Friday, February 12, 2016

ತರ್ಸರ್ ಮರ್ಸರ್.
ಸಂತೋಷಕುಮಾರ ಮೆಹೆಂದಳೆ.
ಅಲ್ಲಿ ಅಗಾಧ ಎತ್ತರದ ಪರ್ವತದ ಏರು ದಾರಿಯಿದೆ, ವ್ಯಾಲಿ ಆಫ್ ಪ್ಲಾವರ್‍ಗೆ ಸೆಡ್ಡು ಹೊಡೆಯುವ ಹೂ ಕಣಿವೆಗಳಿವೆ. ಜೀವನದಲ್ಲೊಮ್ಮೆಯಾದರೂ ಅನುಭವಿಸಬೇಕೆನ್ನುವ ಮೈಲುಗಟ್ಟಲೆ ಮಂಜಿನ ಹುಡಿಯ ಹಿಮ ಅಲ್ಲಿ ಸುರಿಯುತ್ತಿರುತ್ತದೆ. ನಡೆದಷ್ಟೂ ದೂರದಲ್ಲಿ ದೇವತೆಗಳ ಸ್ನಾನಕ್ಕೆ ಒಂದೆರಡಲ್ಲ ಸಾಲು ಸಾಲು ಸರೋವರಗಳು ತಿಳಿಯಾಗಿ ಸಾಲು ಸಾಲಾಗಿ ಕಾದಿವೆ. ಅದೆಲ್ಲಕ್ಕೂ ಮಿಗಿಲಾಗಿ ಒಂಚೂರೇ ಚೂರು ಬೇಕೆಂದರೂ ಗಲೀಜು, ಮಾಲಿನ್ಯ, ಪ್ಲಾಸ್ಟಿಕ್ಕು ಅಲ್ಲಿ ಸಿಕ್ಕುವುದಿಲ್ಲ. ಹಾಗಂತ ಸುಲಭಕ್ಕೆ ಬಾಟಲಿ ಒಯ್ದಿಟ್ಟುಕೊಂಡು ಪಾರ್ಟಿಗೆ ಕೂರಲೂ ಸಾಧ್ಯವಿಲ್ಲ. ಕಾರಣ ಹೀಗೆ ಹೋಗಿ ಹಾಗೆ ಬಂದೆನ್ನಲಾಗುವುದಿಲ್ಲ. ಹಾಗಂತ ಹೋಗದೆ ಉಳಿದರೆ ಬಹುಶ: ಪ್ರವಾಸಿಯೊಬ್ಬನ ಜೀವಮಾನದ ನಷ್ಟವೂ ಹೌದು ಅದು.
ಅದು ತರ್ಸರ್ ಮರ್ಸರ್ ..
ಕಾಶ್ಮಿರ ಕಣಿವೆಯ ತುತ್ತ ತುದಿಯಲ್ಲಿ ಇವತ್ತಿಗೂ ಅನಾಮಧೇಯವಾಗಿ ಕೇವಲ ಚಾರಣಿಗರ ಮತ್ತು ಆಸಕ್ತಿಯಿಂದ ಹುಡುಕಿ ಹೋಗುವವರಿಗೆ ಮಾತ್ರ ಲಭ್ಯವಾಗುತ್ತಲಿದೆ. ಸಾಮಾನ್ಯವಾಗಿ ಶ್ರೀನಗರದಿಂದ ಪೆಹಲ್ಗಾಂವ್ ಮಾರ್ಗವಾಗಿ ಈ ಸ್ಥಳವನ್ನು ಹುಡುಕಿ ಹೋಗುವವರು ಜಾಸ್ತಿ. ಆದರೆ ನಾನು ಶ್ರೀನಗರದಿಂದ ಭಿಜ್‍ಬೇರ್ ಮಾರ್ಗವಾಗಿ ತಲುಪಲು ಸಲಹೆ ಕೊಡುತ್ತೇನೆ. ಕಾರಣ ಈ ಮಾರ್ಗದಲ್ಲಿ ಕ್ರಮಿಸುವಾಗ ಸಿಕ್ಕುವ ನೈಜ ಕಾಶ್ಮೀರ ಮತ್ತು ಅತ್ಯಂತ ಸ್ವಚ್ಚ ಭಾರತದ ಹಸಿರು ಪರಿಸರ, ಬಹುಶ: ಇದಕ್ಕಿಂತ ಶುದ್ಧ ಸರೋವರ ಜಾಲ ತಾಣ ಇನ್ನೊಂದೆಡೆಯಲ್ಲಿ ಸಿಗಲಿಕ್ಕಿಲ್ಲ ಎನ್ನುವುದು ನನ್ನ ಹಲವು ಚಾರಣದ ಅನುಭವದ ಮಾತು.
