Sunday, September 13, 2015

ಭಾವನೆಗಳಿಗೆ ಬಲಿಯಾಗುವ ಮೊದಲು...

ಭಾವನಾತ್ಮಕವಾಗಿ ಬದುಕನ್ನು ಹಾಳು ಮಾಡಿಕೊಳ್ಳುವುದರಲ್ಲಿ ಬಹುಶಃ ಸೀಯರನ್ನು ಮೀರಿಸುವುದು ಸಾಧ್ಯವಿಲ್ಲ. ಅದರಲ್ಲೂ ತೀರಾ ಜೀವನದ ಪ್ರಾಯೋಗಿಕ ಸತ್ಯಗಳಿಗೆ ಸ್ಪಂದಿಸದಿರುವವರೇ ಇಂಥ ಹುಂಬತನಕ್ಕೂ ಇಳಿಯುತ್ತಾರೆ. ಅಲ್ಲಿಗೆ ಬದುಕಿನ ಚೆಂದದ ದಿನಗಳ ಕಾಲ ಮೇಲೆ ಸ್ವತಃ ಗದಾಪ್ರಹಾರ ಮಾಡಿಕೊಂಡಿರುತ್ತಾರೆ... ಬೇಕಿರುತ್ತಾ ಇದೆಲ್ಲಾ..?

ಅದಾಗಲೇ ಆಕೆ ಎರಡ್ಮೂರು ಬಾರಿ ಕರೆ ಮಾಡಿ ಮಾತಾಡಿದ್ದರೂ ನನಗೆ ಪ್ರತಿಕ್ರಿಯಿಸಲಾಗಿರಲಿಲ್ಲ. ಅಸಲಿಗೆ ಆಕೆಯ ಯಾವ ವಿಷಯಗಳೂ ಮಧ್ಯಂತರದ ಅವಧಿಯಲ್ಲಿ ಅಂಥಾ ಆಸಕ್ತಿಕರವೂ ಆಗಿರಲಿಲ್ಲ. ಆದರೆ ಜೀವನದ ತೀರಾ ಅನ್‌ಟೈಮಿನಲ್ಲಿ ಬದುಕು ಸುಳಿಯೊಡೆದು ಖಾಲಿಯಾಗಿ ನಡುರಸ್ತೆಯಲ್ಲಿ ನಿಂತಿದ್ದಾಗ ಒಂದಷ್ಟು ಮಾತಾಡಿ, ಸ್ನೇಹಿತರ ಮೂಲಕ ಸಹಾಯಕ್ಕೂ ಆಕೆಯ ನೌಕರಿಗೂ ಸಹಕರಿಸಿದ್ದು ಬಿಟ್ಟರೆ ನನ್ನ
ಸ್ಮ ತಿಪಟಲದಲ್ಲಿ ಅಪ್ಪಟ ಅಪರಿಚಿತಳೆ. ಆದರೆ ಬೇಕಿದ್ದೋ ಬೇಡದೆಯೋ ಕೆಲ ಹೆಂಗಸರು ಮೂರ್ಖ ನಿರ್ಧಾರಗಳನ್ನು ಕೈಗೊಂಡುಬಿಡುತ್ತಾರೆ. ತೀರಾ ಭಾವನಾತ್ಮಕ ಸಂಗತಿಗಳಿಗೆ ಇನ್ನಿಲ್ಲದ ಒತ್ತಾಸೆ ಕೊಡುವುದರ ಮೂಲಕ ಜೀವನ ಮತ್ತು ಗಮ್ಯ ಎರಡನ್ನೂ ಹಾಳು ಮಾಡಿಕೊಳ್ಳುತ್ತಾರೆ. ಆಗೀಗ ಇಂಥ ಹುಚ್ಚು ನಿರ್ಧಾರಗಳಿಗೆ ನಾನು ಸಹಕರಿಸುವುದಿಲ್ಲವೆಂದೂ, ಪರಿಸ್ಥಿತಿ ಹೀಗೇ ಗಂಭೀರವಾಗಲಿದೆಯೆಂದು ಎಚ್ಚರಿಸಿದ್ದೂ ಇದೆ. ಆದರೆ ನಿರ್ಧಾರ ಮತ್ತು ಆಯಾ ಕಾಲಮಾನದ ಸ್ಥಿತಿಗತಿಗಳ ಬಿಸಿಯಲ್ಲಿ ಅವರಿಗೆ ಸಲಹೆ ಅಷ್ಟಾಗಿ ಪಥ್ಯವಾಗುತ್ತಿಲ್ಲ ಎನ್ನಿಸುತ್ತಿದ್ದಂತೆ ನಾನೂ ಸುಮ್ಮನಿದ್ದು ಬಿಡುತ್ತೇನೆ. ಹಾಗೆ ಕಾಲಾಂತರದಲ್ಲಿ ಮರೆಯಾಗಿ ಮತ್ತೆ ಚಿತ್ರಕ್ಕೆ ಬಂದೋಳೇ ವತ್ಸಲ.. ಅರ್ಥಾತ್ ವಟ್ಟಿ.
ಅವಳನ್ನು ನಾವೆಲ್ಲ ಆಕೆಗೆ ಕೇಳಿಯೂ ಕೇಳಿಸದಂತೆ ‘ಉಂಡಿ.. ಉಂಡಿ.. ಎಂದು ಕೂಗಿ ರೇಗಿಸುವುದೂ ಇತ್ತು. ಸಿಹಿತಿಂಡಿಗಳ ವಿಪರೀತ ಆಸೆಬುರುಕತನವಿದ್ದ ವಟ್ಟಿ, ಹಿಂದಿನಿಂದ ಏನೇ ಆಡಿಕೊಂಡರೂ ಡೊಂಟ್‌ಕೇರ್ ಪ್ರವೃತ್ತಿಯವಳೇ. ಆದರೆ ‘ರವೆಉಂಡಿ ಎಂದಾಡಿಕೊಳ್ಳುತ್ತಿದ್ದುದು ತನಗೇ ಎಂದು ಗೊತ್ತಾದಾಗ ಮಾತ್ರ ಉಸಿರು ತಿದಿ ಒಡೆಯುವವರೆಗೂ ಅಟ್ಟಾಡಿಸಿ ನನ್ನ ಹೊಡೆಯಲೆತ್ನಿಸಿದ್ದಳು. ಕಾರಣ ಬ್ಯಾಗಿನಲ್ಲಿ ಯಾರಿಗೂ ಕೊಡದೆ ಬಚ್ಚಿಟ್ಟುಕೊಂಡಿದ್ದ ಉಂಡೆಗಳಿಗೆ ಇರುವೆ ದಾಳಿ ಮಾಡಿ ಗಬ್ಬೆಬ್ಬಿಸಿದ್ದಾಗ ಗೊತ್ತಾಗದಂತೆ ಎಸೆಯಲೆತ್ನಿಸಿ ಸಿಕ್ಕಿಬಿದ್ದಿದ್ದು, ಅದೂ ನಾನು ನೋಡಿದ್ದೇನೆಂದು ಗೊತ್ತಾಗಿ ‘ಯಾರಿಗೂ ಹೇಳಬ್ಯಾಡ ಎಂದಾಗಲೂ ಸಾರ್ವತ್ರಿಕಗೊಳಿಸಿದ್ದೆ. ಅದಕ್ಕಾಗಿ ಆಕೆ ಎದುರಿಗಿಲ್ಲದಿದ್ದಾಗ ‘ಉಂಡಿ ಎಲ್ಲಿದ್ದಾಳೆ ಎನ್ನುವುದು ಸಹಜ ಮಾತಾಗಿ ಹೋಗಿತ್ತು. ಈ ಇತಿಹಾಸ ಗೊತ್ತಿಲ್ಲದ ಹೊಸ ಹುಡುಗರಿಂದ ಆಗೀಗ ‘ಉಂಡಿ..ಉಂಡಿ ಎಂದು ಕೂಗಿಸಿ, ಆಕೆ ಬೆನ್ನಟ್ಟುತ್ತಿದ್ದರೆ ಮುಸಿಮುಸಿ ನಕ್ಕು ಚೆದರುತ್ತಿದ್ದೆವು. ತಂಡದಲ್ಲಿದ್ದ ನನಗೆ ಕೊಂಚ ಸದರ ಮತ್ತು ರಿಯಾಯತಿ ಎರಡೂ ಸಿಕ್ಕುತ್ತಿದ್ದುದರಿಂದ ಆಕೆಯನ್ನು ಗೋಳು ಹೊಯ್ಯಲು ನನ್ನನ್ನೇ ಇತರರು ಗುರಾಣಿಯಾಗಿಸಿಕೊಳ್ಳುತ್ತಿದ್ದರು.
