Monday, September 2, 2013

ಕುಡಿತವನ್ನು ಕುಟುಂಬ ಪದ್ಧತಿಯಾಗಿಸುವ ಯೋಜನೆಯೇ...?

         ಬೆಳಿಗ್ಗೆದ್ದರೆ ಮಕ್ಕಳಿಗೆ ಸ್ಕೂಲು, ಗಂಡನೊಂದಿಗೆ ಸ್ವಂತ ನೌಕರಿಗೆ ಹೊರಡುವ ತಯಾರಿ, ಕಟ್ಟಬೇಕಾದ ಕರೆಂಟು, ಸಿಲೆಂಡರ್ರು ಬಿಲ್ಲು,  ಹಾಲು ಬಂದಿಲ್ಲ, ನೀರು ಸರಬರಾಜಿಲ್ಲ, ಅಸ್ಪತ್ರೆಯಲಿರುವ ಹಿರಿಯರಿಗೆ ಡಬ್ಬಿ, ಹಿಂದಿನ ದಿನ ರುಬ್ಬಿಟ್ಟುಕೊಳ್ಳದಿದ್ದರೆ ಇವತ್ತಿಗೆ ದೋಸೆ ಇಲ್ಲ, ನಾಳೆಯಿಂದ ಆಟೋ ಮುಷ್ಕರ ಮಕ್ಕಳನ್ನು ಡ್ರಾಪ್ ಮಾಡು, ಈ ಮಧ್ಯೆ ಕರೆಂಟು ಖೋತಾದಿಂದ ಆಫೀಸು ದಿರಿಸು ಇಸ್ತ್ರೀಯಾಗಿಲ್ಲ, ಮಗಳ ಶೂ ಪಾಲಿಶ್ ಇಲ್ಲ.. ಅಕಾಲಿಕ ಪೀರಿಯೆಡ್ಡಿನಿಂದಾಗಿ ರಾತ್ರಿ ಸಾಕಾಗದ ನಿದ್ರೆ, ಟ್ರಾಫಿಕ್ಕಿನ ಕಿರಿಕಿಗೆ ಮೈಗ್ರೇನ್‍ನ ಕಾಟ ತಪ್ಪುತ್ತಿಲ್ಲ... ಹೀಗೆ ಹಲವು ದೈನಂದಿನ ಜೀವನ ವಿಧಾನದೊಂದಿಗೆ ನೌಕರಿ, ಅಲ್ಲಿನ ಸವಾಲುಗಳು, ಈ ಮಧ್ಯೆ ಮನೆಯ ಸರ್ವ ಸಾರಥ್ಯಕ್ಕೆ ಸಮಾನ ಹೆಗಲು ಕೊಡುತ್ತಲೇ ಸ್ವಂತಿಕೆಯ ಹೆಸರು, ಹಣ ಎರಡನ್ನೂ ಸಮಾನವಾಗಿ ಪುರುಷನೊಂದಿಗೆ ನಿಭಾಯಿಸುತ್ತಾ ಮನೆಗಳನ್ನು ನಡೆಸುತ್ತಿರುವ ನಮ್ಮ ಹೆಣ್ಣು ಮಕ್ಕಳಿಗೆ ದಿನಾ ರಾತ್ರಿ-ಹಗಲೂ ನೀವು ಕುಳಿತು ಸಮಾನವಾಗಿ ಕಂಠ ತನಕ ಕುಡಿರವ್ವ ಎಂದು ಹೇಳುತ್ತಿರುವ ಅಖಿಲೇಶ್ವರಿಯವರೇ ನಮ್ಮದು ಭಾರತೀಯ ಸಂಸ್ಕೃತಿಯ ಕುಂಟುಂಬ ಆಧಾರಿತ ಸಮಾಜ ಪದ್ಧತಿ ಎನ್ನುವುದನ್ನೇಕೆ ಮರೆತಿರಿ..?
