Saturday, October 3, 2015

ಅವಳ ಸಂಭ್ರಮಕ್ಕೆ  ಸೋತಿದ್ದು  ಸಾವು .. :) 

ಸಾವು ಸಂಭ್ರಮವಲ್ಲ. ಇವತ್ತು ದುಡ್ಡು ದುಗ್ಗಾಣಿ ಮನೆ ಕಡೆ ಬೆಂಬಲ ಇದ್ದವರು ಅದನ್ನು ಗೆದ್ದು ಬೀಗುವುದು, ಸಂಭ್ರಮಾಚರಿಸಿಕೊಳ್ಳುವುದೂ ದೊಡ್ಡದಲ್ಲ. ಆದರೆ ಗೆದ್ದ ಸಾವನ್ನು ಸರಕಾಗಿಸಿಕೊಳ್ಳುವ ಸಂಭ್ರಮ ಬೇಡ. ಮೆರವಣಿಗೆಗೆ ಹೊರಡದೆ ಮೌನವಾಗಿ ಇತರರಿಗೂ ಬದುಕು ಕೊಡುವುದಿದೆಯಲ್ಲ ಅದು ನಿಜವಾದ ಗೆಲವು..
ಅವಳು ಏನಾದರೂ ಮಾಡಿಕೊಳ್ಳಲಿ. ನೀವೆಲ್ಲ ಸುಮ್ಮನಿದ್ದು ಬಿಡಿ..’ ಹೀಗೊಂದು ಅಘೋಷಿತ ಮೌನ ಯುದ್ಧ, ಅಸಹಕಾರವನ್ನು ಮನೆಯಲ್ಲಿ ಬೆಂಬಲಕ್ಕೆ ನಿಲ್ಲಬೇಕಾದವರೇ ಅಂಥ ಘೋರ ಹೊತ್ತಿನಲ್ಲಿ ಘೋಷಿಸಿಬಿಟ್ಟರೆ ಏನಾಗಬೇಕೋ ಅದೇ ಆಗಿತ್ತು. ತೀರಾ ಮಾರಣಾಂತಿಕ ಕಾಯಿಲೆಯ ಕ್ಯಾನ್ಸರ್‌ನ ಮೂರನೇ ಹಂತದ ಪ್ರವೇಶದಲ್ಲಿದ್ದವಳ ಮೇಲೆ ಹಣ ಖರ್ಚು ಮಾಡಿದರೂ ತಮಗ್ಯಾವುದೇ ಉಪಯೋಗವಿಲ್ಲ. ಹೋದರೆ ಹೋಗಲಿ.. ಎಂದು ಗಂಡನಾದಿಯಾಗಿ ಎಲ್ಲರೂ ತೀರ್ಮಾನಿಸಿಬಿಟ್ಟರೆ ಆಕೆ ಎಲ್ಲಿ ಹೋಗಬೇಕು.
