Sunday, August 4, 2013

ಎಲ್ಲದಕ್ಕೂ ಸೌಂದರ್ಯವೇ ಮಾನದಂಡವಾಗುವುದಾದರೆ ...?

( ಯಾವಾಗಲೂ ಸೌಂದರ್ಯವೋ, ಆಪೊಸಿಟ್ ಸೆಕ್ಸ್ ಅಥವಾ ಪ್ರಭಾವಿ ಒತ್ತಡವನ್ನೇ ಮನಸ್ಸು ಬಯಸುತ್ತದಲ್ಲ ಅದು ಅಚ್ಚರಿಗೊಳಿಸುತ್ತದೆ )
( ಪ್ರತಿಯೊಂದು ಕ್ಷೇತ್ರದಲ್ಲೂ ಸೌಂದರ್ಯವೊಂದು ಮಾನದಂಡವಾಗುವುದಾದರೆ ಮಾಮೂಲಿನ, ಸಾಮಾನ್ಯದವರು, ಉಳಿದವರೆಲ್ಲಾ ಎಲ್ಲಿ ಹೋಗಬೇಕು...? ಈ ಪ್ರಶ್ನೆ ಯಾಕೆ ಉಂಟಾಗುತ್ತಿದೆಯೆಂದರೆ ಇವತ್ತು ಅಸಾಮಾನ್ಯ ಅಥವಾ ಮೇಧಾವಿಗಳು ಕೂಡಾ ಕನಿಷ್ಠ ಮಟ್ಟದ ರೂಪ ಸೌಂದರ್ಯದ ಕಡೆಗೆ ಗಮನ ಕೊಡುತ್ತಿರುವುದು ಸಣ್ಣನೆಯ ಜಿಜ್ಞಾಸೆ ಉಂಟು ಮಾಡುತ್ತಿದೆ ).
ಸಾನಿಯಾ ಮಿರ್ಜಾ/ಸೈನಾ ನೆಹ್ವಾಲ್ / ಜ್ವಾಲ  ಅಕಸ್ಮಾತಾಗಿ ನಮ್ಮ ಪಕ್ಕದ ಗಲ್ಲಿಯಲ್ಲಿರೋ ಯಾವುದೋ ಸಾಮಾನ್ಯ ಹೆಣ್ಣು ಮಗಳಂತೆಯೋ ಅಥವಾ ಕೊಂಚ ಕುರೂಪಿ ಎನ್ನಿಸುವ ದೇಹ ಸೌಂದರ್ಯವನ್ನು ಪಡೆದಿದ್ದರೆ ಅವರನ್ನು ಇಷ್ಟೊಂದು ಆದರಿಸಲಾಗುತ್ತಿತ್ತಾ...?
 
...ಇಂಪಾಸಿಬಲ್...
ಪ್ರಶ್ನೆ ಸುಂದರವಾಗಿದ್ದರಿಂದಲೇ ಅವರೆಲ್ಲಾ  ಇಷ್ಟು ಪ್ರಸಿದ್ಧಿ ಪಡೆದಳಾ ಅಥವಾ ಆಟಂದಿಂದಾನಾ ಎಂದಲ್ಲ. ಅಸಲಿಗೆ ಇವತ್ತಿನ ಎಲ್ಲಾ ಕ್ಷೇತ್ರದಲ್ಲೂ ಕಂಡೂ ಕಾಣದಂತೆ ಅದರಲ್ಲೂ ಹೆಣ್ಣು ಮಕ್ಕಳ ಸೌಂದರ್ಯವನ್ನು ಆಧಾರವಾಗಿಸಿಕೊಂಡು ಎಲ್ಲದಕ್ಕೂ ಆಯ್ಕೆಯ ಪ್ರಕ್ರಿಯೆಯಲ್ಲಿ ಪರಿಗಣಿಸಲಾಗುತ್ತಿದೆ ಎನ್ನುವುದು ಹಲವಾರು ಪ್ರಶ್ನೆಗಳನ್ನು ಹುಟ್ಟು ಹಾಕುತ್ತದೆ. ಮೇಲ್ಕಾಣಿಸಿದ ಸಾನಿಯಾ/ಸೈನಾ ಒಂದು ಉದಾಹರಣೆ ಅಷ್ಟೆ.