             ಮನೆಯಲ್ಲಿ ಮಧ್ಯ ತಯಾರಿಸುವ, ಮತ್ತದನ್ನು ಮಕ್ಕಳಿಗೆ ಕುಡಿಸಿ ಬೆಳೆಸುವ ಪ್ರಮಾಣ ಭಾರತದ ನಮ್ಮ ಸಂಸ್ಕೃತಿಯಲ್ಲಿ ಎಷ್ಟು ಜನರಿದ್ದಾರೆ.. ಗೊತ್ತೇ ಶೇ. 0.03 ಕೂಡಾ ದಾಟುವುದಿಲ್ಲ. (ನಾನು ಸಂದರ್ಶಿಸಿದ ಅಪ್ಪಟ ಬುಡಕಟ್ಟುಗಳಲ್ಲೂ ಮಹಿಳೆಯರು ಮನೆಯಲ್ಲಿ ಮಧ್ಯ ತಯಾರಿಸಿದರೂ ಕುಡಿಯಲು ಸ್ವತ: ಒಪ್ಪದ ದೃಷ್ಟಾಂತ ನನ್ನ ಎದುರಿಗೆ ಇವೆ.) ಅದ್ಯಾವ ಸಾವಿರಗಟಲೇ ಬುಡಕಟ್ಟುಗಳು ಹೀಗೆ ಸಮಾನಾಂತರ ಹೆಂಡದ ಕಾರ್ಯಕ್ರಮ ಆಚರಿಸುತ್ತಿವೆ ತಿಳಿಸ್ತಿರಾ..? ಅಧಿಕೃತ ಬುಡಕಟ್ಟುಗಳ ಸಂಖ್ಯೆಯೇ ನಮ್ಮಲ್ಲಿ ಸಾವಿರ ದಾಟುವುದಿಲ್ಲ ಗೊತ್ತಿರಲಿ. (ದೇಶಾದ್ಯಂತ ಸಂಚರಿಸುತ್ತಾ ವಿಭೀನ್ನ ಜನಜೀವನ ಅಧ್ಯಯನಕ್ಕೆ ಸಾಕಷ್ಟು ಸಮಯ ಸುರಿವ ನನಗೆ ಎಲ್ಲೂ ಹೆಂಡದ ಬಲದಿಂದಲೇ ಸಾಮೂಹಿಕ ಆನಂದಕ್ಕೀಡಾಗುತ್ತಿರುವ ಅಂಶ ಎದ್ದು ಕಂಡಿಲ್ಲ. ಸಾಮೂಹಿಕ ಕುಡಿತ ಎನ್ನುವದು ಹಬ್ಬ ಹರಿದಿನ ಆಚರಣೆಯಲ್ಲಿ ಕೆಲವು ಕಡೆಯಲ್ಲಿದೆ ಅಷ್ಟೆ) 
         ಯಾಕೆ ಈಗಾಗಲೇ ದೇಶಾದ್ಯಂತ 2-3 ನಿಮಿಷಕ್ಕೊಮ್ಮೆ ಕುಡಿದ ಅಮಲಿನಲ್ಲಿ ನಡೆಯುತ್ತಿರುವ ಅತ್ಯಾಚಾರ, ಕೊಲೆಯಂತಹ ಅಪರಾಧಗಳು ದೌರ್ಜನ್ಯಗಳು ಸಾಕಾಗುತ್ತಿಲ್ಲವೆ..? ಹೆಚ್ಚಿನ ಘಟನೆಗಳು ನಡೆಯುತ್ತಿರುವುದು ಕುಡಿದ ಅಮಲಿನಲ್ಲಿ ಮತ್ತು ಮಹಿಳೆಯರ ಸಹಭಾಗಿತ್ವದಲ್ಲಿಯೇ ಅನೈತಿಕ ಸಂಬಂಧಗಳ ಅಪರಾಧಗಳು ಜಾರಿಯಾಗುತ್ತಿವೆ. ಅದರಲ್ಲೂ ಈ ದೇಶದಲ್ಲಿ ಕುಡಿತದ ಬೆಂಬಲಿಂದಿಂದಾಗಿ ಆದ ಕ್ರೈಂ ರೇಟು ಶೇ. 63. ಎನ್ನುವುದು ನಿಮ್ಮ ಗಮನದಲ್ಲೇನಾದರೂ ಇದೆಯಾ ಅಥವಾ ಸಮಾನತೆಯ ಹೆಸರಲ್ಲಿ ಅದೂ ನಿಮಗೆ ಸಮ್ಮತವಾ..?