ಅಮ್ಮನೆಂಬ ದೇವರ ಬಳಿ ಭಾರವಾಗಲು ಸುತಾರಾಂ ಸಿದ್ಧಳಿರಲಿಲ್ಲ. ಕಾರಣ ಅಮ್ಮ ಹೇಗೋ ಅವಳನ್ನು ಓದಿಸಿ, ಇಲ್ಲಿಯವರೆಗೆ ಬೆಳೆಸಿದ್ದೇ ಆಕೆಯ ಬದುಕಿನ ಅತಿದೊಡ್ಡ ಯಶಸ್ಸು. ಅಂತಹದರಲ್ಲಿ ಅಮ್ಮನ ಇಳಿವಯಸ್ಸಿನಲ್ಲಿ ಮತ್ತೆ ಭಾರವಾಗುವ ಪ್ರಶ್ನೆಯೇ ಆಕೆಯೆದುರಿಗಿರಲಿಲ್ಲ. ಆವತ್ತು ರಾತ್ರಿ ಆಕೆ ನಿದ್ರಿಸಲಿಲ್ಲ. ನಾಳೆ ಹೊತ್ತಿಗೆ ಎರಡೇ ದಾರಿಗಳು ಆಕೆಯೆದುರಿಗಿದ್ದವು. ಒಂದೋ ಬೆಳಗ್ಗೆದ್ದು ಆತ್ಮಹತ್ಯೆ ಮಾಡಿಕೊಳ್ಳಬೇಕು, ಇಲ್ಲ ಇವರ ನಾಟಕದೆದುರಿಗೆ ನಿಧಾನಕ್ಕೆ ಒಳಗೊಳಗೆ ದಹಿಸುತ್ತ, ಕಾಯಿಲೆಗೀಡಾಗುತ್ತ ನರಳಿ ನರಳಿ ಸಾಯಬೇಕು. ಎಲ್ಲ ಗೊತ್ತಿದ್ದೂ, ತೊಲಗಲಿ ಎಂದು ಕೈಬಿಡುವ ನಿರ್ಧಾರಕ್ಕೆ ಬಂದಿರುವ ಅಮಾನವೀಯರ ಎದುರಿಗೆ ಇರುವುದಕ್ಕಿಂತ ಆತ್ಮಹತ್ಯೆಯೇ ಸರಿ ಎಂದು ನಿರ್ಧರಿಸಿ ಪಕ್ಕಕ್ಕೆ ತಿರುಗಿ ಮಲಗಿದಳು ಆಕೆ.
ಅಷ್ಟೆ, ಎರಡೇ ನಿಮಿಷದಲ್ಲಿ ಎಚ್ಚರವಾಯಿತು. ಅಷ್ಟು ದೂರದಲ್ಲಿ ಮಲಗಿದ್ದ ಮಗು ಕುಸುಕುಸು ಮಾಡುತ್ತಿತ್ತು. ಯಾವ ವಾಸ್ತವವನ್ನೂ ಅರಿಯದ ತುಂಬುನಗೆಯರಳಿಸುವ, ಸಣ್ಣ ಜೊಲ್ಲಿನ ಕಲೆಯ ಪುಟ್ಟ ಕಂದ ಹಾಲು ವಾಸನೆ ಸೂಸುತ್ತ ನಿದ್ರೆಯಲ್ಲೇ ಕಿರುನಗೆ ಚೆಲ್ಲುತ್ತಿತ್ತು. ಯಾವ ಭಾವಗಳಿಗೂ ಪಕ್ಕಾಗದ ಇಂಥ ಮುಗ್ಧ ಭಾವದೆದುರಿಗೆ ದೇವರೂ ಸೋತು ಹೋಗುತ್ತಾನಾದರೆ ಇನ್ನು ಅಮ್ಮ ಯಾವ ಲೆಕ್ಕ..? ಆಗ ಎದ್ದು ಕೂತಳು ಶೋಭಾ. ಇಲ್ಲ ಯಾವ ಸಾವು, ಯಾವ ಜನರೂ ನನ್ನನ್ನು ಸಾಯಿಸಲಾರರು. ನಾನು ನಾಳೆಗಾಗಿ ಬದುಕುತ್ತೇನೆ. ನನಗಾಗಿ, ನನ್ನ ಮಗುವಿಗಾಗಿ ಬದುಕಿ ಗೆದ್ದು ಅಮ್ಮನಾಗುತ್ತೇನೆ. ಸಾಧ್ಯವಾದರೆ ಅಮ್ಮನಿಲ್ಲದವರಿಗೂ. ಯಾವ ಕಾರಣಕ್ಕೂ ನನ್ನ ಮಗಳು ಅಮ್ಮನಿಲ್ಲದ ಕೊರತೆ ಅನುಭವಿಸಬಾರದು. ಅಷ್ಟೆ.. ಮತ್ತೆ ಆಕೆ ಹಿಂದಿರುಗಿ ನೋಡಲಿಲ್ಲ.
