್ದರು. ಸಾಕಷ್ಟು ಸುದ್ದಿಗೆ ಸಿಕ್ಕಿದ್ದ ಹಿರಿಯ ಬ್ರಾಹ್ಮಣ. ಮನೆ ಮಠಗಳ ವಾಜ್ಯದಲ್ಲೂ, ಸಮಾಜದಲ್ಲಿ ಮುಖ್ಯಸ್ಥನ ಪಾತ್ರವನ್ನೂ ವಹಿಸುವುದೂ ಇತ್ತು. ಆದರೆ ಅದ್ಯಾಕೊ ಶೇಖರನೂ ಸೇರಿದಂತೆ ಅವರ ಮಕ್ಕಳ್ಯಾರೂ ಅವರಂತೆ ಗಡಸಾಗಿ ಬೆಳೆಯಲಿಲ್ಲ ಎಂದು ಕರೂರಿನಿಂದ, ಚಿಕ್ಕಬಾತಿವರೆಗೂ ಜನ ಮಾತಾಡಿಕೊಳ್ಳುತ್ತಿದ್ದರು. 
"ಹೆ..ಹೇ.. ಆಚಾರ್ರ ಮಕ್ಕಳು ಯಾಕೋ ಪುಕ್ಕಲಾದುವು ಹೇಳ್ರಿ...ಏನೆಂದರೂ ಆಚಾರ್ರ ಹಂಗ ಜಿಗಟ ಬರಲಿಲ್ಲ..." ಎನ್ನುವುದು ಸಹಜವಾಗಿತ್ತು. 
ಅವರು ಬಾತಿಗುಡ್ಡದ ಮನೆಗೆ ಬಂದಾಗಿನಿಂದಲೂ ವಾರದಲ್ಲಿ ಒಂದೆರಡು ಸಲವಾದರೂ ಬಂದು ಅವರ ಯೋಗ ಕ್ಷೇಮ ವಿಚಾರಿಸಿಕೊಂಡು ಹೋಗುತ್ತಿದ್ದ, ಕರೂರಿನ ಹತ್ತಿರದ ಬೋಗಿಬೈಲಿನ ಚಂದ್ರು ವಯಸ್ಸಿನಲ್ಲಿ ಚಿಕ್ಕವನಾದರೂ, ಒಂದರ್ಥದಲ್ಲಿ ಕೊನೆಕೊನೆಗೆ ಮನೆ ಮಕ್ಕಳಿಗಿಂತಲೂ ಹೆಚ್ಚೆ ಅಚಾರ್ರ ಸೇವೆಗೆ ನಿಂತಿದ್ದ. ಅದಕ್ಕಾಗೇ ಚಂದ್ರುಗೆ ಯಾವಾಗಲೂ ಮನದಲ್ಲೇ ಕೈ ಮುಗಿಯುತ್ತಿದ್ದ ಶೇಖರ. ಕಾರಣ ತೀರ ಅಗತ್ಯಕ್ಕೆ ಮನೆಯ ಕೆಲಸಕ್ಕೆ ಕರೆದಾಗೆಲ್ಲ ಬಂದು ಹೆಗಲು ಕೊಡುತ್ತಿದ್ದವನು ಅವನೇ ಆಗಿದ್ದ.
ಇದೆಲ್ಲಾ ಹಿನ್ನೆಲೆಯಲ್ಲಿ ಮನೆಯ ಹತ್ತಿರವೇ ಇದ್ದ ಕರೂರಿನಿಂದ, ಹರಿಹರದ ಬಾತಿಯ ಮನೆಗೆ ಅಚಾರ್ರು ಬಂದು ಉಳಿದ ಮೇಲೆ ಆಗೀಗೆಲ್ಲಾ ಕಾಯಿಲೆ ಕಸಾಲೆ ಆದಾಗ ಬರುತ್ತಿದ್ದ ಜನವೋ ಜನ. ಮೊದಲೇ ಸಮಾಜದಲ್ಲಿ ಗುರುತಿಸಿಕೊಂಡಿದ್ದವರು. ಆಗೆಲ್ಲಾ ಅದರದ್ದೇ ಆದ ಖರ್ಚು ಶೇಖರನಿಗೆ ಇದ್ದೆ ಇರುತ್ತಿತ್ತು. ಮಕ್ಕಳು ಮರಿಗಳು ಉಣ್ಣುವುದಕ್ಕೆ ಶೇಖರನಿಗೆ ಯಾವ ಅಳಕೂ ಇರದಿದ್ದರೂ ಅಷ್ಟಕಷ್ಟೆ ಎನ್ನುವ ದುಬಾರಿಯ ದಿನದಲ್ಲಿ ಅವನಿಗೆ ಒಳಗೊಳಗೆ ಅಳುಕಾಗುತ್ತಿತ್ತು. 
ಇನ್ನು ಮನೆಯ ಅಕ್ಕತಂಗಿಯರಿಗೂ ತಾನೇ ಮಾಡಬೇಕು. ಯಾಕೆಂದರೆ ಬೆಂಗಳೂರಿನಲ್ಲಿರೋ ದೊಡ್ಡಣ್ಣನ ಕಡಿಗೂ, ಬೆಳಗಾಂವಿನ ಚಿಕ್ಕವನ ಕಡಿಗೂ ಹೋಗುವುದು ಅಷ್ಟಕ್ಕಷ್ಟೆ ಆಗಿದ್ದರಿಂದ ಎಲ್ಲರ ಠಿಕಾಣಿ ಇಲ್ಲೇ ಆಗುತ್ತಿತ್ತು. 
ಹೀಗಾಗಿ ವರ್ಷದುದ್ದಕ್ಕೂ ನಡೆಯುವ ಮನೆ ಮಠದ ಖರ್ಚು ಇರುತ್ತದೆಂದು ಉಳಿದಿಬ್ಬರು ಸಹೋದರರು "...ಸಾಕಷ್ಟು ಖರ್ಚು ಇರುತ್ತೆ ಶೇಖರಾ" ಎಂದು ತಾವಾಗಿಯೇ ಕೈಯೆತ್ತಿ ನಾಲ್ಕಾಣೆ ಕೊಟ್ಟವರಲ್ಲ. ಬದಲಾಗಿ ಯಾರಾದರೂ ಮಕ್ಕಳು ಬಂದರೆ ತನ್ನದೆ ಗಾಡಿಯಲ್ಲಿ ಕೂರಿಸಿಕೊಂಡು ಹೋಗಿ, ಕಬ್ಬಿನಹಾಲು ಕುಡಿಸಿ ನೂರು ಚಿಲ್ಲರೆ ರೂಪಾಯಿಯಲ್ಲಿ "..ಮಾಮ ಐಸ್‍ಜ್ಯೂಸ್ ಕೊಡಿಸಿದ..."ಎನ್ನುವ ಶಭಾಶಗಿರಿ ಮಾತ್ರ ತಪ್ಪದೆ ಪಡಿತಿದ್ರು. ಆದರೆ ಇದನ್ನೆಲ್ಲಾ ಆಡುವಂತಿಲ್ಲ ಅನುಭವಿಸುವಂತಿಲ್ಲ. "..ವರ್ಷಕ್ಕೊಮ್ಮೆ ಊರಿಗ ಬಂದರ ಊಟಕ್ಕ ಹಾಕೋದಕ್ಕ ಆಗೋದಿಲ್ಲೇನು.." ಎನ್ನುವ ಮಾತು ಬೇರೆ. 