ಯಾಕೆಂದರೆ ಅವರಿಗಿಂತಲೂ ಮಿಗಿಲಾದ ಬೇರೆ ಕ್ರೀಡಾ ರಂಗದಲ್ಲಿ ಸಾಧನೆ ಮಾಡಿದ ಹೆಣ್ಣು ಮಕ್ಕಳು ಇವತ್ತು ಸಾಕಷ್ಟು ಸಂಖ್ಯೆಯಲ್ಲಿ ಲಭ್ಯವಿದ್ದರೂ ಯಾರನ್ನೂ ಜಾಹಿರಾತು ಕ್ಷೇತ್ರಗಳು ಗಮನಿಸಲೇ ಇಲ್ಲ. ಅಷ್ಟೇಕೆ, ಹಾಕಿಯ ಮಾ೦ತ್ರಿಕ, ಸ್ಥಾನಕ್ಕಾಗಿ ಬಡಿದಾಟದ ಹೋರಾಟ ನಡೆಸಿದ ಧನರಾಜ್ ಪಿಳ್ಳೆಯಾಗಲಿ, ಕನ್ನಡದ ದಾಖಲೆಯ ಬೌಲರ್ ಇದೇ ಅನೀಲ ಕುಂಬ್ಳೆಯಾಗಲಿ ( ಹಾಗೆ ನೋಡಿದರೆ ಕುಂಬ್ಳೆ ಸಾಕಷ್ಟು ಸೊಗಸುಗಾರನೇ ಆದರೆ ಗ್ಲಾಮರ್‌ನ್ನು ಆತ ಪ್ರದರ್ಶಿಸುತ್ತಿರಲಿಲ್ಲ ) ಇವತ್ತು ಅಷ್ಟಕ್ಕಷ್ಟೆ. ಅದೇ ಅವನಿಗಿಂತಲೂ ಕಡಿಮೆ ದಾಖಲೆಯ ಆದರೆ ಗ್ಲಾಮರಸ್ ಯುವಕ ಶ್ರೀಶಾಂತ್ ಇವತ್ತು ಹೆಚ್ಚು ಆಪ್ತ.
ಅಷ್ಟೇಕೆ ಕನಿಷ್ಟ ಸಣ್ಣ ಸಮಾರಂಭಗಳನ್ನು ಗಮನಿಸುವಾಗಲೂ ಒಂದು ವಿಷಯ ಎದ್ದು ಕಂಡುಬರುತ್ತದೆ. ಅದ್ಭುತ ಸೌಂದರ್ಯವತಿಯರು ಸೂಜಿಗಲ್ಲಿನಂತೆ ಸೆಳೆಯುತ್ತಿರುತ್ತಾರೆ. ಅಸಲಿಗೆ ಆಕೆಯಲ್ಲಿನ ಸಾಮರ್ಥ್ಯ ಎಷ್ಟು ಎಂದು ಮಾತ್ರ ಯಾರೂ ಗಮನಿಸಿರುವುದಿಲ್ಲ. ಇದರರ್ಥ ಸುಂದರವಾಗಿರುವ ಎಲ್ಲಾ ಜನರಲ್ಲಿ ಅಥವಾ ಮಹಿಳೆಯರಲ್ಲಿ ಸಾಮರ್ಥ್ಯ ಇರುವುದಿಲ್ಲ ಎಂದಲ್ಲ. ಆದರೆ ಸಾಕಷ್ಟು ಪ್ರತಿಭಾನ್ವಿತರಾಗಿದ್ದೂ ಸೌಂದರ್ಯವಿಲ್ಲದೋರು ಮೂಲೆಗುಂಪಾಗುತ್ತಾರಲ್ಲ ಅದು ಮನಸ್ಸನ್ನು ತಾಕುತ್ತದೆ. ಅವರು ನೋಡಲು ಆಕರ್ಷಣೀಯವಾಗಿಲ್ಲ ಎಂದ ಮಾತ್ರಕ್ಕೆ ನಾವು ಅವರನ್ನು ಮನಸ್ಸಿನಾಚೆಗೆ ಸರಿಸಿ ಬಿಡುವ ಸಂಪ್ರದಾಯವೇಕೆ...?
