Monday, August 5, 2013

ಅವಳಿಗಾಗಿ ಯಾರನ್ನು ಕೂಗಲಿ ....?

( ಅಂದಿನಿಂದಲೂ ಸಣ್ಣ ಸಣ್ಣ ಕೆಂಪು ಹೂವಿನ ಅಂಗಿಯ ಪುಟ್ಟ ಹುಡುಗಿ ಬಿಸಿಲಿಗೆ ಮುಂಗುರುಳ ಹಾರಿಸುತ್ತಾ, ಹಸಿವಿನ ಕಂಗಳಿಂದ ಸಂಜೆಯ ಆಸೆಗಳಿಗೆ ಈಡಾಗುತ್ತಾ ಕಟ್ಟಿಗೆಗೆ ಕಾಡು ನುಗ್ಗುವುದು ಕಾಣಿಸುತ್ತಲೇ ಇದೆ. ಕೈಗೆ ಸಿಕ್ಕಷ್ಟು ನೋಟು-ಚಿಲ್ಲರೆಗಳನ್ನು ಅದರ ಕೈಗಿಟ್ಟು ಬಂದಿದ್ದೆ. ಎದೆಯೊಳಗೆನೋ ಅರ್ಥವಾಗದ ಮುಳ್ಳು ಮುರಿದ ಸಂಕಟ )

ಬಾಲ್ಯ ಮತ್ತು ಹಳ್ಳಿಯ ಜೀವನ ಬೆರಗು, ಭಯ, ಅದ್ಭುತ, ಎಂಜಾಯೇಬಲ್ ಅನ್ನಿಸಿದಷ್ಟು ಬೇರಾವುದೂ ನನಗನ್ನಿಸಿಲ್ಲ. ಬಾಲ್ಯದ ಹುಡುಗಾಟಗಳು, ನಾಳಿನ ಯೋಚನೆಗಳಿಲ್ಲದ, ಮುಲಾಜಿಲ್ಲದ, ಮರ್ಜಿ ಕಾಯಬೇಕಿಲ್ಲದ, ಊರ ಹೊರಗಿನ ತೋಪಿನಿಂದ ಹಿಡಿದು, ಸ್ಮಶಾನದ ಗೋರಿಯ ಬೆನ್ನಿನವರೆಗೂ ನಮ್ಮದೇ ಆಟದ ಆಡ್ಡೆಗಳು. ಅದರಲ್ಲೂ ಮಲೆನಾಡಿನ ಮನೆಗಳಲ್ಲಿ ಕಳೆಯುತ್ತಿದ್ದ ದಿನಗಳು ನನ್ನನ್ನು ಹಸಿರಾಗಿಟ್ಟಿವೆ.
ಆ ಸೆಳೆತವೇ ಈಗಲೂ ನನ್ನನ್ನು ಪದೇ ಪದೇ ಹಳ್ಳಿಗೆ, ಅಲ್ಲಿನ ಮಣ್ಣಿನ ವಾಸನೆಗೆ ತೆರಳುವಂತೆ ಮಾಡುತ್ತಲೇ ಇವೆ. ಎಂದಿಗೂ ಮುಗಿದ ನೆನಪುಗಳ ಸರಮಾಲೆ ಎನ್ನುವುದಕ್ಕಿಂತಲೂ ಅನುಭವಿಸಿದ ಹಸಿರಿನ ಕ್ಷಣ ಉಸಿರು ಕೂಡಾ ಇವತ್ತಿಗೂ ನನ್ನನ್ನು ಹಳ್ಳಿಗಳ ಮೋಹಿಯನ್ನಾಗಿಸಿದ್ದು ಸುಳ್ಳಲ್ಲ. ತೀರ ಸ್ಟಾರ್ ಹೋಟೇಲ್ ಒಂದರ ಸುವಾಸನೆಯ ಕೋಣೆಯಲ್ಲಿ ಹಿತವಾದ ಏ.ಸಿ. ಹೊಟ್ಟೆ ಬೀರಿಯುವಂತೆ ಊಟ, ಡ್ರಿಂಕ್ಸು.. ಏಲ್ಲವೂ ಇದ್ದರೂ ಅಂತಹ ಅನುಭವಗಳಿಗೆ ಐಚ್ಛಿಕ್ಕವೋ, ಅನೈಚ್ಛಿಕ್ಕವೋ ಹಲವು ಬಾರಿ ಈಡಾಗಿದ್ದರೂ ರಾತ್ರಿ ತಲೆ ಕೊಟ್ಟೊಡನೆ ಬೆಳಿಗ್ಗೆವರೆಗೂ ನಿದ್ರೆ ಎನ್ನುವುದನ್ನು ಸುಖವಾಗಿ ಅಂತಲ್ಲಿ ಅನುಭವಿಸಿದ್ದೇ ಇಲ್ಲ.