ಇನ್ನು ಆಗೀಗ ಜಡ್ಡು ಜಾಪತ್ರಿ ಎಂದು ಅಪ್ಪನನ್ನು ದವಾಖಾನಿಗೆ ಸೇರಿಸಿದಾಗೆಲ್ಲಾ ಓಡಾಡೋದು, ಔಷಧಿ, ಹಣ್ಣು ಹಂಪಲು ಬರುವವರು ಹೋಗುವವರು ಇದೆಲ್ಲಾ ಕೃಷ್ಣನ ಲೆಕ್ಕ. ಕೊನೆ ಕೊನೆಯ ಎರಡ್ಮೂರು ವರ್ಷವಿಡಿ ತನ್ನೊಂದಿಗೆ ಚಂದ್ರು ಎನ್ನುವ ಆಪತ್ಬಾಂಧವ ಜತೆಯಾಗದಿದ್ರೆ ಅಪ್ಪನ ಸೇವೆ ಮಾಡುವುದೋ, ಅರ್ಧ ಕಟ್ಟಿ ನಿಲ್ಲಿಸಿದ್ದ ಮನೆ ಮುಗಿಸುವುದೋ, ಇಂಜಿನಿಯರಿಂಗ್ ಓದುತ್ತಿದ್ದ ಹುಡುಗನ ಕಡೆ ಗಮನ ಕೊಡುವುದೋ.. ಎಂದು ಶೇಖರ ಒದ್ದಾಡಿ ಹೋಗುತ್ತಿದ್ದ. ಹೇಳಿದರೆ ಹಿರಿಯ ಅಣ್ಣ "..ರಜಾ ಇಲ್ಲ. ಮಕ್ಳ ಪರೀಕ್ಷೆ.." ಎಂದು ಕಾರಣ ಎದುರಿಗಿಡುತ್ತಿದ್ದ. ಇನ್ನೊಬ್ಬ ಸಹೋದರ, "..ಇಲ್ಲಿಂದ ಒಬ್ಬಾಕಿನ್ನ ಕಳಸೂ ಬದಲಾಗಿ ಶೇಖರಣ್ಣಾ. ನಾಳೆ ಮುಂಜಾನಿ ಬಸ್ಸಿಗೆ ಬಂದು ನನ್ನ ಹೆಂಡತಿನ್ನ ಕರ್ಕೊಂಡು ಹೋದರ ನೀನಗ ನಾಲ್ಕ ದಿನ ಮನೀ ಕಡಿಗೆ ಹೆಲ್ಪ ಆದೀತು ನೋಡು..." ಎನ್ನುವ ಆಗದ ಹೋಗದ ಮಾತುಗಳ ಸಬೂಬು. ಇಲ್ಲಿಂದ ಬೆಳಗಾಂವಿಗೆ ಹೋಗಿ ಆಕೆಯನು ಕರೆತರುವ ಕೆಲಸಕ್ಕಿಂತ ದೊಡ್ಡ ಅಬ್ಬೆಪಾರಿತನ ಬೇರೇನಿದ್ದೀತು..? ಅದೇ ಅವನಿಗೂ ಬೇಕಿದ್ದುದು. ಅದಕ್ಕೆ ಇಲ್ಲ ಎನ್ನಲರದೆ ಅಡ್ಡ ಗೋಡೆಯ ಮೇಲೆ ದೀಪ ಇಟ್ಟು ಹಗುರಾಗುತ್ತಿದ್ದರು. ಅದಕ್ಕಿಂತಲೂ ಚೂರುಪಾರು ಕೈಕಾಸಿನ ಖರ್ಚಲ್ಲಿ ಊರಿನ ಹುಡುಗ ಚಂದ್ರುವನ್ನೇ ನಂಬಿಕೊಳ್ಳುತ್ತಿದ್ದ ಶೇಖರ. ವೇಗದ ಬದುಕಿನಲ್ಲಿ ಎಲ್ಲರಿಗೂ ಅವರ ಬದುಕಿನ ಪ್ರಿಯಾರಿಟಿಗಳೆ ಮುಖ್ಯ. 
ಹಿಂದೆ ಕರೂರಲ್ಲಿ ಅಪ್ಪ ಕೆಲಸಕ್ಕಿದ್ದಾಗಿಂದಲೂ ಅವನಿಗೆ ಚಂದ್ರುವಿನ ಕುಟುಂಬ ಪರಿಚಯ. ಚಂದ್ರು ಸಣ್ಣವನಿದ್ದಾಗಿನಿಂದಲೂ ಅಪ್ಪನ ಸುತ್ತಮುತ್ತಲೇ ಆಡಿಕೊಂಡು ಬೆಳೆದ ಹುಡುಗ ಎಂಬ ಕಕ್ಕುಲಾತಿ. ಮನೆ ಕಡೆಗೂ ಅಷ್ಟಾಗಿ ಕೈಹಿಡಿಯುವವರೂ ಇಲ್ಲದ್ದರಿಂದ ಆಗೀಗ ಅಪ್ಪನ ಸಹಾಯ ಅವರಿಗೂ ಆಗಿದ್ದೀತು. ಅದಕ್ಕೆ ಹುಡುಗ ಕರೂರಿನಿಂದ ಹಿಡಿದು ಇಲ್ಲಿವರೆಗೂ, ಯಾವಾಗಂದರೆ ಆವಾಗ "..ಮನಿ ಕಡೆ ಒಂಚೂರು ಕೆಲಸೈತಿ..ಬಾರೋ ಚಂದ್ರು.." ಎನ್ನುತ್ತಿದ್ದಂತೆ ಸಿಕ್ಕಿದ ಟ್ರಕ್ಕೋ, ಅಟೋರಿಕ್ಷಾದ ತುದಿಗೆ ನಿಂತಾದರೂ ಬಂದು ಅಚಾರ್ಯರ ಸೇವೆಗೆ ನಿಲ್ಲುತ್ತಿದ್ದ. ಅವನಿಗೇನೂ ನೌಕರಿ ಅಂತಾ ಇರಲಿಲ್ಲವಾದರೂ, ಬದುಕಿಗೆ ಊರ ಕಡೆಯಲ್ಲೊಂದು ಕಿರಾಣಿ ಅಂಗಡಿ ನಡೆಸುತ್ತಿದ್ದ. ಅಪ್ಪನ ಮುಖಾ ನೋಡಿಲ್ಲದ ಪರದೇಶಿ. ಅಚಾರ್ರು ಕಾಯಿಲೆ ಬಿದ್ದಾಗಲೆಲ್ಲಾ ಬೇರೆ ಯಾವ ದಾರಿಯೂ ಇಲ್ಲದಿದ್ದಾಗ ಶೇಖರ ಕರೆ ಮಾಡಿ, 
"..ಚಂದ್ರು. ಬಾಪ್ಪ ಅಪ್ಪಗ ಸಿಟಿ ಕ್ಲಿನಿಕ್ಕಿಗೆ ಸೇರ್ಸಿದಿವಿ. ಹಗಲು ನೋಡ್ಕೊ... ರಾತ್ರಿ ನಾ ಬರ್ತೆನೆ.. ಎನ್ ಕೊಡೊದು ಕೊಡ್ತೇನಿ..." ಎಂದು ದೈನೇಸಿಯಾಗಿ ಕೇಳುತ್ತಿದ್ದ. ಬರುಬರುತ್ತಾ ಇದು ಖಾಯಂ ಆಗಿಬಿಟ್ಟಿತ್ತು.