ಇದೇ ಸಾನಿಯಾ/ಸೈನಾ/ ಇತ್ಯಾದಿಗಳು ಅಕಸ್ಮಾತ ಮಾಮೂಲಿ ರೂಪಿನವಳಾಗಿದ್ದರೆ ಅಷ್ಟಾಗಿ ಮಿಂಚುತ್ತಿದ್ದಳಾ?ಅವಶ್ಯಕತೆ ಇರುವ-ಇಲ್ಲದೆಡೆಯಲ್ಲೆಲ್ಲಾ ಸಭೆ ಸಮಾರಂಭಗಳಲ್ಲಿ ಬಹುಶ: ಆಕೆಯ ಮೂಗುತಿ ಮಿನುಗಿದಷ್ಟು ಇನ್ನಾವುದೂ ಮಿನುಗಿರಲಿಕ್ಕಿಲ್ಲ. ಅಗತ್ಯ ಇದೆಯೋ ಇಲ್ಲವೋ ಆಕೆಯನ್ನು ಆಹ್ವಾನಿಸಲು ಪೈಪೋಟಿಯೇ ನಡೆದು ಹೋದವು. ಅದೆಷ್ಟು ಸಮಾರ೦ಭಗಳಲ್ಲಿ, ಏನು ಚರ್ಚೆ ನಡೆಯುತ್ತಿದೆ, ಇದೆಲ್ಲಾ ಯಾಕೆ ಚರ್ಚಿಸುತ್ತಿದ್ದಾರೆ ಅರ್ಥ ಆಗುತ್ತಿತ್ತೋ ಇಲ್ಲವೊ ಗೊತ್ತಿಲ್ಲ. ಆಕೆ ಮುಗುಮ್ಮಾಗಿ ಮಾತಾಡಿ ಎದ್ದು ಬರಬೇಕಾಗುತ್ತಿತ್ತಾದರೂ ಅನಿವಾರ್ಯವಾಗಿ ಅತಿಥಿಯಾಗಿ, ಗ್ಲಾಮರಸ್ ಅಟ್ರಾಕ್ಷನ್‌ಗಾಗಿ ಆಕೆ ಪಾಲ್ಗೊಂಡಿದ್ದಿದೆ. (ಮೇರಿ ಕೊಂ ಗೆ ಇವರಷ್ಟು ಜಾಹಿರಾತು ಬರದಿರಲು ಆಕೆ ಮದುವೆಯಾಗಿ ಮಕ್ಕಲಾಗಿರುವ ಮತ್ತು ಮಾಡ ಆಗಿಲ್ಲದ)
ಆದರೆ ಚಿನ್ನದ ರಾಣಿ ಎಂದೇ ಖ್ಯಾತಿ ಪಡೆದ, ಓಡುವುದನ್ನು ಬಿಟ್ಟು ಬೇರಾವುದೇ ಗ್ಲಾಮರ್ ಕಡೆಗೆ ಗಮನವನ್ನೇ ನೀಡದ ಪಿ.ಟಿ. ಉಷಾ ಯಾವಾಗ ಟ್ರಾಕ್ ಬಿಟ್ಟಿಳಿದಳೋ, ಯಾವಾಗ ಚಿನ್ನದ ಬೇಟೆ ನಿಂತಿತೋ, ಅದಕ್ಕಿಂತಲೂ ಮೊದಲೇ ಪತ್ರಿಕೆ ಆವೃತ್ತಿಗಳಿಂದ ಆಕೆ ಕಾಣೆಯಾಗಿದ್ದಳು. ಅಷ್ಟೇಕೆ ಆಕೆ ಆಟದಿಂದ ನಿವೃತ್ತಿಯಾದದ್ದೇ ಆದದ್ದು ಆಕೆಯ ಬಗ್ಗೆ ಒಂದೇ ಒಂದು ಸಾಲು ಅಲ್ಲಲ್ಲಿ ಕೂಡಾ ಕಾಣದಂತೆ ಮಾಯವಾಗಿಬಿಟ್ಟಿದ್ದವು. ಆದರೆ ಕ್ರಿಕೆಟ್‌ನ ಕಪಿಲ್ ಇವತ್ತೂ ಮಾಡೆಲಿಂಗ್ ಮಾಡುತ್ತಾನೆ.