ಹಾಗೆಂದು ಅಂದು ನಿರ್ಧರಿಸಿದ ಶೋಭಾ ಬೆಳಗೆದ್ದು ಅನಿವಾರ್ಯವಾಗಿ ಅಮ್ಮನ ಮಡಿಲಿಗೇ ತಲುಪಿದ್ದಳು. ಯಾವ ಕಾರಣ ಏನೂ ಕೇಳದೆ ಎಂಥ ಸ್ಥಿತಿಯಲ್ಲೂ ಬರಮಾಡಿಕೊಳ್ಳುವ ಮನಸ್ಥಿತಿ ಅಮ್ಮನದ್ದು ಮಾತ್ರ. ಇಲ್ಲೂ ಆದದ್ದು ಹಾಗೇನೆ..? ಶೋಭಾ ಅಮ್ಮನೆದುರು ಮನಸಾರೆ ಅತ್ತು ಬಿಟ್ಟು ಮಧ್ಯಾಹ್ನದ ಊಟದ ಹೊತ್ತಿಗೆ ನಿಟಾರನೆ ಕೂತು ನುಡಿದಳು. ‘ಅಮ್ಮ ಒಂದೆರಡು ವರ್ಷದವರೆಗೆ ನನ್ನ ಮಗಳನ್ನು ನೋಡಿಕೊಳ್ಳಲು ಆಗುತ್ತ ನಿನಗೆ, ದಿನವಿಡೀ ಅಲ್ಲ. ತೀರಾ ನನಗಾಗದಿzಗ..?’ ಮಗಳ ವರಸೆ ಮತ್ತು ನಿರ್ಧಾರ ಹೊಸದೇನಲ್ಲ. ಇದು ಇವತ್ತಲ್ಲ ನಾಳೆ ಆಗಬೇಕಾದುದೇ. ತೀರಾ ಗಂಡನ ಮನೆಯ ಉಪಟಳ, ಕಿರಿಕಿರಿಗಳಿಗೆ ಬೇಯುತ್ತಿದ್ದ ಅಮ್ಮ, ಮಗಳ ಮಾತಿಗೆ ಸುಮ್ಮನೆ ತಲೆ ನೇವರಿಸಿದಳು.
ಮರುದಿನವೇ ಮಗಳನ್ನು ಕರೆತಂದು ಅಮ್ಮನ ಮಡಿಲಿಗಿಟ್ಟು ಆಸ್ಪತ್ರೆ ಸೇರಿಕೊಂಡವಳು ಹೊರಬಂದಾಗ ಅರ್ಧ ಗೆzಗಿತ್ತು. ತನ್ನ ಎರಡೂ ಬಳೆ, ಸರ, ಮಾಂಗಲ್ಯ ಎತ್ತಿಕೊಟ್ಟು ದುಡ್ಡು ಹೊಂಚಿಕೊಂಡು ಹೊರಡುತ್ತಿದ್ದರೆ, ಅಮ್ಮ ಮಾತನಾಡದೆ ತನ್ನ ಮೈಮೇಲಿನ ಅಷ್ಟೂ ಬಂಗಾರ ತೆಗೆದಿಟ್ಟು ಆಕೆಯ ತಲೆ ಸವರಿ ಕಳುಹಿಸಿದ್ದಳು. ಅಲ್ಲಿಂದ ಶುರುವಾಯಿತು ಶೋಭಾಳ ಆಸ್ಪತ್ರೆಯ ಯಾತ್ರೆ. ಮೊದಲ ದಿನ ಪೂರ್ತಿ ಅನ್ನನಾಳ ಕಿತ್ತು  ತೆಗೆಯಬೇಕಾ..? ಬರೀ ಅರ್ಧ ತೆಗೆದರೆ ಸಾಕಾ ಎನ್ನುವುದರಿಂದ ಹಿಡಿದು, ಮೂರನೆಯ ದಿನ ಆಕೆ ಕಣ್ಬಿಡುವಾಗ ಕುತ್ತಿಗೆಗೊಂದು ಶಾಶ್ವತ ತೂತು ಕೊರೆಯಲಾಗಿತ್ತು. ಅದಕ್ಕೊಂದು ನಳಿಕೆ ಕೂರಿಸಲಾಗಿತ್ತು. ಇನ್ನು ಮುಂದೆ ಆಕೆಯ ಊಟೋಪಚಾರವೆಲ್ಲ ಅದರ ಮೂಲಕ. ಗಂಟಲು ಮತ್ತು ಬಾಯಿಯ ಮಧ್ಯ ಭಾಗವನ್ನು ಎತ್ತಿ ಬೇರ್ಪಡಿಸಿದ್ದ ಪರಿಣಾಮ ಆಕೆಯ ಶಬ್ದ ಅರ್ಧಕ್ಕೆ ಕುಸಿದಿತ್ತು.