"..ಬಿಡ ಶೇಖರಣ್ಣಾ ಹಂಗ್ಯಾಕಂತಿ...ನನಗೇನು ಕೆಲಸ ಬೊಗಸಿಯಾ..?ವೈನಿಗ ಊಟದ ಡಬ್ಬಿ ಮಾಡಲಿಕ್ಕೆ ಹೇಳು. ನಾನು ದವಾಖಾನಿ ಹೋಗಿ ಅಲ್ಲೆ ಇರ್ತೇನಿ. ಶೇಖರಣ್ಣಾ ನೀನ ಅವ್ವಂಗ ಒಂದ ಫೆÇೀನ್ ಮಾಡಿ ಹೇಳಿಬಿಡು. ಇಲ್ಲಂದ್ರ ನಾ ಪ್ಯಾಟಿಗೋಗಿ ಚೈನಿಗೆ ಬಿದ್ದೇನಿ ಅಂದ್ಕೊತಾಳ.."ಎನ್ನುತ್ತಿದ್ದ.
"..ಬಿಡೊ ನಿನ್ನಂಥಾ ಹುಡುಗನ ಹಂಗ್ಯಾಕ ಅಂತಾಳ ನಿಮ್ಮವ್ವ..." ಎಂದು ಉತ್ತರಿಸುತ್ತಿದ್ದ ಶೇಖರ. ಯಾವ ಜನ್ಮದ ಬಂಧವೋ ಹುಡುಗ ಮತ್ತು ಅವನಮ್ಮ ಸಕಾಲಕ್ಕೆ ಕುಟುಂಬಕ್ಕೆ ದಕ್ಕುತ್ತಿದ್ದರು. 
ಶೇಖರನ ಹೆಂಡತಿಗೆ ಅಪೆಂಡಿಕ್ಸ್ ಆದಾಗ "..ಯಾರರ ಹೆಣ್‍ಮಕ್ಳು ಇದ್ರ ಬರಾಕ ಹೇಳ್ರಿ ದವಾಖಾನಿಗೆ ಆಪರೇಶನ್ ಹೊತ್ತಿಗೆ ಬೇಕಾಗ್ತದ..."ಎಂದು ಡಾ.ನಾಯಕ ಹೇಳುತ್ತಿದ್ದರೆ, ಎಲ್ಲಾ ಬಿಟ್ಟುಬಂದು ನಿಂತು ಸೇವೆ ಮಾಡಿದ್ದು ಚಂದ್ರುವಿನ ತಾಯಿನೇ. ಕೆಳಮಧ್ಯಮ ವರ್ಗದ ಇಂಥಾ ಸಮಸ್ಯೆಗಳು ಆಕೆಗೂ ಹೊಸದಲ್ಲ. ಇದ್ದೊಬ್ಬ ಮಗನನ್ನು ಸಾಕಿಕೊಂಡು, ಸಿಮೆಂಟು ಫ್ಯಾಕ್ಟ್ರಿಲಿ ಕೆಲಸ ಮಾಡಿ, ರಾತ್ರಿಶಾಲೆ ನಡೆಸುತ್ತಾ, ಅಗೀಗ ಅಂಗಡಿನೂ ನಡೆಸುತ್ತಾ ದಿನಕಳೆಯುತ್ತಿರುವ ಹೆಣ್ಣು ಮಗಳು. ಕಷ್ಟಗಳೇನೂ ಹೊಸದಲ್ಲ. ಅಂಥಾ ಸಂದರ್ಭದಲ್ಲೆಲ್ಲ ದೇಖರೇಖಿ ನೋಡುತ್ತಿದ್ದ ಅಪ್ಪ ಹಿಂದೆಲ್ಲಾ ಎಷ್ಟೊ ಜನರಿಗೆ ಮಧ್ಯಸ್ಥಿಕೆ ಅದೂ ಇದೂ ಎಂದು ಸಹಾಯವಾದದ್ದು ಇತ್ಯಾದಿ ಕಾರಣಗಳಿಂದಲೇ ಈಗ ಹೀಗೆಲ್ಲಾ ಉಪಯೋಗಕ್ಕೆ ಬರುತ್ತಿದೆ ಎಂದುಕೊಳ್ಳುತ್ತಿದ್ದ ಶೇಖರ. ಒಡಹುಟ್ಟಿದವರ ಬಗ್ಗೆ ಮೈ ಉರಿದರೂ ಅದು ಅಸಹಾಯಕ ಸಿಟ್ಟು. ಅದಕ್ಕಾಗೇ ಪ್ರತಿಯೊಂದನ್ನು "..ರಸೀದಿಯಾಗೇ ಲೆಕ್ಕಾ ಬರದ್ ಕೊಡ್ರಿ ಕುಲ್ಕರ್ಣಿ.." ಎಂದು ಮಠದ ಮೆನೇಜರಿಗೆ ನೆನಪಿಸಿದ್ದ. ಅಪ್ಪಿತಪ್ಪಿ ದೊಡ್ಡ ಮೊತ್ತ ಸೇರಿಸದೆ ಉಳಿದು ಹೋಗಿ, ಬಂದ ರಸೀತಿಯಲ್ಲೇ ಎಲ್ಲರೂ ಪಾಲು ಮಾಡಿದರೇ..?
ಇನ್ನು ಮನೆಗೆ ಬರುವ ಹೆಣ್ಣು ಮಕ್ಕಳಂತೂ"..ದಿನಾಲು ಮಾಡೊದು ಇದ್ದೇ ಇರ್ತದೆ, ಇಲ್ಲೂ ಏನು ಕೆಲಸ ಮಾಡೊದು..?.."ಎಂದು ಕಾಲುಚಾಚುತ್ತಿದ್ದರೆ ಶೇಖರನ ಹೆಂಡತಿ ಉರಿದುರಿದು ಬೀಳುತ್ತಿದ್ದರೂ, ಸಮಾಧಾನ ಹೇಳಿ ಮನೆಯಲ್ಲೇ ಇದ್ದು ಕೆಲಸಕ್ಕೆ ಸಹಾಯ ಮಾಡುತ್ತಾ ಜೊತೆ ಕೊಡುತ್ತಿದ್ದವಳು ಚಂದ್ರುವಿನ ಅಮ್ಮನೆ. ಹೀಗೆ ಮಧ್ಯಮ ವರ್ಗೀಯ ತಿಕ್ಕಾಟ ಮತ್ತು ಮುರಿದುಕೊಳ್ಳಲಾಗದ ಸಂಬಂಧಗಳ ಅವಿನಾಭಾವ ಮನಸ್ಥಿತಿಯ ತೇರು ತೆವಳುತ್ತಿರುವಾಗಲೇ ಅದು ನಡೆದಿತ್ತು.