          ಆದರೆ ಇದೇ ಸ್ಟಾರ ಆಟಗಾರರು ಅಥವಾ ನಟಿಯರು ಇವತ್ತು ಜಾಗತಿಕ ಎಷ್ಟನೆ ರ‍್ಯಾಂಕಿಂಗ್‌ನಲ್ಲಿದ್ದಾರೆ. ಆಕೆ ಏನು ತಿನ್ನುತ್ತಾಳೆ. ಯಾಕೆ ರ‍್ಯಾಂಕಿಂಗ್‌ನಲ್ಲಿ ಕೆಳಗಿಳಿದಳು, ಆಕೆ ಆಡುತ್ತಾಳೋ ಇಲ್ಲವೋ.. ಆಕೆಗೆ ತಲೆ ನೋವ್ಯಾಕೆ ಬಂತು. ನಿನ್ನೆ ಎಷ್ಟು ನೀರು ಕುಡಿದಳು.. ಆಕೆಯ ಟವಲ್ ಯಾವ ಕಂಪೆನಿಯದು.. ಅದಷ್ಟು ಬೆಳ್ಳಗಿರಲು ಯಾವ ಸೋಪು ಪುಡಿ ಉಪಯೋಗಿಸುತ್ತಾಳೆ... ಆಕೆ ಹಲ್ಲು ತಿಕ್ಕುವಾಗ ಹೇಗೆ ಬ್ರಶ್ ಹಿಡಿಯುತ್ತಾಳೆ...? ಇವೆಲ್ಲಾ ನಮಗೆ ಬೇಕಾ.. ಯಾವೊಬ್ಬ ವ್ಯಕ್ತಿ ಪ್ರಸಿದ್ಧನಾದ ಮಾತ್ರಕ್ಕೆ ಅವನ ಕಂಡೂ ಕಾಣದ ದಿನಚರಿಯಿಂದ ಹಿಡಿದು ಏನೆಲ್ಲಾ ವರದಿ ಮಾಡುವ ನಮಗೆ ಕನಿಷ್ಟ ಉಳಿದವರ ಕಡೆಗೆ ಗಮನ ಹರಿಸಬೇಕು ಎನ್ನುವ ಸಣ್ಣ ಮನಸ್ಸಾದರೂ, ಪರಿಜ್ಞಾನವಾದರೂ ಬೇಡವಾ...? ಕೇವಲ ಸೌಂದರ್ಯವೊಂದನ್ನು ಬಂಡವಾಳ ಮಾಡಿಕೊಂಡು ಕೆಲಸದಿಂದ ಪದವಿಯವರೆಗೆ ಎಲ್ಲವನ್ನು ಗೆಲ್ಲುತ್ತಾ, ಪಡೆದುಕೊಳ್ಳುತ್ತಿರುವ ವಿಷಯವನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವವರಿಗೆ ಗೊತ್ತಾಗುತ್ತದೆ.
      ಅಷ್ಟೇಕೆ ಬಹುಶ: ಚಿತ್ರರಂಗದ ವ್ಯಕ್ತಿತ್ವಗಳು ಇವತ್ತು ನಮ್ಮ ನಿಮ್ಮ ಮನದಲ್ಲಿ ಪ್ರಭಾವಶಾಲಿಯಾಗಿ ಬೇರೂರಿದಷ್ಟು ಬೇರಾವ ಪರ್ಸನಾಲಿಟಿಗಳು ಇವತ್ತು ಅಚ್ಚೊತ್ತುತ್ತಿಲ್ಲ. ಯಾಕೆ, ಅವರೆಲ್ಲಾ ರಂಗು ರಂಗಿನ ಥಳುಕಿನ ಬದುಕಿನ ಪ್ರತಿಬಿಂಬಗಳಾಗಿ ನಮ್ಮ ಕನಸಿನ ಅಮೂರ್ತತೆಗೊಂದು ಮೂರ್ತ ರೂಪವನ್ನು ಕಲ್ಪಿಸುತ್ತಾರೆಂದೇ ...? ಎಷ್ಟು ಆರ್ಡಿನರಿಯಾಗಿರುವ "ಅಂತರಾ ಮಾಲಿ" ಬೀರುವ ಪ್ರಭಾವ, ಆಕೆ ನೀಡುವ ಸಂದೇಶವನ್ನು, ಸುಲಭವಾಗಿ ಸ್ವೀಕರಿಸುವ ಮನಸ್ಸಿನ ಮೇಲೆ, ಪಕ್ಕದ ಮನೆಯ ಆತ್ಮೀಯವಾಗಿ ನಮ್ಮ ಕುಟುಂಬದಲ್ಲಿ ಬೆರೆತು ಹೋದ ಸಾಧಾರಣ ರೂಪಿನ ಹುಡುಗಿ ಪ್ರಭಾವ ಬೀರಲಾರಳು. ಒಬ್ಬಾತ ತಾರೆಯ ಅಥವಾ ನಟಿಯೊಬ್ಬಳ ಆರಾಧನೆಯ ಪರಾಕಾಷ್ಟೆ ಎಷ್ಟೆಂದರೆ ಒಂದೊಮ್ಮೆ ಆಕೆಗೋಸ್ಕರ ಪ್ರಾಣವನ್ನೂ ಕೊಡಲು ಮುಂದಾಗೋದು ಇಂತಹ ಮೂರ್ಖತನದಲ್ಲೊಂದು. ಯಾವುದೇ ಚಿತ್ರ ತಾರೆ ಅಥವಾ ಅವರ ಥಳುಕಿನ ಪ್ರಪಂಚದ ಒಂದು ಮುಖವನ್ನಷ್ಟೆ ಕಂಡಿರುವ ಮನಸ್ಸಿಗೆ, ಅದೇ ವಾಸ್ತವ ಎ೦ದು ನಂಬುವ ಬಣ್ಣದ ಬದುಕಿನ ಚೆಂದವೇ ಇಷ್ಟವಾಗುವ ನಮಗೆ ಅದರಾಚೆಗಿನ ಸತ್ಯತೆಗಳು ಬದುಕಿನ ಕಠೋರತೆಗಳು ಬೆಚ್ಚಿಸುವುದೇ ಇಲ್ಲ.