ಬೇಸ್‍ಕ್ಯಾಂಪ್ ಆಗಿ ಅರು(ಪೆಹೆಲ್ ಗಾಂವ್‍ನಿಂದ ಹನ್ನೆರಡು ಕಿ.ಮೀ.)ವಿನಲ್ಲಿ ಉಳಿದುಕೊಂಡು ಹೊರಡುವ ಮುನ್ನ ಪಾಸ್‍ಪೆÇೀರ್ಟ್ ಪ್ರತಿ, ಅಗತ್ಯದ ಔಷಧಿ ಇತ್ಯಾದಿಗಳನ್ನು ಒಬ್ಬ ಪಕ್ಕಾ ಚಾರಣಿಗನಿಗೆ ಇರಬೇಕಾದ ವ್ಯವಸ್ಥೆಯನ್ನು ಮಾಡಿಕೊಳ್ಳಲೇಬೇಕು. ನಂತರದಲ್ಲಿ ಯಾವ ರೀತಿಯ ಸಂಪರ್ಕದ ಸಾಧ್ಯತೆ ಅಲ್ಲಿರುವುದಿಲ್ಲ. ಯಾವುದೇ ಮೊಬೈಲ್ ಅಥವಾ ಸಂಪರ್ಕ ಸಾಧನದ ಬೆಂಬಲ ಇಲ್ಲಿಲ್ಲ.
ಅರುವಿನಿಂದ "ಲಿದ್ಢರ್ ವಾಟ್" ಮೂಲಕ ಸುಮಾರು ಆರು ತಾಸುಗಳನ್ನು ಕ್ರಮಿಸಿದರೆ ಅಧ್ಬುತವಾದ ಹಂತ ಪೂರೈಸಿದಂತಾಗುತ್ತದೆ. ಈ ಲಿದ್ದರ್‍ವಾಟ್ ಒಂದು ಚೆಂದದ ಹಳ್ಳಿ. ಅರುವಿನಿಂದ ಹೊರಟು ಇಲ್ಲಿಗೆ ತಲುಪುವವರೆಗೂ ಈ ಲಿದ್ದರ್ ನದಿಯ ಎಡದಂಡೆಯ ಮೇಲೆ ನಮ್ಮ ಪಯಣ ಸಾಗುತ್ತಿರುತ್ತದೆ.
 ಮರುದಿನ "ಲಿದ್ದರ್ ವಾಟ್"ನಿಂದ "ಶೇಕ್ವಾ" ಹಳ್ಳಿಗೆ ಸುಮಾರು 12000 ಅಡಿ ಎತ್ತರಕ್ಕೆ ಏರು ಮುಖದ ಚಲನೆ. ಇದಕ್ಕಾಗಿ 6 ಕಿ.ಮೀ. ಅಂತರಕ್ಕಾಗಿ ನಾಲ್ಕು ತಾಸು ತಗಲುತ್ತದೆ. ಮಧ್ಯದಲ್ಲಿ ಯಾವುದೇ ಸೌಕರ್ಯವೂ ಇಲ. ಅಲ್ಲಲ್ಲಿ ಚಹ ಮತ್ತು ರೋಟಿದಾಲ್‍ನ್ನು ಪೂರೈಸುವ ಚಿಕ್ಕ ಗುಡಿಸಲುಗಳಿವೆ. ಇಂಥಾ ತಂಗುದಾಣಗಳನ್ನು ಅವುಗಳನ್ನು "ಗುಜ್ಜರ್ ಹಟ್" ಎಂದು ಕರೆಯುತ್ತಾರೆ. ಇಲ್ಲಿ ಚಹ ಮತ್ತು ಬಿಸ್ಕೆಟು ಲಭ್ಯ.