ಆವತ್ತು ಎಂದಿನಂತೆ ಬೆಳಿಗ್ಗೆದ್ದು ವಾಕಿಂಗ್ ಹೋಗಿದ್ದ ಆಚಾರ್ರು ಬಾತಿ ಬುಡದಲ್ಲಿನ ಚಹಾದಂಗಡಿಯಲ್ಲಿ ಕೂತು ಇನ್ನೇನು ಕಪ್ಪು ಕೈಗೆತ್ತಿಕೋಬೇಕು ಎನ್ನುವಷ್ಟರಲ್ಲಿ ಅಲ್ಲೇ ಗೋಣು ಚೆಲ್ಲಿದ್ದರು. ಅಲ್ಲಿಂದ ಮೂರು ದಿನ ಹೆಗಡೆಕಟ್ಟಿ, ದಾವಣಗೇರಿ, ಚಿಗಟಗೇರಿ ಅಂತೆಲ್ಲಾ ಆಸ್ಪತ್ರೆಗಳ ಓಡಾಟ ನಡೀತು. ಬರೋಬ್ಬರಿ ಎಂಟು ದಿನಾ ದವಾಖಾನಿ, ನಂತರದ ಹದಿನೈದು ದಿನ ಆಚಾರ್ರು ಹಾಸಿಗೆಯಲ್ಲೇ ಎಲ್ಲಾ ಮಾಡಿಕೋತ ದಿನ ಎಣಿಸಿದರು. ದೇಹ ಹಾಸಿಗೆಗೆ ಬಿದ್ದು ಶಿಥಿಲಗೊಳ್ಳತೊಡಗಿ ಅಲ್ಲಲ್ಲಿವೃಣ ಆಗತೊಡಗಿತ್ತು. ಚಂದ್ರು ನಿಂತು ಮೈಗೆಲ್ಲ ಪೌಡರ್ ಹಾಕಿ ಸರಿ ಮಾಡಿ ಮಲಗಿಸುತ್ತಿದ್ದ. ಸಲೈನ್ ಬಾಟ್ಲಿ ಚಾಲು ಇತ್ತು. ಕೊನೆಗೊಮ್ಮೆ ಶೇಖರ ಕರೆ ಮಾಡಿದ. 
"...ಚಂದ್ರು ಹತ್ತಿರದವರೂ ಯಾರೂ ಇಲ್ಲಪ್ಪ. ಅಪ್ಪ ಯಾಕೋ ಹಿಂದ್ಮುಂದ ಮಾಡ್ಲಿಕ್ ಹತ್ಯಾನ ಬಾ.." ಎನ್ನುತ್ತಿದ್ದಂತೆ ಚಂದ್ರು ಮತ್ತವನ ಅಮ್ಮ ಕರೂರಿನಿಂದ ಶೇಖರನ ಮನೆಗೆ ಬಂದು ತಲುಪಿದ್ದರು. ಎಲ್ಲಾ ನಿಂತು ನೋಡುವಾಗ ಕಣ್ತೆರದೆ ನಾರಾಯಣಾಚಾರ್ಯರು ಶೇಖರನ ಕೈ ಹಿಡಿದು ಅದಕ್ಕೆ ಆಸರೆಯಾಗಿ ಹಿಡಿದಿದ್ದ ಇನ್ನೊಂದು ಕೈ, ಚಂದ್ರುವಿನ ಕೈಯಲ್ಲಿದ್ದಂತೆ ಗೋಣು ಚೆಲ್ಲಿದ್ದರು. ಕಂಗಾಲಾದ ಶೇಖರನಿಗೆ ಸಮಾಧಾನ ಹೇಳುತ್ತಾ, ಸಕಲ ಕಾರ್ಯಭಾರವನ್ನೆಲ್ಲಾ ಊರಹುಡುಗ ಚಂದ್ರು ದೊಡ್ಡವನಂತೆ ನಿಂತು ಸಂಭಾಳಿಸಿದ. ಮನೆಯ ಹೆಂಗಸರ ಬೆಂಬಲಕ್ಕೆ ಅವರಮ್ಮ ನಿಂತು ಇಲ್ಲೆ ಬಿಡಾರ ಹೂಡಿದ್ದರು. ಎಲ್ಲೆಡೆಯಿಂದ ಜನಗಳು ಬಂದಿಳಿದ್ದರು. 
ಆದರೆ ಅಪ್ಪ ಹೋದ ಸಂಕಟಕ್ಕಿಂತ ಎಲ್ಲರಿಗೂ ರಜಾ ಹಾಕಿ ಬಂದುದೆ ಕಷ್ಟವೂ ದೊಡ ಸಾಧನೆಯೂ ಆಗಿತ್ತು. ಹೇಗೊ ಮೂರ್ನಾಲ್ಕು ದಿನ ರಜ ಹೊಂದಿಸಿಕೊಂಡು ಮಕ್ಕಳನ್ನು ಶಾಲೆಗೆ ರಜ ಮಾಡಿಸಿ, ಮುಂದೆ ಬರೆಯಬೇಕಾದ ನೋಟ್ಸಿನ ಮುನ್ನೆಚರಿಕೆವಹಿಸಿಕೊಂಡು, ತಂತಮ್ಮ ಆಫೀಸಿನ ಕೆಲಸ ಕಾರ್ಯಗಳನ್ನು ಹೋದ ಕೂಡಲೆ ಹೇಗೆ ಕೂತು ನಿರ್ವಹಿಸಬೇಕಾಗುತ್ತದೆಂದೂ ಚರ್ಚಿಸುವುದೇ ಮೊದಲೆರಡು ದಿನದ ಅತಿ ದೊಡ್ಡ ಅಜೆಂಡಾ ಆಗಿ, ಎಲ್ಲರೂ ಸೇರಿದಾಗಲೊಮ್ಮೆ ತಂತಮ್ಮ ಪ್ರವರ ಬಿಚ್ಚತೊಡಗಿದ್ದು ನೋಡಿ, ಶೇಖರನಿಗೆ ಇವರೆಲ್ಲರ ವರಾತಕ್ಕಿಂತ ಚಂದ್ರುನ್ನ ಬಿಟ್ಟರೆ ಬೇರಾರಿಲ್ಲ ಎನ್ನಿಸಿ ಅವನನ್ನೆ ಗಾಡಿಗೆಳೆದುಕೊಂಡು ಓಡಾಡತೊಡಗಿದ್ದ. ಅವನೂ ಕೂಡಾ,