ಆಗತ್ಯಕ್ಕೆ ತಕ್ಕಷ್ಟು ಅದು ಕಂಪಿಸುತ್ತಲೂ ಇರಲಿಲ್ಲ. ಅಮ್ಮ ಎಂದರೆ ಬೊಮ್ಮ ಎಂದಂತೆ ಕೇಳಿಸುತ್ತಿತ್ತು. ಅದಕ್ಕಿಂತಲೂ ಘೋರ ಎಂದರೆ ನಳಿಕೆಯ ಮೂಲಕ ಆಹಾರ ಸೇವನೆಯ ವ್ಯವಸ್ಥೆಯಿಂದಾಗಿ ಬಾಯಿ ಕೆಲಸವಿಲ್ಲದೆ ದುರ್ನಾತ ಹೊಡೆಯುತ್ತಿತ್ತು. ಮೂಗಿನ ಕೆಲಸ ಕೈಕೊಡುತ್ತಿತ್ತು. ಬಾರಿಬಾರಿಗೂ ಬಾಯಿ, ಹಲ್ಲು ಸ್ವಚ್ಛವಾಗಿರಸಬೇಕು. ಕಿಮೋ ಅವಧಿಯಲ್ಲಿ ನರಕಯಾತನೆ. ಅದರ ನೋವು ಮತ್ತು ಅದನ್ನು ಭರಿಸಲು ಸೇವಿಸುತ್ತಿದ್ದ ಮಾತ್ರೆಗಳಿಂದಾಗಿ ಮೈಯೆಲ್ಲ ಚರ್ಮ ಕರೆಗಟ್ಟಿ, ತಲೆ ಬೋಳಾಗಿ ಹೋಗಿತ್ತು. ಆಯಾಯ ಕಾಲಾವಧಿಗೆ ನಳಿಕೆಯೊಳಕ್ಕೆ ಆಹಾರವನ್ನು ದ್ರವವಾಗಿಸಿ ಸೇರಿಸಬೇಕಿತ್ತು. ಬಾಯಿಯ ಸಂಪರ್ಕವಿಲ್ಲದೆ ಹಾರ್ಮೋನ್ ವ್ಯತ್ಯಾಸದಿಂದಾಗಿ ಮತ್ತು ಔಷಧದ ಪರಿಣಾಮ ಹಸಿವೆ, ಪಚನ ಇತ್ಯಾದಿ ಕೈಕೊಡುತ್ತಿದ್ದವು. ದೇಹದ ಒಟ್ಟಾರೆ ಗತಿವಿಧಿ ನೆಗೆದುಬಿದ್ದಿತ್ತು.