ಶೇಕ್ವಾದಿಂದ ಚಾರಣದಾರಿ ಅನಾಮತ್ತು ಐದು ತಾಸಿನದು. ಅದಾದ ಮರುಕ್ಷಣ ಅಧ್ಬುತ ತರ್ಸರ್ ಕಣ್ಣೆದುರಿಗೆ ಇರುತ್ತದೆ ಯಾವ ಜಾಗದಲ್ಲಿ ನಿಂತರೂ ಚಿತ್ರ ತೆಗೆಯಲು ಸೆಲ್ಫಿಗೆ ಕೊರತೆಯಿಲ್ಲ. ಅದಕ್ಕಾಗೇ ಚಿಕ್ಕ ಅಂತರ ಕೂಡಾ ಅಗಾಧ ಸಮಯ ಬೇಡುತ್ತದೆ. 14000 ಅಡಿ ಎತ್ತರದಲ್ಲಿ ಸರ್ವವೂ ಹಿಮಗಟ್ಟುತ್ತಿರುವಾಗ ಈ ಸರೋವರ ಮಾತ್ರ ನೀರಾಗಿ ನೀಲಿ ಅಗಸ ಪ್ರತಿಫಲಿಸುತ್ತಾ ನಿಂತಿರುತ್ತದೆ. ಅಧ್ಬುತ ಮತ್ತು ಪ್ರಕೃತಿಯ ಒಂದು ಸುಂದರ ಕಲ್ಪನೆಗೆ ಸಾಕ್ಷಿಯಾಗಲು ಇಲ್ಲಿ ಮಾತ್ರ ಸಾಧ್ಯ. ತರ್ಸರ್ ಪ್ರಕೃತಿಯ ವಿಸ್ಮಯವೂ ಹೌದು. ಈ ಎತ್ತರಕ್ಕೇ ಏರಿ ನಿಲ್ಲುವ ವೇಳೆಗಾಗಲೇ ಪ್ರವಾಸಿಯೊಬ್ಬನ ಉಸಿರು ನೆತ್ತಿಗೇರಿರುತ್ತದೆ.
ತರ್ಸರ್ ಹಿಂದೇಯೆ ಮರ್ಸರ್ ಇದ್ದು ಅದನ್ನು ಮತ್ತೆ ಮರುದಿನದ ಐದು ತಾಸಿನ ಏರು ಮುಖ ಚಾರಣದ ದಾರಿ ಕ್ರಮಿಸಲೇಬೇಕು. ಆದರೆ ಅಧ್ಬುತ ಹಸಿರಿನ ಚಳಿಯ ಮಧ್ಯೆ ಒಳಗೊಳಗೇ ಬೆವರುತ್ತಾ ಸಾಗುವಾಗ ಯಾವ ಎತ್ತರವೂ ಎದುರಿಗೆ ನಿಲ್ಲುವುದಿಲ್ಲ. ಅದಕ್ಕಿಂತಲೂ ಮಿಗಿಲು ಮರ್ಸರ್‍ನ ದಾರಿಯಲ್ಲಿ ಸಿಕ್ಕುವ "ಸುಂದರ್‍ಸರ್" ಇನ್ನೊಂದು ಭೂ ಮುಖದ ಅಧ್ಬುತ. ಇಲ್ಲಿಂದ ಮುಂದಿನ ದಾರಿಯೆಲ್ಲಾ ಭೂ ಸ್ವರ್ಗ ಎಂದರೂ ತಪ್ಪೇನಿಲ್ಲ. ಅಗಾಧ ಇಳಿಜಾರಿನ ಹಿಮದ ಜಾರು ಹಾದಿ ಹೆಚ್ಚಿನಂಶ ಕೆಲವೊಮ್ಮೆ ಹಗ್ಗದ ಸಹಾಯ ಹಾಗು ರ್ಯಾಪ್ಪೆಲಿಂಗ್ ಸಹಾಯವನ್ನೂ ಬೇಡುತ್ತದೆ. ಕಾರಣ ಈ ಅಂತರವನ್ನು ರಾಪೇಲಿಂಗ್ ಮೂಲಕ ಇಳಿಯುವದಾದಲ್ಲಿ ತಾಸುಗಟ್ಟಲೇ ನಡಿಗೆಯ ಮೂಲಕ ಕ್ರಮಿಸುವುದನ್ನು ತಪ್ಪಿಸಬಹುದು. ಇದೆಲ್ಲದರ ಸಾಹಸಕಾರಿ ಯಾತ್ರೆ ಮಾಡಿಸುವ ಸುಂದರ್‍ಸರ್‍ನಿಂದ ಮರ್ಸರ್‍ದ ದಾರಿ ನಿಸರ್ಗದ ರಹಸ್ಯಗಳಲ್ಲಿ ಒಂದು.