ಇಂಥಾ ವಟ್ಟಿ ಮೂಲತಃ ದ.ಕ. ಕಡೆಯ ಹುಡುಗಿ. ಓದಿನಲ್ಲೂ ಸಾಕಷ್ಟು ಮುಂದಿದ್ದುದರಿಂದ ಆಕೆಯ ಇಂಥಾ ಸಣ್ಣತನಗಳನ್ನು ನಾವು ಒಪ್ಪಿಕೊಳ್ಳುವ ಅನಿವಾರ್ಯತೆಯಲ್ಲೂ ಇದ್ದೆವು. ತೀರಾ ಇಪ್ಪತ್ತಾಗುವ ವೇಳೆಗೆ ಪ್ರೇಮಿಯೊಬ್ಬನಿಗೆ ತಗುಲಿಕೊಂಡಿದ್ದಳಾದರೂ ಮೊದಲೇ ಅಬ್ಬೆಪಾರಿಯಂತಿದ್ದ ಅವನೊಂದಿಗಿನ ಸಂಭಾವ್ಯತೆ ಸಾಧ್ಯವಾಗದೆ ಕುಂಟತೊಡಗಿತ್ತು ಅವಳ ಪ್ರೇಮ ಕಥಾನಕ. ನಾವಿನ್ನು ನೌಕರಿ, ಜೀವನ, ಭವಿಷ್ಯ ಎಂದು ಕಣ್ಣುಬಿಡುವ ಮೊದಲೇ ಅವರಮ್ಮ ಬಂದ ಪ್ರಸ್ತಾಪವೊಂದಕ್ಕೆ ಒಪ್ಪಿಕೊಂಡಿದ್ದರಿಂದ ಬೇರೊಬ್ಬನನ್ನು ಮದುವೆ ಆಗಿ ಮಧ್ಯಾಹ್ನದ ಊಟಕ್ಕೆ ಉಂಡಿ ಬಡಿಸಿದಾಗ ನಾವೆಲ್ಲ ಛತ್ರ ಹಾರಿ ಹೋಗುವಂತೆ ನಕ್ಕುನಕ್ಕು ಹೊಟ್ಟೆ ಹಿಡಿದುಕೊಂಡಿದ್ದೆವು. ನಂತರದ ದಿನಗಳಲ್ಲಿ ನಮ್ಮ ನಮ್ಮ ಬದುಕಿನ ಜಂಜಡದಲ್ಲಿ ವಟ್ಟಿ ಕಳೆದುಹೋಗಿದ್ದಳು.