ಅದನ್ನು ಅಂದರೆ ವಾಸ್ತವವನ್ನು ನೇರವಾಗಿ ಬೆರಳು ಮಾಡಿ ತೋರಿಸುವ ಅದೇ ಗಬ್ಬು ವಾಸನೆಯ ಫ್ರೆಂಡು ನಮಗೆ ಶೀ... ಅನ್ನಿಸುತ್ತಾನೆ. ನಮಗಷ್ಟೂ ಗೊತ್ತಿಲ್ಲವಾ ಅನ್ನಿಸುವಂತೆ ಮಾಡುತ್ತಾನೆ. 

     ಆದರೆ ಅಸಲಿಗೆ ಅದನ್ನು ಸೀರಿಯಸ್ಸಾಗಿ ತೆಗೆದುಕೊಳ್ಳದ ನಾವು ಅಲ್ಲೇ ಪಿಗ್ಗಿ ಬೀಳುತ್ತೇವೆ. ಯಾಕೆಂದರೆ ಗಬ್ಬು ವಾಸನೆಯ ಫ್ರೆಂಡು ಹೇಳುವ ವಾಸ್ತವತೆ ನಮ್ಮ ಮನಸ್ಸಿಗೆ ನಾಟುವುದಿಲ್ಲ. ಅದೇ ಜೊತೆಗೆ ಇರುವ ಅಥವಾ ನೋಡಲು ಲಕ್ಷಣವಾಗಿರುವ ಗೆಳತಿ ಹೇಳಲಿ ಮರುದಿನವೇ ನಮ್ಮ ಆಟಿಟ್ಯೂಡು ಬದಲಾಗಿರುತ್ತದೆ. ಯಾಕೆಂದರೆ ಯಾವಾಗಲೂ ಸೌಂದರ್ಯವೋ, ಆಪೊಸಿಟ್ ಸೆಕ್ಸ್ ಅಥವಾ ಪ್ರಭಾವಿ ಒತ್ತಡವನ್ನೇ ಮನಸ್ಸು ಬಯಸುತ್ತದಲ್ಲ ಅದು ಅಚ್ಚರಿಗೊಳಿಸುತ್ತದೆ. 
     ಅಸಲಿಗೆ ಸೌಂದರ್ಯ ಸ್ಪರ್ಧೆಯನ್ನು ನಡೆಸಿದಾಗ ಆಯ್ಕೆಯಾದವಳು ಉದುರಿಸುವ ನುಡಿಮುತ್ತುಗಳಂತೂ ಅಸಹ್ಯದ ಪರಮಾವಧಿ ಯಾಕನ್ನಿಸುತ್ತದೆಂದರೆ, ಆಕೆಯ ವರ್ತನೆಗೂ ಮಾತುಗಳಿಗಿರುವ ವ್ಯತ್ಯಾಸವಲ್ಲದೇ ಬೇರೇನಲ್ಲ. ಸಾಹಿತ್ಯದಿಂದ ಹಿಡಿದು ಯಾವುದೇ ರಂಗದಲ್ಲೂ ಸೌಂದರ್ಯವನ್ನೇ ಮಾನದಂಡವಾಗಿ ಬಳಸುತ್ತಿರುವ ಪರಿ ಯಾವ ರೀತಿಯದ್ದಾಗಿದೆಯೆ೦ದರೆ ಬಹುಶ: ಈ ಲೋಕದಲ್ಲಿ ಕುರೂಪಿಯರಂತೂ ಬಿಡಿ, ಸಾಮಾನ್ಯ ವರ್ಗದವರೂ ಕನಸುಗಳನ್ನೇ ಕಾಣುವುದಿಲ್ಲವಾ ಎನ್ನಿಸುವ ಹತಾಶೆಯ ಭಾವ ಮೂಡುತ್ತಿರುವುದು ವಾಸ್ತವತೆಯ ಎದುರಾ ಎದುರೇ ಭ್ರಮೆಯತ್ತ ಸಾಗುತ್ತಿರುವುದರ ವಿಪರ್ಯಾಸವಲ್ಲದೇ ಇನ್ನೇನು...?