"..ಶೇಖರಣ್ಣ ಏನ ಕೆಲಸ ಬಂದರೂ ಹೇಳು. ಮನ್ಯಾವ್ರು ಯಾರೂ ಇಲ್ಲ ಅನ್ಕೊಬ್ಯಾಡ. ನಾನು ಅವ್ವ ಬರತೇವಿ.." ಎಂದು ಕೈ ಸೇರಿಸಿದ್ದ. ಆದರೆ ಮನೆಗೆ ಬಂದವರಿಗೆ ಅದೆಲ್ಲವೂ ಕಾಣಿಸುತ್ತಲೇ ಇರಲಿಲ್ಲ. ಸೋದರ ಮಾವ "..ಬಂಡ್ಯಾ ಮಾಮ.."ಬಂದವನೇ ಶರಬತ್ತು ಕುಡಿದು, ದಿವಾನ ಮಂಚದ ಮೇಲೆ ಕೂತು, ರಾಜಮನೆತನ ಎನ್ನುವಂತೆ ದರ್ಬಾರು ನಡೆಸತೊಡಗಿದ್ದ. ಮಾತಿಗೊಮ್ಮೆ ಶೇಖರ ಅದು ತರ್ಸು.. ಇದು ತರ್ಸು.. ಎನ್ನುತ್ತಲೇ " ದಾವಣಗೇರಿ ಸಣ್ಣಕ್ಕಿ ಮಸ್ತ ಇರ್ತದ ಒಂದೈದ ಕಿಲೋ ತರಿಸಿಟ್ಟಿರು ಹೋಗುವಾಗ ಬೇಕಾಗ್ತದ.." ಎಂದು ಅಜ್ಞಾಪಿಸುತ್ತಿದ್ದ. ಕೊನೆಗೊಮ್ಮೆ ಎಲ್ಲಾ ದಿನಗಳು ಮುಗಿದು, ಹದಿಮೂರನೆಯ ದಿನ ತುಂಗ ಭದ್ರಾತೀರದ ರಾಯರ ಮಠಕ್ಕೆ ಹೋಗಿ, ಮೂರೂ ಜನ ಒದ್ದೆ ಬಟ್ಟೆಯಲ್ಲೇ ಸವ್ಯ, ಅಪಸವ್ಯದೊಂದಿಗೆ, ಪಿಂಡ ಕಟ್ಟಿ, ತಲೆಮಾರನ್ನು ಆಹ್ವಾನಿಸಿ ಹೆಬ್ಬೆರಳು ತಿರುಗಿಸಿ ಅಘ್ರ್ಯ ನೀಡಿದರು. 
ಬಂದವರೆಲ್ಲಾ ಕಡಲೆ ಬೀಜ ಅರ್ಧ ಅಗಿದು ಉಗಿದದ್ದೂ ಆಯಿತು. ಮೇಲೊಂದು ಮುದ್ದೆ ಮಾಡಿ ಕಂಭದ ಮ್ಯಾಲೆ ಕಾಗೆಪಿಂಡ ಇಟ್ಟು ಕಾಯತೊಡಗಿದರು. ಅಚಾರ್ರು "..ಎಲ್ಲಾರೂ ಮನಸಿನ್ಯಾಗೆ ಬೇಡ್ಕೊಳ್ರಿ. ಅಪ್ಪಂದು ಏನಾರ ಇಚ್ಚಾ ಬಾಕಿ ಇದ್ರ ಅವ್ರಿಗೆ ಕೇಳಿಸ್ತದೆ. ಅದು ಅವರ ಮನಸ್ಸಿಗೆ ತಾಗಿದರ, ಒಪ್ಪಿಗಿ ಆದರ ಕೂಡಲೆ ಕಾಗಿ ಪಿಂಡ ಒಯ್ತದೆ..."ಎನ್ನುತ್ತಿದ್ದಂತೆ ಎಲ್ಲ ಕಣ್ಮುಚ್ಚಿ ಕೈ ಮುಗಿದರು. ಮನದಲ್ಲೇ ಬೇಡಿಕೊಂಡು" ಅಪ್ಪ ನಿನ್ನ ಮಕ್ಕಳು ನಾವು ತಪ್ಪಾಗಿದ್ದರ ಹೊಟ್ಯಾಗ ಹಾಕ್ಕೊಳ್ರಿ " ಎಂದು ತಲೆಬಾಗಿ ನಿಂತರು. ಎಲ್ಲಿಂದಲೋ ಬಂದ ಕಾಗೆ ಪುರ್ರಂತ ಆಚೀಚೆ ಹಾರಿದಂತೆ ಮಾಡಿತಾದರೂ ಪಿಂಡದ ಹತ್ತಿರ ಸುಳಿಯದೆ ಡೌಲು ಮಾಡಿತು. ಅಷ್ಟು ದೂರದ ಪಾಗಾರದ ಕಟ್ಟೆ ಮೇಲೆ ಕೂತು ಕೊಕ್ಕು ಸವೆಸತೊಡಗಿತು.