ಅದೇನಿದ್ದರೂ ಒಂದೋ ನನ್ನ ಮನೆಯಲ್ಲಿ, ಇಲ್ಲ ತೀರಾ ಕಟ್ಟಾನು ಕಾನಿನ ಮೂಲೆಯ ನನ್ನ ಬೈಕು ಮಾತ್ರ ತೂರಿ ಹೋಗುವ ಕಾಲ್ದಾರಿಯ ಕೊಟ್ಟಕೊನೆಯ ಹಳ್ಳಿಗಳಲ್ಲಿ, ಅದರ ಹುಲ್ಲು ಗೊಣಬೆಯ ಮಾಳದ ಮೇಲಾದರೂ ಸರಿನೇ, ಕೊನೆಗೆ ಹಿನ್ನೀರ ಮಧ್ಯದ ಕಡಲ ದಂಡೆಯಾದರೂ ಸರಿನೇ, ಅಲ್ಲಿ ಇರುವ ಸಣ್ಣ ಹೊರಸು, ಗುಡಿಸಲಿನಂತಹ ಮನೆ, ನಾಲ್ಕಾರು ಆತ್ಮಿಯರು, ಅದರಲ್ಲೊಬ್ಬರು ಹಿರಿಯರು, ಬೇಕೆಂದಾಗ ಎಳೆನೀರು, ಪಕ್ಕ ಸಮುದ್ರ ಕುತ್ತಿಗೆಯ ಕೆಂಪು ಬಾಯಿ ಮೀನುಗಳು, ತಪ್ಪಲೆಯಲ್ಲಿ ಗಂಜಿ.
ಉಳಿದ ಕಡೆಯಲ್ಲಾದರೆ ಅವರ ಮನೆಗಳಲ್ಲಿ ಮಾಡಿನ ಮೇಲೆ ಒಂದೇ ಸಮನೇ ಇಲಿ ಕರ ಕರನೆ ಕೊರೆಯುವ ಸದ್ದಿನ ನಡುವೆಯೂ, ಆಗೀಗ ಕಡಿದು ಹಾಕುವ ಕಾಡು ಹುಳಗಳ ನಡುವೆಯೂ ನಿದ್ರೆ ಮತ್ತು ಅಲ್ಲಿ ಅವರ ಮನೆಗಳಲಿ ಸಿಗುವ ಸೀದಾ ಸಾದಾ, ಆದರೆ ಮನೆ ಮಂದಿಯೆಲ್ಲ ಕುಳಿತು ಉಣ್ಣುವ ಲೋಕಾಭಿರಾಮ ಕಪಟವಿಲ್ಲದ ಮಾತಿನ ನಗು, ಹರಟೆಯ ನಡುವೆ ಒಂಡೆದ್ದು ಕಣ್ತುಂಬಾ ನಿದ್ರೆ ಮಾಡುವ ಹಳ್ಳಿಗಳ ಜೀವನವನ್ನು ಹುಡುಕಿಕೊಂಡು ಹೋಗಿ ದಿನಗಟ್ಟಲೇ ಇದ್ದು ಬರುವುದೂ ಸುಳ್ಳಲ್ಲ. ಹಾಗಾಗೇ ನನ್ನ ಬರಹ ಮತ್ತು ಬದುಕಿನ ಹಲವು ಮಜಲುಗಳಿಗೆ ಪ್ರೇರಣೆ ಆ ಜೀವನಾನುಭವವೇ ಹೊರತು ಬೇರೇನಲ್ಲ. ಆಗೀನ ಬಾಲ್ಯದ ಶ್ರೀಮಂತಿಕೆ, ಕಳೆದ ದಿನಗಳ ನಾಸ್ಜಾಲಿಯಾಗಳೆಡೆಗೆ ಕಣ್ಣು ಹೊರಳುವಂತೆ ಮಾಡಿದ್ದು ಮೊನ್ನಿನ ಸಣ್ಣ ಘಟನೆ.