ಶೋಭಾ ಒಂದು ಹಂತದವರೆಗೆ ಸರಿಯಾದಳು ಎನ್ನಿಸುತ್ತಿತ್ತಾದರೂ, ಪೂರ್ತಿ ಹೇಗೆ ಸರಿಹೋಗುತ್ತಾಳೆ ಎನ್ನುವ ಕಲ್ಪನೆ ಸ್ವತಃ ವೈದ್ಯರಿಗೂ ಸಿಕ್ಕುತ್ತಿರಲಿಲ್ಲ. ಆದರೂ ಶೋಭಾ ಬಡಿದಾಡಿದಳು. ಸ್ವತಃ ನೀರು, ಪೈಪು, ಸ್ವಚ್ಛ ಟವಲ್ಲು, ಆಹಾರ ಹೀಗೆ ಬೇಕಿದ್ದುದನ್ನೆಲ್ಲ ಹೊತ್ತುಕೊಂಡು ಚಿಕ್ಕ ಅಂಗಡಿಯಂತೆ ಒಬ್ಬಳೇ ತಿರುಗಿದಳು. ಯಾವ ಕಾರು, ಯಾವ ಗಾಡಿನೂ ಇಲ್ಲ. ಹಿಂದೆಮುಂದೆ ಬರಲು, ಹೊರಲು ಸ್ನೇಹಿತರು, ಗಂಡ, ಮಾವ, ಅಮ್ಮ, ಅಪ್ಪ.. ಯಾರೆಂದರೂ ಯಾರೂ ಇಲ್ಲದೆ ಆಕೆ ಜೀವಪ್ರೀತಿಯೊಂದಿಟ್ಟುಕೊಂಡು ಬಡಿದಾಡಿದಳು. ಅದು ಹೇಗಿತ್ತೆಂದರೆ ಪ್ರತಿ ಬಾರಿಯೂ ಆಕೆ ಆಸ್ಪತ್ರೆಯಿಂದ ಹೊರಬರುತ್ತಿದ್ದಂತೆ ಆಟೋದವರು ತಾವಾಗಿಯೇ ನಾನು ಬರ್ತೀನಿ ಶೋಭಕ್ಕ... ಎಂದು ಕೈಲಿದ್ದ ಸಾಮಾನು ಎತ್ತಿಟ್ಟುಕೊಳ್ಳುತ್ತಿದ್ದರೆ, ಎದುರಿನ ಗೂಡಂಗಡಿಯವ ಬಿಸಿಬಿಸಿ ಕಾಫಿ ಕೊಟ್ಟು ನೀರು ಹನಿಸುತ್ತಿದ್ದ.
ಆಗ ನನಗೆ ಮತ್ತೊಮ್ಮೆ ಜೀವ ಬಂದಂತಾಗುತ್ತಿತ್ತು ಎನ್ನುತ್ತಿದ್ದಳು ಶೋಭಾ. ಒಮ್ಮೊಮ್ಮೆ ಆಸ್ಪತ್ರೆಗೆ ಹೋಗಿ ಬಂದಾಗಲು ಜೀವಂತ ಶವ ಮನೆಗೆ ಬಂದಂತಾಗುತ್ತಿತ್ತು ಅವಳಮ್ಮನಿಗೆ. ಆದರೆ, ಅದ್ಯಾವುದರಿಂದಲೂ ಜೀವ ಮತ್ತು ದೇಹ ಎರಡೂ ಸಾಯದಂತೆ ನೋಡಿಕೊಂಡಳು ಶೋಭಾ. ಅಷ್ಟೆ ಅಲ್ಲ, ಶಾಶ್ವತವಾಗಿ ಅಮ್ಮನೊಂದಿಗೆ ಮಗಳನ್ನು ಕರೆದುಕೊಂಡು ಹೊಸ ಮನೆಗೆ ಸೇರಿದಳು. ಪುಣ್ಯಾತ್ಮ ಡಾ.