ಹಾಗೆ ವಾಪಸ್ಸು ಹೊರಟು ಹೊರಳು ಹಾದಿಯಲ್ಲಿ ಮರ್ಸರ್‍ನಿಂದ ಸುಂದರ್‍ಸರ್ ತಲುಪಿ ಒಂದು ಕಷ್ಟಕರವಾದ ಅಡ್ಡದಾರಿಯ ಮೂಲಕ ಕೆಳಕ್ಕಿಳಿಯತೊಡಗಿದರೆ ಒಂದೇ ದಿನದಲ್ಲಿ ಸೋನಾಮಾತಿ ತಲುಪುತ್ತೇವೆ. ಆದರೆ ಕಿ.ಮಿ.ಗಟ್ಟಲೇ ಹಿಮದ ಹಾದಿಯನ್ನು ಜರಿದು ಕ್ರಮಿಸುವಾಗ ಆಯ ತಪ್ಪುವ, ಆ ಮೂಲಕ ಕಣಿವೆಯ ಆಳಗಳಿಗೆ ಬಿದ್ದು ಹೋಗುವ ಅಪಾಯವಿದ್ದೇ ಇದೆ. ಸ್ಥಳೀಯರು ಅಥವಾ ನುರಿತ ನಾಯಕನ ಅಗತ್ಯತೆ ಈ ಚಾರಣಕ್ಕೆ ಆಗತ್ಯ. ಹಿಮದ ಅಪಾಯಕಾರಿ ಕುಳಿಗಳ ಆಳ ಅಗಲದ ಅರಿವು ಸಾಮಾನ್ಯ ಪ್ರವಾಸಿಗಾಗುವುದಿಲ್ಲ.
ಅದಾಗ್ಯೂ ಪ್ರಕೃತಿಯ ಅಪರೂಪದ ಸೃಷ್ಠಿ ಸೌಂದರ್ಯವನ್ನು ಅನುಭವಿಸಲೇಬೇಕೆನ್ನುವ ಮತ್ತು ಅಂತಹ ಅನುಭೂತಿಗೆ ಈಡಾಗುವ ದಾರಿಯಲ್ಲಿ ಸಣ್ಣ ಪುಟ್ಟ ಸಾಹಸಗಳು ಅನಿವಾರ್ಯವೂ ಹೌದು. ಕಾರಣ ತರ್ಸರ್ ಮರ್ಸರ್ ಪ್ರವಾಸದ ಒಂದು ವರ್ಷದ ನಂತರವೂ ಅದರ ನಡಿಗೆಯ ಅನುಭವ ನಿನ್ನೆಯಷ್ಠೆ ಹೋಗಿದ್ದೆನ್ನಿಸುವಷ್ಟು ಹಸಿರಾಗಿಸಿರುತ್ತದೆ.


No comments:

Post a Comment