ನಾನೊಮ್ಮೆ ಚಿಕಿತ್ಸೆಗೆಂದು ಮಣಿಪಾಲಕ್ಕೆ ಹೋದಾಗ ತೀರಾ ಆಕಸ್ಮಿಕವಾಗಿ ಉಡುಪಿಯಲ್ಲಿ ಸಿಕ್ಕಿದ ವತ್ಸಲ, ಗಂಡ ಮತ್ತು ಮಕ್ಕಳನ್ನು ಪರಿಚಯಿಸಿದ್ದಳು. ಹುಡುಗ ಒಳ್ಳೆಯ ಕೆಲಸದಲ್ಲೂ, ನೋಡುತ್ತಲೇ ‘ಸರ್ ಎಂದು ಮಾತಾಡಿಸೋಣ ಎನ್ನಿಸುವಂತಿದ್ದ. ಅಕ್ಕಪಕ್ಕದಲ್ಲಿ ಎರಡು ಮುದ್ದಾದ ಮಕ್ಕಳು. ಮೊದಲೇ ನುಲಿಯುತ್ತಿದ್ದ ವತ್ಸಲ ಸ್ವರ್ಗಕ್ಕೆ ಕಿಚ್ಚು ಹಚ್ಚುತ್ತಿದ್ದುದರಲ್ಲಿ ಸಂಶಯವೇ ಇರಲಿಲ್ಲ.‘ಚೆನ್ನಾಗಿರು ಪಾರ್ಟಿ ಪಾರ್ಟಿ..ರವೆ ಉಂಡಿದು ಎಂದು ರೇಗಿಸಿ ಬಂದಿದ್ದೆ. ಆಮೇಲಾಮೇಲೆ ಆಗೀಗ ಸಂಪರ್ಕದಲ್ಲಿದ್ದರೂ ನಾನು ಮತ್ಯಾವತ್ತೂ ಮಂಗಳೂರು ಕಡೆಯ ರಸ್ತೆಗೆ ಇಳಿಯಲಿಲ್ಲವಾಗಿ ಆಕೆಯೂ ಅಲಭ್ಯಳಾಗಿದ್ದು ಸಹಜ. ಈ ಮಧ್ಯೆ ನಾನೂ ಕರ್ನಾಟಕ ಬಿಡುವುದರೊಂದಿಗೆ ನಾಲ್ಕಾರು ವರ್ಷಗಳು ಸಂಪರ್ಕ ತಪ್ಪಿದ್ದು ಮರೆತೂ ಬಿಟ್ಟಿದ್ದೆ.
‘ಸಂತೋಷ.. ಮಾತಾಡೊದೇನ್ರಿ..? ಆಕಸ್ಮಿಕವಾಗಿ ಆವತ್ತು ಕರೆ ಬಂದಾಗ ಧ್ವನಿಯ ಪರಿಚಯ, ನಂಬರು ಎರಡೂ ಗೊತ್ತಾಗದ್ದುದರಿಂದ ‘ಹೌದು ಯಾರು..? ಎನ್ನುತ್ತಿದ್ದಂತೆ ‘ಎಲ್ಲ ಮರೆತು ಬಿಟ್ಟಿದ್ದಿ ನೋಡು..ವತ್ಸಲ.. ವಟ್ಟಿ.. ಎನ್ನುತ್ತ ಗಲಗಲ ಮಾಡಿದ್ದಳು. ನಂತರದಲ್ಲಿ ಆಕೆಯ ಸಂಸಾರದ ಕಥೆಗಳು ಎಳೆ ಬಿಚ್ಚಿದ್ದವು. ವಟ್ಟಿಯ ಗಂಡ ನೌಕರಿಯ ಹೊರತಾಗಿ ಏನೂ ಮಾಡುತ್ತಿರಲಿಲ್ಲ. ಮನೆಯಲ್ಲಿ ಹೆಂಡತಿ ಎಂದರೆ ಕೆಲಸದವಳು ಎನ್ನುವ ಕೋಟ್ಯಂತರ ಭಾರತೀಯ ಗಂಡಸರ ಅಪರಾವತಾರದಂತಿದ್ದ. ಕನಿಷ್ಠ ನಾಲ್ಕಾರು ಬಾರಿ ಬಾಯಿಗೆ ತಂಬಾಕು ತುಂಬಿಕೊಳ್ಳುತ್ತಿದ್ದ. ಕುಡಿತಕ್ಕೇನೂ ಬರವಿರಲಿಲ್ಲ. ಮರ್ಯಾದೆಯುತ ಶ್ರೀಸಾಮಾನ್ಯನಂತೆ ಯಾರಿಗೂ ಸುಳಿವು ಕೊಡದೆ ಕದ್ದು ಕುಡಿಯುತ್ತಿದ್ದ.