         ಹೆಚ್ಚಿನಂಶ ಮನೆಯಲ್ಲಿ ಮಕ್ಕಳಿಗೂ ರುಚಿ ತೋರಿಸುವ, ಜೊತೆಗೆ ಕೂರಿಸಿಕೊಂಡು ಕುಡಿವ, ಹುಟ್ಟುತ್ತಲೇ ಕುಡುಕರನ್ನಾಗಿಸುವ ಕುಟುಂಬದ ವ್ಯವಸ್ಥೆ, ನಿಮ್ಮದೂ ಸೇರಿದರೂ ಈ ದೇಶದಲ್ಲಿ ಶೇ. 0.01 ಕೂಡಾ ಇಲ್ಲ. ನಮ್ಮಲ್ಲಿ ಕುಡಿತ ಎನ್ನುವುದು ಸಾಮೂಹಿಕ ಮತ್ತು ಮಹಿಳೆಗೂ ಬೇಕಾಬಿಟ್ಟಿ ಕುಡಿಯಲು (ಗಂಡಸರಂತೆ) ಬೇಕು ಎನ್ನುವ ಹೆಂಗಸರನ್ನು ನೀವು ಹತ್ತು ತೋರಿಸಿದರೆ, ಬೇಡವೇ ಬೇಡ ಎನ್ನುವ ಮಹಿಳೆಯರನ್ನೇ ನಾನು ಲಕ್ಷದ ಲೆಕ್ಕದಲ್ಲಿ ತೋರಿಸುತ್ತೇನೆ. ಹದ ತಪ್ಪಿದಂತೆ ಹವಾಮಾನ ವೈಪರಿತ್ಯ ಅನುಭವಿಸುವ ರಷ್ಯಾದಿಂದ ಅಂಟಾರ್ಟಿಕಾ ಗಡಿಯವರೆಗಿನ ಯಾವ ಭಾಗದಲ್ಲೂ ಮಹಿಳೆಯರ ಕುಡಿತದ ಒಲವಿರುವ ಶೇ.ಪ್ರಮಾಣ 6.6 ಕ್ಕಿಂತ ಜಾಸ್ತಿ ಇಲ್ಲ ಅದೂ ಪ್ರಕೃತಿಗೆ ಒಗ್ಗಿಕೊಳ್ಳಲು. ಅಂಥಾದರಲ್ಲಿ ನಮ್ಮ ಹವಾಮಾನಕ್ಕೆ ಬೇಕಾಗೇ ಇಲ್ಲದ ಕುಡಿತಕ್ಕೆ ಸಮಾನತೆ ಬಯಸುವ ನಿಮಗೆ ಯಾವ ಕೋನದಲ್ಲಿ ಮಹಿಳೆ ಕುಡಿದು ಮುಂದೆ ಬರಬಹುದು ಎನ್ನಿಸಿದ್ದು..? ( ಒಮ್ಮೆ ಈ ಬಗ್ಗೆ ಅ0ತರ್ಜಾಲವನ್ನೂ ಗೂಗಲಿಸಿ ನೋಡಿ ಬೇಕಿದ್ದರೆ )
           ಅಸಲಿಗೆ ಸಾಮಾಜಿಕವಾಗಿ ಪಿಡುಗಾಗಿರುವ ಕುಡಿತವನ್ನೆ ಬಹಿಶ್ಕರಿಸಿ ಪುರುಷರನ್ನೂ ಅದರಿ0ದ ಹೊರತರುವ ಕ್ರಿಯಾತ್ಮಕ ಯೋಜನೆಗಳಿಗೆ ಇಂಬುಕೊಡುವ ಬದಲಾಗಿ, ಮಹಿಳೆಯರನ್ನೂ ಕುಡಿತಕ್ಕೆಳಸಿ ಹಾಳು ಮಾಡುವ ನಿಮ್ಮ ಬಳಿ, ಬರೆದಿರುವ ಈ ಲೇಖನಕ್ಕೆ ಸೂಕ್ತ ಆಧಾರಗಳಿದ್ದರೆ ಬನ್ನಿ ಬಹಿರಂಗ ಚರ್ಚೆಗೆ. ಯಾವ ಸಮಾಜದಲ್ಲಿ ಕುಡಿತದ ಸಮಾನತೆಗೆ ಸಾಮಾಜಿಕ ಮೌಲ್ಯಗಳ ಬೆಂಬಲ ಇದೆ ಅಥವಾ ಇಲ್ಲ, ಯಾವ್ಯಾವ ಬುಡಕಟ್ಟುಗಳು ಹೇಗೆ ಆಚರಣೆಯಲ್ಲಿವೆ ಎಂದು. ಸೂಕ್ತವಾಗಿ ಹೇಳಬೇಕೆಂದರೆ, ಬದಲಾವಣೆಯ ಈ ಕಾಲಘಟ್ಟದಲ್ಲಿ ನೀವು ತಿಳಿದಂತೆ ಈಗಲೂ ಮಹಿಳೆಯ ಮೇಲೆ ಸವಾರಿ ನಡೆಯುತ್ತಿದೆ ಎನ್ನುತ್ತಿದ್ದೀರಲ್ಲ, ನಿಮ್ಮ ಬರಹದ ಧಾಟಿಯನ್ನು ಗಮನಿಸಿದರೆ ಸ್ವತ: ನೀವಿನ್ನೂ ಎರಡು ದಶಕದಿಂದಿಚೇಗೆ ಬೆಳೆದೇ ಇಲ್ಲ.