ಜೋಶಿ ಆಕೆಯ ಕಷ್ಟ ನೋಡಲಾರದೆ ಸಣ್ಣ ಪಗಾರದ ನೌಕರಿ ಕೊಡಿಸಿದ್ರು. ಶೋಭಾಳ ಬಿರುಸಿಗೆ, ಅವಳ ತಪನೆಗೆ, ಇನ್ನಿಷ್ಟು ಪಗಾರ ಏರಿಸಿ ವರ್ಷದೊಳಗೆ, ತಂಪಾಗಿದ್ದ ಜಾಗಕ್ಕೆ ಕಳುಹಿಸಿದರೆ, ಹದವಾಗಿ ಉಸಿರೆಳೆದುಕೊಂಡಳು ಶೋಭಾ. ಬದುಕು ಕೈಗೆ ಹತ್ತಿತು ಎನ್ನುವಷ್ಟರಲ್ಲಿ ಅಮ್ಮನೂ ಮಗನ ಮನೆ ತೊರೆದು ಮಗಳೊಂದಿಗೆ ಟೊಂಕಕಟ್ಟಿ ನಿಂತರು. ಶೋಭಾ ಈಗ ಇನ್ನಷ್ಟು ಬಿರುಸಾದಳು. ಸ್ವತಃ ಅಮ್ಮ ಹಿಂದೆ ನಿಂತದ್ದು ಆಕೆಗೆ ಸಾವಿರ ಆನೆಯ ಬಲ ಬಂದಿತ್ತು. ಕೆಲಸದೊಂದಿಗೆ ಹೊಸ ಬದುಕು ಆಕೆಯೆದುರು ಚಿಗುರತೊಡಗಿತ್ತು. ಆಕೆ ಸಾವು ಗೆzಗಿತ್ತು. ‘ಒಂದು ಚಿತ್ರ ಕೊಟ್ಟು ಬಿಡು...’ ಶೋಭಕ್ಕ ಎಂದೆ.
‘ಏನೂ ಬೇಡ... ಕಥೆ ಬರೀತೀನಿ ಅಂದ್ಯಲ್ಲ ಸಾಕು. ಯಾರಿಗಾದರೂ ಅಗತ್ಯ ಇದ್ರೆ ಒಂದು ತುತ್ತು ಅನ್ನ, ಬೇಕಿದ್ದರೆ ನನ್ನ ಕೈಲಾದಷ್ಟು ನೆರಳೂ ಕೊಡ್ತೇನೆ. ಆದರೆ ಗೆದ್ದ ಸಾವನ್ನು ಸರಕಾಗಿಸಿಕೊಳ್ಳೊ ಸಂಭ್ರಮ ನನಗೆ ಬ್ಯಾಡಾ ಮಾರಾಯ. ಇದರಿಂದ ಇನ್ನಷ್ಟು ಹೆಸರು, ಸಹಾಯ ಬರಬಹುದು. ಆದರೆ ಇಂಥ ಮೆರವಣಿಗೆಯ ಎದುರಿಗೆ ಅರ್ಧಮರ್ಧ ಬದುಕಿದವರ ಆತ್ಮವಿಶ್ವಾಸವೇ ಕುಂದಿ ಹೋಗುವಂತಾಗುತ್ತಲ್ಲ.. ಆ ಸಂಕಟ ಇನ್ನೂ ದೊಡ್ಡದು. ಬದುಕಿರುವಾಗಲೇ ಜೀವ ಹೋಗಿರುತ್ತೆ ಅವರದ್ದು. ಅದಕ್ಕೆ ಈ ಬದುಕಿನ ಭಿಕ್ಷೆಗೆ ಮೆರವಣಿಗೆ, ಸಂಭ್ರಮ ಬೇಡ. ಯಾವತ್ತೂ ಯಾವ ಹೆಣ್ಣು ಮಗುವೂ ಸಾಯದಿರೋ ಹಂಗೆ ನೋಡ್ಕೊ ಸಾಕು.