ವಿಪರೀತ ಜಿಪುಣ, ಹೆಂಡತಿ ಮನೆಯಿಂದ ಹೊರಬರುವಂತಿಲ್ಲ. ಬೆಳಗ್ಗೆದ್ದು ಕೆಲಸಕ್ಕೆ ಹೋಗಿ ಹಿಂದಿರುಗಿದ ಮೇಲೆ ಜಗತ್ತಿನ ಸರ್ವ ಸಮಸ್ಯೆಗೆ ಪರಿಹಾರ ಎನ್ನುವಂತೆ ನ್ಯೂಸ್ ಚಾನಲ್ ನೋಡುತ್ತ ಆಕಸ್ಮಿಕವಾಗಿ ಅಡ್ಡಬರುವ ಹೆಂಡತಿ ಮಕ್ಕಳನ್ನು ಬೈದಾಡುತ್ತ, ಬಾಯಿ-ಲ್ ಇದ್ದರೆ ಕಣ್ಣಲ್ಲೇ ಸಾವಿರ ವ್ಯಾಟ್ ಬೆಳಗಿಸುತ್ತ, ಕಣ್ಣಿಗೆ ಹೆಂಡತಿ ಕಂಡಾಗಲೆಲ್ಲ ‘ಅದೇನಾಯಿತು..? ಇದೇನಾಯಿತು..? ಇದ್ಯಾಕೆ ಹಿಂಗೆ.. ಅವರನ್ನು ನೋಡು..ಇವ್ರರನ್ನು ನೋಡು... ಇದೇನು ದಿನಾ ಇದೇ ಕೆಟ್ಟ ನೈಟಿ.. ಕುತ್ತಿಗೆ ಮೇಲ್ಯಾಕೆ ನರೌಲಿ..? ಸರಿಯಾಗಿ ಸ್ನಾನ ಮಾಡೋಕಾಗಲ್ವಾ ಗಬ್ಬು ಹೆಂಗಸರು, ಅದೇನು ಕಲಿಸಿದರೋ ನಿಮ್ಮಮ್ಮ ನಿನಗೆ..? ಇದೂ ಅಡುಗೇನಾ..?; ಹೀಗೆ ಕಿರಿಕಿರಿಗೆ ಯಾವ ಕಾರಣವೂ ಬೇಕಿರಲಿಲ್ಲ. ಒಂದು ಸಂಶಯ ಬಂದರೂ ಸಾವಿರ ಪ್ರಶ್ನೆಗೆ ಆಕೆ ಉತ್ತರ ಕೊಡಬೇಕಿತ್ತು. ಅಪ್ಪಟ ಲೆಕ್ಕಾಚಾರಿಯೊಂದಿಗೆ ವಟ್ಟಿಯಂತಹ ಹುಡುಗಿ ಹೇಗೆ ಜೀವನ ತೆಗೆಯುತ್ತಿದ್ದಳೋ ಒಟ್ಟಾರೆ ಬದುಕು ಸಾಗುತ್ತಿತ್ತು. ಬಹುಶಃ ವತ್ಸಲ ಅದಕ್ಕೆ ಒಗ್ಗಿ ಹೋಗಿದ್ದಳು.