         ಆಂಧ್ರ ಪ್ರದೇಶವನ್ನು ತಾಲಿಬಾನ್‍ಗೆ ಹೋಲಿಸುವ ನೀವು ನಿಮ್ಮ ಮನೆಗೆ ಬರುವ ಅತಿಥಿಗೆ ಮದ್ಯವನ್ನು ಅಹಾರದೊಂದಿಗೆ ಪೂರೈಸುವ ಸಂಸ್ಕೃತಿಯನ್ನು ಬೆಳೆಸಿಕೊಂಡಿದ್ದೀರಾ..? ನೀವು ನಿಮ್ಮ ಹಿತೈಸಿಗಳ/ಸ್ನೇಹಿತರ ಮನೆಗೆ ಹೋದಾಗ ಅಲ್ಲಿನ ಮಹಿಳೆಯರನ್ನು ನನ್ನೊಂದಿಗೆ ಕೂತು ಕುಡಿಯಿರಿ, ನನಗೂ ಕುಡಿಯಲು ಹೆಂಡ ಕೊಟ್ಟು ಸತ್ಕರಿಸಿ ಎಂದು ಕೋರಿದ್ದೀರಾ..? ಇಲ್ಲ ಎಂದಾದಲ್ಲಿ ಹೀಗೆ ಬಹಿರಂಗವಾಗಿ ಮಹಿಳೆಯರಿಗೆ ಕುಡಿತದಲ್ಲಿ ಸಮಾನತೆಗಾಗಿ ಕಾನೂನು ಮತ್ತು ಅದಕ್ಕೆ ಬ್ರಾಹ್ಮಣೀಕರಣ, ಮೇಲ್ವರ್ಗದಲ್ಲಿ ಸಾಮೂಹಿಕ ಕುಡಿತ, ಕೆಳವರ್ಗದಲ್ಲಿ ಇದು ಅಸಮಾನತೆ ಎಂಬಿತ್ಯಾದಿ ನಿಮ್ಮ ಪೂರ್ವಾಗ್ರಹ ಪೀಡಿತಗಳಿಂದ ಮೊದಲು ಹೊರಬಂದು ಸ್ವಾಸ್ಥ್ಯ ಸಮಾಜಕ್ಕೆ ಕುಡಿತ ಎಷ್ಟು ಅವಶ್ಯಕ ಮತ್ತು ಅದರಲ್ಲೂ ಮಹಿಳೆಯರಿಗೂ ಪುರುಷರಷ್ಟೆ ದಿನವೂ ಸಮಾನ ಕ್ವಾಂಟಿಟಿ ಕುಡಿತ ಇರಬೇಕಾ ಎನ್ನುವುದನ್ನು ಯೋಚಿಸಿ. 