     ನಮ್ಮ ನಮ್ಮ ಇತಿಮಿತಿಗಳು ನಾವು ಏನು ಅನ್ನೋದು ನಮಗೇ ಅರ್ಥವಾಗದಿರುವಾಗಲೇ ಇಂಥವು ಘಟಿಸುತ್ತವೆ. ಮನಸ್ಸು ತುಂಬ ಹಿತ ಎನ್ನಿಸುವಂತಹದನ್ನು ಮಾದರಿಯಾಗಿ ಸ್ವೀಕರಿಸಲು ಆರಂಭಿಸುತ್ತದೆ. ಒಮ್ಮೆ ಅದಕ್ಕೆ ಮನಸ್ಸು ಹೊಂದಿಕೊಂಡು ಬಿಟ್ಟರೆ ಆ ಮಾಡೆಲ್ ಮಾಡುವುದೆಲ್ಲಾ ಮಾದರಿಯಾಗುತ್ತದೆ. ಅದರ ಅನುಕರಣೆಯಲ್ಲೇ ಮನಸ್ಸು ಬದುಕತೊಡಗುತ್ತದೆ. ಅಲ್ಲಿಗೆ ಬದುಕಿನ ಸ್ವಂತಿಕೆ ಸತ್ತು ಹೋಗುತ್ತದೆ. ವಾಸ್ತವದಿಂದ ದೂರ ಓಡಿರುವ ಮನಸ್ಸು ನಂತರದಲ್ಲಿ ಸುಲಭಕ್ಕೆ ಸತ್ಯವನ್ನು ಒಪ್ಪಿಕೊಳ್ಳುವುದಿಲ್ಲ. ಅರ್ಥವಾಗುವ ಹೊತ್ತಿಗೆ ಬದುಕಿನಲ್ಲಿ ಸ್ವಂತಿಕೆಯನ್ನು ರೂಪಿಸಿಕೊಳ್ಳುವ ಅಥ್ವಾ ಸ್ವ೦ತದ ಗುರುತನ್ನು ಮೂಡಿಸುವ ಮನಸ್ಸು ಪಕ್ವವಾಗುವ ಹೊತ್ತಿಗೆ ತುಂಬಾ ತಡವಾಗಿ ಬಿಟ್ಟಿರುತ್ತದೆ. ಯಾಕೆಂದರೆ ಯಾವುದೇ ಇರಲಿ ಅದು ದೈಹಿಕ ಸೌ೦ದರ್ಯವೇ ಇರಲಿ, ಐಹಿಕ ಭೋಗವೇ ಇರಲಿ... ಇನ್ನಾವುದೇ ರಂಗದ ಸಂಬಂಧಿತವಾಗಿರಲಿ, ಮನಸ್ಸು ಎಲ್ಲದರಲ್ಲೂ ಚೆಂದವನ್ನೇ ನಮ್ಮ ಮನಸ್ಸಿಗೆ ಹಿಡಿಸುವಂತಹದ್ದನ್ನೇ ಹುಡುಕೋದಾದರೆ ಉಳಿದ ಜೀವ ವರ್ಗಗಳಿಗೆ ಇಲ್ಲಿ ಬೆಲೆನೇ ಇಲ್ಲವಾ ... ?


1 comment:

  1. Nice article...
    I think it is WE, the common people have made Glamour rule the real talents, by giving too much importance for Glamour and Cinema. Since it is the easiest way to become popular, celebrities obviously use it for their good. Also, it is very natural for Media and cinema give opportunity to glamorous people to make their living. So, both of them make their living by taking advantage of the weakness of common people towards glamour.

    Once WE, the common people deviate ourselves from Glamour,beauty and fantasy, educate ourselves and the people around us, about the real talent and intelligence, naturally the deserved people will get noticed...


    ReplyDelete