ದುರಂತವೆಂದರೆ ಇಂತಹ ಗಂಡಸರು ಸಮಾಜದಲ್ಲಿ ಒಳ್ಳೆಯವರಾಗೇ ಗುರುತಿಸಿಕೊಂಡಿರುತ್ತಾರೆ. ಯಾರೊಂದಿಗೂ ಇವರ ಜಗಳ, ತಂಟೆಗಳಿರುವುದಿಲ್ಲ. ಯಾರು ಎದ್ರಿಗೆ ಸಿಕ್ಕರೂ ಹಲ್ಕಿರಿವ ಮರ್ಯಾದೆಯುತ ನಡವಳಿಕೆ, ರೋಪು, ದೊಡ್ಡಸ್ತನ ಉಹೂಂ.. ಡಾಮಿನೇಷನ್ನು ಬೇಕಾಗಿಲ್ಲ. ಯಾರೂ ಕೂಡ ಮನೆಯಲ್ಲಿ ಹೀಗೆಲ್ಲ ವರ್ತಿಸುತ್ತಾರಾ..? ಎನ್ನುವಷ್ಟು ಸಹಜವಾಗಿರುವ ಸ್ವಭಾವ. ಯಾವ ಬೇಡಿಕೆ ಇತ್ಯಾದಿಗಳಿಲ್ಲದೆ ಬಂದವರು ಹೋದವರೆದುರಿಗೆ ಹಿ..ಹಿ.. ಎಂದಿದ್ದು ಬಿಡುವ ಕಾರಣ, ಇಂಥ ದಿನವಿಡೀ ಕಿರಿಕಿರಿಯನ್ನು ಯಾರೂ ದೊಡ್ಡದು ಎನ್ನುವುದೇ ಇಲ್ಲ. ಅಸಲಿಗೆ ಇಂಥ ‘ಸೈಲಂಟ್ ಇರಿಟೇಷನ್-Zmಟo;ಗೆ ಒಂದು ದೃಢವಾದ ಬೇಸ್ ಇರುವುದೇ ಇಲ್ಲ. ಹಾಗಿದ್ದುದನ್ನು ವಿವರಿಸೋದಾದರೂ ಹ್ಯಾಗೆ..? ಮನಸ್ಸೂ ಬಗ್ಗಡವಾಗಿ ಬಾಯಿ ಮುಚ್ಚಿಕೊಂಡು ಇದ್ದು ಬಿಡುತ್ತಾರೆ ಹೆಂಗಸರು. ಕಾರಣ ಎದುರಿಗೇ ಮಕ್ಕಳೂ ಬೆಳೆಯುತ್ತಿರುತ್ತಾರೆ. ಏನು ಮಾತಾಡಿದರೂ ಅದರ ಪರಿಣಾಮ ಅವರ ಮೇಲಾಗುತ್ತಿರುತ್ತದೆ.