ಮಠದ ಆಚಾರ್ಯರೆ ಮುಂದಾಗಿ ನಿಂತು ಆಗಸದತ್ತ ಮುಖ ಮಾಡಿ, ಒಮ್ಮೆ ಕೈಲಿದ್ದ ನೀರನ್ನು ಆಗಸಕ್ಕೇರಚಿ, "..ಯಜಮಾನರೆ.. ನಿಮ್ಮ ಹೆಣ್ಣು ಮಕ್ಕಳನ್ನ ಮನೆಯವರೆಲ್ಲ ಮನೆಯಲಿದ್ದವರು ಚೆನ್ನಾಗಿ ನೋಡ್ಕೊತಾರೆ. ವರ್ಷಕ್ಕೊಮ್ಮೆ ಹೋಳಿಗಿ ಬಡಿಸಿ, ಮುತ್ತೈದೆಯರಿಗೆ ಸೀರೆ, ಕುಬುಸ ಅದೂ ಇದೂ ಅ0ತಾ ಕೈಲಾದ್ದು ಉಡುಗೊರೆ ಕೊಟ್ಟು, ಅವರ ಕಷ್ಟ ಸುಖಕ್ಕೆಂತ ಕರೆದಾಗ ಹೋಗಿ ನಿಂತು ಸಹಾಯ ಮಾಡಿ, ಕೈಲಾದ್ದು ನಿಭಾಯಿಸಲು ನಿಮ್ಮ ಗಂಡು ಮಕ್ಕಳು ಎಲ್ಲಿದ್ದರೂ ಬರ್ತಾರೆ, ಕಾಯಿಲೆ ಕಸಾಲೆ ಅಂತಿದ್ದಾಗ ಅಣ್ಣ ತಮ್ಮಂದಿರೂ ಕೂಡಿ ನಿಭಾಯಿಸ್ತಾರೆ. ನಿಮ್ಮ ಮುಂದಿನ ಯಾವ ತಲೆ ಮಾರಿನಲ್ಲೂ ಮೂರೂ ಹೊತ್ತೂ ಯಾವ ಅಪವಾದಕ್ಕೆ ಎಡೆ ಕೊಡದಂತೆ ನಿಮ್ಮ ಎಲ್ಲಾ ಕಾರ್ಯಗಳನ್ನು, ನೀವು ನಡೆಸಿಕೊಂಡು ಬಂದಿದ್ದ ಎಲ್ಲಾ ಪದ್ಧತಿಗಳನ್ನೂ, ಮನೆಯವರಿಗೆ ಮಠದವರಿಗೆ ಮಾಡಬೇಕಾದುದನ್ನು ಮಟ್ಟಬೇಕಾದುದನ್ನು ನಿರ್ವಂಚನೆಯಿಂದ ಮಾಡ್ತಾರೆ. ನೀವು ಸರ್ವ ಸಂತೃಪ್ತಿಯಿಂದ ಪಿಂಡ ಸ್ವೀಕಾರ ಮಾಡ್ಬೇಕು..." ಎಂದು ಎಲ್ಲರ ಪರವಾಗಿ ಕೈ ಮುಗಿದು ಜೋರಾಗಿ ನುಡಿದರು. ಅನುಮೋದಿಸುವಂತೆ ಎಲ್ಲರೂ ಹೌದೌದು ಎಂದು ಗಲ್ಲ ಬಡಿದುಕೊಂಡರು. ಆ ಕಡೆ ನಿಂತಿದ್ದ ಚಂದ್ರು, ಅವರಮ್ಮ ಕೈಯೆತ್ತಿ ನಮಸ್ಕರಿಸಿ ಹೌದೌದು ಎಂದರೂ ಮತ್ತೆ ಮೇಲೇರಿದ ಕಾಗೆ ಕೊಕ್ಕಿನಿಂದ ಆಚೀಚೆ ಮೈ ಕೆದರಿಕೊಂಡು ಅಲ್ಲೇ ಕುಳಿತಿತು ವಿನ: ಪಿಂಡದ ಕಡೆಗೆ ಸುಳಿದಾಡಲಿಲ್ಲ. 
ಇದನ್ನೆಲ್ಲಾ ನೋಡುತ್ತಿದ್ದ ಶೇಖರ ಯಾವ ಬೇರೆ ದಾರಿನೂ ತೋಚದೆ ಹತ್ತು ನಿಮಿಷ ಕಾಯ್ದು, ಒಬ್ಬೊಬ್ಬರಾಗೇ ಬೇಡಿಕೊಳ್ಳುವುದು ಒಳ್ಳೆಯದು ಆಗ ಯಾರದ್ದು ಏನಾದರೂ ಕಸರು ಮನಸಲಿ ಉಳಿದಿದ್ದರೂ ಸರಿ ಹೋಗುತ್ತದೆ ಎಂದು ಯೋಚಿಸುತ್ತಾ ನುಡಿದ.
"..ಹೋಗ್ರೆ...ಮೂರು ಜನಾ ಏನಾದರೂ ಮನಸಿನಲ್ಲಿ ಉಳಿದಿದ್ರೆ ಬೇಡಿಕೊಳ್ರಿ. ಅಪ್ಪನ ಮನಸ್ಸಿಗೆ ಭೇಜಾರಾಗುವಂಗೆ ಏನಾದ್ರೂ ಇದ್ರೆ ತಪ್ಪಾಯ್ತು ಅಂತಾ ಕೇಳಿಕೊಳ್ರಿ." ಎಂದು ತಂಗಿಯರಿಗೆ ನೇರವಾಗೇ ಹೇಳಿದ. ಕಿರಿಯವರಿಬ್ಬರೂ ಹೋಗಿ ಬೇಡಿಕೊಂಡು"...ಶೇಖರಣ್ಣನ ಚೆನ್ನಾಗಿ ನೋಡ್ಕೊತೆವೆ ಆಗೀಗ ಬಂದು ಹೋಗಿ ಮಾಡ್ತಿವಿ. ನಾವೆಲ್ಲಾ ನಿನ್ನ ಬಗ್ಗೆ ಯಾವತೂ ಬೇಜಾರಾಗಿಲ್ಲ ಅಪ್ಪ.." ಎಂದೆಲ್ಲ ಕೈ ಬಾಯಿ ತಟ್ಟಿಕೊಂಡರೂ ಏನೂ ಜರುಗಲಿಲ್ಲ. ಮೊದಲನೆಯ ಅಣ್ಣನೂ ಹೋಗಿ ಕಂಭಕ್ಕೆ ನೆತ್ತಿ ಬಡದು, ಕೈ ಕಾಲು ಬಿದ್ದು ಐದಾರು ನಿಮಿಷ ಕಾಲ ದಿಂಡುರುಳಿ ಬಿದ್ದೇ ಇದ್ದ. ಏನೂ ಆಗಲಿಲ್ಲ. ದೊಡ್ಡಕ್ಕ ಮಾತ್ರ ತನ್ನನ್ನು ಯಾರಾದರೂ ಕರೆಯಲಿ ಎನ್ನುವ ಹಮ್ಮಿನ ನಿರೀಕ್ಷೆಯಲ್ಲಿ ಕೂತಿದ್ದು ಶೇಖರನಿಗೇನೂ ಹೊಸದನ್ನಿಸದೆ, ಅವಳ ನಡೆನುಡಿಗಳ ಧಿಮಾಕಿನ ಅರಿವೂ ಇದ್ದುದರಿಂದ ತಾನಾಗೇ ಅವಳ ಕಡೆಗೆ ನೋಡಿದ. ತನ್ನಿಂದಾದರೆ ಮಾತ್ರವೇ ಆಗುತ್ತೆ ಎನ್ನುವ ಬಿಂಕದಲ್ಲಿ ಕೂತಿದ್ದ ಆಕೆ,