ಒಬ್ಬಳು ಬದುಕಿದರೆ ನೂರು ಅಮ್ಮಂದಿರು ಹುಟ್ಟಿದಂತೆ. ಆದರೆ ಒಬ್ಬಳು ತೀರಿದರೆ ನೂರು ಮಕ್ಕಳು ಅನಾಥರಾಗ್ತಾರೆ. ಯಾವ ಮಕ್ಕಳೂ ಅಮ್ಮಂದಿರ ವಿನಾ ಬದುಕು ಕಳೆಯದಿರಲಿ. ನನ್ನಮ್ಮ ಬೆನ್ನಿಗೆ ನಿಲ್ಲದಿದ್ರೆ ನನ್ನ ಮಗಳು ಬೀದಿಗೆ ಬೀಳ್ತಿದ್ಲು. ಅದರಲ್ಲೂ ಅಮ್ಮನಿಲ್ಲದ ಹೆಣ್ಣುಮಕ್ಕಳ ಪರಿಸ್ಥಿತಿ ತೀರಾ ಗಂಭೀರ ಕಣೋ. ನಿನ್ನ -ಂಡೇಷನ್ ಮೂಲಕ ಎಲ್ಲಿ ಮಕ್ಕಳು ಸಿಕ್ಕಿದರೂ ಒಂದು ತುತ್ತು ಅನ್ನ, ಎರಡಕ್ಷರದ ವಿದ್ಯೆ ಕೊಟ್ಬಿಡು ಸಾಕು. ಆ ದೇವ್ರು ಎಲ್ಲ ಕೊಟ್ಟ. ಕೊನೆಗೆ ಇನ್ನೊಮ್ಮೆ ಬದುಕೂ ಕೊಟ್ಟ ಅಷ್ಟು ಸಾಕು. ಒಂದೆರಡು ಜೀವಕ್ಕೆ ನಾನು ಅಸರೆ ಆದರೂ ಬದುಕು ಸಾರ್ಥಕ...’ ಎನ್ನುತ್ತಿದ್ದರೆ ಆಕೆ ತಂದಿಟ್ಟುಕೊಂಡಿದ್ದ ಮಗು ಅವಿನಾ..
‘ಅಂಕಲ್ ಅಮ್ಮ ಮಾಡಿದ್ದು..’ ಎನ್ನುತ್ತ ತಿಂಡಿಯೊಂದಿಗೆ ಬರುತ್ತಿದ್ದರೆ ಅದನ್ನು ಬಾಚಿ ತಬ್ಬಿಕೊಂಡೆ. ‘ಯಾವ ಅಮ್ಮ..?’ ಎಂದು ಕೇಳಲಿಲ್ಲ. ಪುಟ್ಟ ಮರಿ ಕುಸುಕುಸು ಮಾಡುತ್ತ ಇಳಿದುಹೋಯ್ತು. ದಿನಂಪ್ರತಿ ಆಸ್ಪತ್ರೆಗೆ ತಿರುಗುತ್ತಿದ್ದಳಲ್ಲ. ಆಗ ಕ್ಯಾನ್ಸರ್‌ಗೆ ಬಲಿಯಾದ ಇಬ್ಬರು ಅಮ್ಮಂದಿರ ಮಕ್ಕಳನ್ನು ತನ್ನ ಮಗಳೊಂದಿಗೆ ಸಾಕುತ್ತಿzಳೆ. ‘ಬರುವ ವರ್ಷದಿಂದ ಈ ಮಕ್ಕಳ ಶಾಲೆಯ ಖರ್ಚು ನಂದು ಶೋಭಕ್ಕ..’ ಎಂದೆನಾದರೂ ಯಾಕೋ ನನ್ನೆಲ್ಲ ಚಿಂತನೆಗಳು, ಸೇವೆಗಳೂ ಶೋಭಕ್ಕನ ಮುಂದೆ ಪೇಲವ ಎನ್ನಿಸಿತು. ಮಾತಿಲ್ಲದೆ ಸುಮ್ಮನೆ ಶೋಭಕ್ಕನ ಕೈಹಿಡಿದು ಕೂತಿz. ಎಲ್ಲ ಸರಿ ಇದ್ದರೂ ಯಾಕೋ ಹನಿ ನೀರೂ ಒಳಗಿಳಿಯಲಿಲ್ಲ. 
ಕಾರಣ ಅವಳು ಎಂದರೆ...
(ಲೇಖಕರು ಕಥೆ-ಕಾದಂಬರಿಕಾರರು)

No comments:

Post a Comment