ಆದರೆ ಜೊತೆಗಿದ್ದೇ ಅನುಭವಿಸೋದಿದೆಯಲ್ಲ ಆ ಪರಿಸ್ಥಿತಿ ದೇವರಿಗೇ ಪ್ರೀತಿ. ಕಾರಣ ಯಾವ ರೀತಿಯಲ್ಲೂ ದೂರಿಕೊಳ್ಳಲಾಗದ ಕೌಟುಂಬಿಕ ಹಿಂಸೆಯ ಪ್ರತಿರೂಪದಲ್ಲಿ ಯಾರಿಗೂ ಹೇಳಿಕೊಳ್ಳಲೇನೂ ಇರುವುದೇ ಇಲ್ಲ. ಹಾಗಾಗಿ ಮಕ್ಕಳೊಂದಿಗೆ, ಮಧ್ಯವಯಸ್ಸಾಗುವಾಗ ತನ್ನದೂ ಪರಾವಲಂಬಿಯಾಗಿರುವ ಹತಾಶೆಗೆ ಮನಸ್ಸು ದಡ್ಡೆದ್ದು ಹೋಗಿರುತ್ತದೆ. ಒಮ್ಮೊಮ್ಮೆ ಇಂಥಾ ಅನಿರೀಕ್ಷಿತ ಒಳತೋಟಿಗಳಿಗೂ ಆಘಾತಕಾರಿ ಮುಕ್ತಿ ದೊರಕಿಬಿಡುತ್ತದೆ. ವಟ್ಟಿಯ ಪ್ರಕರಣದಲ್ಲಿ ಆದದ್ದೂ ಅದೇ. ಇದ್ದಕ್ಕಿದ್ದಂತೆ ಜರುಗಿದ ಅಪಘಾತದಲ್ಲಿ ವಟ್ಟಿಯ ಗಂಡ ನೆಗೆದು ಬಿದ್ದಿದ್ದ. ಏನೇ ಆದರೂ ಗಂಡ ಕುಟುಂಬದ ಆಧಾರ. ವತ್ಸಲ ಏನೇ ಹೆಣಗಾಡಿದರೂ ಬದುಕಿಸಿಕೊಳ್ಳಲಾಗಲಿಲ್ಲ. ಅನಿರೀಕ್ಷಿತವಾಗಿದ್ದರೂ ಬದುಕು ಬಹುಬೇಗ ಹಳಿಗೆ ಹತ್ತಿತ್ತು.
ವತ್ಸಲಳ ಜಿಗುಟುತನಗಳೆಲ್ಲ ಈಗ ಗರಿಗೆದರಿದ್ದವು. ಕೆಲಸಕ್ಕೆಂದು ನಮ್ಮೆಲ್ಲರೊಂದಿಗೆ ಸಂಪರ್ಕಕ್ಕೆ ಬಂದಳು. ಸ್ನೇಹಿತರಿಗೆ ಹೇಳೋಣ ಎನ್ನುವಷ್ಟರಲ್ಲಿ ಅದೃಷ್ಟಕ್ಕೆ ಸಹಾನುಭೂತಿಯ ಆಧಾರದಲ್ಲಿ ನೌಕರಿ ಕೈಗೆ ಹತ್ತಿ ಎರಡೇ ವರ್ಷದಲ್ಲಿ ಬೆಂಗಳೂರಿಗೇ ವರ್ಗಾಯಿಸಿಕೊಂಡಳು. ಅಮ್ಮನನ್ನೂ ಕರೆಸಿಕೊಂಡು ಅದೇ ವಟ್ಟಿನಾ ಎನ್ನುವ ಮಟ್ಟಿಗೆ ರಾಜಧಾನಿಯ ಅಬ್ಬರದ ಖದರಿಗೆ ಹೊಂದಿಕೊಂಡಿದ್ದಳು. ದಿರಿಸು, ವರಸೆ ಎರಡೂ ಬದಲಾಗಿದ್ದವು. ತೀರಾ ಅಂಥಾ ಗಂಡನನ್ನು ಕಟ್ಟಿಕೊಂಡು ತುಂಬ ಏಗಿದ್ದ ವಟ್ಟಿಯಂಥವಳು, ಅನಿವಾರ್ಯವಾಗಿ ಅದರಲ್ಲೇ ಜೀವನ ಏಗಲು ಸಿದ್ಧಳಾದವಳಿಗೆ, ಬದಲಾದ ಬದುಕು ಹೊಸ ಲೋಕವನ್ನೇ ತೆರೆದಿದ್ದು ಸುಳ್ಳಲ್ಲ ಎನ್ನುವ ಹೊತ್ತಿಗೆ,