"..ಅಪ್ಪಂಗ ನಾನಂದ್ರ ಭಾಳ ಪ್ರೀತಿ. ಈಗ ನೋಡ್ರಿ.." ಎನ್ನುತ್ತಾ ಹೋಗಿ ನಮಸ್ಕರಿಸಿದಳು. ಪಿಂಡದ ಕಂಭಕ್ಕೆ ನೆತ್ತಿ ಬಡಿದು ಮೇಲಕ್ಕೆದ್ದು ನೋಡಿದಳು. ಇದ್ದುದರಲ್ಲೇ ಹತ್ತಿರವಿದ್ದ ಕಾಗೆ ಇನ್ನಷ್ಟು ದೂರ ಹಾರಿತು. ಮುಖ ದುಮ್ಮಿಸಿಕೊಂಡು ಬರುತ್ತಿದ್ದುದು ತಮಾಷೆಯಾಗಿದ್ದರೂ, ಅದ್ಯಾಕೊ ಆ ಹೊತ್ತಿನಲ್ಲೂ ಅವಳ ಪರಿಸ್ಥಿಗೆ ನಗು ಉಕಿಬಂದರೂ ತಕ್ಕ ಸಮಯವಲ್ಲ ಎಂದುಕೊಳ್ಳುತ್ತಾ ಶೇಖರ ತುಟಿಕಚ್ಚಿದ. ಎಲ್ಲರೂ ಪಿಂಡದ ಪಕ್ಕದ ಮರದ ನೆರಳಿಗೆ ನಿಂತು ಆಗಲೇ ಅರ್ಧ ತಾಸು ಮೇಲಾಗಿತ್ತು. ಕಾಗೆ ಮುಟ್ಟದೆ ಊಟ ಮಾಡುವಂತಿಲ್ಲ. ಮಠದ ಅಚಾರ್ಯರೆ ಮುಂದಾಗಿ
"..ಶೇಖರಪ್ಪಾ ಇನ್ಯಾರರ ಅದಾರೇನು..?ನಿಮ್ಮ ಭಾವಂದಿರು, ದೋಸ್ತರು ಅವ್ರಿಗೂ ಒಮ್ಮೆ ಹೇಳಪಾ.." ಎಂದರು. ಬೆವೆತು ಕೆಂಪಗಾಗಿದ್ದರೂ ಅವರಿಗೂ ಕುತೂಹಲ ಜೊತೆಗೆ ಬೇರೆ ದಾರಿಯೂ ಇಲ್ಲ. ಒಮ್ಮೆ ಸುತ್ತೆಲ್ಲಾ ಎಲ್ಲರನ್ನೂ ನೋಡಿ ವೈಯಕ್ತಿಕವಾಗೂ ಕೇಳಿಕೊಂಡಿದ್ದವರೆಲ್ಲಾ ಮುಗಿದರು ಎನ್ನಿಸುತ್ತಿದ್ದಂತೆ, ಅಲ್ಲೇ ನಿಂತಿದ್ದ ಚಂದ್ರು ಮತ್ತವನ ತಾಯಿಯನ್ನು ನೋಡುತ್ತಾ ತಾವಾಗಿಯೇ, 
"..ಇವ್ರು ಯಾರು.." ಎಂದರು. ಎಷ್ಟೋ ವರ್ಷಗಳಿಂದ ಕುಟುಂಬಕ್ಕಾಗುತ್ತಿದ್ದ ತಾಯಿ-ಮಗ ಇಬ್ಬರೂ ನಿಂತು ಕಾತುರದಿಂದ ಕಾಯುತ್ತಿದ್ದರು. ಹಿಂದೆಯೇ ಮತ್ತೆ ತಾವಾಗಿಯೇ ಶೇಖರನತ್ತ ತಿರುಗಿದ ಆಚಾರ್ರು,
"..ಮನೆಗೆ ಹತ್ತಿರದವರಾದರೆ ಅವರೂ ಒಮ್ಮೆ ಕೇಳಿ ನೋಡಲಿ.." ಎಂದರು. 
"...ಅವ್ರಿಂದೇನು ಕೇಳಸೊದು ಆಚಾರ್ರ..? ಮನಿ ಮಂದಿ ಬಿಟ್ಟು ಬೇರೆಯವ್ರ ಹೆಂಗೆ ಪಿಂಡಕ್ಕೆ ಜೊತೆ ಕೊಟ್ಟಾರು..?" ಎಂದು ತಗಾದೆ ತೆಗೆದಳು ಹಿರಿಯಕ್ಕ. ತನ್ನಿಂದಲೇ ಆಗಿಲ್ಲ ಇನ್ನು ಯಾರನ್ನು ಕೇಳಿ ಏನು ..ಮಹಾ.. ಎನ್ನುವುದು ಆಕೆಯ ಧ್ವನಿಯಲ್ಲೇ ಗೊತ್ತಾಗುತ್ತಿತ್ತು. ಆಕೆಯ ಮುಖದಲ್ಲಿನ್ನೂ ಅವಮಾನದ ಗೆರೆಗಳು ಕದಲುತ್ತಿದ್ದವು. ಆದರೆ ಹಿಂದೆ ಮುಂದೆ ಯೋಚಿಸದೆ ಶೇಖರನೇ ಆ ಕ್ಷಣದ ಪರಿಸ್ಥಿತಿಗೂ ಸ್ಪಂದಿಸದೆ ನೇರವಾಗಿ ಬೆಂಬಲಿಸಿ ನುಡಿದ,
"..ಹೌದು. ಅಚಾರ್ರು ಹೇಳಿದ್ದು ಸರಿಯಾಗೇ ಅದೆ. ಬೇಕಾದ ಟೈಮ್‍ನಾಗೆ ನೀವ್ಯಾರೂ ಇಲ್ಲದಿದ್ರೂ, ಅಪ್ಪಂಗ ಮಾತ್ರ ಅಲ್ಲ ನನಗೂ, ಅವಳಿಗೂ ಆಪರೇಶನ್ ಆದಾಗಲೂ ಬಂದಾವ ಚಂದ್ರುನೇ. ಟೈಮ್ ಟೈಮ್ ಗೆ ಕಾಕು ಬರದಿದ್ರ ನಮ್ಮನ್ಯಾಗ ಊಟ ಇರ್ತಿರಲಿಲ್ಲ. ನಾವೇ ಅವ್ರ ಋಣದಾಗಿದ್ದೀವಿ. ಚಂದ್ರು ನೀನು ಕೇಳಿಬಿಡಪಾ.."ಎಂದ. ಅವನೋ,
"..ಅಣ್ಣಾ ನಾನ ಹೆಂಗ.." ಎಂದು ತೊದಲುತ್ತಲೇ, ಅಚಾರ್ರು " ನಡೀ ನಡೀ.. ಕಾಲ ಬೀಳು" ಎಂದು ಕೈ ಮಾಡುತ್ತಿದ್ದಂತೆ ಎದುರಿಗಿದ್ದ ಒದ್ದೆಯಾಗಲು ಮಾಡಿಟ್ಟಿದ್ದ ನಳದ ಕೆಳಗೆ ನಿಂತು ಭರ್ರನೆ ಒದ್ದೆಯಾಗಿ, ವಸ್ತ್ರ ಕಳಚಿ, ಒದ್ದೆ ನಡುವಸ್ತ್ರದಲ್ಲಿ ಬಂದವನೆ ಕಂಭದ ಬುಡಕ್ಕೆ ತಲಿ ಹಚ್ಚಿ ಅಡ್ಡ ಬಿದ್ದ. ಐದು ನಿಮಿಷ ಏಳಲೇ ಇಲ್ಲ. ಎಲ್ಲ ನೋಡುತ್ತಿದ್ದಂತೆ ಆಗಸದಲ್ಲಿ ಕಾ.. ಕಾ.. ಕರ್... ಎನ್ನುತ್ತ ಕಾಗೆ ಪಿಂಡದ ಪಕ್ಕ ಕೂತು ಕೊಕ್ಕು ಮಸಿಯತೊಡಗಿತು. ಎಲ್ಲಾ ಹೋ.. ಎನ್ನುವಾಗಲೆ ಇನ್ನೊ0ದು ಬಂದು ಅದರೊಂದಿಗೆ ಮೈ ಉಜ್ಜುತ್ತಾ, ಜೋಡಿಲೆ ಪಿಂಡಕ್ಕೆ ಬಾಯಿ ಹಾಕಿ ಸಲುಗೆಯಿಂದ ತಮ್ಮದೆ ಎನ್ನುವಂತೆ ಕಚ್ಚಿಕೊಂಡು ಯಾವ ರಗಳೆಯೂ ಇಲ್ಲದೆ ಹಾರಿ ನಡೆದವು.