           ಕಾರಣ ತಾವು ಮುಂದುವರಿದಿದ್ದೇನೆ, ಸಮಾನತೆ ಸಾಧಿಸಿದ್ದೇವೆ(?) ಎಂದು ನಂಬಿರುವ ಮಹಿಳೆಯರು ಬೀಡುಬೀಸಾಗಿ ಪುರುಷರಿಗಿಂತ ಮುಂದಾಗಿ ಕುಡಿತ, ಪುರುಷ ನಗ್ನ ನೃತ್ಯ, ಸೀಗರೇಟು ಸೇವನೆ, ಗುಂಪು ಕುಡಿತ, ಸಾಮೂಹಿಕ ಸೆಕ್ಸ್.. ಹೀಗೆ ಇರುವ ಜಗತ್ತಿನ ಅಷ್ಟೂ ಅಪಸವ್ಯಗಳಿಗೂ ಈಡಾಗುತ್ತಿದ್ದಾರಲ್ಲ ಅದು ಅತಿ ಸಮಾನತೆಯಾಯಿತು ಅವರನ್ನು ಹಿಂದಕ್ಕೆ ಕರೆಸೋಣ ಎಂದು ಹೇಳಿಕೆ ಕೊಡ್ತಿರಾ..? ( ನಮ್ಮ ಪುಣ್ಯ, ಈ ದೇಶದಲ್ಲಿ ಎಷ್ಟೆ ಮುಂದು ವರೆದಿದ್ದರೂ ಇಂಥಹ ಅಪಸವ್ಯಗಳಿಗೆ ಈಡಾದವರ ಮನಸ್ಥಿತಿಯವರ ಸಂಖ್ಯೆ ತುಂಬ ಕಡಿಮೆ)
             ಈ ಲೇಖನದ ವಿಷಯಕ್ಕೂ, ಕಾನೂನಿಗೆ ಎಲ್ಲಿಯೂ ಸಂಬಂಧಿಸದ ಬ್ರಾಹ್ಮಣರನ್ನು ಎಳೆತರುವ ಮೂಲಕ ಅದನ್ನೂ ಕೂಡಾ ಜಾತಿಯಾಧಾರಿತ ಮಾಡ ಹೊರಟಿರುವ, ಕುಡಿತದ ಮೂಲಕ ಪುರುಷ ಪ್ರಧಾನ ವ್ಯವಸ್ಥೆ(?)ಯನ್ನು ಧಿಕ್ಕರಿಸುವ ನಿಮ್ಮ ಕ್ರಾಂತಿಕಾರಿ ಯೋಚನೆಗೆ ಅವಾರ್ಡು ಕೊಡಬೇಕು. (ಹಾಗಿದ್ದರೆ ಈಶಾನ್ಯ ರಾಜ್ಯಗಳು ಸೇರಿದಂತೆ ಮಹಿಳಾ ಪ್ರಧಾನ ಕುಟುಂಬ ವ್ಯವಸ್ಥೆಯಿರುವ ಗುಜರಾತಿನ ಕೆಲ ಭಾಗಗಳು, ಉತ್ತರಾಖಂಡ/ಹಿಮಾಚಲದ ಬುಡಕಟ್ಟುಗಳಲ್ಲಿ ಮಹಿಳೆಯರದ್ದೇ ದರ್ಬಾರು ನಡೆಯುವಾಗ ಅಲ್ಲಿ ಯಾವ ರೀತಿಯಲ್ಲಿ ಇದನ್ನು ವ್ಯಾಖ್ಯಾನಿಸೋಣ....? ) ಅಷ್ಟಕ್ಕೂ ಒಂದು ಮನೆಯಲ್ಲಿ ಯಾರು ಕುಡಿಯಬೇಕು ಅಥವಾ ವೈಯಕ್ತಿಕವಾಗಿ ಯಾರು ಕುಡಿಯಬಾರದು ಎನ್ನುವ ವಿಷಯ ಬ್ರಾಹ್ಮಣೀಕರಣದ ವ್ಯವಸ್ಥೆ ಹೇಗಾಗುತ್ತದೆ..? ಅಸಲಿಗೆ ಕುಡಿತ ಎನ್ನುವುದೇ ಸಂಸ್ಕಾರಯುತ ಕುಟುಂಬದ ಅಧ:ಪತನದ ಪರಮಾವಧಿಯ ಅಸ್ತ್ರ. ( ಕುಟುಂಬ ಪೂರ್ತಿ ಸಮಾನತೆಯಲ್ಲಿ ಕುಳಿತು ಕುಡಿದು ಉದ್ಧಾರವಾದ ಒಂದೇ ಒಂದು ಉದಾ. ತೋರಿಸಿ. ಹಾಳಾದ ಸಾವಿರ ಉದಾ. ನಾನು ಕೊಡಬಲ್ಲೆ)
          ಯಾವ ಜಾತಿಯೇ ಆಗಿರಲಿ ಕುಡಿಯುವುದನ್ನು ಪುರುಷ ಸಮಾಜ ನಿರ್ಬಂಧಿಸುತ್ತಿದೆ ಎನ್ನುವುದು ಬ್ರಾಹ್ಮಣೀಕರಣ ಎಂದು ಎಲ್ಲೋ ಬಂದೂಕು, ಇಟ್ಟು ಇನ್ನೆಲ್ಲೋ ಗುಂಡು ಹಾರಿಸುವ ನಿಮಗೆ ದೇಶಾದ್ಯಂತ ಜಾತಿವಾರು ಲೆಕ್ಕದಲ್ಲಿ ಯಾರು ಅಲ್ಪ ಸಂಖ್ಯಾತರು ಎಂದು ಗೊತ್ತೆ..? ಅಷ್ಟಿದ್ದಾಗಲೂ ಅವರೇ ನೈತಿಕ ಮತ್ತು ಸಾಮಾಜಿಕ ಕಟ್ಟು ಪಾಡಿನಲ್ಲಿ ಮಹಿಳೆಯರನ್ನು ಕುಡಿತಕ್ಕೆ ಬಿಡುತ್ತಿಲ್ಲ ಎಂದು ಬಾಯಿ ಬಡಿದುಕೊಳ್ಳುತ್ತಿರುವ ನಿಮಗೆ, ಬೆಳಿಗ್ಗೆ/ಸಂಜೆ ಮಹಿಳೆಯರೂ ಸಮಾನವಾಗಿ ಕಂಠ ತನಕ ಕುಡಿದು ಉದ್ಧಾರ ಮಾಡಬೇಕಿರುವ ಘನಕಾರ್ಯವಾದರೂ ಯಾವುದು.. ತಿಳಿಸುತ್ತಿರಾ..? 