ಯಾವುದೋ ಕೆಲಸದ ನಿಮಿತ್ತ ನಾಲ್ಕಾರು ವರ್ಷಗಳಿಂದ ಅಣಿಶಿಯ ಕಾಡಿನಲ್ಲಿ ಕಾಲಿಡದವನು ಅನಿವಾರ್ಯವಾಗಿ ನನ್ನ ಕಾರನ್ನು ಹೊರಗೆಳೆದು ಹೂಳು ದಾರಿಯಲ್ಲಿ ಹತ್ತಿಸಬೇಕಾಗಿತ್ತು. ಅವಡುಗಚ್ಚಿ ಚಕ್ರ ತಿರುವಬೇಕಾದ ರೀತಿಯಲ್ಲಿ ಹೊಂಡಗಳಿಂದ ಗಬ್ಬೆದ್ದು ಹೋಗಿರುವ ಆ ರಸ್ತೆ, ಅಧ್ವಾನ್ನಗಳ ಮಧ್ಯೆಯೂ ನನ್ನನ್ನು ಆಗೀಗ ಉಲ್ಲಸಿತನನ್ನಾಗಿಸುವುದೆಂದರೆ ಪ್ರವಾಸ ಮತ್ತು ಬೆಳ್ಳಂಬೆಳಿಗ್ಗೆ ಕಾಡು ದಾರಿಯಲ್ಲಿ ಸಾಗುವ ಡ್ರೈವಿಂಗು ಮಾತ್ರವೇ.
ಮೊನ್ನೆ ಹಾಗು ಹೀಗೂ ಅನಾಹುತಕಾರಿ ಹೊಂಡಗಳ ಅಣಶಿಯ ಮುಖ್ಯ ರಸ್ತೆಯ ಬದಲಾಗಿ ಉಳವಿಯ ಕಾಡಿನಲ್ಲಿ ಕಾರು ತಿರುಗಿಸಿ ಹಳಿಯಾಳದ ಕಡೆಗೆ ಸರಿದು ಹೋಗಿದ್ದೆ. ಜೋಯಿಡಾ, ಡಿಗ್ಗಿ, ಕರನ್‌ಜೋಯಿಡಾ, ಆ ಕಡೆಯ ಸಾಂಬ್ರಾಣಿ, ಭಗವತಿ, ದಾಂಡೇಲಿಯ ಆಸು ಪಾಸಿನ ಕಾಡುಗಳು ನನಗೆ ಮುಂಚಿನಿಂದಲೂ ಅಪ್ಯಾಯಮಾನ ಸ್ಥಳಗಳೆ. ಹಾಗಾಗಿ ಸಣ್ಣನೆ ಸಿಳ್ಳು ಹೊಡೆದುಕೊಂಡು, ಅಲ್ಲೇ ರಸ್ತೆ ಬದಿಯಲ್ಲೊಮ್ಮೆ ಅರ್ಧ ಕಪ್ಪು ಬಿಸಿ ಬಿಸಿ ಟೀ ಕುಡಿದು ಇನ್ನು ದಾಂಡೇಲಿ ಕಣ್ಣು ಬಿಡುವ ಮುಂಚೆ ಕಾಳಿ ನದಿಯ ಮಗ್ಗುಲಲ್ಲಿ ನಿಂತುಕೊಡಿದ್ದೆ ಸುಮ್ಮನೆ ಅದರ ಶಬ್ದ ಕೇಳುತ್ತಾ.
ನಂತರದ್ದು ಎಂದಿನಂತೆ ದಿನವಹಿ ಕಾರ್ಯಗಳು, ವಾಹನಗಳ ಧೂಳು, ಪೇಪರ್ ಮಿಲ್ ವಾಸನೆ, ಆತ್ಮೀಯ ಸ್ನೇಹಿತರ ಹಿಂಡು, ಎದುರಿಗೆ ಜನ, ದನ, ವಾಹನ, ಬೈಸೈಕಲ್ಲು ಭರಾಟೆ ಎಲ್ಲದ ಮಧ್ಯೆ ಅಲ್ಲಲ್ಲಿ ನಿಂತುಕೊಂಡು ನನ್ನ ಕೆಲಸ ಮುಗಿಸಿ ಮಿತ್ರ ಹಿಂಡಿನೊಂದಿಗೆ ಸಟ್ಟ ಸರಹೊತ್ತಿನ ರಣ ಬಿಸಿಲಿನ ಝಳಕ್ಕೆ ಈಡಾಗುತ್ತಾ ತಂಪಾಗಲು ಬೀಯರು, ಹಿಂದಿರುಗಿ ಕಾಡು ರಸ್ತೆಗೆ ಕಾಲಿಟ್ಟು ಇನ್ನೇನು ಅಣಶಿಯ ತೆಕ್ಕೆ ಸೇರಿಕೊಳ್ಳಬೇಕು. ಉಳವಿ ರಸ್ತೆ ತಿರುವಿನ ನಂತರ ನಾಲ್ಕಾರು ಕೀ.ಮಿ. ದಾಟಿ ಖಾಮ್ಸೆತಡಿಗಿಂತಲೂ ಮುಂಚೆ ಕಟ್ಟಾನು ಕಾಡಿನ ಪಕ್ಕದಲ್ಲಿ ನಿಲ್ಲಿಸಿದೆ. ನೀರು ಕುಡಿದು ಇನ್ನೇನು ತಿರುಗ ಬೇಕು, ಕಾಡಿನ ಅಂಚಿನಿಂದ ಚರ ಪರ ಸದ್ದು. ತಿರುಗಿದೆ.
ತೀರ ಪುಟ್ಟ ಪುಟ್ಟ ಕೈಗಳ ಪಿಳಿ ಪಿಳಿ ಕಣ್ಣಿನ ಪುಟ್ಟ ಹುಡುಗಿ, ಕೈಗಳಲ್ಲಿ ಸಣ್ಣ ಸಣ್ಣ ಕಟ್ಟಿಗೆ ತುಂಡುಗಳನ್ನು ಹಿಡಿದು ಬರಿಗಾಲಲ್ಲಿ ಈಚೆಗೆ ಬಂದು ಅಷ್ಟು ದೂರದಲ್ಲಿದ್ದ ಆಗಲೇ ಸೇರಿದ್ದ ರಾಶಿಗೆ ಸೇರಿಸುತ್ತಿತ್ತು. ಮತ್ತೊಮ್ಮೆ ಕಾಡಿನೊಳಗೆ ಹೋಗಿ ಮತ್ತೆ ಹದಿನೈದು ನಿಮೀಷದಲ್ಲಿ ಹಿಂದಿರುಗಿದ್ದಳು ಆ ಹುಡುಗಿ. ಸಟ್ಟ ಸರಹೊತ್ತಿನ ಮಧ್ಯಾನ್ಹ, ಕಾಡೆಂದರೆ ಕಾಡು, ಬಿರು ಬಿಸಿಲಿನ ಮೂರೂವರೆ, ಶಾಲೆಯೋ ಮನೆಯಲ್ಲಿ ಅಮ್ಮನೊಂದಿಗೆ ಇರಬೇಕಿದ್ದ ಮಗು ಕಟ್ಟಿಗೆ ಆಯುತ್ತಿತ್ತು.
" ಏನಮ್ಮ ಒಬ್ಬಳೆ ಕೆಲಸ ಮಾಡುತ್ತಿದೀಯಾ. ನಿನ್ನ ಹೆಸರೇನು ..? " ಎಂದೆ. ಆಗಿದ್ದಿಷ್ಟು. ಮಗು ಎರಡನೆಯ ತರಗತಿ ಓದುತ್ತಿದೆ. ಆದರೆ ಅನಿವಾರ್ಯದ ಕೆಲಸಗಳ ನಿಮಿತ್ತ ಹೆಚ್ಚಿನ ದಿನಗಳನ್ನು ಅಮ್ಮನೊಂದಿಗೆ ಕಾಡಿನಲ್ಲೇ ಬಿರು ಬಿಸಿಲಿನಲ್ಲಿ ಕಳೆಯುತ್ತಿದೆ. ಅಮ್ಮ ದಿನಗೂಲಿಯ ಲೆಕ್ಕದಲ್ಲಿ ಕಾಡಿನ ದರಗಲನ್ನು ಆರಿಸಿ ಒಟ್ಟು ಮಾಡಿ ತಂದು ತುಂಬಿಸಿ ದಿನಕ್ಕೆ ನಲ್ವತೈವತ್ತು ರೂಪಾಯಿ ದುಡಿಯುತ್ತಾಳೆ. ಆ ಹೊತ್ತಿನಲ್ಲಿ ಮಗು ಸಣ್ಣ ಪುಟ್ಟ ಕಟ್ಟಿಗೆ ಆರಿಸಿ ಆರಿಸಿ ತಂದು ರಸ್ತೆ ಪಕ್ಕದಲ್ಲಿ ಗುಡ್ಡೆ ಹಾಕಿ ಇಡುತ್ತೆ. ನಾಲ್ಕು ಗಂಟೆಯ ಹೊತ್ತಿಗೆ ಅಮ್ಮ ಬಂದು ದರಗಲು ಮುಟ್ಟಿಸಿ, ಕಟ್ಟಿಗೆ ಗಂಟಿಗೆ ಕೈಯಿಡುತ್ತಾಳೆ. ತಾಯಿ ಮಗಳಿಬ್ಬರು ನಡೆದು ಹೋಗುತ್ತಾರೆ.
" ದಿನಕ್ಕೆ ಅಮ್ಮಂಗೆ ಕೂಲಿ ಸಿಗ್ತದೆ. ಆದ್ರೆ ಕಟ್ಟಿಗೆ ಒಳ್ಳೆಯದಿಲ್ಲಾಂದ್ರೆ ರಾತ್ರಿ ಬ್ಯಾಗ್ನೇ ಅಡಿಗೆ ಆಗೋದಿಲ್ಲ. ನ೦ಗೆ ಹಸಿವಾಗಿರ್ತದೆ. ಅದ್ಕೆ ನಾನು ಅಮ್ಮ ಬರೋ ಹೊತ್ತಿಗೆ ಒಣ ಕಟ್ಟಿಗೆ ಆರಿಸಿ ಇಡ್ತಿನಿ. ಅಮ್ಮ ಕೆಲ್ಸ ಮುಗ್ಸಿ ಸಂಜೆ ಬೇಗ ಹೋಗಿ ಬೆಂಕಿ ಹಾಕಿದ್ರೆ ಬೇಗ ಅಡ್ಗೆ ಆದ್ರೆ ನಂಗೆ ಊಟಾ ಬೇಗ ಸಿಗ್ತದೆ.." ಮನಸ್ಸಿನಾಳದಲ್ಲೆಲ್ಲೋ ಒಮ್ಮೆ ಛುಳ್ ಎಂದು ಬಿಟ್ಟಿತು. ಇವತ್ತೀಗೂ ನನ್ನನ್ನು ಕಲಕುತ್ತಿರುವ ಧ್ವನಿ ಅದು. ಬೆಳಗಿನಿಂದ ಸಂಜೆಯವರೆಗೂ ಹೀಗೆ ಕೆಲಸ, ಮನೆಯೆಡೆಗಿನ ಕಕ್ಕುಲಾತಿ, ಅದರ ಮೇಲೆ ಹಸಿವು ಅದೂ ಗಂಜಿಯಾದರೂ ಒಂಚೂರು ಬೇಗ ಸಿಗುವುದಾದರೆ ಸಿಗಲಿ ಅದಕ್ಕೆ ಒಣ ಕಟ್ಟಿಗೆ ಆರಿಸಿ ಗುಡ್ಡೆ ಹಾಕುತ್ತಿದೆ ಮಗು. ಮಗುವನ್ನೊಮ್ಮೆ ನೋಡಿದೆ ಛೆ ಎನ್ನಿಸಿತು. ಶಾಲೆ ಎಂದೆ..?.
" ನಾನು ವಾರಕ್ಕೆರಡೆ ಸರ್ತಿ ಹೋಗ್ತೇ. ಬಾಕಿ ಸರ್ತಿ ಒಂದೆರಡು ದಿನಾ ನಾಯ್ಕ ಮಾಸ್ತರು ಮನೆಗೇ ಬಂದು ಹೇಳಿಕೊಡ್ತಾರೆ.." ನಿಜಕ್ಕೂ ಧನ್ಯ ಆ ಮಾಸ್ತರ ಜೀವನ. ಅಂದಿನಿಂದಲೂ ಸಣ್ಣ ಸಣ್ಣ ಕೆಂಪು ಹೂವಿನ ಪುಟ್ಟ ಹುಡುಗಿ ಬಿಸಿಲಿಗೆ ಮುಂಗುರುಳ ಹಾರಿಸುತ್ತಾ, ಸಣ್ಣ ಹಸಿವಿನ ಕಂಗಳಿಂದ ಸಂಜೆಯ ಆಸೆಗಳಿಗೆ ಈಡಾಗುತ್ತಾ ಕಟ್ಟಿಗೆಗೆ ಕಾಡು ನುಗ್ಗುವುದು ಕಾಣಿಸುತ್ತಲೇ ಇದೆ. ಕೈಗೆ ಸಿಕ್ಕಷ್ಟು ನೋಟು-ಚಿಲ್ಲರೆಗಳನ್ನು ಅದರ ಕೈಗಿಟ್ಟು ಬಂದಿದ್ದೆ. ಎದೆಯೊಳಗೆನೋ ಅರ್ಥವಾಗದ ಮುಳ್ಳು ಮುರಿದ ಸಂಕಟ. ಊಟದಿಂದ ಹಿಡಿದು ನೀರು ಕುಡಿಯುವಾಗಲೂ ಮಗುವಿನ ಮುಖ ನೆನಪಾದರೆ ಗಂಟಲು ಕಟ್ಟದೇ ಇನ್ನೇನು ಮಾಡೀತು. ಎಲ್ಲಿದ್ದೇವೆ ನಾವು..? ಬೆಚ್ಚನೆ ಗೂಡು, ಮಧ್ಯಾನ್ಹ ಶಾಲೆ ಊಟ, ಪುಕ್ಕಟೆ ಸೈಕಲ್ಲು ಯಾವಾಗ ಆ ಮಗುವಿಗೆ ತಲುಪೋದು...? ಯಾರಿಗೆ ಕೂಗಲಿ.

No comments:

Post a Comment