"..ಅಯ್ಯೋ ಶಿವನೆ.." 
ಎನ್ನುತ್ತಾ ಆಚಾರ್ರು ಕರಂಡಿಕೆಯಿಂದ ನೀರನ್ನು ಆಗಸಕ್ಕೆ ಉಗ್ಗಿ ನಡೆದರು ಇನ್ನೇನು ಉಳಿದಿಲ್ಲ ಎನ್ನುವಂತೆ. ಕಟ್ಟೆಯ ನೆರಳಲ್ಲಿ ಆಸರೆ ಪಡೆದಿದ್ದವರೆಲ್ಲಾ ಚಂದ್ರುವನ್ನು ಅಲ್ಲೇ ಬಿಟ್ಟು ಸರಸರನೇ ಊಟಕ್ಕೆ ನಡೆದು ಪಂಕ್ತಿಗೆ ಕೂತರು. ಒದ್ದೆಯಾಗಿದ್ದವನು ಹಾಗೇಯೆ ಎದ್ದು ನಿಲ್ಲುವ ಹೊತ್ತಿಗೆ ಅಲ್ಲಿದ್ದ ಜನರೆಲ್ಲಾ ಖಾಲಿಯಾಗಿ ತಾನು ಮತ್ತು ಶೇಖರನೊಂದಿಗೆ ದೂರದಲ್ಲಿ ಅಮ್ಮ ದುಗುಡಗೊಂಡ ಮುಖದಿಂದ ನಿಂತಿದ್ದು ಕಂಡು ಬೆಪ್ಪಾದ ಚಂದ್ರು ಮಿಕಿ ಮಿಕಿ ನೋಡಿದ.
"..ಕೊನೆಗೂ ಅಪ್ಪನಿಗೆ ನಿನ್ನ ಸೇವಾ ಹಿಡಿಸ್ತು ನೋಡು ಚಂದ್ರು. ಒಂದು ತಾಸಿನಿಂದ ಆಗದ್ದು ನೀ ಕೈ ಮುಗದ ಐದ ನಿಮಿಷದಾಗ ಬಂದು ಹಾರಿ ಹೋಯ್ತು.. ಥ್ಯಾಂಕ್ಸಪಾ. ಅಪ್ಪನ ಮನಸ್ಸಿಗೆ ನೆಮ್ಮದಿ ಆತು ಅಷ್ಟ ಸಾಕ ಬಿಡು.." ಎಂದವನ ಕೈ ಹಿಡಿದು ಊಟದ ಪಂಕ್ತಿಯ ಕಡೆಗೆ ಹೊರಟವನು ತಿರುಗಿ ನಿಂತು,
"... ಹೌದೂ ಏನು ಬೇಡ್ಕೊಂಡಿ ಚಂದ್ರು. ಅಷ್ಟ ಲಗೂ ಅಪ್ಪನ ಪಿಂಡಕ್ಕ ಕಾಗಿ ಬಾಯಿ ಹಾಕ್ತಲ್ಲ.." ಎಂದ. ಕೂಡಲೇ ಚಂದ್ರು,
"..ಹ್ಯಾಂಗ್ ಹೇಳಲಿ ಶೇಖರಣ್ಣ. ಅವ್ರು ಹೊರಗಿನಿಂದ ಎಲ್ಲರಿಗೂ ಆಚಾರ್ರರಾದರೂ ನನಗ ಮಾತ್ರ ಅಪ್ಪಾನೇ ಅಲ್ಲೇನು...?ಅದಕ್ಕ ಅಪ್ಪಾ ನೀವಿಲ್ಲದಿದ್ರೂ ಶೇಖರಣ್ಣನ್ನ ಕೈ ಬಿಡಾಂಗಿಲ್ಲ ಆಂವ ನನಗ ಅಣ್ಣನೇ ಆಗ್ತಾನು. ಪಿಂಡ ಒಪ್ಪಿಸಗೋರಿ ಇಲ್ಲಾಂದರೆ ಅಮ್ಮಂಗ ಬೇಸರ ಆಗ್ತದ.. ಅಂದೆ.." ಎಂದು ಹೇಳಿಬಿಡಲು ಬಾಯ್ತೆರೆದವನು, ಕಷ್ಟಪಟ್ಟು ತಡೆ ಹಿಡಿದು ಮಿಕಿಮಿಕಿ ನೋಡುತ್ತಿದ್ದ ಶೇಖರನಿಗೆ, 
"..ಏನಿಲ್ಲ ಬಿಡು ಆಚಾರರ್ರ ಕಾಲಿಗೆ ಬಿದ್ದ ಬೇಡಿಕೊಂಡೆ..."
ಎನ್ನುತ್ತಾ ಕೈ ಕೊಸರಿಕೊಂಡು ತುಂಗೆಯತ್ತ ಕಾಲುಹರಿಸಿದ. ಅಷ್ಟು ದೂರದಲ್ಲಿದ್ದ ಅವನಮ್ಮ ತುಂಗೆಯ ಮಡಿಲಲ್ಲಿ ಮೈ ಒದ್ದೆ ಮಾಡಿಕೊಳ್ಳುತ್ತಾ ಕುಂಕುಮ ಒರೆಸಿಕೊಳ್ಳುತ್ತಿದ್ದು ಕಾಣಿಸಿತು. ಮುಖದ ಮೇಲಿಂದ ಹನಿಯಾಗಿ ಇಳಿಯುತ್ತಿದ್ದ ಸಾಲಿನಲ್ಲಿ ಬೆವರು ಯಾವುದೋ, ಕಣ್ಣೀರು ಯಾವುದೋ ಗೊತ್ತಾಗುವಂತಿರಲಿಲ್ಲ. 
ಹಿಂದೆ ನೋಡಿದರೆ ಶೇಖರಣ್ಣ...? ಎದುರಿಗೆ ತುಂಗೆ ದಾರಿಗಡ್ಡವಾಗಿ ಹರಿಯುತ್ತಿದ್ದಾಳೆ..! ಮಧ್ಯೆ ಮಿಕಿಮಿಕಿ ಮಾಡಿಕೊಂಡು ಸುಮ್ಮನೆ ನಿಂತು ಬಿಟ್ಟ ಚಂದ್ರು. ಅಷ್ಟು ದೂರದಲ್ಲಿ ಕಾಗೆಗಳೆರಡೂ ಬಳಗ ಬೆಳೆಸಿದ್ದವು. 
- ಸಂತೋಷ ಕುಮಾರ್ ಮೆಹೆಂದಳೆ.


No comments:

Post a Comment