“ಸಂಸಾರ ಅಂದಮ್ಯಾಲೆ ಸಾವಿರ ಇರ್ತಾವೆ.. ಅಲ್ಲವಾ..? ಬೇರೇನು ಮಾಡ್ಲಿಕ್ಕೆ ಸಾಧ್ಯ ಇತ್ತು ನನಗೆ. ಅತ್ತ ಮಕ್ಕಳು, ಇತ್ತ ಅಮ್ಮನ ಮುಖಾ... ಸುಮ್ನಿರ್ತಿದ್ದೆ. ತೀರಾ ಏನೂಂತ ಹೇಳೋಕಾಗುತ್ತೆ ಇಂಥಾ ಸಂಕಟಕ್ಕೆ. ಯಾರೂ, ಯಾವ ಕಾರಣಕ್ಕೂ ‘ಆಯ್ತು ಬೇರೆ ಸಂಸಾರ ಹೂಡು..ನಿನಗೆ ಬೇಕಾದಂಗಿರು.. ನೆಮ್ಮದಿನಾದರೂ ಇರ್ತದೆ ಎಂದಿದ್ದು ಇದೆಯಾ..? ಎಲ್ಲರೂ ಅಡ್ಜಸ್ಟ್ ಮಾಡಿಕೊ ಅಂತಿದ್ರೆ ವಿನಾ ಈ ಅಡ್ಜಸ್ಟ್ ಎನ್ನುವುದು ಹೇಗಾಗುತ್ತದೆ, ಹೇಗಿರಬೇಕು ಎನ್ನುವುದನ್ನು ಇಲ್ಲಿವರೆಗೆ ವಿವರಿಸಿಲ್ಲ. ಹೇಳೋದು ಸುಲಭ ಅದರೆ ಇಂಥಾ ಸಂಸಾರ ಮಾಡೋದಿದೆಯಲ್ಲ ಒಂಥರಾ ದಿನಾಲು ಗೊತ್ತಿರೋ ಸಾವಿನ ದಾರಿ ನೋಡಿದಂಗೆ..; ಎಂಬಿತ್ಯಾದಿ ಭಾವನೆಗಳನ್ನು ತೋಡಿಕೊಂಡಿದ್ದ ವತ್ಸಲ, ಅಷ್ಟೇ ಬೇಗ ಚಿಗುರಿದ್ದು, ಮರುಮದುವೆಗೆ ಒಲವಾಗಿದ್ದು ಸಖೇದಾಶ್ಚರ್ಯ.
‘ಯಾಕೆ ನೀನೂ ಬಾಂಡ್ಲಿಯಿಂದ ಬೆಂಕಿಗೆ ಬೀಳ್ಬೇಕಾ..? ಎಂದಿದ್ದೆ. ಭಾವಾತಿರೇಕಕ್ಕೇ ಒಳಗಾಗುವ, ಪ್ರಾಯೋಗಿಕ ಸತ್ಯಗಳಿಗೆ ಎರವಾಗದ ಹೆಂಗಸರು ಮಾಡುವ ತಪ್ಪನ್ನೇ ವತ್ಸಲಳೂ ಮಾಡಿಬಿಟ್ಟಿದ್ದಳು. ಎರಡು ದಶಕಗಳ ಹಳೆಯ ಪ್ರೇಮಿ ವಟ್ಟಿಯ ಎದುರಿಗೆ ಎದ್ದು ನಿಂತಿದ್ದ. ಕಥೆ ಹೊಸ ಮಗ್ಗುಲಿಗೆ ಹೊರಳಿತ್ತು. ಬೇಡದ ದುಸ್ಸಾಹಸಕ್ಕೆ ಮನಸ್ಸು ಬಗ್ಗಡ. ಅದಿನ್ನು ಮುಂದಿನವಾರಕ್ಕಿರಲಿ.
ಕಾರಣ
ಅವಳು ಎಂದರೆ...

1 comment:

  1. ಭಾವಕ್ಕೆ ತಕ್ಕಡಿ ಇಲ್ಲ . ತಕ್ಕಡಿ ಇಲ್ಲದ ನಿರ್ಧಾರಗಳ ಪರಿಣಾಮ ? ಬರಹ ಇಷ್ಟ ಆಯ್ತು

    ReplyDelete