         ಮಾವ- ಸೊಸೆ ಸೇರಿ ಕುಡಿಯುವುದು, ಮಗು ಅಜ್ಜನಿಗೆ ಹೆಂಡ ತಂದು ಕೊಡುವುದು, ಸಹೋದರಿಯರಿಗೆ ಅಣ್ಣ ತಮ್ಮಂದಿರೇ ಹೆಂಡ ಕುಡಿಸುವುದು (ಸಹೋದರಿಯರ ರಕ್ಷಣೆಗೆ ಪ್ರಾಣ ಕೊಟ್ಟು ನಿಲ್ಲುವ ಪದ್ಧತಿ..ಹೆಂಡದ ಬಾಟಲಿಯಲ್ಲ.. ಅಖಿಲೇಶ್ವರಿ.. ರಾಖಿ ಕಟ್ಟುವ ಹೆಣ್ಣು ಸಹೋದರನ ಪ್ರೀತಿಯ ಕಾಣಿಕೆಯ ಖುಷಿ ಅನುಭವಿಸುತ್ತಾಳೆ ವಿನ: ಬಾಟಲಿ ಕೊಡಲಿ ಎಂದಲ್ಲ) ಯಾರ್ರಿ ಇಂಥಾ ವ್ಯವಸ್ಥೆಯನ್ನು ಒಪ್ಪಿಕೊಂಡಿದ್ದಾರೆ..? 
            ನಿಮ್ಮಂತೆ ಯೋಚಿಸಿದ್ದೆ ಆದರೆ ಈ ದೇಶದಲ್ಲಿ ಮೊಟ್ಟ ಮೊದಲಿಗೆ ಈ ಎಲ್ಲಾ ಸಾಮಾಜಿಕ ದುಷ್ಕೃತ್ಯಗಳಿಗೆ ಬಲಿಯಾಗುವುದು ನಮ್ಮದೇ ಮನೆಯ ಹೆಣ್ಣು ಮಕ್ಕಳೆ.. ಅಸಲಿಗೆ ನೀವು ಇದಕ್ಕೆಲ್ಲಾ ಸಮಾನತೆಯ ಲೇಪ ಅ0ಟಿಸುತ್ತಿದ್ದೀರಲ್ಲಾ... ನಿಮ್ಮದೇ ಮನೆಯ ಹೆಣ್ಣು ಮಕ್ಕಳು ದಿನವೂ ಕುಡಿದು ಸ್ಕೂಲು/ ಕಾಲೇಜಿಗೆ ಹೋಗುತ್ತಾರಾ..? ನಿಮ್ಮ ಮನೆಯಲ್ಲಿ ಹೆಣ್ಣು ಮಕ್ಕಳಿದ್ದರೆ " ಒಂದು ಕ್ವಾರ್ಟರು ಬ್ರಾಂಡಿ ಕುಡಿದು ಕಾಲೇಜಿಗೆ ಹೋಗು ಮಗಳೇ.." ಎಂದು ಕಳಿಸುವ ಹುಂಬತನಕ್ಕೆ ನೀವು ಇಳಿಯಬಲ್ಲಿರಾ..?
ಪ್ರಚಾರಕ್ಕಾಗಿ ಯಾರದ್ದೋ ಬಂದೂಕು, ಎಲ್ಲೋ ಗುರಿ, ಇನೇಲ್ಲೋ ಕಣ್ಣಿರಿಸಿ ಬರೆಯಬೇಡಿ ದಯವಿಟ್ಟು.

2 comments: